ಎಕನಾಮಿಕ್ಸ್ ಪ್ರೊಫೆಸರ್ ಗಳ ಮಗ ಅರ್ಥಶಾಸ್ತ್ರದಲ್ಲಿ ನೊಬೆಲ್ ಗೆದ್ದ
Team Udayavani, Oct 14, 2019, 4:59 PM IST
ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿರುವ ಅಭಿಜಿತ್ ಬ್ಯಾನರ್ಜಿ ಅವರು ಭಾರತೀಯ ಸಂಜಾತ ಎನ್ನುವುದು ಭಾರತೀಯರಾದ ನಮಗೆಲ್ಲಾ ಹೆಮ್ಮೆಯ ವಿಚಾರ. ಸದ್ಯ ಅಮೆರಿಕಾ ಪೌರತ್ವವನ್ನು ಹೊಂದಿ ಅಲ್ಲಿಯೇ ವಾಸವಾಗಿರುವ ಅಭಿಜಿತ್ ಅವರು 1961ರಲ್ಲಿ ಮಹಾರಾಷ್ಟ್ರದ ಧುಲೆಯಲ್ಲಿ ಜನಿಸಿದರು.
ಅಭಿಜಿತ್ ಅವರ ತಾಯಿ ನಿರ್ಮಲಾ ಬ್ಯಾನರ್ಜಿ ಅವರು ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಷಿಯಲ್ ಸ್ಟಡೀಸ್ ನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರು ಇನ್ನು ಅಭಿಜಿತ್ ತಂದೆ ದೀಪಕ್ ಬ್ಯಾನರ್ಜಿ ಅವರು ಕೊಲ್ಕೊತ್ತಾದಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿದ್ದರು. ಹೀಗೆ ಅರ್ಥಶಾಸ್ತ್ರ ಹಿನ್ನಲೆಯ ತಂದೆ-ತಾಯಿಗಳ ಮಗ ತಾನೂ ಒಬ್ಬ ಅರ್ಥಶಾಸ್ತ್ರಜ್ಞನಾಗಿ ಇದೀಗ ವಿಶ್ವದ ಬಹುದೊಡ್ಡ ಗೌರವವಾಗಿರುವ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅಭಿಜಿತ್ ಅವರು ಮಹಾರಾಷ್ಟ್ರದಲ್ಲಿ ಜನಿಸಿದರೂ ಅವರ ಶಿಕ್ಷಣವೆಲ್ಲಾ ಕೊಲ್ಕೊತ್ತಾದಲ್ಲೇ ನಡೆಯಿತು. ಇಲ್ಲಿನ ಸೌತ್ ಪಾಯಿಂಟ್ ಸ್ಕೂಲ್ ಮತ್ತು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದ ಅಭಿಜಿತ್ ಇಲ್ಲಿ 1981ರಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎಸ್. ಪದವಿಯನ್ನು ಪಡೆದುಕೊಂಡರು. ಬಳಿಕ ದೆಹಲಿಯ ಜವಹರಲಾಲ್ ವಿಶ್ವವಿದ್ಯಾನಿಲಯದಿಂದ 1983ರಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪೂರ್ತಿಗೊಳಿಸಿದರು.
ಬಳಿಕ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆಯಲು ಅಮೆರಿಕಾದಲ್ಲಿರುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತೆರಳಿದ ಅಭಿಜಿತ್ ಅವರು ಅಲ್ಲಿ 1988ರಲ್ಲಿ ‘ಮಾಹಿತಿ ಅರ್ಥಶಾಸ್ತ್ರದ ಕುರಿತಾಗಿರುವ ಪ್ರಬಂಧಗಳು’ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ.
ಅರ್ಥಶಾಸ್ತ್ರದಲ್ಲಿನ ಸಾಮಾನ್ಯ ಸಂಬಂಧಗಳನ್ನು ಕಂಡುಕೊಳ್ಳಲು ಫೀಲ್ಡ್ ಎಕ್ಸ್ ಪೆರಿಮೆಂಟ್ ವಿಧಾನಕ್ಕೆ ಅಭಿಜಿತ್ ಅವರು ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ಅಭಿವೃದ್ಧಿ ಅರ್ಥಶಾಸ್ತ್ರವು ಅಭಿಜಿತ್ ಅವರ ಪ್ರಮುಖ ಅಧ್ಯಯನ ಮತ್ತು ಸಂಶೋಧನಾ ವಿಷಯವಾಗಿದೆ. ಈ ವಿಚಾರದಲ್ಲಿ ಅಭಿಜಿತ್ ಅವರು ಅವರ ಪತ್ನಿ ಎಸ್ತರ್ ಡಫ್ಲೋ, ಮಿಶೆಲ್ ಕ್ರೆಮೆರ್, ಜಾನ್ ಎ. ಲಿಸ್ಟ್ ಮತ್ತು ಸೆಂಥಿಲ್ ಮುಳ್ಳಯ್ಯನಾಥನ್ ಜೊತೆಯಲ್ಲಿ ಕಳೆದ ಹಲವಾರು ದಶಕಗಳಿಂದ ಕಾರ್ಯನಿರತರಾಗಿದ್ದಾರೆ.
ಅರ್ಥಶಾಸ್ತ್ರದಲ್ಲಿ ಅಭಿಜಿತ್ ಅವರ ಸಾಧನೆ ಸಂಶೋಧನೆಗಳಿಗೆ 2004ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಫೆಲೋಶಿಪ್ ಲಭಿಸಿದೆ. 2009ರಲ್ಲಿ ಅರ್ಥಶಾಸ್ತ್ರದಲ್ಲಿನ ಸಾಮಾಜಿಕ ವಿಜ್ಞಾನಕ್ಕಾಗಿ ಇನ್ಫೋಸಿಸ್ ಪುರಸ್ಕಾರ ಲಭಿಸಿದೆ. 2012ರಲ್ಲಿ ‘ಪೂರ್ ಎಕನಾಮಿಕ್ಸ್’ ಪುಸ್ತಕಕ್ಕಾಗಿ ಜೆರಾಲ್ಡ್ ಲೋಬ್ ಪ್ರಶಸ್ತಿಯನ್ನು ಈ ಪುಸ್ತಕದ ಸಹ ಲೇಖಕಿ ಎಸ್ತರ್ ಡಫ್ಲೋ ಅವರ ಜೊತೆ ಹಂಚಿಕೊಂಡಿದ್ದಾರೆ.
ಶತಮಾನದ ಅಭಿವೃದ್ಧಿ ಗುರಿಗಳಿಗಾಗಿ ಎಕ್ಸ್ ಪರ್ಟ್ ಪ್ಯಾನೆಲ್ ನಲ್ಲಿ ಅಭಿಜಿತ್ ಅವರನ್ನು ವಿಶ್ವಸಂಸ್ಥೆಯ ಅಂದಿನ ಅಧ್ಯಕ್ಷ ಬಾನ್ ಕಿ ಮೂನ್ ಅವರು ನಾಮನಿರ್ದೇಶನ ಮಾಡಿದ್ದರು.
ಅಭಿಜಿತ್ ಅವರು ಸಾಹಿತ್ಯ ವಿಷಯದಲ್ಲಿ ಪ್ರಾಚಾರ್ಯರಾಗಿರುವ ತನ್ನ ಬಾಲ್ಯಕಾಲದ ಗೆಳತಿ ಡಾ. ಅರುಂಧತಿ ತುಲಿ ಬ್ಯಾನರ್ಜಿ ಅವರನ್ನು ಮದುವೆಯಾಗಿದ್ದರು. ಬಳಿಕ ಅರುಂಧತಿ ಅವರಿಗೆ ವಿಚ್ಛೇದನ ನೀಡಿದ ಬಳಿಕ ಅಭಿಜಿತ್ ಅವರು ಬಡತನ ನಿವಾರಣೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ ವಿಭಾಗದಲ್ಲೇ ಪ್ರಾಚಾರ್ಯೆಯಾಗಿರುವ ತನ್ನ ದೀರ್ಘಕಾಲೀನ ಗೆಳತಿ ಎಸ್ತರ್ ಅವರನ್ನು 2015ರಲ್ಲಿ ಮದುವೆಯಾಗಿದ್ದರು. ಇದೀಗ ಪತಿ ಮತ್ತು ಪತ್ನಿ ಇಬ್ಬರಿಗೂ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.