Art; ರಂಗಕಲಾವಿದರ ಹೊಟ್ಟೆ ತುಂಬಿಸುವ ಕೆಲಸವನ್ನು ಸರಕಾರ ಮಾಡಬೇಕು
Team Udayavani, Nov 12, 2023, 5:52 AM IST
ದೇಶದ ನಾಟಕರಂಗಕ್ಕೆ ಕನ್ನಡಿಗರ ಕೊಡುಗೆ ಹೆಮ್ಮೆ ಪಡುವಂತದ್ದಾಗಿದೆ. ಬಂಗಾಲಿ ಭಾಷೆ ಬಿಟ್ಟರೆ ಕನ್ನಡಿಗರು ಕೊಟ್ಟಷ್ಟು ಕೊಡುಗೆ ಬೇರೆ ಯಾವ ರಾಜ್ಯದವರೂ ಕೊಟ್ಟಿಲ್ಲ ಎಂದು ಕನ್ನಡಿಗರು ಧೈರ್ಯದಿಂದ ಹೇಳಬಹುದು. ನಾಟಕಕಾರ ಹಾಗೂ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದರು. ಜತೆಗೆ ಚಂದ್ರಶೇಖರ ಕಂಬಾರರೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಹಾಗೆಯೇ ಎಚ್.ಎಸ್.ಶಿವಪ್ರಕಾಶ್ ಅವರು ಸಾಹಿತ್ಯ ಅಕಾಡೆಮಿ ಪತ್ರಿಕೆಯ ಎಡಿಟರ್ ಆಗಿದ್ದರು.
ಚಂದ್ರಶೇಖರ ಕಂಬಾರರ “ಜೋಕುಮಾರ ಸ್ವಾಮಿ’ ನಾಟಕ ರಾಷ್ಟ್ರದಲ್ಲಿ ಹಲವು ಪ್ರದರ್ಶನ ಕಂಡಿತು. ಜತೆಗೆ ಕಂಬಾರರಿಗೆ ರಾಷ್ಟ್ರೀಯ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು. ಇಂತಹ ಹಲವು ರಂಗಪ್ರಯೋಗಗಳ ಅವಿರ್ಭವ ಕನ್ನಡ ರಂಗಭೂಮಿಯದ್ದಾಗಿದೆ.
ಕನ್ನಡ ರಂಗಭೂಮಿ ಕೇವಲ ರಂಗಪ್ರಯೋಗ ಗಳಿಷ್ಟೇ ಗೆರೆ ಎಳೆದುಕೊಂಡಿಲ್ಲ. ಬದಲಾಗಿ ತನ್ನದೇ ಆದ ಪ್ರತಿರೋಧ ನೀಡಿದೆ. ಪರಿಣಾಮ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ರಂಗಾಸಕ್ತರನ್ನು ಎಚ್ಚರಿಸಿ ಹೋರಾಟಕ್ಕೂ ದಾರಿಯಾಗಿದೆ. ಈ ಹಿಂದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಾಗ ತನ್ನದೇ ಆದ ರೀತಿಯಲ್ಲಿ ಕನ್ನಡ ರಂಗಭೂಮಿ ಪ್ರಬಲವಾದ ಪ್ರತಿರೋಧ ಒಡ್ಡಿತ್ತು. ಅಂತಹ ಇತಿಹಾಸ ಕನ್ನಡ ರಂಗಭೂಮಿಗಿದೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಟಕದ ವಸ್ತು ಬೇರೆ ಆಗಿತ್ತು. ಕಂಬಾರರ “ಸಂಗ್ಯಾಬಾಳ್ಯ’, “ಜೋಕುಮಾರ ಸ್ವಾಮಿ’ ನಾಟಕಗಳು ಪ್ರದರ್ಶನವಾ ಗುತ್ತಿತ್ತು. ಆದರೆ ಬಳಿಕ ಮತ್ತೂಂದು ಆಯಾಮದ ರಂಗಪ್ರಯೋಗಗಳು ಆರಂಭವಾದವು. ಅವುಗಳ ಕಥಾವಸ್ತು ರಾಜಕಾರಣಿ ಮತ್ತು ಅವನ ಹಿಂಬಾಲಕರ ನಡೆ-ನುಡಿ ಟೀಕಿಸುವುದು, ವ್ಯಂಗ್ಯ ಮಾಡುವುದಾಗಿತ್ತು. ಆ ಮೂಲಕ ರಂಗಾಸ್ತಕರನ್ನು ಎಚ್ಚರಿಸುವುದಕ್ಕೆ ಆದ್ಯತೆ ನೀಡಿತ್ತು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ನಾಡಿನ ರಂಗಭೂಮಿ ಬೆಳವಣಿಗೆಗೆ ನೀರೆರೆದಿದ್ದಾರೆ. ಬಿ.ವಿ.ಕಾರಂತರು ರಂಗಾಯಣಕ್ಕೆ ರೂಪ ನೀಡಿದರು. ಶ್ರೀರಂಗರು ಕನ್ನಡದ ರಂಗಭೂಮಿಗೆ ಹೊಸದಿಕ್ಕು ಕೊಟ್ಟರು. ಶ್ರೀರಂಗರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ರಾಜ್ಯದ ವಿವಿಧ ಶಾಲೆಗಳ ಶಾಲಾ ಶಿಕ್ಷಕರಿಗೆ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿದ್ದರು. ಇದು ಇಡೀ ಕರ್ನಾಟಕದಲ್ಲೇ ಒಂದು ರಂಗಚೇತನ ಕೊಟ್ಟ ಶಿಬಿರವಾಗಿತ್ತು. ಇದರ ಫಲವಾಗಿ ಹಿರಿಯ ನಟ ಲೋಕೇಶ್, ಬಿ.ಜಯಶ್ರೀ ಸೇರಿದಂತೆ ಹೆಸರಾಂತ ಕಲಾವಿದರು ಬೆಳಕಿಗೆ ಬಂದರು. 70ರ ದಶಕದಲ್ಲಿ ಒಂದಾದ ಮೇಲೆ ಒಂದು ಹವ್ಯಾಸಿ ತಂಡಗಳು ರೂಪುಗೊಂಡವು. ಗಿರೀಶ್ ಕಾರ್ನಾಡರ “ತುಘಲಕ್’ ರಂಗ ಪ್ರಯೋಗ ಕಾರ್ನಾಡ್ ಅವರನ್ನು ನಾಟಕಕಾರರನ್ನಾಗಿ ರೂಪಿಸಿತು. ಹಿರಿಯ ನಟ ಸಿ.ಆರ್. ಸಿಂಹ ಅವರಿಗೂ ಹೆಸರು ತಂದುಕೊಟ್ಟಿತು. ಹಿರಿಯ ನಟರಾದ ಶಂಕರ್‌ನಾಗ್, ಅರುಂಧತಿ, ರಮೇಶ್ ಭಟ್, ಲೋಕನಾಥ್, ಲೋಹಿತಾಶ್ವ, ವೈಶಾಲಿ ಕಾಸರವಳ್ಳಿ, ಗಿರೀಶ್ ಕಾಸರವಳ್ಳಿ ಸೇರಿದಂತೆ ಈ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಕಲಾಕ್ಷೇತ್ರ ದಲ್ಲಿ ಕಾಲಕಳೆಯುತ್ತಿದ್ದ ಪ್ರಕಾಶ್ ರೈ ಇವತ್ತು ಬಹು ಭಾಷಾ ಕಲಾವಿದನಾಗಿ ಬೆಳೆಸಿದ್ದೇ ಕನ್ನಡ ರಂಗಭೂಮಿ ಎಂಬುದನ್ನು ನಾವು ಮರೆಯುವಂತಿಲ್ಲ.
ಅಂದು ಸರಕಾರದ ಆಸರೆಯಿಲ್ಲದೆ ಕೇವಲ ಟಿಕೆಟ್‌ಗಳಿಂದಲೇ ರಂಗಪ್ರಯೋಗಗಳು ನಡೆ ಯುತ್ತಿದ್ದವು. ಸರಕಾರದ ಹಂಗಿಲ್ಲದೆ ರಂಗಭೂಮಿ ಸಾಗುತ್ತಿತ್ತು. ಆದರೆ ಕಲರ್ ಟಿವಿ ಬಂದಾಗ ರಂಗಭೂಮಿಯಲ್ಲಿ ಒಳ ತುಮಲ ಶುರು ವಾಯಿತು. ಆಗಲೇ ರಂಗಾಸಕ್ತರು ಕೂಡ ಮಾಯವಾದರು. ಎಲ್ಲರೂ ಮನೆಯಲ್ಲೇ ಇರಲು ಶುರು ಮಾಡಿದರು. ನಾಟಕ, ನೃತ್ಯ ಸೇರಿದಂತೆ ಯಾವ ಪ್ರದರ್ಶನಕ್ಕೂ ಜನ ಬರುತ್ತಿಲ್ಲ. ಹೀಗಾಗಿ ಕಲಾವಿದರು ಪೆಚ್ಚು ಮುಖ ಹಾಕಿಕೊಂಡು ಕುಳಿತು ಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಆದರೆ ಅನಂತರ ಧಾರಾವಾಹಿಗಳಿಂದ ಬೇಸತ್ತು ಜನರು ಮತ್ತೆ ರಂಗಭೂಮಿಗೆ ಮರಳಿದ್ದು ಖುಷಿ ನೀಡಿತು.
ಇವತ್ತು ಹಲವು ಸಂಕಷ್ಟಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ರಂಗಭೂಮಿಗೂ ಸರಕಾರದ ಆಸರೆ ಬೇಕಾಗಿದೆ. ನೀನಾಸಂ, ಸಾಣೇಹಳ್ಳಿ ಸೇರಿದಂತೆ ಇನ್ನಿತರ ಕಲಾ ಸಂಸ್ಥೆಗಳಲ್ಲಿ ಪ್ರತೀ ವರ್ಷ ಹಲವು ಕಲಾವಿದರು ರೂಪುಗೊಳ್ಳುತ್ತಿದ್ದಾರೆ. ಆ ಕಲಾವಿದರುಗಳಿಗೆ ಸರಕಾರ ಕೆಲಸ ನೀಡಬೇಕಾಗಿದೆ. ಕೇವಲ ಪ್ರಶಸ್ತಿ ನೀಡಿದರಷ್ಟೇ ಸಾಲದು, ಕಲಾವಿದರ ಹೊಟ್ಟೆ ತುಂಬಿಸುವ ಕೆಲಸವನ್ನು ಸರಕಾರ ಮಾಡಬೇಕು. ಜಿಲ್ಲಾ ರಂಗಮಂದಿರಕ್ಕೆ ಆಯಾ ಜಿಲ್ಲೆಯ ರಂಗ ಕಲಾವಿದರಗಳನ್ನು ನೇಮಕ ಮಾಡುವುದರ ಜತೆಗೆ ರಂಗಕಲಾ ಶಿಕ್ಷಕರ ನೇಮಕ ಮಾಡಬೇಕು. ಆ ಮೂಲಕ ರಂಗಭೂಮಿಗೆ ಮತ್ತಷ್ಟು ಶಕ್ತಿ ತುಂಬಬೇಕು.
ಶ್ರೀನಿವಾಸ ಜಿ.ಕಪ್ಪಣ್ಣ,ಹಿರಿಯ ರಂಗ ಕರ್ಮಿ,ಖ್ಯಾತ ಸಾಂಸ್ಕೃತಿಕ ಸಂಘಟಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.