ಜಾಗತಿಕ ವಿದ್ಯಮಾನದ ಪ್ರಮುಖ ಸೂತ್ರಧಾರಿ ಅಮೆರಿಕ ಅಧ್ಯಕ್ಷ
Team Udayavani, Jan 18, 2021, 7:24 AM IST
“ಪ್ರಜಾತಂತ್ರದ ಜ್ವಾಲೆಯನ್ನು ನಮ್ಮೀ ರಾಷ್ಟ್ರ ದಲ್ಲಿ ಬಹಳಷ್ಟು ಹಿಂದೆಯೇ ಬೆಳಗಿಸಲಾಗಿದೆ. ಆ ಜ್ವಾಲೆಯನ್ನು ಮಹಾರೋಗವಾಗಲೀ, ಅಧಿಕಾರದ ಅಪಬಳಕೆಯಾಗಲೀ ನಂದಿಸಲು ಅಸಾಧ್ಯ ಎಂಬುದನ್ನು ನಾವು ಇದೀಗ ಮನಗಂಡಿ ದ್ದೇವೆ’ ಇದು ಅಮೆರಿಕದ ಅಧ್ಯಕ್ಷೀಯ ಚುನಾವ ಣೆಯಲ್ಲಿ ಗೆಲುವಿನ ನಗೆ ಬೀರಿದ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಉದ್ಗಾರ. ಅಮೆರಿಕ ಸಂಯುಕ್ತ ಸಂಸ್ಥಾನದ ರಾಜಕೀಯ ವಿದ್ಯಮಾನ, ಅದರಲ್ಲಿಯೂ ಅಲ್ಲಿನ ಅಧ್ಯಕ್ಷೀಯ ಚುನಾವಣೆ ಸಮಗ್ರ ವಿಶ್ವ ರಾಜಕೀಯದ ಮೇಲೆ ಅತ್ಯಂತ ಪ್ರಭಾವ ಬೀರುತ್ತಾ ಬಂದಿರುವುದು ದ್ವಿತೀಯ ಜಾಗತಿಕ ಸಮರೋತ್ತರದ ಪ್ರಚಲಿತ ಇತಿಹಾಸ. 13 ವಸಾಹತುಗಳು ಒಟ್ಟಾಗಿ 1776ರ ಜುಲೈ 4ರಂದು ಏಕಪಕ್ಷೀಯವಾಗಿ ಸೂರ್ಯ ಮುಳು ಗದ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾತಂತ್ರ್ಯಘೋಷಿಸಿತು ಹಾಗೂ ಸುದೀರ್ಘ 6 ವರ್ಷಗಳ ಕಾಲ ಯಾವುದೇ ನಿರ್ದಿಷ್ಟ ಕಾಯಿದೆ, ಕಟ್ಟಳೆಗಳ ಪರಿಧಿ ಇಲ್ಲದೆ ಬದುಕಿದ್ದ, ಆ ಬ್ರಿಟಿಷ್ ಮೂಲದ ಅಮೆರಿಕನ್ನರು ಕೇವಲ “ಶಾಶ್ವತ ಒಕ್ಕೂಟ’ (Perpetual Union) “ಮೈತ್ರಿಕೂಟ’ (Firm League Of Friendship) ಎಂಬ ನೆಲೆಯಲ್ಲಿ ಬದುಕಿದರು.
ಮುಂದೆ ಶಾಶ್ವತ ಸಂಯುಕ್ತ ರಾಜ್ಯದ ಸ್ಥಾಪನೆಯ ಕನಸು ಕಂಡು 1789ರ ಮಾರ್ಚ್ 4ರಂದು ಲಿಖೀತ ದಾಖಲೆಯೊಂದು ಉದ್ಘಾಟನೆ ಗೊಂಡಿತು. ಈ ವಿಶ್ವದ ಪ್ರಪ್ರಥಮ ಲಿಖೀತ ಹಾಗೂ ಕೇವಲ 7 ವಿಧಿಗಳ ಚಿಕ್ಕ ಸಂವಿಧಾನವನ್ನು ಜಾರ್ಜ್ ವಾಷಿಂಗ್ಟನ್ ನೇತಾರಿಕೆಯಲ್ಲಿ ಫಿಲಡೆಲ್ಫಿಯಾ ಸಮ್ಮೇಳನದಲ್ಲಿ ಅಂದಿನ 13 ರಾಜ್ಯಗಳ 55 ಪ್ರತಿನಿಧಿಗಳು ಸಿದ್ಧಗೊಳಿಸಿದ್ದರು. ಇದರ 2ನೇ ವಿಧಿಯು 4 ವರ್ಷಗಳ ಅವಧಿಯ ರಾಷ್ಟ್ರಪತಿಯ ಅತ್ಯುನ್ನತ ಸ್ಥಾನವನ್ನು ಸೃಷ್ಟಿಸಿತು. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ರಾಜ-ಮಹಾರಾಜರು ಅಧಿಪತ್ಯ ನಡೆಸುತ್ತಿದ್ದ 19ನೇ ಶತಮಾನದಲ್ಲಿ ಈ ವಿನೂತನ ಅಧ್ಯಕ್ಷೀಯ ಪದ್ಧತಿಯ ಪ್ರಯೋಗ ಯಶಸ್ವಿಯಾಯಿತು. ಪ್ರಥಮ ಹಾಗೂ ದ್ವಿತೀಯ ಬಾರಿ ಆಯ್ಕೆಗೊಂಡ ಜಾರ್ಜ್ ವಾಷಿಂಗ್ಟನ್ ಸ್ವತಃ 3ನೇ ಬಾರಿ ಆಯ್ಕೆಗೊಳ್ಳುವುದನ್ನು ನಿರಾಕರಿಸಿ ಉತ್ತಮ ಪದ್ಧತಿಗೆ ನಾಂದಿ ಹಾಕಿದರು. 22ನೇ ಸಾಂವಿಧಾನಿಕ ತಿದ್ದುಪಡಿಯಂತೆ ಓರ್ವ ವ್ಯಕ್ತಿ 10 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಅಧ್ಯಕ್ಷರ ಗಾದಿಯಲ್ಲಿರಲು ಅವಕಾಶವಿಲ್ಲ.
ಮೂಲತಃ ಈ ಉನ್ನತ ಹುದ್ದೆಗೆ ನೇರ ಚುನಾವಣೆ ಬದಲು 2 ಹಂತಗಳಲ್ಲಿ ಉತ್ತಮ ತಜ್ಞರ ಸಭೆಯೊಂದರ ರಚನೆ ಹಾಗೂ ಆ ಸಭೆಗೆ ಯೋಗ್ಯ ಅಧ್ಯಕ್ಷರನ್ನು ಆರಿಸುವಿಕೆಯ ಅಧಿಕಾರಕ್ಕೆ ಸಂವಿಧಾನ ಕದ ತೆರೆದಿತ್ತು. ಮಾತ್ರವಲ್ಲ “ನಮ್ಮಿà ನೂತನ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪಕ್ಷ ರಾಜಕೀಯ ಬೇಡ’ ಎಂಬ ಮನದ ಇಂಗಿತವನ್ನು ಸಂವಿಧಾನ ರಚನ ಸಭೆಯ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ತಿಳಿಸಿದ್ದರು. ಆದರೆ ಅದೇ ಸಭೆಯಲ್ಲಿ ಅಲೆಗ್ಸ್ಯಾಂಡರ್ ಹ್ಯಾಮಿಲ್ಟನ್ ಅವರ ಒಂದು ತಂಡ ಹಾಗೂ ಬೆಂಜಮಿನ್ ಫ್ರಾಂಕ್ಲಿನ್ ಅವರ ಇನ್ನೊಂದು ತಂಡ ವೈಚಾರಿಕ ಭಿನ್ನತೆಯನ್ನು ಪ್ರಖರಗೊಳಿಸಿತು. ಅದೇ ಮುಂದೆ ಇವರೀರ್ವರ ನೇತಾರಿಕೆಯಲ್ಲಿ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷವಾಗಿ ರೂಪು ಗೊಂಡಿತು. ಈಗಲೂ ಅಮೆರಿಕದಲ್ಲಿ ದ್ವಿಪಕ್ಷೀಯ ಪದ್ಧತಿಯೇ ಮುಂದುವರಿದಿದೆ.
ವಿಶ್ವದ ಹಿರಿಯಣ್ಣ :
ಅಮೆರಿಕದ ಅಧ್ಯಕ್ಷ ಪದವಿ ಅತ್ಯಂತ ಉನ್ನತ ಹಾಗೂ ರಾಷ್ಟ್ರದ ಪ್ರಥಮ ಪ್ರಜೆಯ ಸ್ಥಾನಮಾನ ಹೊಂದಿದೆ. ದ್ವಿತೀಯ ಮಹಾಯುದ್ಧದೊಂದಿಗೆ ಸಾಮ್ರಾಜ್ಯ ಶಾಹಿತ್ವ (Imperialism), ವಸಾಹತು ಶಾಹಿತ್ವ (Colonialism)ಗಳೆಲ್ಲ ಕಾಲಗರ್ಭದ ಪಳೆಯುಳಿಕೆಗಳಾದವು. ಹಳೆಯ ಜಗತ್ತಿನ ಉದರದಿಂದ ಹೊಸ ಜಗತ್ತು ಆವಿರ್ಭವಿಸಿತು! ಭಾರತದ ಸಹಿತ ವಿಶ್ವದ ಹಲವಾರು ಏಷ್ಯಾ ಹಾಗೂ ಆಫ್ರಿಕಾದ ರಾಷ್ಟ್ರಗಳು ವಿದೇಶಿ ನೊಗ ಕಳಚಿ ಸ್ವತಂತ್ರ ಬಾವುಟ ಹಾರಿಸಿದವು. ಆ ಸಮರೋತ್ತರ 1945ರ ದಿನಗಳಲ್ಲಿಯೇ ಜಾಗ ತಿಕ ಧ್ರುವೀಕರಣಗೊಂಡು ಪ್ರಜಾಪ್ರಭುತ್ವ ಹಾಗೂ ಕಮ್ಯುನಿಸ್ಟ್ ಬಣಗಳು ಹುಟ್ಟಿಕೊಂಡವು. ಸೋವಿಯತ್ ರಷ್ಯಾ ಕಮ್ಯುನಿಸ್ಟ್ ಜಗತ್ತಿನ ನಾಯಕ ಪಟ್ಟ ಹೊಂದಿದರೆ, ಜನತಂತ್ರೀಯ ರಾಷ್ಟ್ರಕೂಟದ “ಹಿರಿಯಣ್ಣ’ನಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಸ್ವಯಂ ಘೋಷಿಸಿಕೊಂಡಿತು. ಹಾಗೂ ಅಮೆರಿಕ ಅಧ್ಯಕ್ಷರ ಕಾರ್ಯಪರಿಧಿ ಸಾಗರೋತ್ತರವಾಗಿ ವಿಶ್ವದ ಮೂಲೆ ಮೂಲೆಗೂ ತಲುಪಿತು. ಅದು ಮಧ್ಯ ಏಷ್ಯಾ, ಕಾಂಗೋ, ವಿಯಟ್ನಾಂ, ಕೊರಿಯಾ, ಸುಯೇಜ್ ಕಾಲುವೆ ಅಧಿಪತ್ಯ, ಕಾಶ್ಮೀರ ಸಮಸ್ಯೆ -ಹೀಗೆ ಯಾವುದೇ ಸಂಘರ್ಷವಿರಲಿ ಅಲ್ಲೆಲ್ಲ ಕೈಚಾಚುವ, ಮೂಗು ತೂರಿಸುವ ಜಾಯಾಮಾನ ಅಮೆರಿಕದ ಅಧ್ಯಕ್ಷ ರಿಗೆ ಅನಿವಾರ್ಯ ಎಂಬಂತೆ ಅಂಟಿಕೊಂಡಿತು. ಅಂತಾರಾಷ್ಟ್ರೀಯ ವಿವಾದಗಳಿಗೆ ಮಧ್ಯಸ್ಥಿಕೆಯ ಕೊಡುಗೆ, ವಿವಾದಗಳ ಬಗೆಗೆ ಬಿಗಿ ನಿಲುವು; ಭಯೋತ್ಪಾದಕತೆ ಅದು ಸಿರಿಯಾ, ಅಘಾ^ನಿಸ್ಥಾನ, ಇರಾಕ್- ಎಲ್ಲೇ ಇರಲಿ ಅಲ್ಲೆಲ್ಲ ಸ್ವಯಂ ನಿರ್ಧರಿತ ದಾಳಿಯ ವಿದ್ಯಮಾನ- ಇವೆಲ್ಲವೂ ಅಮೆರಿಕದ ಅಧ್ಯಕ್ಷರ ಕಾರ್ಯಶೈಲಿಯಾಗಿ 1945ರ ಬಳಿಕ ಮಿಂಚಿದೆ. ದ್ವಿತೀಯಮಹಾಯುದ್ಧದ ಪರಿ ಸಮಾಪ್ತಿಗೆ ಅಧ್ಯಕ್ಷ ಟ್ರೂಮನ್ ಅಣುಬಾಂಬು ಪ್ರಯೋಗಿಸಿದ ಬಳಿಕವಂತೂ ಅಮೆರಿಕದ ಅಧ್ಯಕ್ಷರ ಗಾದಿ ಇನ್ನಷ್ಟು ಪ್ರಭಾವಿ ಎನಿಸಿತು. ಜಗತ್ತಿನ ಹತ್ತು ಹಲವು ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳ ಮಾರಾಟದ ಹಿನ್ನಲೆಯಲ್ಲಿ ಕಲಹಪ್ರಿಯತೆಗೂ ಈ ರಾಷ್ಟ್ರದ ಅಧ್ಯಕ್ಷರ ಕುಮ್ಮಕ್ಕು ಹಲವಾರು ಬಾರಿ ಜಗಜ್ಜಾಹೀರಾಗಿದೆ. ಉದಾಹರಣೆಗೆ 1965ರಲ್ಲಿನ ಭಾರತ-ಪಾಕಿಸ್ಥಾನ ಯುದ್ಧಕ್ಕೆ ಅಧ್ಯಕ್ಷ ನಿಕ್ಸನ್ ಪಾಕಿಸ್ಥಾನದ ಅಯೂಬ್ ಖಾನ್‌ಗೆ ನೀಡಿದ ಅಪಾರ ಶಸ್ತ್ರಾಸ್ತ್ರ, ಅತ್ಯಾಧುನಿಕ ವಿಮಾನ ಹಾಗೂ ಟ್ಯಾಂಕರ್‌ಗಳೇ ಕಾರಣವಾಗಿದ್ದವು.
ಅಮೆರಿಕದ ಅಧ್ಯಕ್ಷರ ಚುನಾವಣೆಯ ಪ್ರಥಮ ಭಾಗವಾಗಿ ಚುನಾವಣ ಸಭೆಯ (Electoral College) ಚುನಾವಣೆ ಕಳೆದ ವರ್ಷದ ನವೆಂಬರ್‌ನಲ್ಲಿ ನಡೆಯಿತು. ಅದರಲ್ಲಿ ಡೆಮಾಕ್ರಟಿಕ್ ಪಕ್ಷದ ಉಮೇದುವಾರರು 306 ಸ್ಥಾನಗಳನ್ನು ಪಡೆದರೆ, ರಿಪಬ್ಲಿಕನ್ ಪಕ್ಷದ 232 ಉಮೇದುವಾರರು ಜಯ ಗಳಿಸಿದರು. ಹಾಗಾಗಿ ಇದೀಗ ಈ ಚುನಾವಣ ಸಭೆ ಅಧ್ಯಕ್ಷರನ್ನಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರನ್ನಾಗಿ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡಿದೆ. ಜ. 20ರಂದು ಜೋ ಬೈಡೆನ್ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಅಮೆರಿ ಕದ ಶ್ವೇತಭವನದ ಅಧಿಪತಿಯಾಗಲಿರುವರು. ಮುಂಬರುವ ದಿನಗಳಲ್ಲಿ ನೂತನ ಅಧ್ಯಕ್ಷರ ಭಾರತದ ಬಗೆಗಿನ ಧೋರಣೆ, ಆರ್ಥಿಕ ಸಂಬಂಧ, ಉದ್ಯೋಗಾವಕಾಶ, ಪೌರತ್ವ- ಇತ್ಯಾದಿ ಉತ್ತಮವಾಗಿಯೇ ಉಳಿಯಲಿ ಎಂಬುದು ಸದಾಶಯ. ಅದೇ ರೀತಿ ವಿಶ್ವದ ಹತ್ತು ಹಲವು ವಿವಾದಗಳು, ಯುದ್ಧಗಳೆಲ್ಲ ಪರಿಸಮಾಪ್ತಿಗೊಳ್ಳುವಂತೆ ಅಧ್ಯಕ್ಷರ ಚಿಂತನೆ ಹರಿಯಲಿ ಹಾಗೂ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ಕಠಿನ ಧೋರಣೆ ಕಂಡು ಬರಲಿ, ಶಾಂತಿ, ಸಹಬಾಳ್ವೆ, ಪರಸ್ಪರ ಹಾಗೂ ಮೈತ್ರಿಗೆ ಒತ್ತು ನೀಡಲಿ ಎಂದು ಹಾರೈಸೋಣ.
ಡಾ| ಪಿ. ಅನಂತಕೃಷ್ಣ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.