ವಿದಾಯ ಹೇಳಿದ ವಿದ್ವನ್ಮಣಿ
Team Udayavani, Oct 12, 2019, 6:10 AM IST
ಜುಗಲ್ ಬಂದಿ ಪರಿಕಲ್ಪನೆ ವಿಶೇಷವಾದುದು. ಅದರಲ್ಲೂ ಕದ್ರಿಯವರು ವಿಶಿಷ್ಟ ವಾದ್ಯಗಳೊಂದಿಗೆ ಇದನ್ನು ಪ್ರಯತ್ನಿಸಿದ್ದರು. ಬಹಳ ಮುಖ್ಯವಾಗಿ ಕದ್ರಿಯವರು ಪ್ರಸಿದ್ಧ ಸಂಗೀತಗಾರರಾದ ಬಾನ್ಸುರಿ ವಾದಕ ರೋಣು ಮಜುಂದಾರ್, ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ ಹಾಗೂ ಮತ್ತೂಬ್ಬ ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿಯವರೊಂದಿಗೆ ನಡೆಸಿದ ಪ್ರಯೋಗಗಳು ವಿಶೇಷವಾಗಿ ಉಲ್ಲೇಖೀಸಬೇಕಾದದ್ದು.
ಮನಸನ್ನು ಹೀಗೆಲ್ಲ “ಕದ್ರಿ’, ಮತ್ತೇಕೆ ಹೋದ್ರಿ?
– ಪ್ರವೀಣ್ ಗೋಡ್ಖಿಂಡಿ
ನನ್ನನ್ನೂ, ಕದ್ರಿಯವರನ್ನು ಬೆಸೆದಿದ್ದು “ರಾಗ್ ರಂಗ್’ನ ಜುಗಲ್ಬಂದಿ. 1998ರ ಹೊತ್ತು ಅದು. ಆಗ ಪ್ರವೀಣ್ ಗೋಡ್ಖಿಂಡಿ ಎಂದರೆ, ಯಾರಿಗೆ ತಾನೇ ಗೊತ್ತಿತ್ತು? ಸಾಮಾನ್ಯನಲ್ಲಿ ಸಾಮಾನ್ಯನಾಗಿದ್ದ ನಾನು ಒಂದು ರಾಗ ಸಂಯೋಜಿಸಿ, ಅವರ ಮುಂದೆ ನಿಂತಿದ್ದೆ. ಅದನ್ನು ಅವರು ತನ್ಮಯರಾಗಿ ಕೇಳಿ, ಸ್ಯಾಕ್ಸೋಫೋನ್ ವಾದನದಲ್ಲಿ ನುಡಿಸಿ, ಜುಗಲ್‌ಬಂದಿಯ ರೆಕಾರ್ಡಿಂಗ್‌ಗೆ ಒಪ್ಪಿದ್ದೇ ನನ್ನ ಪುಣ್ಯ. ಬೆಂಗಳೂರಿನ ಅರವಿಂದ್ ಸ್ಟುಡಿಯೊದಲ್ಲಿ ರೆಕಾರ್ಡಿಂಗ್ ಆಗಿತ್ತು. ಆ ಮೂಲಕ ನನ್ನನ್ನು ಬೆಳಕಿಗೆ ತರುವ ದೊಡ್ಡ ಕೆಲಸವನ್ನು ಕದ್ರಿಯವರು ಮಾಡಿದ್ದರು. ಇಂದು ಮದುವೆ ಮನೆಗಳಲ್ಲಿ, ಶುಭ ಸಮಾರಂಭಗಳಲ್ಲಿ “ರಾಗ್ ರಂಗ್’ ಮೊಳಗುತ್ತಲೇ ಇದೆ. ಕದ್ರಿ ಅವರು ಜೀವಂತವಿದ್ದು, ನಮಗೆ ಚೈತನ್ಯ ತುಂಬಲು ಆ ಧ್ವನಿಯೇ ಸಾಕೇನೋ.
ಉಸಿರನ್ನು ಸುಸ್ವರವಾಗಿ ರೂಪಿಸುತ್ತಿದ್ದ, ಸ್ಯಾಕ್ಸ್‌ಫೋನ್ ಎಂದರೆ ಅವರಿಗೆ ಜೀವ. ಪುಟ್ಟ ಮಗುವಿನಂತೆ ಅದನ್ನು ಪ್ರೀತಿಸುವುದನ್ನು ಕಂಡಿದ್ದೆ. ಅದನ್ನು ಅವರು ನೆಲದ ಮೇಲೆ ಇಟ್ಟಿದ್ದನ್ನು ನಾನು ನೋಡಿಯೇ ಇರಲಿಲ್ಲ. ಕಾರಿನಲ್ಲಿ ಕುಳಿತಾಗಲೂ, ಆ ವಾದ್ಯ ತೊಡೆಯ ಮೇಲೆಯೇ ಇರಬೇಕಿತ್ತು. ಅವರಿಗೆ ಸನ್ಮಾನದ ರೂಪದಲ್ಲಿ ಬಂದಂಥ ಬಂಗಾರದ ಪದಕ, ನಾಣ್ಯಗಳನ್ನು ತಮ್ಮ ವಾದ್ಯಕ್ಕೆ ಜೋಡಿಸಿ, ಅಲಂಕರಿಸಿಕೊಂಡು, ಅದು ಝಳಪಿಸುವುದನ್ನೇ ಆನಂದಿಸುತ್ತಿದ್ದರು.
ಸ್ಯಾಕ್ಸೋಫೋನ್ ಬರೀ ವಾದ್ಯ. ಅದಕ್ಕೆ ಸಿಂಗಾರ ಇರುವುದಿಲ್ಲ. ಆದರೆ, ಕದ್ರಿಯವರ ವಾದ್ಯ ಹಾಗಲ್ಲ, ಅದು ಆಭರಣ ಸುಂದರಿ. ಆಶೀರ್ವಾದವಾಗಿ ಬಂದ ಪದಕಗಳನ್ನು, ವಾದ್ಯಕ್ಕೆ ಧಾರೆಯೆರೆದರೇನೇ ಅವರಿಗೆ ಸಮಾಧಾನ. ಹಾಗೆ ಪದಕ ಪೋಣಿಸಿಯೇ, ಆ ವಾದ್ಯ ಕೈಭಾರಗೊಳ್ಳುತ್ತಿತ್ತು.
ದೇವರ ಕೃಪಾಕಟಾಕ್ಷದಿಂದಲೇ ನಾನು ವಾದ್ಯ ನುಡಿಸ್ತಾ ಇದ್ದೇನೆ ಎನ್ನುವ ಭಾವ ಅವರದ್ದು. ವಾದ್ಯದ ಮೂತಿಗೆ ತುಟಿಯೊಡ್ಡುವ ಮುನ್ನ, ಕಣ್ಮುಚ್ಚಿ ಇಷ್ಟ ದೇವರನ್ನು ನೆನೆದರೆ, ಅವರಿಗೇನೋ ನಿರಾಳತೆ. ಆರಂಭದಲ್ಲಿ ಅಮೆರಿಕದ ಸ್ಯಾಕ್ಸೋಫೋನ್‌ಗಳನ್ನು ಬಳಸಿ, ನಂತರ ಇಲ್ಲಿನ ಬ್ಯಾಂಡ್‌ಗಳಿಂದಲೇ ವಾದ್ಯಗಳನ್ನು ತರಿಸಿಕೊಳ್ಳುತ್ತಿದ್ದರು.
ವಯಸ್ಸಾಗುತ್ತಾ ಬಂದ ಹಾಗೆ, ಅವರು ಚಿಕ್ಕ ಸ್ಯಾಕ್ಸೋಫೋನುಗಳನ್ನು ನುಡಿಸುತ್ತಿದ್ದುದನ್ನು ನೋಡಿದ್ದೆ. ಇಲ್ಲಿಯತನಕ ಯಾರೂ ನುಡಿಸದ ಸಂಗತಿಗಳನ್ನು, ಪ್ರಯೋಗಿ ಸಿದ್ದು ಅವರ ಬಹುದೊಡ್ಡ ಕೊಡುಗೆ. ಕರ್ನಾಟಕ ಸಂಗೀತದಲ್ಲಿ ಇಲ್ಲದೇ ಇರುವ ಪಟ್‌ದೀಪ್, ಚಂದ್ರಕೌನ್ಸ್‌ನಂಥ ಹಿಂದೂಸ್ಥಾನಿ ರಾಗಗಳನ್ನೂ ಅವರು ನುಡಿಸಿ, ವೇದಿಕೆಯಲ್ಲಿ ಅಚ್ಚರಿ ಮೂಡಿಸಿದ್ದನ್ನು ಮರೆಯಲಾರೆ.
ಅವರೊಂದಿಗೆ ಸುಮಾರು 250ಕ್ಕೂ ಹೆಚ್ಚು ಜುಗಲ್‌ಬಂದಿ ಕಾರ್ಯಕ್ರಮಗಳಲ್ಲಿ ಜತೆಯಾಗಿದ್ದೇನೆ. ತುಂಬಾ ಎನರ್ಜಿಟಿಕ್ ಮನುಷ್ಯ. ಕೊನೆ ಯವರೆಗೂ ಜೋಶ್ ಕಳಕೊಳ್ಳದೇ, ರಂಜಿಸುತ್ತಿದ್ದ ಗಾರುಡಿಗ. ಪಾಶ್ಚಾತ್ಯ ವಾದ್ಯದಲ್ಲಿ, ಕರ್ನಾಟಕ ಸಂಗೀತದ ಗಮಕಗಳನ್ನು, ಆ ರಾಗಗಳನ್ನು ನುಡಿಸುವುದೇ ಒಂದು ಸವಾಲು. ಪಕ್ಕದಲ್ಲಿನ ಮೃದಂಗ, ತಬಲದ ಲಯದೊಟ್ಟಿಗಿನ ಅವರ ಲೆಕ್ಕಾಚಾರ ನನಗೆ ತುಂಬಾ ಹಿಡಿಸುತ್ತಿತ್ತು. ಇದನ್ನೇ ನುಡಿಸಿ, ಅದನ್ನೇ ನುಡಿಸಿ ಅಂತ ಹೇಳುತ್ತಿರಲಿಲ್ಲ. “ನಾನು ಹೆಚ್ಚು, ನೀನು ಕಮ್ಮಿ’ ಎನ್ನುವ ಧೋರಣೆ ಅವರಿಗಿರಲಿಲ್ಲ.
“ಜುಗಲ್ ಬಂದಿಯಲ್ಲಿ ಹಾಗಾದರೆ, ಅದು ಜಗಳ್ ಬಂದಿ ಆಗುತ್ತೆ’ ಅನ್ನೋರು. ನಾನಲ್ಲದೆ, ಮುಂಬೈನಿಂದ ಬೇರೆ ಕಲಾವಿದರು ಬಂದರೆ, ಅವರ ಮನಸ್ಸಿನಲ್ಲಿ ಸ್ವಲ್ಪ ಕಸಿವಿಸಿ ಮೂಡುತ್ತಿತ್ತು; “ಹೇಗೆ ನುಡಿಸ್ತಾನೋ ಏನೋ’ ಎನ್ನುವ ದಿಗಿಲು. ನಾನಿದ್ದರೆ, ಅವರಿಗೇನೋ ಧೈರ್ಯ. ಯಾವತ್ತೂ ಮುಂಚಿತವಾಗಿ ಚರ್ಚಿಸಿ, ರಿಹರ್ಸಲ್ ನಡೆಸಿ, ನಾವು ವೇದಿಕೆ ಹತ್ತುತ್ತಿರಲಿಲ್ಲ. ಎಷ್ಟೋ ಸಲ ಕಾರ್ಯಕ್ರಮದ ಸ್ಥಳದಲ್ಲೇ ಸಂಯೋಜನೆ ಹೇಳುತ್ತಿದ್ದರು. ಅವರ ಆ ರಾಗ ಅಚ್ಚರಿಗಳೇ, ನನಗೆ ಪಾಠ. ಕೆಲವರು ಹೇಳ್ಳೋರು, “ಕದ್ರಿ ಅವರು ತುಂಬಾ ದುಬಾರಿ ವಾದಕ’ ಅಂತ. ಇದನ್ನು ನಾನು ಒಪ್ಪುವುದಿಲ್ಲ.
ಅವರು ಹಾಗೆ ಆಗಲು ಕೆಲವು ಕಾರಣಗಳಿದ್ದವು. ಆರಂಭದಲ್ಲಿ ಅವರು ಸ್ಯಾಕ್ಸೋಫೋನ್ ಹಿಡಿದ ದಿನಗಳಲ್ಲಿ, ಕರೆದ ಕಾರ್ಯಕ್ರಮಗಳಿಗೆಲ್ಲ ಹೋಗುತ್ತಿದ್ದರಂತೆ. ಎಷ್ಟೋ ಸಲ ಕಛೇರಿ ಮುಗಿಯುವ ಮೊದಲೇ, ಸಂಘಟಕರು ನಾಪತ್ತೆ ಆಗಿ, ಈ ಮನುಷ್ಯನಿಗೆ ಹಣ ಕೊಡಬೇಕಲ್ಲ ಅಂತ ತಪ್ಪಿಸಿಕೊಳ್ಳುತ್ತಿದ್ದರಂತೆ. ಅಂಥ ಹಲವು ಘಟನೆಗಳ ನೋವನ್ನು ನುಂಗಿದ ಜೀವ ಅದಾಗಿತ್ತು. ನಂತರದ ದಿನಗಳಲ್ಲಿ ಸಂಘಟಕರೊಂದಿಗೆ ಅಗ್ರಿಮೆಂಟ್ ಮಾಡಿಕೊಂಡು, ಕಾರ್ಯ ಕ್ರಮಕ್ಕೆ ಇಂಥ ಕಾರೇ ಬೇಕು ಎನ್ನುವ ನಿರ್ಬಂಧಗಳನ್ನೂ ಅವರು ಹೇರುತ್ತಿದ್ದರು.
ರಾಜಗಾಂಭೀರ್ಯ, ಅವರ ಇನ್ನೊಂದು ಸಂಪತ್ತು. ದೇವಸ್ಥಾನದ ಎಲ್ಲೋ ಮೂಲೆಯಲ್ಲಿ ಕುಳಿತು ವಾದ್ಯ ನುಡಿಸುತ್ತಿದ್ದ ಬಡತನದ ದಿನಗಳನ್ನು ದಾಟಿ ಬಂದಿದ್ದರಿಂದ, ಅವರು ರಾಜನಂತೆ ಬದುಕಲು ಹಂಬಲಿಸುತ್ತಿದ್ದರೇನೋ. ಅವರ ಕೊರಳು- ಬೆರಳುಗಳಲ್ಲಿ ಬಂಗಾರ ದೊಡವೆಗಳೇ ಎದ್ದು ಕಾಣುತ್ತಿದ್ದವು.
ತುಂಬಾ ಗ್ರ್ಯಾಂಡ್ ಆಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ದುಬಾರಿ ಪರ್ಫ್ಯೂಮನ್ನು ಪೂಸಿಕೊಳ್ಳುತ್ತಿದ್ದರು. ಒಳ್ಳೊಳ್ಳೆಯ, ಮಿಂಚುವಂಥ ಬಟ್ಟೆಗಳನ್ನೇ ತೊಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರಿಗೆ ಮೊಬೈಲ್ ಬಗ್ಗೆ ಸಾಕಷ್ಟು ಹುಚ್ಚು ಆವರಿಸಿತ್ತು. ಹೊಸ ಮೊಬೈಲ್ ಬಗ್ಗೆ ಗಂಟೆಗಟ್ಟಲೆ ಮಾತಾಡೋರು. ಅವರ ಬ್ಯಾಗ್ ನಲ್ಲಿ ನಾಲ್ಕೈದು ಮೊಬೈಲುಗಳು ಇರುತ್ತಿದ್ದವು.
ವೇದಿಕೆಯಲ್ಲಿ ನಿರೂಪಕಿ ಇವರ ಹೆಸರನ್ನು ಹೇಳುವಾಗ, ಕಡ್ಡಾಯವಾಗಿ ಬಿರುದು ಬಾವಲಿಗಳನ್ನೂ ಪ್ರಸ್ತಾಪಿಸಬೇಕಿತ್ತು. “ಪದ್ಮಶ್ರೀ ಕಲೈಲಾಮಣಿ ಡಾ. ಕದ್ರಿ ಗೋಪಾಲನಾಥ್’ ಅಂತಲೇ ಹೇಳಬೇಕಿತ್ತು. ಅಕಸ್ಮಾತ್ ಇವುಗಳಲ್ಲಿ ಒಂದು ಪದವನ್ನೇನಾದರೂ ಆಕೆ ಕೈಬಿಟ್ಟರೆ, ವೇದಿಕೆ ಬದಿಯಿಂದಲೇ ಅಧಿಕಾರಯುತವಾಗಿ ಪ್ರಶ್ನಿಸುತ್ತಿದ್ದರು.
“ಸರ್ಕಾರ ಕೊಟ್ಟಿರೋ ಬಿರುದನ್ನು ಹೇಳ್ಳೋಕೆ ನಿಮ್ಗೇನು ಪ್ರಾಬ್ಲಿಂ?’ ಎಂದು ಹೇಳುತ್ತಲೆ, ಕೊನೆಯಲ್ಲಿ ಮುಗುಳು ಬಿರಿಯುತ್ತಾ, ಸ್ನೇಹಜೀವಿಯೂ ಆಗುತ್ತಿದ್ದರು. ದಶಕಗಟ್ಟಲೆ ಒಂದು ವಾದ್ಯಕ್ಕೆ ಜೀವನವನ್ನು ಅರ್ಪಿಸಿ, ಪದ್ಮಶ್ರೀಯನ್ನೂ ಮುಡಿಗೇರಿಸಿ ಕೊಂಡ ಕಲಾವಿದನಿಗೆ, ರಾಜಮರ್ಯಾದೆ ಸಿಗಲೇಬೇಕು ಎನ್ನುವುದು ಅವರ ವಾದ. ಕೇವಲ ಅವರೊಬ್ಬರಿಗಲ್ಲ, ಇಡೀ ತಂಡಕ್ಕೆ ಮರ್ಯಾದೆ ಸಿಗಬೇಕು ಅಂತ ಬಯಸುತ್ತಿದ್ದರು. ಇಂಗ್ಲಿಷ್‌ನಲ್ಲಿ “ಕಮಾಂಡ್ ರೆಸ್ಪೆಕ್ಟ್’ ಎನ್ನುತ್ತಾರಲ್ಲ, ಅದಕ್ಕೆ ಕನ್ನಡದ ಅನ್ವರ್ಥಕ ಕದ್ರಿಯವರು!
ಕದ್ರಿಯವರು ಇನ್ನಿಲ್ಲವೆಂಬ ಸುದ್ದಿ ಕೇಳಿದಾಗಿನಿಂದ, ನನ್ನೊಳಗೆ “ರಾಗ್ ರಂಗ್’ ಮೊಳಗುತ್ತಿದೆ. ನಮ್ಮ ಮನಸ್ಸೋಳಗೆ ಅವರ ಕಛೇರಿ ಮುಗಿಯುವಂಥದ್ದಲ್ಲ. “ಜುಗಲ್ ಬಂದಿ ಮಾಡೋಣ ಬಾ’ ಎನ್ನುತ್ತಾ, ಅದೇ ರಾಜಗಾಂಭೀರ್ಯದಲ್ಲೇ ಆಹ್ವಾನಿಸುತ್ತಿದ್ದಾರೆ ಅಂತನ್ನಿಸುತ್ತಿದೆ.
ದೇವರ ಪೂಜೆ ತಪ್ಪಿಸದ ಭಕ್ತ
– ಶ್ರೀಧರ್ ಸಾಗರ, ಕದ್ರಿಯವರ ಶಿಷ್ಯ
ಕದ್ರಿ ಗೋಪಾಲನಾಥ್ ಅವರು ನನಗೆ ಗುರುಗಳಷ್ಟೇ ಅಲ್ಲ; ತಂದೆ, ಒಳ್ಳೆಯ ಸ್ನೇಹಿತ, ಮಾರ್ಗದರ್ಶಿ ಎಲ್ಲವೂ ಆಗಿದ್ದರು. 1996ರ ಅಕ್ಟೋಬರ್ 22ರಿಂದ ನಾನು ಅವರ ಒಡನಾಡಿ. ಮದ್ರಾಸ್‌ನಲ್ಲೂ ಅವರ ಜೊತೆಗೆ ಕೆಲವು ವರ್ಷಗಳನ್ನು ಕಳೆದಿದ್ದೇನೆ. ನಂತರ, ಬೆಂಗಳೂರಿಗೆ ಬಂದು ನೆಲೆಸಿದೆ. ಗುರುಗಳು ಬೆಂಗಳೂರಿಗೆ ಕಛೇರಿ ಕೊಡಲು ಬಂದಾಗೆಲ್ಲಾ ಅವರ ಜೊತೆಗೇ ಇರುತ್ತಿದ್ದೆ. ಮಹಾನ್ ದೈವಭಕ್ತರಾಗಿದ್ದ ಅವರು, ಒಂದು ದಿನವೂ ದೇವರ ಪೂಜೆ ಮಿಸ್ ಮಾಡಿದವರಲ್ಲ.
ಅವರು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ದೇವರ ಪೂಜೆ ಮಾಡಲು ಬೇಕಾದ ಹೂವು-ಹಣ್ಣು, ಕರ್ಪೂರ, ಊದಿನಕಡ್ಡಿ ಎಲ್ಲವನ್ನೂ ಒದಗಿಸುವುದು ನಮ್ಮ ಕೆಲಸ. ಅವರಿಗೂ ಅಷ್ಟೆ; ಶಿಷ್ಯರೆಂದರೆ ಅಪಾರ ಪ್ರೀತಿ. ಮೇ ತಿಂಗಳಲ್ಲಿ ರಾಮಸೇವಾ ಮಂಡಳಿಯ ಸಭಾ ಕಛೇರಿಗೆಂದು ಬೆಂಗಳೂರಿಗೆ ಬಂದಿದ್ದರು. ಅದೇ ಅವರ ಕೊನೆಯ ಸಭಾ ಕಛೇರಿ.
ಆಗ ಯಾರೋ ಫೋನ್ ಮಾಡಿ, “2020ರ ಮೇನಲ್ಲಿ ಕಾರ್ಯಕ್ರಮ ನಡೆಸಿಕೊಡುವಿರಾ?’ ಅಂತ ಕೇಳಿದರು. ಆಗಲೇ ಅವರ ಆರೋಗ್ಯ ಕ್ಷೀಣಿಸುತ್ತಿದ್ದುದರಿಂದ ಅದನ್ನವರು ಒಪ್ಪಿಕೊಳ್ಳಲಿಲ್ಲ. ಜೂನ್‌ನಲ್ಲಿ ಅಮೆರಿಕದಲ್ಲೊಂದು ಕಛೇರಿ ನಡೆಸಬೇಕಿತ್ತು. ಅದನ್ನೂ ಒಪ್ಪಿಕೊಳ್ಳಲಿಲ್ಲ. ಇಲ್ಲದಿದ್ದರೆ, ಯಾರೇ ಕರೆದರೂ ಇಲ್ಲ ಎನ್ನುತ್ತಿರಲಿಲ್ಲ ಗುರುಗಳು. ಅವರೊಬ್ಬ ಯುಗಪುರುಷ. ಅವರು ಮತ್ತೂಮ್ಮೆ ಹುಟ್ಟಿ ಬರಲಿ ಎಂಬುದೇ ಶಿಷ್ಯಕೋಟಿಯ ಆಶಯ.
ಶತಮಾನದ ವ್ಯಕ್ತಿ
– ಪಂಡಿತ್ ನರಸಿಂಹಲು ವಡವಾಟಿ
ಕದ್ರಿ ಮತ್ತು ನಾನು ಒಂದೇ ತಾಯಿಮಕ್ಕಳಂತೆ ಇದ್ದವರು. ಇಬ್ಬರಿಗೂ ಪರಸ್ಪರ ಬಿಟ್ಟಿರಲಾರದ ಪ್ರೀತಿ. ನಾನು ಕದ್ರಿಯವರಿಗಿಂತ ಹಿರಿಯನಾದರೂ ಇಬ್ಬರೂ ಪರಸ್ಪರ ಅಣ್ಣಾ ಎಂದೇ ಸಂಬೋಧಿಸುತ್ತಿದ್ದೆವು. ಕಛೇರಿ ಇದ್ದರೂ ಇಲ್ಲದಿದ್ದರೂ ಫೋನ್‌ನಲ್ಲಿ ಮಾತನಾಡಿ ಕ್ಷೇಮ ಸಮಾಚಾರ ವಿಚಾರಿಸುವ ಸಹೃದಯರು. ಚೆನ್ನೈನಲ್ಲಿ ನಡೆದ ನಮ್ಮ ಒಂದು ಕಛೇರಿಗೆ ಉಪರಾಷ್ಟ್ರಪತಿ ಬಿ.ಡಿ. ಜತ್ತಿಯವರು ಆಗಮಿಸಿದ್ದರು.
ಅದೊಂದು ಅತ್ಯುತ್ತಮ ಕಛೇರಿ. ಎಲ್ಲರೂ ಅಭಿನಂದಿಸಿದ್ದು ಇನ್ನೂ ನನ್ನ ನೆನಪಿನಾಳದಲ್ಲಿದೆ. ನನಗೆ ಕದ್ರಿಯವರ ಮೇಲೆ ಸದಾ ಗೌರವ ಇರಲು ಕಾರಣ ಅವರ ಅಪಾರ ವಿದ್ವತ್ತು. ಅವರಿಗೂ ಅದೇ ಭಾವನೆಯಿತ್ತು. ಅವರು ಸಹವಾದಕರನ್ನು ಬೆಂಬಲಿಸುತ್ತಿದ್ದ ರೀತಿ ಅನನ್ಯ. ಆಗಾಗ್ಗೆ ಹಾಸ್ಯ ಮಾಡೋರು. ಇಂದು ವಿಶ್ವಮಟ್ಟದಲ್ಲಿ ಅವರ ಹೆಸರು ರಾರಾಜಿಸಲು ಸಂಗೀತದ ಮೇಲಿದ್ದ ಅವರ ಶ್ರದ್ಧೆಯೇ ಕಾರಣ. ನಮ್ಮಲ್ಲಿನ ಪ್ರಮುಖ ಸಾಮ್ಯತೆ ಎಂದರೆ ವಿದೇಶಿ ವಾದ್ಯದಲ್ಲಿ ಭಾರತೀಯ ಸಂಗೀತವನ್ನು ನುಡಿಸಬೇಕು, ಅತ್ಯುನ್ನತ ನುಡಿಸಾಣಿಕೆಗೆ ಒಗ್ಗಿಸಬೇಕೆಂದಿದ್ದ ಛಲ.
ಸ್ಯಾಕ್ಸೋಫೋನ್-ಕ್ಲಾರಿಯೋನೆಟ್ ಜುಗಲ್‌ಬಂದಿಯ ನುಡಿಸಾಣಿಕೆಯ ವಿಶಿಷ್ಟತೆಯಿಂದ ನಮ್ಮ ಕಛೇರಿಗಳು ಹೆಸರಾಗಿವೆ. ನಮ್ಮ ಆಲೋಚನೆ ಮಾದರಿಯನ್ವಯ ರಾಗ, ಆಲಾಪಗಳಿಗೆ ಹೊಂದಾಣಿಕೆಯಾಗುವಂತೆ ಅಳವಡಿಸಿದ್ದೇವೆ. ಆರಂಭದ ದಿನಗಳಲ್ಲಿ ನಾನು ಮತ್ತು ಕದ್ರಿಯವರು ಹಿಂದೂಸ್ಥಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಳನ್ನು ಕಲಿತವರು. ನಾವು ಹಾಡು ಕಲಿತು ಬಳಿಕ ಅದನ್ನು ವಾದ್ಯದ ಮೂಲಕ ಪಳಗಿಸಿಕೊಂಡಿದ್ದೇವೆ. ಆಲಾಪನೆ, ಸ್ವರಗಳ ಏರಿಳಿತ-ಪ್ರತಿಯೊಂದನ್ನೂ ಶಬ್ದ ಶಬ್ದದಂತೆ ಅಭ್ಯಸಿಸಿದ್ದೇವೆ.
ನಮ್ಮಿಬ್ಬರ ಜುಗಲ್‌ಬಂದಿ ಕಛೇರಿ ಮೊತ್ತ ಮೊದಲು ಬೆಂಗಳೂರಿನ ಗುರುನಾನಕ್ ಭವನದಲ್ಲಿ ನಡೆದಿತ್ತು. ನಮಗೆ ಜುಗಲ್‌ಬಂದಿ ಮಾಡುವುದು ಕಷ್ಟವಿತ್ತು. ಕಾರಣ ವಾದ್ಯಗಳ ಹೊಂದಾಣಿಕೆ, ರಾಗಗಳ ಹೊಂದಾಣಿಕೆ. ಇದಕ್ಕಾಗಿ ಒಂದು ತಿಂಗಳಿಗೂ ಹೆಚ್ಚು ಅಭ್ಯಾಸ ಬೇಕಿತ್ತು. ಕಛೇರಿಗೂ ಮೊದಲು ನಾವು ಪ್ರತಿ ತಾಳಗಳನ್ನು ಗುರುತಿಸಿ, ಹೋಲುವ ಭಾಗಗಳನ್ನು ಅಭ್ಯಸಿಸಿ ಬಳಿಕ ಹಿಂದೂಸ್ಥಾನಿ-ಕರ್ನಾಟಕ ಸಂಗೀತವನ್ನು ಒಂದಾಗಿ ಪ್ರಸ್ತುತ ಪಡಿಸುವ ಪ್ರಯತ್ನ ನಡೆಯಿತು. ಅದು ಮೆಚ್ಚುಗೆಗೂ ಪಾತ್ರವಾಯಿತು.
ಅವರದ್ದು ಮಂಗಳೂರು, ನಾವು ರಾಯಚೂರಿನವರು. ಆದರೆ ನಮ್ಮನ್ನು ಬೆಸೆದದ್ದು ವಾದ್ಯ ಮತ್ತು ಸಂಗೀತ. ನಿರಂತರ ಅಭ್ಯಾಸ, ಆತ್ಮೀಯತೆಯೇ ನಮ್ಮ ಜುಗಲ್‌ಬಂದಿ ಯಶಸ್ವಿಯಾಗಲು ಕಾರಣ.
ವಿದೇಶಿ ವಾದ್ಯಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸುವುದು ತಿಳಿದಷ್ಟು ಸುಲಭವಲ್ಲ. ಕೀ ಸಿಸ್ಟಂ ವಾದ್ಯಗಳಲ್ಲಿ ಆಲಾಪನೆ, ರಾಗಗಳನ್ನು ಹೊಮ್ಮಿಸುವುದು ಕಷ್ಟ. ಕೀ ಒತ್ತಿ, ಇನ್ನೊಂದು ತೆರೆಯುವಷ್ಟರಲ್ಲಿ ರಾಗಗಳಲ್ಲಿ ವ್ಯತ್ಯಾಸವಾಗುತ್ತಿತ್ತು. ಇದೊಂದು ರೀತಿ ಹುಲಿ ಪಳಗಿಸಿದಂತೆ. ಶಾಸ್ತ್ರೋಕ್ತವಾಗಿ ನುಡಿಸುವಾಗ ವಿದೇಶಿ ವಾದ್ಯ ನಿಭಾಯಿಸುವುದು ಕಷ್ಟ. ಅದು ಶಾಸ್ತ್ರೀಯಕ್ಕೆ ಮಾಡಿಸಿದ್ದಲ್ಲ. ಸಾಮಾನ್ಯ ಮನರಂಜನೆ, ಲೈಟ್ ಮ್ಯೂಸಿಕ್‌ಗಳಿಗೆ ಮಾಡಿದವುಗಳು.
ಪಾಶ್ಚಾತ್ಯರಲ್ಲಿ ನಮ್ಮ ರೀತಿಯ ಆಲಾಪನೆ, ರಾಗ ವಿಸ್ತಾರ ಇಲ್ಲ. ಆದರೂ ನಾವು ಅದನ್ನು ಇಲ್ಲಿಗೆ ತಂದು ಶಾಸ್ತ್ರೋಕ್ತವಾಗಿ ಜನರಿಗೆ, ಅದರಲ್ಲೂ ಸಂಗೀತ ದಿಗ್ಗಜರು ಒಪ್ಪುವಂತೆ ಮಾಡಬೇಕಿದ್ದರೆ ಒಂದು ಜನ್ಮ ಪೂರ್ತಿ ಪರಿಶ್ರಮ ಪಡಬೇಕು. ಅಂತಹ ಛಲವನ್ನು, ಆದರ್ಶವನ್ನು ತೋರಿಸಿದವರಲ್ಲಿ ಕದ್ರಿಯವರೂ ಒಬ್ಬರು. ಈಗ ಶಿಷ್ಯಂದಿರು ನಮ್ಮಲ್ಲಿದ್ದರೂ ವಿದೇಶಿ ವಾದ್ಯಗಳಲ್ಲಿ ಅಷ್ಟೊಂದು ಪಳಗಿದವರಿಲ್ಲ. ಆ ನಿಟ್ಟಿನಲ್ಲಿ ಹೊಸ ತಲೆಮಾರನ್ನು ಸೃಷ್ಟಿಸಲಾದರೂ ಕದ್ರಿಯವರು ಇನ್ನೂ ಒಂದು ಹತ್ತುವರ್ಷ ಬಾಳಬೇಕಿತ್ತು ಎಂದೆನಿಸುತ್ತದೆ. ಅವರೊಂದಿಗಿನ ಬಾಂಧವ್ಯ ಎಂದಿಗೂ ಮರೆಯಲಾಗದ್ದು. ಪರಮಾತ್ಮ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
ಹೆಂಚಿನ ಪುಟ್ಟ ಮನೆಯಲ್ಲೇ ಅರಳಿದ ಪ್ರತಿಭೆ
– ನಾ.ದಾಮೋದರ ಶೆಟ್ಟಿ
ಕದ್ರಿ ಗೋಪಾಲನಾಥ್ ಹಾಗೂ ನನ್ನದು ಸುಮಾರು 40 ವರುಷಗಳ ಒಡನಾಟ. ಹಾಗೆಂದ ಮಾತ್ರಕ್ಕೆ ನಾನು ಸದಾ ಅವರ ಪಕ್ಕದಲ್ಲಿರುತ್ತಿದ್ದೆ ನೆಂದು ಅರ್ಥವಲ್ಲ. ಯಾವಾಗ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಸ್ಯಾಕ್ಸೋಫೋನ್ ಕಲಾ ವಿದರಾಗಿ ಜಿಗಿದರೋ ಅವರನ್ನು ನಾನು ಕಾಣುತ್ತಿದ್ದುದು ಮಂಗಳೂರಿಗೆ ಬಂದಾಗಲೇ. ಆಗಲೂ ಅಷ್ಟೆ, ಅವರ ಪ್ರಿಯ ಗುರುಗಳಾದ ವಿದ್ವಾನ್ ಗೋಪಾಲಕೃಷ್ಣ ಅಯ್ಯರ್ ಅವರ ಬಳಿಗೆ ಮೊದಲ ಭೇಟಿ. ಅವರಿಂದ ಹೊಸತೊಂದು ರಾಗವನ್ನು ಕಲಿತುಕೊಳ್ಳುತ್ತಿದ್ದರು. ಪ್ರತಿರಾಗವನ್ನೂ ಅವರು ಕರ್ನಾಟಕ ಸಂಗೀತಕ್ಕೆ ಅಷ್ಟು ಸುಲಭದಲ್ಲಿ ಒಗ್ಗದ ಸ್ಯಾಕ್ಸೋಫೋನಿಗೆ ಒಗ್ಗಿಸಿಕೊಳ್ಳುತ್ತಿದ್ದರು.
ನಿತ್ಯವೂ ಮುಂಜಾನೆ ಸ್ನಾನ, ಪ್ರಾರ್ಥನೆ ಇತ್ಯಾದಿ ಕರ್ಮಗಳನ್ನು ಮುಗಿಸಿ ಶಿಸ್ತಿನ ವಿದ್ಯಾರ್ಥಿಯಂತೆ ಕುಳಿತು ಸುಮಾರು ಮೂರು ಗಂಟೆ ಗಳ ಕಾಲ ಸ್ಯಾಕ್ಸೋಫೋನ್ ಅಭ್ಯಾಸ ಮಾಡುತ್ತಿದ್ದರು. ಆತ್ಮೀಯ ಬಳಗ ದವ ರಾರೂ ಆ ಹೊತ್ತಿನಲ್ಲಿ ಅವರನ್ನು ಮಾತನಾಡಿಸುತ್ತಿರಲಿಲ್ಲ. ಯಾವುದೇ ಕಾರ್ಯಕ್ರಮಕ್ಕೂ ಅವರು ಕಠಿಣ ಪೂರ್ವತಯಾರಿ ನಡೆಸುತ್ತಿದ್ದರು.
ನಾಗಸ್ವರ ವಾದಕರಾದ ತಂದೆಯವರ ಪ್ರೇರಣೆಯಿಂದ ಸ್ಯಾಕ್ಸೋಫೋನಿಗೆ ಬಂದ ಗೋಪಾಲನಾಥರು ಬಾಲ್ಯದ ಕಡು ಬಡತನವನ್ನು ಲೆಕ್ಕಿಸದೆ ಕದ್ರಿ ದೇವಾಲಯದ ಸುರಂಗದ ನೀರನ್ನು ಹೊಟ್ಟೆ ತುಂಬಾ ಕುಡಿದು ವಾದ್ಯ ಊದುತ್ತಿದ್ದರು. ಲಾರಿಗೆ ಮಣ್ಣು ಹೊತ್ತೋ ಬೀಡಿ ಕಟ್ಟಿಯೋ ಚಿಲ್ಲರೆ ಸಂಪಾದನೆ ಮಾಡಿ, ಮಿಕ್ಕ ಹೊತ್ತಿನಲ್ಲಿ ವಾದ್ಯದೊಂದಿಗೆ ಸರಸ ವಿರಸವನ್ನಾಡುತ್ತಿದ್ದರು.
ಕದ್ರಿಯಲ್ಲಿದ್ದ ಅವರ ಹೆಂಚಿನ ಪುಟ್ಟಮನೆಯಲ್ಲಿ ಕುಳಿತು ರಾತ್ರಿಯಿಡೀ ಸ್ಯಾಕ್ಸೋಫೋನ್ ಊದುತ್ತಿದ್ದಾಗ ಅಕ್ಕಪಕ್ಕದ ಮನೆಯವರು ತಮ್ಮ ನಿದ್ರೆಗೆ ಅಡಚಣೆಯೆಂದು ಆ ಹೆಂಚಿನ ಮನೆಗೆ ಕಲ್ಲುತೂರಿ ಅವರನ್ನು ಓಡಿಸಲೆತ್ನಿಸುತ್ತಿದ್ದರು. ಅಷ್ಟಾಗಿಯೂ ಛಲಬಿಡದೆ ಸುಮಾರು ಇಪ್ಪತ್ತು ವರ್ಷಗಳ ಕಾಲ ನಿರಂತರ ಅಭ್ಯಾಸ ನಡೆಸಿ ಪಾಶ್ಚಾತ್ಯ ವಾದ್ಯವನು ಕರ್ನಾಟಕ ಸಂಗೀತಕ್ಕೆ ಒಗ್ಗಿಸಿ ಅಂತಹ ಒಂದು ಪರಂಪರೆಯನ್ನೇ ನಿರ್ಮಿಸಿ ಛಲದಂಕಮಲ್ಲನೆನಿಸಿಕೊಂಡರು.
ಖ್ಯಾತ ಮೃದಂಗ ವಿದ್ವಾನ್ ಟಿ.ವಿ.ಗೋಪಾಲಕೃಷ್ಣನ್ (ಮೃದಂಗ), ಕು| ಕನ್ಯಾಕುಮಾರಿ (ವಯೋಲಿನ್), ರಾಜಶೇಖರ್ (ಮಾರ್ಷಿಂಗ್), ವಿನಾಯಕರಾಮ್ (ಘಟಂ) ಮುಂತಾದ ಶಕ್ತ ಕಲಾವಿದರ ಸಾಂಗತ್ಯ ಅವರಿಗೆ ಒದಗಿ ಬಂತು. ಅದೊಂದು ಪ್ರಖ್ಯಾತ ಕಲಾವಿದರ ತಂಡವಾಗಿ ಜಗತ್ತನ್ನೇ ಸೂರೆಗೈದಿತು. ಕದ್ರಿಯವರು ವಿದೇಶಗಳಲ್ಲಿ ಅಲ್ಲಿನ ಪ್ರಖ್ಯಾತ ಕಲಾವಿದರೊಂದಿಗೆ ಜಾಸ್ ಮ್ಯೂಸಿಕ್, ಫ್ಯೂಷನ್ ಮೊದಲಾದವುಗಳಲ್ಲಿ ಜುಗಲ್ಬಂದಿಯಾಡಿ ಭಾರತದ ಕೀರ್ತಿಯನ್ನು ಮುಗಿಲೆತ್ತರಕ್ಕೆ ತಂದರು. ಕರ್ನಾಟಕದಲ್ಲಿ ಪ್ರವೀಣ್ ಗೋಡ್ಖಿಂಡಿ, ನರಸಿಂಹಲು ವಡವಾಟಿ ಮುಂತಾದವರೊಂದಿಗಿನ ಜುಗಲ್ ಬಂದಿಗಳಿಗೆ ನಾವು ಎಷ್ಟೋಬಾರಿ ಸಾಕ್ಷಿಯಾಗಿದ್ದೇವೆ.
ತಮಿಳುನಾಡು ಅವರ ಪ್ರಿಯವಾದ ಸಂಗೀತಕಾರ್ಯ ಕ್ಷೇತ್ರ. ಒಮ್ಮೆ ಕದ್ರಿಯವರೊಂದಿಗೆ ಕೊಯಂಬುತ್ತೂರಿಗೆ ಹೋಗಿದ್ದೆ. ಆಗಿನ್ನೂ ಕದ್ರಿಯವರು ನಲವತ್ತರ ಯುವಕ. ಅವರು ಕಾರಿನಿಂದಿಳಿಯುತ್ತಿದ್ದಂತೆ ಹೈಕೋರ್ಟ್ ನ್ಯಾಯಾಧೀಶರು, ಅಲ್ಲಿನ ಪ್ರಸಿದ್ಧ ದೇವಳದ ಟ್ರಸ್ಟಿಗಳು ಮೊದಲಾದವರು ಕದ್ರಿಯವರ ಕಾಲಿಗೆ ದುರುದುರನೆ ಬಿದ್ದು ನಮಸ್ಕರಿಸುತ್ತಿದ್ದರು. ಆಗಲೇ ಹಿತ್ತಲ ಗಿಡದಂತಿದ್ದ ಕದ್ರಿಯವರು ವಿರಾಟ್‌ರೂಪಿಯಾಗಿ ನನ್ನ ಕಣ್ಣಿಗೆ ಕಾಣಿಸಿದ್ದು. ಬೆಂಗಳೂರಿಗೆ ಬಂದಾಗ ಅವರು ತಂಗುತ್ತಿದ್ದ ನ್ಯೂ ಮಾಡರ್ನ್ ಹೋಟೆಲಿಗೆ ಅವರ ಭಕ್ತರು, ಶಿಷ್ಯರು ಬಂದು ಸಂಗೀತ ಕುರಿತಾದ ವಿಷಯಗಳನ್ನು ವಿಶದವಾಗಿ ಚರ್ಚಿಸುತ್ತಿದ್ದುದು ಕೇಳುಗರಿಗೆ ರಸದೌತಣ.
ಕದ್ರಿ ದಂಪತಿಗೆ ಮೂವರು ಮಕ್ಕಳು ಹಿರಿಯ ಗುರುಪ್ರಸಾದ್ ಉತ್ತಮ ಕೊಳಲು ವಾದಕರು. ಕರ್ನಾಟಕ – ತಮಿಳುನಾಡುಗಳ ಸಂಗೀತ ಚರಿತ್ರೆ ಕದ್ರಿ ಗೋಪಾಲನಾಥರನ್ನು ಉಲ್ಲೇಖೀಸದೆ ಮುಂದೆ ಸಾಗದು.
ರಾಗಕ್ಕೆ ರಂಗು ಹಚ್ಚಿ ಸಂಭ್ರಮಿಸಿದ ಸಂಗೀತ ಫಕೀರ
– ರೋಣು ಮಜುಂದಾರ್
“ಬಹುಶಃ ಅವರ ಸಂಗೀತದಲ್ಲಿನ ದೈವಿಕತೆಯೇ ನಮ್ಮನ್ನು ಬೆಸೆದಿಟ್ಟಿತು’
“ಈ ಮಾತನ್ನು ಸುಮ್ಮನೆ ವೈಭವೀಕರಿಸಲೆಂದು ಹೇಳುತ್ತಿಲ್ಲ. ನಿಜವಾಗಿಯೂ ಹೇಗೆ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಪಾಶ್ಚಾತ್ಯ ವಾದ್ಯವಾದ ಪಿಟೀಲನ್ನು ಹೆಸರಾಂತ ಸಂಗೀತಗಾರ ಟಿ. ಚೌಡಯ್ಯನವರು ಒಗ್ಗಿಸಿ ಪ್ರಸಿದ್ಧಿಗೆ ತಂದರೋ, ಅದೇ ರೀತಿ ಕದ್ರಿಯವರು ಮತ್ತೂಂದು ಪಾಶ್ಚಾತ್ಯ ವಾದ್ಯ ಸ್ಯಾಕ್ಸೋಫೋನ್‌ನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿದ್ದಷ್ಟೇ ಅಲ್ಲ ; ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧಿ ತಂದುಕೊಟ್ಟರು. ಇವರಿಬ್ಬರ ಶ್ರಮದಿಂದ ಭಾರತೀಯ ಸಂಗೀತ ಶ್ರೀಮಂತಗೊಂಡಿದೆ’.
“ಕದ್ರಿಯವರು ನನಗೆ ದೊಡ್ಡಣ್ಣನವರಾಗಿದ್ದರು. ಕೇವಲ ನನಗಷ್ಟೇ ಅಲ್ಲ. ನನ್ನ ಖಾಸಾ ಅಣ್ಣನಿಗೂ (ಪಂಡಿತ್ ದುರ್ಗಾಪ್ರಸಾದ್ ಮಜುಮ್‌ದಾರ್) ಅಣ್ಣನಂತಿದ್ದರು. ಇಂದಿಗೂ ಅವರ ಒಡನಾಟ ಕಣ್ಣಿಗೆ ಕಟ್ಟಿ ದಂತಿದೆ. ನನಗೂ ಮತ್ತು ಕದ್ರಿಯವರಿಗೂ ಸಂಗೀತ ಸಂಬಂಧ ಆರಂಭ ವಾ ಗಿದ್ದು ಸುಮಾರು 25 ವರ್ಷಗಳ ಹಿಂದೆ. ಜುಗಲ್‌ಬಂದಿ ಪರಿ ಕಲ್ಪನೆಯನ್ನು ಜನಪ್ರಿಯಗೊಳಿಸಲು ಪ್ರಯತ್ನ ಆರಂಭವಾದದ್ದೇ ಆಗ.
ಆಗಲೇ ಕದ್ರಿಯವರು ಸ್ಯಾಕ್ಸೋಫೋನ್ ವಾದನದಲ್ಲಿ ದಕ್ಷಿಣ ಭಾರತದಲ್ಲಿ ಹೆಸರು ಮಾಡಿದ್ದರು. ಆದರೆ ನನಗೆ ಇಂಥದೊಂದು ಪರಿಶ್ರಮದ ಪರಿಮಳವನ್ನು (ಸ್ಯಾಕ್ಸೋಫೋನ್ ನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸುವುದು ಹಾಗೂ ಅದನ್ನು ಪ್ರಸಿದ್ಧಗೊಳಿಸುವುದು ಸಾಧಾರಣ ಕೆಲಸವಲ್ಲ) ಇಡೀ ದೇಶದ ಉದ್ದಗಲಕ್ಕೂ ಪಸರಿಸಬೇಕೆಂಬ ಇಚ್ಛೆಯಿತ್ತು. ಹಾಗಾಗಿ ನಮ್ಮ ಮೊದಲ ಜುಗಲ್ ಬಂದಿ ಕಛೇರಿಯಲ್ಲೇ ಇಂಥದೊಂದು ನಿರ್ಧಾರಕ್ಕೆ ಬಂದಿದ್ದೆ. ಆದ ಕಾರಣ ಉತ್ತರ ಭಾರತದ ಹಲವೆಡೆ (ಅಹಮದಾಬಾದ್ ನ ಸಪ್ತಕ್ ಸಭಾ, ಪುಣೆಯ ಸವಾಯಿ ಗಂಧರ್ವ ಉತ್ಸವ, ಪಂಜಾಬ್‌ನ ಹರಿವಲ್ಲಭ್ ಸಂಗೀತ ಸಭಾದ ಉತ್ಸವ) ಸಂಗೀತ ಸಭಾಗಳಿಗೆ ಕದ್ರಿಯವರ ಸಾಧನೆಯನ್ನು ಪರಿಚಯಿಸಲು ಪ್ರಯತ್ನಿಸಿದೆ. ಇದರಿಂದ ಸಾಕಷ್ಟು ಕಛೇರಿಗಳು ಸಿಕ್ಕವು, ಸಂಗೀತ ರಸಿಕರೂ ಮೆಚ್ಚಿ ಹರಸಿದರು. ನಮ್ಮ ಜೋಡಿ ಬಹಳ ಪ್ರಸಿದ್ಧವಾಯಿತು. ಇದರರ್ಥ ನಾನು ಕದ್ರಿಯವರಿಗೆ ಉಪಕಾರ ಮಾಡಿದೆ ಎಂದು ದೊಡ್ಡಸ್ಥಿಕೆಯಿಂದ ಹೇಳುತ್ತಿಲ್ಲ. ಒಬ್ಬರ ಪರಿಶ್ರಮ ಮತ್ತು ಪ್ರತಿಭೆಯನ್ನು ಗೌರವಿಸಬೇಕು ಎನಿಸಿತ್ತು. ಅದು ನನ್ನ ಕರ್ತವ್ಯವೂ ಸಹ. ಅದನ್ನಷ್ಟೇ ಮಾಡಿದೆ.
ನನ್ನ ಮೊದಲ ಮಾತೇ ಇಂದಿಗೂ ಕದ್ರಿಯವರೊಂದಿಗಿನ ಸಂಬಂಧವನ್ನು ಹಸನಾಗಿಟ್ಟಿರುವುದು. ನಾನೂ ದೈವಿಕತೆಯನ್ನು ಸಂಗೀತದಲ್ಲಿ ಹುಡುಕುವವ. ಅವರೂ ಸಹ. ಹಾಗಾಗಿ ನಮ್ಮ ಯಾವುದೇ ಕಛೇರಿಯ ಮೊದಲು ಪರಸ್ಪರ ಕುಳಿತು ಚರ್ಚಿಸಿಕೊಳ್ಳುತ್ತಿದ್ದೆವು. ಇದು ಸಮನ್ವಯ ಸಾಧನೆಗಾಗಿ. ಈ ಸಮನ್ವಯತೆಯೇ ನಮ್ಮ ಕಛೇರಿಗಳನ್ನು ಯಶಸ್ವಿಗೊಳಿಸಿದ್ದು.
ಕಛೇರಿಯಲ್ಲಿ ತನ್ನೊಂದಿಗಿನವರನ್ನೂ ಬೆಳೆಸುವ ಗುಣ ಹಾಗೂ ಅವಕಾಶ ಕಲ್ಪಿಸುವ ಮನೋಭಾವ ಕದ್ರಿಯವರಲ್ಲಿತ್ತು. ಸಹವಾದಕರ ಪ್ರತಿಭಾ ಪ್ರದರ್ಶನವನ್ನೂ ಪ್ರೋತ್ಸಾಹಿಸುತ್ತಿದ್ದರು. ಜುಗಲ್ ಬಂದಿ ಕಛೇರಿಗಳಲ್ಲಿ ತಮ್ಮದೇ ಸಾಹಸ ಮೆರೆಯಲು ಹೋಗದೇ ತನ್ನೊಂದಿಗಿನ ಕಲಾವಿದನ ಪ್ರತಿಭೆಗೆ ಗೌರವ ನೀಡುತ್ತಿದ್ದರು. ಹಾಗಾಗಿ ಸಂಗೀತ ಪ್ರೇಮಿಗಳಿಗೆ ಒಳ್ಳೆಯ ರಸಾನುಭವ ಸಿಗಲು ಸಾಧ್ಯವಾಗುತ್ತಿತ್ತು. ನನ್ನ ಅನಿಸಿಕೆಯಲ್ಲಿ ಜುಗಲ್ ಬಂದಿಯಲ್ಲಿ ಪರಸ್ಪರ ಇಬ್ಬರಲ್ಲೂ ಕೊಡು-ಕೊಳ್ಳುವ ಮನೋಭಾವ ಇರದಿದ್ದರೆ ಆ ಕಛೇರಿ ಸೋತಂತೆಯೇ. ಕದ್ರಿಯವರೊಂದಿಗಿನ ಯಾವ ಕಛೇರಿಯಲ್ಲೂ ಅಂಥ ಅನುಭವ ದೊರೆತಿಲ್ಲ.
ರಾಗಕ್ಕೆ ರಂಗು ಹಚ್ಚಿ ಸಂಭ್ರಮಿಸಿದ ಒಬ್ಬ ಸಂಗೀತ ಫಕೀರ ಹೊರಟು ಹೋಗಿದ್ದಾನೆ. ನಾನೂ ಮತ್ತು ಅವರು ಒಟ್ಟಿಗೆ 2018ರ ಮೈಸೂರು ದಸರಾ ಉತ್ಸವದಲ್ಲಿ ನುಡಿಸಿದ್ದೆವು. ಒಂದು ತಿಂಗಳ ಹಿಂದೆಯೂ ಕುಶಲೋಪರಿ ವಿಚಾರಿಸಿದ್ದೆ. ಆರೋಗ್ಯದಿಂದ ಇದ್ದೇನೆ ಎಂದಿದ್ದರು. ಈಗ ಅಚಾನಕ್ ಆಗಿ ನಿಧನ ಹೊಂದಿರುವುದು ಆಘಾತ ತಂದಿದೆ. ಒಬ್ಬ ಸಂಗೀತಗಾರ ಮತ್ತೆ ಬರಬಹುದು, ಆದರೆ ಕದ್ರಿಯಂಥವರು ತೀರಾ ಅಪರೂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ
ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.