Birth Rate: ಜನನ ಪ್ರಮಾಣ ವೃದ್ಧಿಗಾಗಿ ಬಲಾಡ್ಯ ರಾಷ್ಟ್ರಗಳ ಕಸರತ್ತು
ಸಂಕಷ್ಟ ತಂದೊಡ್ಡಿದ ಯುವಪೀಳಿಗೆಯ ಕೊರತೆ
Team Udayavani, Jun 11, 2023, 7:51 AM IST
ಪ್ರಪಂಚದ ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕವಾಗಿ, ತಾಂತ್ರಿಕವಾಗಿ ಹಾಗೂ ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದರೂ ತಮ್ಮ ದೇಶದಲ್ಲಿನ ಜನನ ಪ್ರಮಾಣ ದರವನ್ನು ಹೆಚ್ಚಿಸಲು ಹರಸಾಹಸ ಪಡುತ್ತಿವೆ. ಇನ್ನೊಂದೆಡೆ ಅಭಿವೃದ್ಧಿಶೀಲ ದೇಶಗಳು ಜನನ ಪ್ರಮಾಣ ದರವನ್ನು ತಗ್ಗಿಸಿ ಜನಸಂಖ್ಯೆಯನ್ನು ನಿಯಂತ್ರಿಸಲು ಶ್ರಮಿಸುತ್ತಿವೆ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳಾದ ಚೀನ, ಜಪಾನ್, ದಕ್ಷಿಣ ಕೊರಿಯಾದಂತಹ ದೇಶಗಳು ಒಟ್ಟಾರೆ ಜನಸಂಖ್ಯೆಯಲ್ಲಿ ಮುಂಚೂಣಿ ಯಲ್ಲಿದ್ದರೂ ಯುವಶಕ್ತಿಯ ಅಭಾವ ಈ ದೇಶಗಳನ್ನು ಬಾಧಿಸತೊಡಗಿದೆ. ಜನಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದ್ದುದರಿಂದಾಗಿ ಇಲ್ಲಿನ ಸರಕಾರಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರಿಂದಾಗಿ ಕಳೆದೊಂದು ದಶಕದಿಂದೀ ಚೆಗೆ ಜನನ ಪ್ರಮಾಣ ಇಳಿಮುಖ ವಾಗುತ್ತಲೇ ಸಾಗಿದೆ. ಹೀಗಾಗಿ ಒಟ್ಟಾರೆ ಜನಸಂಖ್ಯೆಯಲ್ಲಿ ಮಕ್ಕಳು, ವಯಸ್ಕರು ಮತ್ತು ಹಿರಿಯ ನಾಗರಿಕರ ಸಂಖ್ಯೆಯಲ್ಲಿ ಭಾರೀ ಅಸಮತೋಲನ ಸೃಷ್ಟಿಯಾಗಿದೆ. ಇದರಿಂದಾಗಿ ಈ ದೇಶಗಳು ಗಂಭೀರವಾದ ಬಿಕ್ಕಟ್ಟಿನಲ್ಲಿ ಸಿಲುಕಿದ್ದು ಈಗ ಜನನ ಪ್ರಮಾಣ ದರವನ್ನು ಹೆಚ್ಚಿಸಲು ಹೊಸಹೊಸ ನೀತಿಗಳನ್ನು ರೂಪಿಸಿ ಜಾರಿಗೆ ತರುತ್ತಿವೆ. ಇದಕ್ಕಾಗಿ ಈ ದೇಶಗಳು ಸಾವಿರಾರು ಕೋಟಿ ಡಾಲರ್‌ಗಳನ್ನು ವ್ಯಯಿಸುತ್ತಿವೆ.
ಏನಿದು ವರದಿ
ವಿಶ್ವ ಆರೋಗ್ಯ ಸಂಸ್ಥೆಯ ಬಿಡುಗಡೆ ಮಾಡಿರುವ “ವಿಶ್ವ ಜನಸಂಖ್ಯಾ ನೀತಿಗಳು – 2021’ರಲ್ಲಿ ವಿಶ್ವದಲ್ಲಿ 1960ರಿಂದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಜನನ ಪ್ರಮಾಣ ದರದಲ್ಲಾಗುತ್ತಿರುವ ಏರಿಳಿತಗಳು, ವಿವಿಧ ದೇಶಗಳು ಈ ಕುರಿತಾಗಿ ಕೈಗೊಂಡ ನೀತಿಗಳು ಮತ್ತು ಸರಕಾರದ ಕ್ರಮಗಳು ಯಾವ ರೀತಿಯಲ್ಲಿ ಪರಿಣಾಮಕಾರಿಯಾಗಿವೆ ಎಂಬ ಬಗೆಗೆ ಸಮಗ್ರ ಬೆಳಕು ಚೆಲ್ಲಲಾಗಿದೆ.
ವರದಿಯ ಪ್ರಮುಖಾಂಶಗಳು
01ಪ್ರಪಂಚದ ನಾಲ್ಕರಲ್ಲಿ ಮೂರರಷ್ಟು ದೇಶಗಳ ಸರಕಾರಗಳು ಗರ್ಭಧಾರಣೆ ಕುರಿತಾದ ನೀತಿಗಳನ್ನು ಹೊಂದಿವೆ. ಇದರಲ್ಲಿ 69 ಸರಕಾರಗಳು ಗರ್ಭಧಾರಣೆ ಪ್ರಮಾಣವನ್ನು ಕಡಿಮೆ ಮಾಡಲು, 55 ಸರಕಾರಗಳು ಈ ಪ್ರಮಾಣವನ್ನು ಹೆಚ್ಚಿಸಲು ಹಾಗೂ 19 ಸರಕಾರಗಳು ಸಮತೋಲನವನ್ನು ಕಾಯ್ದುಕೊಳ್ಳಲು ನೀತಿಗಳನ್ನು ರೂಪಿಸಿವೆ.
02ಡಬ್ಲ್ಯುಎಚ್‌ಒನ ಅಂಕಿಅಂಶಗಳ ಪ್ರಕಾರ, 2015ರಿಂದ 2019ರವರೆಗೆ ರೂಪಿಸಿದ ನೀತಿಗಳನ್ನು ಗಮನಿಸಿದಾಗ ಗರ್ಭಧಾರಣೆಯ ಸಂಖ್ಯೆಯನ್ನು ಕಡಿಮೆ ಮಾಡಲು ನೀತಿಗಳನ್ನು ಕೈಗೊಂಡ 69 ದೇಶಗಳು ಪೈಕಿ 2019ರ ಅಂತ್ಯದವರೆಗೆ 10 ದೇಶಗಳು ಹೆಚ್ಚು ಜನನ ಪ್ರಮಾಣವನ್ನು, 50 ದೇಶಗಳು ಮಧ್ಯಾಂತರ ಪ್ರಮಾಣವನ್ನು ಹೊಂದಿವೆ. ಇದೇ ಸಮಯದಲ್ಲಿ ಗರ್ಭಧಾರಣೆ ಪ್ರಮಾಣವನ್ನು ಹೆಚ್ಚಿಸಲು 55 ದೇಶಗಳು ನೀತಿಗಳನ್ನು ರೂಪಿಸಿದ್ದು, ಇವುಗಳಲ್ಲಿ 40 ದೇಶಗಳು ಕಡಿಮೆ ಪ್ರಮಾಣ ಸಂಖ್ಯೆಯನ್ನು ದಾಖಲಿಸಿದ್ದು, 18 ದೇಶಗಳು ಅತೀ ಕಡಿಮೆ ಗರ್ಭಧಾರಣೆ ಪ್ರಮಾಣವನ್ನು ಹೊಂದಿವೆ.
03ಒಟ್ಟಾರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅರ್ಧದಷ್ಟು ದೇಶಗಳು ಯುವ ಜನಾಂಗದ ಕೊರತೆಯನ್ನು ಎದುರಿಸುತ್ತಿದ್ದು, ಅಲ್ಲಿನ ಸರಕಾರಗಳು ಜನನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ನೀತಿಗಳನ್ನು ಕೈಗೊಂಡಿವೆ. ಇನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಜನಸಂಖ್ಯೆಯನ್ನು ಕಡಿಮೆ ಮಾಡಲು ನೀತಿಗಳನ್ನು ರೂಪಿಸಿದ್ದು, ಕಾಲು ಭಾಗದಷ್ಟು ದೇಶಗಳು ಯವುದೇ ನಿಯಮಗಳನ್ನು ಜಾರಿಗೊಳಿಸಿಲ್ಲ.
04ಭೌಗೋಳಿಕವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೀತಿಗಳಲ್ಲಿ ಬದ ಲಾವಣೆಯನ್ನು ಕಂಡಿವೆ. ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳು ಜನನ ಪ್ರಮಾಣವನ್ನು ಕಡಿಮೆ ಮಾಡಲು ನೀತಿಗಳನ್ನು ರೂಪಿಸಿದರೆ, ಯುರೋಪ್, ಉತ್ತರ ಅಮೆರಿಕ ಹಾಗೂ ಏಷ್ಯಾ ಖಂಡದ ರಾಷ್ಟ್ರಗಳು ಗರ್ಭಧಾರಣೆ, ಜನನ ಪ್ರಮಾಣವನ್ನು ಹೆಚ್ಚಿಸುವೆಡೆ ಗಮನ ಹರಿಸಿವೆ.
05ಕೋವಿಡ್ 19 ಮಹಾಮಾರಿಯು ದೇಶಗಳ ಆರ್ಥಿಕ, ಸಾಮಾಜಿಕ ವ್ಯವಸ್ಥೆಯ ಜತೆಗೆ ಜನಸಂಖ್ಯೆಯ ಮೇಲೂ ಪರಿಣಾಮ ಬೀರಿದೆ.
ವ್ಯತಿರಿಕ್ತ ಪರಿಣಾಮ
ಏಷ್ಯಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಚೀನ, ಜಪಾನ್ ದೇಶಗಳೀಗ ಸಾಕಷ್ಟು ಸಂಖ್ಯೆಯಲ್ಲಿ ಯುವ ಪೀಳಿಗೆಯನ್ನು ಹೊಂದಿಲ್ಲವಾಗಿದ್ದು ಈ ಎರಡೂ ದೇಶಗಳ ಕಂಗಾಲಾಗಿವೆ. ಇದರ ಪರಿಣಾಮ ಈ ಎರಡು ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳು ಸಮಸ್ಯೆಯಲ್ಲಿ ಸುಳಿಯಲ್ಲಿ ಸಿಲುಕುವಂತಾಗಿದೆ. ಇವೆರಡೂ ದೇಶಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಅನುಸರಿಸಿದ ಕಠಿನ ಕ್ರಮಗಳಿಂದಾಗಿ ಜನನ ಪ್ರಮಾಣ ಏಕಾಏಕಿ ಕುಸಿತ ಕಂಡು ಈಗ ಈ ದೇಶಗಳ ಒಟ್ಟಾರೆ ಜನಸಂಖ್ಯೆಯಲ್ಲಿ ಹಿರಿಯರ ಪ್ರಮಾಣವೇ ಅಧಿಕವಾಗಿದೆ. ಇದು ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗಿದ್ದು ಯುವಪೀಳಿಗೆ ಕೊರತೆಯ ನೇರ ಪರಿಣಾಮ ಉತ್ಪಾದನ ರಂಗ ಸಹಿತ ಎಲ್ಲ ಕ್ಷೇತ್ರಗಳ ಮೇಲೂ ಬಿದ್ದಿದೆ. ಈ ಕಾರಣದಿಂದಾಗಿ ಕೊನೆಗೂ ಎಚ್ಚೆತ್ತುಕೊಂಡಿರುವ ಇಲ್ಲಿನ ಸರಕಾರಗಳು ದೇಶದ ಜನನ ಪ್ರಮಾಣ ದರವನ್ನು ಹೆಚ್ಚಿಸಲು ಜನತೆಗೆ ಅದರಲ್ಲೂ ಮಹಿಳೆಯರಿಗೆ ನಾನಾ ತೆರನಾದ ಕೊಡುಗೆ ಮತ್ತು ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಿವೆ.
ಚೀನದಲ್ಲಿ ಬದಲಾಗುತ್ತಿರುವ ನೀತಿಗಳು
ಒಂದು ಕಾಲದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಠಿನ ನೀತಿಗಳನ್ನು ಜಾರಿಗೊಳಿಸಿದ್ದ ಚೀನ ಈಗ ಜನಸಂಖ್ಯೆಯನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು, ನೀತಿಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದಲ್ಲದೇ ಚೀನ 60 ವರ್ಷಗಳಲ್ಲೇ ಮೊದಲ ಬಾರಿಗೆ ಜನ ಸಂಖ್ಯೆಯಲ್ಲಿ ಇಳಿಕೆಯನ್ನು ಕಂಡಿದೆ.
ಕಳೆದ ದಶಕಗಳಲ್ಲಿ ಜನ ಸಂಖ್ಯೆಯನ್ನು ಇಳಿಸಲು ಹಾಗೂ ಏರಿಕೆ ಮಾಡಲು ಚೀನ ನೀತಿಗಳನ್ನು ರೂಪಿಸಿದೆ. 1979-2015ರ ವರೆಗೆ “ಒಂದು ಮಗುವಿನ’ ನೀತಿಯನ್ನು ಜಾರಿ ಮಾಡಿತ್ತು. ಆದರೆ 2015ರ ಅನಂತರ ಪ್ರತೀ ಪೋಷಕರು ಎರಡು ಮಕ್ಕಳನ್ನು ಹೊಂದಬಹುದು ಎಂದು ನೀತಿಯಲ್ಲಿ ಬದಲಾವಣೆ ತಂದಿತು. ಅದರಿಂದ ಈಚೆಗೆ ದೇಶದಲ್ಲಿ ಜನಸಂಖ್ಯೆಯನ್ನು ಏರಿಸುವ ಕ್ರಮವಾಗಿ ಮೂರು ಮಕ್ಕಳನ್ನು ಪಡೆಯಲು ಪ್ರತೀ ದಂಪತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಅದಲ್ಲದೇ ಇತ್ತೀಚೆಗೆ ಮದುವೆಯಾಗಲು ಹಾಗೂ ಮಕ್ಕಳನ್ನು ಹೊಂದಲು ಉತ್ತೇಜಿಸಲು ಪ್ರಾಯೋಗಿಕವಾಗಿ ವಿವಿಧ ಯೋಜನೆಗಳನ್ನು, ಸೌಲಭ್ಯಗಳನ್ನು ಚೀನದ 29ಕ್ಕೂ ಹೆಚ್ಚು ನಗರಗಳಲ್ಲಿ ಜಾರಿ ಮಾಡಲು ಸ್ಥಳೀಯ ಸರಕಾರಗಳು ಮುಂದಾಗಿವೆ. ಆದರೆ ಜೀವನವೆಚ್ಚ ಒಂದೇ ಸಮನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಟುಂಬಗಳು ಕೂಡ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ.
ಜಪಾನ್‌ನಲ್ಲಿ ಹಿರಿಯ ನಾಗರಿಕರು ಅಧಿಕ!
25 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಜಪಾನ್ ವಿಶ್ವದ ಶೇ.65ರಷ್ಟು ಹಿರಿಯ ನಾಗರಿಕರನ್ನು ಹೊಂದಿದೆ. ಕುಸಿಯುತ್ತಿರುವ ಜನನ ಪ್ರಮಾಣದಿಂದ ಚಿಂತೆಗೀಡಾಗಿರುವ ಜಪಾನ್ ಸಮಾಜವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದೆ ಎಂದು ಹೇಳಿಕೊಂಡಿದೆ. ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಜಪಾನ್ 8,00,000ಕ್ಕಿಂತಲೂ ಕಡಿಮೆ ಜನನವನ್ನು ಕಂಡಿದೆ. ಈ ಶತಮಾನದ ಅಂತ್ಯದ ವೇಳೆಗೆ ಜಪಾನ್‌ನ ಜನಸಂಖ್ಯೆಯು 50 ಮಿಲಿಯನ್‌ಗಿಂತಲೂ ಕಡಿಮೆ ಇರಲಿದೆ ಎಂದು ಸಂಶೋಧಕರು ಊಹಿಸಿದ್ದಾರೆ.
ಜಪಾನ್‌ನ ವಲಸೆ ನೀತಿ, ಏರುತ್ತಿರುವ ಜೀವನ ವೆಚ್ಚಗಳು, ಮಹಿಳಾ ಶಿಕ್ಷಣ, ಗರ್ಭನಿರೋಧಕಕ್ಕೆ ಹೆಚ್ಚಿನ ಅವಕಾಶ ಹಾಗೂ ಮಹಿಳೆಯರು ಕಡಿಮೆ ಸಂತಾನವನ್ನು ಹೊಂದಲು ಬಯಸುತ್ತಿರುವುದು ಜನನ ಪ್ರಮಾಣದ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಜಪಾನ್ ಕಠಿನವಾದ ವಲಸೆ ನೀತಿಯನ್ನು ಹೊಂದಿದ್ದು, ಇದನ್ನು ಸಡಿಲಗೊಳಿಸಬೇಕು, ಅಲ್ಲದೇ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಜಪಾನ್‌ಗೆ ಇದು ಕೊನೆಯ ಅವಕಾಶ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಜನಸಂಖ್ಯೆಯ ಇಳಿಕೆಯು ದೇಶದ ಆರ್ಥಿಕ ಹಾಗೂ ರಕ್ಷಣ ಕ್ಷೇತ್ರದ ಮೇಲೂ ತೀವ್ರವಾಗಿ ಪರಿಣಾಮ ಬೀಳಲಿದೆ.
ಜನನ ಪ್ರಮಾಣವನ್ನು ಏರಿಸಲು ಜಪಾನ್ ಸರಕಾರ ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿಗಳಿಗೆ ಸಾಲ, ಮಕ್ಕಳ ಪೋಷಣೆಗೆ ಸಹಾಯ ನಿಧಿ, ಶಿಶುಪಾಲನ ಸೇವೆಗಳಿಗೆ ಆದ್ಯತೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಸಾಲದಲ್ಲಿರುವ ಜಪಾನ್‌ನ ಬೊಕ್ಕಸಕ್ಕೆ ಇದು ಇನ್ನಷ್ಟು ಹೊರೆಯಾಗಿದೆ.
ಸಮತೋಲನ ಅಗತ್ಯ
ಒಂದು ದೇಶದ ಗರ್ಭಧಾರಣೆ ಪ್ರಮಾಣ, ಜನನ ಪ್ರಮಾಣ ಹಾಗೂ ಜನಸಂಖ್ಯೆಯು ಆಯಾ ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತವೆ. ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಹಾಗೆ ಹೆಚ್ಚು ಹೆಚ್ಚು ಸೇವೆಗಳನ್ನು ಕೊಡಬಹುದು. ಇದು ದೇಶ ಆರ್ಥಿಕವಾಗಿ ಮುಂದುವರಿಯಲು ಸಹಕಾರಿಯಾಗುತ್ತದೆ. ಆದರೆ ಒಟ್ಟಾರೆ ಜನಸಂಖ್ಯೆಯಲ್ಲಿ ಮಕ್ಕಳು ಮತ್ತು ಯುವ ಪೀಳಿಗೆ ಮಹತ್ತರ ಪಾತ್ರ ವಹಿಸುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ನೀತಿಗಳು ಪರಿಣಾಮಕಾರಿಯೇ?
ಜನಸಂಖ್ಯೆಯನ್ನು ಹೆಚ್ಚಿಸಬೇಕೆಂಬ ದೃಷ್ಟಿಯಿಂದ ತರುತ್ತಿರುವ ಹೊಸಹೊಸ ನೀತಿಗಳು ಯೋಜನೆಗಳು ಎಷ್ಟರ ಮಟ್ಟಿಗೆ ಪರಿಣಾಮ ಕಾರಿಯಾಗಲಿವೆ ಎಂಬುದು ಯೋಚಿಸಬೇಕಾದ ವಿಷಯವಾಗಿದೆ. ಕಳೆದ ಕೆಲವು ದಶಕಗಳ ಅಂಕಿಅಂಶಗಳನ್ನು ಅವಲೋಕಿಸಿದಾಗ ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾಗಳಲ್ಲಿ ಜಾರಿಗೆ ತಂದಿರುವ ನೀತಿಗಳು ಜನನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಅಷ್ಟೇನು ಪರಿಣಾಮ ಬೀರಿಲ್ಲ ಎಂಬುದನ್ನು ಸಾಬೀತುಪಡಿಸುತ್ತವೆ. ಜತೆಗೆ ಈ ನೀತಿಗಳು ಅಲ್ಲಿನ ಸರಕಾರಗಳಿಗೆ ಭಾರೀ ದುಬಾರಿಯಾಗಿದ್ದು, ದೇಶಗಳು ಸಾಲಗಳ ಸುಳಿಯಲ್ಲಿವೆ ಅನ್ನುವುದನ್ನು ಅಧ್ಯಯನಗಳು ಬೆಟ್ಟು ಮಾಡಿವೆ.
ಭಾರತ ಪಾರು
ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಅಗ್ರಸ್ಥಾನದಲ್ಲಿದ್ದ ಚೀನವನ್ನು ಭಾರತ ಇತ್ತೀಚಿಗಷ್ಟೇ ಹಿಂದಿಕ್ಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಜನಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಪ್ರಬಲ ರಾಷ್ಟ್ರಗಳು ಎದುರಿಸುತ್ತಿರುವ ಯುವ ಪೀಳಿಗೆಯ ಕೊರತೆಯ ಸಮಸ್ಯೆಯಿಂದ ಪಾರಾಗಿದೆ. ವಿಶ್ವದಲ್ಲಿಯೇ ಅಧಿಕ ಜನಸಂಖ್ಯೆಯನ್ನು ಹೊಂದಿದ್ದರೂ ಭಾರೀ ಸಂಖ್ಯೆಯಲ್ಲಿ ಯುವ ಸಂಪನ್ಮೂಲವನ್ನು ಹೊಂದಿರುವುದು ಭಾರತದ ಪಾಲಿಗೆ ವರದಾನವೇ ಸರಿ. ಯುವ ಸಂಪನ್ಮೂಲದ ಸದ್ಬಳಕೆ, ಜನರು ಸ್ವಾವಲಂಬಿಗಳಾದಲ್ಲಿ ಭಾರತದ ಪಾಲಿಗೆ ಜನಸಂಖ್ಯೆ ಬಲುದೊಡ್ಡ ಹೊರೆಯಾಗಲಾರದು. ಆದರೆ ಜನಸಂಖ್ಯೆಯ ಮೇಲೆ ಹಿತಮಿತದ ನಿಯಂತ್ರಣ ಅತ್ಯವಶ್ಯವಾಗಿದ್ದು ಇದರಿಂದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.