ಕಣಿವೆಯ ಕಲ್ಲು ಹೇಳುತ್ತಿರುವ ಕಥೆಯೇನು?
Team Udayavani, May 9, 2017, 12:00 AM IST
ಕಲ್ಲು ತೂರಾಟಗಾರರ ಕುರಿತು ಗರಿಷ್ಠ ಸಹನೆ ತೋರುವಂತೆ ಕೇಂದ್ರ ಸರಕಾರ ಹೇಳಿಕೆ ನೀಡಿದ್ದರೂ, ಕಾಶ್ಮೀರದಲ್ಲಿ ಮಹಿಳಾ ಪೊಲೀಸರ ತಂಡ ನಿಯೋಜಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಈ ಮೂಲಕ ಸೇನೆಗೆ ನೈತಿಕ ಬಲ ತುಂಬಿದ್ದಲ್ಲದೇ, ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಮುಂದಿಟ್ಟು ನಡೆಸುವ ಶಿಖಂಡಿ ಸಮರಕ್ಕೆ ಬಗ್ಗುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.
ಕಾಶ್ಮೀರದಲ್ಲಿ ಸೈನಿಕರ ಮೇಲೆ ನಡೆಯುತ್ತಿರುವ ಕಲ್ಲು ತೂರಾಟ ಪ್ರಸ್ತುತ ದೇಶದಲ್ಲಿ ತೀವ್ರ ವಾಗ್ವಾದಕ್ಕೀಡಾಗಿರುವ ವಿಷಯ. ಇವರೂ ಉಗ್ರರೇ ಎಂಬುದು ಒಂದು ವರ್ಗದವರ ವಾದವಾದರೆ, “ಅಲ್ಲ ಹೋರಾಟಗಾರರಷ್ಟೇ’ ಎಂಬುದು ಎಡಪಂಥೀಯರ ಪಟ್ಟು. ಕಾಶ್ಮೀರ ಪ್ರತ್ಯೇಕತಾವಾದಿಗಳಿಂದ ಪ್ರಚೋದಿತರು ಎನ್ನಲಾದ ಇಲ್ಲಿಯ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಸೆಯುವ ಕಲ್ಲುಗಳು ಭದ್ರತಾ ಪಡೆಗಳಿಗೆ ಭಾರೀ ಸವಾಲಾಗಿರುವುದಂತೂ ನಿಜ. ಏಕೆಂದರೆ, ಇವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದರೆ ಕಾಶ್ಮೀರದ ವಿರೋಧ ಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಎಡಪಕ್ಷಗಳು ಕೋಲಾಹಲ ಎಬ್ಬಿಸುತ್ತವೆ.
ಸುಮ್ಮನೆ ಪ್ರತಿಭಟನೆ ಮಾಡಿ ಮನೆಗೆ ಹೋಗುವಂಥವರೂ ಅಲ್ಲ ಈ ವಿದ್ಯಾರ್ಥಿಗಳು. ಅವಕಾಶ ಸಿಕ್ಕರೆ ಯೋಧರಿಗೆ ದೊಣ್ಣೆ ಏಟು ನೀಡಿ, ಕಾಲಿನಿಂದ ತುಳಿಯಲೂ ಹೇಸದವರು. ಆದರೆ, ಇವರನ್ನು ಮುಗ್ಧ ದಾರಿತಪ್ಪಿದ ಯುವಜನತೆಯಷ್ಟೇ ಎಂಬಂತೆ ಬಿಂಬಿಸುತ್ತಿರುವ ದೇಶದ ಒಳಗಿನವರ ಮೊಂಡುವಾದ ಅವರಿಗೆ ಸಾಕಷ್ಟು ಧೈರ್ಯ ತಂದೊಡ್ಡಿದೆ. ಅದೇ ರಾಜ್ಯದ ಪ್ರಮುಖ ಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಸಾಕಷ್ಟು ಪ್ರಭಾವಶಾಲಿಯಾಗಿರುವ ಕಾರಣದಿಂದ ಕಲ್ಲು ಒಗೆಯುವವರ ಮೇಲೂ ಗರಿಷ್ಠ ಸಹನೆ ತೋರುವಂತೆ ಕೇಂದ್ರ ಸರ್ಕಾರ ಬಹಿರಂಗವಾಗಿ ಸೇನೆಗೆ ಸೂಚಿಸಿದೆ. ಇವು ಸೇನೆಯನ್ನು ನಿಜವಾಗಿ ಕಟ್ಟಿಹಾಕಿರುವ ಸಂಗತಿಗಳು.
ಉದ್ದೇಶವೇ ಭೀಕರ
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಲ್ಲು ತೂರಾಟಗಾರರ ಮುಖ್ಯ ಉದ್ದೇಶ ಸೇನೆಯ ಮೇಲೆ ದಾಳಿ ನಡೆಸಿ ಪರಾರಿಯಾಗುವ ಉಗ್ರರು ಹಾಗೂ ಬ್ಯಾಂಕ್ ಲೂಟಿಗೈಯುವವ ರಿಗೆ ರಕ್ಷಣೆ ನೀಡುವುದು. ಇದಕ್ಕಾಗಿ ಹಣ ಸಿಗುವ ಕಾರಣ ಕಾಶ್ಮೀರದಲ್ಲಿ ವೃತ್ತಿಪರ ಕಲ್ಲು ತೂರಾಟಗಾರ ತಂಡವೇ ತಯಾರಾಗಿದೆ ಎಂಬುದು ಬಹಿರಂಗಗೊಂಡಿರುವ ರಹಸ್ಯ.
ಕಲ್ಲು ತೂರಾಟಕ್ಕೆ ಪಾಕಿಸ್ತಾನ ಪ್ರಚೋದನೆ ನೀಡುತ್ತಿರುವುದು ಕಾಶ್ಮೀರ ಕಬಳಿಕೆಯ ದುರುದ್ದೇಶಕ್ಕಾಗಿಯೇ ಆಗಿದ್ದರೂ, ಇದಕ್ಕಾಗಿ ಉಪಯೋಗಿಸುತ್ತಿರುವುದು ಧರ್ಮವನ್ನು. ಮತೀಯ ವಿಷಯ ದಲ್ಲಿ ಚರ್ಚೆಗೇ ಸಿದ್ಧರಾಗದ ಯುವಕರನ್ನೆಲ್ಲಾ ಆಯ್ದು ತಲೆ ಸವರಿ ಉಗ್ರವಾದಕ್ಕೆ ಪ್ರಚೋದಿಸುತ್ತಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ. ಇವೆಲ್ಲ ಪರಿಸ್ಥಿತಿಯನ್ನು ಎಷ್ಟು ಹದಗೆಡಿಸಿವೆ ಎಂದರೆ, ಕಾಶ್ಮೀರ ಐಸಿಸ್ ಉಗ್ರರ ಕಾರಸ್ಥಾನವಾಗಿಬಿಡುವ ಅಪಾಯವಿದೆ ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಹಿರಂಗವಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ನಾವೆಲ್ಲಾ ತಪ್ಪು ಮಾಡಿದ್ದೇವೆಂದೂ ಒಪ್ಪಿಕೊಂಡಿದ್ದರು. ಆದರೆ, ನಂತರದಲ್ಲಿ ಪ್ರತ್ಯೇಕತಾವಾದಿಗಳಿಗೆ ಮತ್ತೆ ಬಹಿರಂಗ ಬೆಂಬಲ ನೀಡಿದ್ದು ಹಾಗೂ ಸೇನೆಯ ಕ್ರಮವನ್ನು ವಿರೋಧಿಸಿದ್ದು ವಿಪರ್ಯಾಸ.
ಕಲ್ಲು ತೂರಾಟಗಾರರ ವಿಷಯದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷಗಳು ಪರಿಸ್ಥಿತಿಯ ಲಾಭ ಪಡೆಯಲು ಹಾಗೂ ನಿಯಂತ್ರಿಸಲು ಹಲವು ರೀತಿಯ ರಾಜತಾಂತ್ರಿಕ ಹೇಳಿಕೆಗಳನ್ನು ವ್ಯಕ್ತಪಡಿಸುತ್ತಲೇ ಇವೆ. ಇವುಗಳಿಂದ ಸಮಸ್ಯೆ ಬಗೆಹರಿಯದಿದ್ದರೂ ನಿಯಂತ್ರಣಕ್ಕಂತೂ ಬಂದಿದೆ ಎಂಬುದು ರಾಷ್ಟ್ರಮಟ್ಟದ ರಾಜತಂತ್ರ ಜ್ಞರು ಹಾಗೂ ರಕ್ಷಣಾ ತಂತ್ರಜ್ಞರೇ ಒಪ್ಪಿಕೊಳ್ಳುತ್ತಾರೆ.
ಬದಲಾಗಿದೆ ಪಿಡಿಪಿ!
ಒಂದು ಕಾಲದಲ್ಲಿ ಪ್ರತ್ಯೇಕತಾವಾದಿಗಳ ಫೆವರಿಟ್ ಎನ್ನಿಸಿ ಕೊಂಡಿದ್ದ, “ಕಾಶ್ಮೀರಕ್ಕೆ ದೆಹಲಿಗಿಂತಲೂ ಪಾಕಿಸ್ತಾನವೇ ಹತ್ತಿರದ ಲ್ಲಿದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಿಡಿಪಿಯ ಮೆಹ ಬೂಬಾ ಮುಫ್ತಿ ಪ್ರಸ್ತುತ ಉಲ್ಟಾ ಹೊಡೆದಿದ್ದಾರೆಂಬುದು ಸಮಾ ಧಾನದ ವಿಷಯ. ಕಲ್ಲು ತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡ ಸೇನೆಯನ್ನು ದೂಷಿಸಿ, ಪ್ರಕರಣ ದಾಖಲಿಸಲು ಪೊಲೀ ಸರಿಗೆ ಆದೇಶಿಸಿದ್ದರೂ ಬಹಿರಂಗವಾಗಿ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಸೂಚಿಸಿಲ್ಲ. ಅಲ್ಲದೇ, ರಮ್ಜಾನ್ ತಿಂಗಳಿನಲ್ಲಿ ಕಾಶ್ಮೀರದಲ್ಲಿ ನಡೆದ ಹಿಂಸಾ ಕೃತ್ಯಗಳನ್ನು ಬಹಿರಂಗವಾಗಿಯೇ ವಿರೋಧಿಸಿ ದ್ದಾರೆ. “ರಮ್ಜಾನ್ ಆಚರಣೆ ಸಂದರ್ಭದಲ್ಲಿ ಇಸ್ಲಾಂ ಧರ್ಮದ ಅನುಯಾಯಿ ಹಿಂಸೆ, ಮೋಸ, ವಂಚನೆಯಂತಹ ಯಾವುದೇ ದುಷ್ಕೃತ್ಯ ನಡೆಸಬಾರದೆಂದು ಧರ್ಮಗ್ರಂಥದಲ್ಲೇ ಹೇಳಿದೆ. ಆದರೆ, ಈಗ ಧರ್ಮದ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವವರು ಪವಿತ್ರ ದಿನಗಳಲ್ಲಿಯೇ ಹಿಂಸೆ ನಡೆಸಿದ್ದಾರೆ. ಇದರಿಂದಲೇ ಅವರೆಲ್ಲಾ ಅಧರ್ಮೀಯರು ಎಂಬುದು ಅರಿವಾಗುತ್ತದೆ…’ ಎಂದು ಹೇಳಿದ್ದರು. ಈ ಮೂಲಕ ಸ್ವಯಂಘೋಷಿತ ಧರ್ಮಯೋಧರು “ದಾರಿ ತಪ್ಪಿದವರು’ ಎಂಬ ಸಂದೇಶವನ್ನು ಯಶಸ್ವಿಯಾಗಿ ಕಾಶ್ಮೀರದ ಜನತೆಗೆ ಮುಟ್ಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಭಯೋತ್ಪಾದನೆಯನ್ನು ಬೇರು ಸಹಿತ ನಾಶ ಮಾಡಲು ಮೊದಲು ಧರ್ಮವನ್ನು ಬೇರ್ಪಡಿಸಬೇಕು ಎಂದೂ ಹೇಳಿದ್ದಾರೆ.
ಸೇನೆಗೆ ನೈತಿಕ ಬಲ
ಕಲ್ಲು ತೂರಾಟಗಾರರ ಕುರಿತು ಗರಿಷ್ಠ ಸಹನೆ ತೋರುವಂತೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದ್ದರೂ, ಕಾಶ್ಮೀರದಲ್ಲಿ ಮಹಿಳಾ ಪೊಲೀಸರ ತಂಡ ನಿಯೋಜಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಈ ಮೂಲಕ ಸೇನೆಗೆ ನೈತಿಕ ಬಲ ತುಂಬಿದ್ದಲ್ಲದೇ, ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಮುಂದಿಟ್ಟು ನಡೆಸುವ ಶಿಖಂಡಿ ಸಮರಕ್ಕೆ ಬಗ್ಗುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ. ದಂಗೆ ಬಗ್ಗುಬಡಿಯಲು ಕೈಗೊಳ್ಳುತ್ತಿರುವ ಹೊಸ ತಂತ್ರಗಳು ಪ್ರತ್ಯೇಕತಾವಾದಿ ಹೋರಾಟಗಾರರಲ್ಲಿ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿದೆ ಎಂಬುದು ಹಲವು ನಿದರ್ಶನಗಳಿಂದ ಸಾಬೀತಾಗಿದೆ.
ಕಾಶ್ಮೀರದ ವಶಕ್ಕಾಗಿ ಸಾವಿರ ವರ್ಷಗಳ ಯುದ್ಧ ಘೋಷಿಸಿರುವ ಪಾಕಿಸ್ತಾನ, ಪ್ರತ್ಯೇಕತಾವಾದಿಗಳಾದ ಹುರಿಯತ್ ಮುಖಂಡರ ವಂಶಸ್ಥರಿಗೆ ತನ್ನ ದೇಶದಲ್ಲಿ ಆಶ್ರಯದ ಜೊತೆಗೆ ಉತ್ತಮ ಭವಿಷ್ಯವನ್ನೂ ಕಲ್ಪಿಸಿರುವುದು, ಕಲ್ಲು ತೂರಾಟ ಸೇರಿದಂತೆ ಯಾವುದೇ ರೀತಿಯ ಹೋರಾಟದಲ್ಲಿ ಹುರಿಯತ್ ಮುಖಂಡರ ವಂಶಸ್ಥರು ಭಾಗವಹಿಸದಿರುವುದು, ಜೀವನವನ್ನು ಆರಾಮಾಗಿ ಕಳೆಯುತ್ತಿರುವುದನ್ನು ಬಹಿರಂಗಗೊಳಿಸುವಲ್ಲಿ ಸೇನೆ ಯಶಸ್ವಿಯೂ ಆಗಿದೆ. ಈ ಮೂಲಕ ಕಾಶ್ಮೀರ ಯುವಕರಲ್ಲಿ ಹುರಿಯತ್ ಮುಖಂಡರ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿರುವುದೂ ನಿಜ.
ತಾನು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಾಗಿ ಭಾರತ ಘಂಟಾಘೋಷವಾಗಿ ಹೇಳಿಕೆ ನೀಡಿರುವುದು ಹಾಗೂ ಇದಕ್ಕೆ ಜಗತ್ತಿನಾದ್ಯಂತ ಯಾವುದೇ ವಿರೋಧ ವ್ಯಕ್ತವಾಗದಂತೆ, ಜೊತೆಗೆ ಬೆಂಬಲ ಸಿಗುವಂತೆ ಮಾಡಿರುವುದು ಭಾರತದ ರಾಜತಾಂತ್ರಿಕತೆಯಲ್ಲೇ ಮೈಲುಗಲ್ಲು. ಇಲ್ಲಿ ಭಾರತದ ದಾಳಿಗಿಂತಲೂ ಪಾಕಿಸ್ತಾನ ಬೆಚ್ಚಿಬಿದ್ದಿದ್ದು ವಿಶ್ವಸಮುದಾಯದಲ್ಲಿ ತಾನು ಒಂಟಿಯಾಗುತ್ತಿರುವುದನ್ನು ಮನಗಂಡು. ಈ ನಂತರ ಪಾಕಿಸ್ತಾನ ಪ್ರೇರಿತ ಉಗ್ರವಾದ ಮುಂದುವರಿ
ದಿದ್ದರೂ ಅಲ್ಲಿನ ಸರ್ಕಾರ ಮೆತ್ತಗಾಗಿರುವುದಂತೂ ನಿಜ. ಪಾಕಿಸ್ಥಾನವೊಂದು ಭಯೋತ್ಪಾದಕ ರಾಷ್ಟ್ರ ಎಂಬುದಾಗಿ ಘೋಷಿಸುವ ಪ್ರಸ್ತಾವನೆಯೊಂದು ಅಮೆರಿಕದ ಸಂಸದರಲ್ಲಿ ಹರಿದಾಡಿದ್ದೂ ಭಾರತದ ರಾಜತಾಂತ್ರಿಕತೆಯ ಯಶಸ್ಸಿನ ಸಂಕೇತವೇ.
ಚೀನ ಸವಾಲು
ಭಾರತದ ಹಲವು ಪ್ರಯತ್ನಗಳಿಗೆ ಚೀನದ ನಿರ್ಲಜ್ಜ ರಾಜನೀತಿ ಅಡ್ಡಿಯುಂಟು ಮಾಡಿದೆ. ತನ್ನ ದೇಶದಲ್ಲಿ ಇಸ್ಲಾಂ ಉಗ್ರವಾದ ತಲೆ ಎತ್ತದಂತೆ ತಡೆಯುವ ಉದ್ದೇಶದಿಂದ ತನ್ನಲ್ಲಿರುವ ಇಸ್ಲಾಂ ಧರ್ಮೀಯರಿಗೆ ಹಲವು ರೀತಿಯ ನಿರ್ಬಂಧಗಳನ್ನು ಚೀನ ಹೇರುತ್ತಿದೆ. ಧರ್ಮದಲ್ಲಿ ಹೇಳಿರುವ ನಿಯಮಗಳಿಗೆ ವಿರುದ್ಧ ಷರತ್ತನ್ನು ಹೇರುವುದು, ರಮ್ಜಾನ್ ತಿಂಗಳಲ್ಲಿ ಸರ್ಕಾರದಿಂದಲೇ ಮುಸ್ಲಿಂ ಸಮುದಾಯಕ್ಕೆ ಮಧ್ಯಾಹ್ನದ ಊಟ ಏರ್ಪಡಿಸುವುದು, ಅಷ್ಟೇ ಅಲ್ಲ ಸಮುದಾಯದ ಮಕ್ಕಳಿಗೆ ಧರ್ಮದ ಪ್ರಕಾರ ಹೆಸರಿಡಲೂ ನಿಷೇಧ ಹೇರಿದೆ. ಆದರೆ, ಭಾರತದ ವಿರುದ್ಧ ಧರ್ಮದ ಹೆಸರಿನಲ್ಲೇ ಸಮರ ಸಾರಿರುವ ಪಾಕಿಸ್ತಾನದ ಜೈಶ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ಮೇಲೆ ನಿಷೇಧ ಹೇರಲು ತಾಂತ್ರಿಕ ಕಾರಣ ನೀಡಿ ಅಡ್ಡಗಾಲು ಹಾಕಿದೆ. ಸೌದಿ ಅರೇಬಿಯಾ ಸೇರಿದಂತೆ ಬಹುತೇಕ ಕಟ್ಟರ್ ಇಸ್ಲಾಂ ರಾಷ್ಟ್ರಗಳೇ ಬೆಂಬಲ ನೀಡಿದ್ದರೂ, ಚೀನಾ ತನ್ನ ನಿಲುವು ಬದಲಾಯಿಸಿಲ್ಲ. ಈ ಬೆಳವಣಿಗೆ ಪಾಕಿಸ್ತಾನ ಹಾಗೂ ಅಲ್ಲಿನ ಉಗ್ರರಿಗೆ ಮತ್ತು ಪ್ರಚೋದಿತ ಕಾಶ್ಮೀರ ಯುವಕರಿಗೆ ಕೊಂಚ ವಿಶ್ವಾಸ ವೃದ್ಧಿಸಿರುವುದೂ ನಿಜ. ಈ ವಿಷಯದಲ್ಲಿ ಚೀನಾ ವಿರುದ್ಧ ಭಾರತ ಪ್ರಯೋಗಿಸಿರುವ ರಾಜತಾಂತ್ರಿಕ ಒತ್ತಡ ಪರಿಣಾಮ ಬೀರಿಲ್ಲ ಎನ್ನಬಹುದು.
ಅಮೆರಿಕದ ಬೆಂಬಲ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಏನೇ ಆರೋಪಗಳಿದ್ದರೂ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿಷಯದಲ್ಲಿ ಉಳಿದ ಅಧ್ಯಕ್ಷರಷ್ಟು ಡಬಲ್ ಗೇಮ್ ಆಡುತ್ತಿಲ್ಲ. ಅಧಿಕಾರಕ್ಕೇರಿದ ಕೆಲವೇ ತಿಂಗಳಲ್ಲಿ ಮುಂಬಯಿ ಮೇಲೆ ನಡೆದ 26/11 ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ ಗೃಹ ಬಂಧನ ವಿಧಿಸಲು ಪಾಕಿಸ್ತಾನಕ್ಕೆ ಕಟ್ಟಪ್ಪಣೆ ನೀಡಿದ್ದಾರೆ. ಈ ಮೂಲಕ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಭಾರತದ ವಾದ “ಒಳ್ಳೆಯ ಮತ್ತು ಕೆಟ್ಟ ಉಗ್ರವಾದ ಎಂಬುದಿಲ್ಲ. ಉಗ್ರರೆಲ್ಲ ಜಗತ್ತಿಗೆ ಕಂಟಕರು’ ಎಂಬುದರ ಪರವಾಗಿ ನಡೆದುಕೊಂಡಿದ್ದಾರೆ. ಇದು ಪಾಕಿಸ್ತಾನಕ್ಕೆ ಆದ ಹಿನ್ನಡೆಯೇ. ಆದರೆ, ಮೊನ್ನೆ ಮೊನ್ನೆಯಷ್ಟೇ ಪಾಕಿಸ್ತಾನ ತನ್ನ ರಾಯಭಾರ ಕಚೇರಿ ಮೂಲಕವೇ ಉಗ್ರರಿಗೆ ಹಣ ಹಂಚಿಕೆ ಮಾಡುತ್ತಿದೆ ಎಂಬುದು ಸಾಬೀತಾಗಿರುವುದು ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕು. ಈ ಘಟನೆ ಪಾಕಿಸ್ತಾನ “ಉಗ್ರವಾದಿ ದೇಶ’ ಎಂದು ಘೋಷಿಸುವಂತೆ ವಿಶ್ವಸಂಸ್ಥೆಯ ಮೇಲೆ ಭಾರತ ಹೇರುತ್ತಿರುವ ಒತ್ತಡಕ್ಕೆ ಹೆಚ್ಚು ಮಹತ್ವ ನೀಡುವ ನಿರೀಕ್ಷೆಯಿದೆ. ಆದರೆ, ವಿಶ್ವ ಸಮುದಾಯದ ಪ್ರತಿಕ್ರಿಯೆ ಇನ್ನಷ್ಟೇ ತಿಳಿಯಬೇಕಿದೆ.
ಕಿರಣ ಹೆಗಡೆ ಮಲ್ಕಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.