ಮುಲಾಯಂರ ಮೆಚ್ಚುಗೆಯ ಮಾತು ಚುಚ್ಚಲಿರುವುದು ಯಾರನ್ನು?
Team Udayavani, Feb 15, 2019, 12:30 AM IST
ಕುತೂಹಲ ಕೆರಳಿಸಿರುವ ಸಂಗತಿಯೆಂದರೆ ಮುಲಾಯಂರ ಹೇಳಿಕೆಗಳು ಉತ್ತರಪ್ರದೇಶ ದಲ್ಲಿನ ಸಮಾಜವಾದಿ ಪಕ್ಷದ ಕಾರ್ಯಕರ್ತರ ಮೇಲೆ ಮತ್ತು ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ, ಮಹಾಘಟಬಂಧನಕ್ಕೆ ಈ ಎಲ್ಲಾ ವಿದ್ಯಮಾನಗಳಿಂದ ತೊಂದರೆಯಾಗಲಿದೆಯೇ(ಲೋಕಸಭಾ ಚುನಾವಣೆಗೆ ಯಾವ ರೀತಿಯ ತಿರುವು ಕೊಡಲಿದೆ) ಎನ್ನುವುದು.
ಅಖೀಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ(ಎಸ್‌ಪಿ) ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಾರ್ಟಿ (ಬಿಎಸ್‌ಪಿ) ಲೋಕಸಭಾ ಚುನಾವಣೆಗಾಗಿ ಮೈತ್ರಿ ಘೋಷಣೆ ಮಾಡಿ ಒಂದು ತಿಂಗಳಷ್ಟೇ ಆಗಿದೆ. ಆದರೀಗ ಸಮಾಜ ವಾದಿ ಪಕ್ಷದ ಸ್ಥಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು “ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಿ ಹಿಂದಿರುಗಬೇಕು’ ಎಂದಿದ್ದಾರೆ. ಮುಂದುವರಿದು “ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರತ್ತ ಯಾರೂ ಬೆರಳೆತ್ತಿ ತೋರಿಸಲಾಗದು’ ಎಂಬ ಮುಲಾಯಂರ ಹೇಳಿಕೆ, ಅವರ ಪಕ್ಕದಲ್ಲೇ ಕುಳಿತಿದ್ದ ಸೋನಿಯಾ ಗಾಂಧಿಯವರ ಮುಖದಲ್ಲೂ ವಿಪರೀತ ಅಚ್ಚರಿ ಮೂಡಿಸಿತು.
ಮುಲಾಯಂ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದೇ ಬಿಜೆಪಿ ವಲಯದಲ್ಲಿ ಸಂತಸ ಚಿಗುರಿದೆ. ನೇತಾಜಿಗೆ ಧನ್ಯವಾದ ಅರ್ಪಿಸುತ್ತಾ ಉತ್ತರ ಪ್ರದೇಶದ ಲಖೌ°ದಲ್ಲಿ ಬೃಹತ್ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಮುಲಾಯಂ ಹಾಗೇಕೆ ಹೇಳಿದರು ಎನ್ನುವ ವಿಚಾರದಲ್ಲಿ ಹಲವು ಆಲೋಚನೆಗಳನ್ನು ಎದುರಿಡಲಾಗುತ್ತಿದೆ. ಅವರು ಅಖೀಲೇಶ್-ಮಾಯಾ ವತಿ ಮೈತ್ರಿ ದುರ್ಬಲವಾಗಿದೆ ಎಂದು ಭಾವಿಸುತ್ತಾರಾ? ಪಕ್ಷದಲ್ಲಿ ಮೂಲೆಗುಂಪಾದದ್ದಕ್ಕಾಗಿ ಅಸಹನೆ ಯಿಂದ ಹೀಗಾಡು ತ್ತಿದ್ದಾರಾ? ಅಥವಾ ಕೆಲವರು ಹೇಳುತ್ತಿರುವಂತೆ, ಅವರ ಮಾನಸಿಕ ಆರೋಗ್ಯ ಸರಿಯಿಲ್ಲವೇ?
ಈ ವಾದಗಳಲ್ಲಿ ವಿಚಿತ್ರವೆನಿಸುವಂಥದ್ದೆಂದರೆ ಮೂರನೆಯ ವಾದ. ಅಂದರೆ, ಮುಲಾಯಂರಿಗೆ ಮರೆವಿನ ಸಮಸ್ಯೆ ಕಾಡುತ್ತಿದೆ ಎಂದು ಕೆಲವರು ಹೇಳುತ್ತಿರುವುದು. ಅದಕ್ಕಾಗಿ ಅವರು ಎದುರಿ ಡುತ್ತಿರುವ ಕೆಲವು ಉದಾಹರಣೆಗಳಿಲ್ಲಿವೆ…
1) ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಮುಲಾಯಂರ ಸಹೋದರ ಶಿವಪಾಲ್ ಯಾದವ್ ಪ್ರಗತಿಶೀಲ್ ಸಮಾಜವಾದಿ ಪಾರ್ಟಿ-ಲೋಹಿಯಾ ಪಕ್ಷವನ್ನು ಸ್ಥಾಪಿಸಿದ್ದರು. ಡಿಸೆಂಬರ್‌ನಲ್ಲಿ ನಡೆದ ಅದರ ಉದ್ಘಾಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಮುಲಾಯಂ ಒಪ್ಪಿಕೊಂಡು ಅಖೀಲೇಶ್ ಯಾದವ್‌ಗೆ ಮುಜುಗರ ವುಂಟು ಮಾಡಿದ್ದರು. ಆದರೆ ಉದ್ಘಾಟನಾ ಸಮಾರಂಭದಲ್ಲಿ ಮುಲಾಯಂ ಶಿವಪಾಲ್‌ರ ಹೊಸ ಪಕ್ಷದ ಬದಲು ಸಮಾಜವಾದಿ ಪಕ್ಷಕ್ಕೆ ಮತ ನೀಡುವಂತೆ ಕೇಳಿದರಂತೆ!
2) ಪಕ್ಷದ ಯುವ ನಾಯಕರೊಬ್ಬರು ಮುಲಾಯಂರನ್ನು ಮೊದಲ ಬಾರಿ ಭೇಟಿಯಾಗಿದ್ದರಂತೆ. ಆದರೆ ಮುಲಾಯಂ ಮಾತ್ರ, “ತುಂಬಾ ದಿನವಾಯಿತಲ್ಲ ಭೇಟಿಯಾಗಿ, ಮತ್ತೆ ಸಿಗುತ್ತೇನೆಂದು ಹೇಳಿದವನು ನಾಪತ್ತೆಯಾಗಿಬಿಟ್ಟೆಯಲ್ಲ?’ ಎಂದು ಪ್ರಶ್ನಿಸಿದರಂತೆ. ಆಗ ಆ ಯುವ ನಾಯಕ. “ಸಾರ್ ನಾನು ನಿಮ್ಮನ್ನು ಮೊದಲ ಬಾರಿಗೆ ಸಿಗುತ್ತಿರೋದು’ ಎಂದಾಗ, ಮುಲಾಯಂ ತಬ್ಬಿಬ್ಟಾದರಂತೆ.
ಮುಲಾಯಂರ ಟೀಕಾಕಾರರು ಎದುರಿಡುವ ಈ ಉದಾಹರಣೆ ಗಳು ನಿಜಕ್ಕೂ ಬಾಲಿಶವೆಂದೇ ಹೇಳಬೇಕು. ಸಹಜವಾಗಿಯೇ, ಸಾರ್ವಜನಿಕ ಜೀವನದಲ್ಲಿರುವವರು ನಿತ್ಯವೂ ನೂರಾರು ಜನರನ್ನು ಭೇಟಿಯಾಗುತ್ತಾರೆ, ಪಕ್ಷದವರನ್ನೆಲ್ಲ ನೆನಪಿಟ್ಟುಕೊಳ್ಳಲು ಸಾಧ್ಯ ವಾಗು ವುದಿಲ್ಲ. ಪರಿಚಯವಿಲ್ಲದಿದ್ದರೂ ಪರಿಚಯವಿದೆ ಎಂಬಂತೆ ತೋರಿಸಿಕೊಳ್ಳಬೇಕಾಗುತ್ತದೆ. ಇನ್ನು ಶಿವಪಾಲ್ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ಅವರು ಸಮಾಜವಾದಿ ಪಕ್ಷಕ್ಕೆ ಮತನೀಡಿ ಎಂದು ಹೇಳಿದ ವಿಚಾರಕ್ಕೆ ಬಂದರೆ…ಈ ರೀತಿಯ ಎಡವಟ್ಟುಗಳನ್ನು ದೇಶದ ಯುವ ನಾಯಕರೇ ಎಷ್ಟೊಂದು ಬಾರಿ ಮಾಡೋದಿಲ್ಲ? ರಾಜೀವ್ ಗಾಂಧಿಯವರ ಹೆಸರನ್ನು ರಾಹುಲ್ ಗಾಂಧಿ ಎಂದು ಕಾಂಗ್ರೆಸ್‌ನವರು ಅನೇಕ ಬಾರಿ ಕನೂಸ್ ಮಾಡಿಕೊಂಡಿಲ್ಲವೇ? ಅದನ್ನು ಮರೆವಿನ ರೋಗ ಎನ್ನಲಾದೀತೇ? ಹೀಗಾಗಿ ಮುಲಾಯಂರಿಗೆ ಮನಸ್ಸು ಸ್ಥಿಮಿತದಲ್ಲಿಲ್ಲ ಎನ್ನುವ ವಾದ ತೀರಾ ಬಾಲಿಶವಾದದ್ದು.
ಸತ್ಯವೇನೆಂದರೆ, ಮುಲಾಯಂ ಚತುರ ರಾಜಕಾರಣಿ. ಮೊದಲಿ ನಿಂದಲೂ ಅವರು ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಗುಣವನ್ನು ಬಹಳ ಸಕ್ಷಮ ವಾಗಿ ರೂಢಿಸಿಕೊಂಡುಬಿಟ್ಟಿದ್ದಾರೆ.
ಕುತೂಹಲ ಕೆರಳಿಸಿರುವ ಸಂಗತಿಯೆಂದರೆ ಮುಲಾಯಂರ ಹೇಳಿಕೆಗಳು ಉತ್ತರಪ್ರದೇಶದಲ್ಲಿನ ಸಮಾಜವಾದಿ ಪಕ್ಷದ ಕಾರ್ಯ ಕರ್ತರ ಮೇಲೆ ಮತ್ತು ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ, ಮಹಾಘಟಬಂಧನಕ್ಕೆ ಈ ಎಲ್ಲಾ ವಿದ್ಯಮಾನಗಳಿಂದ ತೊಂದರೆಯಾಗಲಿದೆಯೇ(ಲೋಕಸಭಾ ಚುನಾವಣೆಗೆ ಯಾವ ರೀತಿಯ ತಿರುವು ಕೊಡಲಿದೆ) ಎನ್ನುವುದು. ಇನ್ನು ಇದು ಕೇವಲ ಮುಲಾಯಂರ ವೈಯಕ್ತಿಕ ಅಭಿಪ್ರಾಯವೋ ಅಥವಾ ಪಕ್ಷದ ಇತರೆ ಹಿರಿಯ ನಾಯಕರ ಧ್ವನಿಯೂ ಅದರಲ್ಲಿದೆಯೋ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.
ಗಮನಿಸಬೇಕಾದ ಸಂಗತಿಯೆಂದರೆ ಇದೇ ಜನವರಿ 25ರಂದು, ಮುಲಾಯಂ ಸಿಂಗ್ ಯಾದವ್ ರೆಡಿಫ್ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಟೀಕಿಸಿದ್ದರು!
“”ಬಿಜೆಪಿ ನೀಡಿದ ಭರವಸೆಗಳು ಈಡೇರಿಲ್ಲ. ದೇಶದ ಯುವ ಜನತೆ ಮತ್ತು ರೈತರು ನಿರಾಶೆಗೊಂಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಜನರ ಬಾಂಕ್ ಖಾತೆಗಳಿಗೆ 15 ಲಕ್ಷ ಹಾಕುವುದಾಗಿ, ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ಕೆಲಸ ಒದಗಿಸುವುದಾಗಿ ಮೋದಿ ಸರ್ಕಾರ ಹೇಳಿತ್ತು. ಆದರೆ ಈ ಭರವಸೆಗಳೆಲ್ಲ ಸುಳ್ಳಾದವು. ಒಂದು ಸಂಗತಿ ಯಂತೂ ಸತ್ಯ, ಬಿಜೆಪಿ 2014ರಲ್ಲಿನಂತೆ ಪ್ರದರ್ಶನ ನೀಡಲಾರದು. ನನ್ನ ಪ್ರಕಾರ, ಪ್ರತಿಪಕ್ಷಗಳಿಗೆ ಹೆಚ್ಚು ಸ್ಥಾನಗಳು ಸಿಗಲಿವೆ” ಎಂದಿದ್ದರು!
ಕೇವಲ ಮೂರು ವಾರದಲ್ಲಿ ಅವರ ವರಸೆ ಬದಲಾಗಿದ್ದನ್ನು ನೋಡಿದಾಗ, ನಿಸ್ಸಂಶಯವಾಗಿಯೂ ಮೋದಿ ಸರ್ಕಾರದ ಕುರಿತ ಮೆಚ್ಚುಗೆಯನ್ನು ಅವರು ಪರೋಕ್ಷವಾಗಿ ಇನ್ಯಾರನ್ನೋ ಟಾರ್ಗೆಟ್ ಮಾಡಲು ಬಳಸುತ್ತಿದ್ದಾರೆ ಎನ್ನುವುದು ಅರಿವಾಗುತ್ತದೆ.
ಮೇಲ್ನೋಟಕ್ಕೆ, ನರೇಂದ್ರ ಮೋದಿಯವರಿಗೆ ಬೆಂಬಲ ನೀಡುವ ಮೂಲಕ ಮುಲಾಯಂ ತಮ್ಮನ್ನು “ಕಡೆಗಣಿಸಿದ’ ಮಗನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದೆನಿಸಿದರೂ, ನಿಜಕ್ಕೂ ಅವರು ಗುರಿಯಿಟ್ಟಿರುವುದು ಬಿಎಸ್‌ಪಿಯತ್ತ. ಮಾಯಾವತಿಯವರೆಡೆಗಿನ ದ್ವೇಷ ಮುಲಾಯಂರಲ್ಲಿ ಇನ್ನೂ ಜೀವಂತವಿದೆ ಎಂಬ ಸತ್ಯ ಉತ್ತರ ಪ್ರದೇಶದ ರಾಜಕೀಯ ವಲಯಕ್ಕೆ ತಿಳಿದಿದೆ.
ಅಲ್ಲದೇ ಒಬಿಸಿಗಳು(ಎಸ್‌ಪಿ ಬೆಂಬಲಿಗರು) ಮತ್ತು ದಲಿತರು (ಮಾಯಾವತಿಯವರ ಓಟ್ ಬ್ಯಾಂಕ್) ಒಟ್ಟಿಗೇ ಮತಹಾಕುವುದಿಲ್ಲ ಎಂದೇ ಮುಲಾಯಂ ಗಟ್ಟಿಯಾಗಿ ನಂಬುತ್ತಾರೆ. ಹೀಗಾಗಿ, ಎಸ್‌ಪಿ-ಬಿಎಸ್‌ಪಿಯ ಮೈತ್ರಿಯನ್ನು ಅವರು ವಿರೋಧಿಸುತ್ತಲೇ ಬಂದಿದ್ದಾರೆ. ಒಬಿಸಿ ಮತಗಳನ್ನು ಕ್ರೊಡೀಕರಿಸುವಂಥ ಮೈತ್ರಿ ಮಾಡಿ ಕೊಂಡರೆ ಲಾಭವಿದೆ ಎಂದೇ ಅವರು ವಾದಿಸುತ್ತಾ ಬಂದಿದ್ದಾರೆ.
2009ರಲ್ಲಿ ಅವರು ಒಬಿಸಿಗಳನ್ನೆಲ್ಲ ಒಟ್ಟುಗೂಡಿಸಿ ಬಿಎಸ್‌ಪಿಯನ್ನು ಮಣಿಸುವುದಕ್ಕಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಬಂಡಾಯ ನಾಯಕ ಕಲ್ಯಾಣ್ ಸಿಂಗ್‌ರೊಂದಿಗೆ(ಲೋಧ್ ಸಮುದಾಯದವರು) ಮೈತ್ರಿ ಮಾಡಿಕೊಂಡಿದ್ದರು. ಆದರೆ ಇದರಿಂದೇನೂ ಲಾಭವಾಗಿರಲಿಲ್ಲ. ಆ ಚುನಾವಣೆಯಲ್ಲಿ ಎಸ್‌ಪಿ-23, ಬಿಎಸ್‌ಪಿ-20 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 21 ಸ್ಥಾನಗಳನ್ನು ಗಿಟ್ಟಿಸಿಕೊಂಡುಬಿಟ್ಟಿತ್ತು.
ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ, ಇಂದು ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ, ಹೀಗಾಗಿ ಅಂದು ಕಾಂಗ್ರೆಸ್‌ನತ್ತ ಹೋಗಿದ್ದ ಮತಗಳು ಇಂದು ಎಸ್‌ಪಿಯತ್ತ ಬರುತ್ತವೆ ಎಂದು ಭಾವಿಸು ತ್ತಾರವರು. ಇನ್ನು “ಬಿಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ನಮ್ಮ ಪಕ್ಷಕ್ಕೇನು ಲಾಭವಿದೆ? ಇಂಥ ಮೈತ್ರಿಗಳಿಂದ ಪಕ್ಷಕ್ಕಾಗಿ ಅನೇಕ ವರ್ಷ ಗಳಿಂದ ದುಡಿದವರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ…ಹೀಗಾಗಿ ಈ ಮೈತ್ರಿ ಬೇಡ’ ಎಂದೇ ಬಹಿರಂಗವಾಗಿಯೇ ಹೇಳುತ್ತಾ ಬಂದಿದ್ದರು ಮುಲಾಯಂ. ಆದರೂ ಅಖೀಲೇಶ್, ತಂದೆಯ ಮಾತಿಗೆ ಬೆಲೆ ಕೊಡದೇ ಮಾಯಾವತಿ ಯವ ರೊಂದಿಗೆ ಕೈ ಜೋಡಿಸಿಬಿಟ್ಟರು. ಈ ಸಂಗತಿಯೂ ಮುಲಾಯಂರಿಗೆ ಬೇಸರವುಂಟುಮಾಡಿದೆ, ಅಖೀಲೇಶ್ ತಮ್ಮನ್ನು ಮೂಲೆಗುಂಪಾಗಿ ಸು ತ್ತಿದ್ದಾರೆ ಎಂದು ಅವರಿಗೆ ಖಾತ್ರಿಯಾಗಿದೆ. ಇದರ ಪ್ರಯೋಜನವನ್ನು ಬಿಜೆಪಿ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ. ಅತ್ತ ಶಿವಪಾಲ್‌ರ ಪಕ್ಷ ಕೂಡ ಉತ್ತರಪ್ರದೇಶದಲ್ಲಿ ಬಿಜೆಪಿಯ ಬಿ-ಟೀಂ ಎಂದೇ ಕರೆಸಿಕೊಳ್ಳುತ್ತದೆ. ಶಿವಪಾಲ್ ಅವರು ಮುಲಾಯಂರನ್ನು ಪೂರ್ಣವಾಗಿ ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿ ಸುತ್ತಿದ್ದಾರೆ. ಈಗಿನ ವಿದ್ಯಮಾನಗಳು ಶಿವಪಾಲ್‌ರಿಗೂ ವರ ವಾಗಿ ಪರಿಣಮಿಸಿರುವುದು ಸುಳ್ಳಲ್ಲ. ಅಖೀಲೇಶ್ ಯಾದವ್ ಮಾಯಾವತಿ ಯವ ರೊಂದಿಗೆ ಮೈತ್ರಿ ಮಾಡಿಕೊಂಡಿರುವುದ ರಿಂದಾಗಿ ಇತರೆ ಹಿಂದು ಳಿದ ವರ್ಗಗಳಿಗೆ ಬೇಸರವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ, ಅವರು ಈ ಬಾರಿ ಮುಲಾಯಂರತ್ತ ತಿರುಗಿ ನೋಡುತ್ತಿ ದ್ದಾರೆ. ಮುಲಾ ಯಂರನ್ನು ಪೂರ್ಣವಾಗಿ ತಮ್ಮ ತಂಡಕ್ಕೆ ಎಳೆದು ಕೊಂಡು ಬಿಟ್ಟರೆ, ಒಬಿಸಿಗಳ ಮತಗಳು ತಮಗೆ ಸಿಗಬಹುದು ಎನ್ನುವುದು ಶಿವಪಾಲ್ ಲೆಕ್ಕಾಚಾರ. ಒಟ್ಟಲ್ಲಿ ಇದರ ಪರಿಣಾಮವಂತೂ ಚುನಾ ವಣಾ ಸಮಯದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಯ ಮೇಲೆ ಆಗಲಿರುವುದಂತೂ ನಿಶ್ಚಿತ.
ಈಗ ಮತ್ತೂಂದು ಕೋನದಿಂದ ಈ ವಿಚಾರವನ್ನು ನೋಡ ಬೇಕಾಗುತ್ತದೆ. ಆದಾಗ್ಯೂ ಬಿಎಸ್‌ಪಿ ಮತ್ತು ಎಸ್‌ಪಿ ಆಗಲೇ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿವೆಯಾದರೂ, ಈ ಮೈತ್ರಿಗೆ ಕಾಂಗ್ರೆಸ್ ಕೂಡ ಜೊತೆಯಾಗುವುದೇ ಎನ್ನುವ ಕುರಿತು ಊಹಾ ಪೋಹಗಳು ಶುರುವಾಗಿದ್ದವು. ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶವಾದಾಗಿನಿಂದ ಕಾಂಗ್ರೆಸ್‌ಗೆ ಆ ರಾಜ್ಯದಲ್ಲಿ ತುಸು ಶಕ್ತಿ ಬಂದಿರುವುದೇ ಇದಕ್ಕೆ ಕಾರಣ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿ ಕೊಳ್ಳಲು ಅಖೀಲೇಶ್ ಯಾದವ್‌ರ ಪಕ್ಷ ಸಿದ್ಧವಿದೆ ಯಾದರೂ (ಮುಕ್ತವಾಗಿದೆ) ಮಾಯಾವತಿಯವರಿಗೆ ಇದು ಇಷ್ಟವಿಲ್ಲ. ಈಗ ಹೋದಬಂದಲ್ಲೆಲ್ಲ ಅವರು ಕಾಂಗ್ರೆಸ್‌ನ ಮೇಲೆ ಹರಿಹಾಯುವ ಮೂಲಕ ಅಖೀಲೇಶ್ ಯಾದವ್‌ರಿಗೂ ಕಾಂಗ್ರೆಸ್‌ನಿಂದ ದೂರ ವಿರುವಂತೆ ಪರೋಕ್ಷವಾಗಿ ಎಚ್ಚರಿಕೆ ಕಳುಹಿಸುತ್ತಿದ್ದಾರೆ.
ಮಹಾಘಟಬಂಧನಕ್ಕೆ ಸ್ಪಷ್ಟ ರೂಪ ಕೊಡಬೇಕು ಎಂದು ಪ್ರತಿಪಕ್ಷಗಳೆಲ್ಲ ದೆಹಲಿಯಲ್ಲಿ ಒಂದುಗೂಡಿ ಚರ್ಚಿಸುತ್ತಿರುವ ಸಮಯದಲ್ಲೇ ಈ ಎಲ್ಲಾ ವಿದ್ಯಮಾನಗಳು ನಡೆಯುತ್ತಿವೆ. ಮಹಾಘಟಬಂಧನದ ಮುಂಚೂಣಿ ಮುಖವೆಂದು ಗುರುತಿಸಿ ಕೊಳ್ಳುತ್ತಿರುವ ಮಮತಾ ಬ್ಯಾನರ್ಜಿಯವರೂ, ಕಾಂಗ್ರೆಸ್ ನಾಯಕ ರೊಬ್ಬರು ತಮ್ಮ ಪಕ್ಷದ ವಿರುದ್ಧ ಮಾತನಾಡಿದ್ದಕ್ಕಾಗಿ ಮುನಿಸಿ ಕೊಂಡಿದ್ದಾರೆ. “ನಾವು ಇದನ್ನು ಮರೆಯುವುದಿಲ್ಲ’ ಎಂದೂ ಅವರು ಕಾಂಗ್ರೆಸ್‌ಗೆ ಎಚ್ಚರಿಸಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಗಮನಿಸಿದಾಗ, ಒಂದು ವಿಷಯವಂತೂ ಸ್ಪಷ್ಟವಾಗುತ್ತಿದೆ. ಮಹಾಘಟಬಂಧನದಲ್ಲಿ ಬಿರುಕು ಮೂಡಲು ಮೋದಿ ಮತ್ತು ಶಾ ತಂಡವೇನೂ ಪ್ರಯತ್ನಿಸ ಬೇಕಿಲ್ಲ. ಈ ಮೈತ್ರಿಕೂಟದಲ್ಲಿರುವ ವೈಯಕ್ತಿಕ ಹಿತಾಸಕ್ತಿಗಳ ಸಂಘರ್ಷ ಹೀಗೇ ಮುಂದುವರಿದರೆ, ಕೆಲವೇ ದಿನಗಳಲ್ಲಿ ಈ ಬಿರುಕು ಸ್ಪಷ್ಟವಾಗಿ ಗೋಚರಿಸಲಿದೆ…
(ಮೂಲ: ಪ್ರಭಾತ್ ಖಬರ್)
ಮಹೇಂದ್ರ ಸಾಹಿನಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.