ರಾಂಟ್ಜನ್ ಕಂಡುಹಿಡಿದ ಎಕ್ಸ್-ರೇ
Team Udayavani, Feb 21, 2017, 11:20 AM IST
ವಿಜ್ಞಾನದ ಚರಿತ್ರೆಯಲ್ಲಿ ಕೆಲವೊಂದು ಮಹತ್ತರವಾದ ಸಂಶೋಧನೆಗಳು ಆಕಸ್ಮಿಕವಾಗಿ ಬೆಳಕಿಗೆ ಬಂದಿವೆ. ಅಂತಹ ಒಂದು ರೋಚಕ ಪ್ರಸಂಗ ವಿಲ್‌ಹೆಲ್ಮ್ ಕಾನ್ರಾಡ್ ರಾಂಟ್ಜನ್‌ನ ಎಕ್ಸರೇ ಶೋಧ. ಅದೊಂದು ವಿಜ್ಞಾನದ ಮಹಾಕ್ಷಣ ಅಂದರೆ ಅತಿಶಯೋಕ್ತಿ ಆಗಲಾರದು.
ಎಕ್ಸ್‌ರೇ ಆವಿಷ್ಕಾರ, ವೈದ್ಯಕೀಯ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಒಂದು ಹೊಸ ಅಧ್ಯಾಯವನ್ನೇ ಪ್ರಾರಂಭಿಸಿ ಅಧುನಿಕ ವಿಜ್ಞಾನದ ಬೆಳವಣಿಗೆಗೆ ನಾಂದಿಯಾಯಿತು. ಎಕ್ಸರೇ ಕಂಡುಹಿಡಿದದ್ದಕ್ಕಾಗಿ ರಾಂಟ್ಜನ್‌ಗೆ 1901ರಲ್ಲಿ ಭೌತವಿಜ್ಞಾನದ ಪ್ರಥಮ ನೋಬೆಲ್ ಪ್ರಶಸ್ತಿ ಪ್ರಾಪ್ತವಾದರೆ, ಕಳೆದ 120 ವರ್ಷಗಳಲ್ಲಿ ಎಕ್ಸ್‌ರೇ ತಂತ್ರಜ್ಞಾನವನ್ನಾಧರಿಸಿದ ಬರೋಬ್ಬರಿ 28 ಸಂಶೋಧನೆಗಳಿಗೆ ನೋಬೆಲ್ ಬಹುಮಾನ ನೀಡಲಾಗಿದೆ. ಅತೀ ಕಡಿಮೆ ಒತ್ತಡದಲ್ಲಿ ಅನಿಲಗಳು ವಿದ್ಯುತ್‌ವಾಹಕವಾಗಿ ವರ್ತಿಸಬಲ್ಲವು ಎಂದು ವಿಶದ ಪಡಿಸಿದವನು ಬ್ರಿಟಿಷ್ ವಿಜ್ಞಾನಿ ಸರ್ ವಿಲಿಯಮ ಕ್ರೂಕ್ಸ್. ಆತ ಫ್ಯಾಬ್ರಿಕೇಟ್ ಮಾಡಿದ ಗಾಜಿನ ಉಪಕರಣ ಕ್ರೂಕ್ಸ್ ಟ್ಯೂಬ್ ಹೆಚ್ಚಿನ ಪ್ರಸಿದ್ಧಿ ಪಡೆಯಿತು. ಕ್ಯಾಥೋಡಿನಿಂದ ಉಪಕ್ರಮಿಸುವ, ಸರಳ ರೇಖೆಯಲ್ಲಿ ವೇಗವಾಗಿ ಚಲಿಸುವ, ಋಣ ವಿದ್ಯುದಾವೇಶವನ್ನು ಹೊಂದಿರುವ ಕಣಗಳ ಪ್ರವಾಹವನ್ನು ಕ್ಯಾಥೋಡ್ ಕಿರಣಗಳೆಂದು ಕರೆಯಲಾಯಿತು. ಕ್ಯಾಥೋಡ್ ಕಿರಣಗಳ ಬಗ್ಗೆ ಹೊಸ ವಿಚಾರಗಳನ್ನು ತಿಳಿಯಲು ಜಗತ್ತಿನಾದ್ಯಂತ ತೀವ್ರಗತಿಯಲ್ಲಿ ಸಂಶೋಧನೆಗಳು ನಡೆದವು.
ಜಗತ್ತಿನ ಪ್ರಪ್ರಥಮ ಎಕ್ಸ್‌ರೇ
ಜರ್ಮನಿಯ ವುತ್ರ್ಸಬರ್ಗ್ ವಿಶ್ವವಿದ್ಯಾಲಯದಲ್ಲಿ ಬೌತವಿಜ್ಞಾನದಲ್ಲಿ ಪ್ರಾಧ್ಯಾಪಕನಾಗಿದ್ದ ರಾಂಟ್ಜನ್ ಕ್ಯಾಥೋಡ್ ಕಿರಣಗಳ ಕುರಿತಾದ ವಿವರವಾದ ಅಧ್ಯಯನದಲ್ಲಿ ತೊಡಗಿದ್ದ. 1895ರ ನ.5ರಂದು ಸಂಜೆ ತನ್ನ ಲ್ಯಾಬೊರೇಟರಿಯ ಕತ್ತಲು ಕೋಣೆಯಲ್ಲಿ ಕ್ರೂಕ್ಸ್ ಟ್ಯೂಬ್‌ನ ಕ್ಯಾಥೋಡ್ ಕಿರಣಗಳ ಬಗ್ಗೆ ಪ್ರಯೋಗ ನಡೆಸಿದ. ಕಪ್ಪು ಹೊದಿಕೆ ಅಳವಡಿಸಲ್ಪಟ್ಟ ಕ್ರೂಕ್ಸ್ ಟ್ಯೂಬ್‌ನ ಮೂಲಕ ವಿದ್ಯುತ್ ಹರಿಯಲಾರಂಭಿಸಿದಾಗ ಕೊಳವೆಯಿಂದ ಮಾತ್ರವಲ್ಲದೆ ಸುಮಾರು ಎರಡು ಮೀ. ದೂರದಲ್ಲಿ ಇನ್ಯಾವುದೋ ಉದ್ದೇಶಕ್ಕೆ ಅಕಸ್ಮತ್ತಾಗಿ ಇರಿಸಿದ್ದ ಬೇರಿಯಮ್ ಪ್ಲ್ಯಾಟಿನೋಸಯನೈಡ್ ಲೇಪಿತ ಪರದೆಯಿಂದ ಬೆಳಕಿನ ಮಿನುಗು ಬರುತ್ತಿತ್ತು. ವಿದ್ಯುತ್ ಹರಿಯುವುದನ್ನು ನಿಲ್ಲಿಸಿದಾಗ ಬೆಳಕು ಮಾಯವಾಗುತ್ತಿತ್ತು. ಕ್ಯಾಥೋಡ್ ಕಿರಣ ಕಪ್ಪು ಹೊದಿಕೆಯನ್ನು ದಾಟಿ ಹೊರಬರಲಾರದು. ಪರದೆ ಮಿನುಗಲು ಕಾರಣ ನಳಿಕೆಯ ಮೂಲಕ ಹಾದು ಬರುತ್ತಿರುವ ಯಾವುದೋ ಅಗೋಚರ ಕಿರಣಗಳು ಎಂದು ತೀರ್ಮಾನಿಸುವುದು ಅನಿವಾರ್ಯವಾಯಿತು. ಅಂದರೆ ಕ್ಯಾಥೋಡ್ ಕಣಗಳ ತಾಡನೆಗೆ ಗುರಿಯಾದ ಆನೋಡ್, ಈ ಅಗೋಚರ ಕಿರಣಗಳನ್ನು ಸೂಸುವುದಷ್ಟೇ ಅಲ್ಲದೆ, ಅವು ನಳಿಕೆಯ ಗಾಜನ್ನೂ ಅದರ ಕಪ್ಪು ಹೊದಿಕೆಯನ್ನೂ ತೂರಿಕೊಂಡು ಒಂದಷ್ಟು ದೂರ ಹೋಗಬಲ್ಲದು ಎಂದು ಸಿದ್ಧವಾಯಿತು.
ಮುಂದಿನ ಹಲವು ವಾರಗಳ ಕಾಲ ತನ್ನ ಲ್ಯಾಬೊರೇಟರಿಗೆ ಅಂಟಿಕೊಂಡೇ ಪ್ರಯೋಗದಲ್ಲಿ ತಲ್ಲೀನನಾದ. ರಾಂಟ್ಜನ್ ತನ್ನ ಪತ್ನಿ ಅನ್ನಾಬರ್ತಾಳಿಗೆ ಪ್ರಯೋಗದ ವಿಸ್ಮಯದ ಸಂಗತಿಯನ್ನು ತಿಳಿಸಿದ. ಆಕೆಯ ಹಸ್ತವನ್ನು ಅಡ್ಡವಾಗಿಟ್ಟು ಪ್ರಯೋಗ ನಡೆಸಿದಾಗ ಬೆರಳಿನ ಮೂಳೆಗಳು, ವೆಡ್ಡಿಂಗ್ ರಿಂಗ್ ಸಹಿತವಾಗಿ ಸ್ಪಷ್ಟವಾಗಿ ಪ್ರಕಟವಾಗಿದ್ದವು. ಆದರೆ ರಕ್ತಮಾಂಸದ ಛಾಯೆ ಕಾಣಿಸುತ್ತಿರಲಿಲ್ಲ. ಜಗತ್ತಿನ ಪ್ರಪ್ರಥಮ ಎಕ್ಸ್‌ರೇ ಚಿತ್ರ ಅದಾಗಿತ್ತು! ಆ ಅಗೋಚರ ಕಿರಣಗಳ ಗುಣ ವಿಶೇಷಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದ್ದರಿಂದ, ಜಗತ್ತಿನ ಪ್ರಪ್ರಥಮ ಎಕ್ಸ್‌ರೇ ಅವನ್ನು ಕ್ಷ-ಕಿರಣ (ಎಕ್ಸರೇ) ಗಳೆಂದು ಹೆಸರಿಸಿದನು. ಅಂದಿನ ದಿನಗಳಲ್ಲಿ ಇವುಗಳನ್ನು ರಾಂಟ್ಜನ್ ಕಿರಣಗಳೆಂದೇ ಕರೆಯುತ್ತಿದ್ದರು. ಈ ಅನಿರೀಕ್ಷಿತ ಶೋಧದಿಂದ ಅನೇಕ ಉಪಯೋಗಗಳಿವೆ ಎಂದು ರಾಂಟ್ಜನ್‌ಗೆ ಮನವರಿಕೆಯಾಯಿತು.
ಪತ್ನಿ ಅನ್ನಾ ಬರ್ತಾಳ ಹಸ್ತದ ಎಕ್ಸ್‌ರೇ
ರಾಂಟ್ಜನ್ ಪ್ರಯೋಗ ನಡೆಸಿದ ಬೆನ್ನಲ್ಲೇ ಫ್ರಾನ್ಸಿನ ಹೆನ್ರಿ ಬೆಕರಲ್ ಯುರೇನಿಯಮ್ ಧಾತುವಿನಿಂದ ಎಕ್ಸ್ ರೇಗಿಂತಲೂ ಭಿನ್ನವಾದ, ಹೆಚ್ಚುಶಕ್ತಿಯುತ, ನಿಗೂಢ, ಅಗೋಚರ ಕಿರಣಗಳು ಹೊರಹೊಮ್ಮುವುದೆಂದು ಪ್ರಕಟಗೊಳಿಸಿದ್ದು ವಿಜ್ಞಾನದ ವರ್ತುಲದಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು. ಈ ಕ್ರಿಯೆಗೆ ರೇಡಿಯೋ ಆಕ್ಟಿವಿಟಿ ಎಂದು ಹೆಸರಿಸಿದ್ದು ಮೇರಿ ಕ್ಯೂರಿ. ಕ್ಯಾಥೊಡ್ ಕಿರಣಗಳು ಎಲೆಕ್ಟ್ರಾನ್‌ಗಳ ಧಾರೆ ಎಂದು ಜೆ.ಜೆ. ಥಾಮ್ಸನ್ ಈ ಹಂತದಲ್ಲಿ ಗುರುತಿಸಿದ್ದು ಮತ್ತೂಂದು ಮಹತ್ವದ ಬೆಳವಣಿಗೆ. ಈ ರೀತಿ ವಿಜ್ಞಾನಿಗಳ ಜಿಜ್ಞಾಸೆಯಿಂದಾಗಿ ಎಕ್ಸ್‌ರೇಯ ಗುಣಸ್ವಭಾವ, ಮೆಕ್ಯಾನಿಸಮ್ ಇತ್ಯಾದಿಗಳ ಅಧ್ಯಯನ ಪರಸ್ಪರ ಪೂರಕವಾಗಿ ಅವ್ಯಾಹತವಾಗಿ ಮುಂದುವರೆಯಿತು.
ಕ್ರೂಕ್ಸ್ ಟ್ಯಾಬ್‌ನಲ್ಲಿ ಕ್ಯಾಥೋಡ್‌ನಿಂದ ಉಪಕ್ರಮಿಸುವ ಎಲೆಕ್ಟ್ರಾನ್‌ಗಳ ಧಾರೆ ವೇಗದಿಂದ ಚಲಿಸಿ ಆನೋಡ್ ತಾಡನೆಗೆ ಒಳಗಾದಾಗ ವೇಗಾಪಕರ್ಷಗೊಂಡು ಅವುಗಳ ಚಲನಶಕ್ತಿ ಭಾಗಶಃ ಉಷ್ಣರೂಪಕ್ಕೆ ಪರಿವರ್ತನೆಗೊಂಡು ಉಳಿದಂಶವು ಅದೃಶ್ಯ ಕಿರಣಗಳ ರೂಪದಲ್ಲಿ ಹೊರಬೀಳುತ್ತದೆ ಅಥವಾ ಆನೋಡ್ ಪರಮಾಣುವಿನ ಕಕ್ಷೆಯಲ್ಲಿರುವ ಇಲೆಕ್ಟ್ರಾನ್‌ನ ಉಚ್ಚಾಟನೆಯಿಂದಾಗುವ ಸ್ಥಿತ್ಯಂತರದ ಫಲವಾಗಿ ಶಕ್ತಿಯ ರೂಪದ ಅದೃಶ್ಯ ಕಿರಣಗಳು ಹೊರಸೂಸಲ್ಪಡುತ್ತವೆ. ಈ ಕಿರಣಗಳೇ ಎಕ್ಸ್‌ರೇ. ಎಕ್ಸ್‌ರೇ ವಿದ್ಯುತ್ಕಾಂತೀಯ ಅಲೆಗಳಾಗಿದ್ದು, ಸಾಮಾನ್ಯ ಬೆಳಕಿನ ಕಿರಣಗಳಿಗಿಂತ ಹತ್ತುಸಾವಿರ ಪಟ್ಟು ಕಡಿಮೆ ತರಂಗಾಂತರವನ್ನು ಹೊಂದಿರುವುದರಿಂದ ದೃಷ್ಟಿಗೆ ಗೋಚರಿಸದೆ, ವಸ್ತುಗಳನ್ನು ತೂರಿಕೊಂಡು ಹೋಗಬಲ್ಲವು. ಅವು ಮೃದು ವಸ್ತುಗಳನ್ನು ತೂರಿ ಮುಂದೆ ಸಾಗುತ್ತವೆ. ಆದ್ದರಿಂದ ಮಾಂಸ ಮೂಳೆಗಳಿಂದಾದ ಶರೀರದ ಒಳಭಾಗದ ಚಿತ್ರವನ್ನು ಈ ಕಿರಣಗಳ ಸಹಾಯದಿಂದ ಪಡೆಯಲು ಸಾಧ್ಯ. ದೇಹದ ವಿವಿಧ ಘಟಕಗಳ ಎಕ್ಸರೇ ಹೀರಿಕೆಯ ಪ್ರಮಾಣವನ್ನವಲಂಬಿಸಿ ಎಕ್ಸ್‌ರೇ ರೇಡಿಯೋಗ್ರಾಫಿಕ್ ಇಮೇಜ್ ಮೂಡಿ ಬರುತ್ತದೆ.
ದೇಹದ ಮೂಳೆಗಳಲ್ಲಿರುವ ಕ್ಯಾಲ್ಸಿಯಂನ ಹೀರಿಕೆಯ ಪ್ರಮಾಣ ಅತೀ ಹೆಚ್ಚು ಇರುವುದರಿಂದ ಮೂಳೆಯ ಛಾಯೆ ಬಿಳಿಯಾಗಿ ಕಂಡು ಬಂದರೆ, ಕೊಬ್ಬು ಮತ್ತು ಇತರ ಜೀವಕೋಶಗಳ ಹೀರಿಕೆ¿ ಪ್ರಮಾಣ ಕಡಿಮೆ ಇರುವುದರಿಂದಾಗಿ ಅವುಗಳ ಛಾಯೆ ಕಂದು ಬಣ್ಣದ್ದಾಗಿಯೂ ಗಾಳಿಯ ಹೀರಿಕೆಯ ಪ್ರಮಾಣ ಅತಿ ಕಡಿಮೆ ಇರುವುದರಿಂದಾಗಿ ಶ್ವಾಸಕೋಶಗಳ ಛಾಯೆ ಕಪ್ಪಾಗಿಯೂ ತೋರುತ್ತದೆ. ಎಕ್ಸರೇ ಕಂಡುಹಿಡಿದ ಸುದ್ದಿ ಟೆಲಿಗ್ರಾಫ್ ಮೂಲಕ ಜಗತ್ತಿನಾದ್ಯಂತ ಹಬ್ಬಿತು. ಆಕಸ್ಮಿಕವಾಗಿ ಕಂಡುಕೊಂಡ ನಿಗೂಢ ಕಿರಣಗಳಿಂದ ಅಗೋಚರವಾಗಿರುವುದನ್ನು ಛಾಯಾಚಿತ್ರಿಸುವ ವಿದ್ಯಮಾನ ಭಾರೀ ಸಂಚಲನವನ್ನುಂಟು ಮಾಡಿತ್ತು. ಪ್ರಾರಂಭದ ದಿನಗಳಲ್ಲಿ ಎಕ್ಸ್‌ರೇಯಿಂದ ದೇಹದ ಮೆಲಾಗುವ ಪರಿಣಾಮ- ದುಷ್ಪರಿಣಾಮಕ್ಕಿಂತ ಹೆಚ್ಚಾಗಿ ವ್ಯಕ್ತಿಗತ ಗೋಪ್ಯತೆಯ ಬಗೆಗಿನ ಕಾಳಜಿ ವ್ಯಕ್ತವಾದದ್ದೇ ಒಂದು ವಿಶೇಷ!
ಸಾಮಾನ್ಯನಂತಿದ್ದ ಅಸಾಮಾನ್ಯ ವಿಜ್ಞಾನಿ
ರಾಂಟ್ಜನ್ ಹುಟ್ಟಿದ್ದು 1845ರ ಮಾರ್ಚ್ 22ರಂದು, ಜರ್ಮನಿಯ ಲೆನೆಪ್ ಎಂಬಲ್ಲಿ. ಶಾಲಾ ವಿದ್ಯಾಭ್ಯಾಸ ಮಾಡಿದ್ದು ಹಾಲೇಂಡ್‌ನಲ್ಲಿ. ಮುಂದೆ ಝೂರಿಚ್‌ನ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಧ್ಯಯನ. ಝೂರಿಚ್ ವಿಶ್ವವಿದ್ಯಾಲಯದಲ್ಲಿ ತನ್ನ 24ನೇ ವಯಸ್ಸಿಗೆ ಅನಿಲಗಳ ಅಧ್ಯಯನದ ಮೇಲೆ ಡಾಕ್ಟರೇಟ್ ಗಳಿಕೆ. 1888ರಲ್ಲಿ ಜರ್ಮನಿಯ ವುತ್ರ್ಸಬರ್ಗ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಕ. ಮುಂದೆ ಮ್ಯೂನಿಚ್ ವಿವಿಯಲ್ಲಿ 1900ರಿಂದ ನಿವೃತ್ತಿಯ ತನಕ ಫಿಸಿಕ್ಸ್ ವಿಭಾಗದ ಮುಖ್ಯಸ್ಥನಾಗಿ ಕಾರ್ಯ ನಿರ್ವಹಣೆ. ರಾಂಟ್ಜನ್ ಮದುವೆ ಆದದ್ದು ಝೂರಿಚ್‌ನ ಅನ್ನಾ ಬರ್ತಾಳನ್ನು.
ರಾಂಟ್ಜನ್‌ನದ್ದು ಸರಳ, ಮೌನ ವ್ಯಕ್ತಿತ್ವ. ಗಳಿಸಿದ ಗೌರವ ಪ್ರಶಸ್ತಿಗಳುಹಲವಾರು. ಅವರೊಬ್ಬ ಜನಸಾಮಾನ್ಯನಂತೆ ಜೀವನ ನಡೆಸಿದ್ದು ಹಿರಿಮೆಗೆ ಸಾಕ್ಷಿಯಾಗಿದೆ. ತನ್ನ ನಾಮಾಂಕಿತದ ರಾಂಟ್ಜನ್ ಕಿರಣ, ರಾಂಟ್ಜನೋಗ್ರಫಿ, ರಾಂಟ್ಜನೈಸೇಶನ್ ಮುಂತಾದ ಪದ ಬಳಸುವುದಕ್ಕೆ ಆತನ ಸಹಮತ ಇರಲಿಲ್ಲ. ತನ್ನ ಸಂಶೋಧನೆಯ ಫಲ ಜನರ ಕಲ್ಯಾಣಕ್ಕೇ ಹೊರತು ಲಾಭಕ್ಕಾಗಿ ಅಲ್ಲ ಎಂದು ಅದನ್ನು ಪೇಟೆಂಟ್ ಮಾಡದೆ, ದೊರಕಿದ ನೋಬೆಲ್ ಪಾರಿತೋಷಕದ ಹಣವನ್ನು ಕೂಡ ವುತ್ಸìಬರ್ಗ ವಿಶ್ವವಿದ್ಯಾಲಯಕ್ಕೆ ನೀಡಿ ಉದಾರತೆಯನ್ನು ಮೆರೆದಿದ್ದ. ರಾಂಟ್ಜನ್ ಉದರದ ಕ್ಯಾನ್ಸರ್‌ನಿಂದ 1923ರಲ್ಲಿ ನಿಧನ ಹೊಂದಿದ.
ರಾಂಟ್ಜನ್ ಅನಂತರದ ವರ್ಷಗಳಲ್ಲಿ ಎಕ್ಸ್‌ರೇ ತಂತ್ರಜ್ಞಾನ ಅಗಾಧವಾಗಿ ಬೆಳೆಯಿತು. ಎಕ್ಸ್‌ರೇ ಆಧರಿತ, ಸಿಟಿ ಸ್ಕ್ಯಾನ್, ಮ್ಯಾಮಾಗ್ರಫಿ ಮುಂತಾದ ಮೆಡಿಕಲ್ ಇಮೇಜಿಂಗ್ ವಿಧಾನಗಳು ವೈದ್ಯಕೀಯ ಕ್ಷೇತ್ರಕ್ಕೆ ಒಂದು ವರ. ಎಕ್ಸ್‌ರೇ ಡಿಫ್ರಾಕ್‌ಷನ್‌ನಿಂದ ಸ್ಫಟಿಕಗಳ ರಚನೆಯನ್ನು ತಿಳಿಯಲು ಸಾಧ್ಯವಾಗಿದೆ. ಎಕ್ಸ್ ರೇ ಖಗೋಳವಿಜ್ಞಾನದಿಂದ ಆಕಾಶಕಾಯಗಳ ಆಧ್ಯಯನ ನಡೆಸಲಾಗಿದೆ. ಎಕ್ಸ್‌ರೇ ಫ್ಲ್ಯೂರೆಸೆನ್ಸ್ ಬಳಸಿ ವಸ್ತುವಿನ ರಚನಾಂಶವನ್ನು ಕಂಡುಕೊಳ್ಳಬಹುದು. ಎಕ್ಸ್‌ರೇ ಕ್ರಿಸ್ಟಲೋಗ್ರಫಿ, ಎಕ್ಸ್‌ರೇ ಮೈಕ್ರೋಸ್ಕೊಪಿ, ಎಕ್ಸ್‌ರೇ ಫೋಟೊ ಎಲೆಕ್ಟ್ರಾನ್ ಸ್ಪೆಕ್ಟ್ರೋಸ್ಕೊಪಿ, ಮುಂತಾದ ವಿಶ್ಲೇಷಕ ತಂತ್ರಜ್ಞಾನಗಳು ವಿಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಿವೆ.
ವಿಜ್ಞಾನ ನಿವಾರಕವೂ ಹೌದು, ಮಾರಕವೂ ಆದೀತು. ಎಕ್ಸ್‌ರೇ ಒಂದು ಅಯಾನೀಕಾರಕ ವಿಕಿರಣ. ಒಂದು ಮಿತಿಗಿಂತ ಹೆಚ್ಚಿನ ಎಕ್ಸ್‌ರೇ ವಿಕಿರಣದ ಡೋಸೇಜ್ ಪಡೆಯುವುದರಿಂದ ಅಥವಾ ಅದರ ದೀರ್ಘ ಸಂಪರ್ಕದಿಂದ ದೇಹದ ಮೇಲಾಗಬಹುದಾದ ಕ್ಯಾನ್ಸರ್‌ನಂತಹ ಅಡ್ಡಪರಿಣಾಮದ ಬಗ್ಗೆ ಅರಿವು ಅಗತ್ಯ. ವಿಲ್‌ಹೆಲ್ಮ್ ಕಾನ್ರಾಡ್ ರಾಂಟ್ಜನ್‌ನನ್ನು ಡಯಾಗ್ನಾಸ್ಟಿಕ್ ರೇಡಿಯೋಗ್ರಫಿಯ ಪಿತನೆಂದು ಪರಿಗಣಿಸಲಾಗಿದೆ. ರಾಂಟ್ಜನ್ ಗೌರವಾರ್ತ 111ನೆಯ ಎಲಿಮೆಂಟನ್ನು ರಾಂಟ್ಜನಿಯಮ ಎಂದೂ ಮತ್ತು ವಿಕಿರಣದ ಡೊಸೇಜ್ ಮಾಪನವನ್ನು ರಾಂಟ್ಜನ್ ಯುನಿಟ್ ಎಂದೂ ಹೆಸರಿಸಲಾಗಿದೆ.
– ಡಾ| ಬಿ.ಎಸ್. ಶೇರಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.