1983 World Cup ವಿಕ್ಟರಿ 40 ವರ್ಷ ತುಂಬಿದ ಹೊತ್ತು
Team Udayavani, Jun 25, 2023, 8:00 AM IST
ಭಾರತ ತಂಡ ವಿಶ್ವ ಕ್ರಿಕೆಟನ್ನು ಬೆರಗುಗೊಳಿಸಿ, ಕ್ರಿಕೆಟ್ ಅಭಿಮಾನಿಗಳನ್ನಷ್ಟೇ ಅಲ್ಲ,
ಎಲ್ಲ ದೇಶವಾಸಿಗಳನ್ನು ಅಚ್ಚರಿ ಹಾಗೂ ಅನಿರೀಕ್ಷಿತಕ್ಕೆ ಕೆಡವಿ, ಎಲ್ಲರಲ್ಲೂ ನವಚೈತನ್ಯ ಹಾಗೂ ಅದಮ್ಯ ಸ್ಫೂರ್ತಿಯನ್ನು ತುಂಬಿಸಿ ಇಂದಿಗೆ ಭರ್ತಿ 40 ವರ್ಷ! ಅದು “ಕಪಿಲ್ ಡೆವಿಲ್ಸ್’ ಪ್ರಪ್ರಥಮ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಪರ್ವಕಾಲ. ಪಿಕ್‌ನಿಕ್‌ಗೆಂದು ಹೋಗಿದ್ದ ತಂಡವೊಂದು ಕ್ರಿಕೆಟ್ ಜಗತ್ತನ್ನೇ ಗೆದ್ದು ಬೀಗಿದ ಅಸಾಮಾನ್ಯ ವಿದ್ಯಮಾನವದು!
1983ರ ಜೂನ್ 25ರ ಇಳಿಸಂಜೆಯಲ್ಲಿ ಕಪಿಲ್‌ದೇವ್ ಐತಿಹಾಸಿಕ ಲಾರ್ಡ್ಸ್ ಬಾಲ್ಕನಿಯಲ್ಲಿ ನಿಂತು ಪ್ರುಡೆನ್ಶಿಯಲ್ ಕಪ್ ಎತ್ತಿ ಹಿಡಿದ ದೃಶ್ಯಾವಳಿಯನ್ನು ಕ್ರಿಕೆಟ್ ಜಗತ್ತು ಎಂದೂ ಮರೆಯದು. ಅನಂತರ ಭಾರತ ತಂಡ ಎಷ್ಟೇ ಕಪ್‌ಗ್ಳನ್ನು ಗೆದ್ದಿರಬಹುದು, ಅದೆಷ್ಟೋ ಗೆಲುವುಗಳನ್ನು ಸಾಧಿಸಿರಬಹುದು, ನೂರಾರು ದಾಖಲೆಗಳನ್ನು ಬರೆದಿರಬಹುದು… ಇದಕ್ಕೆಲ್ಲ ಬುನಾದಿ 1983ರ ಏಕದಿನ ವಿಶ್ವಕಪ್ ವಿಜಯೋತ್ಸವ. ಅಂದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ, ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ಸಂದರ್ಶನವೊಂದರಲ್ಲಿ ಹೇಳಿದಂತೆ, ಮೊದಲ ಪ್ರೀತಿಯನ್ನು ಎಂದಾದರೂ ಮರೆಯಲಾದಿತೇ!
ಆಗ ಭಾರತೀಯ ಹಾಕಿ ಚಾರ್ಮ್ ಕಳೆದು ಹೋಗಿತ್ತು. ನಮ್ಮ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅಲ್ಲೊಂದು ಇಲ್ಲೊಂದು ಸಾಧನೆಗೈಯುತ್ತ ಸಾಗುತ್ತಿತ್ತು, ದಾಖಲೆಗಳ ವೀರ ಸುನೀಲ್ ಗಾವಸ್ಕರ್ ಅವರ ಯುಗ ಬಹುತೇಕ ಕೊನೆಗೊಂಡಿತ್ತು. ಇಂಥ ಹೊತ್ತಿನಲ್ಲೇ ಕಪಿಲ್ ಪಡೆ ಭಾರತೀಯ ಕ್ರಿಕೆಟನ್ನು ಬೇರೊಂದು ದಿಕ್ಕಿಗೆ ಮುನ್ನಡೆಸಿತು, ನೂತನ ಎತ್ತರಕ್ಕೆ ಕೊಂಡೊಯ್ದಿತು. ಒಟ್ಟಾರೆ ಹೇಳುವುದಾದರೆ ಕೇವಲ ಕ್ರೀಡೆಯಲ್ಲಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲೂ ಭಾರತದ ಅಭಿವೃದ್ಧಿಗೆ ಈ ಗೆಲುವು ಸ್ಫೂರ್ತಿಯಾಯಿತು. ಜಡಬಡಿದ ಮಂದಿಯನ್ನು ಬಡಿದೆಬ್ಬಿಸಿತು. ಅಂದಿನ ಜೋಶ್ ಇಂದಿಗೂ ಜೀವಂತವಾಗಿರುವುದು ಕ್ರೀಡೆಯ ಗೆಲುವಾಗಿದೆ.
ಇಲ್ಲಿ ಅಧಃಪತನದ ಸಂಕಟವೂ ಒಂದಿದೆ. ಆದರೆ ಅದು ಭಾರತದ್ದಲ್ಲ, ವೆಸ್ಟ್ ಇಂಡೀಸ್‌ನದ್ದು. 1983ರ ವಿಶ್ವಕಪ್‌ನಲ್ಲಿ ಭಾರತ ಕೊಟ್ಟ ಅವಳಿ ಏಟುಗಳಿಂದ ಕೆರಿಬಿಯನ್ ಕ್ರಿಕೆಟ್ ಇಂದಿಗೂ ಚೇತರಿಸಿಕೊಂಡಿಲ್ಲ. ದುರಂತವೆಂದರೆ, ಅದು ವಿಶ್ವಕಪ್ ಪಂದ್ಯಾವಳಿಗಾಗಿ ಅರ್ಹತಾ ಕೂಟದಲ್ಲಿ ಸೆಣಸುವ ಸ್ಥಿತಿಗೆ ತಲುಪಿದ್ದು!
ಭಾರತದ ಪಾಲಿಗೆ 1983ರ ವಿಶ್ವಕಪ್ ಗೆಲುವು ಎನ್ನುವುದು ಅನಿರೀಕ್ಷಿತ, ಅಚ್ಚರಿ ಹಾಗೂ ಅದ್ಭುತಗಳ ಸಮ್ಮಿಲನ. ಈ ಗೆಲುವನ್ನು ಹೊರತುಪಡಿಸಿ ಭಾರತದ್ದೇಕೆ, ವಿಶ್ವದ ಕ್ರಿಕೆಟ್ ಇತಿಹಾಸವೂ ಪರಿಪೂರ್ಣಗೊಳ್ಳದು. ಈ ಗೆಲುವು ಮೂಡಿಸಿದ ಛಾಪು ಅಂಥದ್ದು. ಕ್ರಿಕೆಟ್ ಜಗತ್ತು ಅತ್ಯಂತ ಸ್ವತ್ಛವಾಗಿದ್ದ ಕಾಲಘಟ್ಟದಲ್ಲಿ ದಾಖಲಾದ ಈ ಗೆಲುವಿಗೆ ಬೆಲೆ ಕಟ್ಟಲಾಗದು.
ಭಾರತೀಯ ಕ್ರಿಕೆಟನ್ನು ಯಾರೂ ಊಹಿಸದ ಎತ್ತರಕ್ಕೆ ಕೊಂಡೊಯ್ದ ಕಪಿಲ್‌ದೇವ್ ಪಡೆಗೆ ಈ 40ರ ಸವಿನೆನಪಿನಲ್ಲೊಂದು ನಲ್ಮೆಯ ನಮಸ್ಕಾರಗಳು!
9 ಪಂದ್ಯಗಳಲ್ಲೇ ಒಲಿದ ವಿಶ್ವಕಪ್!
1983ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಜೂ. 9ರಂದು ಆರಂಭಗೊಂಡ ವಿಶ್ವಕಪ್ ಜೂ. 25ಕ್ಕೆ ಮುಗಿದು ಹೋಗಿತ್ತು. ತಂಡಗಳ ಸಂಖ್ಯೆ ಕೇವಲ 8. ಇದನ್ನೂ 2 ಗುಂಪುಗಳಾಗಿ ವಿಭಜಿಸಲಾಗಿತ್ತು. ಭಾರತದ ಗುಂಪಿನಲ್ಲಿ ಹಿಂದಿನೆರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್, ನೆಚ್ಚಿನ ಆಸ್ಟ್ರೇಲಿಯ ಹಾಗೂ ಮೊದಲ ಸಲ ವಿಶ್ವಕಪ್ ಆಡಲಿಳಿದ ಜಿಂಬಾಬ್ವೆ ತಂಡಗಳಿದ್ದವು. ಲೀಗ್ ಹಂತದಲ್ಲಿ ಎರಡು ಸುತ್ತಿನ ಸ್ಪರ್ಧೆ. ಬಳಿಕ ಸೆಮಿಫೈನಲ್, ಫೈನಲ್. ಭಾರತ ವಿಶ್ವಕಪ್ ಗೆಲುವಿನ ಹಾದಿಯಲ್ಲಿ ಆಡಿದ್ದು 9 ಪಂದ್ಯ ಮಾತ್ರ. ಲೀಗ್ ಹಂತದಲ್ಲಿ ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್‌ಗೆ ಸೋತಿತ್ತು. ಫೈನಲ್ ಸೇರಿದಂತೆ ವಿಂಡೀಸ್ ವಿರುದ್ಧ ಒಟ್ಟು 3 ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತು.
ನಿಜವಾಯ್ತು ಕಿಮ್ ಹ್ಯೂಸ್ ಹೇಳಿಕೆ
ಕೇವಲ ಪಿಕ್‌ನಿಕ್‌ಗಾಗಿ ಬಂದ, ಎಲ್ಲರ ದೃಷ್ಟಿಯಲ್ಲೂ ಹತ್ತರೊಟ್ಟಿಗೆ ಹನ್ನೊಂದರಂತಿದ್ದ ಭಾರತ ತಂಡ ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಿದರೆ ಅದಕ್ಕಿಂತ ಜೋಕ್ ಇನ್ನೊಂದಿರಲಿಲ್ಲ. ಆದರೆ ಸಾಲು ಸಾಲು ಆಲ್‌ರೌಂಡರ್‌ಗಳನ್ನು ಒಳಗೊಂಡ, ಇಂಗ್ಲೆಂಡ್ ಟ್ರ್ಯಾಕ್‌ಗಳಿಗೆ ಹೇಳಿಮಾಡಿಸಿದಂತಿದ್ದ ಸೀಮರ್‌ಗಳ ಪಡೆಯನ್ನು ಕಟ್ಟಿಕೊಂಡು ಬಂದಿದ್ದ ಭಾರತ ತಂಡ ಅತ್ಯಂತ ಅಪಾಯಕಾರಿ ಎಂದು ಗುರುತಿಸಿದ್ದು ಒಬ್ಬರು ಮಾತ್ರ, ಅದು ಆಸ್ಟ್ರೇಲಿಯದ ನಾಯಕ ಕಿಮ್ ಹ್ಯೂಸ್! ಕಪಿಲ್‌ದೇವ್ ಪಡೆಯನ್ನು ಯಾವ ಕಾರಣಕ್ಕೂ ಕಡೆಗಣಿಸಬೇಡಿ ಎಂದು ಪಂದ್ಯಾವಳಿಗೂ ಮೊದಲು ನಡೆದ ಸಂದರ್ಶನದಲ್ಲಿ ಕಿಮ್ ಹ್ಯೂಸ್ ಸ್ಪಷ್ಟವಾಗಿ ಹೇಳಿದ್ದರು. ಬಹುಶಃ ಇದನ್ನು ಕೇಳಿ ಭಾರತದ ಕ್ರಿಕೆಟಿಗರೇ ನಕ್ಕಿರಬಹುದು! ಆದರೆ ಇತಿಹಾಸವೊಂದು ನಿರ್ಮಾಣವಾಗಿಯೇ ಬಿಟ್ಟಿತು, ಹ್ಯೂಸ್ ಹೇಳಿಕೆ ನಿಜವಾಯಿತು!
ಸೆಮಿಫೈನಲ್‌ಗೆ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಕಪಿಲ್ ಪಡೆ ಆಸ್ಟ್ರೇಲಿಯವನ್ನೇ ಸೋಲಿಸಿದ್ದನ್ನು ಮರೆಯುವಂತಿಲ್ಲ. ಪುಣ್ಯಕ್ಕೆ ಅಂದು ಕಿಮ್ ಹ್ಯೂಸ್ ಆಡುವ ಬಳಗದಲ್ಲಿ ಇರಲಿಲ್ಲ. ಡೇವಿಡ್ ಹುಕ್ಸ್ ಕಾಂಗರೂ ಪಡೆಯನ್ನು ಮುನ್ನಡೆಸಿದ್ದರು.
ರೇಡಿಯೋದಲ್ಲಿ ಕೇಳಿದ್ದಲ್ಲ, ನೋಡಿದ್ದು!
ಇಂದು ನಾವು ಟೆಲಿವಿಷನ್ ನೇರಪ್ರಸಾರದಲ್ಲಿ ಕ್ರಿಕೆಟಿನ ಪ್ರತಿಯೊಂದು ಕ್ಷಣವನ್ನೂ ಕಣ್ತುಂಬಿಸಿಕೊಳ್ಳುತ್ತೇವೆ. ಆದರೆ ಭಾರತದ 1983ರ ವಿಶ್ವಕಪ್ ವೈಭವವನ್ನು ಕ್ರಿಕೆಟ್ ಪ್ರೇಮಿಗಳ ಮುಂದೆ ತೆರೆದಿರಿಸಿದ್ದು ರೇಡಿಯೋ. ಇಲ್ಲಿ ಮೂಡಿಬರುತ್ತಿದ್ದ ವೀಕ್ಷಕ ವಿವರಣೆಯನ್ನು ಕೇಳಿಯೇ ಪಂದ್ಯದ ಸವಿಯನ್ನು, ರೋಮಾಂಚನವನ್ನು ಕಣ್ಮುಂದೆ ಕಲ್ಪಿಸಿಕೊಳ್ಳುತ್ತಿದ್ದ ಕ್ಷಣಗಳಿದ್ದುವಲ್ಲ, ಅದು ಇಂದಿನ ನೇರ ಪ್ರಸಾರದ ದೃಶ್ಯಾವಳಿಯನ್ನೂ ಮೀರಿಸಿ ದ್ದಾಗಿತ್ತು. ಅಂದಿನ ಜಮಾನದ ಕ್ರಿಕೆಟ್ ಪ್ರೇಮಿಗಳು ವಿಶ್ವಕಪ್ ಪಂದ್ಯಾವಳಿಯನ್ನು ರೇಡಿಯೋದಲ್ಲಿ ಆಲಿಸಿ ದ್ದಲ್ಲ, ನೋಡಿದ್ದು ಎಂದು ಬಣ್ಣಿಸುವುದೇ ಸೂಕ್ತ!
ಆದರೂ ಅಂದು ಒಂದು ಹಂತದಲ್ಲಿ ಎಲ್ಲರ ಮನೆಯ ರೇಡಿಯೋಗಳೂ ಆಫ್ ಆಗಿದ್ದವು. ಅದು ಜೂನ್ 18, ಶನಿವಾರ. ಟನ್‌ಬ್ರಿಜ್ ವೆಲ್ಸ್‌ನ “ನೆವಿಲ್ ಗ್ರೌಂಡ್’ನಲ್ಲಿ ನಡೆದ ಭಾರತ- ಜಿಂಬಾಬ್ವೆ ನಡುವಿನ ದ್ವಿತೀಯ ಸುತ್ತಿನ ಪಂದ್ಯ ವದು. ಭಾರತ 17 ರನ್ನಿಗೆ 5 ವಿಕೆಟ್ ಉರುಳಿಸಿ ಕೊಂಡು ಚಿಂತಾಜನಕ ಸ್ಥಿತಿಯಲ್ಲಿತ್ತು. ಜಿಂಬಾಬ್ವೆಯಂಥ ಸಾಮಾನ್ಯ ತಂಡದ ವಿರುದ್ಧ ಇಂಥದೊಂದು ಹೀನಾಯ ಸ್ಥಿತಿ ಯನ್ನೂ ಕಲ್ಪಿಸಿಕೊಳ್ಳಲಿಕ್ಕೂ ಸಿದ್ಧರಿಲ್ಲದ ಅಭಿಮಾನಿಗಳು ಸಹಜ ವಾಗಿಯೇ ರೇಡಿಯೋ ಆಫ್ ಮಾಡಿದ್ದರು.
ಆದರೆ ರಾತ್ರಿಯ ಇಂಗ್ಲಿಷ್ ವಾರ್ತೆಯಲ್ಲಿ ಭಾರತದ ಸ್ಕೋರ್ ಕೇಳುವಾಗ ಅಚ್ಚರಿ, ಆಘಾತ! ಕಪಿಲ್‌ದೇವ್ ಏಕಾಂಗಿಯಾಗಿ ಹೋರಾಡಿ ಅಜೇಯ 175 ರನ್ ಬಾರಿಸಿದ್ದರು. ಭಾರತ 8ಕ್ಕೆ 266 ರನ್ ರಾಶಿ ಹಾಕಿತ್ತು!
ಕಾಡುತ್ತಿದೆ ಯಶ್ಪಾಲ್ ಅಗಲಿಕೆ
ಭಾರತದ ವಿಶ್ವಕಪ್ ಗೆಲುವಿನ 40 ವರ್ಷಗಳ ಸಡಗರದ ವೇಳೆಯೂ ಅತಿಯಾಗಿ ಕಾಡುವ ನೋವು ಒಂದಿದೆ. ಅದು ಅಂದಿನ ಬ್ಯಾಟಿಂಗ್ ಹೀರೋ ಯಶ್ಪಾಲ್ ಶರ್ಮ ಅವರ ಅಗಲಿಕೆ. ಹಾಗೆಯೇ ವೆಸ್ಟ್ ಇಂಡೀಸ್ ತಂಡದ ಘಾತಕ ವೇಗಿ ಮಾಲ್ಕಂ ಮಾರ್ಷಲ್ ಕೂಡ ಈಗಿಲ್ಲ. ಭಾರತದ ವಿಶ್ವಕಪ್ ಜೈತ್ರಯಾತ್ರೆಯ ಮೊದಲ ಹೀರೋ ಆಗಿದ್ದವರೇ ಯಶ್ಪಾಲ್ ಶರ್ಮ. ಅಂದು ಭಾರತದ ಮೊದಲ ಎದುರಾಳಿಯೇ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್. ಹೇಳಿ ಕೇಳಿ ಅದು ದೈತ್ಯರನ್ನು ಒಳಗೊಂಡ ತಂಡ. ವಿಶ್ವಕಪ್‌ನಲ್ಲಿ ಒಮ್ಮೆಯೂ ಸೋಲಿನ ಮುಖ ಕಂಡದ್ದಿಲ್ಲ. ಭಾರತದ್ದು ಇದಕ್ಕೆ ತದ್ವಿರುದ್ಧ ಸ್ಥಿತಿ. 6 ವಿಶ್ವಕಪ್ ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದು 1983ರ ಕೂಟಕ್ಕೆ ಆಗಮಿಸಿತ್ತು. ಆ ಗೆಲುವು ಬಂದದ್ದು ಈಸ್ಟ್ ಆಫ್ರಿಕಾ ಎಂಬ ಲೆಕ್ಕದ ಭರ್ತಿಯ ತಂಡದ ವಿರುದ್ಧ.
ಇಂಥ ಸ್ಥಿತಿಯಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್‌ಗೆ ಮೊದಲ ಸೋಲಿನೇಟು ನೀಡಲಿದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ಇದನ್ನು ಸಾಧ್ಯವಾಗಿಸಿದ್ದು ಯಶ್ಪಾಲ್ ಶರ್ಮ. ಇವರ 89 ರನ್ ಸಾಹಸದಿಂದ ಭಾರತ 8ಕ್ಕೆ 262 ರನ್ ಪೇರಿಸಿತು. ವಿಂಡೀಸ್ 54.1 ಓವರ್‌ಗಳಲ್ಲಿ 228ಕ್ಕೆ ಕುಸಿಯಿತು.
ಯಶ್ಪಾಲ್ ಶರ್ಮ ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾಗಿದ್ದರು. ಅಂದು ಯಶ್ಪಾಲ್ ಅವರಿಂದ ಇಂಥದೊಂದು ಪಂದ್ಯಶ್ರೇಷ್ಠ ಪ್ರದರ್ಶನ ಮೂಡಿಬರದೇ ಇದ್ದಲ್ಲಿ ಭಾರತದಿಂದ ಇತಿಹಾಸ ನಿರ್ಮಾಣವಾಗುತ್ತಿತ್ತೇ? ಪ್ರಶ್ನೆ ಕಾಡದೇ ಇರದು. ದೈತ್ಯ ಹಾಗೂ ಅಜೇಯ ವೆಸ್ಟ್ ಇಂಡೀಸನ್ನೂ ಸೋಲಿಸಬಲ್ಲೆವು ಎಂಬ ಸ್ಫೂರ್ತಿಯೇ ಭಾರತದ ಯಶಸ್ಸಿನ ದಾರಿದೀಪವಾಗಿ ಪರಿಣಮಿಸಿತು. ಈ ಯಶಸ್ಸಿನ ರೂವಾರಿ ಯಶ್ಪಾಲ್ ಶರ್ಮ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸದೆ ಇರಲಾಗದು.
ಮೊದಲು
ಕಪಿಲ್ ಹಸ್ತಾಕ್ಷರ ಪಡೆ!
ಭಾರತ ಆಗಷ್ಟೇ ವಿಶ್ವಕಪ್ ಗೆದ್ದಿತ್ತು. ನಾಯಕ ಕಪಿಲ್‌ದೇವ್ ಅವರನ್ನು ಅಭಿನಂದಿಸಿದ ಮೊದಲಿಗರಲ್ಲಿ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಗ್ಯಾರಿ ಸೋಬರ್ ಕೂಡ ಒಬ್ಬರು. ಸೋಬರ್ ಲಾರ್ಡ್ಸ್ ಗ್ಯಾಲರಿಯಲ್ಲಿ ಕಪಿಲ್‌ದೇವ್ ಅವರ ಬೆನ್ನು ತಟ್ಟುತ್ತ ಶುಭ ಹಾರೈಸುತ್ತಿದ್ದಾಗ ಕ್ರಿಕೆಟ್ ಅಭಿಮಾನಿಯೋರ್ವನ ಆಗಮನ ವಾಯಿತು. ಆತನಿಗೆ ಸೋಬರ್ ಹಸ್ತಾಕ್ಷರ ಬೇಕಿತ್ತು. ಆಗ ಸೋಬರ್ ಹೇಳಿದರು, “ನೋಡು. ಇಂದು ಭಾರತೀಯ ಕ್ರಿಕೆಟಿಗರ ದಿನ. ಅವರು ನೂತನ ವಿಶ್ವ ಚಾಂಪಿಯನ್ ಆಗಿದ್ದಾರೆ. ತಂಡದ ನಾಯಕ ಕಪಿಲ್‌ದೇವ್ ಇಲ್ಲಿಯೇ ಇದ್ದಾರೆ. ನೀನು ಹಸ್ತಾಕ್ಷರ ಪಡೆಯಬೇಕಾದದ್ದು ಅವರದ್ದು, ನನ್ನದಲ್ಲ…’ ಎಂದು ಹೇಳಿದವರೇ ಅಲ್ಲಿಂದ ಹೊರನಡೆದರು.
ಬರೆದ ಪುಟಗಳನ್ನೇ ಹರಿದು ನುಂಗಿದ ವಿಸ್ಡನ್‌ಸಂಪಾದಕ!
ಭಾರತದಂಥ “ಪೊಟ್ಟು ತಂಡ’ವನ್ನು ವಿಶ್ವಕಪ್‌ನಲ್ಲಿ ಯಾಕೆ ಆಡಿಸುತ್ತೀರಿ? ವಿಶ್ವಕಪ್ ಗೆಲ್ಲುವುದಿರಲಿ, ಒಂದಾದರೂ ಪಂದ್ಯವನ್ನು ಗೆಲ್ಲುವ ಯೋಗ್ಯತೆ ಈ ಭಾರತ ತಂಡಕ್ಕೆ ಇದೆಯೇ ಎಂದು ವ್ಯಂಗ್ಯವಾಗಿ ಬರೆದ ಲೇಖನವೊಂದು ಅಂದಿನ “ವಿಸ್ಡನ್’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರ ಲೇಖಕ, ಸಂಪಾದಕ ಡೇವಿಡ್ ಫ್ರಿತ್. “ಒಂದು ವೇಳೆ ಭಾರತ ವಿಶ್ವಕಪ್ ಜಯಿಸಿದ್ದೇ ಆದಲ್ಲಿ ನಾನು ಬರೆದ ಪುಟಗಳನ್ನು ಹರಿದು ತಿನ್ನುತ್ತೇನೆ’ ಎಂಬ ಸಾಲನ್ನೂ ಸೇರಿಸಿದ್ದರು. ಭಾರತ ವಿಶ್ವಕಪ್ ಎತ್ತಿಯೇ ಬಿಟ್ಟಿತು. ಡೇವಿಡ್ ಫ್ರಿತ್‌ಗೆ ತಾನು ಬರೆದದ್ದು ಬಹುಶಃ ಮರೆತಿರಬೇಕು. ಆಗ ನ್ಯೂಜೆರ್ಸಿಯಲ್ಲಿದ್ದ ಮಾನ್ ಸಿಂಗ್ ಎಂಬ ಓದುಗರೊಬ್ಬರು ಪತ್ರ ಬರೆದು ನೆನಪಿಸಿದರು. ಡೇವಿಡ್ ಫ್ರಿತ್ ವಿಳಂಬಿಸಲಿಲ್ಲ. ವಿಸ್ಡನ್ ಪುಟಗಳನ್ನು ಹರಿದು ತಿಂದೇ ಬಿಟ್ಟರು. ಮುಂದಿನ ವಿಸ್ಡನ್ ಸಂಚಿಕೆಯಲ್ಲಿ ಇದರ ಚಿತ್ರ ಹಾಗೂ ಮಾನ್ ಸಿಂಗ್ ಬರೆದ ಪತ್ರದ ಚಿತ್ರ ಒಟ್ಟೊಟ್ಟಿಗೆ ಪ್ರಕಟಗೊಂಡಿತ್ತು!
- ಎಚ್. ಪ್ರೇಮಾನಂದ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.