Parliament ಮೂರು ಹಂತದ ಭದ್ರತೆಯಿದ್ದರೂ…! ; ಭದ್ರತಾ ಉಸ್ತುವಾರಿ ಯಾರು?
ಕರ್ನಾಟಕದಲ್ಲೂ ಆಗಿತ್ತು ಭದ್ರತಾ ವೈಫಲ್ಯ ಪ್ರಕರಣ... 2001ರ ಉಗ್ರ ದಾಳಿ ನೆನಪಿಸಿದ ಘಟನೆ; ಅಂದೇನಾಗಿತ್ತು?
Team Udayavani, Dec 14, 2023, 7:30 AM IST
ಪಾಸ್ ಹೊಂದಿರುವ ಸಂದರ್ಶಕರು ಸಂಸತ್ ಭವನದೊಳಗೆ ಭೇಟಿ ನೀಡಲು ಮೂರು ಹಂತದಲ್ಲಿ ಭದ್ರತಾ ಪರಿಶೀಲನೆ ವ್ಯವಸ್ಥೆ ಇದೆ. ಸಂಸತ್ತಿನ ಆವರಣದ ಪ್ರವೇಶ ದ್ವಾರ, ಸಂಸತ್ತಿನ ಕಟ್ಟಡದ ಪ್ರವೇಶ ದ್ವಾರ, ಸಂದರ್ಶಕರ ಗ್ಯಾಲರಿಗೆ ತೆರಳುವ ಕಾರಿಡಾರ್‌ನಲ್ಲಿ ಭದ್ರತಾ ತಪಾಸಣೆ ನಡೆಯುತ್ತದೆ. ಹೀಗಿ ದ್ದರೂ ಬುಧ ವಾರ ನಡೆದ ಘಟ ನೆಯು ಭದ್ರತಾ ಲೋಪ ಆಗಿದ್ದು ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮೂರು ಬಾರಿ ತಪಾಸಣೆ
ಮೊದಲನೆಯದಾಗಿ ಸಂಸತ್ತಿನ ಆವರಣದ ಪ್ರವೇಶ ದ್ವಾರದಲ್ಲಿ ಸಂದರ್ಶಕರ ಬಳಿ ಇರುವ ಬ್ಯಾಗ್ ಇತರ ವಸ್ತುಗಳನ್ನು ಕನಿಷ್ಠ ಮೂರು ಬಾರಿ ಪರಿಶೀಲಿಸಲಾಗುತ್ತದೆ. ಈ ಸಂದರ್ಶಕರು ಪ್ರತ್ಯೇಕ ಪ್ರವೇಶ ದ್ವಾರ ಬಳಸಬೇಕು ಮತ್ತು ಸಂಸತ್ ಭವನದ ಸಂಕೀರ್ಣದ ಹೊರಗೆ ತಮ್ಮ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಈ ಪ್ರಕ್ರಿಯ ಪೂರ್ಣಗೊಂಡ ಬಳಿಕ ಸಂಸತ್ ಪ್ರದೇಶ ಪ್ರವೇಶಿಸಬಹುದು. ಎರಡನೆಯದಾಗಿ ಸಂಸತ್ತಿನ ಕಟ್ಟಡದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್‌ನಿಂದ ಹೊರ ಬಂದ ಬಳಿಕ ಭದ್ರತಾ ತಪಾಸಣೆ ನಡೆಯುತ್ತದೆ. ಮೂರನೆಯದಾಗಿ ಸಂದರ್ಶಕರ ಗ್ಯಾಲರಿಗೆ ತೆರಳುವ ಕಾರಿಡಾರ್‌ನಲ್ಲಿ ಮತ್ತೂಂದು ಬಾರಿ ಭದ್ರತಾ ತಪಾಸಣೆ ನಡೆಸಲಾಗುತ್ತದೆ.
ಈ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಮನ್ವಯಕ್ಕಾಗಿ ಜಂಟಿ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಸಂಸತ್ ಭವನದ ಸುತ್ತಲೂ ಪರಿಧಿ ರಕ್ಷಣ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿರುತ್ತದೆ.
ಜತೆಗೆ ಉದ್ಯಾನಗಳು, ಕಸಗುಡಿಸುವ ವರು ಮತ್ತು ಆವರಣದಲ್ಲಿರುವ ಇತರರನ್ನು ಒಳಗೊಂಡಂತೆ ಸಿಬಂದಿ ಯನ್ನು ಗುರುತಿಸಲು ಸಂಸತ್ತಿನ ಕಾವಲುಗಾರರಿಗೆ ತರಬೇತಿ ನೀಡಲಾಗು ತ್ತದೆ. ಅವರೆಲ್ಲರೂ ಕಡ್ಡಾಯ ಗುರುತಿನ ಚೀಟಿಗಳನ್ನು ಹೊಂದಿರಬೇಕಿರುತ್ತದೆ.
ಯಾರ್ಯಾರಿಗೆ ಪ್ರವೇಶ?
ಗುರುತಿನ ಚೀಟಿಗಳನ್ನು ಹೊಂದಿರುವ ಸಂಸದರು, ಅಧಿಕಾರಿಗಳು, ಪ್ರಮಾಣೀಕೃತ ಪತ್ರಕರ್ತರು, ತಂತ್ರಜ್ಞರು ಮತ್ತು ಸಿಬಂದಿ ಮಾತ್ರ ಸಂಸತ್ ಪ್ರವೇಶಿಸಲು ಅನುಮತಿ ಇದೆ. ಇದನ್ನು ಹೊರತುಪಡಿಸಿ, ಇತರ ಎಲ್ಲರಿಗೂ ಪ್ರವೇಶ ನಿರ್ಬಂಧ ಇದೆ. ಸಂಸತ್ತಿಗೆ ಭೇಟಿ ನೀಡುವವರಿಗೆ ಸಂಸದರಿಂದಲೇ ಭದ್ರತಾ ಅನುಮತಿ ಬೇಕಾಗುತ್ತದೆ. ಹೀಗಾಗಿ ಅವರ ಜವಾಬ್ದಾರಿಯಾಗುತ್ತದೆ. ಅನಧಿಕೃತ ಪ್ರವೇಶವನ್ನು ತಡೆಯಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭದ್ರತಾ ಉಸ್ತುವಾರಿ ಯಾರು?
ಸಂಸತ್ತಿನ ಆವರಣ ಹಾಗೂ ಸುತ್ತಮುತ್ತಲಿನ ಸಂಸದರ ಸುರಕ್ಷತೆಯನ್ನು ಸಂಸತ್ತಿನ ಭದ್ರತಾ ಸೇವೆಗೆ ವಹಿಸಲಾಗಿದೆ. ಇದು ಒಟ್ಟಾರೆ ಸಮನ್ವಯ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ದಿಲ್ಲಿ ಪೊಲೀಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಇಂಟೆಲಿಜೆನ್ಸ್ ಬ್ಯೂರೋ (ಐಬಿ), ವಿಶೇಷ ರಕ್ಷಣ ಗುಂಪು (ಎಸ್‌ಪಿಜಿ) ಮತ್ತು ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್‌ಜಿ) ನಂತಹ ವಿವಿಧ ಭದ್ರತಾ ಸಂಸ್ಥೆಗಳು ಇವೆ. ಭದ್ರತಾ ಸಿಬಂದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಸಂಸತ್ತಿನ ಪರಿಧಿಯ ನಿಯಂತ್ರಣವನ್ನು ತೆಗೆದುಕೊಳ್ಳುವಾಗ ದಿಲ್ಲಿ ಪೊಲೀಸರ ಶಾರ್ಪ್‌ಶೂಟರ್‌ಗಳು ಮತ್ತು ಎಸ್‌ಡಬ್ಯುಎಟಿ ಕಮಾಂಡೋಗಳಿಂದ ಸಹಾಯ ಪಡೆಯುತ್ತವೆ. ಲೋಕಸಭೆಯ ಸೆಕ್ರೆಟರಿಯಟ್‌ನ ಹೆಚ್ಚುವರಿ ಕಾರ್ಯದರ್ಶಿ (ಭದ್ರತೆ) ಅವರು ಸಂಸತ್ತಿನ ಭದ್ರತಾ ಸೇವೆ, ದಿಲ್ಲಿ ಪೊಲೀಸ್, ಐಟಿಬಿಪಿ, ಸಿಆರ್‌ಪಿಎಫ್ ಮತ್ತಿತರ ಪಡೆಗಳು ಇಡೀ ಸಂಸತ್ತಿನ ಭದ್ರತೆಯ ಉಸ್ತುವಾರಿ ವಹಿಸಿರುತ್ತವೆ.
ಕರ್ನಾಟಕದಲ್ಲೂ ಆಗಿತ್ತು ಭದ್ರತಾ ವೈಫಲ್ಯ ಪ್ರಕರಣ
ಕರ್ನಾಟಕದ ವಿಧಾನಸಭೆಯಲ್ಲೂ ತೀರಾ ಇತ್ತೀಚೆಗೆ ಇಂತಹುದೇ ಒಂದು ಭದ್ರತಾ ವೈಫಲ್ಯದ ಪ್ರಕರಣ ಘಟಿಸಿತ್ತು. ಎಲ್ಲ ಹಂತದ ಭದ್ರತೆಗಳನ್ನು ದಾಟಿ ನೇರ ವಿಧಾನಸಭೆ ಪ್ರವೇಶಿಸಿದ್ದ ಆಗಂತುಕನೋರ್ವ ಶಾಸಕರ ಆಸನಗಳಲ್ಲಿ ಕುಳಿತು, ಶಾಸಕರು ಸಚಿವರೊಂದಿಗೆ ಮಾತುಕತೆಯನ್ನೂ ಮಾಡಿ ಹೊರನಡೆದಿದ್ದರು.
ಕಳೆದ ಬಾರಿ ಬೆಂಗಳೂ ರಿನ ವಿಧಾನಸೌಧದಲ್ಲಿ ನಡೆ ದಿದ್ದ ಬಜೆಟ್ ಅಧಿವೇಶನದ ವೇಳೆ ಈ ಘಟನೆ ನಡೆದಿದ್ದು, ಡಿಸಿಎಂ ಡಿ.ಕೆ. ಶಿವ ಕುಮಾರ್ ಅವರು ಕೂಡ ವಿಧಾನ ಸಭೆಯೊಳಗೇ ಆ ವ್ಯಕ್ತಿಗೆ ಹಸ್ತಲಾಘವ ಮಾಡಿ ದ್ದರು. ಹೀಗೆ ವಿಧಾನಸಭೆ ಪ್ರವೇಶಿಸಿದ್ದ ವ್ಯಕ್ತಿಯು ಚಿತ್ರದುರ್ಗ ಮೂಲದ ವಕೀಲ ಎಂಬುದು ಗೊತ್ತಾಗಿ ತ್ತಲ್ಲದೆ, ಭದ್ರತಾ ಸಿಬಂದಿ ಯಾರೋ ಶಾಸಕರು ಎಂದುಕೊಂಡು ಒಳಗೆ ಬಿಟ್ಟಿದ್ದರು. ಪಕ್ಕದಲ್ಲೇ ಕುಳಿತಿದ್ದ ಗುರುಮಿಠಕಲ್‌ನ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರಿಗೆ ಆತ ಶಾಸಕನಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಸಭಾಧ್ಯಕ್ಷರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಪರಿಶೀಲನೆ ನಡೆಸಿ, ಭದ್ರತೆ ಹೆಚ್ಚಿಸಲು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
2001ರ ಉಗ್ರ ದಾಳಿ ನೆನಪಿಸಿದ ಘಟನೆ
ಗ್ಯಾಸ್ ಕ್ಯಾನಿಸ್ಟರ್ ಪ್ರಕರಣವು ದೇಶದೆಲ್ಲೆಡೆ ತಲ್ಲಣ ಸೃಷ್ಟಿಸಿದೆ. ಸಂಸತ್ತಿನಲ್ಲಾದ ಅತೀದೊಡ್ಡ ಭದ್ರತಾ ಲೋಪವು ದೇಶದ ಆಡಳಿತದ ಹೃದಯ ಭಾಗವನ್ನೇ ನಡುಗಿಸಿ ಹಾಕಿದೆ. ಅಲ್ಲದೇ ಭಾರತ 22 ವರ್ಷಗಳ ಹಿಂದೆ ಸಾಕ್ಷಿಯಾಗಿದ್ದ ಆ ಕರಾಳ ಕೃತ್ಯವನ್ನೂ ಮತ್ತೆ ನೆನಪಿಸಿದೆ. ಜತೆಗೆ ಆ ಕರಾಳ ದಿನದಂದೇ ಈ ಘಟನೆಯೂ ನಡೆದಿದ್ದು ಭೀತಿ ಹುಟ್ಟಿಸಿದೆ.
ಏನದು ಕರಾಳ ಕೃತ್ಯ ?: ಅಂದು 2001ರ ಡಿ.13. ಸಂಸತ್ ಕಟ್ಟಡದ ಒಳಗೆ 100ಕ್ಕೂ ಅಧಿಕ ಸಂಸದರು, ರಾಜಕಾರಣಿಗಳು ಜೀವವನ್ನು ಅಂಗೈ ಮುಷ್ಟಿಯಲ್ಲಿ ಹಿಡಿದು ನಿಂತಿದ್ದರೆ ಇತ್ತ ಸಂಸತ್ ಆವರಣದಲ್ಲಿ ಬರೋಬ್ಬರಿ 30 ನಿಮಿಷಗಳ ಕಾಲ ಗುಂಡಿನ ಮಳೆಯಾಗುತ್ತಿತ್ತು. ಒಂದೆಡೆ 6 ಮಂದಿ ದಿಲ್ಲಿ ಪೊಲೀಸ್ ಸಿಬಂದಿ, ಇಬ್ಬರು ಸಂಸತ್ ಭದ್ರತಾ ಸಿಬಂದಿ ಹಾಗೂ ಓರ್ವ ಮಾಲಿ (ಗಾರ್ಡನರ್) ರಕ್ತದ ಮಡುವಲ್ಲಿ ಸತ್ತು ಬಿದ್ದಿದ್ದರೆ ಮತ್ತೂಂದೆಡೆ ಸಂಸತ್ತಿನ ಸುತ್ತ ಸರ್ಪಗಾವಲಾಗಿದ್ದ ಭದ್ರತಾ ಸಿಬಂದಿ ಐವರು ಉಗ್ರರನ್ನು ಹೊಡೆದುರುಳಿಸಿದ್ದರು. ಅದು ದೇಶವನ್ನೇ ಬೆಚ್ಚಿಬೀಳಿಸಿದ್ದ ಪಾರ್ಲಿಮೆಂಟ್ ಅಟ್ಯಾಕ್ ! ಹೌದು, ದೇಶದ ಆಡಳಿತದ ಶಕ್ತಿ ಕೇಂದ್ರವಾಗಿದ್ದ ಸಂಸತ್ತಿನ ಮೇಲೆ ಉಗ್ರದಾಳಿ ನಡೆದು ಬುಧವಾರಕ್ಕೆ ಸರಿಯಾಗಿ 22 ವರ್ಷ.
ಅಂದೇನಾಗಿತ್ತು?
ಡಿ.13ರ ಬೆಳಗ್ಗೆ 11.40ರ ಸಮಯಕ್ಕೆ ಸರಿಯಾಗಿ ಕೆಂಪುದೀಪ ಹೊಂದಿದ್ದ, ಗೃಹ ಸಚಿವಾಲಯದ ಸ್ಟಿಕ್ಕರ್ ಹಾಕಿಕೊಂಡಿದ್ದ ಅಂಬಾ ಸಿಡರ್ ಕಾರ್‌ವೊಂದು ಸಂಸತ್ ಕಟ್ಟಡದ ಗೇಟ್ ಪ್ರವೇಶಿಸಿತು. ಭದ್ರತಾ ಸಿಬಂದಿಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತಕ್ಷಣವೇ ಕಾರನ್ನು ಹಿಂದೆ ತೆಗೆಯುವಂತೆ ಒತ್ತಾಯಿಸಿದ್ದರು. ತತ್‌ಕ್ಷಣ ಕಾರಿನ ಚಾಲಕ ಉಪರಾಷ್ಟ್ರ ಪತಿ ಅವರ ಕಾರಿಗೆ ಢಿಕ್ಕಿ ಹೊಡೆದಿದ್ದು, ಕೂಡಲೇ ಐವರು ಉಗ್ರರು ಕೆಳಗಿಳಿದು ಏಕಾಏಕಿ ಭದ್ರತಾ ಸಿಬಂದಿಯತ್ತ ಗುಂಡು ಹಾರಿಸಲು ಶುರುವಿಟ್ಟುಕೊಂಡಿದ್ದರು. ಉಗ್ರರನ್ನು ನೋಡುತ್ತಿದ್ದಂತೆ ಕಾನ್‌ಸ್ಟೆಬಲ್ ಕಮಲೇಶ್ ಕುಮಾರಿ ಸಂಸತ್ತಿಗೆ ಅಲಾರಂ ನೀಡಿದರು. ತತ್‌ಕ್ಷಣವೇ ಕಟ್ಟಡದ ಎಲ್ಲ ಬಾಗಿಲುಗಳನ್ನು ಮುಚ್ಚಿಸ ಲಾಯಿತು. ಇತ್ತ ಭದ್ರತಾ ಸಿಬಂದಿ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರಿದು 9 ಮಂದಿ ಯನ್ನು ಉಗ್ರರು ಕೊಂದು ಹಾಕಿದ್ದರು. ಅಲ್ಲದೇ ಎಕೆ. 47 ಬಂದೂಕುಗಳು, ಗ್ರೆನೇಡ್‌ಗಳೊಂದಿಗೆ ಸಜ್ಜಿತರಾಗಿದ್ದ ಅವರು ಆತ್ಮಾಹುತಿ ಬಾಂಬ್‌ಗಳ ಕೋಟ್‌ಗಳನ್ನೂ ಧರಿಸಿದ್ದರು. ಭದ್ರತಾ ಸಿಬಂದಿ ಎಲ್ಲ ಐವರೂ ಉಗ್ರರನ್ನು ಹೊಡೆದುರುಳಿಸಿದ್ದು, ಅದರಲ್ಲಿ ಓರ್ವನಿಗೆ ಗುಂಡು ತಗಲುತ್ತಿದ್ದಂತೆಯೇ ಬಾಂಬ್ ಇದ್ದ ಕೋಟು ಸ್ಫೋಟಗೊಂಡಿತ್ತು. ಉಗ್ರರೊಂದಿಗಿನ ಕಾದಾಟದಲ್ಲಿ 9 ಮಂದಿ ಪ್ರಾಣತೆತ್ತು, 17 ಮಂದಿ ಗಾಯಗೊಂಡರೂ ಯಾವುದೇ ಸಂಸದರಿಗಾಗಲಿ, ಸಚಿವರಿಗಾಗಲಿ ಹಾನಿಯಾಗದಂತೆ ರಕ್ಷಿಸಲಾಯಿತು.
ವಿದೇಶಗಳಲ್ಲೂ ನಡೆದಿವೆ ಇಂಥ ದಾಳಿ
ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಂಸತ್ ಭವನ, ಅಧ್ಯಕ್ಷರು, ಪ್ರಧಾನಮಂತ್ರಿ ಸಹಿತ ಪ್ರಮುಖ ಹುದ್ದೆಗಳಲ್ಲಿರುವ ಕಚೇರಿ, ಕಟ್ಟಡಗಳ ಮೇಲೆ 2000ದಿಂದೀಚೆಗೆ ನಡೆದ ಪ್ರಮುಖ ದಾಳಿಗಳ ಒಂದು ಸಂಕ್ಷಿಪ್ತ ಚಿತ್ರಣ ಇಲ್ಲಿದೆ. ಈ ಬಹುತೇಕ ದಾಳಿಗಳನ್ನು ಉಗ್ರಗಾಮಿಗಳು, ಬಂಡುಕೋರರು, ಸರಕಾರದ ನೀತಿ, ನಿರ್ಧಾರಗಳ ವಿರೋಧಿಗಳು ನಡೆಸಿದ್ದರೆ, ಕೆಲವೊಂದು ಘಟನೆಗಳು ಮಾನಸಿಕ ಅಸ್ವಸ್ಥರಿಂದ ನಡೆದಿವೆ.
2000 ಮೇ 19: ಫಿಜಿ ಬಂಡುಕೋರ ದಂಗೆ
ಜಾರ್ಜ್ ಸ್ಪೈಟ್ ನೇತೃತ್ವದ ಬಂಡುಕೋರ ಸಂಘಟನೆ ಐ ಟೌಕೀಸ್‌ನಿಂದ ಫಿಜಿ ಪಾರ್ಲಿಮೆಂಟ್ ಮೇಲೆ ದಾಳಿ. ಪ್ರಧಾನಿ ಮಹೇಂದ್ರ ಚೌಧರಿ ಮತ್ತವರ ಸಂಪುಟದ ಸಚಿವರ ಸಹಿತ ಹಲವರನ್ನು ಒತ್ತೆಸೆರೆಯಲ್ಲಿರಿಸಿದ ಬಂಡುಕೋರರು.
ಅ.5, 2000: ಬೆಲ್ಗ್ರೇಡ್
ಯಗೊಸ್ಲೋವಿಯಾದಬೆಲ್ಗ್ರೇಡ್ ನಲ್ಲಿ ಅಧ್ಯಕ್ಷ ಸ್ಲೊಬೊಡಾನ್ ಮಿಲೊಸೆವಿಕ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನಕಾರರಿಂದ ಫೆಡರಲ್ ಅಸೆಂಬ್ಲಿಗೆ ಮುತ್ತಿಗೆ. ಕಟ್ಟಡದ ಮೇಲೆ ಕಲ್ಲುತೂರಾಟ, ಕಡತಗಳನ್ನು ಹರಿದುಹಾಕಿ ದಾಂಧಲೆ.
ಸೆ.27, 2001: ಸ್ವಿಟ್ಸರ್ಲೆಂಡ್
ಜುಗ್‌ನಲ್ಲಿರುವ ಕಾಂಟೊನಲ್ ಸಂಸತ್‌ಗೆ ನುಗ್ಗಿದ ಫ್ರೆಡ್ರಿಕ್ ಲಿಬಾಚರ್ 14 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ತನಗೇ ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದನು.
ಎ.12, 2007: ಇರಾಕ್
ಬಗ್ಧಾದ್‌ನಲ್ಲಿರುವ ಇರಾಕ್‌ನ ಕೌನ್ಸಿಲ್ ರೆಪ್ರಸೆಂಟೇ ಟಿವ್ಸ್ ಕಟ್ಟಡದಲ್ಲಿರುವ ಕ್ಯಾಂಟೀನ್‌ನಲ್ಲಿ ಆತ್ಮಾಹುತಿ ಬಾಂಬರ್‌ನಿಂದ ದಾಳಿ. ಓರ್ವ ಸಂಸದನ ಸಾವು, ಹಲವು ಸಂಸದರ ಸಹಿತ ಇತರ 23 ಮಂದಿಗೆ ಗಾಯ
ನ.13, 2007: ಫಿಲಿಪ್ಪೀನ್ಸ್
ಕ್ವಿಜಾನ್ ನಗರದಲ್ಲಿರುವ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಕಟ್ಟಡದ ಮುಂಭಾಗ ಬಾಂಬ್ ಸ್ಫೋಟ.
ಎ.7, 2010: ಕಿರ್ಗಿಸ್ಥಾನ್
ಒಮುರ್ಬೆಕ್ ಟೆಕೆಬಾಯೆವ್ ನೇತೃತ್ವದಲ್ಲಿ ವಿಪಕ್ಷ ನಾಯಕರು ಮತ್ತು ಪ್ರತಿಭಟನಕಾರರು ಅಧ್ಯಕ್ಷ ಕುರ್ಮಾನ್‌ಬೆಕ್ ಬಾಕಿಯೆವ್ ಅವರ ಪದಚ್ಯುತಿಗೆ ಆಗ್ರಹಿಸಿ ಬಿಷೆRàಕ್‌ನಲ್ಲಿರುವ ಜೋಗೊರ್ಕು ಕೆನೆಶ್ ಕಟ್ಟಡಕ್ಕೆ ಮುತ್ತಿಗೆ ಹಾಕಿದರು.
ಅ.19, 2010: ರಷ್ಯಾ
ಚೆಚೆನ್ ರಿಪಬ್ಲಿಕನ್‌ನ ಗ್ರೋಜ್ನಿಯ ಪಾರ್ಲಿಮೆಂಟ್ ಕಾಂಪ್ಲೆಕ್ಸ್‌ಗೆ ಮೂವರು ಚೆಚೆನ್ ಉಗ್ರರ ದಾಳಿ. ಮೂವರು ಆತ್ಮಾಹುತಿ ದಾಳಿಕೋರರು ಸೇರಿ 6 ಸಾವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
National Youth Day: ಯುವ ಪೀಳಿಗೆಯ ಮಾರ್ಗದರ್ಶಿ ಸ್ವಾಮಿ ವಿವೇಕಾನಂದ
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
MUST WATCH
ಹೊಸ ಸೇರ್ಪಡೆ
Kottigehara: ಸ್ವೀಟ್ ಬಾಕ್ಸ್‌ನಲ್ಲಿ ಗೋಮಾಂಸ ಇಟ್ಟು ಮಾರಾಟ: ಇಬ್ಬರ ಸೆರೆ
Mysuru: ಮೈಸೂರಲ್ಲಿ ಚಳಿ ತಡೆಯಲಾಗದೆ ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಸಾವು?
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.