ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು
ನ. 14ರಿಂದ 20:ಅಖಿಲ ಭಾರತ ಸಹಕಾರ ಸಪ್ತಾಹ
Team Udayavani, Nov 14, 2024, 6:25 AM IST
“ಸಹಕಾರ’ ಎಂಬ ಶಬ್ದದಲ್ಲಿಯೇ ಸೌಹಾರ್ದತೆ, ಸಹೋದರತೆ ಹಾಗೂ ಹೃದಯ ವೈಶಾಲ್ಯತೆಯ ಮಕರಂದ ಜಿನುಗುತ್ತದೆ. ಸ್ವಾತಂತ್ರ್ಯೋತ್ತರ ಭಾರತ ಕೇವಲ “ಪೊಲೀಸ್ ರಾಜ್ಯ’ ಎನಿಸದೆ “ಸುಖೀರಾಜ್ಯ’ (Welfare State) “ಕಲ್ಯಾಣ ರಾಜ್ಯ’ ಅಥವಾ “ರಾಮರಾಜ್ಯ’ದ ಕನಸದು ತುಂಬಿಕೊಳ್ಳುವಂತಾಗಲು ನಮ್ಮ ಭಾರತ ಸಂವಿಧಾನ ತನ್ನ 4ನೇ ವಿಭಾಗದ ಒಡಲಲ್ಲಿ “ರಾಜ್ಯ ನಿರ್ದೇಶನ ತತ್ತ’ಗಳನ್ನು ತುಂಬಿಕೊಂಡಿದೆ. ಈ ರಾಷ್ಟ್ರದ ಸಂಪತ್ತು ಏಕಸ್ವಾಮ್ಯದ ಆಧಾರದಲ್ಲಿ ಕ್ರೋಡೀಕರಣಗೊಳ್ಳದೇ “ಸರ್ವರಿಗೂ ಸಮಬಾಳು, ಸಮಪಾಲು’ ಎಂಬ ಆಶಯದಲ್ಲಿ ಪ್ರವರ್ಧನಮಾನತೆ ಮೆಟ್ಟಲೇರಬೇಕು ಎಂಬುದು ಸಂವಿಧಾನ ಜನಕರ ಆಶಯ. ನಮ್ಮ ರಾಷ್ಟ್ರ ನಿಂತ ನೀರಿನಂತಿರದೆ, ಸದಾ ಚಲನಶೀಲತೆಯನ್ನು ಏರುಮುಖವಾಗಿ ಕಾಯ್ದುಕೊಳ್ಳುವಲ್ಲಿ ಆರ್ಥಿಕ ಸಂಪನ್ನತೆ ಪ್ರಮುಖ ಅಂಶ. ಸಂವಿಧಾನ ತನ್ನ ಪ್ರಸ್ತಾವನೆಯಲ್ಲಿಯೇ (Preamble) “ನ್ಯಾಯ (Justice)- ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ’ ಎಂಬುದಾಗಿ ಸ್ಪಷ್ಟವಾಗಿ ಪಡಿನುಡಿದಿದೆ. ಇಲ್ಲಿನ ಆರ್ಥಿಕ ನ್ಯಾಯ ಹಾಗೂ ಪ್ರಗತಿಗೆ ಪೂರಕವಾಗಿ ಒಂದೆಡೆ ರಾಷ್ಟ್ರದ ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆ ಇದ್ದರೆ ಇನ್ನೊಂದೆಡೆ ಸಹಕಾರಿ ರಂಗದ “ಕ್ಷಿಪ್ರ ಕ್ರಾಂತಿ’ ಅತ್ಯಂತ ಪ್ರಧಾನ ಭೂಮಿಕೆ ಹೊಂದಿದೆ. 19ನೇ ವಿಧಿ ಸುರಿಸುವ ಮೂಲಭೂತ ಹಕ್ಕುಗಳಲ್ಲಿ ಒಂದಾದ “ಸಂಘ ಸಂಸ್ಥೆ’ಗಳನ್ನು ರಚಿಸುವ ಹಾಗೂ ಮುನ್ನಡೆಸುವ ಸ್ವಾತಂತ್ರ್ಯ ಸಹಕಾರಿ ಸಂಸ್ಥೆಗಳ ಮೂಲಶಿಲೆ.
ಭಾರತ ಗ್ರಾಮಾಂತರಗಳ ರಾಷ್ಟ್ರ. ದೇಶದ ಬಹುಪಾಲು ಜನಸಂಖ್ಯಾತ್ಮಕವಾಗಿ ಈಗಲೂ ಕೃಷಿಯನ್ನೇ ನಂಬಿ ಬದುಕುವ ಜನ ಸಮೂಹ. ಅಂತೆಯೇ, ಹಳ್ಳಿ ಮಧ್ಯಮ ಗಾತ್ರದ ಪೇಟೆ, ಪಟ್ಟಣಗಳಿಂದ ಹಿಡಿದು ಮಹಾನಗರಗಳ ವರೆಗೆ ಸಹಕಾರದ ರಾಷ್ಟ್ರೀಯ ಚಿಂತನೆ ಹಾಗೂ ಪ್ರಗತಿಯ ಧಾಟಿಯಲ್ಲಿ ಭಾರತದ ಸಶಕ್ತತೆ ತುಂಬಿದೆ. ಅನೇಕ ಮುಂದುವರಿದ ರಾಷ್ಟ್ರಗಳೂ, ಆರ್ಥಿಕ ಕುಸಿತದಿಂದ ಬಸವಳಿದಾಗಲೂ ಸಹ, ಅಂತಹ ಕೊರೊನಾದಂತಹ ಮಹಾ ಪಿಡುಗು ಭಾರತವನ್ನೂ ಬಾಧಿಸಿದಾಗಲೂ ಈ ನೆಲದ ಆರ್ಥಿಕತೆ ಕುಗ್ಗಲಿಲ್ಲ, ಜಗ್ಗಲಿಲ್ಲ ಎಂಬುದು ಸರ್ವವಿಧಿತ. 1947ರ ಆ. 15ರಂದು ಮಧ್ಯರಾತ್ರಿ ಬ್ರಿಟಿಷರಿಂದ ಅಧಿಕಾರ ದಂಡ ಭಾರತೀಯರಿಗೆ ಹಸ್ತಾಂತರಗೊಂಡು ಇದೀಗ ಏಳೂವರೆ ದಶಕಗಳ ಉದ್ದಕ್ಕೂ ಪ್ರಗತಿಯ ಚಕ್ರ ಮುಂದೆ ಸರಿದಿದೆ. ಇಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗೆ ಜತೆಜತೆಯಾಗಿ ಆರ್ಥಿಕ ಚೈತನ್ಯವನ್ನು ನಗರಕ್ಕಿಂತಲೂ ಬಹುಪಾಲು ಗ್ರಾಮೀಣ ಜನತೆಗೆ ನೀಡುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಅಸಾಧಾರಣ. ಅಪಾರ ಸಂಖ್ಯೆಯಲ್ಲಿ, ಪ್ರಜಾತಂತ್ರೀಯ ಪರಿಸರದಲ್ಲಿ, ಸ್ವಯಂ ಸ್ಫೂರ್ತಿಯ ಹೊಂಗನಸು ತುಂಬಿ ಸಹಕಾರಿ ಸಂಘಗಳು ಈ ನಾಡಿನ ಉದ್ದಗಲದಲ್ಲಿ ಹುಟ್ಟಿ ಬೆಳೆಯುತ್ತಿವೆ. ಇದರಲ್ಲಿ, ಜನತಂತ್ರೀಯತೆಯ ಸೊಗಸು ಇದೆ. ನಾಯಕತ್ವಕ್ಕೆ ವಿಪುಲ ಅವಕಾಶ ಇದೆ. ಪರಸ್ಪರ ನೆರವಿನ ಮಹಾಪೂರ ಹರಿಸಲು ಸಾಧ್ಯತೆಗಳಿವೆ. ಮಹಿಳಾ ಸಹಕಾರಿ ಸಂಸ್ಥೆಗಳ ಮೂಲಕ “ಮಹಿಳಾ ಸಶಕ್ತೀಕರಣ’ದ ಸಿದ್ಧಾಂತಕ್ಕೆ ಕಾವು ನೀಡುವ ಸ್ವತ್ಛಂದ ಅವಕಾಶವಿದೆ. ಅಂತೆಯೇ ಸ್ಥಳೀಯ ಆವಶ್ಯಕತೆಗಳಿಗೆ ಪೂರಕ ಆರ್ಥಿಕ ನೆರವು ನೀಡುವ ವ್ಯವಸ್ಥೆಯೂ ಇಲ್ಲಿದೆ. ಮಾತ್ರವಲ್ಲ, ರೈತರ ವಿವಿಧ ಕಸಬುದಾರರ, ಕರಕುಶಲಿಗರ, ವ್ಯಕ್ತಿಪರರ ಆದ್ಯತೆ, ಸಾಧ್ಯತೆಗಳ ಅನುಸಾರ ಬೆಳವಣಿಗೆಗೆ ಸಹಕರಿಸುವ “ಉತ್ತಮ ವೇದಿಕೆ’ಯೇ ಸಹಕಾರಿ ರಂಗ.
ಇದನ್ನು ಮನಗಂಡ ನಮ್ಮ ಮೂಲದಾಖಲೆ ಭಾರತ ಸಂವಿಧಾನದಲ್ಲಿ ಈ ಸಮಗ್ರ ಸಹಕಾರಿ ಸೌಧಕ್ಕೆ ಭದ್ರ ಬುನಾದಿಯನ್ನು ನಿರ್ಮಿಸಲಾಗಿದೆ. ನಮ್ಮ ವಿಶಾಲ ಭಾರತ ಹಳ್ಳಿ ಹಳ್ಳಿಗಳಲ್ಲಿ ಹಾಲು ಉತ್ಪಾದಕರಿಂದ ಹಿಡಿದು ಪ್ರಗತಿಗಾಗಿ ಸಾಲ ಹೊಂದುವವರೆಗೆ ಎಲ್ಲರಿಗೂ “ಸಹಕಾರೀ ಕಾಮಧೇನು’ ಚಿಂತನೆಯನ್ನು ವಾಸ್ತವಿಕತೆಗೆ ಇಳಿಸುವಲ್ಲಿ, ಬೆಳೆಸುವಲ್ಲಿ ಅತ್ಯಂತ ಪ್ರಾಮುಖ್ಯ ತಿದ್ದುಪಡಿಯನ್ನು ತರಲಾಯಿತು. 97ನೇ ತಿದ್ದುಪಡಿಯನ್ನು 2011ರಲ್ಲಿ ಹೊಸದಿಲ್ಲಿ ಸರಕಾರ ಘೋಷಿಸಿ ನೂತನವಾಗಿ ವಿಭಾಗ 19. ಬಿ. ಯನ್ನು ಸೇರ್ಪಡೆಗೊಳಿಸಿತು. ಅದರಲ್ಲಿನ 13 ವಿಧಿಗಳಲ್ಲಿ ಸವಿಸ್ತಾರವಾಗಿ ಮೂಡಿಸಿ, ಸಹಕಾರೀ ಸಂಸ್ಥೆಗಳಿಗೆ ಅತ್ಯಂತ ಸೂಕ್ತ ಪರಿಸರವನ್ನು ವಿಶಾಲ ತಳಹದಿಯ ಮೂಲಕ ನಿರ್ಮಿಸಲಾಯಿತು. ಹಾಗೂ ಈ ಬಗ್ಗೆ ಆಯಾಯ ರಾಜ್ಯ ಸರಕಾರಗಳೂ ಸುಸೂತ್ರವಾಗಿ ಸೂತ್ರಗಳನ್ನು ತಂತಮ್ಮಲ್ಲಿ ರಚಿಸಿ ಈ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸುವಂತಾಗಲಿ ಎಂಬ ವಿಚಾರವನ್ನು ಪ್ರಚುರ ಪಡಿಸಲಾಯಿತು.
ಈ ಸೇರ್ಪಡೆಗೊಂಡ “ಸಹಕಾರಿ ಸಂಸ್ಥೆಗಳು’ ಎಂಬ ಸಂವಿಧಾನದ 19.ಬಿ. ಉಪವಿಭಾಗ ಒಟ್ಟು 13 ವಿಧಿಗಳ ಒಂದು ಸುಂದರ ಗೊಂಚಲು. 243 ಝಡ್‌ಎಚ್ ಇಲ್ಲಿಂದ ಮೊದ ಲ್ಗೊಂಡು 243 ಝಡ್‌ಟಿ ವರೆಗೆ ಸಹಕಾರಿ ಸಂಸ್ಥೆಗಳನ್ನು ನೂತನ ವಾಗಿ ಶುಭಾರಂಭಗೊಳಿಸುವಲ್ಲಿಂದ ಹೊರಟು, ಪ್ರಚಲಿತ ಕಾನೂ ನುಗಳ ಯಥಾವತ್ತಾದ ಮುಂದುವರಿಕೆಯವರೆಗೆ ಒಂದೊಂದೇ ಮೆಟ್ಟಲುಗಳನ್ನು ಅಂತೆಯೇ ಒಳವ್ಯವಸ್ಥೆಯನ್ನು ರೂಪಿಸಿವೆ. ಒಂದು ಸುಂದರ ರೂಪಕ ನೀಡುವುದಾದರೆ ಸಂವಿಧಾನದ ತೊಟ್ಟಿಲಲ್ಲಿ ಸಹಕಾರಿ ಸಂಸ್ಥೆಗಳನ್ನು ಇರಿಸಿ ಜೋಪಾನವಾಗಿ ಬೆಳೆಸಲಾಗುತ್ತಿದೆ. ಆಯಾಯ ರಾಜ್ಯಗಳು ನಿರ್ದಿಷ್ಟ ಕಾನೂನು ಮೂಲಕ ಸಹಕಾರೀ ಸಂಸ್ಥೆಗಳನ್ನು ಸ್ವಯಂ ಪ್ರೇರಿತವಾಗಿ ಸ್ಥಾಪಿಸಲು, ಜನತಂತ್ರೀಯವಾಗಿ ನಿಯಂತ್ರಿಸಲು, ಸದಸ್ಯರ ಆರ್ಥಿಕ ಭಾಗವಹಿಸುವಿಕೆಗೆ ಹಾಗೂ ಸ್ವಾಯತ್ತತೆಯಿಂದ ಕಾರ್ಯ ನಿರ್ವಹಿಸಲು ಪೂರಕ ವ್ಯವಸ್ಥೆ ಮಾಡಲು ಆದೇಶಿಸುತ್ತದೆ. 21 ಸದಸ್ಯರಿಗೆ ಮೀರದಂತೆ ನಿರ್ದೇಶಕ ಮಂಡಳಿ ರಚನೆ, ತಲಾ ಒಂದು ಸೀಟು ಅನುಸೂಚಿತ ಜಾತಿ ಹಾಗೂ ಪಂಗಡಗಳಿಗೆ ಹಾಗೂ ಕನಿಷ್ಠ ಇಬ್ಬರು ಮಹಿಳಾ ಸದಸ್ಯರಿರಬೇಕೆಂದು ಇಲ್ಲಿ ನಿರ್ದೇಶನವಿದೆ. ಚುನಾವಣ ನಿರ್ವಹಣೆ, ವಿಧಿ ವಿಧಾನಗಳನ್ನು ರಾಜ್ಯ ಸರಕಾರಗಳು ಯಥಾವತ್ತಾಗಿ ರೂಪಿಸಬೇಕೆಂಬುದು ಸಾಂವಿಧಾನಿಕ ನಿರ್ದೇಶನವಿದೆ. ರಾಜ್ಯದೊಳಗಿನ ಸಹಕಾರೀ ಸಂಸ್ಥೆಗಳನ್ನು ಬರ್ಖಾಸ್ತು ಮಾಡುವ ಅಥವಾ ಮೇಲುಸ್ತುವಾರಿ ಯಾ ಸುಪರ್ದಿಗೆ ಹೊಂದಲು ಯಾವ ನಿಖರವಾದ ಕಾರಣವಿರತಕ್ಕದ್ದು ಎಂಬುದನ್ನೂ ಸಂವಿಧಾನದ 243 ಝಡ್ ಎಲ್ ವಿಧಿ ಸ್ಪಷ್ಟ ಪಡಿಸುತ್ತದೆ. ಲೆಕ್ಕ ಪರಿಶೋಧನೆ, ಸಾಮಾನ್ಯ ಸಭೆ, ಸದಸ್ಯರಿಗೆ ಮಾಹಿತಿ ಹೊಂದುವ ಅಧಿಕಾರ, ವಾರ್ಷಿಕ ಆದಾಯ ಖರ್ಚುಗಳ ತಖೆ¤, ವರದಿ ನೀಡುವಿಕೆ ಇವೆಲ್ಲದರ ಬಗ್ಗೆ ನಿರ್ದಿಷ್ಟ ಸೂಚನೆ ನಮ್ಮ ರಾಜ್ಯಾಂಗ ಘಟನೆಯೇ ನೀಡುತ್ತದೆ. ಬಹು ರಾಜ್ಯ ಗಳ ವ್ಯಾಪ್ತಿ ಹೊಂದಿದ ಸಹಕಾರಿ ಸಂಸ್ಥೆಗಳ ನಿಯಂತ್ರಣ ಕೇಂದ್ರ ಸರಕಾರಕ್ಕೇ ಇರುತ್ತದೆ ಎಂಬುದು ಉಲ್ಲೇಖನಾರ್ಹ ಅಂಶ. ವಿಧಾನಸಭೆ ಇರುವ ಹಾಗೂ ಅದು ಇಲ್ಲದಿರುವ ಕೇಂದ್ರಾಡಳಿತ ಪ್ರದೇಶಗಳ ನಿರ್ದೇಶನ ಹೇಗಿರತಕ್ಕದ್ದು ಎಂಬುದನ್ನೂ ಸ್ಪಷ್ಟೀಕರಿಸಲಾಗಿದೆ.
ಪ್ರಚಲಿತ ಕಾಲ ಘಟ್ಟದಲ್ಲಿ ಸಹಕಾರೀ ಸಂಸ್ಥೆಗಳು ಈ ನಾಡಿನ ಆರ್ಥಿಕತೆಯ ನಾಡಿಗಳು ಎಂದರೂ ತಪ್ಪಲ್ಲ. ರಾಷ್ಟ್ರೀಯ ಸಹಕಾರಿ ಲೆಕ್ಕಚಾರದ ಪ್ರಕಾರ 2023 ನವಂಬರ್ ವರೆಗೆ ನಮ್ಮ ರಾಷ್ಟ್ರದಲ್ಲಿ ಒಟ್ಟು 7,96,344 ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಹಾಗೂ 39 ಕೋಟಿಗೂ ಮಿಕ್ಕಿ ನೋಂದಾಯಿತ ಸದಸ್ಯರಿದ್ದಾರೆ. ಕರ್ನಾಟಕದಲ್ಲಿಯೂ 2023ರ ಸಹಕಾರೀ ವಾರಾಂತ್ಯದಲ್ಲಿ 44,245 ಸಹಕಾರಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು 3,34,14,935 ಸದಸ್ಯರು ನೊಂದಾಯಿತರಾಗಿದ್ದಾರೆ. ಹೀಗೆ ಸಹ ಕಾರಿ ಸಂಘ ಸಂಸ್ಥೆಗಳ ಅಗಾಧ ಬೆಳವಣಿಗೆ ನಮ್ಮಿ ನಾಡಿನ ಸರ್ವ ತೋಮುಖ ಅಭಿವೃದ್ಧಿಗೆ ಹಸುರು ನಿಶಾನೆ ತೋರುತ್ತಲೇ ಇವೆ.
-ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.