ತುಳು ಚಿತ್ರರಂಗ @50: ‘ಎನ್ನ ತಂಗಡಿ’ ಯಿಂದ ‘ಗಮ್ಜಾಲ್’ ವರೆಗೆ ಚಿತ್ರರಂಗ ನಡೆದು ಬಂದ ಪಯಣ
Team Udayavani, Feb 19, 2021, 9:48 AM IST
1971ರ ಫೆ.19ರಂದು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ತುಳು ಭಾಷೆಯ ಮೊತ್ತ ಮೊದಲ ಚಿತ್ರ ಬಿಡುಗಡೆಯಾಗಿತ್ತು. ಅಲ್ಲಿಯವರೆಗೆ ತುಳು ನಾಟಕಗಳು, ಯಕ್ಷಗಾನಗಳನ್ನು ನೋಡಿದ್ದ, ಚಿತ್ರಮಂದಿರದಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಗಳ ಸಿನಿಮಾಗಳನ್ನು ನೋಡಿದ್ದ ಕಡಲ ತಡಿಯ ಜನತೆ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ತುಳು ಚಿತ್ರವನ್ನು ನೋಡಿ ಪುಳಕಗೊಂಡಿದ್ದರು. ತುಳು ಭಾಷೆಯ ಮೊದಲ ಚಿತ್ರ ‘ಎನ್ನ ತಂಗಡಿ’ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ ಐವತ್ತು ವರ್ಷ. ಈ ಅರ್ಧಶತಕದ ಸಮಯದಲ್ಲಿ ನೂರಕ್ಕೂ ಹೆಚ್ಚು ತುಳು ಚಿತ್ರಗಳು ತೆರೆಕಂಡಿದೆ. ರಂಗ ಹಲವಾರು ಬದಲಾವಣೆಗಳನ್ನು ಕಂಡಿದೆ. ಹೊಸತನಕ್ಕೆ ಒಗ್ಗಿಕೊಂಡಿದೆ. ಸ್ಥಳೀಯ ಸೊಗಡಿನೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ.
ತುಳು ಚಿತ್ರರಂಗದ ‘ಸುವರ್ಣ ಸಂಭ್ರಮ’ ಈ ಸಂದರ್ಭದಲ್ಲಿ ಹಿರಿಯ ಕಲಾವಿದ, ಕಲಾಪೋಷಕ ವಿ.ಜಿ.ಪಾಲ್ ಅವರು ‘ಉದಯವಾಣಿ ಡಾಟ್ ಕಾಮ್’ ಜೊತೆ ಚಿತ್ರರಂಗ ನಡೆದು ಬಂದ ಪಯಣದ ಕುರಿತು ಮಾತನಾಡಿದ್ದಾರೆ.
ಸುಜಾತ ಹೋಟೆಲ್ ಮತ್ತು ಎನ್ನ ತಂಗಡಿ
ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳಿಗೆ ಕೆಲಸ ಮಾಡಿದ್ದ ಎಸ್.ಆರ್. ರಾಜನ್ ಅವರು ಅದೊಂದು ದಿನ ಮಂಗಳೂರಿಗೆ ಬಂದಿದ್ದರು. ಕೊಡಿಯಾಲ್ ಬೈಲ್ ನಲ್ಲಿನ ಸುಜಾತಾ ಹೋಟೆಲ್ ನ ಮ್ಯಾನೇಜರ್ ಜಯೇಂದ್ರ ಅಂಚನ್ ಪರಿಚಯವಾಗಿತ್ತು. ಅವರ ಮುಖಾಂತರ ಕುದ್ರೋಳಿ ಪೈಲ್ವಾನ್ ಸುಂದರ್ ಕರ್ಕೇರ ಪರಿಚಯವಾಗಿ ಸಿನಿಮಾ ಮಾತುಕತೆ ನಡೆದಿತ್ತು. ಸುಂದರ್ ಕರ್ಕೇರರು ಬಂಡವಾಳ ಹೂಡಲು ಒಪ್ಪಿದ್ದರು. ಹೀಗೆ ತುಳು ಭಾಷೆಯಲ್ಲಿ ಮೊದಲ ಚಿತ್ರದ ಸಿದ್ದತೆಗೆ ಸುಜಾತಾ ಹೋಟೆಲ್ ಸಾಕ್ಷಿಯಾಗಿತ್ತು. ಇದರ ಪ್ರತಿಫಲವೇ ಕೆ.ಬಿ. ಭಂಡಾರಿ ಅವರ ‘ಮೆಗ್ದಿ ಪಲಯೆ’ ನಾಟಕ ‘ಎನ್ನ ತಂಗಡಿ’ ಚಿತ್ರವಾಗಿ ಸೆಟ್ಟೇರಿತ್ತು.
ಮೊದಲ ತುಳು ಚಿತ್ರದಲ್ಲಿ ಕನ್ನಡದ ಹೆಸರಾಂತ ನಟಿ ಪಂಢರಿಬಾಯಿ ನಟಿಸಿದ್ದರು. ಶೇಖರ್ ಪುತ್ರನ್, ಮಂಗಳೂರು ದಿಲೀಪ್, ಕವಿತಾ, ಲೋಕಯ್ಯ ಶೆಟ್ಟಿ, ಆನಂದ್ ಶೇಖರ್ ಮುಂತಾದವರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರು. ಚಿತ್ರಭಾರತಿ ಶ್ರೀನಿವಾಸ್ ಚಿತ್ರದ ಹಂಚಿಕೆ ಹಕ್ಕು ಪಡೆದರು.
ಇದನ್ನೂ ಓದಿ:ತುಳು ಚಿತ್ರಸಿರಿಗೆ ಬಂಗಾರದ ಮೆರುಗು
‘ಮನಸನ್ ನಿರ್ಮಲಾ ದೀದ್ ಈ ಬಾಳುಂಡ, ಅವ್ವೆ ಒಂಜಿ ಮಂದಿರ’ (ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ನೀನು ಬಾಳಿದರೆ ಅದುವೇ ಒಂದು ಮಂದಿರ) ತುಳು ಚಿತ್ರರಂಗದ ಮೊದಲ ಹಾಡು. ಭೋಜ ಸುವರ್ಣ ಅವರು ಈ ಸಾಹಿತ್ಯ ಬರೆದಿದ್ದರು.
ತುಳು ಚಿತ್ರರಂಗದ ಬಗ್ಗೆ ದೊಡ್ಡ ಮಟ್ಟದ ಪ್ರಚಾರ ಇಲ್ಲದೆ, ಚಿತ್ರ ಬಿಡುಗಡೆ ಮಾಡಲು ಥಿಯೇಟರ್ ಮಾಲಕರು ಹಿಂದೇಟು ಹಾಕಿದ ಕಾರಣ ಎನ್ನ ತಂಗಡಿ ಚಿತ್ರ 1973ರ ಫೆ.19ರಂದು ಜ್ಯೋತಿ ಚಿತ್ರಮಂದಿರ ಒಂದರಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ ಹಲವು ಕಾರಣಗಳಿಂದ ಇದು ಯಶಸ್ವಿ ಪ್ರದರ್ಶನ ಕಾಣಲಿಲ್ಲ.
ಆರೂರು ಪಟ್ಟಾಭಿ ಶಕೆ
‘ಎನ್ನ ತಂಗಡಿ’ ಚಿತ್ರ ಮೊದಲು ತೆರೆಕಂಡರೂ ಮೊದಲು ಶೂಟಿಂಗ್ ಆರಂಭಿಸಿದ್ದು ಆರೂರು ಪಟ್ಟಾಭಿ ನಿರ್ದೇಶನದ ‘ದಾರೆದ ಬುಡೆದಿ’ ಚಿತ್ರ. ಈ ಚಿತ್ರದಿಂದ ತುಳು ಚಿತ್ರರಂಗದಲ್ಲಿ ಆರೂರು ಪಟ್ಟಾಭಿ ಶಕೆ ಆರಂಭವಾಯಿತು. ‘ಎನ್ನ ತಂಗಡಿ’ ಚಿತ್ರ ಬಿಡುಗಡೆಯಾಗಿ ಐದು ವಾರದ ನಂತರ (26 ಮಾರ್ಚ್ 1971) ‘ದಾರೆದ ಬುಡೆದಿ’ ತೆರೆಕಂಡಿತು.
ಶರವು ದೇವಸ್ಥಾನದಲ್ಲಿ ಮುಹೂರ್ತವಾಗಿದ್ದ ಚಿತ್ರದಲ್ಲಿ ಕೆ. ಎನ್ ಟೈಲರ್, ಲೀಲಾವತಿ ಮುಂತಾದವರು ನಟಿಸಿದ್ದರು. ಮಲ್ಪೆ ಮಧ್ವರಾಜ್ ಅವರು ಚಿತ್ರದ ಹಂಚಿಕೆ ಹಕ್ಕು ಪಡೆದಿದ್ದರು. ಚಿತ್ರ ಐದು ವಾರಗಳ ಕಾಲ ಪ್ರದರ್ಶನ ಕಂಡಿತ್ತು.
ಇದಾಗಿ ಸರಿಯಾಗಿ ಒಂದು ವರ್ಷದ ಬಳಿಕ ತೆರೆಕಂಡ ಚಿತ್ರ ‘ಮೋಕೆ ಸಿಂಗಾರಿ’, ‘ಪಕ್ಕಿಲು ಮೂಜಿ’ ಸೇರಿದಂತೆ ಹಲವು ಎವರ್ ಗ್ರೀನ್ ಹಾಡುಗಳಿದ್ದ ‘ಪಗೆತ ಪುಗೆ’ ಚಿತ್ರ. (1972) ಆರೂರು ಪಟ್ಟಾಭಿ ಅವರೇ ಈ ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಆನಂದ ಶೇಖರ್, ಆನಂದ ಗಾಣಿಗ ಮುಂತಾದವರು ನಟಿಸಿದ್ದರು. ಸೀತರಾಮ್ ಕುಲಾಲ್ ಬರೆದಿದ್ದ ‘ಮೋಕೆದ ಸಿಂಗಾರಿ ಉಂತೆದ ವಯ್ಯಾರಿ’ ಹಾಡಿಗೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಾಗಿದ್ದರು. ಇದು ಎಸ್ ಪಿಬಿ ಹಾಡಿದ ಮೊತ್ತಮೊದಲ ತುಳು ಹಾಡು.
ಆರೂರು ಪಟ್ಟಾಭಿ ಅವರು ನಿರ್ದೇಶನ ಮಾಡಿದ ಮೂರನೇ ತುಳು ಚಿತ್ರ ‘ಬಿಸತಿ ಬಾಬು’ ಪ್ರಸಿದ್ದಿಯಾಗಿತ್ತು. ಈ ಚಿತ್ರ ಜ್ಯೋತಿ ಟಾಕೀಸ್ ನಲ್ಲಿ 75 ದಿನ ಪ್ರದರ್ಶನ ಕಂಡಿತ್ತು. ಇದು ಆ ಕಾಲದಲ್ಲಿ ತುಳು ಚಿತ್ರರಂಗ ದಾಖಲೆಯಾಗಿತ್ತು. ಇದರ 75ನೇ ದಿನದ ಸಮಾರಂಭಕ್ಕೆ ಡಾ. ರಾಜ್ ಕುಮಾರ್ ಆಗಮಿಸಿದ್ದರು.
ಐದನೇ ಚಿತ್ರವಾಗಿ ಸೀತಾರಾಮ್ ಕುಲಾಲ್ ಕಥೆ ಬರೆದಿದ್ದ ಪದ್ಮನಾಭಂ ನಿರ್ದೇಶನದ ‘ಉಡಲ್ದ ತುಡರ್’ ಚಿತ್ರ ತೆರೆಕಂಡಿತ್ತು. ಈ ಚಿತ್ರದಲ್ಲಿ ಯೇಸುದಾಸ್ ಒಂದು ಹಾಡು ಹಾಡಿದ್ದರು.
ಕೋಟಿ ಚೆನ್ನಯ ಚಿತ್ರ ಮತ್ತು ಸೂಪರ್ ಹಿಟ್ ಹಾಡುಗಳು
ತುಳು ಚಿತ್ರರಂಗದ ಆರನೇ ಚಿತ್ರವಾಗಿ ಪೌರಾಣಿಕ ಕಥೆಯುಳ್ಳ ಕೋಟಿ ಚೆನ್ನಯ 1973 ಎಪ್ರಿಲ್ 5 ರಂದು ತೆರೆಕಂಡಿತ್ತು. ವಿಶು ಕುಮಾರ್ ಇದರ ನಿರ್ದೇಶಕ. ಕೋಟಿ ಚೆನ್ನಯ ನಾಟಕ ಬರೆದಿದ್ದ ವಿಶುಕುಮಾರ್ 1965ರಲ್ಲಿ ಮುಂಬೈಯಲ್ಲಿ ಸ್ಥಳೀಯ ಕಲಾವಿದರಿಂದ ಇದರ ಪ್ರದರ್ಶನ ಮಾಡಿಸಿದ್ದರು. ಇದರಲ್ಲಿ ಚೆನ್ನಯ ನ ಪಾತ್ರ ನಿರ್ವಹಿಸಿದ್ದ ವಾಮನ್ ರಾಜ್ ಪ್ರದರ್ಶನ ಕಂಡು ಮುಂದೆ ಚಿತ್ರದಲ್ಲಿ ಅವರನ್ನೇ ಚೆನ್ನಯನ ಪಾತ್ರಕ್ಕೆ ಆಯ್ಕೆ ಮಾಡಿದ್ದರು ವಿಶು ಕುಮಾರ್.
ವಿವೇಕ್ ರೈ, ಅಮೃತ ಸೋಮೇಶ್ವರ ಬರೆದ ‘ಎಕ್ಕ ಸಕ’, ‘ಕೆಮ್ಮಲೆತಾ ಬ್ರಹ್ಮ’, ‘ಜೋಡು ನಂದಾ ದೀಪ’ ಮುಂತಾದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದವು. ವಿಜಯ್ ಭಾಸ್ಕರ್ ಸಂಗೀತ ನೀಡಿದ್ದ ಹಾಡುಗಳನ್ನು ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಹಾಡಿದ್ದರು.
ಇದರ ಮಧ್ಯೆ ಗೀತ ಪ್ರಿಯ ಅವರ ‘ಯಾನ್ ಸನ್ಯಾಸಿ ಆಪೆ’, ಸುಂದರ್ ಕೃಷ್ಣ ಅರಸ್ ನಿರ್ದೇಶನದ ‘ಸಂಗಮ ಸಾಕ್ಷಿ’ ಎರ್ ಮಲ್ತಿನ ತಪ್ಪು, ಬಯ್ಯ ಮಲ್ಲಿಗೆ, ತುಳುನಾಡ ಸಿರಿ, ಬೊಳ್ಳಿದೋಟ ಮುಂತಾದ ಚಿತ್ರಗಳು ತೆರೆಕಂಡವು. ಕೆ.ಎನ್.ಟೈಲರ್ ತುಳು ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದರು.
ತುಳು ಚಿತ್ರರಂಗದ 16ನೇ ಚಿತ್ರವಾಗಿ ‘ಕರಿಯಾಣಿ ಕಟ್ಟಂದಿನ ಕಂಡನಿ’ 1978ರಲ್ಲಿ ಬಿಡುಗಡೆಯಾಗಿತ್ತು. ಆರೂರು ಪಟ್ಟಾಭಿ ಕುಟುಂಬಿಕರು ಈ ಚಿತ್ರವನ್ನು ನಿರ್ಮಿಸಿದ್ದರು. ಇದು ತುಳು ಚಿತ್ರರಂಗದ ಮೊದಲ ವರ್ಣ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಒಟ್ಟಾರೆ 1971ರಿಂದ 1980ರವರೆಗೆ 17 ಚಿತ್ರಗಳು ತೆರೆಕಂಡವು. ಆದರೆ ಮುಂದಿನ ದಶಕದಲ್ಲಿ ಈ ವೇಗ ಸ್ವಲ್ಪ ಕಡಿಮೆಯಾಗಿತ್ತು. ಈ ಸಮಯದಲ್ಲಿ ಭಾಗ್ಯವಂತೆದಿ, ಬದ್ಕರೆ ಬುಡ್ಲೆ, ದಾರೆದ ಸೀರೆ, ಪೆಟ್ಟಾಯಿ ಪಿಲಿ ಮುಂತಾದ ಚಿತ್ರಗಳು ಬಂದವು. ಆದರೆ 1993ರಲ್ಲಿ ರಿಚರ್ಡ್ ಕ್ಯಾಸ್ಟಲಿನೋ ನಿರ್ದೇಶನದಲ್ಲಿ ಬಂದ ‘ಬಂಗಾರ್ ಪಟ್ಲೆರ್’ ಚಿತ್ರ ದೊಡ್ಡ ಸಾಧನೆಯನ್ನೇ ಮಾಡಿತ್ತು. ನಾರಾಯಣ ಶೆಟ್ಟಿಯವರ ‘ಸತ್ಯ ಬತ್ತಲೆ’ ನಾಟಕವನ್ನು ‘ಬಂಗಾರ್ ಪಟ್ಲೆರ್’ ಚಿತ್ರವಾಗಿ ತೆರೆಮೇಲೆ ತಂದ ರಿಚರ್ಡ್ ಕ್ಯಾಸ್ಟಲಿನೋ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿದ್ದರು. ಈ ಚಿತ್ರದಲ್ಲಿ ಸುಧಾರಾಣಿ, ಕಾಸರಗೋಡು ಚಿನ್ನ, ಹಲವಾರು ತುಳು ನಾಟಕ ಕಲಾವಿದರು ತೆರೆ ಹಂಚಿದ್ದರು. ಇದು ತುಳು ಚಿತ್ರರಂಗದ 25ನೇ ಚಿತ್ರ ಎನ್ನುವುದು ಮತ್ತೊಂದು ವಿಶೇಷ.
ಮುಂದೆ 2010ರ ವರೆಗೆ ಕೋಟಿ ಚೆನ್ನಯ, ಕಡಲ ಮಗೆ, ತುಡರ್, ಸುದ್ಧ ಮುಂತಾದ ಚಿತ್ರಗಳು ತೆರೆಕಂಡರೂ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸಿದವು. ಆದರೆ ಹಲವಾರು ಪ್ರಶಸ್ತಿಗಳು ಅರಸಿ ಬಂತು. 2000ದಿಂದ 2011ರ ವರೆಗೆ ತೆರೆಕಂಡಿದ್ದು ಕೇವಲ 9 ಚಿತ್ರಗಳು ಮಾತ್ರ! ಅಷ್ಟರ ಮಟ್ಟಿಗೆ ವಿಮುಖವಾಗಿತ್ತು ಚಿತ್ರರಂಗ. ಇದಕ್ಕೆ ಮತ್ತೆ ವೇಗ ನೀಡಿದ್ದು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ‘ಒರಿಯಾರ್ದ್ ಒರಿ ಅಸಲ್’.
ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಸೂಪರ್ ಹಿಟ್ ‘ಒರಿಯಾರ್ದ್ ಒರಿ ಅಸಲ್’ ನಾಟಕ ಎಚ್.ಎಸ್. ರಾಜಶೇಖರ್ ನಿರ್ದೇಶನದಲ್ಲಿ ಅದೇ ಹೆಸರಿನಲ್ಲಿ 2011ರಲ್ಲಿ ಬಿಡುಗಡೆಯಾಯಿತು. ತುಳು ಚಿತ್ರರಂಗದಲ್ಲಿ ಹೊಸ ಅಲೆಗೆ ಈ ಚಿತ್ರ ಕಾರಣವಾಯಿತು. 175 ದಿನಗಳಿಗೂ ಹೆಚ್ಚು ದಿನ ಪ್ರದರ್ಶನ ಕಂಡ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಮುಂದಿನ ದಿನಗಳಲ್ಲಿ ಸಾಲು ಸಾಲು ಚಿತ್ರಗಳು ಬರಲು ಇದು ಕಾರಣವಾಯ್ತು ಎಂದರೆ ತಪ್ಪಾಗಲಾರದು.
ತೆಳಿಕೆದ ಬೊಳ್ಳಿ, ಮದಿಮೆ, ಎಕ್ಕಸಕ, ಗಗ್ಗರ, ದಂಡ್, ಚಾಲಿ ಪೊಲೀಲು, ಚಂಡಿ ಕೋರಿ, ಗಿರ್ಗಿಟ್ ಮುಂತಾದ ಹೊಸ ಅಲೆಯ ಚಿತ್ರಗಳು ತೆರೆಕಂಡವು. ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಬೋಜರಾಜ ವಾಮಂಜೂರು ಮುಂತಾದ ರಂಗಭೂಮಿ ಕಲಾವಿದರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರು. ಅರ್ಜುನ್ ಕಾಪಿಕಾಡ್, ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ ಮುಂತಾದ ನಾಯಕ ನಟರು ಸದ್ಯ ಉತ್ತಮ ಪ್ರಸಿದ್ದಿ ಗಳಿಸುತ್ತಿದ್ದಾರೆ.
ಒಗ್ಗಟ್ಟಿರಬೇಕು: ಚಿತ್ರರಂಗ ಬೆಳೆಯುತ್ತಿದೆ. ನಾವೂ ಬೆಳೆಯಬೇಕು. ಚಿತ್ರರಂಗದಲ್ಲಿ ಒಗ್ಗಟ್ಟು ಕಾಪಾಡಬೇಕು. ಹಿಂದೆ ಮಾಡಿದ ತಪ್ಪುಗಳು ಮುಂದೆ ಮರುಕಳಿಸದಂತೆ ನೋಡಿಕೊಳ್ಳಬೇಕು. ನಿರ್ಮಾಪಕರು, ಚಿತ್ರರಂಗವನ್ನೇ ನಂಬಿದ ಕಲಾವಿದರ ಉದ್ದಾರವಾಗಬೇಕು. ಹಿಂದೆ ಇದ್ದ ಕಷ್ಟದ ದಿನಗಳು ಈಗಿಲ್ಲ. ಭರವಸೆಯ ಹೊಸ ಬೆಳಕು ಕಾಣುತ್ತಿದೆ. ಉತ್ತಮ ಗುಣಮಟ್ಟದ ಚಿತ್ರಗಳು ಇನ್ನಷ್ಟು ಬರಬೇಕು. ಮುಂದಿನ ದಿನಗಳಲ್ಲಿ ಚಿತ್ರರಂಗ ತನ್ನ ಪರಿಧಿಯನ್ನು ಇನಷ್ಟು ವಿಸ್ತರಿಸಬೇಕು.
ನಿರೂಪಣೆ: ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.