ಪೌರತ್ವ ಕಾಯಿದೆಯ ಸ್ವರ-ಅಪಸ್ವರಗಳೇನು?
Team Udayavani, Dec 21, 2019, 5:45 AM IST
ಪೌರತ್ವ ಕಾಯಿದೆ 2019 ಸಾಕಷ್ಟು ಸ್ವರ-ಅಪಸ್ವರಗಳನ್ನು ಮೊಳಗಿಸಿ ಬಿಟ್ಟಿದೆ. 1947ರಲ್ಲಿ ಭಾರತ-ಪಾಕಿಸ್ಥಾನ ವಿಭಜನೆಯಾಗುವ ಸಂದರ್ಭದಲ್ಲಿ ಕೂಡಾ ಇಷ್ಟೊಂದು ಚರ್ಚೆ ಹೋರಾಟಗಳು ನಡೆದಿರಲಿಕ್ಕಿಲ್ಲ. ಒಂದು ವೇಳೆ ಇಷ್ಟೊಂದು ಸ್ವರ, ಅಪಸ್ವರ ಹೋರಾಟದ ಕಿಚ್ಚು ಅಂದೇ ತಗುಲಿದಿದ್ದರೆ; ಭಾರತ -ಪಾಕಿಸ್ಥಾನ ಎರಡು ಸ್ವತಂತ್ರ ದೇಶಗಳಾಗಿ ಹೊರ ಹೊಮ್ಮಲು ಸಾಧ್ಯವೇ ಇರಲಿಲ್ಲ. ಮಾತ್ರವಲ್ಲ ಈ ಪರಿಸ್ಥಿತಿ ಬ್ರಿಟಿಷರಿಗೆ ವರದಾನವಾಗಿ ಪರಿಣಮಿಸುತ್ತಿತ್ತು. ಆದರೆ ಅಂದು ಜನರಿಗೆ ಅಗತ್ಯವಾಗಿ ಬೇಕಾಗಿದ್ದು ಸ್ವಾತಂತ್ರ್ಯವೇ ಹೊರತು ಮನೆ ಜಾಗ; ಪೌರತ್ವದ ಪ್ರಶ್ನೆಯೇ ಮೂಲಭೂತವಾಗಿರಲಿಲ್ಲ. ಹಾಗಾಗಿ ಅಂದು ಅಖಂಡವಾಗಿದ್ದ ಭರತ ಖಂಡವನ್ನು ಸುಲಭವಾಗಿ ಎರಡು ತುಂಡಾಗಿಸಲು ಸಾಧ್ಯವಾಯಿತು. ಭಾವನಾತ್ಮಕವಾದ ಜಲ, ನೆಲ, ಭಾಷೆ, ಜಾತಿ, ಧರ್ಮವನ್ನೆಲ್ಲ ಮರೆತು ತಮ್ಮ ಭವಿಷ್ಯದ ಅನುಕೂಲತೆಯ ದೃಷ್ಟಿಯಿಂದ ಸುಖವೊ ಕಷ್ಟವೊ ತಮಗೆ ಅನುಕೂಲವಾದ ದೇಶದ ಪೌರತ್ವವನ್ನು ಒಪ್ಪಿಕೊಂಡರು. ಹಾಗಾಗಿ ಈ ವಿಭಜನಾ ಕಾರ್ಯಕ್ಕೆ ಸಾಕ್ಷಿಯಾಗಿ ಬಿಟ್ಟರು. ಇದೀಗ ಏಳು ದಶಕಗಳ ಅನಂತರ ದೇಶದ ಒಳಗೆ ಪೌರತ್ವದ ಪ್ರಶ್ನೆ ಬಿರುಗಾಳಿಯಾಗಿ ಅಬ್ಬರಿಸುತ್ತಿದೆ.
ಈಗ ನಮ್ಮ ಮುಂದಿರುವ ಬಹುದೊಡ್ಡ ಪ್ರಶ್ನೆ ಅಂದರೆ ಭಾರತದ ಸಂವಿಧಾನದಲ್ಲಿ ಪ್ರಕಟಗೊಂಡ 1955ರ ಪೌರತ್ವ ಕಾಯಿದೆ ಸೃಷ್ಟಿ ಮಾಡದ ಅವಾಂತರವನ್ನು, ಈ 2019ರ ಪೌರತ್ವ ಕಾಯಿದೆ ಪರ -ವಿರೋಧ ಧ್ವನಿಯನ್ನು ಇಷ್ಟೊಂದು ತಾರಕಕ್ಕೆ ಏಕೆ ಏರಿಸಿದೆ ಅನ್ನುವುದು. ನಾವು ಬೆಳೆಸಿಕೊಂಡ ಭಾವನಾತ್ಮಕ ಅಂಶಗಳೂ; ಅಭಿವ್ಯಕ್ತಿ ಸ್ವಾತಂತ್ರ್ಯದ ಪರಾಕಾಷ್ಠೆಯೋ, ಮಾಧ್ಯಮ, ಸಾಮಾಜಿಕ ಜಾಲತಾಣಗಳ ಪ್ರಭಾವವೋ? ಮನುಷ್ಯತ್ವದ ಮುಖವನ್ನು ಮುಚ್ಚಿಕೊಂಡ ಜಾತ್ಯತೀತ ಸಿದ್ಧಾಂತವೋ ಅನ್ನುವುದನ್ನು ಪ್ರತಿಯೊಬ್ಬ ಪೌರನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಿದೆ. ಇಂತಹ ಅಪಸ್ವರಗಳ ನಡುವೆ ನಲುಗಿ ಹೋಗಿರುವುದು ದೇಶದ ಆಸ್ತಿ; ಶಾಂತಿ ನೆಮ್ಮದಿ ಹಾಗೂ ಬದುಕಿನ ಸುಂದರ ಸಂಬಂಧಗಳು ಅನ್ನುವುದು ಅಷ್ಟೇ ಸತ್ಯ.
2019ರ ಪೌರತ್ವ ಕಾಯಿದೆಯ ಪರವಾಗಿ ವಾದಿಸುವವರ ಮಾತುಗಳು ಹೇಗಿವೆ ಅಂದರೆ; ಭಾರತ ಬಹುಕಾಲದಿಂದ ಅಲೆಮಾರಿಗಳು; ನಿರಾಶ್ರಿತರ ನುಸುಳುಕೋರರ ತಾಣವಾಗಿ ಬೆಳೆಯುತ್ತಿದೆ. ಇಂತಹ ಜನರಿಂದಲೇ ತುಂಬಿ ಹೋಗಿರುವ ಭಾರತ ವಿಶ್ವದ ಡಸ್ಟ್‌ಬಿನ್ ಆಗಿ ಬೆಳೆಯಬೇಕೆ? ಇಂತಹ ಯಾವುದೇ ಗುರುತು; ದಾಖಲಾತಿ ಹೊಂದಿರದ ಜನರು; ದೇಶದ ಭದ್ರತೆಗೆ ಆರ್ಥಿಕತೆಗೆ; ರಾಜಕೀಯಕ್ಕೆ ಮಾರಕವೇ ಹೊರತು ಪೂರಕವಲ್ಲ. ಹಾಗಾಗಿ ಇದನ್ನು ಒಂದು ಮಾನವೀಯತೆಯ ಸ್ವರ್ಶದೊಂದಿಗೆ ಮುಕ್ತಿಗೊಳಿಸಬೇಕೆಂಬ ದೃಷ್ಟಿಯಿಂದ ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ಥಾನದಿಂದ 2014 ಡಿಸೆಂಬರ್ 31ರ ಮೊದಲು ಬಂದು ಭಾರತದಲ್ಲಿ ನೆಲೆ ನಿಂತಿರುವ ಮತ್ತು ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಅನ್ನಿಸಿಕೊಂಡ ಹಿಂದುಗಳು, ಕ್ರೆಸ್ತರು, ಸಿಕ್ಖರು, ಬೌದ್ಧರು, ಪಾರ್ಸಿಗಳು, ಜೈನರು ಇವರಿಗೆ ವಾಸವಾದ ಅವಧಿಯಲ್ಲಿ ಸ್ವಲ್ಪಮಟ್ಟಿನ ಸಡಿಲಿಕೆ ತೋರಿ ಭಾರತದಲ್ಲಿ ಪೌರತ್ವವನ್ನು ನೀಡುವ ಕಾಯಿದೆ ಕೇಂದ್ರ ಸರಕಾರ ಸಂಸತ್ತಿನಿಂದಲೂ; ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದು; ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದೆ. ಭಾರತಕ್ಕೆ ವಲಸೆ ಬಂದು ಇಲ್ಲಿ ಅಲೆಮಾರಿ ಜೀವನ ನಡೆಸುತ್ತಿರುವ ಇವರೆಲ್ಲರೂ ಈ ಮೂರು ದೇಶಗಳಲ್ಲಿ ಧಾರ್ಮಿಕವಾಗಿ ಅಲ್ಪಸಂಖ್ಯಾತರಾಗಿ ಸಾಕಷ್ಟು ಸಾವು- ನೋವು, ವೇದನೆಗಳನ್ನು ಅನುಭವಿಸಿ ಅಲ್ಲಿ ಬದುಕಲು ಸಾಧ್ಯವಿಲ್ಲವೆಂಬ ಕಾರಣಕ್ಕಾಗಿಯೇ ದೇಶಗಳ ಗಡಿಯನ್ನು ದಾಟಿ ಒಳಗೆ ಬಂದಿದ್ದಾರೆ. ಹಾಗಾಗಿ ಇದು ಮಾನವೀ ಯತೆಯ ಆಧಾರದಲ್ಲಿ ಪೌರತ್ವ ನೀಡುವ ಕಾಯಿದೆಯೇ ಹೊರತು, ಅನ್ಯ ರಾಷ್ಟ್ರಗಳಿಂದ ಬರುವ ವಲಸಿಗರಿಗೆ; ನಿರಾಶ್ರಿ ತರಿಗೆ ನೀಡುವ ಉಚಿತ ಉಡುಗೊರೆಯಲ್ಲ ಅನ್ನು ವುದನ್ನು ಕೇಂದ್ರ ಸರಕಾರ ಹಲವು ಬಾರಿ ಉಲ್ಲೇಖೀಸುತ್ತಾ ಬಂದಿದೆ.
ಇಲ್ಲಿ ನಮ್ಮ ಸಂವಿಧಾನದ ಮೂಲಭೂತ ಹಕ್ಕಿನ ಅಡಿಯಲ್ಲಿ ಬರುವ ಸಮಾನತೆಯ ಹಕ್ಕಿನ ವಿಧಿ (14) ಪ್ರಶ್ನೆ ಉದ್ಭವಿಸುವುದೇ ಇಲ್ಲ. ಸಮಾನತೆಯ ಹಕ್ಕು ಭಾರತದ ಸಂವಿಧಾನ, ಇಲ್ಲಿನ ಪೌರರಿಗೆ ನೀಡಿದ ಹಕ್ಕೇ ಹೊರತು ಹೊರಗಿನಿಂದ ಬಂದು; ಯಾವುದೇ ಪೌರತ್ವವನ್ನು ಪಡೆಯದ ವ್ಯಕ್ತಿಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ಹಾಗಾಗಿ ಈ ಪೌರತ್ವ ಕಾಯಿದೆ ಸಮಾನತೆಯ ತತ್ವವನ್ನು ಉಲ್ಲಂ ಸಿದೆ ಅನ್ನುವುದು ಸರಿಯಲ್ಲ ಅನ್ನುವುದು ಈ ಕಾಯಿದೆಯ ಪರ ಮಾತನಾಡುವವರ ವಾದ.
ಜಾತಿ, ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸಬಾರದು ಎಂದು ವಾದಿಸುವವರು ಇದ್ದಾರೆ. ಆದರೆ ಈ ವಾದವೂ ಸರಿಯಲ್ಲ. ಏಕೆಂದರೆ ಇಲ್ಲಿ ಜಾತಿ ಧರ್ಮದ ಪದವನ್ನು ಕೂಡಾ ಈ ದೇಶದ ಪರಿಧಿಯ ಒಳಗೆ ಬಳಸಬಹುದೇ ಹೊರತು ಯಾವುದೇ ಒಂದು ಧರ್ಮ; ಜಾತಿಯನ್ನು ದೇಶದ ಧರ್ಮವೆಂದು ಒಪ್ಪಿಕೊಂಡು ಬಂದ ದೇಶದ ಜನರನ್ನು, ಭಾರತ ಸಂವಿಧಾನದ ಜಾತ್ಯತೀತ ತತ್ವದ ಅಡಿಯಲ್ಲಿ ಪರಿಶೀಲಿಸುವುದು ಕೂಡಾ ಅಷ್ಟೊಂದು ಸಮಂಜ ಸವಾದ ಬೇಡಿಕೆಯೂ ಅಲ್ಲ ಅನ್ನುವುದನ್ನು ನಾವು ತಿಳಿದು ಕೊಳ್ಳಬೇಕಾದ ಜಾತ್ಯತೀತದ ಸಿದ್ಧಾಂತವೂ ಹೌದು.
ಪೌರತ್ವ ಕಾಯಿದೆ ಅನ್ನುವುದು ಭಾರತದ ಆಂತರಿಕ ವಿಚಾರ. ಇದನ್ನು ಪ್ರಶ್ನಿಸುವ ಹಕ್ಕು ಪಾಕಿಸ್ಥಾನಕ್ಕೂ ಇಲ್ಲ; ಅಮೆರಿಕಕ್ಕೂ ಇಲ್ಲ. ಅಮೆರಿಕದಲ್ಲಿ ಪೌರತ್ವ ಸಂಪಾದಿಸುವುದು ಮಾತ್ರವಲ್ಲ ಆ ದೇಶವನ್ನು ಪ್ರವೇಶಿಸುವುದು ಕೂಡಾ ಎಷ್ಟು ಕಷ್ಟ ಅನ್ನುವುದು ಆ ದೇಶಕ್ಕೆ ಹೋಗಿ ಬಂದವರ ಹತ್ತಿರ ಕೇಳಿ ತಿಳಿಯಬೇಕು. ಅಮೆರಿಕಕ್ಕೆ ತೀರಾ ಹತ್ತಿರದ ದೇಶ ಮೆಕ್ಸಿಕೋ ದಿಂದ ಅಲೆಮಾರಿಗಳು ನುಗ್ಗುತ್ತಾರೆ ಎಂಬ ಕಾರಣಕ್ಕಾಗಿಯೇ ಬಲವಾದ ಗೋಡೆಯನ್ನು ಕಟ್ಟಲು ಮುಂದಾದ ದೇಶ. ಇವರಿಗೆ ಭಾರತದ ಕುರಿತು ಮಾತನಾಡುವ ಯಾವುದೇ ನೈತಿಕೆಯೂ ಇಲ್ಲ ಅನ್ನುವುದನ್ನು ವಿಶ್ವದ ದೊಡ್ಡಣ್ಣ ಮೊದಲು ಅರ್ಥ ಮಾಡಿಕೊಳ್ಳಬೇಕು.
ಪೌರತ್ವ ಕಾಯಿದೆ ವಿರೋಧಿಸುವವರ ವಾದವನ್ನು ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ಮೊದಲು ನಮಗೆ ನ್ಯಾಯ ಯುತವಾಗಿ ಕಾಣುವುದು ಈಶಾನ್ಯ ಭಾರತದ ಕೂಗು. ಅಸ್ಸಾಂ, ಮೇಘಾಲಯ, ತ್ರಿಪುರ ದಂತಹ ಅತೀ ಸೂಕ್ಷ್ಮ ಗಡಿ ರಾಜ್ಯಗಳೆಂದು ಕರೆಸಿ ಕೊಂಡ ಈ ಪ್ರದೇಶಗಳಲ್ಲಿ ಬಹುಕಾಲದಿಂದಲೂ ಇಂತಹ ನಿರಾಶ್ರಿತರ; ವಲಸೆಗಾರರ ಹಾಗೂ ಭಯೋತ್ಪಾದಕರ ಸಮಸ್ಯೆಗಳಿಂದ ಅಲ್ಲಿನ ಮೂಲ ನಿವಾಸಿಗಳು ದಿನನಿತ್ಯವೂ ತಲ್ಲಣಿಸಿ ಹೋಗಿದ್ದಾರೆ. ಒಂದು ವೇಳೆ ವಲಸಿಗರಿಗೆ ಇಲ್ಲಿ ಪೌರತ್ವ ನೀಡಿ ಬಿಟ್ಟರೆ; ಮೂಲ ವಾಸಿಗಳಾದ ತಮ್ಮ ಪಾಲಿನ ಬದುಕು ದುಸ್ತರ ವಾಗಬಹುದು, ತಮ್ಮ ಆಸ್ಮಿತೆಯನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ ಎಂಬ ವಿರೋಧ ಧ್ವನಿ ಜೋರಾಗಿ ಕೇಳಿಬರುತ್ತಿದೆ. ಇದನ್ನು ಕೇಂದ್ರ ಸರಕಾರ ಈಗಲೂ ಗಂಭೀರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ.
ಆದರೆ ಪಶ್ಚಿಮ ಬಂಗಾಲ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪೌರತ್ವ ಕಾಯಿದೆಯ ಹೋರಾಟ ಕೇವಲ ಮತ ಬ್ಯಾಂಕುಗಳ ಹಿತದೃಷ್ಟಿಯಿಂದಲೇ ನಡೆಯುತ್ತಿದೆ ಅನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ತಮ್ಮ ಹೋರಾಟಕ್ಕೊಂದು ಮತೀಯ ಲೇಪನ ಹಚ್ಚಿಕೊಂಡು ಒಂದು ಸಮುದಾಯದ ಮತವನ್ನು ಬುಟ್ಟಿಯಲ್ಲಿ ತುಂಬಿಸಿಕೊಳ್ಳುವ ಪ್ರಯತ್ನ ಅನ್ನು ವ ಅನುಮಾನ ಮೂಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸಲಿಕ್ಕೂ, ಪ್ರಶ್ನಿಸಲಿಕ್ಕೂ ಸರಿಯಾದ ದಾರಿಗಳಿವೆ. ಆದರೆ ಸಾರ್ವಜನಿಕ ಆಸ್ತಿ; ಜೀವ ಹಾನಿ ಮಾಡುವ ಪ್ರತಿಭಟನೆ ಹೋರಾಟಗಳಿಗೆ ಯಾವತ್ತೂ ಜನ ಮನ್ನಣೆ ಸಿಗುವುದಿಲ್ಲ.2019ರ ಪೌರತ್ವ ಕಾಯಿದೆ ತಿದ್ದುಪಡಿ ಸಂವಿಧಾನಕ್ಕೆ ಪೂರಕವೋ; ಮಾರಕವೋ ಅನ್ನುವುದನ್ನು ನ್ಯಾಯಾಲಯದಲ್ಲಿ ನಿರ್ಧರಿಸಲು ಅವಕಾಶವಿದೆ. ಅಲ್ಲಿಯ ತನಕ ತಾಳ್ಮೆಯಿಂದ ಕಾಯುವ ಮನಃಸ್ಥಿತಿ ನಮ್ಮ ಕೆಲ ಜನ ನಾಯಕರಲ್ಲಿ, ಜನ ಸಾಮಾನ್ಯರಲ್ಲಿಯೂ ಇಲ್ಲ ಅನ್ನುವುದೇ ಅತ್ಯಂತ ಬೇಸರದ ಸಂಗತಿ. ಸಹನಶೀಲತೆಯೇ ಪ್ರಜಾಪ್ರಭುತ್ವದ ಆದರ್ಶ ನಡೆ ಅನ್ನುವುದನ್ನು ನಾವು ಮರೆಯಬಾರದು.
ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.