ಕಟ್ಟಿದ್ದು ಮುರಿದು ಬಿದ್ದಾಗಲೇ ಇರುವುದರ ದರ್ಶನ
Team Udayavani, Apr 22, 2018, 12:30 AM IST
ಒಂದಿಷ್ಟು ಒಲವು, ಪ್ರೀತಿ ದೊರೆಯಲಿ ಎಂಬ ಆಸೆಯಿಂದ ನಾವೊಂದಿಷ್ಟು ಪ್ರೀತಿ, ಒಲವುಗಳನ್ನು ಹರಿಸುತ್ತಿರುತ್ತೇವೆ. ಹಾಗೆ ಬೊಗಸೆಯಲ್ಲಿ ಸುರಿದ ಪ್ರೀತಿಗೆ ಪ್ರತಿಯಾಗಿ ಹನಿಯಷ್ಟು ಪ್ರೀತಿಯು ಜಿನುಗದಿದ್ದರೆ ಹರಿಸುವ ಪ್ರೀತಿಗೆ ಅರ್ಥವಿದೆಯೇನು?
ಮಾತೇ ಹಾಗೆ. ಹುಟ್ಟುತ್ತಲೇ ಸಾಯುತ್ತದೆ, ಸಾಯುತ್ತಲೇ ಹುಟ್ಟುತ್ತದೆ. ಆ ಕಾರಣಕ್ಕೆ ಮಾತು ನಮಗೆ ಬೇಕು. ಅದರ ಸೊಬಗಿರುವುದೇ ಅದರ ಕ್ಷಣಿಕತೆಯಲ್ಲಿ. ಹಾಗೆ ನೋಡಿದರೆ, ಹೆಚ್ಚು ಕಾಲ ಬದುಕುವ ಮಾತು ನಮಗೆ ಸಂತೋಷ ಕೊಡುವಂಥದ್ದೇನೂ ಆಗಿರುವುದಿಲ್ಲ. ನಮಗೆ ನೆನಪಲ್ಲಿರುವ ಮಾತುಗಳ ಪೈಕಿ ಹೆಚ್ಚಿನವು ನಮ್ಮನ್ನು ಅವಮಾನಿಸಿದ ಮಾತುಗಳೇ ಆಗಿರುತ್ತವೆ. ಹೊಗಳಿಕೆಗೂ ಅಂತ ದೀರ್ಘ ಆಯಸ್ಸೇನೂ ಇರುವುದಿಲ್ಲ. ಅದೇ ಅವಮಾನಿಸಿಯೋ, ಹಂಗಿಸಿಯೊ ಆಡಿದ ಮಾತು ಜೀವಮಾನ ಪೂರ್ತಿ ನೆನಪಲ್ಲಿದ್ದು ಕೊರೆಯುತ್ತಲೇ, ತಿವಿಯುತ್ತಲೇ ಉಳಿದಿರುತ್ತದೆ. ಎಷ್ಟಿದ್ದರೂ ಮಾತು “ಸತ್ಯ’ವನ್ನು ಹಿಡಿಯಲಾರದು. ಮಾತಿಗೆ ಮೀರಿದ ಸತ್ಯ ಇದೆ ಎನ್ನುತ್ತಾರಲ್ಲ ಅಥವಾ ಸತ್ಯವು ಮಾತಿಗೆ ಮೀರಿದ್ದು ಎಂದು ಹೇಳುತ್ತಾರೆ ನೋಡಿ ಹಾಗೆ. ಮಾತು ದೊಡ್ಡ ಶಕ್ತಿ ಎನ್ನುವುದೇನೋ ನಿಜ. ಈ ಲೋಕದ ಅನುಭವವನ್ನು ಗಮ್ಯವಾಗಿಸುವಲ್ಲಿ ಮಾತಿನ ಪಾತ್ರ ಅತಿ ಮಹತ್ವದ್ದು.
ಯಾವುದನ್ನೂ ಪೂರ್ತಿಯಾಗಿ ಗ್ರಹಿಸದೆ ನಾವು ಪ್ರತಿಕ್ರಿಯಿಸಲು ಶುರು ಹಚ್ಚುತ್ತೇವೆ. ವಿಷಯವನ್ನು ಗ್ರಹಿಸುವ ಗ್ರಹಣ ಶಕ್ತಿ ಹಿಂದೆಂದಿಗಿಂತಲೂ ಇಂದು ಕುಂಠಿತವಾಗಿದೆ. ಕಾರಣ ಅರಿಯದೆ ವಿರೋಧ ಪಕ್ಷಗಳಂತೆ, ವಿರೋಧಿಸುವುದೇ ಪರಮ ಕಾಯಕವೆಂದು ವಿರೋಧಿಸುತ್ತಿರುತ್ತೇವೆ. ತಾಳ್ಮೆಯನ್ನು ಅರಿಯದ ಮನಸ್ಸು ಕೇಳ್ಮೆಯ ಮನೋಭಾವವನ್ನು ಬೆಳೆಸಿಕೊಳ್ಳುವುದಾದರೂ ಎಲ್ಲಿಂದ? ಕೇಳ್ಮೆಯು ಅಜ್ಞಾನದ ಬಾಗಿಲನ್ನು ಮುಚ್ಚಿಬಿಡುತ್ತದೆ. ಹೆಚ್ಚು ಹೆಚ್ಚು ಕೇಳ್ಮೆಯು ನಮ್ಮೊಳಗಿನ ಅಂಧಕಾರವನ್ನು ಸರಿಸಿ ಬೆಳಕನ್ನು ಹರಿಸುತ್ತದೆ. ನಮಗೆ ಸಿಟ್ಟುಗೊಳ್ಳಲು ಕಾರಣಗಳೇ ಬೇಕಿಲ್ಲ. ಸಿಟ್ಟಾಗುವುದು ನಮ್ಮ ಅರ್ಹತೆ ಮತ್ತು ಅಗತ್ಯ ಎಂದು ನಾವು ಭಾವಿಸಿದಂತಿದೆ. ಸಾತ್ವಿಕವಲ್ಲದ ಸಿಟ್ಟಿಗೆ ಈ ಜಗತ್ತಿನಲ್ಲಿ ಬೆಲೆಯಿಲ್ಲ ಎನ್ನುವುದರ ಅರಿವಿರಬೇಕು. ಭುಸುಗುಟ್ಟಲು ಸಿಟ್ಟಿರಬೇಕು, ಕಚ್ಚಲಲ್ಲ. ಸಿಟ್ಟು ನೆತ್ತಿಗೇರುವುದು ಎಷ್ಟು ಅಪಾಯವೋ, ಅಷ್ಟೇ ಅಪಾಯ ಸಿಟ್ಟಿಗೆ ಅವಕಾಶವನ್ನು ಕಲ್ಪಿಸಿಕೊಡುವುದು. ನಮ್ಮದಲ್ಲದ ಕ್ರಿಯೆಗೆ ಪ್ರತಿಕ್ರಿಯಿಸುವುದು ಸಲ್ಲ. ಅದೇ ರೀತಿ, ಕ್ರಿಯೆ ನಮ್ಮದೇ ಆಗಿದ್ದರೂ ಸಹ ವಿಕೋಪಕ್ಕೆ ಎಳೆದೊಯ್ಯುವುದೂ ಸಹ್ಯವಲ್ಲ. ಕ್ರಿಯೆಗಳು ನಮಗೆ ಸಂಬಂಧಪಟ್ಟದ್ದೇ ಅಲ್ಲವೇನೊ ಎಂದು ನಿರ್ಲಿಪ್ತರಾಗುವುದಿದೆ ನೋಡಿ ಅದಕ್ಕಿಂತ ದೊಡ್ಡ ಪ್ರತ್ಯಾಸ್ತ್ರ ಇನ್ನೊಂದಿಲ್ಲ. ಯಾವಾಗ ನಾವದನ್ನು ಸ್ವೀಕರಿಸದೆ ಹೋಗುತ್ತೇವೋ ಅದು ಮತ್ತೆ ತಿರುಗಿ ಅವರನ್ನೇ ಸೇರುತ್ತದೆ ಮತ್ತು ಸೇರಬೇಕು ಕೂಡ. ಅದು ಪ್ರಕೃತಿ ನಿಯಮ. ಹಾಗಾಗಿ ನಮ್ಮ ಸಿಟ್ಟಿಗೂ ಒಂದು ಬೆಲೆಯಿರಬೆಕು, ನೆಲೆಯಿರಬೇಕು.
ಒಂದಿಷ್ಟು ಒಲವು, ಪ್ರೀತಿ ದೊರೆಯಲಿ ಎಂಬ ಆಸೆಯಿಂದ ನಾವೊಂದಿಷ್ಟು ಪ್ರೀತಿ, ಒಲವುಗಳನ್ನು ಹರಿಸುತ್ತಿರುತ್ತೇವೆ. ಹಾಗೆ ಬೊಗಸೆಯಲ್ಲಿ ಸುರಿದ ಪ್ರೀತಿಗೆ ಪ್ರತಿಯಾಗಿ ಹನಿಯಷ್ಟು ಪ್ರೀತಿಯು ಜಿನುಗದಿದ್ದರೆ ಹರಿಸುವ ಪ್ರೀತಿಗೆ ಅರ್ಥವಿದೆಯೇನು? ಬೆಳೆಯುತ್ತಾ ಬೆಳೆಯುತ್ತಾ ನಾವು ಕಳೆದು ಹೋಗುವುದು ಅಂದರೆ ಇದೇನಾ…? ಅಧಿಕಾರವಿದ್ದಲ್ಲಿ ಪ್ರೀತಿ ಇರಲಾರದು. ಪ್ರೀತಿ ಇದ್ದಲ್ಲಿ ಅಧಿಕಾರಕ್ಕೆ ಬೆಲೆಯಿಲ್ಲ. ಇನ್ನೊಬ್ಬರ ಬದುಕಿನ ಪುಟದೊಳಗೆ ಕಾವನ್ನು ಪಡೆಯುವ ನವಿಲುಗರಿ ನಾವಾಗುವುದು ಇಷ್ಟವಿಲ್ಲ ಎಂದಾದಲ್ಲಿ, ಇನ್ನೊಂದು ಪುಸ್ತಕವನ್ನು ಹುಡುಕುತ್ತಿರಬೇಕು. ಹೀಗೆ, ಬೇರೆಯವರ ಬದುಕಿನ ವಿನ್ಯಾಸದಲ್ಲಿ ನಾವು ಬೇಡದ ಚುಕ್ಕೆಯಾಗಿದ್ದರೆ ಸದ್ದಿಲ್ಲದೆ ಸರಿದುಬಿಡಬೇಕು. ಇದರಿಂದ ಬದುಕು ಅಂದಗೆಡುವ ಬದಲು ಅಂದಗೊಳ್ಳುವುದೇ ಹೆಚ್ಚು. ಪ್ರೀತಿಸುವುದಕ್ಕಿಂತಲೂ ಮಿಗಿಲಾಗಿ ಪ್ರೀತಿಸಲು ಬೇಕಿರುವ ಪ್ರೀತಿಯ ಮನಸ್ಥಿತಿಯು ಹುಟ್ಟಬೇಕು. ಗೊತ್ತಿಲ್ಲದೆ ಹುಟ್ಟಿದ ಪ್ರೀತಿಯು ನಮ್ಮೊಳಗೆ ಆಳವಾಗಿ ಬೇರೂರಿ ಜೀವಂತವಾಗಿರುತ್ತದೆ. ಪ್ರೀತಿಯ ಜ್ವಾಲೆಯದು. ಮತ್ತೆ ಎಂದೋ ಧುತ್ತನೆ ಕಿಡಿ ಹಾರಿಸಿ ನಮ್ಮೊಳಗದು ಜ್ವಲಿಸುತ್ತಿರುತ್ತದೆ. ನಾವು ಪ್ರೀತಿಸಿದವರು ಮತ್ತು ನಮ್ಮನ್ನು ಪ್ರೀತಿಸಲ್ಪಟ್ಟವರು ಹೃದಯ ಕಮಲ ದಳಗಳಂತಿರಬೇಕು. ಪ್ರೀತಿಯೊಂದು ನಮ್ಮಲ್ಲಿ ಹುಟ್ಟಿ ಪ್ರಕಟಗೊಳ್ಳುವ ದಿವ್ಯಾಗ್ನಿ ಚೇತನ. ಅಗ್ನಿಯು ಯಾವತ್ತೂ ಊದ್ವìಮುಖೀ. ಉರಿಯುತ್ತಿರುವ ಕೊರಡನ್ನು ಕೆಳಮುಖವಾಗಿಸಿದರೂ ಅದು ಉರಿಯುವುದು ಮೇಲ್ಮುಖವಾಗಿಯೇ. ಸುಡಲು ಒಂದು ಕಿಡಿ ಸಾಕು. ಅದೇ ಒಂದು ಕಿಡಿಯಿಂದ ಸಹಸ್ರ ದೀಪಗಳನ್ನು ಬೆಳಗಿಸಬಹುದು. ಅಂತಹ ಪ್ರೀತಿಯ ಅಗ್ನಿ ಹೃದಯಶಿವನಂತೆ ನಲಿಯುತ್ತಿರಬೇಕು. ಬೇಕಾದಾಗ ಆ ಪ್ರೀತಿಯನ್ನು ಅಂಗೈಯಲ್ಲಿ ಕುಳ್ಳಿರಿಸಿ ಮುದ್ದಿಸಬಹುದು. ಹಾಗೆ ಮುದ್ದಿಸುವ ಭಾಗ್ಯ ನಮ್ಮದಾಗಬೇಕು, ಅದ್ದಿಸಿಕೊಳ್ಳುವ ಭಾಗ್ಯ ಪ್ರೀತಿಯದ್ದಾಗಬೇಕು. ಪ್ರೀತಿಯು ಮೋಡವಿದ್ದಂತೆ. ಪುಟ್ಟ ಮೋಡಗಳು ಚಲಿಸುತ್ತಾ, ಚದರುತ್ತಾ ಅಲ್ಲೊಮ್ಮೆ ಇಲ್ಲೊಮ್ಮೆ ಮಳೆ ಹನಿ ಚೆಲ್ಲಿ ಮುದ್ದಿಸುವವರಿಗೊಂದು ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಪ್ರೀತಿಯ ಮಳೆಯಲ್ಲಿ ಕೆಲವರು ನೆನೆಯುತ್ತಾರೆ ಇನ್ನು ಕೆಲವರು ಅದ್ದಿಸಿಕೊಳ್ಳುತ್ತಾರೆ. ನಮ್ಮ ಯೋಚನೆಗಳೂ ಚದರುವ ಮೋಡಗಳಂತೆ. ನಮ್ಮ ಈ ಕ್ಷಣದ ಯೋಚನೆಯನ್ನು ನಾವು ದಾಖಲಿಸದೆ ಹೋದರೆ ಮುಂದೆ ಅವೇ ಚಿಂತನೆಗಳು ಇನ್ಯಾರದ್ದೋ ಹಾಳೆಯಲ್ಲಿ ದಾಖಲಾಗಿಬಿಡುತ್ತವೆ. ಅರೆ, ನನ್ನೊಳಗಿನ ಮಾತನ್ನೇ ಅಲ್ಲಿ ದಾಖಲಿಸಿದ್ದಾರಲ್ಲ ಎನ್ನುವ ಅಚ್ಚರಿ, ಕೌತುಕ ನಮ್ಮದಾಗುತ್ತದೆ. ಪ್ರೀತಿಯೂ ಹಾಗೆ. ಇನ್ಯಾರದ್ದೋ ನೆಲಕ್ಕೆ ಹನಿಸುವ ಮೊದಲು ನಮ್ಮ ನೆಲದಲ್ಲದು ಹನಿಸಿ ಬಿಡಬೇಕು. ಅವುಗಳಿಗಾಗಿ ನೋಡುತ್ತಿರಬೇಕು, ಕಾಯುತ್ತಿರಬೇಕು. ಕಾಣದ ಸುಖದ ಹಂಬಲದೊಳಗಿನ ಕಾಯುವಿಕೆಯಲ್ಲೂ ಒಂದು ಸುಖವಿದೆ. ಎಲ್ಲರ ನೋವುಗಳನ್ನು ಹೊತ್ತುಕೊಂಡವನ ಬೆನ್ನು ಬಾಗಿದ್ದರೂ ಹೊರೆ ಹೊರುವ ಕಾಯಕವು ನಿಲ್ಲುವುದಿಲ್ಲ. ಉಂಡ ಆ ನೋವುಗಳನ್ನು ಮರೆಯುವುದೂ ಇಲ್ಲ. ಹಾಗಂತ ತಿರುಗಿ ನೋಯಿಸುವ ಹೃದಯಹೀನನಂತೂ ಮೊದಲೇ ಅಲ್ಲ. ಇರುವುದೊಂದೇ ಭಾವ – ಇವ ನಮ್ಮವ, ಇವ ನಮ್ಮವ, ಇವ ನಮ್ಮವ!
ಮುರಿದ ಮನಸ್ಸುಗಳನ್ನು ಜೊತೆಯಾಗಿಸಿ, ಬಾಗಿದ ಜೀವಕ್ಕೆ ಬೆನ್ನೆಲುಬಾಗಿ, ಕದಡಿದ ಬದುಕನ್ನು ತಿಳಿಯಾಗಿಸಿ, ಬೆಳ್ಳಿಯ ಗೆರೆಯೊಂದು ಮುಂದೊಂದು ದಿನ ಮೂಡಬಹುದು ಎಂಬ ಹಂಬಲದಲ್ಲಿ ಹಾದಿಯನ್ನು ಸವೆಯುತ್ತಿರಬೇಕು. ಸವೆದು ಮಾಸಿದ ಬದುಕಿನ ಪಯಣದಲ್ಲಿ ನಮ್ಮ ಜೊತೆ ಇದ್ದ ಮತ್ತು ಇದ್ದೂ ಇಲ್ಲದವರಂತಿದ್ದ ರಕ್ತ ಹಂಚಿಕೊಂಡವರು, ಬೆನ್ನಿಗೆ ಬಂದವರು, ಕೈ ಹಿಡಿದವರು, ಜೊತೆಯಾಗಿ ಬಂದವರು, ಉಪಯೋಗಿಸಿಕೊಂಡು ಎಸೆದವರು, ಬದುಕಿನ ಅಸಂಗತ ಅಧ್ಯಾಯಗಳನ್ನು ಮತ್ತು ಮಾಡದೇ ಇರುವ ಕೆಲಸಗಳನ್ನು ದಾಖಲಿಸಿಕೊಂಡವರು, ಕಿಚ್ಚು ನಮ್ಮನ್ನೇ ಸುಡುತ್ತದೆ ಎಂಬ ಅರಿವಿದ್ದೂ ಕಿಚ್ಚಿಟ್ಟವರು-ಕಿಚ್ಚನ್ನು ಹಚ್ಚಿಸಿಕೊಂಡವರು…ಒಂದೋ ಎರಡೋ! ಅಂತ್ಯವಿಲ್ಲದ ಕಥಾನಕಗಳೆಲ್ಲ ಬಾಳ ಬದುಕಿಗೆ ನೊಂದ ದೀಪವಾಗಿ ಬೆಳಕನ್ನು ಚೆಲ್ಲುತ್ತಲೇ ಇರುತ್ತವೆ. ನಿಜಾರ್ಥದಲ್ಲಿ ನಮ್ಮವರು ಯಾರೆಂದು ತೋರಿಸಿ ಕೊಡುವ ಬದುಕಿನ ಅನೂಹ್ಯ ಶಕ್ತಿಗೆ ಧನ್ಯರಾಗಬೇಕು. ನಮ್ಮವರ ಮುಖದಲ್ಲಿ ನೋವಿನ ಸುಕ್ಕು ಮೂಡದಂತೆ, ಮಂದಹಾಸ ಕುಂದದಂತೆ, ಮತ್ತದೇ ನೊಂದ ದೀಪದ ಬೆಳಕಲ್ಲಿ ನಮ್ಮವರ ಮುಖವನ್ನು ಎವೆಯಿಕ್ಕದೆ ನೋಡುತ್ತಾ, ಅದು ಹೊರೆ ಹೊರುವ ಪರಮ ಕಾಯಕವೆಂದು ನಂಬಿ ಕಾಪಿಡುತ್ತಾ ಬರಬೇಕು. ಕೇಳುವ ಸೌಜನ್ಯವನ್ನು ಬಯಸುವ ಮನಸ್ಸುಗಳು ಹೇಳುವ ಸೌಜನ್ಯವನ್ನು ಮೊದಲು ತೋರಬೇಕು. ಅಷ್ಟಕ್ಕೂ ಒಂಟಿಯಾಗಿ ಬಂದ ಜೀವವು ಜಂಟಿಯಾಗುವುದು ಎನ್ನುವು ದೊಂದು ಭ್ರಮೆ ಮಾತ್ರ. ಎಲ್ಲಾ ಜೀವಿಗಳೂ ಆಂತರ್ಯದಲ್ಲಿ ಒಂಟಿಯೇ. ಬಾಹ್ಯದಲ್ಲಿ ಮಾತ್ರ ಅದಕ್ಕೆ ಜಂಟಿಯ ಹೊದಿಕೆ. ಅಸ್ತಿತ್ವದ ಉಳಿವಿಗಾಗಿ ಒಂಟಿ ಎಂಬ ಭೂತವನ್ನು ಬೆದರು ಬೊಂಬೆಯನ್ನಾಗಿಸಿಕೊಳ್ಳುವ ನಮ್ಮವರು ಒಂದು ಕಡೆಯಾದರೆ, ಜಂಟಿಯಾಗಿ ದ್ದುಕೊಂಡೇ ಮಾನಸಿಕ ಯುದ್ಧ ಸಾರುವ ಸಮರವೀರರು ಇನ್ನೊಂದು ಕಡೆ. ಒಂಟಿ-ಜಂಟಿ ಎಂಬ ಜಗ್ಗಾಟದಲ್ಲಿ ಮಂಕಾಗಬಾರದು ನೋಡಿ ನಮ್ಮ ನಡುವಿನ ನಂಟು. ಸಾಧ್ಯವಾದರೆ ಸುರಿಯಬೇಕು ಒಂದಿಷ್ಟು ಪ್ರೀತಿಯ ಅಂಟು.
ಪರಸ್ಪರರ ಜೊತೆಗೆ ಒಗ್ಗಿಕೊಳ್ಳಲಾಗದ ಕಷ್ಟ-ನಷ್ಟ. ಶ್ರಮಪಟ್ಟು ಒಗ್ಗಿಸಿಕೊಳ್ಳುವ ಪ್ರಯತ್ನ. ದಿನವಿಡೀ ಇದರದ್ದೇ ಪಾರುಪತ್ಯ. ಇಳಿ ಸಂಜೆಯ ತಾಣದಲ್ಲಿ ಕಮರಿಹೋದ ದಿನದ ಕ್ಷಣಿಕ ಸುಖಗಳಿಗೂ ಇಲ್ಲ ವೇದಿಕೆ. ಉಳಿಯುವುದು ಮನದಲ್ಲಿ ಕೇವಲ ಕಳೆದ ಆ ಸುಖದ ಕ್ಷಣಗಳ ಹೊದಿಕೆ. ಅರಳಿದ ಬದುಕು ಕಮರಲೇಬೇಕು. ಕಮರಿದ ಬದುಕು ಪುನಃ ಚಿಗುರಲೇಬೇಕು. ನೀರೆರೆಯುವ ಕಾಯಕವು ನಿರಂತರವಾಗಿ ಜರಗುತ್ತಲೇ ಇರಬೇಕು. ಹಾಗಾಗಿ ಎರಯಬೇಕು ನೀರನ್ನು ಆಸೆಯ ಹೂವು ಅರಳುವವರೆಗೂ. ಬತ್ತಿದ ನದಿಯಲ್ಲೂ ಮತ್ತೆ ನೀರು ಹರಿಯುತ್ತದೆ. ಇಲ್ಲಿ ಗೆದ್ದವರಾರೂ ಗೆಲ್ಲಲೇ ಇಲ್ಲ, ಸೋತವರಾರೂ ಸೊಲಲೇ ಇಲ್ಲ! ಆದ್ದರಿಂದಲೇ ಇಲ್ಲಿಯ ನೋವು ಲೌಕಿಕವೂ, ಆಧ್ಯಾತ್ಮಿಕವೂ ಮತ್ತು ಕಲಾತ್ಮಕವೂ ಹೌದು.
ಸಂತೋಷ್ ಅನಂತಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.