ಜನಮರುಳು ಯೋಜನೆಗಳಿಗೆ ಕೊನೆ ಎಂದು?
Team Udayavani, Aug 25, 2017, 7:05 AM IST
ಸರಕಾರದ ಖಜಾನೆ ಸೇರಿದ ದ್ರವ್ಯ ಸರಕಾರದ ಏಕಮೇವ ಸ್ವಾಮ್ಯಕ್ಕೆ ಸೇರಿದ್ದು; ಅದರ ವಿನಿಯೋಗದ ಸರ್ವ ಅಧಿಕಾರವೂ ಸರಕಾರಕ್ಕೆ ದತ್ತವಾಗಿದೆ. ಆದರೆ ಆ ವಿನಿಯೋಗವನ್ನು ಸಂವಿಧಾನದ ಆಶಯಕ್ಕನುಗುಣವಾಗಿ ಮಾಡಬೇಕಾದುದು ಆಡಳಿತ ನಡೆಸುವವರ ಕರ್ತವ್ಯವಲ್ಲವೇ?
ಶತಮಾನಗಳಿಂದ ವಿಶ್ವಕಂಡ ಆಡಳಿತ ಪದ್ಧತಿಗಳಲ್ಲಿ ಈಗಿನ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆ ಅತ್ಯುತ್ತಮ ಎನ್ನುವುದು ಪ್ರಾಜ್ಞರ ಅಭಿಮತ. ಆದರೆ ಇದರಲ್ಲಿರುವ ಬಲವಾದ ದೋಷವೆಂದರೆ ಅಮಾಯಕರ ಆಕರ್ಷಣೆ. ಪ್ರಬಲ ವಾಕ್ಚಾತುರ್ಯದಿಂದ ಜನಸಮೂಹವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕ್ಷಣ ಮಾತ್ರದಲ್ಲಿ ಸಾಗಿಸಬಹುದಾಗಿದೆ. ಆಶ್ವಾಸನೆಗೆ ಇಂಬು ನೀಡುವಂತೆ ಜನಮರಳು ಯೋಜನೆಯನ್ನು ರೂಪಿಸುವುದು, ಒಂದು ತಂತ್ರ.
ತಾಳಿಭಾಗ್ಯ, ಶಾದಿಭಾಗ್ಯ, ಅನ್ನಭಾಗ್ಯ, ಆವಾಸ್ ಯೋಜನೆ ಈಗ ಕ್ಯಾಂಟೀನ್ ಭಾಗ್ಯ- ಈ ಎಲ್ಲ ಯೋಜನೆಗಳ ವೆಚ್ಚ ಸಾರ್ವಜನಿಕರ ಒಟ್ಟು ತೆರಿಗೆ ಹಣದಿಂದ ಭರಿಸಲಾಗುತ್ತದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ ಸರಿ. ಸರಕಾರದ ಖಜಾನೆ ಸೇರಿದ ದ್ರವ್ಯ ಸರಕಾರದ ಏಕಮೇವ ಸ್ವಾಮ್ಯಕ್ಕೆ ಸೇರಿದ್ದು; ಅದರ ವಿನಿಯೋಗದ ಸರ್ವ ಅಧಿಕಾರವೂ ಸರಕಾರಕ್ಕೆ ದತ್ತವಾಗಿದೆ. ಆದರೆ ಆ ವಿನಿಯೋಗವನ್ನು ಸಂವಿಧಾನದ ಆಶಯಕ್ಕನುಗುಣವಾಗಿ ಮಾಡಬೇಕಾದುದು ಆಡಳಿತ ನಡೆಸುವವರ ಕರ್ತವ್ಯವಲ್ಲವೇ?
ಭಾರತೀಯ ಸಂವಿಧಾನದ ಒಂದು ಬೃಹತ್ ಗ್ರಂಥ. ಆಡಳಿತಾತ್ಮಕ, ನ್ಯಾಯಾಂಗದ ಕಾರ್ಯವಿಧಾನ, ಲೋಕಸೇವಾ ಆಯೋಗ ಹಾಗೂ ಚುನಾವಣಾ ಕಮೀಷನ್ ಮುಂತಾದ ವಿಭಾಗಗಳು ಒಳಗೊಂಡಿರುವುದು ಸಂವಿಧಾನ ಇಷ್ಟು ವಿಸ್ತಾರವಾಗಲು ಕಾರಣ. ಅಲ್ಲದೆ ಆಡಳಿತದ ವಿಸ್ತ್ರತವಾದ ವಿಧಾನಗಳನ್ನೊಳಗೊಂಡ “”ಭಾರತ ಸರಕಾರದ ಕಾಯಿದೆ 1935”ರ ಬಹುಭಾಗ ಸಂವಿಧಾನವನ್ನು ಆವರಿಸಿಕೊಂಡಿದ್ದು, ಗಾತ್ರ ಹಿರಿದಾದರೂ ಮುಂದೆ ಅಶುಭ್ರ ವ್ಯಕ್ತಿಗಳು ಅನ್ಯಥಾ ತಿರುಚದಂತೆ ತಡೆಯಲು ಸಹಕಾರಿ ಎಂಬುದಾಗಿ ಸಂವಿಧಾನದ ಹರವನ್ನು ಡಾ| ಅಂಬೇಡ್ಕರ್‌ರವರೇ ಸಮರ್ಥಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಅಂಥ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿ ಮುಖ್ಯವಾದುದು ನಾಲ್ಕನೇ ಅಧ್ಯಾಯ. ಇದರಲ್ಲಿ ಆಡಳಿತಕ್ಕೆ ಸಂಬಂಧಿಸಿದ ನಿರ್ದೇಶಕ ತಣ್ತೀಗಳು ಅಡಕವಾಗಿವೆ.
ನಾಲ್ಕನೇ ಅಧ್ಯಾಯದಲ್ಲಿ ಬರುವ 36 ರಿಂದ 51ರವರೆಗಿನ ಪರಿಚ್ಛೇದಗಳಲ್ಲಿ ಅಡಕವಾದ ತಣ್ತೀಗಳ ಫಲವನ್ನು ನೇರ ನ್ಯಾಯಾಲಯದ ಮೂಲಕ ಪಡೆಯಲು ಸಾಧ್ಯವಿಲ್ಲ. ಆದರೆ ಅವುಗಳಲ್ಲಿ ಅಡಕವಾದ ತಣ್ತೀಗಳು ಮೂಲಭೂತ ಸ್ವರೂಪದವು ಗಳಾಗಿದ್ದು, ಸರಕಾರ ಕಾನೂನು ರೂಪಿಸಿ ಸಾರ್ವಜನಿಕರು ಅದರ ಫಲವನ್ನು ಅನುಭವಿಸುವಂತೆ ಚಾಲನೆ ಕೊಡಬಹುದಾಗಿದೆ ಅಥವಾ ಕೊಡಬೇಕೆಂಬ ಉದ್ದೇಶವಿದೆ ಎಂದರ್ಥವಾಗುತ್ತದೆ. ಹಾಗೆ ಚಾಲನೆ ನೀಡಲು ರೂಪಿಸುವ ಕಾನೂನು ಸಂವಿಧಾನದ ಮೂಲಾಶಯಕ್ಕೆ ವ್ಯತಿರಿಕ್ತವಾಗಕೂಡದು ಹಾಗೂ ಅದು ಕೇವಲ ಪ್ರಗತಿ ಪರವಾಗಿರತಕ್ಕದ್ದು ಎಂಬುದು ನಿರ್ವಿವಾದ. ಅಂಥ ಕ್ರಮಗಳು ಸಾರ್ವಕಾಲಿಕ ಸಾಮಾಜಿಕ ಧೋರಣೆಯನ್ನು ಪ್ರತಿಪಾದಿಸುವಂಥ ಸ್ವೀಕಾರಾರ್ಹ ಯೋಜನೆಗಳಾಗಿದ್ದು, ಮುಂದೆ ಆಡಳಿತಕ್ಕೆ ಬರುವ ಯಾವ ರಾಜಕೀಯ ಪಕ್ಷದ ನೇತೃತ್ವದ ಸರಕಾರವೂ ಅನುಸರಿಸುವಂತಿರಬೇಕು ಎಂಬ ಆಡಳಿತಾತ್ಮಕ ಸಂದೇಶವೂ ಈ ಅಧ್ಯಾಯದಲ್ಲಿ ಅಡಕವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವೂ ಅಭಿಪ್ರಾಯಪಟ್ಟಿದೆ.
ಇಲ್ಲಿ ನಾಲ್ಕನೇ ಅಧ್ಯಾಯದ ಅವಲೋಕನ ಪ್ರಸ್ತುತವೆನಿಸುತ್ತದೆ. ಈ ಅಧ್ಯಾಯದಲ್ಲಿ ಸರಕಾರಕ್ಕೆ ಅನೇಕ ಜವಾಬ್ದಾರಿಗಳನ್ನು ವಹಿಸಲಾಗಿದೆ. ಮುಖ್ಯವಾಗಿ ಸಾಮಾಜಿಕ ಭದ್ರತೆ ಒದಗಿಸುವುದು ಹಾಗೂ ಅಸಮಾನತೆಯನ್ನು ಕಡಿಮೆಗೊಳಿಸುವುದು. ಸ್ತ್ರೀ ಪುರುಷರ ಸಮಾನತೆಯ ಪ್ರತಿಪಾದನೆ, ಸಂಪನ್ಮೂಲಗಳನ್ನು ಹೊಂದಲು ಅವಕಾಶ ಹಾಗೂ ಆದಾಯ ಕ್ರೋಡೀಕರಣದ ಮೇಲಿನ ನಿಯಂತ್ರಣ, ಆರೋಗ್ಯ ರಕ್ಷಣೆ, ಆಹಾರ ನಿಯಂತ್ರಣ, ಕನಿಷ್ಟ ವೇತನ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಸಮಾನ ಕೆಲಸಕ್ಕೆ ಸಮಾನವೇತನ, ಉಚಿತ ಕಾನೂನು ನೆರವು, ಸ್ಥಳೀಯಾಡಳಿತದ ರಚನೆ, ಶಿಕ್ಷಣದ ಹಕ್ಕು, ಉದ್ಯೋಗ ಸೃಷ್ಟಿ, ಗುಡಿ ಕೈಗಾರಿಕೆಗೆ ಒತ್ತು, ಅಶಕ್ತರಿಗೆ ಬದುಕಲು ಅವಕಾಶ, ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಇತ್ಯಾದಿ ಜವಾಬ್ದಾರಿ ಸರಕಾರದ ಮೇಲಿದೆ. ಈ ಜವಾಬ್ದಾರಿ ನೀಗಿಸಲು ಸರಕಾರ ಸೂಕ್ತ ಕಾನೂನು ರೂಪಿಸಿ ಆ ಮೂಲಕ ಚಾಲನೆ ನೀಡಬಹುದು ಮತ್ತು ಈ ತನಕ ಎಲ್ಲ ಸರಕಾರಗಳು ಇದರ ಬಳಕೆ ಮಾಡಿಕೊಂಡೇ ಆಡಳಿತ ನಡೆಸುತ್ತಾ ಬಂದಿವೆ. ಆದರೆ ಖೇದದ ವಿಚಾರವೆಂದರೆ ಈ ಕಲಂಗಳ ಉದ್ದೇಶದ ಸೋಗಿನಲ್ಲಿ ಆಡಳಿತಕ್ಕೆ ಬರುವ ಸರಕಾರಗಳು ಓಟ್ ಬ್ಯಾಂಕ್ ರಾಜಕೀಯಕ್ಕೆ ಹೆಚ್ಚು ಒತ್ತು ನೀಡುತ್ತಿವೆ ಎಂಬುದಕ್ಕೆ ಈ ಭಾಗ್ಯ ಯೋಜನೆಗಳೇ ಸಾಕ್ಷಿ.
ನಿರ್ದೇಶಕ ತಣ್ತೀಗಳಲ್ಲಿ ಅಡಕವಾದ ಪ್ರಯೋಜನಗಳನ್ನು ಪ್ರಗತಿಪರ ಯೋಜನೆಗಳ ಮೂಲಕ ತಲುಪಿಸಬೇಕು ಹಾಗೂ ಅವುಗಳಲ್ಲಿ ವೈಜ್ಞಾನಿಕ ದೃಷ್ಟಿಕೋನವಿರಬೇಕೆಂಬುದು ಸಂವಿಧಾನದ ಆಶಯ. ಅರ್ಥಾತ್ ಆರ್ಥಿಕ ಸುಧಾರಣೆಯ ಆವಶ್ಯಕತೆ ಇದ್ದಾಗ ಜನರ ಕೈಗಳಿಗೆ ಕೆಲಸ ದೊರಕುವಂಥ ಸ್ಥಿತಿ ಅಥವಾ ಯೋಜನೆಗಳನ್ನು ರೂಪಿಸಿ ಹೆಚ್ಚು ಹೆಚ್ಚು ಜನ ದುಡಿಯುವಂತೆ ಮಾಡುವುದು, ಹಾಗೆ ಅವರ ದುಡಿತದಿಂದ ಪಡೆದ ಹಣದಲ್ಲಿ ತಮಗೆ ಬೇಕಾದ ಸೊತ್ತು ಹಾಗೂ ಸೇವೆಗಳನ್ನು ಅವರೇ ತೆರೆದ ಮಾರುಕಟ್ಟೆಯಿಂದ ಖರೀದಿಸುವಂತೆ ಆರ್ಥಿಕ ಸ್ಥಿತಿ ಉತ್ತಮಪಡಿಸುವುದು ಹೊರತು ನೇರ ಹಣ ಪಾವತಿ ಮಾಡುವುದಲ್ಲ. ಚಮಚದಲ್ಲಿ ಉಣಬಡಿಸುವ ಕೆಲಸ ಮಾಡುವುದು ಪ್ರಗತಿಪರ ಸರಕಾರದ ಧೋರಣೆಯಾಗಬಾರದು. ಅಲ್ಲದೆ ಸರಕಾರದ ಈಗಿನ ಅಭಿವೃದ್ಧಿ ಯೋಜನೆಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಶೂನ್ಯವೆಂಬುದಕ್ಕೆ ಒಂದು ಜ್ವಲಂತ ಉದಾಹರಣೆ ಅಂಗವಿಕಲರಿಗೆ ಅಧಿಕ ಮೇಧಾಶಕ್ತಿ ಅಪೇಕ್ಷಿಸುವ ತಾಂತ್ರಿಕ ಕ್ಷೇತ್ರಗಳಾದ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೋಟಾದಡಿ ಅವಕಾಶ ಕಲ್ಪಿಸುತ್ತಿರುವುದು.
ಅಂಗವಿಕಲನಿಗೆ ತನ್ನ ಸ್ವಂತ ಬಲದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲವೇ? ಆತನಿಗೆ ಇತರರು ಬದುಕುವಂತೆ ಬದುಕಲು ಅನುಕೂಲವಾಗುವಂಥ ಪ್ರಯೋಜನ ನೀಡಿದರೆ ಸಾಕಾಗುವುದಿಲ್ಲವೇ? ಇಂಥ ಅನೇಕ ಉದಾಹರಣೆ ನೀಡಬಹುದು. ಹಾಗಾಗಿ ಸರಕಾರಗಳ ಅನೇಕ ಯೋಜನೆಗಳು ಖಂಡಿತವಾಗಿಯೂ ನಿರ್ದೇಶಕ ತಣ್ತೀಗಳ ದುರುಪಯೋಗ ಎಂದರೆ ತಪ್ಪಾಗಲಾರದು. ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡದೆ, ಬಡತನ ರೇಖೆಗಿಂತ ಕೆಳಗಿನವರು ಎಂಬ ನೆಪದಲ್ಲಿ ಸರ್ವ ಸಾರ್ವಜನಿಕರ ಒಟ್ಟು ತೆರಿಗೆ ಹಣದಿಂದ ಸರಕಾರ ಅಕ್ಕಿ ಖರೀದಿಸಿ ವಿತರಣೆ ಮಾಡುವುದು ನಿರ್ದೇಶಕ ತಣ್ತೀಗಳ ದುರುಪಯೋಗ ಎಂದು ಹೇಳದೆ ವಿಧಿ ಇಲ್ಲ.
ಸರಕಾರಿ ಕ್ಯಾಂಟೀನ್ ಮೊತ್ತಮೊದಲು ಆರಂಭವಾದುದು ತಮಿಳುನಾಡಿನಲ್ಲಿ. ಆಗಿನ ಮುಖ್ಯಮಂತ್ರಿ ಜಯಲಲಿತಾರವರ ಕೊಡುಗೆ. ಅವರು ಎಳವೆಯಲ್ಲಿಯೇ ರಾಷ್ಟ್ರೀಯ ಮನೋ ಭಾವ ಬೆಳೆಸಿಕೊಂಡು ರಾಜಕಾರಣಕ್ಕೆ ಬಂದವರಲ್ಲ. ಅವಕಾಶ ಒದಗಿ ಬಂತು, ರಾಜಕೀಯ ಪ್ರವೇಶಿಸಿದರು. ಮುಖ್ಯಮಂತ್ರಿ ಯಾದರು. ಇತ್ತೀಚೆಗಿನ ದಶಕಗಳಲ್ಲಿ ರಾಜಕೀಯ ಪ್ರವೇಶ ಮಾಡಿದವರ ಹಿನ್ನೆಲೆಯನ್ನು ಅವಲೋಕಿಸುವಾಗ ಭ್ರಮ ನಿರಸನವಾಗುತ್ತದೆ. ಯಾವುದಾದರೂ ಕ್ಷೇತ್ರದಲ್ಲಿ ಹೆಸರು ಗಳಿಸಿ ಸಮಾಜದಲ್ಲಿ ಪ್ರಖ್ಯಾತರಾದವರು ಒಂದು ತಿರುವಿನಲ್ಲಿ ರಾಜಕಾರಣಿಗಳಾಗುತ್ತಾರೆ. ಅವರಿಗೆ ಈ ದೇಶದ ಉದ್ದಗಲಕ್ಕೂ ತಿರುಗಿ ಜನ ಜೀವನವನ್ನು ಅಧ್ಯಯನ ಮಾಡಿದ ಅನುಭವ ಇರುವುದಿಲ್ಲ. ಅಸಮತೋಲನತೆಯಲ್ಲಿರುವ ಸಮಾಜವನ್ನು ಸಮತೋಲನಕ್ಕೆ ಪರಿವರ್ತಿಸಲು ನಾವೇ ಸಂಕಲ್ಪಿಸಿ ಅರ್ಪಿಸಿ ಕೊಂಡ ಸಂವಿಧಾನ ಏನು ಹೇಳುತ್ತದೆ ಹಾಗೂ ಅದರ ಮೂಲಾ ಶಯವೇನೆಂಬುದರ ಅರಿವಿಲ್ಲ.
ಪ್ರಚಲಿತ ವಿದ್ಯಮಾನ ದಲ್ಲಿ ಅಧಿಕಾರಕ್ಕೆ ಬರಲು ಯಾವ ಕಸರತ್ತು ಮಾಡಬಹುದೆಂಬ ವಿಚಾರದಲ್ಲಿ ಪ್ರವೀಣರಿರುತ್ತಾರೆ ಅಷ್ಟೇ. ಈಗ ಅಧಿಕಾರಕ್ಕೆ ಬರಲು ಓಟ್ ಬೇಕು. ಅದಕ್ಕೆ ಮತದಾರರ ಓಲೈಕೆ ಮುಖ್ಯ. ಜನರ ನಾಡಿ ಬಡಿತವನ್ನು ಅರ್ಥೈಸಿಕೊಂಡು ಅಗ್ಗದ, ಆದರೆ ಮೇಲ್ನೋಟಕ್ಕೆ ಅತ್ಯಗತ್ಯವೆಂಬ ಹಾಗಿನ ಆಕರ್ಷಕ ಯೋಜನೆಗಳನ್ನು ರೂಪಿಸು ವುದು ಎಲ್ಲ ಪಕ್ಷಗಳ ಕಾಮನ್ ಅಜೆಂಡಾ.
ಇಂದಿರಮ್ಮನ ಹೆಸರಿನ ಸರಕಾರಿ ಕ್ಯಾಂಟೀನ್ ಯೋಜನೆ ತಪ್ಪೇ! ಸುತರಾಂ ಅಲ್ಲ. ಅನ್ನದಾನಕ್ಕಿಂತ ಮಿಗಿಲಾದ ದಾನ ಇಲ್ಲ ಎಂದು ನಮ್ಮ ಭಾರತೀಯ ಸಂಸ್ಕೃತಿ ಪ್ರತಿಪಾದಿಸುತ್ತದೆ. ಕಳೆದ ಎಪ್ಪತ್ತು ವರ್ಷಗಳಿಂದಲೂ ಕೊಂಡು ಉಣ್ಣುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ಅಂಕಿ ಅಂಶಗಳು ಸಾರುತ್ತಿವೆ. ಗರೀಬಿ ಹಠಾವೋ ಸಾಧ್ಯವಾಗಲೇ ಇಲ್ಲ. ನೇತಾರರು ಚೌಕ ಚೌಕಗಳಲ್ಲಿ ನಿಂತು ಭಾಷಣ ಮಾಡುವಾಗ ಅದನ್ನೇ ಬಲವಾದ ಚುನಾವಣಾ ಅಸ್ತ್ರವೆಂಬ ಹಾಗೆ ಪ್ರಯೋಗಿಸುತ್ತಾ, ನಮ್ಮ ಪಕ್ಷ ಗೆದ್ದು ಬಂದರೆ ಎಲ್ಲರಿಗೂ ಊಟ ಎಂಬ ಸ್ಲೋಗನ್ ಕೂಗಿ ಅಧಿಕಾರಕ್ಕೆ ಬಂದಿರುತ್ತಾರೆ. ಈ ಕಾಲದಲ್ಲಿ ಐದು ರೂಪಾಯಿಗೆ ಬೆಳಿಗ್ಗಿನ ಉಪಹಾರ ಹತ್ತು ರೂಪಾಯಿಗೆ ಮಧ್ಯಾಹ್ನದ ಭೋಜನದ (350 ಗ್ರಾಂ ಅನ್ನ ಸಾಂಬಾರು) ನೀಡುವ ಸರಕಾರಿ ವ್ಯವಸ್ಥೆ ಪ್ರಶಂಸನೀಯವಲ್ಲವೇ! ನಮ್ಮ ಮಾಧ್ಯಮದವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಡೇ ಪಕ್ಷ ಕ್ಯಾಂಟೀನ್ ಸುಸೂತ್ರವಾಗಿ ನಡೆದರೆ ಸಾಕು ಎಂಬ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಉದ್ಘಾಟನೆಗೆ ತಮ್ಮನ್ನು ಕರೆಯಲಿಲ್ಲವೆಂಬ ಬೇಸರ ಮಾತ್ರ. ಎಂಥ ಕಾಲ ಬಂತು ಭಾರತೀಯ ಪ್ರಜಾಸತ್ತೆಗೆ. ಪ್ರಗತಿ ಎಂದರೆ ಧರ್ಮದ ಊಟ ಅಲ್ಲ, ಅದು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿಯ, ಸ್ವಾವಲಂಬಿತ ಬೆಳವಣಿಗೆ ಎಂದು ಹೇಳುವವರಿಲ್ಲದೆ ಹೋಯಿತಲ್ಲ!
ಈಗ ಸಾರ್ವಜನಿಕರು, ಅಭಿವೃದ್ಧಿಯ ಹೆಸರಿನಲ್ಲಿ ಸರಕಾರ ರೂಪಿಸುವ ಯೋಜನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸ
ಬೇಕಾದ ಕಾಲ ಸನ್ನಿಹಿತವಾಗಿದೆ. ಮುಖ್ಯವಾಗಿ, ಭಾಗ್ಯ ಯೋಜನೆ ಗಳು ಹಾಗೂ ಸರಕಾರಿ ಕ್ಯಾಂಟೀನ್‌ಗಳ ಪರಾಮರ್ಶೆ ಆಗಲೇ ಬೇಕಾಗಿದೆ. ಮಾರುಕಟ್ಟೆ ಧಾರಣೆಯನ್ನು ಗಮನಿಸುವಾಗ ಇಷ್ಟು ಕಡಿಮೆ ಬೆಲೆಯಲ್ಲಿ ಉಪಹಾರ ಮತ್ತು ಊಟ ನೀಡಲು ಯಾವ ಸಂಸ್ಥೆಗೂ ಸಾಧ್ಯವಿಲ್ಲ. ಸರಕಾರ ಈ ಕೆಲಸ ಮಾಡುತ್ತವಾದರೆ ಅದನ್ನು ಯಾವ ಮೂಲದಿಂದ ಭರಿಸಲಾಗುತ್ತದೆ, ನೇರ ಖಜಾನೆಯಿಂದಲ್ಲವೇ? ಸಮಸ್ತ ಕರ್ನಾಟಕದ ತೆರಿಗೆದಾರರಿಂದ ಸಂಗ್ರಹಿಸಿದ ಹಣವನ್ನು ಬೆಂಗಳೂರಿನ ಜನರಿಗೆ ಅತಿ ಕಡಿಮೆ ಬೆಲೆಯಲ್ಲಿ ಊಟೋಪಚಾರ ಮಾಡಿ ವಿನಿಯೋಗಿಸಲು ಇವರಿಗೆಪರವಾನಿಗೆ ಕೊಟ್ಟವರ್ಯಾರು? ಬೆಂಗಳೂರು ಏನಾದರೂ ನೈಸರ್ಗಿಕ ಬಾಧೆಗೊಳಗಾಗಿದೆಯೇ? ಆ ಕಾರಣ ಅನು ಕಂಪದಿಂದಈ ವ್ಯವಸ್ಥೆ ಮಾಡಲಾಗಿದೆಯೇ? – ಎಂದು ಪ್ರಶ್ನಿಸ ಬೇಕಾದ ಸ್ಥಿತಿ
ಪ್ರಾಪ್ತವಾಗಿದೆ. ಸಂವಿಧಾನದ ನಿರ್ದೇಶಕ ತಣ್ತೀಗಳಲ್ಲಿ ಅಡಕವಾದ ಆಶಯಗಳಿಗೆ ಸಂಗತವಲ್ಲದ ಇಂಥ ಜನಮರುಳು ಯೋಜನೆಗಳನ್ನು ಸಾರ್ವಜನಿಕರು ಸಾರಾಸಗಟು ತಿರಸ್ಕರಿಸ ಬೇಕಾದ ಅಗತ್ಯವಿದೆ. ಅದುವೇ ಸಂವಿಧಾನಕ್ಕೆ ನಾವು ಸಲ್ಲಿಸುವ ಗೌರವ ಹಾಗೂ ರಾಜಕೀಯ ಪಕ್ಷಗಳಿಗೂ ಸ್ಪಷ್ಟ ಸಂದೇಶ.
– ಬೇಳೂರು ರಾಘವ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.