ಸಾವಿರ ಮೈಲಿಯ ಪಯಣದ ಆರಂಭ ಒಂದು ಹೆಜ್ಜೆಯಿಂದ
Team Udayavani, Mar 17, 2017, 10:20 PM IST
ಜಗತ್ತಿನ ಎಲ್ಲ ಪರಿಸರ ಸಮಸ್ಯೆಗಳಿಗೆ ಬೃಹತ್ ಸ್ವರೂಪದ ಪರಿಹಾರಗಳಿಲ್ಲ. ಅವೆಲ್ಲವೂ ಸಣ್ಣ ಸಣ್ಣದಾಗಿಯೇ ಆರಂಭವಾಗಬೇಕು. ಸಣ್ಣದಾಗಿ ಹುಟ್ಟುವ ತೊರೆ ನದಿಯಾಗಿ ಬೆಳೆಯುವ ಕ್ರಮ ಜನಾಂದೋಲನಕ್ಕೂ ಒಪ್ಪುವಂಥದ್ದು. ಹಾಗೆಯೇ ರಚನಾತ್ಮಕ ಪ್ರಯತ್ನಗಳಿಗೂ ಅದೇ ರೂಪ. ಸಾವಿರ ಮೈಲಿಯ ಪ್ರಯಾಣ ಆರಂಭವಾಗುವುದು ಒಂದು ಹೆಜ್ಜೆಯಿಂದ.
ಯಾವುದೇ ಒಳ್ಳೆಯ ಕೆಲಸವಿದ್ದರೂ ಅದು ನಮ್ಮಿಂದಲೇ ಶುರುವಾಗಬೇಕು ಎನ್ನುತ್ತಾರೆ ಹಿರಿಯರು. ಇದು ಒಂದು ಬಗೆಯಲ್ಲಿ ರಚನಾತ್ಮಕವಾದ ನಿಲುವಿಗೆ ಸ್ಪಷ್ಟ ಉದಾಹರಣೆ. ಇದು ಆಶಯವೂ ಹೌದು ಮತ್ತು ಬಯಕೆಯೂ ಹೌದು. ಮುಂಬಯಿಯ ಮಲಾಡ್ ಪ್ರದೇಶದ ಸುಭಾಷ್ ರಾಣೆ ಇಂಥದ್ದೇ ಒಂದು ಆಶಯದಿಂದ ಬದುಕಿದವರು. ಬಹುರಾಷ್ಟ್ರೀಯ ಕಂಪೆನಿಯ ಕೆಲಸದಿಂದ ನಿವೃತ್ತಿಗೊಂಡ ಬಳಿಕ ಒಂದು ಕೃಷಿ ಕಾರ್ಯಾಗಾರಕ್ಕೆ ಹೋದರು. ಅಲ್ಲಿ ತರಬೇತುದಾರರು, ತ್ಯಾಜ್ಯ ನಿರ್ವಹಣೆ ಕುರಿತ ಮಾಹಿತಿಯುಳ್ಳ ಕರಪತ್ರವೊಂದನ್ನು ಕೊಟ್ಟರು. ಅದರಲ್ಲಿ ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯ ವಿಂಗಡಣೆ, ಅದರಿಂದಾಗುವ ಪ್ರಯೋಜನ ಇತ್ಯಾದಿ ವಿವರಿಸಲಾಗಿತ್ತು. ಅದನ್ನು ಕಂಡ ರಾಣೆಯವರಿಗೆ ತಮ್ಮ ಪ್ರದೇಶದಲ್ಲೂ ಇಂಥದೊಂದು ಅರಿವಿನ ದೀಪವನ್ನು ಏಕೆ ಹಚ್ಚಬಾರದೆನಿಸಿತು.
ಒಮ್ಮೆ ಸ್ಥಳೀಯ ವ್ಯವಸ್ಥೆಯನ್ನು ನೋಡುವ ಸಮಿತಿ (ಎಎಲ್‌ಎಂ) ಸದಸ್ಯರಿಗೆ ಇದರ ಮಹತ್ವವನ್ನು ವಿವರಿಸಿದರು. ಬಳಿಕ ಸ್ಥಳೀಯ ಮಹಾನಗರಪಾಲಿಕೆ ಸದಸ್ಯರನ್ನು ಭೇಟಿ ಮಾಡಿ, ತ್ಯಾಜ್ಯ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಒಟ್ಟೂ ಎಲ್ಲರ ಪ್ರಯತ್ನದಿಂದ ಆಂದೋಲನ ಆರಂಭವಾಯಿತು. ತನ್ನದೇ ಹೌಸಿಂಗ್ ಸೊಸೈಟಿಯಿಂದ ಈ ಆಂದೋಲನ ಆರಂಭಿಸಿ ಮನೆ ಮನೆಗೂ ಭೇಟಿ ಕೊಟ್ಟು ಮಾಹಿತಿ ನೀಡಿದರು. ಜತೆಗೆ ಪಾಲಿಕೆ ವಾಹನಗಳು ತ್ಯಾಜ್ಯವನ್ನು ಕೊಂಡೊಯ್ಯುವುದಾಗಿಯೂ ಹೇಳಿದರು. ಇದರಿಂದ ಕೆಲವೇ ದಿನಗಳಲ್ಲಿ ಆದ ಬದಲಾವಣೆಯೆಂದರೆ, ಇಡೀ ಬಡಾವಣೆಯಲ್ಲಿ ಕಸಗಳನ್ನು ಎಸೆಯುತ್ತಿದ್ದ ಜಾಗಗಳೆಲ್ಲಾ ಖಾಲಿಯಾದವು. ಸಾರ್ವಜನಿಕರೆಲ್ಲ ತ್ಯಾಜ್ಯವನ್ನು ಎಸೆಯದೇ ಪಾಲಿಕೆ ವಾಹನಗಳಿಗೆ ವರ್ಗಾಯಿಸಿದರು.
ಮತ್ತೂಂದು ಸೇವಾಸಂಸ್ಥೆಯೊಂದಿಗೆ ಸೇರಿ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಾಗಾರ, ಮಾಹಿತಿ ಶಿಬಿರಗಳನ್ನು ಹಮ್ಮಿಕೊಂಡರು. ಸುತ್ತಮುತ್ತಲಿನ ಸೊಸೈಟಿಗಳಲ್ಲೂ ಬಡಾವಣೆಗಳಲ್ಲೂ ಅರಿವಿನ ಬೀಜ ಬಿತ್ತಿದರು. ಇದು ನಿಧಾನವಾಗಿ ಎಲ್ಲೆಡೆಗೂ ವ್ಯಾಪಿಸಿಕೊಳ್ಳುತ್ತಿದೆ. 64ರ ಇಳಿವಯಸ್ಸಿನಲ್ಲಿರುವ ರಾಣೆ, “ಈ ಕೆಲಸ ನನಗೆ ತೃಪ್ತಿ ನೀಡಿದೆ’ ಎನ್ನುತ್ತಾರೆ. ಅವರಿವರು ಬಂದು ಮಾಡಬೇಕೆಂದು ಬಯಸುವುದಕ್ಕಿಂತ ನಾವೇ ಆರಂಭಿಸಿದರೆ ಹೇಗೆ ಎಂಬುದು ಅವರ ಪ್ರಶ್ನೆ.
ಯಾಕೆ ಈ ಮಾತು?
ಯಾಕೆಂದರೆ, ಆಂದೋಲನ ಆರಂಭಿಸಲು ಯಾರೂ ಬರುವುದಿಲ್ಲ; ನಾವೇ ಆರಂಭಿಸಬೇಕು. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದದ್ದೆಂದರೆ, ರಾಣೆಯವರು ನೆಪಮಾತ್ರಕ್ಕೆ ಕಾಣುವಂಥವರು. ಆದರೆ, ಇಡೀ ಕಥೆಯಲ್ಲಿ ಕಥಾನಾಯಕರೆಂದರೆ ಸ್ಥಳೀಯ ನಾಗರಿಕರು. ಅದೇ ಸಾಧ್ಯತೆ ನಮ್ಮಲ್ಲೂ ಕಾಣಲು ಸಾಧ್ಯವಿದೆ.
ಹಾಗೆಂದು ಇಡೀ ಮುಂಬಯಿ ಕಸಮುಕ್ತವಾಗಿಲ್ಲ. ಅದರ ಅತ್ಯಂತ ಹಳೆಯ ತ್ಯಾಜ್ಯ ಸಂಗ್ರಹ ಪ್ರದೇಶ ದಿಯೋನಾರ್ ಸಮಸ್ಯೆಯ ದಶಮುಖವನ್ನು ಅನಾವರಣಗೊಳಿಸಬಲ್ಲದು. ತ್ಯಾಜ್ಯ ರಾಶಿ ಹೇಗೆ ಬೆಳೆದಿದೆಯೆಂದರೆ ಕಳೆದ ವರ್ಷ 55 ಮೀಟರ್‌ನಷ್ಟು ಬೆಳೆದಿದ್ದ ಬೆಟ್ಟಕ್ಕೆ ಬೆಂಕಿ ಬಿದ್ದಿತು. ಇದರ ಪರಿಣಾಮವಾಗಿ ಸುತ್ತಲಿನ ಸುಮಾರು 74 ಪಾಲಿಕೆ ಶಾಲೆಗಳನ್ನು ಎರಡು ದಿನಗಳ ಕಾಲ ಮುಚ್ಚಲಾಗಿತ್ತು. ನಿತ್ಯವೂ ಮುಂಬಯಿಯಲ್ಲಿ ಸುಮಾರು 10 ಸಾವಿರ ಟನ್‌ನಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು ದಿಯೋನಾರ್, ಮುಳುಂದ್, ಕಾಂಜೂರ್ ಮಾರ್ಗದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ತೆರಳುತ್ತದೆ. 227 ವಾರ್ಡ್‌ಗಳಲ್ಲೂ ಇರುವ ಸಮಸ್ಯೆಯೆಂದರೆ ತ್ಯಾಜ್ಯ ವಿಂಗಡಣೆಯೇ. 1990ರಲ್ಲೇ ಈ ವಿಂಗಡಣಾ ಪದ್ಧತಿಯನ್ನು ವಿವರಿಸಿದರೂ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಇನ್ನೂ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇದೆ.
ಹಾಗಾಗಿ ನಮ್ಮ ನಾಲ್ಕು ನಿಮಿಷದ ತಾಳ್ಮೆಗೆ ಬಹಳ ದೊಡ್ಡ ಮೌಲ್ಯವಿದೆ. ಕೊಂಚ ಗಡಿಬಿಡಿಯಲ್ಲಿ ಒಂದೆಡೆ ರಾಶಿ ಸುರಿಯುವ ಮೊದಲು ಯೋಚಿಸಬೇಕು. ಇಂಥದೊಂದು ಸಣ್ಣ ಪ್ರಯತ್ನ ಜಾಗತಿಕವಾಗಿ ಎಲ್ಲ ನಗರಗಳು ಪರಿಹಾರ ಕಾಣದೇ ಕಂಗಲಾಗಿರುವ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರವಾಗಿ ರೂಪಾಂತರಗೊಳ್ಳಬಲ್ಲದು ಎನ್ನುವುದಾದರೆ ನಾವೇಕೆ ರಚನಾತ್ಮಕವಾಗಿ ಯೋಚಿಸಬಾರದು?
ಪ್ಲಾಸ್ಟಿಕ್ ಸಂಗ್ರಹಿಸುವ ಕಥೆ
ನಾವೇನು ಮರುಬಳಕೆಯಲ್ಲಿ ಹಿಂದೆ ಬಿದ್ದಿಲ್ಲ. ಹಲವು ಮನೆಗಳಲ್ಲಿ ಪ್ಲಾಸ್ಟಿಕ್ ಕುರಿತು ಸಣ್ಣದೊಂದು ಜಾಗೃತಿ ಮೂಡುತ್ತಿದೆ. ಎಲ್ಲರೂ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ನ್ನು ಎಸೆಯುವುದನ್ನು ನಿಲ್ಲಿಸಿದ್ದಾರೆ. ಅಂಗಡಿಗಳಿಂದ ನಾನಾ ಪದಾರ್ಥಗಳನ್ನು ತರುವವರು ಬಳಿಕ ಅದನ್ನು ತೊಳೆದು, ಒಣಗಿಸಿ ಮರು ಬಳಕೆ ಮಾಡುವ ಮನೆಗಳು ಬೇಕಾದಷ್ಟಿವೆ. ಇನ್ನು ಕೆಲವು ಗ್ರಾಮ ಪಂಚಾಯಿತಿಗಳೂ ಈ ನಿಟ್ಟಿನಲ್ಲಿ ಮುಂದೆ ಬಂದಿವೆ. ಪುತ್ತೂರು ತಾಲೂಕಿನ ಆಲಂಕಾರು ಗ್ರಾಮ ಪಂಚಾಯಿತಿ ಅಂಥದ್ದರಲ್ಲಿ ಒಂದು. ಅಲ್ಲಿಯ ಪ್ರೇಮಾ ಎಂಬವರು ಮೂರು ವರ್ಷಗಳ ಹಿಂದೆ ತಮ್ಮ ಮನೆಯಲ್ಲಿ ಬಳಸುವ ಪ್ಲಾಸ್ಟಿಕ್ ತೊಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಲಿಲ್ಲ. ಬದಲಾಗಿ, ಸ್ವತ್ಛಗೊಳಿಸಿ ಜೋಡಿಸಿಡತೊಡಗಿದರು. ಒಂದಿಷ್ಟು ರಾಶಿಯಾದ ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿಗೆ ಕೊಟ್ಟರು. ಗ್ರಾಮ ಪಂಚಾಯಿತಿ ಕೆಜಿಗೆ ಹತ್ತು ರೂ.ಗಳಂತೆ ಅವರ ಶ್ರಮಕ್ಕೆ ಬೆಲೆ ಕಟ್ಟಿತು. ಈಗ ಅವರ ಸುತ್ತಮುತ್ತಲ ಮನೆಯವರೆಲ್ಲ ಈ ಪರಿಸರ ಸ್ನೇಹಿ ಪ್ರಯತ್ನದಲ್ಲಿ ತೊಡಗಿದ್ದಾರೆ. ಈಗ ತಿಂಗಳಿಗೆ ಒಂದು ಕ್ವಿಂಟಾಲ್‌ನಷ್ಟು ಪ್ಲಾಸ್ಟಿಕ್ ಸಂಗ್ರಹವಾಗುತ್ತಿದೆಯಂತೆ. ಗ್ರಾಮ ಪಂಚಾಯಿತಿ ಅದನ್ನು ಮಂಗಳೂರಿಗೆ ಮರುಬಳಕೆಗೆ ಕಳುಹಿಸುತ್ತದೆ. ಇದು ಒಬ್ಬ ಪ್ರೇಮಾರ ಕಥೆಯಲ್ಲ. ಇಡೀ ರಾಜ್ಯದಲ್ಲಿ ಇಂಥ ಹಲವು ಪ್ರೇಮಾಗಳಿದ್ದಾರೆ; ಹಲವು ಗ್ರಾಮ ಪಂಚಾಯಿತಿಗಳಿವೆ. ನಾವೂ ಈ ಸಾಲಿಗೆ ಸೇರಬೇಕಷ್ಟೇ.
ನಾವೇ ತೆಗೆದುಕೊಂಡು ಹೋಗೋಣ
ಪ್ಲಾಸ್ಟಿಕ್ ವಿರೋಧಿ ಆಂದೋಲನ ಜೋರಾದಾಗ ಬಹಳಷ್ಟು ಮಂದಿ ಇದರಿಂದ ರೋಸಿ ಹೋದದ್ದು ಉಂಟು. ಯಾಕೆಂದರೆ, ಪ್ಲಾಸ್ಟಿಕ್ ಅಷ್ಟೊಂದು ಆಳವಾಗಿ ಬೀಡು ಬಿಟ್ಟಿತ್ತು. ಅದನ್ನು ಬಿಟ್ಟು ಬದುಕುವುದು ಕಷ್ಟ ಎನಿಸತೊಡಗಿತ್ತು. ಅದರೊಂದಿಗೆ ನೀವು ಎಲ್ಲಿಗೆ ಹೋದರೂ ಬಟ್ಟೆ ಚೀಲ ತೆಗೆದುಕೊಂಡು ಹೋಗಿ-ಇಂಥ ಪರಿಹಾರಗಳು ಸಮರ್ಪಕವೆನಿಸತೊಡಗಲಿಲ್ಲ. ಇವೆಲ್ಲವೂ ಪ್ಲಾಸ್ಟಿಕ್ ಬಗೆಗಿನ ಮೋಹವನ್ನು ಕೊನೆಗೊಳಿಸಲಿಲ್ಲ.
ಇದರ ಬದಲಾಗಿ ಮತ್ತೂಂದು ಪರಿಹಾರವಿದೆ. ಒಂದು ಬಾರಿ ಅಂಗಡಿಯಿಂದ ತಿಂಗಳ ದಿನಸಿ ಸಾಮಾನು ತಂದರೆ, ಕನಿಷ್ಠ 20ರಿಂದ 30 ಪ್ಲಾಸ್ಟಿಕ್ ತೊಟ್ಟೆಗಳು ಮನೆಗೆ ಬರುತ್ತವೆ. ಅವುಗಳಲ್ಲಿ ಏನಿಲ್ಲವೆಂದರೂ ಹತ್ತು ದೊಡ್ಡದಾಗಿದ್ದರೆ, ಉಳಿದದ್ದು ಮೂರ್‍ನಾಲ್ಕು ಗಾತ್ರದವು. ಈ ವಿವಿಧ ಗಾತ್ರಗಳಲ್ಲಿ ಎಲ್ಲವೂ ಮರುಬಳಕೆಗೆ ಬಾರದಿರಬಹುದು. ಆದರೆ, ದೊಡ್ಡ ತೊಟ್ಟೆಗಳಂತೂ ಮರುಬಳಕೆಗೆ ಬರಬಲ್ಲವು. ಇವುಗಳನ್ನು ಸ್ವತ್ಛಗೊಳಿಸಿಟ್ಟುಕೊಂಡರೆ, ಮುಂದಿನ ತಿಂಗಳು ಅಂಗಡಿಯಿಂದ ಸಾಮಾನು ತರುವಾಗ ಕಡಿಮೆ ತೊಟ್ಟೆಗಳನ್ನು ತರಬಹುದು. ಇದೊಂದು ಸರಳ ಪರಿಹಾರ. ಮನೆಯಲ್ಲಿ ಪ್ಲಾಸ್ಟಿಕ್ ಬೆಟ್ಟ ಬೆಳೆಯದಂತೆ ನೋಡಿಕೊಂಡಂತೂ ಆಯಿತು; ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿದಂತೂ ಆಯಿತು. ಇಂಥವರೂ ಹಲವರಿದ್ದಾರೆ. ಅಲ್ಲವೇ? ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾದ ಕಾಲವಿದು. ಪ್ರತಿ ಪೇಟೆಯಲ್ಲೂ ದೊಡ್ಡ ದೊಡ್ಡ ಪ್ಲಾಸ್ಟಿಕ್ ಸಂಗ್ರಹ ತೊಟ್ಟಿಯನ್ನು ಸ್ಥಾಪಿಸಬೇಕು. ಜನರು ತಮ್ಮ ಮನೆಯಲ್ಲಿ ಇರುವ ಹೆಚ್ಚುವರಿ ಪ್ಲಾಸ್ಟಿಕ್‌ಗಳನ್ನು ಸ್ವತ್ಛಗೊಳಿಸಿ ಈ ತೊಟ್ಟಿಗೆ ಹಾಕಬಹುದೆಂಬ ಜಾಗೃತಿ ಮೂಡಿಸಬೇಕು. ಆರಂಭದಲ್ಲಿ ಜನರು ಉತ್ಸಾಹ ತೋರಲಾರರು. ಕ್ರಮೇಣ ಅದೊಂದು ಆಂದೋಲನವಾಗಿ ರೂಪುಗೊಳ್ಳದೇ ಇರದು. ಇದರಿಂದ ಗ್ರಾಮದುದ್ದಕ್ಕೂ ಅಲ್ಲಲ್ಲಿ ಪ್ಲಾಸ್ಟಿಕ್ ರಾಶಿ ಬೀಳದು. ಗ್ರಾಮ ಪಂಚಾಯಿತಿಯೇ ಅದರ ಮರು ಬಳಕೆಗೆ ಯೋಜಿಸಬೇಕು. ಆಗ ಒಂದಿಷ್ಟು ಬದಲಾವಣೆ ಸಾಧ್ಯವಿದೆ.
ಇದೊಂದೇ ಅಲ್ಲ; ಇನ್ನೂ ಹಲವು
ಜಾಗತಿಕ ತಾಪಮಾನದಿಂದ ಹಿಡಿದು ಎಲ್ಲ ಬಗೆಯ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಬೃಹತ್ ರೂಪಗಳ ಪರಿಹಾರಗಳಿಲ್ಲ. ಎಲ್ಲವೂ ಸಣ್ಣ ಸಣ್ಣ ಪರಿಹಾರಗಳು. ಇದೊಂದು ಹನಿ ಹನಿಗೂಡಿಸಿ ಹಳ್ಳವನ್ನು ತುಂಬುವಂಥ ಪ್ರಯತ್ನ. ಪರಿಸರದ ಬಗೆಗಿನ ಕಾಳಜಿಯನ್ನೂ ನಾವು ತೋರಬೇಕಾದುದು ನಮ್ಮ ಬೊಗಸೆಯಿಂದಲೇ. ಸಣ್ಣದಾಗಿ ಹುಟ್ಟುವ ತೊರೆ ನದಿಯಾಗಿ ಬೆಳೆಯುವ ಕ್ರಮ ಜನಾಂದೋಲನಕ್ಕೂ ಒಪ್ಪುವಂಥದ್ದು. ಹಾಗೆಯೇ ರಚನಾತ್ಮಕ ಪ್ರಯತ್ನಗಳಿಗೂ ಅದೇ ರೂಪ. ಸಾವಿರ ಮೈಲಿಯ ಪ್ರಯಾಣ ಆರಂಭವಾಗುವುದು ಒಂದು ಹೆಜ್ಜೆಯಿಂದ. ಅದಕ್ಕೇ ಪ್ರತಿ ಪರಿಸರ ಸ್ನೇಹಿ ಪ್ರಯತ್ನಕ್ಕೂ ಮೌಲ್ಯವಿದೆ; ಯಾವುದೂ ವ್ಯರ್ಥವಲ್ಲ.
ಅರವಿಂದ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.