ಮಾತೇ ಮುತ್ತು; ಮಾತೇ ಮೃತ್ಯು
Team Udayavani, May 8, 2021, 6:00 AM IST
ಈ ಪ್ರಪಂಚದಲ್ಲಿ ಮಾನವ ಇತರೆಲ್ಲ ಜೀವಿಗಳಿಗಿಂತ ವಿಭಿನ್ನನಾಗಿ, ಶ್ರೇಷ್ಠನಾಗಿ ಗುರುತಿಸಿಕೊಳ್ಳಲು ಪ್ರಮುಖ ಕಾರಣ ಎಂದರೆ ಆತನಿಗೆ ಪ್ರಕೃತಿದತ್ತ ವಾಗಿ ಬಂದಿರುವ ಬುದ್ಧಿಶಕ್ತಿಯೇ ಕಾರಣ. ಹಾಗೆಂದ ಮಾತ್ರಕ್ಕೆ ಉಳಿದ ಪ್ರಾಣಿ
ಗಳಿಗೆ ಈ ಶಕ್ತಿ ಇಲ್ಲ ಎಂದಲ್ಲ. ಬುದ್ಧಿಮತ್ತೆ ಯಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಮಾನವ ನಿಗೆ ಸಾಧ್ಯವಿದೆ. ಇನ್ನು ಮಾತು ಮಾನವನಿಗೆ ದೇವರು ನೀಡಿರುವ ಇನ್ನೊಂದು ಮಹತ್ವದ ಕೊಡುಗೆ. ಆದರೆ ಮಾತು ಎಷ್ಟು ಅಮೂಲ್ಯವೋ ಅಷ್ಟೇ ಅಪಾಯಕಾರಿಯೂ ಹೌದು. ಈ ಅದ್ಭುತ ಶಕ್ತಿಯ ಕಾರಣದಿಂದಾಗಿಯೇ ಮನುಷ್ಯನು ಸೃಷ್ಟಿಯ ಉಳಿದ ಪ್ರಾಣಿಗಳಿ ಗಿಂತ ಭಿನ್ನನಾಗಿರುವುದು. ಮಾತಿನಿಂದಲೇ ಓರ್ವನ ವ್ಯಕ್ತಿತ್ವವನ್ನು ನಿರ್ಧರಿಸಬಹುದು. ಮಾನವ ಮೀನಿನಂತೆ ಈಜುವುದನ್ನು, ಹಕ್ಕಿಯಂತೆ ಹಾರುವುದನ್ನು, ಗ್ರಹಗಳ ಲೋಕದಲ್ಲಿ ತೇಲುವುದನ್ನು ಕಲಿತ. ಆದರೆ ಯಾರೊಡನೆ ಹೇಗೆ ಮಾತನಾಡಬೇಕು ಎಂಬುದನ್ನು ಕಲಿಯುವಲ್ಲಿ ಸೋತ ಎಂದು ಎಷ್ಟೋ ಬಾರಿ ನಮಗೆ ಅನಿಸುವುದಿದೆ. ಮಾತುಗಾರಿಕೆ ಎಲ್ಲರಿಗೂ ಸಿದ್ಧಿಸಲಾರದು. ಅದೂ ಒಂದು ಕಲೆ.
“ನಾಲಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು’ ಎನ್ನುವ ಹಾಗೆ ನಾವಾಡುವ ಒಂದು ಮಾತು ಒಳ್ಳೆಯ ಸಂಬಂಧವನ್ನು ಬೆಸೆಯಲೂಬಹುದು. ಒಂದು ಮಧುರವಾದ ಸಂಬಂಧವನ್ನು ಮುರಿಯಲೂಬಹುದು. ನಾವಾಡುವ ಒಂದು ಪ್ರೇರಣೆಯ ಮಾತು ಎಲ್ಲವನ್ನೂ ಕಳೆದುಕೊಂಡು ಹತಾಶನಾದ ಒಬ್ಬ ವ್ಯಕ್ತಿಯಲ್ಲಿ ಆಶಾಭಾವನೆಯನ್ನು ಮೂಡಿಸಬಹುದು, ಅದೇ ಒಂದು ಕುಹಕದ ಮಾತು ಗೆಲುವಿನ ತುತ್ತ ತುದಿಯಲ್ಲಿ ಇದ್ದವನನ್ನೂ ಪಾತಾಳಕ್ಕೆ ತಳ್ಳಬಹುದು.
ಮಂಥರೆಯ ಚಾಡಿಮಾತು ರಾಮಾಯಣವನ್ನೇ ಸೃಷ್ಟಿಸಿತು, ಕೃಷ್ಣನ ನೀತಿಮಾತು ಪಾಂಡವರನ್ನು ಗೆಲುವಿನ ದಡ ಸೇರಿಸಿತು. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಹಲವು ಸಾಮ್ರಾಜ್ಯಗಳ ಅಳಿವು-ಉಳಿವಿಗೆ ಮಾತೇ ಕಾರಣವಾಗಿದ್ದನ್ನು ತಿಳಿಯಬಹುದು. ಧನನಂದನ ಒಂದು ಮಾತು ಚಾಣಕ್ಯನಿಂದ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ನಾಂದಿಯಾಯಿತು. ಶಕುನಿಯ ಕುಹಕದ ಮಾತು ದುರ್ಯೋಧನನ ವಿನಾಶಕ್ಕೆ ಕಾರಣವಾದರೆ ಅದೇ ಗೌತಮನ ಪ್ರೀತಿಯ ಮಾತು ಅಂಗುಲಿಮಾಲನ ಮನಃಪರಿವರ್ತನೆಗೆ ಕಾರಣವಾಯಿತು. ನಾವಾಡುವ ಒಂದು ಮಾತು ಐಸ್ ಕ್ರೀಂ ತಿಂದಷ್ಟೇ ಮನಸ್ಸಿಗೆ ತಂಪಾಗಲೂಬಹುದು ಇಲ್ಲವೆ ಸೂಜಿಯ ಮೊನೆ ಚುಚ್ಚಿದ ಅನುಭವವನ್ನು ನೀಡಬಹುದು.
ನಾವಾಡುವ ಮಾತು ಹಿತವಾಗಿ ರಬೇಕು, ಮಿತವಾಗಿರಬೇಕು ಹದವಾದ ತೂಕದಿಂದ ಕೂಡಿರಬೇಕು. ಮಾತು ಹಗುರವಾಗಿರಲೂ ಬಾರದು, ಭಾರವಾಗಿರಲೂ ಬಾರದು. ಯಾರೊಂದಿಗೆ, ಯಾವಾಗ, ಎಲ್ಲಿ, ಎಷ್ಟು ಮಾತನಾಡಬೇಕು ಎಂಬುದನ್ನು ತಿಳಿದಿರಬೇಕು. ಮಾತು ಅತಿಯಾದರೆ ವಾಚಾಳಿ, ಬಾಯಿ ಚಪಲ ಎನ್ನುತ್ತಾರೆ. ಕಡಿಮೆಯಾ ದರೆ ಮೂಕ ಎನ್ನುತ್ತಾರೆ. ಕೆಲವರು ಕಠಿನ ಹೃದಯಿಗಳಾದರೂ ತಮ್ಮ ನಾಜೂಕಿನ ಮಾತಿನ ಮೂಲಕ ಒಳ್ಳೆಯವರೆಂದೆನಿಸಿ ಕೊಳ್ಳುತ್ತಾರೆ. ಇನ್ನು ಕೆಲವರು ಮೃದು ಮನಸ್ಸಿನವರಾದರೂ ಮಾತನಾಡಲು ಬಾರದೆ ಕೆಟ್ಟವರಾಗಿಬಿಡುತ್ತಾರೆ.
ಮಾತನಾಡುವುದು ಒಂದು ಕಲೆ, ಅದು ಎಲ್ಲರಿಗೂ ಸುಲಭವಾಗಿ ಸಿದ್ದಿಸದು. “ಎಲುಬಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದು ದಾಸ ಶ್ರೇಷ್ಠರು ಹೇಳಿದ ಹಾಗೆ ಕೆಲವು ಸಂದರ್ಭಗಳಲ್ಲಿ ಮೂಕನೆನಿಸಿದರೂ ಪರವಾಗಿಲ್ಲ. ಪರರ ಮನಸ್ಸಿಗೆ ನೋವುಂಟು ಮಾಡುವಂತೆ ಮಾತನಾಡಬಾರದು. ಬಾಯಿಯಿಂದ ಹೊರಬಿದ್ದ ಮಾತು ಮತ್ತು ಬಿಲ್ಲಿನಿಂದ ಹೊರಟ ಬಾಣ ಹಿಂದಿರುಗಿಬಾರದು. ಮಾತನಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಮಾತನಾಡಬೇಕು. ಕೆಲವರು ಮಾತನ್ನೇ ಬಂಡವಾಳವಾಗಿ ಮಾಡಿಕೊಂಡಿರುತ್ತಾರೆ “ಮಾತೆ ಸಕಲಸಂಪದವು’ ಎಂಬಂತೆ ಮೋಹಕ ಮಾತಿನಿಂದಲೇ ಎಲ್ಲವನ್ನು ಸಂಪಾದಿಸಿ ಕೊಳ್ಳುತ್ತಾರೆ. ಅದೇ ಮಾತಿನಿಂದಲೆ ಸಕಲವನ್ನು ಕಳೆದುಕೊಂಡದ್ದೂ ಇದೆ. ಕೇವಲ ಒಂದು ಮಾತು ಜೀವಕ್ಕೆ ಕುತ್ತು ತಂದ ಹಲವು ಘಟನೆಗಳನ್ನು ನೋಡಬಹುದು. ಅದಕ್ಕೆ ಹೇಳುವುದು “ಮಾತೇ ಮುತ್ತು, ಮಾತೇ ಮೃತ್ಯು’ ಎಂದು. ಮಾತು ಹಿತಮಿತವಾಗಿದ್ದರೆ ಆರೋಗ್ಯಕ್ಕೂ ಒಳ್ಳೆಯದು, ಸಂಬಂಧಕ್ಕೂ ಒಳ್ಳೆಯದು. ಮಾತಿನ ಮೂಲಕ ಒಳ್ಳೆಯ ಸಂಬಂಧಗಳನ್ನು ಬೆಸೆಯೋಣ.
- ಭಾಸ್ಕರ ಪೂಜಾರಿ, ನಡೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.