ಸಾಧನೆಯ ಹೆಗ್ಗಳಿಕೆ ಜತೆ ವೈಫಲ್ಯಗಳ ಹೊರೆ
Team Udayavani, May 12, 2017, 6:24 PM IST
ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಯಶಸ್ವಿಯಾಗಿ ಪೂರೈಸಿ ಐದನೇ ವರ್ಷಕ್ಕೆ ಪ್ರವೇಶಿಸುತ್ತಿರುವ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಸಾಧನೆಯ ಹೆಗ್ಗಳಿಕೆ ಜತೆಗೆ ವೈಫಲ್ಯಗಳ ಹೊರೆ, ಕಪ್ಪು ಚುಕ್ಕೆಯ ಕಲೆಯೂ ಮೆತ್ತಿಕೊಂಡಿದೆ. ಪಕ್ಷದಲ್ಲಿ ಪ್ರಭುತ್ವ ಸಾಧಿಸಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಹೊಂಡ, ವಿದ್ಯಾಸಿರಿ, ಎಸ್‌ಸಿಪಿ-ಟಿಎಸ್‌ಪಿ ಭಾಗ್ಯಗಳ ಸರಣಿ ಕೊಟ್ಟು ಜನಪ್ರಿಯತೆ ಪಡೆದ ಸಿದ್ದರಾಮಯ್ಯ ಅವರಿಗೆ ಆರ್ಕಾವತಿ ಬಡಾವಣೆ ಡಿ ನೋಟಿಫಿಕೇಷನ್, ಹ್ಯೂಬ್ಲೋಟ್ ವಾಚ್ ಉಡುಗೊರೆ, ಹೈಕಮಾಂಡ್‌ಗೆ ಕಪ್ಪ, ಉಕ್ಕಿನ ಸೇತುವೆ ಯೋಜನೆ ಕಿಕ್‌ಬ್ಯಾಕ್‌ನಲ್ಲಿ ತಮ್ಮ ಕುಟುಂಬ ಸದಸ್ಯರಿಗೆ ಲಂಚದ ಪಾಲು ಸೇರಿದೆ ಎಂಬ ಆರೋಪ, ಪುತ್ರನ ಪಾಲುದಾರಿಕೆಯ ಕಂಪನಿಗೆ ಲ್ಯಾಬ್ ಟೆಂಡರ್ ಕೊಡಿಸಿದ ಆರೋಪ ಕಪ್ಪು ಚುಕ್ಕೆಯಾಗಿ ಪರಿಣಮಿಸಿದವು.
ಆಡಳಿತ ವೈಫಲ್ಯದ ವಿಚಾರಕ್ಕೆ ಬಂದರೆ ನಾಲ್ಕು ವರ್ಷಗಳಲ್ಲಿ ಎರಡೂವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಸರ್ಕಾರ ಒಂದು ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಸತತ ಎದುರಾದ ಬರ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು. ಅಧಿಕಾರಿಗಳ ಮೇಲೆ ಬಿಗಿ ಹಿಡಿತ ಇಲ್ಲದ ಕಾರಣ ಹಲವು ಬಾರಿ ಸರ್ಕಾರ ಮುಜುಗರಕ್ಕೊಳಗಾದ ಸನ್ನಿವೇಶ ನಿರ್ಮಾಣವಾಗಿದ್ದು ಇತಿಹಾಸ.
ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್ಸಿಗರಲ್ಲದಿದ್ದರೂ ನಾಲ್ಕು ವರ್ಷ ಮುಖ್ಯಮಂತ್ರಿಯಾಗಿ ನಿಭಾಯಿಸಿದ್ದು ಜತೆಗೆ ಕರ್ನಾಟಕದ ಮಟ್ಟಿಗೆ ತಾವೇ ಹೈಕಮಾಂಡ್ ಎಂಬಂತೆ ಪಕ್ಷದಲ್ಲಿ ಪ್ರಭುತ್ವ ಸಾಧಿಸಿದ್ದು ರಾಜಕೀಯವಾಗಿ ಸಿದ್ದರಾಮಯ್ಯ ಮಾಡಿದ ಸಾಧನೆ. ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾರ್ಗದರ್ಶನ ಪಡೆದು ಬಿಬಿಎಂಪಿಯಲ್ಲಿ ಮೈತ್ರಿ ಹಾಗೂ ನಂಜನಗೂಡು- ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಸಹಕಾರ ಪಡೆದು ರಾಜಕೀಯ ತಂತ್ರಗಾರಿಕೆ ಮೆರೆದು ಪ್ರತಿಪಕ್ಷ ಬಿಜೆಪಿಗೆ ಸೆಡ್ಡು ಹೊಡೆದು ಸ್ವಪಕ್ಷದಲ್ಲಿ ಶಕ್ತಿ ವೃದ್ಧಿಸಿಕೊಂಡಿದ್ದು ಅವರ ಜಾಣ್ಮೆ ನಡೆಗೆ ಸಾಕ್ಷಿ. ಜನತಾಪರಿವಾರ ನಾಯಕರ ಗರಡಿಯಲ್ಲಿ ಪಳಗಿದ್ದರ ಅನುಭವ ಈ ವಿಚಾರದಲ್ಲಿ ಎದ್ದು ಕಂಡಿತು. ಆದರೆ, ಆಡಳಿತ ವಿಚಾರಕ್ಕೆ ಬಂದಾಗ ಜನಪ್ರಿಯತೆ ತಂದುಕೊಡುವ ಸರಣಿ ‘ಭಾಗ್ಯ’ಗಳನ್ನು ಹೊರತುಪಡಿಸಿದರೆ ರಾಜ್ಯದ ಜನತೆ ಶಾಶ್ವತವಾಗಿ ನೆನಪಿನಲ್ಲಿಡಬಹುದಾದ ಬೃಹತ್ ಯೋಜನೆ ಯಾವುದೂ ಇನ್ನೂ ರೂಪುಗೊಂಡಿಲ್ಲ.
ಒಂದು ಡಜನ್ ಬಜೆಟ್ ಮಂಡಿಸಿದ ಖ್ಯಾತಿ ಹಾಗೂ ಹಳ್ಳಿಯಿಂದ ಬಂದು ವಿಧಾನಸೌಧದಲ್ಲಿ ಕುಳಿತು ರಾಜ್ಯದ ಖಜಾನೆ ನಿರ್ವಹಣೆ ಮಾಡಿದ, ಅತ್ಯುತ್ತಮ ಹಣಕಾಸು ಸಚಿವ ಎಂಬ ಹೆಸರು ಪಡೆದಿದ್ದ ಸಿದ್ದರಾಮಯ್ಯ ಐದು ವರ್ಷ ಮುಗಿಸುವುದರಲ್ಲಿ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ಸಾಲ ಪಡೆದ ಮುಖ್ಯಮಂತ್ರಿ ಎಂಬ ಖ್ಯಾತಿಗೂ ಒಳಗಾಗಲಿದ್ದಾರೆ. ಅಷ್ಟೇ ಅಲ್ಲದೇ ಬೆಳಗಾವಿ ಸುವರ್ಣಸೌಧ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿಠಲ್ ಅರಭಾವಿ ಸೇರಿದಂತೆ ನಾಲ್ಕು ವರ್ಷಗಳಲ್ಲಿ 2500 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡು, ಅನ್ನದಾತ ಸಾವಿಗೆ ಶರಣಾಗುವುದು ತಡೆಯುವಲ್ಲಿ ಯಶಸ್ವಿಯಾಗದಿರುವುದು ಸರ್ಕಾರದ ವೈಫಲ್ಯವೇ ಸರಿ. ಸಾಲ ಮನ್ನಾ ಸಾಧ್ಯವಾಗದಿದ್ದರೂ ಸತತ ಬರ ನಿರ್ವಹಣೆ ಹಾಗೂ ರೈತರ ಸಂಕಷ್ಟ ನಿವಾರಣೆ ನಿಟ್ಟಿನಲ್ಲಿ ಸರ್ಕಾರದ ಕ್ರಮ ಪರಿಣಾಮಕಾರಿಯಾಗಿಲ್ಲ. ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವಿನ ಸಮನ್ವಯ ಕೊರತೆ ಹಾಗೂ ಅಧಿಕಾರಿಗಳ ಮೇಲೆ ಬಿಗಿ ನಿಯಂತ್ರಣ ಇಲ್ಲದಿರುವುದು ಆಡಳಿತ ವ್ಯವಸ್ಥೆ ಮೇಲೂ ಪರಿಣಾಮ ಬೀರಿದ್ದಂತೂ ಹೌದು. ಉಪ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರಲ್ಲಿದ್ದ ಗಡಸುತನ, ಅಧಿಕಾರಿಗಳ ಮೇಲಿನ ಹಿಡಿತ ಮುಖ್ಯಮಂತ್ರಿಯಾದ ಮೇಲೆ ಸಡಿಲಗೊಂಡಿತು ಎಂಬ ಆರೋಪ ಪದೇ ಪದೆ ಕೇಳಿಬಂದು ಅದಕ್ಕೆ ಸಾಕ್ಷಿಯಾಗಿಯೂ ಹಲವಾರು ಘಟನೆಗಳು ನಡೆದವು.
ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಹಾಗೂ ಎಲ್ಲ ಸಂಪುಟ ಸಹೋದ್ಯೋಗಿಗಳನ್ನು ಪೂರ್ಣ ವಿಶ್ವಾಸದೊಂದಿಗೆ ಜತೆಗೆ ಕರೆದೊಯ್ಯುವ ಔದಾರ್ಯತನ ಸಿದ್ದರಾಮಯ್ಯ ತೋರಿದ್ದು ಕಡಿಮೆಯೇ. ಕೆಲ ಸಚಿವ ಅದರಲ್ಲೂ ಜನತಾಪರಿವಾರ ಮೂಲದವರ ಜತೆ ಹೆಚ್ಚಿನ ನಂಟು ಎಂಬ ಆರೋಪ ನಾಲ್ಕು ವರ್ಷಗಳಾದರೂ ಕಡಿಮೆಯಾಗಿಲ್ಲ. ಜತೆಗೆ ಸರ್ಕಾರ ಅಥವಾ ಮುಖ್ಯಮಂತ್ರಿ ಸಂಕಷ್ಟಕ್ಕೆ ಎದುರಾದಾಗ ಇಡೀ ಸಂಪುಟ ಒಂದಾಗಿ ಇವರ ಪರ ನಿಂತಿದ್ದು ಕಡಿಮೆಯೇ. ಸರ್ಕಾರದ ಪ್ರಮುಖ ತೀರ್ಮಾನ ಪ್ರಕಟಿಸುವಾಗ ಅಥವಾ ಸರ್ಕಾರದ ಸಾಧನೆ ಹೇಳಿಕೊಳ್ಳುವಾಗಲೂ ಹಿರಿಯ ಸಚಿವರು ಅಕ್ಕ – ಪಕ್ಕ ಕಾಣುತ್ತಲೇ ಇರಲಿಲ್ಲ. ಇಡೀ ಸರ್ಕಾರದ ಸಾಧನೆ ಎಂಬ ಬದಲಿಗೆ ತಮ್ಮೊಬ್ಬರದೇ ಸಾಧನೆ ಎಂಬಂತೆ ಬಿಂಬಿತವಾಯಿತು ಎಂಬ ಆರೋಪವೂ ನಾಲ್ಕು ವರ್ಷ ಪೂರೈಸಿದ ಹೊಸ್ತಿಲಲ್ಲೂ ಕೇಳಿಬಂದಿತು. ಇನ್ನು, ನಾಲ್ಕು ವರ್ಷಗಳಲ್ಲಿ ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ, ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ, ಮರಳು ಮಾಫಿಯಾದಿಂದ ಅಧಿಕಾರಿಗಳ ಮೇಲೆ ಹಲ್ಲೆ, ಕೊಲೆ ಯತ್ನ, ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಪ್ರಕರಣಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದವು.
ಕೈಗಾರಿಕೆ ವಲಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದಲ್ಲಿ 1.54 ಲಕ್ಷ ಕೋಟಿ ರೂ. ಬಂಡವಾಳ ಆಕರ್ಷಿಸಿ, ಇನ್ವೆಸ್ಟ್ ಕರ್ನಾಟಕದಲ್ಲಿ 1.27 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯ 112 ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆಯಾದರೂ ಅವು ಇನ್ನೂ ಅನುಷ್ಟಾನ ಹಂತಕ್ಕೆ ಬಂದಿಲ್ಲ. ವಿದ್ಯುತ್ ವಲಯದಲ್ಲೂ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ವಿವಾದ ನಡುವೆಯೂ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆ ಹೊರತುಪಡಿಸಿದರೆ ಇತರೆ ಯೋಜನೆಗಳಿಂದ ರಾಜ್ಯಕ್ಕೆ ಅಗತ್ಯವಾದ ವಿದ್ಯುತ್ ಇಲ್ಲೇ ಪಡೆಯುವ ಗುರಿ ಈಡೇರಿಲ್ಲ.
ಕಾನೂನು ಸುವ್ಯವಸ್ಥೆ ಪಾಲನೆ ವಿಚಾರದಲ್ಲಿ ಗೃಹ ಇಲಾಖೆ ಕಟ್ಟೆಚ್ಚರ ವಹಿಸದ ಕಾರಣ ಕೆಲವು ಪ್ರಕರಣಗಳು ಸರ್ಕಾರಕ್ಕೆ ತಲೆನೋವಾದವು. ಮಡಿಕೇರಿ, ಮಂಗಳೂರು, ಮೈಸೂರು, ಬೆಂಗಳೂರು ಭಾಗದಲ್ಲಿ ನಡೆದ ಪ್ರಕರಣಗಳು ಪ್ರತಿಪಕ್ಷಗಳಿಗೆ ಆಹಾರವಾದವು. ಉತ್ತರ ಕರ್ನಾಟಕ ಭಾಗದಲ್ಲಿ ಮಹದಾಯಿ ಹೋರಾಟಗಾರರ ಮೇಲೆ ಪೊಲೀಸರ ಹಲ್ಲೆಯೂ ಇದರಲ್ಲೊಂದು. ವೈಫಲ್ಯಗಳ ನಡುವೆಯೂ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಹಾಗೂ ಆರ್ಥಿಕ, ಜಲಸಂಪನ್ಮೂಲ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಕೈಗಾರಿಕೆ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಪೌರಾಡಳಿತ, ನಗರಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳಲ್ಲಿ ಸ್ವಲ್ಪ ಮಟ್ಟಿನ ಸಾಧನೆ ಹೊರತುಪಡಿಸಿದರೆ ಉಳಿದ ಇಲಾಖೆಗಳು ಅಂಕಿ -ಅಂಶಗಳಲ್ಲೇ ಕಾಲ ತಳ್ಳುತ್ತಿವೆ.
ಅದೃಷ್ಟವಂತ
ಸಿದ್ದರಾಮಯ್ಯ ಒಂದು ರೀತಿಯಲ್ಲಿ ಹೇಳಬೇಕಾದರೆ ಅದೃಷ್ಟವಂತ ಮುಖ್ಯಮಂತ್ರಿಯೂ ಹೌದು. ಏಕೆಂದರೆ ಕಾಂಗ್ರೆಸ್‌ನಂತಹ ಪಕ್ಷದಲ್ಲಿ ಎಲ್ಲರನ್ನೂ ನಿಭಾಯಿಸಿ ಸಂಭಾಳಿಸಿ ಅವಧಿ ಪೂರೈಸುವುದು ಕಷ್ಟಸಾಧ್ಯ. ಸಿದ್ದರಾಮಯ್ಯ ಅವರು ಪ್ರಾರಂಭದಲ್ಲೇ ಎದ್ದ ಅಪಸ್ವರ ತಣ್ಣಗಾಗಿಸಿ ಆಗ್ಗಾಗ್ಗೆ ಎದುರಾದ ಅತೃಪ್ತಿ, ಭಿನ್ನಮತ ಆಗ್ಗಿಂದಾಗಲೇ ಶಮನಗೊಳಿಸುವ ಜಾಣ್ಮೆ ತೊರೆದು ತಮ್ಮ ಪಟ್ಟ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ತಾನೂ ರಾಜಕೀಯ ತಂತ್ರಗಾರಿಕೆಯಲ್ಲಿ ಕಡಿಮೆಯೇನಲ್ಲ ಎಂಬುದನ್ನೂ ಸಾಬೀತುಪಡಿಸಿದ್ದಾರೆ.
ಮುಜುಗರ
ಸಚಿವರಾಗಿದ್ದ ಮೇಟಿ ಪ್ರಕರಣ, ಪರಮೇಶ್ವರ್ ನಾಯಕ್ ಹಾಗೂ ಶಿವರಾಜ್ ತಂಗಡಗಿ ಅಧಿಕಾರಿಗಳ ಜತೆ ಘರ್ಷಣೆಗಿಳಿದ ಪ್ರಕರಣ, ಸಚಿವ ಆಂಜನೇಯ ಪತ್ನಿ ವಿರುದ್ಧ ಲಂಚ ಸ್ವೀಕಾರ ಆರೋಪ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ವಿರುದ್ಧದ ಆರೋಪ, ತನ್ವೀರ್ ಸೇಠ್ ಅಶ್ಲೀಲಚಿತ್ರ ವೀಕ್ಷಿಸಿದ ಪ್ರಕರಣ, ತವರು ಜಿಲ್ಲೆ ಮೈಸೂರಿನಲ್ಲಿ ಆಪ್ತ ಮರಿಗೌಡ ಜಿಲ್ಲಾಧಿಕಾರಿಗಳನ್ನು ನಿಂದಿಸಿ ಪರಾರಿಯಾದ ಪ್ರಕರಣ ಸರ್ಕಾರ ಮತ್ತು ಮುಖ್ಯಮಂತ್ರಿಯನ್ನು ಮುಜುಗರಕ್ಕೀಡು ಮಾಡಿದ್ದವು.
ಟಾಪ್ 4 : ಸಾಧನೆ
– ಅನ್ನಭಾಗ್ಯ
– ಕ್ಷೀರಭಾಗ್ಯ
– ವಿದ್ಯಾಸಿರಿ
– ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆ
ಟಾಪ್ 4: ವೈಫಲ್ಯ
– ರೈತರ ಆತ್ಮಹತ್ಯೆ ತಡೆ ವಿಫಲ
– ಸಾಲದ ಹೊರೆ ಹೆಚ್ಚಿಸಿದ್ದು
– ಬರ ನಿರ್ವಹಣೆ ಕೊರತೆ
– ಅಧಿಕಾರಿಗಳ ಮೇಲೆ ಹಿಡಿತವಿಲ್ಲ
ಟಾಪ್ 4: ಕಪ್ಪು ಚುಕ್ಕೆ
– ಹ್ಯೋಬ್ಲಾಟ್ ವಾಚ್ ಉಡುಗೊರೆ
– ಅರ್ಕಾವತಿ ಡಿ ನೋಟಿಫಿಕೇಷನ್
– ಉಕ್ಕಿನ ಸೇತುವೆ ಲಂಚ ಆರೋಪ
– ಪುತ್ರನಿಗೆ ಲ್ಯಾಬ್ ಟೆಂಡರ್
— ವಿಶ್ಲೇಷಣೆ: ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.