ಕಲ್ಯಾಣ ಕರ್ನಾಟಕ: ಹೊಸ ಬಾಟಲಿಗೆ ಹಳೆ ಮದ್ಯ
Team Udayavani, Sep 8, 2019, 5:22 AM IST
ಭೈರಪ್ಪನವರು ಕಲ್ಯಾಣ ಕರ್ನಾಟಕ ಎಂಬುವುದು ಸಾರ್ವತ್ರಿಕವಾಗಿ ಒಪ್ಪಿಗೆಯಾಗಲಿಕ್ಕಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಕಲ್ಯಾಣ ಕರ್ನಾಟಕ ಎಂಬುವುದರಲ್ಲಿ ಕೆಲವರು ಜಾತಿ ಸೂಚಕ ಸಂಕೇತವನ್ನು ಕಾಣುವ ಸಾಧ್ಯತೆಯಿರುವುದರಿಂದ ಲಿಂಗಾಯತರಲ್ಲದವರಿಗೆ ಅದು ಒಪ್ಪಿಗೆಯಾಗಲಿಕ್ಕಿಲ್ಲ ಎಂದು ಹೇಳಲು ಹಿಂಜರಿಯಲಿಲ್ಲ. ಪರ್ಯಾಯವಾಗಿ ಸಗರ ನಾಡು, ಈಶಾನ್ಯ ಕರ್ನಾಟಕ ಎಂಬ ಹೆಸರುಗಳು ತೇಲಿಬಂದವು. ಸಹಮತದ ಕೊರತೆಯಿಂದಾಗಿ ವಿಷಯವನ್ನು ಅಲ್ಲಿಗೇ ಮೊಟಕುಗೊಳಿಸಲಾಯಿತು.
ಪ್ರಖ್ಯಾತ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪನವರು ಕೆಲವರ್ಷಗಳ ಹಿಂದೆ ಕಲಬುರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಸಂವಾದ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು. ಪ್ರಾರಂಭದಲ್ಲಿ ಭೈರಪ್ಪನವರೇ ಸ್ವಪ್ರೇರಣೆಯಿಂದ ಒಂದು ಪ್ರಮುಖ ಪ್ರಶ್ನೆಯನ್ನೆತ್ತಿ ಅದರ ಬಗ್ಗೆ ಯೋಚಿಸುವಂತೆ ಮಾಡಿದರು. ಕರ್ನಾಟಕ ಏಕೀಕರಣವಾದ ಸುಮಾರು ನಾಲ್ಕೂವರೆ ದಶಕಗಳ ನಂತರವೂ ಬೀದರ, ಗುಲಬರ್ಗ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನೊಳಗೊಂಡ (ಆಗಿನ್ನು ಯಾದಗಿರಿ ಜಿಲ್ಲೆ ರಚನೆಯಾಗಿರಲಿಲ್ಲ) ಭೌಗೋಳಿಕ ಪ್ರದೇಶವನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶವೆಂದು ಕರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಪ್ರದೇಶವನ್ನು ಹೈದ್ರಾಬಾದ್ ಕರ್ನಾಟಕ ಎನ್ನುವ ಬದಲು ಬೇರೆ ಯಾವುದಾದರೂ ಹೆಸರಿನಿಂದ ಕರೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿದ್ದ ಕೆಲವರು ಈ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಕರೆದರೇ ಸೂಕ್ತವಾದೀತೆಂದು ಸಲಹೆ ನೀಡಿದರು. ಅತ್ಯಂತ ಸೂಕ್ಷ್ಮ -ಸಂವೇದನಶೀಲ ಬರಹಗಾರರಾದ ಭೈರಪ್ಪನವರು ಕಲ್ಯಾಣ ಕರ್ನಾಟಕ ಎಂಬುವುದು ಸಾರ್ವತ್ರಿಕವಾಗಿ ಒಪ್ಪಿಗೆಯಾಗಲಿಕ್ಕಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದರು.
ಕಲ್ಯಾಣ ಕರ್ನಾಟಕ ಎಂಬುವುದರಲ್ಲಿ ಕೆಲವರು ಜಾತಿ ಸೂಚಕ ಸಂಕೇತವನ್ನು ಕಾಣುವ ಸಾಧ್ಯತೆಯಿರುವುದರಿಂದ ಲಿಂಗಾಯತ ರಲ್ಲದವರಿಗೆ ಅದು ಒಪ್ಪಿಗೆಯಾಗಲಿಕ್ಕಿಲ್ಲ ಎಂದು ಹೇಳಲು ಹಿಂಜರಿಯಲಿಲ್ಲ. ಪರ್ಯಾಯವಾಗಿ ಸಗರ ನಾಡು, ಈಶಾನ್ಯ ಕರ್ನಾಟಕ ಎಂಬ ಹೆಸರುಗಳು ತೇಲಿಬಂದವು. ಸಹಮತದ ಕೊರತೆಯಿಂದಾಗಿ ವಿಷಯವನ್ನು ಅಲ್ಲಿಗೇ ಮೊಟಕುಗೊಳಿಸಲಾಯಿತು.
ಇದಾಗಿ ಸುಮಾರು 15 ವರ್ಷಗಳ ನಂತರ ಇದೀಗ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಭಾರತೀಯ ಜನತಾ ಪಕ್ಷದ ಸರ್ಕಾರ ಹೈದ್ರಾಬಾದ್ ಕರ್ನಾಟಕವನ್ನು ಅಧಿಕೃತವಾಗಿ ಕಲ್ಯಾಣ ಕರ್ನಾಟಕ ಎಂದು ಪುನರ್ ನಾಮಕರಣ ಮಾಡುವ ಮಹತ್ವದ ರಾಜಕೀಯ ನಿರ್ಧಾರವನ್ನು ಕೈಗೊಂಡಿದೆ. ಅದರ ಜೊತೆಗೆ ಬಹುದಿನಗಳಿಂದ ಚರ್ಚೆಯ ಮಟ್ಟದಲ್ಲಿದ್ದ ವಿಷಯವೊಂದಕ್ಕೆ ಅಂತಿಮವಾಗಿ ತೆರೆ ಬಿದ್ದಂತಾಗಿದೆ.
ಸರ್ಕಾರದ ಪ್ರಸ್ತುತ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯಗಳು ಇರುವುದು ಸಹಜವೇ ಆಗಿದೆ.
ಸಾಹಿತಿ ಮತ್ತು ಬಂಡಾಯ ಸಾಹಿತ್ಯ ಚಳವಳಿಯ ಪ್ರವರ್ತಕರಲ್ಲೊಬ್ಬರಾದ ಚಂದ್ರಶೇಖರ ಪಾಟೀಲ ಅವರು ಸರ್ಕಾರದ ನಿರ್ಧಾರಕ್ಕೆ ನೀಡಿರುವ ಪ್ರತಿಕ್ರಿಯೆ (ಪತ್ರಿಕೆಯೊಂದರಲ್ಲಿ ವರದಿಯಾಗಿರುವಂತೆ) ಕುತೂಹಲ ಕಾರಿಯಾಗಿದೆ.
ರಾಜ್ಯದ ನಾನಾ ಪ್ರದೇಶಗಳಿಗೆ ಧರ್ಮದ ವಾಸನೆಯ ಹೆಸರು ಇರಬಾರದು ಎನ್ನುವುದು ಮೊದಲಿನಿಂದಲೂ ನಾನು ತಾಳಿರುವ ನಿಲುವು. ಉತ್ತರ, ದಕ್ಷಿಣ, ಈಶಾನ್ಯ, ಕರಾವಳಿ ಕರ್ನಾಟಕವೆಂದು ಗುರುತಿಸಿದರೆ ಸೂಕ್ತ. ಈಗಿನದು ಅಸಹಜ ಬೆಳವಣಿಗೆ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ವಿವಿಧ ಆಯಾಮಗಳನ್ನು ಅರಿತುಕೊಳ್ಳುವ ಸೂಕ್ಷ್ಮತೆ ಪ್ರಾಯಶಃ ಯಾವುದೇ ಪಕ್ಷದ ಸರ್ಕಾರಕ್ಕೂ ಇರುವುದಿಲ್ಲ. ಸರ್ಕಾರದ ಇಂತಹ ನಿರ್ಧಾರಗಳು ಬಹುತೇಕ ಬಾರಿ ರಾಜಕೀಯ ಪ್ರೇರಿತವಾಗಿರುತ್ತವೆ. ಪ್ರಸಕ್ತ ನಿರ್ಧಾರವು ಕೂಡ ಇದಕ್ಕೆ ಹೊರತಾಗಿಲ್ಲ. ಅನೇಕ ರಾಜಕೀಯ ಪಂಡಿತರು, ವಿಶ್ಲೇಷಕರು ಈಗಾಗಲೇ ಅಭಿಪ್ರಾಯ ಪಟ್ಟಿರುವಂತೆ ಸಾರ್ವಜನಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲರೆಂದು ಭಾವಿಸಲಾದ ವೀರಶೈವ ಲಿಂಗಾಯತ ಸಮುದಾಯವು ಬಿಜೆಪಿಯತ್ತ ಮತ್ತು ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪನವರತ್ತ ಒಲವುಳ್ಳದ್ದಾಗಿದೆ. ಈ ಸಮುದಾಯ ಬಿಜೆಪಿಯ ಮತಬ್ಯಾಂಕಾಗಿ ಪರಿವರ್ತನೆಯಾಗಿದೆ ಎಂಬ ದಟ್ಟ ಅಭಿಪ್ರಾಯವಿದೆ.
ಯಡಿಯೂರಪ್ಪನವರ ನಾಯಕತ್ವದಿಂದಾಗಿ ರಾಜ್ಯದಲ್ಲಿ ಸಮಾಜೋ-ರಾಜಕೀಯ ಸಮೀಕರಣವೂ ಬದಲಾಗಿದೆ. ಇದು ಇತರ ಎರಡು ಮುಖ್ಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳಕ್ಕೆ ಅಪಥ್ಯವಾದದ್ದಾಗಿದೆ. ಲಿಂಗಾಯತರ ಬಿಜೆಪಿಯಲ್ಲಿನ ಬಲವನ್ನು ಸಡಿಲಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನೆಲ್ಲ ತಂತ್ರಗಳನ್ನು ಮಾಡಿದರೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಯಡಿಯೂರಪ್ಪನವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರೂ ಐದು ವರ್ಷಗಳ ಪೂರ್ಣಾವಧಿಗೆ ಅವರಿಗೆ ಸರ್ಕಾರ ನಡೆಸಲಾಗಲಿಲ್ಲ. ಒಂದು ಬಾರಿ ಮೂರು ದಿನ ಅಧಿಕಾರದಲ್ಲಿದ್ದರೆ, ಇನ್ನೊಂದು ಬಾರಿ ಎಂಟು ದಿನ ಅಧಿಕಾರದಲ್ಲಿದ್ದರು. ಈಗ ನಾಲ್ಕನೇ ಬಾರಿ ಅವರು ಬಹಳ ಎಂದರೆ ಇನ್ನುಳಿದ ಸುಮಾರು ಮೂರೂವರೆ ವರ್ಷ ಅವಧಿಗೆ ಮಾತ್ರ ಮುಖ್ಯಮಂತ್ರಿಯಾಗಿರಬಲ್ಲರು.
ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆಯ ಬಗ್ಗೆ ದಟ್ಟವಾದ ಪುಕಾರುಗಳಿವೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ತಮಗಿರುವ ಬೆಂಬಲದ ನೆಲೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ವಿಸ್ತರಿಸಿಕೊಳ್ಳುವ ಪ್ರಯತ್ನವನ್ನು ಈ ಮೂಲಕ ಮಾಡಿದ್ದಾರೆ.
ಕಲ್ಯಾಣ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ಶುಭ, ಅದೃಷ್ಟ, ಚಿನ್ನ, ಮದುವೆ, ವೈಭವ, ಉತ್ಸವ, ಚಲುವಾದ, ಮಂಗಳಕರವಾದ ಎಂಬ ಅರ್ಥಗಳ ಜೊತೆಗೆ ಕಲ್ಯಾಣ, ಸಂತೋಷ, ಸಮೃದ್ಧಿ, ಕ್ಷೇಮಾಭಿವೃದ್ದಿ, ನೆಮ್ಮದಿ, ಸೌಖ್ಯ ಎಂಬ ಅರ್ಥಗಳನ್ನು ಸೂಸುತ್ತದೆ.
ಪ್ರಜಾಪ್ರಭುತ್ವದ ಸಂದರ್ಭದಲ್ಲಿ ನಮ್ಮದು ಕಲ್ಯಾಣ ರಾಜ್ಯ ಎಂದು ಕರೆಯುತ್ತಾರೆ ಅದನ್ನೇ ಆಂಗ್ಲ ಭಾಷೆಯಲ್ಲಿ ವೆಲ್‌ಫೇರ್ ಸ್ಟೇಟ್ ಎಂದು ಕರೆಯುವುದು. ಸಮಾನ ಅವಕಾಶಗಳ ನಿರ್ಮಾಣ, ಸಂಪತ್ತಿನ ನ್ಯಾಯ ಸಮ್ಮತ ಹಂಚಿಕೆ ತತ್ವದ ಆಧಾರದ ಮೇಲೆ ಉತ್ತಮ ಜೀವನಕ್ಕೆ ಅವಶ್ಯಕವಾದ ಕನಿಷ್ಠ ಅಗತ್ಯಗಳನ್ನು ಪೂರೈಸಿಕೊಡಲು ಅಸಮರ್ಥರಾದ ಜನರ ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಪೂಜಿಸುವ ಆಡಳಿತ ವ್ಯವಸ್ಥೆಯೇ ಕಲ್ಯಾಣ ರಾಜ್ಯವಾಗಿದೆ.
ಈ ಅರ್ಥದಲ್ಲಿ ಹೇಳುವುದಾದರೆ ಇಡೀ ಕರ್ನಾಟಕ ರಾಜ್ಯವೇ ಕಲ್ಯಾಣ ರಾಜ್ಯವಾಗಬೇಕು. ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ರಾಜ್ಯದ ಒಂದು ಭಾಗಕ್ಕೆ ಸೀಮಿತಗೊಳಿಸುವುದು ಎಷ್ಟು ಉಚಿತ ಎಂಬ ಪ್ರಶ್ನೆಯೂ ಉದ್ಭವಿಸದಿರುವುದಿಲ್ಲ.
ಆದರೆ ವಾಸ್ತವವಾಗಿ ಹೇಳಬೇಕಾದರೆ ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾ ಟಕ ಎಂದು ಪುನರ್ ನಾಮಕರಣ ಮಾಡಿರುವುದು ಈ ವಿಶಾಲಾರ್ಥದ ವ್ಯಾಪ್ತಿಯ ಹಿನ್ನೆ°ಲೆಯಲ್ಲಿ ಅಲ್ಲ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿಯೇ ಮರುನಾಮಕರಣಕ್ಕೆ ಪ್ರೇರಕ.
ಹನ್ನೆರಡನೇ ಶತಮಾನದಲ್ಲಿ ನಡೆದ ಈ ಚಳವಳಿಯನ್ನು ಬಸವಾಭಿಮಾನಿಗಳೆಂದು ಹೇಳಿಕೊಳ್ಳುವವರು ಅಥವಾ ಕರೆಯಿಸಿಕೊಳ್ಳುವವರು ಚಳವಳಿಯ ಶ್ರೇಯಸ್ಸನ್ನು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಅರೋಪಿಸುವ ಧಾವಂತವುಳ್ಳವರಾಗಿರುವುದರಿಂದಲೇ ಭೈರಪ್ಪ ಮತ್ತು ಚಂಪಾ ಅವರಂತಹ ಹಿರಿಯ ಸಾಹಿತಿಗಳು ಅದರಲ್ಲಿ ಧಾರ್ಮಿಕ ವಾಸನೆಯನ್ನು ಗುರುತಿಸಿದ್ದಾರೆ.
ಕರ್ನಾಟಕದಲ್ಲಿ ಇದುವರೆಗೆ 19 ಮುಖ್ಯಮಂತ್ರಿಗಳು (ಕೆಲವರು ಒಂದಕ್ಕಿಂತ ಹೆಚ್ಚು ಬಾರಿ ಆಗಿರುವುದು ಸೇರಿಸಿ) ಆಗಿ ಹೋಗಿದ್ದು ಅವರಲ್ಲಿ ಎಂಟು ಜನ ಲಿಂಗಾಯತರು. ಇಲ್ಲಿ ಅವರದೇ ಸಿಂಹಪಾಲು. ಅವರ ನಂತರದಲ್ಲಿ ಐವರು ಹಿಂದುಳಿದ ವರ್ಗದವರು, ನಾಲ್ವರು ಒಕ್ಕಲಿಗರು ಮತ್ತು ಇಬ್ಬರು ಬ್ರಾಹ್ಮಣರು ಬರುತ್ತಾರೆ.
ಇದು ಏನಾದರೂ ಕಲ್ಯಾಣ ಚಳವಳಿಯ ಆಶಯವನ್ನು ಪ್ರತಿಫಲಸುತ್ತದೆಯೇನು? ಎಂಬುದು ಪ್ರಶ್ನೆ. ಜನಸಂಖ್ಯೆಯ ಅರ್ಧ ಭಾಗವಾಗಿರುವ ಮತ್ತು ನಿಜವಾಗಿಯೂ ಎಲ್ಲ ರೀತಿಯಿಂದ ಹಿಂದುಳಿದವರಾದ ಮಹಿಳೆಯಾಗಲಿ, ಪರಿಶಿಷ್ಟ ಜಾತಿ- ಜನಾಂಗಕ್ಕೆ ಸೇರಿದ ವ್ಯಕ್ತಿಯಾಗಲಿ ಅಥವಾ ಅಲ್ಪ ಸಂಖ್ಯಾತರಾಗಲಿ ರಾಜ್ಯ ಉದಯವಾಗಿ 63 ವರ್ಷಗಳ ನಂತರವೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ ಎಂಬುದು ಈಗಿನ ಕಹಿ ಸತ್ಯ.
ಈ ಹಿಂದೆ ಆಗಿಹೋದ ಎಲ್ಲ ಸರ್ಕಾರಗಳು ಹಿಂದುಳಿದಿರುವ ಈ ಭಾಗದ ಅಭಿವೃದ್ಧಿಗಾಗಿ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದು, ಹೈದ್ರಾಬಾದ್-ಕರ್ನಾಟಕ ಪ್ರದೇಶದ ಅಭ್ಯುದಯಕ್ಕಾಗಿಯೇ ಹೊರತು ಕಲ್ಯಾಣ ಕರ್ನಾಟಕದ ಅಭ್ಯುದಯಕ್ಕಾಗಿ ಅಲ್ಲ. ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮಸೂದೆ ಜಾರಿಗೆ ಬಂದಿರುವುದು ಹೈದ್ರಾಬಾದ್-ಕರ್ನಾಟಕದ ಅಭಿವೃದ್ಧಿಗಾಗಿ.
ಮರು ನಾಮಕರಣದ ನಿರ್ಧಾರವನ್ನು ಪ್ರಕಟಿಸಿದ ಸಂದರ್ಭದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೈದ್ರಾಬಾದ್- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಇನ್ನು ಮುಂದೆ “ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯಾಗಲಿದ್ದು, ಎಲ್ಲೆಲ್ಲಿ ಹೈದ್ರಾಬಾದ್-ಕರ್ನಾಟಕ ಪದ ಬಳಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಇನ್ನು ಮುಂದೆ ಕಲ್ಯಾಣ ಕರ್ನಾಟಕ ಪದ ಬಳಕೆಯಾಗಲಿದೆ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಹಾಗೆ ಮಾಡುವುದು ಸುಲಭವಾದೀತು.
ಆದರೆ, ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಕಾಯ್ದೆ ಕೇಂದ್ರದ ಕಾಯ್ದೆಯಾಗಿರುವುದರಿಂದ ಮತ್ತು ಆ ಕಾಯ್ದೆಯಲ್ಲಿ ವಿಶೇಷ ಸ್ಥಾನಮಾನವನ್ನು ಹೈದ್ರಾಬಾದ್-ಕರ್ನಾಟಕಕ್ಕೆ ನೀಡುವುದರಿಂದ ಅದರಲ್ಲಿ ರಾಜ್ಯ ಹಸ್ತಕ್ಷೇಪ ಮಾಡಲು ಸಾಧ್ಯವೇನು? ಅದಕ್ಕಾಗಿ ಪ್ರಾಯಃ ಸಂವಿಧಾನದ ತಿದ್ದುಪಡಿಯೇ ಆಗಬೇಕೆಯೇ?
ವಿಪರ್ಯಾಸದ ಸಂಗತಿ ಎಂದರೆ ಹೈ-ಕದ ಹಿಂದುಳಿದಿರುವಿಕೆಯ ಹೆಸರಿನಲ್ಲಿಯೇ ಈ ಪ್ರದೇಶಕ್ಕೆ ಸಾಕಷ್ಟು ಅನ್ಯಾಯ ಮಾಡಲಾಗಿರುವುದು.
ಭೌಗೋಳಿಕವಾಗಿ, ಚಾರಿತ್ರಿಕವಾಗಿ ಹೈ-ಕ ಪ್ರದೇಶ ಎಂದರೆ ಈ ಹಿಂದೆ ಹೈದ್ರಾಬಾದ್ ನಿಜಾಂ ಪ್ರಾಂತ್ಯಕ್ಕೆ ಒಳಪಟ್ಟಿದ್ದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನೊಳಗೊಂಡ ಪ್ರದೇಶ. ಆದರೆ, ಚಾರಿತ್ರಿಕವಾಗಿ ಮದರಾಸ್ ಪ್ರಾಂತ್ಯದ ಭಾಗವಾಗಿದ್ದ ಬಳ್ಳಾರಿಯನ್ನು ಅದರಲ್ಲಿ ಸೇರಿಸಲಾಯಿತು.
ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಪರಿಚಯ ಇರುವವರೆಗೆ ಬಳ್ಳಾರಿ ವಿಶೇಷ ಸ್ಥಾನಮಾನಕ್ಕೆ ಅರ್ಹವಾಗುವುದಿಲ್ಲ. ಹೈ-ಕ ಜಿಲ್ಲೆಗಳಷ್ಟೆ ಹದಗೆಟ್ಟ ಸ್ಥಿತಿಯಲ್ಲಿರುವ ಚಾಮರಾಜನಗರ, ವಿಜಯ ಪುರದಂತಹ ಜಿಲ್ಲೆಗಳು ಅರ್ಹವಾಗಬಲ್ಲವು. ಬಳ್ಳಾರಿಯನ್ನು ಸೇರಿಸಿದ ಮೇಲೆಯೂ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಯೆಂದು ಕರೆಯುವುದರಲ್ಲಿ ಅರ್ಥವೇನಿದೆ? ಗುಲಬರ್ಗ ವಿಭಾಗ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಕರೆಯುವುದು ಸೂಕ್ತವಲ್ಲವೇ?
ಜಗದ್ವಿಖ್ಯಾತ ಆಂಗ್ಲ ಕವಿ ಮತ್ತು ನಾಟಕಕಾರ ಶೇಕ್ಸ್‌ಪಿಯರ್ ಹೇಳಿರುವಂತೆ “ಹೆಸರಿನಲ್ಲೇನಿದೆ? ಗುಲಾಬಿ ಹೂವನ್ನು ಬೇರೆ ಹೆಸರಿನಿಂದ ಕರೆದರೆ ಅದರ ಸುವಾಸನೆಯಲ್ಲಿ ಬದಲಾವಣೆಯಾಗುವುದೇನು?’ ಹೈದ್ರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಕರೆಯುವುದರಿಂದ ಹೈ-ಕದ ಹಿಂದುಳಿದಿರುವಿಕೆ, ಅಭಿವೃದ್ಧಿಯ ನಿರಾಕರಣೆಯ ಕಮಟು ಸುಗಂಧದ್ರವ್ಯದ ಸುವಾಸನೆಯನ್ನು ಬೀರುವುದೇನು? ಬೈಬಲ್‌ನಲ್ಲಿ ಹೇಳಿದಂತೆ ಇದು ಹಳೆಯ ಮದ್ಯವನ್ನು ಹೊಸ ಬಾಟಲಿಗೆ ತುಂಬಿದಂತೆ ಅಷ್ಟೆ.
– ಶ್ರೀನಿವಾಸ ಸಿರನೂಕರ್, ಹಿರಿಯ ಪತ್ರಕರ್ತರು ಕಲಬುರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.