ಅತಿವೃಷ್ಟಿ-ಅನಾವೃಷ್ಟಿಗಳು ನಮ್ಮ ತಪ್ಪಿಗೆ ಶಾಸ್ತಿ?
Team Udayavani, Sep 1, 2017, 8:34 AM IST
ಬರಿದು ಭೂಮಿ ರಿಯಲ್ ಎಸ್ಟೇಟ್ ಉದ್ಯಮದವರ ಕಣ್ಣು ಕುಕ್ಕುತ್ತದೆ. ರೈತರ ಹೊಲವೋ ಬತ್ತಿದ ಕೆರೆಯೋ ಅವರ ಕೈಸೇರುತ್ತವೆ. ಫ್ಲಾಟುಗಳು ತಲೆಯೆತ್ತುತ್ತವೆ. ಹೈಟೆಕ್ ಹೆಸರಿನಲ್ಲಿ ಎಲ್ಲವೂ ಕಾಂಕ್ರೀಟು ಮಯವಾಗುತ್ತವೆ. ಹನಿ ನೀರು ಇಂಗದ ಸ್ಥಿತಿ ನಿರ್ಮಾಣವಾಗುತ್ತದೆ. ಪರಿಣಾಮವಾಗಿ ಅವರ ಜೇಬು ತುಂಬಿದಂತೆಲ್ಲ ಭೂಮಿ ಬರಿದಾಗುತ್ತದೆ.
ಅತ್ತ ಬಿಹಾರ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶವೂ ತತ್ತರಗೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರು ಕೂಡ ಆಗಿಂದಾಗ್ಗೆ ಕೃತಕ ನೆರೆಯಲ್ಲಿ ಮುಳುಗೇಳುತ್ತಿದೆ. ಇತ್ತ ರಾಜ್ಯದ ಕೆಲವು ಜಿಲ್ಲೆಗಳು ಬರದ ಬವಣೆ ಕಾಣುತ್ತಿವೆ. ಒಂದೆಡೆ ಧೋ ಎಂದು ಮಳೆ ಸುರಿಯಬೇಕಾಗಿದ್ದಲ್ಲಿ ಮೋಡ ಬಿತ್ತನೆಯ ಚಿಂತನೆ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ನಮಗಾಗುವ ಕಹಿ ಅನುಭವವಿದು. ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ. ನಡುವೆ ಅಕಾಲವೃಷ್ಟಿಯಾದರೂ ಅದು ವಾಯುಭಾರ ಕುಸಿತವೋ ಚಂಡಮಾರುತವೋ ಯಾವುದೋ ಒಂದರ ಕೃಪೆ! ಮಾನ್ಸೂನು ಮಾರುತಗಳು ನಮಗೆ ಮಳೆಯನ್ನು ತರುತ್ತವೆ ಎಂದು ಭೂಗೋಳ ಪಾಠ ಹೇಳುತ್ತದೆ. ಈ ಬಾರಿ ವಾಡಿಕೆಯ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ಹೇಳಿದೆ. ಆದರೆ ಹೇಳಿಕೆ ಹುಸಿಯಾಗಿದೆ. ನಿರೀಕ್ಷಿತ ಮಳೆಯಾಗದೆ ಇಷ್ಟರಲ್ಲೇ ಕೆಲವೆಡೆ ಬರದ ಛಾಯೆ ಆವರಿಸಿದೆ. ಈ ಹವಾಮಾನ ವೈಪರೀತ್ಯಗಳಿಗೆ ಕಾರಣವಾದರೂ ಏನು?
ಹೆಚ್ಚುತ್ತಿರುವ ಜನಸಂಖ್ಯೆ
ಪ್ರಾಯಶಃ ಬಡತನ, ಪರಿಸರ ಮಾಲಿನ್ಯದಂತಹ ಬಹುತೇಕ ಸಮಸ್ಯೆಗಳಿಗೂ ತಾಯಿ ಜನಸಂಖ್ಯಾ ಸ್ಫೋಟ. ಹೆಚ್ಚುತ್ತಿರುವ ಜನಸಂಖ್ಯೆಗೆ ವಸತಿ ವ್ಯವಸ್ಥೆ ಪೂರೈಕೆಗಾಗಿ ಕಾಡು ಕಡಿಯಲ್ಪಟ್ಟು ನಾಡಾಗಿ ಪರಿವರ್ತನೆಯಾಗುತ್ತದೆ. ಮನೆ, ಕಟ್ಟಡ, ರಸ್ತೆ ನಿರ್ಮಾಣಕ್ಕಾಗಿ ಅರಣ್ಯನಾಶವಾಗುತ್ತದೆ. ಕಾಡಿದ್ದ ಜಾಗದಲ್ಲಿ ಕಾಂಕ್ರೀಟು ಕಾಡು ನಿರ್ಮಾಣವಾಗುತ್ತದೆ. ಹಳ್ಳಿ ಜನರೂ ನಗರದತ್ತ ಮುಖಮಾಡುತ್ತಿರುವ ಪರಿಣಾಮವಾಗಿ ನಗರವೂ ವಿಸ್ತತಗೊಂಡು ಹಳ್ಳಿಯತ್ತ ಕಬಂಧ ಬಾಹು ಚಾಚುತ್ತದೆ. ನಗರೀಕರಣ, ರಸ್ತೆ ಅಗಲೀಕರಣ, ಕೈಗಾರಿಕೀಕರಣಗಳಿಂದಾಗಿ ಫ್ಲಾಟ್ ಸಂಸ್ಕೃತಿ ತಲೆಯೆತ್ತಿದೆ. ಒಂದಿಂಚೂ ಬಿಡದೆ ಕಾಂಕ್ರೀಟೀಕರಣಗೊಂಡು ನೀರಿಂಗದ ಪರಿಸ್ಥಿತಿ ನಿರ್ಮಾಣಗೊಂಡು ನಗರಜೀವನವಿಂದು ನೀರಿನ ಕೊರತೆ ಎದುರಿಸುವಂತಾಗಿದೆ.
ರಿಯಲ್ ಎಸ್ಟೇಟ್ ಉದ್ದಿಮೆ
ಜನರ ನಗರ ವ್ಯಾಮೋಹ ಮತ್ತು ಫ್ಲಾಟ್ ಪ್ರೇಮದಿಂದಾಗಿ ರಿಯಲ್ ಎಸ್ಟೇಟ್ ವ್ಯವಹಾರದವರು ಸಾಕಷ್ಟು ಪ್ರಗತಿ ಕಂಡಿದ್ದಾರೆ. ಮತೊÕ$Âàದ್ಯಮ, ಪ್ರವಾಸೋದ್ಯಮಗಳಂತೆ ಅದೂ ಒಂದು ಉದ್ದಿಮೆಯಾಗಿ ಬೆಳೆದಿದೆ. ಬರಿದು ಭೂಮಿ ಆ ಉದ್ಯಮದವರ ಕಣ್ಣು ಕುಕ್ಕುತ್ತದೆ. ರೈತರ ಹೊಲವೋ ಬತ್ತಿದ ಕೆರೆಯೋ ಅವರ ಕೈಸೇರುತ್ತವೆ. ಫ್ಲಾಟುಗಳು ತಲೆಯೆತ್ತುತ್ತವೆ. ಹೈಟೆಕ್ ಹೆಸರಿನಲ್ಲಿ ಎಲ್ಲವೂ ಕಾಂಕ್ರೀಟುಮಯವಾಗುತ್ತವೆ. ಹನಿ ನೀರು ಇಂಗದ ಸ್ಥಿತಿ ನಿರ್ಮಾಣವಾಗುತ್ತದೆ. ಪರಿಣಾಮವಾಗಿ ಅವರ ಜೇಬು ತುಂಬಿದಂತೆಲ್ಲ ಭೂಮಿ ಬರಿದಾಗುತ್ತದೆ. ಹಿಂದೆಲ್ಲ ಅರಣ್ಯ, ಪರಿಸರ ನಾಶಕ್ಕೆಲ್ಲ ಕಾರ್ಖಾನೆ-ಕೈಗಾರಿಕೆಗಳತ್ತ ಬೆರಳು ತೋರುತ್ತಿದ್ದವರು ಇಂದು ಈ ಉದ್ಯಮದತ್ತಲೂ ಬೆಟ್ಟು ಮಾಡುವಂತಾಗಿದೆ.
ಹವಾಮಾನದಲ್ಲಿ ಏರುಪೇರು
ಕಾರಣ ಏನೇ ಇರಲಿ, ಅವ್ಯಾಹತ ಅರಣ್ಯನಾಶ ಮತ್ತು ಕಾಂಕ್ರಿಟೀಕರಣದ ಪರಿಣಾಮವಾಗಿ ಹವಾಮಾನದಲ್ಲಿ ಏರುಪೇರು ಉಂಟಾಗಿದೆ. ಪರಿಸರದ ಮೇಲೆ ಸವಾರಿ ಮಾಡಿದ ಮಾನವನ ಮೇಲೆ ಪ್ರಕೃತಿ ಪ್ರಹಾರಕ್ಕೆ ಮುಂದಾಗಿದೆ. ಎಂದೋ ಸುರಿಬೇಕಾದ ಮಳೆ ಇನ್ನೆಂದೋ ಸುರಿಯುತ್ತದೆ. ಎಲ್ಲೋ ಸುರಿಯಬೇಕಾದ ಮಳೆ ಇನ್ನೆಲ್ಲೋ ಸುರಿಯುತ್ತದೆ. ಅತಿವೃಷ್ಟಿ, ಅಕಾಲವೃಷ್ಟಿ, ಅನಾವೃಷ್ಟಿಗಳು ಪ್ರಕೃತಿ ಮುನಿದುದರ ಪರಿಣಾಮ. ಪ್ರಕೃತಿ ವಿಕೋಪದ ಫಲಶ್ರುತಿ. ಬಿಹಾರ, ಉತ್ತರಪ್ರದೇಶ ರಾಜ್ಯಗಳಿಗೆ ಅತಿವೃಷ್ಟಿಯ ಅನುಭವವಾದರೆ, ನಮ್ಮ ರಾಜ್ಯಕ್ಕೆ ಅನಾವೃಷ್ಟಿಯ ಅನುಭವವಾಗಿದೆ. ಎರಡೂ ಅತಿರೇಕಗಳು. ಐದಾರು ವರ್ಷಗಳಿಂದ ಸತತ ಬರದ ಬವಣೆ ಕಂಡ ರಾಜ್ಯಕ್ಕೆ ಈ ಬಾರಿಯೂ ಅದರ ಬೇಗೆ ತಟ್ಟುವ ಆತಂಕ ಕಾಡಿದೆ. ಹೋದ ವರ್ಷ ಕರಾಳ ಬರದ ಕಹಿಯುಂಡ ಕರಾವಳಿ ಜಿಲ್ಲೆಗೆ ಈ ಬಾರಿಯೂ ಜಲಕ್ಷಾಮದ ಆತಂಕ ಇಷ್ಟರಲ್ಲೇ ಕಾಡತೊಡಗಿದೆ.
ಅರಣ್ಯೀಕರಣದ ಅಗತ್ಯ
ಹವಾಮಾನ ವೈಪರೀತ್ಯ, ಜಲಕ್ಷಾಮಗಳಿಗೆ ಅರಣ್ಯನಾಶವೇ ಕಾರಣ. ವಿವಿಧ ಕಾರಣಗಳಿಗಾಗಿ ಬಹುಪ್ರಮಾಣದಲ್ಲಿ ಅರಣ್ಯನಾಶವಾದಾಗ ವಾತಾವರಣದಲ್ಲಿ ಇಂಗಾಲದ ಡೈಆಕ್ಸೆ„ಡ್ ಪ್ರಮಾಣ ಹೆಚ್ಚುತ್ತದೆ. ತಾಪಮಾನದಲ್ಲಿ ಏರಿಕೆಯಾಗುತ್ತದೆ. ಮಳೆಮಾರುತದಲ್ಲಿ ವ್ಯತ್ಯಯವಾಗುತ್ತದೆ. ಇತ್ತೀಚೆಗೆ ನಾವು ಮೇಲಿಂದ ಮೇಲೆ ಎದುರಿಸುತ್ತಿರುವ ನೆರೆಹಾವಳಿಯಿರಲಿ, ನೀರಿಗಾಗಿ ಹಾಹಾಕಾರವಿರಲಿ ಎಲ್ಲವೂ ಇದರ ಪರಿಣಾಮವಷ್ಟೆ. ಅರಣ್ಯೀಕರಣವೇ ಇದಕ್ಕೆ ಸೂಕ್ತ ಪರಿಹಾರವೆಂದು ಮನಗಂಡ ಅರಣ್ಯ ಇಲಾಖೆ ಈ ಬಾರಿ ವನಮಹೋತ್ಸವ ಆಚರಣೆಗೆ ಹೆಚ್ಚಿನ ಒತ್ತು ನೀಡಿತ್ತು. ನೀರಿಗಾಗಿ ಅರಣ್ಯ ಎಂಬ ವಾಕ್ಯವನ್ನು ಈ ವರ್ಷದ ಘೋಷವಾಕ್ಯವನ್ನಾಗಿ ಅಂಗೀಕರಿಸಿತ್ತು. ಆರು ಕೋಟಿ ಗಿಡಗಳನ್ನು ನೆಡುವ ಗುರಿಹೊಂದಿತ್ತು. ಆಕಾಶವಾಣಿಯೂ ಮರ ಇಳೆಯ ವರ ಎಂಬ ಕಾರ್ಯಕ್ರಮ ಸರಣಿಯನ್ನು ಬಿತ್ತರಿಸಿತ್ತು. ಜನತೆಯಲ್ಲಿ ಜಾಗೃತಿ ಮೂಡಿಸಲು ಶ್ರಮ ವಹಿಸಿತ್ತು.
ಜನರಲ್ಲಿ ಜಾಗೃತಿ ಮೂಡಬೇಕಿದೆ
ಏನಿದ್ದರೇನು? ಪದೇ ಪದೆ ಪ್ರಕೃತಿ ನೀಡುವ ಛಡಿಯೇಟಿನಿಂದ ಜನ ಪಾಠ ಕಲಿತಂತಿಲ್ಲ. ಅತಿವೃಷ್ಟಿಯನ್ನು ನಾವು ತಡೆಯಲಾರೆವು. ಆದರೆ ಅನಾವೃಷ್ಟಿಯಿಂದ ತಲೆದೋರುವ ಜಲಕ್ಷಾಮಕ್ಕೆ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಲ್ಲೆವು. ಅದಕ್ಕಾಗಿ ಬಿದ್ದ ಮಳೆನೀರನ್ನು ಹಿಡಿದಿಟ್ಟುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮಳೆ ನೀರು ಕೊಯ್ಲು ಇಂದಿನ ಅಗತ್ಯ. ಇಂಗುಗುಂಡಿ ನಿರ್ಮಿಸಿಯೋ ಹರಿವ ನೀರಿಗೆ ತಡೆಯೊಡ್ಡಿಯೋ ಸಾಧ್ಯವಾದಷ್ಟು ನೀರಿಂಗಿಸಿಕೊಳ್ಳಬೇಕಿದೆ. ಜಲಮರುಪೂರಣಕ್ಕೆ ವಿವಿಧ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಿದೆ. ಜಲಸಂರಕ್ಷಣೆಗೆ ನೆರವಾಗಬಲ್ಲ ಅರಣ್ಯೀಕರಣದ ಅಂಗವಾಗಿ 1950ರಲ್ಲೇ ಅಂದಿನ ಕೇಂದ್ರ ಕೃಷಿ ಸಚಿವ ಡಾ| ಕೆ. ಎಂ. ಮುನ್ಶಿ ಅವರು ವನಮಹೋತ್ಸವ ಆಚರಣೆ ಆರಂಭಿಸಿದರು. ಅದರಂತೆ ಹತ್ತಾರು ವರ್ಷಗಳಿಂದ ವನಮಹೋತ್ಸವ ಆಚರಣೆ ಮಾಡುತ್ತಾ ಇದ್ದೇವೆ. ಆದರೂ ನಾಕಾರು ಮರಗಳನ್ನಾದರೂ ಬೆಳೆಸಲಾಗಿಲ್ಲ. ಹಾಗಾಗುತ್ತಿದ್ದಲ್ಲಿ ಬಹುತೇಕ ಶಾಲೆಗಳ ಸುತ್ತ ದೊಡ್ಡ ಕಾಡು ಬೆಳೆದಿರುತ್ತಿತ್ತು! ಹೋದ ವರ್ಷ ಒಂದು ಕೋಟಿ ಗಿಡ ನೆಡುವ ಗುರಿಹೊಂದಿದ್ದಲ್ಲಿ ಈ ವರ್ಷ ಆರು ಕೋಟಿ ಗಿಡ ನೆಡುವ ಗುರಿ ಹೊಂದಲಾಗಿತ್ತು. ಸಂಖ್ಯೆ ಏರಿಸಿದ ಮಾತ್ರಕ್ಕೆ ಸಮಸ್ಯೆ ಪರಿಹಾರ ಕಂಡಂತಾಗಲಿಲ್ಲ. ಒಂದು ಕಾಲದಲ್ಲಿ ಮುಗಿದು ಹೋಗದ ಸಂಪನ್ಮೂಲವೆನಿಸಿದ್ದ ನೀರು ಇಂದು ಮುಗಿದು ಹೋಗುವ ಸಂಪನ್ಮೂಲ. ಭೂಮಂಡಲದ ಮುಕ್ಕಾಲು ಭಾಗ ಜಲಾವೃತವಾಗಿದ್ದರೂ ಕುಡಿಯಲು ಯೋಗ್ಯವಾದ ನೀರಿನ ಪ್ರಮಾಣ ಶೇ.1ಕ್ಕಿಂತಲೂ ಕಡಿಮೆ ಎಂದಾಗ ಜಲಸಂರಕ್ಷಣೆಯ ಅಗತ್ಯ ಎಷ್ಟರ ಮಟ್ಟಿಗಿದೆ ಎಂಬುದು ಮನದಟ್ಟಾಗಬಹುದು. ಜನ ಎಚ್ಚೆತ್ತುಕೊಳ್ಳಬೇಕಿದೆ. ಇಷ್ಟರಲ್ಲೇ ಅನುಭವಿಸಿದ ಜಲ ಸಮಸ್ಯೆಯಿಂದ ಪಾಠ ಕಲಿಯಬೇಕಿದೆ. ವನಮಹೋತ್ಸವದಂತಹ ಕಾರ್ಯಕ್ರಮವನ್ನು ವೇದಿಕೆಗಷ್ಟೇ ಸೀಮಿತಗೊಳಿಸದೆ ನಿಷ್ಠೆಯಿಂದ ನಿರ್ವಹಿಸಬೇಕಾಗಿದೆ. ಇಲ್ಲದೆ ಹೋದಲ್ಲಿ ವರ್ಷಂಪ್ರತಿ ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪ ಅನುಭವಿಸಲೇಬೇಕಾಗುತ್ತದೆ. ನೆನಪಿರಲಿ.
ರಾಂ ಎಲ್ಲಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.