ಭಾರತದ ನಾರಿ ಶಕ್ತಿಯ ಅನಾವರಣಗೊಳಿಸಿದ ನಾವಿಕ್ ಸಾಗರ್ ಪರಿಕ್ರಮ
Team Udayavani, Jun 1, 2018, 12:30 AM IST
ಕೇವಲ 55 ಅಡಿ ಉದ್ದವಿರುವ ಸಾಮಾನ್ಯ ನೌಕೆ (ಸೈಲಿಂಗ್ ಬೋಟ್)ನಲ್ಲಿ ಸಾಗರದ ಕಠಿಣ ಪರಿಸ್ಥಿತಿಯಲ್ಲಿ ಸತತವಾಗಿ 8 ತಿಂಗಳ ಕಾಲ ಕೇವಲ ಆರು ಮಂದಿ ಮಹಿಳೆಯರು ಸುಮಾರು 21,600 ನಾಟಿಕಲ್ ಮೈಲುಗಳಷ್ಟು ದೂರ (ಸರ್ಕಮ್ ನೇವಿಗೇಟ್) ಪ್ರಯಾಣ ಮಾಡಿ 5 ದೇಶಗಳಿಗೆ ಭೇಟಿ ನೀಡಿ, ನಾಲ್ಕು ಖಂಡಗಳನ್ನು ಹಾದು, 3 ಸಾಗರಗಳನ್ನು ದಾಟಿ ಭೂಮಧ್ಯ ರೇಖೆಯನ್ನು 2 ಬಾರಿ ದಾಟಿದ ಈ ಐತಿಹಾಸಿಕ ಸಾಧನೆಯೇ ನಾವಿಕ್ ಸಾಗರ್ ಪರಿಕ್ರಮ.
ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಭಾರತೀಯ ನೌಕಾ ಪಡೆಗೆ ಸೇರ್ಪಡೆಗೊಂಡ ತಾರಿಣಿ ಎಂಬ ಸ್ವದೇಶಿ ನಿರ್ಮಿತ ಲಘು ನೌಕೆಯಿಂದ (ಸೈಲಿಂಗ್ ಬೋಟ್ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ) ಹಲವಾರು ದಾಖಲೆಗಳನ್ನು ನಿರ್ಮಿಸಿ ಮಹಿಳಾ ಸಬಲೀ ಕರಣದ ಹೊಸ ಅಧ್ಯಾಯವನ್ನು ತೆರೆದು ಇಡೀ ಜಗತ್ತು ಭಾರತದ ಮಹಿಳಾ ಶಕ್ತಿ ಹಾಗೂ ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಗುಣಗಾನ ಮಾಡುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂಬುದನ್ನೂ ನಿರೀಕ್ಷಿಸಿರಲಿಲ್ಲ. ತಾರಿಣಿ, ಮಹಿಳಾ ಸಬಲೀಕರಣ, ನಾರಿ ಶಕ್ತಿ, ನೌಕಾ ಪಡೆ, ಲಘು ನೌಕೆ, ಇವುಗಳಿಗೆ ಸಂಬಂಧ ಕಲ್ಪಿಸುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿರಬಹುದು.
ಒಮ್ಮೆ ಆಲೋಚಿಸಿ, ಐಷಾರಾಮಿ ಹಡಗಿನಲ್ಲಿ ಕುಳಿತು ಕೊಂಡು ಸಮುದ್ರದ ಮಧ್ಯೆ ಸತತವಾಗಿ 15 ದಿನಗಳ ಕಾಲ ಪ್ರ¿ಣಕ್ಕೆ ನೀವು ಸಿದ್ಧರಿದ್ದೀರಾ? ಇದನ್ನು ಆಲೋಚಿಸಿದ ಮರು ಕ್ಷಣ ನಿಮ್ಮ ಮನಸ್ಸಿನಲ್ಲಿ ಬರುವ ವಿಚಾರ ಏನೆಂದರೆ, ಸುತ್ತಲೂ ಸಮುದ್ರದ ನೀರನ್ನು ಬಿಟ್ಟು ಬೇರೆ ಏನನ್ನೂ ನೋಡಲು ಸಾಧ್ಯವಿಲ್ಲದ ಪ್ರಯಾಣ ನಮಗೆ ಬೇಡ ಅಂತ. ಆದರೆ ಕೇವಲ 55 ಅಡಿ ಉದ್ದವಿರುವ (ಗೋವಾದ ಅಕ್ವೇರಿಸ್ ಶಿಪ್‌ಯಾರ್ಡಿನಲ್ಲಿ ನಿರ್ಮಿಸಿದ) ಸಾಮಾನ್ಯ ನೌಕೆಯಲ್ಲಿ ಸಾಗರದ ಕಠಿಣ ಪರಿಸ್ಥಿತಿಯಲ್ಲಿ ಸತತವಾಗಿ 8 ತಿಂಗಳ ಕಾಲ ಕೇವಲ ಆರು ಮಂದಿ ಮಹಿಳೆ ಯರು ಸುಮಾರು 21,600 ನಾಟಿಕಲ್ ಮೈಲುಗಳಷ್ಟು ದೂರ ಪ್ರಯಾಣ ಮಾಡಿ 5 ದೇಶಗಳಿಗೆ ಭೇಟಿ ನೀಡಿ, ನಾಲ್ಕು ಖಂಡಗಳನ್ನು ಹಾದು, 3 ಸಾಗರಗಳನ್ನು ದಾಟಿ ಭೂಮಧ್ಯ ರೇಖೆಯನ್ನು 2 ಬಾರಿ ದಾಟಿದ ಈ ಐತಿಹಾಸಿಕ ಸಾಧನೆಯೇ ನಾವಿಕ ಸಾಗರ್ ಪರಿಕ್ರಮ.
ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ಗೋವಾದ ಸಮುದ್ರ ಕಿನಾರೆಯಿಂದ ಆರಂಭಗೊಂಡ ಈ ಐತಿಹಾಸಿಕ ಸಾಗರ ಯಾತ್ರೆಗೆ ಚಾಲನೆ ನೀಡಿದ್ದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್. ಈ ದಾಖಲೆ ನಿರ್ಮಿಸಲು ಅಂದು ಗೋವಾದಿಂದ ಪ್ರಯಾಣ ಆರಂಭಿಸಿದ ನೌಕೆಯ ಹೆಸರೇ ಐ.ಎನ್.ಎಸ್.ವಿ ತಾರಿಣಿ. ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ನೇತೃತ್ವದ ಈ ತಂಡ ದಲ್ಲಿ ಲೆ| ಕಮಾಂಡರ್ ಪ್ರತಿಭಾ ಜಾಮವಾಲ್, ಲೆ|ಕಮಾಂಡರ್ ಸ್ವಾತಿ, ಲೆ| ಐಶ್ವರ್ಯಾ ಬೊಡಪಟ್ಟಿ, ಲೆ|ಎಸ್| ವಿಜಯಾ, ಲೆ| ಪಾಯಲ್ ಗುಪ್ತಾ ಇದ್ದರು. ಇವರೆಲ್ಲರೂ ಭಾರತೀಯ ನೌಕಾ ಡೆಯ ಅಧಿಕಾರಿಗಳು. ಹಗಲು ರಾತ್ರಿ ಸಮುದ್ರದಲ್ಲಿ ಸಾಗುತ್ತಾ ಅಕ್ಟೋಬರ್ 23, 2017 ರಂದು ಆಸ್ಟ್ರೇಲಿಯಾದ ಫ್ರೀಮ್ಯಾಂಟಲ್ ಬಂದರಿಗೆ ಪ್ರವೇಶಿಸಿದಾಗ ಇವರನ್ನು ಅಲ್ಲಿನ ಭಾರತೀಯ ರಾಯ ಭಾರಿಗಳು, ಅನಿವಾಸಿ ಭಾರತೀಯರು ಆತ್ಮೀಯವಾಗಿ ಸ್ವಾಗತಿಸಿ ದರು. ಈ ರೋಚಕ ಪ್ರಯಾಣದ ಮೊದಲ ಘಟ್ಟವನ್ನು ಇಲ್ಲಿ ಪೂರೈಸಿದ ಸಾಹಸಿ ಮಹಿಳಾ ತಂಡವು ತಾವು ಪ್ರಯಾಣಿಸುತ್ತಿದ್ದ ನೌಕೆಯ ದುರಸ್ತಿ ಹಾಗೂ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಸಲುವಾಗಿ ಎರಡು ವಾರಗಳ ಕಾಲ ಇದೇ ಬಂದರಿನಲ್ಲಿ ತಂಗಿತು. ಈ ಎರಡು ವಾರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ತಾರಿಣಿ ಮಹಿಳಾ ತಂಡವು ಅಲ್ಲಿನ ಅಧಿಕಾರಿ ವರ್ಗಗಳ ಜೊತೆ, ಪರ್ತ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ತಮ್ಮ ಅಭಿಯಾನದ ಬಗ್ಗೆ ವಿವರಿಸಿದರು ಹಾಗೂ ಅಲ್ಲಿನ ಪಾರಂಪರಿಕ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ನವೆಂಬರ್ 5, 2017 ಮತ್ತೆ ತಾರಿಣಿ ಏರಿದ ಆರು ಮಂದಿ ಮಹಿಳೆಯರು ನ್ಯೂಜಿಲ್ಯಾಂಡಿನ ಲಿಟಲ್‌ಟನ್‌ನತ್ತ ಪ್ರಯಾಣ ಆರಂಭಿಸಿದರು. ಹಗಲು ರಾತ್ರಿ ಎಂದು ಬೇಧವಿಲ್ಲದೇ ನಿತ್ಯ ಪಾಳಿಯ ಪ್ರಕಾರ ನೌಕೆಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಗಳ ಧೈರ್ಯವನ್ನು ಮೆಚ್ಚಲೇಬೇಕು. ತಾರಿಣಿಯು ನವೆಂಬರ್ 29, 2017 ರಂದು ಸುಮಾರು 7800 ನಾಟಿಕಲ್ ಮೈಲುಗಳ ಸುದೀರ್ಘ ಪ್ರಯಾಣವನ್ನು (ಗೋವಾದಿಂದ) ಮುಗಿಸಿ ನ್ಯೂಜಿಲ್ಯಾಂಡ್ ದೇಶದ ಲಿಟಲ್‌ಟನ್ ಪೋರ್ಟ್ ಪ್ರವೇಶಿಸಿದಾಗ ಅಲ್ಲಿ ಸೇರಿದ್ದ ರಾಯಭಾರಿಗಳು ವೀರ ವನಿತೆ ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಮುಕ್ತ ಕಂಠದಿಂದ ಇವರ ಅಭಿಯಾನವನ್ನು ಕೊಂಡಾಡಿದರು. ಇಲ್ಲಿಗೆ ಪ್ರಯಾಣದ 2ನೇ ಹಂತವನ್ನು ಯಶಸ್ವಿಯಾಗಿ ಮುಗಿಸಿದ ತಾರಿಣಿ ತಂಡವು ಸುಮಾರು ಎರಡು ವಾರಗಳ ಕಾಲ ತಮ್ಮ ನೌಕೆಯನ್ನು ನಿಲುಗಡೆಗೊಳಿಸಿ ನ್ಯೂಜಿಲೆಂಡಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಸಂವಾದ ನಡೆಸಿದರು.
ಡಿಸೆಂಬರ್ 12, 2017ರಂದು ತಾರಿಣಿ ತಂಡವು ಪೋರ್ಟ್ ಸ್ಟ್ಯಾನ್ ಲೀ ಯಲ್ಲಿನ ಫಾಲ್ಕ್ಲ್ಯಾಂಡ್ ದ್ವೀಪದ ಕಡೆಗೆ 3ನೇ ಹಂತದ ಪ್ರಯಾಣವನ್ನು ಆರಂಭಿಸಿತು. ಈ ಹಂತದ ಪ್ರಯಾಣವು ಮಹಿಳಾ ತಂಡದ ಸಾಮರ್ಥ್ಯ, ತಾಳ್ಮೆ, ದೈಹಿಕ, ಮಾನಸಿಕ ಕ್ಷಮತೆ ಪರೀಕ್ಷಿಸುವ ಘಟ್ಟವಾಗಿತ್ತು. ಏಕೆಂದರೆ ಸುಮಾರು 41 ದಿನಗಳ ಕಾಲ ಪೆಸಿಫಿಕ್ ಸಾಗರದಲ್ಲಿ ಉಂಟಾದ ಸೂಪರ್ ಸೈಕ್ಲೋನ್ ಚಂಡಮಾರುತದ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಇವರು ಸಾಗರದ ಮಧ್ಯೆ ನಡೆಸಿದ ಪ್ರಯಾಣವು ಪರಿಣಿತ ನಾವಿಕರನ್ನೂ ನಾಚಿಸುವಂಥದ್ದು. ಈ ಬಗ್ಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ ತಂಡದಲ್ಲಿದ್ದ ಲೆಫ್ಟಿನೆಂಟ್ ಕಮಾಂಡರ್ ಸ್ವಾತಿ ಅವರು, ಪೆಸಿಫಿಕ್ ಸಾಗರದಲ್ಲಿ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿ ಹೇಗಿತ್ತೆಂದರೆ ಅಲೆಗಳ ಎತ್ತರವು ಸುಮಾರು ಹತ್ತು ಮೀಟರ್‌ಗಳಷ್ಟಿತ್ತು. ಬೃಹತ್ ಗಾತ್ರದ ಅಲೆಗಳು ನಮಗಪ್ಪಳಿಸುತ್ತಿದ್ದವು. ಅಲೆಗಳ ಎತ್ತರವು ಒಂದೆಡೆಯಾದರೆ ಸುಮಾರು 140 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿತ್ತು ಎಂದು ಮೈ ಜುಮ್ಮೆನ್ನುವ ರೀತಿಯಲ್ಲಿ ವಿವರಿಸುತ್ತಾರೆ.
ಜನವರಿ 21, 2018ರಂದು ಫಾಲ್ಕ್ಲ್ಯಾಂಡ್ ದ್ವೀಪವನ್ನು ಪ್ರವೇಶಿಸಿ ಅಲ್ಲಿ ನೌಕೆಯ ದುರಸ್ತಿ ಕಾರ್ಯಕ್ಕೆ ಹಾಗೂ ಆಹಾರ ಸಾಮಗ್ರಿಗಳನ್ನು ಶೇಖರಿಸುವ ಸಲುವಾಗಿ ಸುಮಾರು ಹದಿನೈದು ದಿನಗಳ ಕಾಲ ತಾರಿಣಿಯನ್ನು ನಿಲುಗಡೆ ಗೊಳಿಸಿದ ಮಹಿಳಾ ತಂಡವು ಅಲ್ಲಿಯೂ ಅನೇಕ ಮಂದಿಯನ್ನು ಭೇಟಿಯಾಗಿ ತಮ್ಮ ಪ್ರವಾಸದ ಬಗ್ಗೆ ವಿವರಿಸಿದರು. ಸಾವಿರಾರು ಮಂದಿ ನೌಕೆಯನ್ನು ವೀಕ್ಷಿಸಲು ಆಗಮಿಸಿ ಇವರನ್ನು ಹುರಿದುಂಬಿಸಿ ಶುಭ ಹಾರೈಸಿದರು. ಜಗತ್ತಿನ ಯಾವುದೇ ಭಾಗವನ್ನು ಸಂಪರ್ಕಿಸಲು ತಾರಿಣಿಯಲ್ಲಿ ಉಪಗ್ರಹ ಆಧಾರಿತ ಸಂವಹನ ವ್ಯವಸ್ಥೆಯಿತ್ತು. ಪ್ರಯಾಣಕ್ಕೆ ಸಂಬಂಧಿಸಿದ ಹಂತ ಹಂತದ ಮಾಹಿತಿಗಳನ್ನು ತಂಡದ ಸದಸ್ಯೆ ಲೆಫ್ಟಿನೆಂಟ್ ಐಶ್ವರ್ಯಾ ಬ್ಲಾಗ್ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ನೀಡುತ್ತಿದ್ದರು.
ಫೆಬ್ರವರಿ 4, 2018ರಂದು ಪ್ರಯಾಣದ ನಾಲ್ಕನೇ ಘಟ್ಟ ಆರಂಭಿಸಿದ ತಾರಿಣಿ ತಂಡವು 17,500 ನಾಟಿಕಲ್ ಮೈಲ್‌ಗಳಷ್ಟು ದೂರವನ್ನು (ಆರಂಭಿಕ ಹಂತದಿಂದ) ಕ್ರಮಿಸಿ ಮಾರ್ಚ್ 2, 2018ರಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಪ್ರವೇಶಿಸಿತು. ಇಲ್ಲಿಯೂ ತಾರಿಣಿ ತಂಡಕ್ಕೆ ಅಭೂತಪೂರ್ವ ಸ್ವಾಗತ ಲಭಿಸಿತು. ಇಲ್ಲಿ ನೆಲೆಸಿರುವ ಭಾರತೀಯರು ಇವರನ್ನು ಸ್ವಾಗತಿಸಲು ತಂಡೋಪತಂಡವಾಗಿ ಆಗಮಿಸಿ ಇವರ ಸಾಹಸದ ಗುಣಗಾನ ಮಾಡಿದರು. ಸುಮಾರು ಎರಡು ವಾರಗಳ ಕಾಲ ನಿಲುಗಡೆಯ ನಂತರ ಮತ್ತೆ ತಮ್ಮ (ಸರ್ಕಮ್ ನೇವಿಗೇಟ್) ಸಾಗರ ಯಾತ್ರೆಯ ಅಂತಿಮ ಹಂತವನ್ನು ಪೂರ್ಣಗೊಳಿಸುವ ಸಲುವಾಗಿ ಭಾರತದತ್ತ ಪ್ರಯಾಣ ಬೆಳೆಸಿದ ತಾರಿಣಿ ತಂಡವು ಮೇ 21, 2018 ರಂದು ತಾಯ್ನಾಡಿಗೆ ಮರಳಿತು. ತಾರಿಣಿ ತಂಡದ ಬರುವಿಕೆಯನ್ನು ನಿರೀಕ್ಷಿಸುತ್ತ ಗೋವಾದ ಸಮುದ್ರ ಕಿನಾರೆಯಲ್ಲಿ ಮುಂಚಿತವಾ ಗಿಯೇ ಆಗಮಿಸಿದ್ದ ನಿರ್ಮಲಾ ಸೀತಾರಾಮನ್ ಭಾರತೀಯ ನೌಕಾ ಪಡೆಯ ಇತರ ಅಧಿಕಾರಿಗಳ ಜೊತೆ ತಾರಿಣಿ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಗಣೇಶ್ ಪ್ರಸಾದ್ ಜಿ. ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.