Teacher’s Day: ಆದರ್ಶ ಬದುಕಿಗೆ ದಾರಿ ತೋರುವ ಗುರು
Team Udayavani, Sep 5, 2024, 11:00 AM IST
ಭಾರತೀಯರಾದ ನಾವು ಗುರುಗಳನ್ನು ದೇವರೆಂದು ಪೂಜಿಸುತ್ತೇವೆ. ಅದಕ್ಕೆ ಚಿಕ್ಕದಿನಿಂದಲೇ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂದು ಶ್ಲೋಕಗಳನ್ನು ಹೇಳುತ್ತಾ ಬೆಳೆದಿದ್ದೇವೆ. ಗುರುವನ್ನು ಗೌರವದಿಂದ ನೋಡುವವರಿಗೆ ವಿದ್ಯೆ ತಾನಾಗಿ ಒಲಿಯುತ್ತದೆ.
ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಕಲಿಯುವುದಷ್ಟೇ ಎಂಬುದು ಹಲವರ ತಪ್ಪು ಕಲ್ಪನೆ. ನಮಗೆ ಗೊತ್ತಿಲ್ಲದ ವಿಷಯ, ಕೆಲಸ, ನಡೆ-ನುಡಿ, ವ್ಯಕ್ತಿತ್ವ, ಭಾವನೆ, ನೀತಿ, ನಿಯಮ, ಕ್ರಿಯೆ-ಪ್ರತಿಕ್ರಿಯೆ ಈ ಎಲ್ಲದರ ಬಗ್ಗೆ ಯಾರೇ ಕಲಿಸಿದರು ಅದು ಕೂಡ ಶಿಕ್ಷಣವೇ.
ಬಾಲ್ಯದಲ್ಲಿ ನಮಗೆ ನಡೆಯಲು, ಮಾತನಾಡಲು, ಆಟವಾಡಲು ಕಲಿಸುವ, ನಮ್ಮ ವ್ಯಕ್ತಿತ್ವವನ್ನು ರೂಪಿಸುವುದು ತಾಯಿಯಾದರೆ; ಆ ವ್ಯಕ್ತಿತ್ವದಿಂದ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಕಲಿಸಿಕೊಡುವವರು ಈ ನಮ್ಮ ಗುರುಗಳು. ಈಗ ನಮಗೆ ಅದೆಷ್ಟು ಶಿಕ್ಷಕರು? ಒಂದೊಂದು ವಿಷಯ ಕಲಿಸಲು ಒಂದೊಂದು ಶಿಕ್ಷಕರು. ಸಂಗೀತ, ಕಲೆ, ನೃತ್ಯ, ಯಕ್ಷಗಾನ ಹೀಗೆ ಎಲ್ಲ ಕಲಿಕೆಗೂ ಗುರುವಿನ ಆವಶ್ಯಕತೆ ಇದೆ.
ಹಿಂದೆ ಶಿಕ್ಷಕರನ್ನು ನೋಡಿದರೆ ವಿದ್ಯಾರ್ಥಿಗಳಿಗೆ ಅಪಾರ ಭಯ ಭಕ್ತಿ; ಆದರೆ ಇಂದಿನ ಮಕ್ಕಳು ಶಿಕ್ಷಕರೆದುರು ನಿಂತು ಎದೆ ಉಬ್ಬಿಸಿ ಮಾತನಾಡುವ, ಅವರ ಮಾತಿಗೆ ಎದುರು ಮಾತನಾಡುವುದನ್ನು ನಾವು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಮಕ್ಕಳು ತಪ್ಪು ಮಾಡಿದಾಗ ಹೊಡೆದು ಬುದ್ಧಿವಾದ ಹೇಳುವ ಕಾಲವೊಂದಿತ್ತು.
ಆದರೆ ಇಂದು ಶಿಕ್ಷಕರು ಮಕ್ಕಳನ್ನು ಮಟ್ಟಿದರೆ ಸಾಕು ಅವರ ವಿರುದ್ಧ ಪ್ರಕರಣ ದಾಖಲಾಗುವ ಪರಿಸ್ಥಿತಿ ಬಂದೊದಗಿದೆ. ಗುರುವಿಗೆ ನೀಡಬೇಕಾದ ಗೌರವವನ್ನು ಈಗಿನ ವಿದ್ಯಾರ್ಥಿಗಳು ನೀಡುತ್ತಿಲ್ಲ. ಗುರುಗಳಾದ ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ತನ್ನ ಬಲಗೈ ಹೆಬ್ಬೆರಳನ್ನು ನೀಡಿದ ಮಹಾ ಶಿಷ್ಯನಾದ ಏಕಲವ್ಯನ ಕಥೆಗಳನ್ನು ಕೇಳಿ ಬೆಳೆದ ನಾವು ಗುರು ನಿಂದನೆ ಮಾಡುವುದು ಎಷ್ಟು ಸರಿ?
ಇತ್ತೀಚಿಗೆ ಪತ್ರಿಕೆ ಒಂದರಲ್ಲಿ ಓದಿದ ಸುದ್ದಿ; ಶಾಲಾ ಬಸ್ಸುಗಳಲ್ಲಿ ಬರುವಾಗ ಸೀಟುಗಳಿದ್ದರೆ ಶಿಕ್ಷಕರು ಕುಳಿತುಕೊಳ್ಳಬಹುದು. ಇಲ್ಲದೆ ಹೋದರೆ ಶಿಕ್ಷಕರೇ ವಿದ್ಯಾರ್ಥಿಗಳಿಗೆ ಸೀಟು ಬಿಟ್ಟುಕೊಡಬೇಕು. ಹಾಗೆ ಮಾಡದೆ ಹೋದರೆ ಅದೇ ದಿನ ಸಂಜೆ ಪಾಲಕರಿಂದ ಪ್ರಾಂಶುಪಾಲರಿಗೆ ಕರೆ ಹೋಗುತ್ತದೆ. ಗುರುವನ್ನು ಉನ್ನತ ಸ್ಥಾನದಲ್ಲಿಟ್ಟ ಸಂಸ್ಕೃತಿ ನಮ್ಮದು. ಶಾಲಾ ಕಾಲೇಜು ಮುಗಿದು ಅದೆಷ್ಟೇ ವರ್ಷ ಕಳೆದರೂ ಶಿಕ್ಷಕರ ಪಕ್ಕ ಕೂರಲು ಸಂಕೋಚ ಪಡುವ ನಮ್ಮ ನಿಮ್ಮಂತವರಿಗೆ ಈ ಸುದ್ದಿ ಆಘಾತವನ್ನುಂಟು ಮಾಡುತ್ತದೆ.
ಶಾಲಾ ಬಸ್ಸಿನಲ್ಲಿ ಪುಕ್ಕಟೆಯಾಗಿ ಬರುವ ಶಿಕ್ಷಕರು ತಮ್ಮ ಮಕ್ಕಳಿಗೆ ಸೀಟು ಬಿಟ್ಟು ಕೊಡಬೇಕು ಎಂದು ಬಯಸುವ ಪಾಲಕರ ಮನಸ್ಥಿತಿ ಎಂತದ್ದಿರಬಹುದು? ಹಿಂದೆ ಹೆತ್ತವರು ಶಾಲೆಗೆ ಬಂದರೆ ಶಿಕ್ಷಕರ ಹತ್ತಿರ “ಏನಾದರೂ ಮಾಡಿ, ಬೇಕಾದರೆ ಚೆನ್ನಾಗಿ ನಾಲ್ಕು ಬಿಡಿ, ನಾವಂತೂ ಕೇಳಲು ಬರುವುದಿಲ್ಲ’ ಎಂದು ಹೇಳುತ್ತಿದ್ದರು. ಆದರೆ ಇಂದು ಲಕ್ಷ ಲಕ್ಷ ದುಡ್ಡು ಕೊಟ್ಟು ಶಾಲೆಗೆ ಸೇರಿಸುವ ಪೋಷಕರು ಶಿಕ್ಷಕರು ಎಂದರೆ ತಮ್ಮ ಮಕ್ಕಳ ಗುಲಾಮರೆಂದು ತಿಳಿದುಕೊಂಡಿರುವ ಈ ಆಧುನಿಕ ಪೋಷಕರಿಗೆ ಏನು ಹೇಳಬೇಕು ತಿಳಿಯದಾಗಿದೆ.
ಇಂದು ಶಿಕ್ಷಣ ಎನ್ನುವುದು ಒಂದು ವ್ಯಾಪಾರದಂತಾಗಿದೆ. ಲಕ್ಷ ಲಕ್ಷ ಡೊನೇಷನ್ ತೆಗೆದುಕೊಂಡು ವ್ಯವಹಾರ ಮಾಡಿದಂತಾಗಿದೆ. ಆದರೆ ಶಿಕ್ಷಕ ಮಾತ್ರ ಶಿಕ್ಷಕನಾಗಿಯೇ ಇದ್ದಾನೆ, ಎಷ್ಟೋ ಮಹಾನ್ ವ್ಯಕ್ತಿಗಳನ್ನು ಹುಟ್ಟು ಹಾಕುವ ಶಕ್ತಿ ಇರುವ ವ್ಯಕ್ತಿ ಅಂದರೆ ಅದು ಶಿಕ್ಷಕ ಮಾತ್ರ.
ಇಷ್ಟೆಲ್ಲ ಹೇಳಿದ ಮೇಲೆ ನನ್ನ ಶಿಕ್ಷಕರ ಬಗ್ಗೆ ಸ್ವಲ್ಪ ಹೇಳಬೇಕೆನಿಸುತ್ತಿದೆ. ನಮ್ಮ ಈ ಜೀವನದಲ್ಲಿ ಅದೆಷ್ಟೋ ಶಿಕ್ಷಕರು ನಮ್ಮ ತಪ್ಪುಗಳನ್ನು ತಿದ್ದಿ ತೀಡಿ ನಮ್ಮನ್ನು ಗುರಿಯೆಡೆಗೆ ಕರೆತರಲು ಪ್ರಯತ್ನಿಸುತ್ತಾರೆ. ಶಿಕ್ಷಕರೆಂದಾಗ ಮೊದಲು ನೆನಪಾಗುವುದು ಪ್ರಾಥಮಿಕ ಶಾಲಾ ಶಿಕ್ಷಕರು. ಟೀಚರೇ… ಟೀಚರೇ… ಎಂದು ಹಿಂದೆ ಹಿಂದೆ ಸುತ್ತುತ್ತಿದ್ದೆವು. ಆ ಎಲ್ಲ ನೆನಪು ಎಷ್ಟು ಸುಂದರ.
ಈ ವರ್ಷದ ನಮ್ಮ ಕಾಲೇಜಿನ ಎನ್‌ಎಸ್‌ಎಸ್ ಕ್ಯಾಂಪ್ ನನ್ನ ಸ್ಕೂಲ್‌ನಲ್ಲಿ ಆಗಿದ್ದು. ಆಗ ನನ್ನೆಲ್ಲ ಶಿಕ್ಷಕರು ಮೊದಲು ಹೇಗೆ ಪ್ರೀತಿಯಿಂದ ಮಾತನಾಡಿಸುತ್ತಿದ್ದರೋ ಈಗಲೂ ಅದೇ ಪ್ರೀತಿಯಿಂದ ಮಾತನಾಡಿಸುವುದು ನೋಡಿ ಒಮ್ಮೆ ಕಣ್ತುಂಬಿ ಬಂತು… ತಮ್ಮ ವಿದ್ಯಾರ್ಥಿಗಳ ಯಶಸ್ಸು ಅವರಿಗೆ ಎಷ್ಟು ಹೆಮ್ಮೆ ಎನ್ನುವುದು ಅವರ ಮಾತಿನಲ್ಲೇ ತಿಳಿಯುತ್ತಿತ್ತು.
ತಾಯಿಯಂತೆ ಅಕ್ಕರೆ ನೀಡಿ ಮಮತೆ ತೋರಿದ ನನ್ನ ಗುರುಗಳು ರೇಷ್ಮಾ ಶೆಟ್ಟಿ ಮ್ಯಾಮ್. ನಾನು ಡಿಗ್ರಿ ಓದುವಾಗ ನನಗೆ ಸಿಕ್ಕ ಅದೃಷ್ಟವೆಂದೇ ಹೇಳಬಹುದು. ಅಮ್ಮ ಎಂದು ಹೇಳಲೋ? ಗುರು ಎಂದು ಹೇಳಲೋ? ಗುರುವಾಗಿಯೂ ಅಮ್ಮನಾದವರು, ಗೆಳತಿಯಂತೆ ನನ್ನೆಲ್ಲ ಹಾಸ್ಯ ಹರಟೆಯಲ್ಲಿ ಭಾಗಿಯಾದವರು, ಮಗುವಿಗೆ ಕಾಳಜಿ ತೋರುವ ಹಾಗೆ ಮಮತೆ ನೀಡುವ ಮುದ್ದು ಮನಸ್ಸು.
ನನ್ನ ಪ್ರತೀ ಹೆಜ್ಜೆಯಲ್ಲೂ ಮಾರ್ಗದರ್ಶಕರಾಗಿ ನಿಂತು ಭರವಸೆ ನೀಡಿ, ಭಯ ಬಿದ್ದಾಗ ಆತ್ಮಸ್ಥೈರ್ಯ ತುಂಬಿ, ಕೈಚೆಲ್ಲಿ ಕೂತಾಗ ಸಾಧಿಸುವ ಮಾರ್ಗ ತೋರಿಸಿ, ಅರಿವಿಲ್ಲದ ವಿಷಯಗಳ ಕುರಿತು ಅರಿವು ಮೂಡಿಸಿ, ಅತ್ತಾಗ ಕಣ್ಣೊರೆಸಿ, ನಕ್ಕಾಗ ನನ್ನೊಡನೆ ನಕ್ಕು, ನನ್ನೆಲ್ಲಾ ಆಸೆ ಕನಸುಗಳಿಗೆ ಮಾರ್ಗದರ್ಶಕರಾಗಿ ನಿಂತವರು. ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಈ ಬಂಧ, ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ?
ನಿಸ್ವಾರ್ಥ ಮನಸ್ಸಿನಿಂದ ನಮ್ಮ ಏಳಿಗೆಗಾಗಿ ಶ್ರಮಿಸುವ ನಮ್ಮ ಶಿಕ್ಷಕರಿಗೆ ನಾವು ಕೊಡುವ ಉಡುಗೊರೆ ಎಂದರೆ ಅವರು ಕೊಟ್ಟ ವಿದ್ಯೆ ಬಳಸಿ ಉನ್ನತ ಸ್ಥಾನಕ್ಕೆ ಏರುವುದು. “ನನ್ನ ವಿದ್ಯಾರ್ಥಿ’ ಎಂದು ಅವರು ಹೆಮ್ಮೆಯಿಂದ ನಾಲ್ಕು ಜನರಲ್ಲಿ ಹೇಳಿಕೊಳ್ಳುವಂತೆ ಬದುಕುವುದು ಅಷ್ಟೇ. ಬದುಕಿನಲ್ಲಿ ಸರಿಯಾದ ದಾರಿ ತೋರಿದ ನನ್ನೆಲ್ಲ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
- ರಶ್ಮಿ ಉಡುಪ
ಮೊಳಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.