ದಿನಕ್ಕೊಂದು ಭರವಸೆಯ ತೂಗುಪಟ ಬೇಕು
Team Udayavani, Jun 6, 2021, 1:18 PM IST
ನಾಳೆ ಬೆಳಗಾಗುತ್ತದೋ ಇಲ್ಲವೋ ಎಂಬ ಭಯ.ಎದ್ದರೆ ನನಗೆಲ್ಲವೂ ನೆನಪಿರು ತ್ತದೋ ಅಥವಾ ಮರೆತು ಹೋಗುತ್ತದೆಯೋ ಎಂಬ ಆತಂಕ. ಏಕೆಂದರೆ ಮೊನ್ನೆ ಬೆಕ್ಕು ನನ್ನೆದುರಿಗೆ ಕೂತಿದ್ದರೆ ಅದು ನಾಯಿ ಎಂದು ವಾದ ಮಾಡಿದೆ! ಎಲ್ಲದರ ಜತೆಗೆ ನೆನಪಿನ ಶಕ್ತಿಯೂ ಹೋಗಿಬಿಟ್ಟರೆ… ಅದನ್ನು ನೆನಪಿಸಿಕೊಂಡರೆ ಭಯ, ಮುಜುಗರ, ಆತಂಕ, ದುಃಖ ಒಮ್ಮೆಲೆ ಬಂದು ಬಿಡುತ್ತದೆ.ವೈದ್ಯಳಾಗಿ ಸಾವಿಗೇಕೆ ಅಂಜಬೇಕು ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಆದರೂ ರೋಗ ಹತ್ತಿರ ಬಂದಾಗಲೇ ಅದರ ನಿಜ ರೂಪ ಅರ್ಥವಾಗೋದು!
ನಮ್ಮ ವಾಕ್ ತರಬೇತಿಗೆ ವಯಸ್ಸಿನ ನಿರ್ಬಂಧ ವಿಲ್ಲ. ಹುಟ್ಟಿದ ಮಗುವಿನಿಂದ ಹಿಡಿದು 90 ವರ್ಷದ ಹಿರಿಯರೆಲ್ಲರೂ ಒಂದೆಲ್ಲ ಒಂದು ರೀತಿಯಲ್ಲಿ ತಮ್ಮ ಸುತ್ತ ಮುತ್ತಲಿನ ಪರಿಸರದೊಂದಿಗೆ ಸಂಭಾಷಿಸುತ್ತಲೇ ಇರುತ್ತಾರೆ. ಈ ಸಮಯದಲ್ಲಿ ನಮ್ಮ ದೇಹದಲ್ಲೋ, ಮನಸ್ಸಿನಲ್ಲೋ ವ್ಯತ್ಯಾಸ ವಾದರೆ, ತೊಡಕಾಗಿರುವುದೆಲ್ಲಿ ಎಂದು ಪರಿಶೀಲಿಸಿ, ಸಂವಹನಕ್ಕೆ ಅಡ್ಡಿಯಾಗದಂತೆ ನೋಡಿಕೊಂಡು, ಅದಕ್ಕೆ ಬೇಕಾಗುವ ಸಾಮರ್ಥ್ಯವನ್ನು ಹೇಳಿಕೊಡುವುದು ವಾಕ್ ಚಿಕಿತ್ಸಕರ ಜವಾಬ್ದಾರಿ. ಹೀಗಾಗಿ ನನ್ನ ಕೆಲಸದಲ್ಲಿ, ಪ್ರತಿ ದಿನ, ಪ್ರತಿ ಗಂಟೆ ಹೊಸದೊಂದು ಅನುಭವ.
ಮೊನ್ನೆ ಪಾರ್ಕಿನ್ಸನ್ ರೋಗದ ಬಗ್ಗೆ ಓದುತ್ತಿದ್ದೆ. ಇದು ಸಾಮಾನ್ಯವಾಗಿ 40 ವರ್ಷ ಮೇಲ್ಪಟ್ಟವರಲ್ಲಿ ಕಂಡುಬರುವ ಮೆದುಳಿನ ಕಾಯಿಲೆ. ನಮ್ಮ ಬೆನ್ನು ಹುರಿಯಲ್ಲಿರುವ ಶೇ. 70ರಷ್ಟು ನರಗಳಿಗೆ ಇದು ಹರಡಿಬಿಡುತ್ತದೆ. ಇದರಿಂದಾಗಿ ನಡೆದಾಡಲು, ಮಾತನಾಡಲು, ತಮ್ಮ ಕೈಗಳನ್ನು ಬಳಸಿ ಕೆಲಸ ಮಾಡಲು.. ಹೀಗೆ ದಿನನಿತ್ಯದ ಎಲ್ಲ ಕೆಲಸಗಳಿಗೂ ಅಡ್ಡಿಯಾಗುತ್ತದೆ. ನರಗಳನ್ನು ನಿಯಂತ್ರಿಸಲು ವೈದ್ಯರು ಮಾತ್ರೆಗಳನ್ನು ಕೊಡುತ್ತಾರೆ ಆದರೂ ಮುಂಚಿನಂತೆ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಅವರ ಪರಿಸ್ಥಿತಿ ಸುಧಾರಿಸಲು ಫಿಜಿಯೋತೆರಪಿ ಮತ್ತು ವಾಕ್ ಚಿಕಿತ್ಸೆಯ ಅವಶ್ಯವಿರುತ್ತದೆ.
ಕ್ರಿಸ್ಟೀನ (ಹೆಸರು ಬದಲಿಸಲಾಗಿದೆ) ನನ್ನ ಕಾಣಲು ತಮ್ಮ ಗಂಡನೊಂದಿಗೆ ಬಂದಿದ್ದರು. ಅವರಿಗೆ ಈಗ 70 ವರ್ಷ. ಸುಮಾರು ಹತ್ತು ವರ್ಷಗಳ ಹಿಂದೆ ಪಾರ್ಕಿನ್ಸನ್ ಇರುವುದು ದೃಢಪಟ್ಟಿತ್ತು. ವೃತ್ತಿಯಲ್ಲಿ ವೈದ್ಯೆ. ಸಾಧ್ಯವಾದಷ್ಟು ದಿನ ಜನರ ನಿಸ್ವಾರ್ಥ ಸೇವೆ ಮಾಡಿದ್ದರು.
ಪಾರ್ಕಿನ್ಸನ್‌ನ ಗುಣ ಲಕ್ಷಣಗಳು ಹೆಚ್ಚಾಗುತ್ತಿದ್ದ ಹಾಗೆ ಅವರಿಗೆ ವಾಕ್ ತಜ್ಞರನ್ನು ಕಾಣುವುದು ಅನಿವಾರ್ಯವಾಗಿತ್ತು. ಹಾಗಾಗಿ ನನ್ನೆದುರಿಗೆ ಚಂದದೊಂದು ನಗೆ ಬೀರುತ್ತಾ ಬಂದು ಕುಳಿತಿದ್ದ ಅವರು ತಮ್ಮ ಕಥೆ ಹೇಳಿದ್ದು ಹೀಗೆ..
ನಾನು ವೈದ್ಯೆಯಾಗಬೇಕು ಎಂದು ಓದುತ್ತಿದ್ದಾಗ, ಪಠ್ಯದಲ್ಲಿ ಬರುತ್ತಿದ್ದ ರೋಗಗಳ ಬಗ್ಗೆ ಓದುವಾಗ ಯಾವುದೋ ಸಣ್ಣ ಲಕ್ಷಣ ನನ್ನಲ್ಲಿ ಅಥವಾ ನನ್ನ ಪರಿಚಯದವರಲ್ಲಿ ಕಂಡರೆ ಕೂಡಲೇ ಮನಸ್ಸು ಯಾವಾಗಲೂ ಮುಂದಾಗಬಹುದಾದ ತೊಂದರೆಯನ್ನೇ ನೆನಪಿಸುತ್ತಿತ್ತು. ಆಗೆಲ್ಲ, ಇಂಥ ರೋಗವೆಲ್ಲ ನನಗೆಲ್ಲಿ ಬರುತ್ತದೆ? ನಾನೇ ವೈದ್ಯೆಯಾಗುತ್ತೇನಲ್ಲ, ಎಲ್ಲದಕ್ಕೂ ಔಷಧವನ್ನು ಹುಡುಕಿಕೊಂಡರಾಯಿತು. ಯಾವ ಆಸ್ಪತ್ರೆಗೆ ಬೇಕಾದರೂ ಹೋಗಬಹುದು, ಎಲ್ಲರೂ ನನ್ನ ಸಹಪಾಠಿಗಳೇ ಇರುತ್ತಾರಲ್ಲ, ನನಗೆ, ನನ್ನ ಕುಟುಂಬಕ್ಕೆ ಇನ್ನೆಲ್ಲಿಯ ಭಯ ಎಂದು ಮನಸ್ಸನ್ನು ಸುಮ್ಮನಿರಿಸಿ ಬಿಡುತ್ತಿದ್ದೆ.
ಸುಮಾರು 30 ವರ್ಷಗಳ ಹಿಂದೆ ಕಾಡುತ್ತಿದ್ದ ಭಯ ಈಗ ನಿಜವಾಗಿದೆ. ಪಾರ್ಕಿನ್ಸನ್ ರೋಗದ ಬಗ್ಗೆ ಎಲ್ಲವನ್ನು ಅರಿತಿದ್ದರೂ ನನಗದು ಇದೆ ಎಂದು ಗೊತ್ತಾದ ತತ್‌ಕ್ಷಣ ಮನಸ್ಸು ಅದು ಸುಳ್ಳಾಗಿರಲಿ ಎಂದು ಬೇಡುತ್ತಿತ್ತು. ಮೊದಲ ದಿನಗಳಲ್ಲಿ ಮನೆಯವರೆಲ್ಲರೂ ಆಘಾತ ಹಾಗೂ ನಿರಾಕರಣೆಯಲ್ಲಿ ಮುಳುಗಿ ಹೋಗಿದ್ದೆವು. ಇನ್ನು ಸತ್ಯದ ಅರಿವಾದಾಗ ಅದನ್ನು ಒಪ್ಪಿ ಎಷ್ಟು ದಿನ ಬದುಕ ಬಲ್ಲೆನೋ ಅಷ್ಟು ದಿನ ಚೆನ್ನಾಗಿ ಬದುಕಿ ಬಿಡೋಣ ಎಂದು ನಿರ್ಧರಿಸಿದೆ. ಆದರೆ ಅದು ಸುಲಭದ ಕೆಲಸವಲ್ಲ ಎಂದು ಈಗ ತಿಳಿಯುತ್ತಿದೆ. ದಿನದಿಂದ ದಿನಕ್ಕೆ ಭಯ ಹೆಚ್ಚುತ್ತಿದೆ. ನಾಳೆ ಬೆಳಗಾಗುತ್ತದೋ ಇಲ್ಲವೋ ಎಂಬ ಭಯ. ಎದ್ದರೆ ನನಗೆಲ್ಲವೂ ನೆನಪಿರುತ್ತದೋ ಅಥವಾ ಮರೆತು ಹೋಗುತ್ತದೆಯೋ ಎಂಬ ಭಯ. ಏಕೆಂದರೆ ಮೊನ್ನೆ ನನ್ನ ಬೆಕ್ಕು ನನ್ನೆದುರಿಗೆ ಕೂತಿದ್ದರೆ ಅದು ನಾಯಿ ಎಂದು ಗಂಡನಲ್ಲಿ ವಾದ ಮಾಡಿದೆ! ಎಲ್ಲದರ ಜತೆಗೆ ನೆನಪಿನ ಶಕ್ತಿಯೂ ಹೋಗಿಬಿಟ್ಟರೆ ಎಂಬ ಆತಂಕ ಕಾಡುತ್ತದೆ. ಅದ ನೆನೆಸಿಕೊಂಡರೆ ಭಯ, ಮುಜುಗರ, ಆತಂಕ, ದುಃಖ ಒಮ್ಮೆಲೆ ಬಂದು ಬಿಡುತ್ತದೆ.
ವೈದ್ಯಳಾಗಿ ಸಾವಿಗೇಕೆ ಅಂಜಬೇಕು ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಆದರೂ ವೈದ್ಯರುಗಳಿಗೆ ಕೂಡ ರೋಗ ಹತ್ತಿರ ಬಂದಾಗಲೇ ಅದರ ನಿಜ ರೂಪ ಅರ್ಥವಾಗೋದು! ನಮ್ಮಲ್ಲಿ ನೆನಪಿನ ಶಕ್ತಿ ಪರೀಕ್ಷಿಸುವುದಕ್ಕೆ ಕೆಲವೊಂದು ಪರೀಕ್ಷೆ ಮಾಡಬೇಕು. ಅದರಲ್ಲೊಂದು ಪ್ರಶ್ನೆ, ಇವತ್ತು ಯಾವ ವಾರ ಹೇಳುವಿರಾ ಎಂದು. ಅದಕ್ಕವರು ಕೊಟ್ಟ ಉತ್ತರ ನನ್ನಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು.
“ನನಗಿನ್ನೆಲ್ಲಿ ವಾರ, ದಿನ? ದಿನಗಳು ಅರ್ಥವನ್ನು ಕಳೆದುಕೊಂಡು ಹಲವು ವರ್ಷಗಳೇ ಕಳೆದಿವೆ. ದೇಹದಲ್ಲಿ ಜೀವವೊಂದಿದ್ದರೆ ಸಾಕಾಗುವುದಿಲ್ಲ. ಆ ಜೀವಕ್ಕೆ ನಾಳೆಯೆಂಬ ಬೆಳಗಿನಲ್ಲಿ ನಂಬಿಕೆ ಇರಬೇಕು. ಹುಟ್ಟೋ ಸೂರ್ಯನಲ್ಲಿ, ಬೆಳಗೋ ನಕ್ಷತ್ರದಲ್ಲಿ, ಉದಯಿಸುವ ಚಂದ್ರನಲ್ಲಿ ನಂಬುಗೆಯಿರಬೇಕು. ಹಾಗಿದ್ದರೆ ಮಾತ್ರ ದಿನಕ್ಕೊಂದು ಬೆಲೆ, ಆ ಬೆಲೆಗೊಂದು ಅರ್ಥ.’ ಹೀಗೆ ಹೇಳಿ ನಿಟ್ಟುಸಿರು ಬಿಟ್ಟ ಅವರ ಮಾತು ಕೇಳಿ ನಾನು ದಂಗಾಗಿ ಕುಳಿತಿದ್ದೆ.
ಅವರ ಮಾತುಗಳು ಈ ಹೊತ್ತಿನಲ್ಲಿ ಎಷ್ಟು ಸಾಂದರ್ಭಿಕ ಎನಿಸುತ್ತದೆ ಅಂದರೆ ವಿಷಾದಗೀತೆ ನೆನಪಿ ಸುತ್ತದೆ. ಒಂದೆಡೆ ಕೋವಿಡ್ ಎಲ್ಲವನ್ನೂ ವ್ಯಾಪಿ ಸುತ್ತಿರುವಾಗ ಕಳೆದುಕೊಳ್ಳುತ್ತಿರುವ ಸಂಖ್ಯೆಯೇ ಹೆಚ್ಚಾಗುತ್ತಿದೆ ಎನಿಸುವ ಭಾವ ಆವರಿಸಿಕೊಳ್ಳುತ್ತಿರು ವಾಗ, ನಿಜ “ನಮಗ್ಯಾವ ದಿನ? ನಮಗೆಷ್ಟು ದಿನ?
ಸ್ಫೂರ್ತಿ, ತಸ್ಮೇನಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.