Karnataka ಬೊಕ್ಕಸಕ್ಕೆ ಹೊರೆಯಾಗುತ್ತಿವೆಯೇ ನಿಗಮ, ಮಂಡಳಿಗಳು?
Team Udayavani, Sep 12, 2023, 6:00 AM IST
ಆಡಳಿತದಲ್ಲಿ ಕೇಂದ್ರೀಕರಣವಿರಬಾರದು, ವಿಕೇಂದ್ರಿಕರಣವಿರಬೇಕು ಎಂಬ ಉದ್ದೇಶದಿಂದ ನಿಗಮ ಮಂಡಳಿಗಳನ್ನು ರಚಿಸಲಾಗಿದೆ. ಆದರೆ ಈ ನಿಯಮ ಮಂಡಳಿಗಳೇ ಈಗ ಗಜಗಾತ್ರದಂತಾಗಿದ್ದು, ಇವುಗಳನ್ನು ಸಾಕುವುದೇ ಕಷ್ಟಕರ ಎಂಬ ಸ್ಥಿತಿ ಉದ್ಭವವಾಗಿದೆ. ಅಂದರೆ ಸದ್ಯ ನಿಗಮ, ಮಂಡಳಿಗಳ ಸಂಖ್ಯೆಯು ನೂರರ ಸನಿಹಕ್ಕೆ ಬಂದು ನಿಂತಿವೆ. ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರಲ್ಲದೆ, ಅಧಿಕಾರಿ, ಸಿಬಂದಿಯಿಂದ ತುಂಬಿ ತುಳುಕುವ ನಿಗಮ, ಮಂಡಳಿಗಳು ಆಡಳಿತಾತ್ಮಕ ಅನುಕೂಲಕ್ಕಿಂತ ಆಡಳಿತಾತ್ಮಕ ವೆಚ್ಚ ಹೆಚ್ಚಿಸುವ ಬಿಳಿಯಾನೆ ಎನಿಸಿಬಿಟ್ಟಿವೆ.
ಹೊರೆ ಹೇಗೆ?
14 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿಂದಿನ ಸರಕಾರಗಳಲ್ಲಿ ಅಧಿಕಾರದಲ್ಲಿದ್ದವರಿಗೂ ಈ ವಿಚಾರ ಗೊತ್ತಿದೆ. ಆದರೂ ಚುನಾವಣೆ ಮತ್ತಿತರ ಸಂದರ್ಭಗಳಲ್ಲಿ “ಒತ್ತಡ’ಗಳಿಗೆ ಮಣಿದು ನಿಗಮ-ಮಂಡಳಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಅದರ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಇನ್ನೂ ತ್ರಾಸದಾಯಕ. ಜಾತಿ, ಪ್ರಾದೇಶಿಕತೆ, ನಾಯಕತ್ವ ಗುಣಬಲಗಳು ಒಂದೆಡೆಯಾದರೆ, ಅಸಮಾಧಾನಿತರನ್ನು ಸಮಾಧಾನಪಡಿಸುವ ಆಶ್ರಯತಾಣವೂ ಆಗಿಬಿಟ್ಟಿದೆ. ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನಗಳೇ ಬೇಕು, ಸುಸಜ್ಜಿತ ಕಚೇರಿ, ಕಾರುಗಳಿರಬೇಕು. ಹೆಚ್ಚಿನ ಅನುದಾನ ಕೊಡಬೇಕು. ಇದನ್ನೆಲ್ಲ ನಿಭಾಯಿಸುವಷ್ಟರಲ್ಲಿ ಸರಕಾರವೇ ಹೈರಾಣಾಗಿ, ಸಿಕ್ಕವರಿಗೆ ಸೀರುಂಡೆ ಎನ್ನುವಂತೆ ಕೆಲವೇ ಮಂದಿಗೆ ನಿಗಮ-ಮಂಡಳಿಗಳ “ಫಲ’ ಪ್ರಾಪ್ತಿಯಾಗುತ್ತದೆ.
ಸುಧಾರಣೆ ಅತ್ಯಗತ್ಯ
ಮಾಜಿ ಮಂತ್ರಿ ದಿವಂಗತ ಹಾರನಹಳ್ಳಿ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-1 ರಚಿಸಿದ್ದ ಸರಕಾರ ಅವುಗಳ ಶಿಫಾರಸುಗಳನ್ನು ಜಾರಿಗೊಳಿಸಿದ್ದು ಅಷ್ಟರಲ್ಲೇ ಇದೆ. ಇದೀಗ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರ ನೇತೃತ್ವದಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರಚಿಸಲಾಗಿದೆ.
ಸರಕಾರದ ಎಲ್ಲ ಹಂತಗಳಲ್ಲಿನ ಸಿಬಂದಿ ಬಲದ ಸಮರ್ಪಕ ಹೊಂದಾಣಿಕೆಗೆ ಶಿಫಾರಸು ಮಾಡುವುದು ಮತ್ತು ತಂತ್ರಜ್ಞಾನದ ಮೂಲಕ ಹಲವು ಇಲಾಖೆಗಳಲ್ಲಿ ಅನಗತ್ಯವಾಗಿರುವ ಹುದ್ದೆಗಳನ್ನು ಗುರುತಿಸುವಿಕೆ, ಇಲಾಖೆ, ನಿಗಮ, ಮಂಡಳಿಗಳ ವಿಲೀನಗೊಳಿಸುವ ಸಾಧ್ಯತೆಗಳ ಬಗ್ಗೆ ಸೂಚಿಸುವಿಕೆ ಸೇರಿದಂತೆ ರಚನಾತ್ಮಕ ಸುಧಾರಣೆಗಾಗಿ ಆಯೋಗ ರಚನೆಯಾಗಿದೆ.
ಕೌಶಲಾಭಿವೃದ್ಧಿ ಉದ್ದಮೆದಾರರು ಮತ್ತು ಜೀವನೋಪಾಯ ಇಲಾಖೆಯನ್ನು ಕೌಶಲ್ಕರ್ ಮಿಷನ್‌ನೊಂದಿಗೆ ವಿಲೀನಗೊಳಿಸುವುದು ಉತ್ತಮ, ರಾಜ್ಯ ಸಹಕಾರ ಚುನಾವಣ ಪ್ರಾಧಿಕಾರ ರದ್ದುಗೊಳಿಸುವುದು ಸೂಕ್ತ, ಎಪಿಎಂಸಿಗಳಲ್ಲಿ ಆದಾಯ ಕುಸಿಯುತ್ತಿರುವುದರಿಂದ ವೇತನ, ಚುನಾವಣೆ, ಪದಾಧಿಕಾರಿಗಳ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡುವ ಅಗತ್ಯವಿದೆ. ಒಂದು ಜಿಲ್ಲೆ ಒಂದು ಮಾರುಕಟ್ಟೆ ಮೇಲೆ ಜಿಲ್ಲೆಯ ಎಲ್ಲ ಎಪಿಎಂಸಿಗಳನ್ನು ಸೇರಿಸಿ ಒಂದು ಜಿಲ್ಲಾ ಎಪಿಎಂಸಿಯಾಗಿ ವಿಲೀನಗೊಳಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲು ಪರಿಗಣಿಸಬಹುದು, ಕರ್ನಾಟಕ ಕೃಷಿ ಕೈಗಾರಿಕೆಗಳ ನಿಗಮ (ಕೆಎಐಸಿ), ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ, ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ(ಕೆಎಸ್‌ಐಸಿ)ದೊಂದಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿ) ಯನ್ನು ವಿಲೀನ ಮಾಡಬಹುದು ಎಂಬಿತ್ಯಾದಿ ಶಿಫಾರಸುಗಳನ್ನು ಆಯೋಗವೂ ಸರಕಾರಕ್ಕೆ ಕೊಟ್ಟಿದೆ.
ಕಾನೂನಿನ ಜಿಜ್ಞಾಸೆ
ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ಜಾತ್ಯತೀತ ರಾಷ್ಟ್ರ ಎಂದು ಹೆಸರಿಸಿದೆ. ಆದರೆ ಭಾರತದಲ್ಲಿರುವಷ್ಟು ಜಾತಿಗಳು ಬಹುಶಃ ಜಗತ್ತಿನ ಬೇರಾವ ದೇಶಗಳಲ್ಲೂ ಇಲ್ಲ ಎನಿಸುತ್ತದೆ. ಆದರೂ ಇದು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಬಹುಸಂಸ್ಕೃತಿಯ ರಾಷ್ಟ್ರವೂ ಹೌದು. ಜಾತ್ಯತೀತ ದೇಶದಲ್ಲಿ ಜಾತಿಗಳೂ ಇವೆ, ಅವುಗಳಿಗೆ ಮೀಸಲಾತಿಯೂ ಇದೆ. ಜಾತಿಗಳ ಅಭಿವೃದ್ಧಿಗಾಗಿ ನಿಗಮಗಳು, ಮಂಡಳಿಗಳೂ ಇವೆ. ಹಾಗಿದ್ದರೆ ಇದು ಸಂವಿಧಾನದ ಜಾತ್ಯತೀತ ಪರಿಕಲ್ಪನೆಗೆ ವಿರುದ್ಧವಾಗಿದೆಯೇ? ಸಂವಿಧಾನದ ಉಲ್ಲಂಘನೆಯಾಗುತ್ತದೆಯೇ ಎಂಬುದಕ್ಕೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಸಂವಿಧಾನ ತಜ್ಞರಲ್ಲೂ ಸ್ಪಷ್ಟ ಉತ್ತರಗಳಿಲ್ಲ. ಕೆಲವೇ ಜಾತಿಗಳಿಗೆ ಸಾರ್ವಜನಿಕರ ತೆರಿಗೆ ಹಣವನ್ನು ಬಳಸುವುದು ಸಂವಿಧಾನದ 27ನೇ ವಿಧಿಯ ಉಲ್ಲಂಘನೆಯಾಗುತ್ತದೆಯೇ? ಎಂಬ ವಾದ ಒಂದೆಡೆಯಾದರೆ, ಸಮಾಜದ ಹಿಂದುಳಿದಿರುವಿಕೆಯನ್ನು ಗಮನಿಸಿ ನಿಗಮ- ಮಂಡಳಿ ಮಾಡಲಾಗುತ್ತದೆಯೇ ಹೊರತು, ಜಾತಿಯನ್ನು ಗಮನಿಸಿ ಅಲ್ಲ ಎನ್ನುವ ಪ್ರತಿವಾದವೂ ಇದೆ.
ಹಗರಣಗಳ ನಂಟು
ಜಾತಿ ಆಧಾರಿತ ನಿಗಮ-ಮಂಡಳಿಗಳು ವಿದ್ಯಾರ್ಥಿವೇತನ, ಸ್ವಯಂ ಉದ್ಯೋಗ, ವಾಹನ ಖರೀದಿಗೆ ಸಾಲದ ನೆರವು ಇತ್ಯಾದಿಗಳನ್ನು ಆಯಾ ಜಾತಿಯ ಫಲಾನುಭವಿಗಳಿಗೆ ತಲುಪಿಸುವುದೊಂದೇ ಕೆಲಸ ಮಾಡಿಕೊಂಡಿವೆ. ಅದನ್ನೂ ಸರಿಯಾಗಿ ತಲುಪಿಸುತ್ತಿಲ್ಲ, ಆಯ್ದ ಕೆಲವರಿಗೇ ಸಿಗುತ್ತಿದೆ, ಅದಕ್ಕೂ ಲಾಬಿ ಮಾಡುವ ಪರಿಸ್ಥಿತಿ ಇದೆ ಎಂಬಿತ್ಯಾದಿ ಆರೋಪಗಳೂ ಇವೆ. ನಿಗಮ-ಮಂಡಳಿಗಳಿಗೂ ಹಗರಣಗಳಿಗೂ ಬಿಟ್ಟು ಬಿಡಲಾರದ ನಂಟೂ ಇದೆ. ಹಗರಣಗಳ ಕೂಪವಾಗಿದ್ದ ನಿಗಮ-ಮಂಡಳಿಗಳೂ ಸಾಕಷ್ಟಿವೆ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರೇ ಮದ್ಯಪಾನ ಮಾಡಿದ ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ಕಳಪೆ ಗುಣಮಟ್ಟದ ಸಮವಸ್ತ್ರ ಪೂರೈಸಿದ ಆರೋಪವಿದೆ. ಕರ್ನಾ ಟಕ ಸಾಬೂನು ಮತ್ತು ಮಾರ್ಜಕ ನಿಗಮದಲ್ಲಿ ಸಾಬೂನು ತಯಾರಿಕೆಗೆ ಅಗತ್ಯ ರಾಸಾಯನಿಕ ಖರೀದಿ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ- ಸದಸ್ಯ ಕಾರ್ಯದರ್ಶಿ ನಡುವೆ ಜಟಾ ಪಟಿ ನಡೆದು, ಅವ್ಯವಹಾರದ ವಾಸನೆಯೂ ಬಡಿಯುತ್ತಿದೆ.
ಅವೈಜ್ಞಾನಿಕ ರಚನೆ
ಉದ್ದಿಮೆ, ಕೈಗಾರಿಕೆಗಳಂತೆ ಪೂರಕ ಉತ್ಪನ್ನಗಳನ್ನು ತಯಾರು ಮಾಡುವ ಸಂಸ್ಥೆಗಳಿಗೆ ಮಾತ್ರ ಕಂಪೆನಿ ಕಾಯ್ದೆ ಪ್ರಕಾರ ನಿಗಮಗಳ ಸ್ಥಾನಮಾನ ನೀಡಬಹುದೆಂಬ ನಿಯಮವಿದೆ. ಸರಕಾರದಿಂದ ಅನುದಾನ ಪಡೆದು, ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಿ ಅದರಿಂದ ಬರುವ ಆದಾಯದಿಂದ ನಿಗಮವನ್ನು ನಡೆಸಬೇಕು. ಫಲಾ®ುಭವಿಗಳಿಗೂ ಸರಕಾರದ ಯೋಜನೆಯನ್ನು ತಲುಪಿಸಬೇಕು. ಆದರೆ ಕೆಲವು ನಿಗಮಗಳಿಗೆ ಮಾತ್ರ ಈ ನಿಯಮ ಅನ್ವಯಿಸಿಯೇ ಇಲ್ಲ. ಉತ್ಪನ್ನಗಳನ್ನೇ ತಯಾರಿಸದೆ ಸರಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವ ಸಂಸ್ಥೆಗಳಿಗೆ ನಿಗಮಗಳ ಮಾನ್ಯತೆಯನ್ನೂ ಕೊಟ್ಟು, ಸರಕಾರವೇ ಕಾಲ-ಕಾಲಕ್ಕೆ ಅನುದಾನವನ್ನೂ ಕೊಡುತ್ತಿದೆ. ಉತ್ಪನ್ನ ತಯಾರಿಸುವ ಸಂಸ್ಥೆಗಳಿಗೆ ಸಂಘಗಳ ಪ್ರವರ್ಗದಡಿ ಮಾನ್ಯತೆ ಕೊಟ್ಟಿರುವ ನಿದರ್ಶನಗಳೂ ಇವೆ.
ಜಾತಿಗಳ ಹೆಸರಿನಲ್ಲಿರುವ ನಿಗಮ-ಮಂಡಳಿಗಳು ಒಂದೆಡೆಯಾದರೆ, ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಕರಾವಳಿ ಪ್ರದೇಶ ನಿರ್ವಹಣಾ ಮಂಡಳಿ ಎಂಬ ಪ್ರದೇಶವಾರು ಮಂಡಳಿಗಳೂ ಇನ್ನೊಂದೆಡೆ ಇವೆ. ಅಲ್ಲದೆ ಕರ್ನಾಟಕ ಜೀವವೈವಿಧ್ಯ ಮಂಡಳಿ, ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಲಿಮಿಟೆಡ್), ರೋರಿಕ್ ಮತ್ತು ದೇವಿಕಾ ರಾಣಿ ರೋರಿಕ್ ಎಸ್ಟೇಟ್ ಮಂಡಳಿ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ನಾರು ಅಭಿವೃದ್ಧಿ, ಗೇರು ಅಭಿವೃದ್ದಿ ಹೀಗೆ ನಾನಾ ರೂಪದ ನಿಗಮ ಮಂಡಳಿಗಳಿವೆ.
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವೂ ಇದೆ, ಅರಣ್ಯಯ ಕೈಗಾರಿಕ ನಿಗಮವೇ ಪ್ರತ್ಯೇಕವಾಗಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಯಡಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾಕರ ಆಯೋಗ, ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಲ್ಲವೂ ಇದೆ. ಪ್ರತ್ಯೇಕವಾಗಿ ಕ್ರಿಶ್ಚಿಯನ್ನರ ಅಭಿವೃದ್ಧಿ ನಿಗಮವೂ ಇದೆ.
ಜಾತಿ ಆಧಾರಿತ ನಿಗಮ-ಮಂಡಳಿಗಳು
ಪ್ರಮುಖವಾಗಿ 1975ರಲ್ಲಿ ರಚನೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮವೀಗ ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹೆಸರಿನಲ್ಲಿದ್ದರೆ, 2006ರಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಬೇರ್ಪಟ್ಟಿದೆ. ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಡಾ| ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವೆಂದು ಮರುನಾಮಕರಣಗೊಂಡಿದೆ. 2007ರಲ್ಲಿ ಸ್ಥಾಪನೆಯಾಗಿದ್ದ ಕರ್ನಾಟಕ ಬಂಜಾರಾ ಅಭಿವೃದ್ಧಿ ನಿಗಮವನ್ನೇ 2009ರಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಆಗಿ ನಾಮಕರಣ ಮಾಡಲಾಯಿತು. ಇದಾದ ಮೇಲೂ ಜಾತಿಗೊಂದರಂತೆ ನಿಗಮಗಳನ್ನು ರಚಿಸಲಾಗಿದೆ.
-ಶೇಷಾದ್ರಿ ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್