ಆಹಾರದ ಅಭಾವದಿಂದ ಕಂಗೆಟ್ಟ ದ್ವೀಪರಾಷ್ಟ್ರ
Team Udayavani, Dec 11, 2022, 6:30 AM IST
ವಿಶ್ವದ ಹಲವಾರು ದೇಶಗಳು ವಿವಿಧ ಕಾರಣಗಳಿಂದಾಗಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿ ಹೋದ ಸಾಕಷ್ಟು ಉದಾಹರಣೆಗಳು ಇತಿಹಾಸ ಪುಟಗಳನ್ನು ತಿರುವಿ ಹಾಕಿದಾಗ ಸಿಗುತ್ತವೆ. ಆದರೆ ಸದ್ಯ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಅನಿಶ್ಚತತೆಯನ್ನು ಎದುರಿಸುತ್ತಿವೆ. ಬಡ ರಾಷ್ಟ್ರಗಳನ್ನಂತೂ ಆರ್ಥಿಕ ಬಿಕ್ಕಟ್ಟು ತೀವ್ರತೆರನಾಗಿ ಕಾಡಿದೆ. ಇದರ ನೇರ ಪರಿಣಾಮ ಆಹಾರ ಲಭ್ಯತೆಯ ಮೇಲಾಗುತ್ತಿದೆ.ಇದಕ್ಕೆ ತಾಜಾ ಉದಾಹರಣೆ ನಮ್ಮ ನೆರೆಯ ಶ್ರೀಲಂಕಾ. ಕಳೆದ ನಾಲ್ಕೈದು ತಿಂಗಳುಗಳಿಂದ ಶ್ರೀಲಂಕಾದ ಜನಜೀವನ ಸಂಪೂರ್ಣ ತತ್ತರಿಸಿಹೋಗಿದೆ. ರಾಜಕೀಯ ಅನಿಶ್ಚತತೆಯೂ ಇದಕ್ಕೆ ಇನ್ನಷ್ಟು ತುಪ್ಪ ಸುರಿದಿದ್ದು ಜನಸಾಮಾನ್ಯರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಸೃಷ್ಟಿಯಾಗಿದ್ದು ಮುಂದೇನು? ಎಂಬ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ಏನು ಕಾರಣ?
ದೇಶದ ವಿದೇಶಿ ವಿನಿಮಯವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಸದ್ಯ 231 ಬಿಲಿಯನ್ ಡಾಲರ್ ಮೊತ್ತಕ್ಕೆ ಬಂದು ತಲುಪಿದೆ. ಇದೇ ವೇಳೆ ದೇಶದ ಸಾಲದ ಪ್ರಮಾಣ ಇದಕ್ಕಿಂತ ಅಧಿಕವಾಗಿದೆ. ಒಂದೆಡೆಯಿಂದ ಹೆಚ್ಚುತ್ತಿರುವ ಸಾಲದ ಹೊರೆ, ಮತ್ತೂಂದೆಡೆಯಿಂದ ಆದಾಯದ ಕೊರತೆ ಇವೆಲ್ಲವೂ ದೇಶದ ಬೊಕ್ಕಸವನ್ನು ಬರಿದಾಗಿಸಿದೆ. ಇದರಿಂದಾಗಿ ಆಹಾರ ಮತ್ತು ಇಂಧನದಂತಹ ಅಗತ್ಯ ವಸ್ತುಗಳನ್ನು ಕೂಡ ಆಮದು ಮಾಡಿಕೊಳ್ಳಲು ಪರದಾಡುತ್ತಿದೆ. ನೆರೆಯ ರಾಷ್ಟ್ರಗಳು ಶ್ರೀಲಂಕಾದ ಪರಿಸ್ಥಿತಿ ನೋಡಿ ಸಹಾಯಹಸ್ತ ಚಾಚಿದರೂ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಸಹಜವಾಗಿಯೇ ಇದು ಜನಜೀವನವನ್ನು ದುಸ್ತರವನ್ನಾಗಿಸಿದೆ.
ಏಕೆ?
ಶ್ರೀಲಂಕಾದ ಮುಖ್ಯ ಆದಾಯ ಮೂಲ ಪ್ರವಾಸೋದ್ಯಮ. ದ್ವೀಪ ರಾಷ್ಟ್ರವಾಗಿರುವ ಶ್ರೀಲಂಕಾ ಪ್ರವಾಸಿಗರ ಆಕರ್ಷಣೆಯ ತಾಣ. ಸಹಜವಾಗಿಯೇ ಪ್ರತೀ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಲಂಕಾದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಆದಾಯವನ್ನು ತಂದುಕೊಡು ತ್ತದೆ. ಇದರಿಂದ ವಿದೇಶಿ ವಿನಿಮಯದ ಮೂಲಕ ಹೆಚ್ಚಿನ ಪ್ರಮಾಣ ದಲ್ಲಿ ವಿದೇಶಿ ಮೀಸಲನ್ನು ಹೊಂದಿತ್ತು. ಆದರೆ ಕೋವಿಡ್‌ನಿಂದಾಗಿ ಇಲ್ಲಿನ ಪ್ರವಾಸೋದ್ಯಮಕ್ಕೆ ಗ್ರಹಣ ಬಡಿಯಿತು. ವಿತ್ತೀಯ ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣವಾಗಿ ಎಡವಿದುದು, ಅಕಾಲಿಕವಾಗಿ ವಿಧಿಸಿದ ತೆರಿಗೆ, ರಾಜಕೀಯ ಅರಾಜಕತೆ, ರಷ್ಯಾ- ಉಕ್ರೇನ್ ಸಮರ, ಜಾಗತಿಕ ಆರ್ಥಿಕ ಅನಿಶ್ಚತತೆ ಇವೆಲ್ಲವೂ ಶ್ರೀಲಂಕಾದ ಆರ್ಥಿಕ ಸಂಕಷ್ಟಕ್ಕೆ ಕಾರಣಗಳಾದರೂ ಎಲ್ಲದಕ್ಕಿಂತ ಮುಖ್ಯವಾಗಿ ದ್ವೀಪರಾಷ್ಟ್ರದ ಗೊತ್ತುಗುರಿ ಇಲ್ಲದ ಆಡಳಿತವೇ ನೇರ ಕಾರಣವಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಹಿಂದೇನಾಗಿತ್ತು?
ಶ್ರೀಲಂಕಾದಲ್ಲಿನ ಹಾಲಿ ಪರಿಸ್ಥಿತಿಗೆ ಇತ್ತೀಚಿನ ಬೆಳವಣಿಗೆಗಳು ಮಾತ್ರ ಕಾರಣವಲ್ಲ. ಕಳೆದ ದಶಕದಿಂದೀಚೆಗೆ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಲೇ ಬಂದಿದ್ದರೆ ಆದಾಯ ಕುಸಿಯುತ್ತಲೇ ಬಂತು. ಇದರಿಂದಾಗಿ ಬಡತನ ಹೆಚ್ಚಾಯಿತು. ಕೋವಿಡ್ ಸಂದರ್ಭದಲ್ಲಿ ಸರಕಾರ 5 ಮಿಲಿಯನ್ ಕುಟುಂಬಗಳಿಗೆ 5,000 ರೂ.ಗಳ ಧನಸಹಾಯ ಜನರ ನೆರವಿಗೆ ಬಂತಾದರೂ ರಷ್ಯಾ-ಉಕ್ರೇನ್ ಯುದ್ಧದ ಕಾರಣ ಕಚ್ಚಾ ತೈಲ ಬೆಲೆ ಹೆಚ್ಚಳವಾ ದದ್ದರಿಂದ ದೇಶದ ಪರಿಸ್ಥಿತಿ ಮತ್ತೆ ಬಿಗಡಾಯಿಸಿತು. ಜನಜೀವನ ಎಷ್ಟು ದುಸ್ತರವಾಯಿ ತೆಂದರೆ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅಗತ್ಯ ಸಾಧನಗಳು ಲಭಿಸದೆ ಪರೀಕ್ಷೆ ಬರೆಯಲು ಕೂಡ ಸಾಧ್ಯವಾಗಲಿಲ್ಲ.
ಹೇಗಿದೆ ಪರಿಸ್ಥಿತಿ?
ಸದ್ಯ ಶ್ರೀಲಂಕಾದ ಸ್ಥಿತಿ ತೀರಾ ಹದಗೆಟ್ಟಿದೆ. ಆಹಾರ ಪದಾರ್ಥಗಳ ಅಭಾವದ ಕಾರಣ ದಿಂದಾಗಿ ಪೌಷ್ಟಿಕಾಂಶಯುಕ್ತ ಆಹಾರ ಲಭಿ ಸದೆ 5 ವರ್ಷದ ಒಳಗಿನ ಮಕ್ಕಳು ತೂಕ ಕಳೆದು ಕೊಳ್ಳುತ್ತಿದ್ದಾರೆ. ಜತೆಗೆ ಮಕ್ಕಳಲ್ಲಿ ನಿಶ್ಯಕ್ತಿ ಹೆಚ್ಚಾಗಿದೆ. ಮಕ್ಕಳ ಆರೋಗ್ಯದ ಕುರಿತಂತೆ ವೈದ್ಯರನ್ನು ಭೇಟಿಯಾಗುವ ಪೋಷಕರ ಸಂಖ್ಯೆ ಹೆಚ್ಚಾಗಿದೆ.
ದೇಶದ ಶೇ.98ರಷ್ಟು ಕುಟುಂಬಗಳ ಮನೆಯ ಮಕ್ಕಳು ಅಪೌಷ್ಟಿಕತೆಯಿಂದ ಬಳಲು ತ್ತಿರುವುದು ದೃಢಪಟ್ಟಿದೆ. ಸಮಸ್ಯೆಯ ಗಂಭೀರತೆಯ ಬಗೆಗೆ ಮಕ್ಕಳ ಹೆತ್ತವರಿಗೆ ಅರಿವಿದ್ದರೂ ಮಕ್ಕಳಿಗೆ ಅಗತ್ಯವಾಗಿರುವ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಷ್ಟು ಮಾತ್ರವಲ್ಲ ಇಂಥ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಮತ್ತು ಪೂರಕ ಪೌಷ್ಟಿಕಾಂಶಗಳನ್ನು ಕೊಡಿಸಲೂ ಇವರಿಂದ ಸಾಧ್ಯವಾಗುತ್ತಿಲ್ಲ.
ಶ್ರೀಲಂಕಾದ ಮಧ್ಯಭಾಗದಲ್ಲಿರುವ ಹಂಥಾನದ ಟೀ ಎಸ್ಟೇಟ್ ಹಳ್ಳಿಯ ನಿವಾಸಿಗಳು ಕಳೆದ ಕೆಲವು ತಿಂಗಳುಗಳಿಂದೀಚೆಗೆ ತಮ್ಮ ದೈನಂದಿನ ಆಹಾರವಾಗಿ ಆಲೂಗಡ್ಡೆ ಅಥವಾ ಅನ್ನವನ್ನು ಬಳಸುತ್ತಿದ್ದಾರೆ. ಏಕೆಂದರೆ ಉಳಿದ್ಯಾವ ಆಹಾರ ವಸ್ತು ಅಥವಾ ಪದಾರ್ಥಗಳನ್ನು ಖರೀದಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಹಾಲು, ಮೊಟ್ಟೆಗಳಂತೂ ಇವರಿಗೆ ಕೈಗೆಟುಕದಂತಾಗಿದೆ.
ನವಜಾತ ಶಿಶುಗಳನ್ನು ತೂಕದ ಕೊರತೆಯ ಸಮಸ್ಯೆ ಕಾಡುತ್ತಿದೆ. ಅದಕ್ಕೆ ಕಾರಣ ತಾಯಂದಿರು ಸಮರ್ಪಕ ಪ್ರಮಾಣದಲ್ಲಿ ಸೂಕ್ತ ಆಹಾರ ಸೇವನೆ ಮಾಡದೆ ಇರುವುದು. ಇದರಿಂದಾಗಿ ನವಜಾತ ಶಿಶುಗಳಲ್ಲಿ ಥೈರಾಕ್ಸಿನ್ ಕೊರತೆ ಕಂಡು ಬರುತ್ತಿದೆ.
ಆರ್ಥಿಕ ಸಂಕಷ್ಟದ ಪರಿಣಾಮ
ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟ ಜನರನ್ನು ನಲುಗಿಸಿ ಬಿಟ್ಟಿದೆ. ಸದ್ಯ ಶ್ರೀಲಂಕಾದ ಜನತೆ ಆಹಾರ ಬಿಕ್ಕಟ್ಟಿನಿಂದ ಹೈರಾಣಾಗಿ ಹೋಗಿದೆ. ಅತ್ಯಾವಶ್ಯಕ ವಸ್ತುಗಳಿಗಾಗಿ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಡಜನರಂತೂ ಈ ದಿನ ಕಳೆದರೆ ಸಾಕು ಎಂಬ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ಹಸಿವು ನೀಗಿಸಿಕೊಳ್ಳುವುದು ಹೇಗೆ ಎಂಬುದೇ ಸದ್ಯ ಇವರನ್ನು ಕಾಡುತ್ತಿರುವ ಚಿಂತೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಪ್ರತಿಯೊಂದೂ ಕ್ಷೇತ್ರವೂ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸದ್ಯದ ಸಂಕಷ್ಟ ನಿವಾರಣೆಯಾದ ಬಳಿಕ ಇವೆಲ್ಲವೂ ಮುಂದಿನ ದಿನಗಳಲ್ಲಿ ಚೇತರಿಕೆ ಕಾಣುವ ಆಶಾವಾದದಲ್ಲಿವೆ. ಆದರೆ ಈಗ ದೇಶದ ಮುಂದಿರುವ ಅತೀದೊಡ್ಡ ಸವಾಲೆಂದರೆ ಆಹಾರದ ಅಭಾವ. ಈಗಾಗಲೇ ಇದರ ತೀವ್ರ ಪರಿಣಾಮ ಜನರ ಮೇಲೆ ಬಿದ್ದಿದ್ದು ಹಸಿವಿನ ಸಮಸ್ಯೆ ಉಲ್ಬಣಗೊಂಡಿದೆ. ಇನ್ನು ಮಕ್ಕಳ ಬೆಳವಣಿಗೆಯ ಮೇಲೂ ಇದು ಗಂಭೀರ ಪರಿಣಾಮ ಬೀರಿದೆ.
ಪರಿಣಾಮವೇನು?
ಆಹಾರದ ತೀವ್ರ ಅಭಾವದ ಪರಿಣಾಮ ಜನರು ಹಸಿವಿ ನಿಂದ ಬಳಲುವಂತಾಗಿದೆ. ಸಹಜವಾಗಿಯೇ ಇದು ಜನರ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತಿದ್ದು ವಿವಿಧ ಅನಾರೋಗ್ಯಗಳ ಕಾರಣದಿಂದಾಗಿ ವೈದ್ಯರನ್ನು ಭೇಟಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆತಂಕಕಾರಿ ವಿಷಯ ಎಂದರೆ ವೈದ್ಯರನ್ನು ಭೇಟಿಯಾಗುತ್ತಿರುವವರಲ್ಲಿ ಮಕ್ಕಳು, ಯುವಕರು ಮತ್ತು ಮಧ್ಯವಯಸ್ಕಿನವರೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ಇದು ಎಲ್ಲರನ್ನು ದೃತಿಗೆಡಿಸಿದೆ. ಆಹಾರ ಅಭಾವದ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದೇ ಹೋದಲ್ಲಿ ಸದ್ಯ ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ ದೀಘಕಾಲದ ಸಮಸ್ಯೆಯಾಗಿ ಮಾರ್ಪಡ ಲಿದೆ ಎಂಬುದು ವೈದ್ಯರ ಕಳವಳ.
ಭವಿಷ್ಯದ್ದೇ ಚಿಂತೆ?
ಅಪೌಷ್ಟಿಕತೆ ಸಮಸ್ಯೆ ಕೇವಲ ನವಜಾತ ಶಿಶುಗಳು ಮತ್ತು ಮಕ್ಕಳಲ್ಲಿ ಮಾತ್ರವಲ್ಲದೆ ಗರ್ಭಿಣಿಯರಲ್ಲೂ ಕಾಣಿಸಿಕೊಳ್ಳುತ್ತಿದೆ. ಮಗುವಿಗೆ ಜನ್ಮ ನೀಡುವ ಖುಷಿಗೆ ಪುಷ್ಟಿ ನೀಡುವ ಹೊತ್ತಲ್ಲಿ ಮಗು ಆರೋಗ್ಯವಾಗಿ ಹುಟ್ಟುತ್ತದೆಯೋ ಇಲ್ಲವೋ? ಎಂದು ಜನರು ಯೋಚಿಸುವ ಅನಿವಾರ್ಯತೆ ಬಂದೊದಗಿದೆ. ಈ ಹಿಂದೆ ದೇಶದಲ್ಲಿ ಸರಕಾರ ಕೆಲವೊಂದು ಜನಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನೆರವಾಗುತ್ತಿತ್ತಾದರೂ ಹಣಕಾಸಿನ ಕೊರತೆಯಿಂದಾಗಿ ಅವೆಲ್ಲವೂ ಈಗ ಸ್ಥಗಿತಗೊಂಡಿದೆ.
ಶಾಲೆಗಳಲ್ಲಿ ಏನಾಗಿದೆ?
ದಕ್ಷಿಣ ಶ್ರೀಲಂಕಾದ ಮಥುಗಮದಲ್ಲಿರುವ ಹೆಚ್ಚಿನ ಶಾಲೆಗಳಲ್ಲಿ ಮಕ್ಕಳು ಮನೆಯಲ್ಲಿ ಬೆಳಗ್ಗೆ ಏನನ್ನೂ ತಿನ್ನದೆ ಬರುತ್ತಿದ್ದಾರೆ. ಈ ಕಾರಣದಿಂದಾಗಿ ಪ್ರತೀ ದಿನ ಕನಿಷ್ಠ 20-25 ಮಕ್ಕಳು ಮೂರ್ಛೆ ತಪ್ಪಿ ಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಶಾಲೆಯಲ್ಲಿ ಅಡುಗೆ ಮಾಡಲು ಸ್ವಯಂಪ್ರೇರಿತರಾದ ಪೋಷಕರ ಬೆಂಬಲದೊಂದಿಗೆ ಗಂಜಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕ್ರಮವನ್ನು ಆರಂಭಿಸಿದ್ದರು. ಆದರೆ ಈಗ ಅದು ದೇಣಿಗೆಯ ಮೇಲೆ ಅವಲಂಬಿತವಾಗಿದೆ. ಏಕೆಂದರೆ ದೇಣಿಗೆ ಕೊಡುವವರು ಯಾರೂ ಇಲ್ಲದಿದ್ದರೆ ಮಕ್ಕಳಿಗೆ ಊಟದ ವ್ಯವಸ್ಥೆಯಾಗುವುದಿಲ್ಲ. ಇದು ಕೇವಲ ದಕ್ಷಿಣ ಭಾಗದ ಸಮಸ್ಯೆ ಮಾತ್ರವಲ್ಲ ಇಡೀ ಶ್ರೀಲಂಕಾದ ಬಹುತೇಕ ಶಾಲೆಗಳಲ್ಲಿನ ಸದ್ಯದ ಪರಿಸ್ಥಿತಿ.
ಮಕ್ಕಳ ನೆರವಿಗೆ ಧಾವಿಸಿದ FIAN
ಶ್ರೀಲಂಕಾದ ಫುಡ್ ಫಸ್ಟ್ ಇನಾ#ರ್ಮೇಶನ್ ಆ್ಯಕ್ಷನ್ ನೆಟ್‌ವರ್ಕ್ (FIAN) ನ ಅಧ್ಯಕ್ಷ ಎಸ್ ವಿಶ್ವಲಿಂಗಂ ಪ್ರಕಾರ, ಕನಿಷ್ಠ ಶೇ.20ರಷ್ಟು ಮಕ್ಕಳು ಬೆಳಗಿನ ಉಪಾಹಾರವನ್ನು ಸೇವಿಸದೆ ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗುತ್ತಾರೆ. ಹಾಗಾಗಿ ಕಳೆದ ಆರು ತಿಂಗಳುಗಳಿಂದ FIAN ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗೆ ಆಹಾರ ವಿತರಣೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆಹಾರದ ಕೊರತೆಯಿಂದ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಉತ್ತರ ಮತ್ತು ಪೂರ್ವ ಶ್ರೀಲಂಕಾದ ಚಹಾ ತೋಟಗಾರಿಕಾ ಪ್ರದೇಶದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡಿಮೆಯಾಗಿದೆ. ಹಾಗಾಗಿ ಆಹಾರ ವಿತರಣೆಯಿಂದ ಮಕ್ಕಳು ಶಾಲೆಯತ್ತ ಮುಖಮಾಡಬಹುದು ಎಂಬುದು ಎಫ್ಐಎಎನ್ ನ ಲೆಕ್ಕಾಚಾರ.
01.ಯುನಿಸೆಫ್ ಅಂದಾಜಿನ ಪ್ರಕಾರ ಶ್ರೀಲಂಕಾದಲ್ಲಿ ಸುಮಾರು 56,000 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
02.ಇತ್ತೀಚಿನ ವಿಶ್ವ ಆಹಾರ ಕಾರ್ಯಕ್ರಮದ ಅಂಕಿಅಂಶಗಳ ಪ್ರಕಾರ, ಶ್ರೀಲಂಕಾದ ಮೂರನೇ ಒಂದು ಭಾಗದಷ್ಟು ಕುಟುಂಬಗಳು ಸುರಕ್ಷಿತ ಆಹಾರ ಮೂಲವನ್ನು ಹೊಂದಿಲ್ಲ.
03. ಶ್ರೀಲಂಕಾದ ಶೇ.70ರಷ್ಟು ಜನರು ತಮ್ಮ ಊಟದ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ.
- ಪ್ರೀತಿ ಭಟ್ ಗುಣವಂತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.