ಸಂವಿಧಾನದ ಆಶಯ ಚರ್ಚೆಯ ಹಾದಿ
Team Udayavani, Sep 8, 2022, 6:10 AM IST
1950ರ ಜ. 26ರಂದು ವಿಧ್ಯುಕ್ತವಾಗಿ ಅಂಗೀಕಾರಗೊಂಡಿರುವ ನಮ್ಮ ದೇಶದ ಸಂವಿಧಾನ ಮಹತ್ತರ ಇತಿಹಾಸವನ್ನು ಹೊಂದಿದೆ. ದೇಶದ ಆಡಳಿತ ಮತ್ತು ಎಲ್ಲರಿಗೂ ಸಮಾನ ಅವಕಾಶವನ್ನೂ ಕಲ್ಪಿಸಲು ಸಂವಿಧಾನ ಮಾರ್ಗಸೂಚಿಯಾಗಿದೆ. ರಾಜ್ಯಸಭೆಯ ಮಾಜಿ ಸಂಸದ ಡಾ| ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖವಾಗಿರುವ ಜಾತ್ಯತೀತ (ಸೆಕ್ಯುಲರ್) ಮತ್ತು ಸಮಾಜವಾದ (ಸೋಶಿಯಲಿಸ್ಟ್) ಪದಗಳ ಸೇರ್ಪಡೆ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೆ.23ರಂದು ನಡೆಯಲಿದೆ. ಈ ಎರಡು ಪದಗಳನ್ನು 1976ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ವೇಳೆ 42ನೇ ತಿದ್ದುಪಡಿಯ ಅನ್ವಯ ಸೇರ್ಪಡೆ ಮಾಡಲಾಗಿತ್ತು. ಸಂವಿಧಾನದ 368ನೇ ವಿಧಿಯ ಅನ್ವಯ ಸಂಸತ್‌ಗೆ ಈ ಎರಡು ಪದಗಳನ್ನು ಸೇರ್ಪಡೆಗೊಳಿಸಲು ಅಧಿಕಾರವೇ ಇಲ್ಲ ಎನ್ನುವುದು ಅರ್ಜಿದಾರರ ಪ್ರತಿಪಾದನೆ.
ಸಂವಿಧಾನದ ಪೀಠಿಕೆ ಎಂದರೇನು?
ಯಾವುದೇ ಒಂದು ವಿಚಾರದ ಪ್ರವೇಶಕ್ಕೆ ಮುನ್ನ ಅದು ಹೊಂದಿರುವ ಆಶಯ ಮತ್ತು ಗುರಿಯನ್ನು ವಿವರಿಸುವ ಅಂಶವೇ ಪೀಠಿಕೆ. 1947ರಲ್ಲಿ ನಮ್ಮ ದೇಶದ ಸಂವಿಧಾನ ರಚಿಸುವ ಪ್ರಕ್ರಿಯೆ ವೇಳೆ ಸಂವಿಧಾನ ಸಭೆಗಳಲ್ಲಿ ಸಂವಿಧಾನದ ಪೀಠಿಕೆಯಲ್ಲಿ ಯಾವ ಅಂಶಗಳು, ಅದರ ಆಶಯ ಹೇಗೆ ಇರಬೇಕು ಎಂಬ ಬಗ್ಗೆ ಸಮಗ್ರ ಸಮಾಲೋಚನೆ, ಪರಾಮರ್ಶೆಗಳು ನಡೆದಿದ್ದವು ಮತ್ತು ಅವುಗಳನ್ನು ಅಂಗೀಕರಿಸಲಾಗಿತ್ತು.
ಆರಂಭದಲ್ಲಿ ಸಂವಿಧಾನದ ಪೀಠಿಕೆ ಈ ಕೆಳಗಿನಂತೆ ಇತ್ತು
ನಾವು, ಭಾರತದ ಜನರು, ಭಾರತವನ್ನು ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯ ವನ್ನಾಗಿ ಮಾಡಲು ಮತ್ತು ಅದರ ಎಲ್ಲ ನಾಗರಿಕರಿಗೆ ನೀಡಲು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಚಿಂತನೆ, ಅಭಿವ್ಯಕ್ತಿ, ಧರ್ಮಶ್ರದ್ಧೆ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯ, ಸ್ಥಾನಮಾನ, ಮತ್ತು ಅವಕಾಶದ ಸಮಾನತೆಯನ್ನು ಮತ್ತು ಎಲ್ಲದರಲ್ಲೂ ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುವ ಭ್ರಾತೃತ್ವವನ್ನು ಉತ್ತೇಜಿಸುವುದು. ದೃಢ ನಿಶ್ಚಯದಿಂದ, ಇಂದು ಈ ಸಂವಿಧಾನ ಸಭೆಯಲ್ಲಿ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿ, ಅಳವಡಿಸಿ ನಾವು ಅರ್ಪಿಸಿಕೊಂಡಿದ್ದೇವೆ.
ಪೀಠಿಕೆ ಸಂವಿಧಾನದ ಅವಿಭಾಜ್ಯ ಅಂಗ
ಪ್ರಜಾಸತ್ತಾತ್ಮಕವಾಗಿ ನಡೆಸಲಾಗಿದ್ದ ಅವಿರತ ಶ್ರಮ, ಮಾತುಕತೆಯಿಂದಾಗಿ ನಮ್ಮ ದೇಶಕ್ಕೆ ಅತ್ಯುತ್ತಮ ಸಂವಿಧಾನ ಪ್ರಾಪ್ತವಾಗಿದೆ ಎಂದರೆ ತಪ್ಪಾಗಲಾರದು. ಜನರೇ ಸ್ವಯಂ ಆಡಳಿತ ನಡೆಸುವ ನಿಟ್ಟಿನಲ್ಲಿ ಶತಮಾನಗಳಿಂದ ನಡೆಯುತ್ತಿದ್ದ ವಸಾಹತುಶಾಹಿ ಆಡಳಿತದ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಮತ್ತು ಅದರಲ್ಲಿ ಯಶಸ್ವಿಯಾದ ಬಳಿಕ ದೇಶದ ಆಡಳಿತ ನಡೆಸಲು ಎಂತಹ ಮಾರ್ಗಸೂಚಿ ಇರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗಿತ್ತು. ಸಂವಿಧಾನ ರಚನಾ ಸಭೆಯಲ್ಲಿ ನಡೆದಿದ್ದ ಸಮಾಲೋಚನೆ ವೇಳೆ ಐರ್ಲೆಂಡ್‌ನ ಸಂವಿಧಾನದ ಪೀಠಿಕೆಯಲ್ಲಿ ಇರುವಂತೆ ನಮ್ಮ ದೇಶದ ಸಂವಿಧಾನದ ಪೀಠಿಕೆಯಲ್ಲಿ ದೇವರ ಹೆಸರು, ಮಹಾತ್ಮಾ ಗಾಂಧಿಯವರ ಹೆಸರು ಸೇರ್ಪಡೆ ಮಾಡಬೇಕು ಸೇರಿದಂತೆ ಹಲವು ಸಲಹೆಗಳು ಬಂದಿದ್ದವು. ಪೀಠಿಕೆ ಎನ್ನುವುದು ಸಂವಿಧಾನದ ಅವಿಭಾಜ್ಯ ಅಂಗವೇ ಅಥವಾ ಅದೊಂದು ಕೇವಲ ಪರಿಚಯಾತ್ಮಕ ಬರಹವೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ 1995ರಲ್ಲಿ ಎಲ್‌ಐಸಿ ಪ್ರಕರಣದ ತೀರ್ಪಿನಲ್ಲಿ ಹೀಗೆ ಹೇಳಿದೆ – ಪೀಠಿಕೆ ಎಂದರೆ ಸಂವಿಧಾನದ ಅವಿಭಾಜ್ಯ ಅಂಗವೇ ಆಗಿದೆ. ಹೀಗೆ ಹೇಳುವ ಮೂಲಕ ಕೋರ್ಟ್ ಅದರ ಮಹತ್ವವನ್ನು ಸ್ಪಷ್ಟವಾಗಿ ಸಾರಿದೆ. ನ್ಯಾಯಾಲಯಗಳು ಕೂಡ ತಮ್ಮ ಹಲವು ತೀರ್ಪುಗಳಲ್ಲಿ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಗೊಂಡಿರುವ ಅಂಶಗಳನ್ನು ಪ್ರಸ್ತಾವಿಸಿವೆ. ಈ ಹಿನ್ನೆಲೆಯಲ್ಲಿ ಅದು ಹೊಂದಿರುವ ಮಹತ್ವವನ್ನು ಕಾಲ ಕಾಲಕ್ಕೆ ಪ್ರಕಟಿಸಲಾಗಿದೆ ಮತ್ತು ಅಂಗೀಕರಿಸಿವೆ.
ಈ ಹಿಂದೆ ಪೀಠಿಕೆ ಬಗ್ಗೆ ಚರ್ಚೆಯಾಗಿದೆಯೇ?
ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಅವರು 2020ರಲ್ಲಿ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಸಮಾಜವಾದವನ್ನು ಪೀಠಿಕೆಯಿಂದ ತೆಗೆದುಹಾಕಬೇಕು ಎಂದು ಪ್ರತಿಪಾದಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಜನಾಂಗವನ್ನು ಒಂದು ತಲೆಮಾರಿನ ಚಿಂತನೆಗೆ ಸೀಮಿತವಾಗಿರುವಂತೆ ಮಾಡಬಾರದು. 70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್, ಸಮಾಜವಾದಿ ಧೋರಣೆಯಿಂದ ಹೊಸ ಉದಾರವಾದಿ ಧೋರಣೆಗೆ ಬದಲಾವಣೆ ಮಾಡಿಕೊಂಡಿತ್ತು. 1990ರಲ್ಲಿ ಆ ಪಕ್ಷ ಅಳವಡಿಸಿಕೊಂಡಿದ್ದ ಹೊಸ ನಿಲುವುಗಳು ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಇದ್ದುದಕ್ಕಿಂತ ಭಿನ್ನವಾಗಿವೆ ಎಂದಿದ್ದರು.
2015ರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಮಾಜವಾದ ಮತ್ತು ಜಾತ್ಯತೀತ ಎಂಬ ಶಬ್ದಗಳ ಉಲ್ಲೇಖ ಇಲ್ಲದೇ ಇರುವ ಸಂವಿಧಾನದ ಪೀಠಿಕೆಯನ್ನು ಪ್ರದರ್ಶಿಸಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು. ಅದಕ್ಕೆ ಉತ್ತರಿಸಿದ್ದ ಸಚಿವರಾಗಿದ್ದ ರವಿಶಂಕರ ಪ್ರಸಾದ್, ನೆಹರೂ ಅವರಿಗೆ ಜಾತ್ಯತೀತತೆಯ ಅರಿವು ಇತ್ತೇ? ಈ ಶಬ್ದಗಳನ್ನು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಅದರ ಬಗ್ಗೆ ಚರ್ಚೆಯಾದರೆ ತಪ್ಪೇನು? ನಾವು ದೇಶದ ಮುಂದೆ ಸಂವಿಧಾನದ ಮೂಲ ಪೀಠಿಕೆಯನ್ನು ಇರಿಸಿದ್ದೇವೆ ಎಂದು ಹೇಳಿದ್ದರು.
ಸಂವಿಧಾನದ ಪೀಠಿಕೆಯಲ್ಲಿ ಇರುವ ಸಮಾಜವಾದ ಶಬ್ದವನ್ನು ತೆಗೆದು ಹಾಕಬೇಕು ಎಂದು 2008ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಸಮಾಜವಾದ ಎಂಬ ಶಬ್ದದ ಅರ್ಥವನ್ನು ತೀರಾ ಸಂಕುಚಿತವಾಗಿ ತಿಳಿದುಕೊಳ್ಳುವುದೇಕೆ? ವಿಸ್ತೃತವಾಗಿರುವ ಅರ್ಥದಲ್ಲಿ ಸಮಾಜವಾದ ಎಂದರೆ ಅಭಿವೃದ್ಧಿಯ ಸಂಕೇತ. ಅಭಿವೃದ್ಧಿ ಎಂದರೆ ಪ್ರಜಾಪ್ರಭುತ್ವದ ಮುಖವೇ ಆಗಿದೆ ಎಂದು ಆಗ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಯಾವ ಹಂತದಲ್ಲಿ ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಲು ಸಾಧ್ಯ?
ಇಂದಿರಾ ಗಾಂಧಿಯವರು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಜನರ ಮನಸ್ಸಿನಲ್ಲಿ ತಾವಿರುವಂತೆ ಆಗಬೇಕು ಎಂದು ಶ್ರಮಿಸಿದ್ದರು. ಅದಕ್ಕಾಗಿಯೇ ಅವರು ಬಡತನ ನಿರ್ಮೂಲನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಮುಂದಾಗಿದ್ದರು. ಈ ಉದ್ದೇಶದಿಂದಲೇ 1976ರಲ್ಲಿ 42ನೇ ಸಂವಿಧಾನ ತಿದ್ದುಪಡಿ ಜಾರಿಗೆ ತರಲಾಯಿತು. ಅದೇ ಅವಧಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ಈ ತಿದ್ದುಪಡಿಯ ಮೂಲಕ sovereign democratic republic (ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ)ದ ಬದಲಾಗಿ sovereign socialist secular democratic republic (ಸಾರ್ವಭೌಮತ್ವ ಸಾಮಾಜಿಕ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ) ಎಂದು ಬದಲಾವಣೆ ಮಾಡಲಾಯಿತು. ಇದರ ಜತೆಗೆ unity of the nation (ದೇಶದ ಐಕ್ಯತೆ) ಎಂಬುದರ ಬದಲಾಗಿ unity and integrity of the nation (ಐಕ್ಯತೆ ಮತ್ತು ದೇಶದ ಏಕತೆ ) ಎಂದು ಬದಲಾವಣೆ ಮಾಡಲು ಸಮ್ಮತಿ ಸೂಚಿಸಲಾಗಿತ್ತು.
ಸಂವಿಧಾನದಲ್ಲಿ ಸೂಚಿತವಾಗಿರುವ 368 (2)ನೇ ವಿಧಿಯ ಅನ್ವಯ ಸಂವಿಧಾನಕ್ಕೆ ತಿದ್ದುಪಡಿ ತರಲು ಸಂಸತ್‌ಗೆ ಅವಕಾಶ ಇದೆ. ಅದಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟು ಸಂಸದರ ಪೈಕಿ ಮೂರನೇ ಎರಡರಷ್ಟು ಸಂಸದರು ಹಾಜರಿದ್ದು ಮತ ಹಾಕಿ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಇತರ ಅಂಶಗಳೂ ಇದ್ದವು. ಈ ಮೂಲಕ ಇಂದಿರಾ ಗಾಂಧಿ ಸರಕಾರ ಅಧಿಕಾರವನ್ನು ಮತ್ತಷ್ಟು ಕೇಂದ್ರೀಕರಿಸಲು ಮುಂದಾಗಿತ್ತು. ಈ ಅಂಶಗಳನ್ನೆಲ್ಲ ತುರ್ತು ಪರಿಸ್ಥಿತಿ ಬಳಿಕ ಅಧಿಕಾರಕ್ಕೆ ಬಂದಿದ್ದ ಜನತಾ ಪಕ್ಷದ ಸರಕಾರ ರದ್ದುಗೊಳಿಸಿತ್ತು.
ಜಾತ್ಯತೀತ ಮತ್ತು ಸಮಾಜವಾದ ಎಂಬ ಶಬ್ದಗಳುಸ್ವಾತಂತ್ರ್ಯ ಪೂರ್ವದಲ್ಲೇ ಚರ್ಚೆಯಾಗಿತ್ತೇ?
ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರಾಗಿದ್ದ ಕೆ.ಟಿ.ಶಾ ಮತ್ತು ಬೃಜೇಶ್ವರ ಪ್ರಸಾದ ಮತ್ತು ಇತರರು ಈ ಶಬ್ದಗಳನ್ನು ಸೇರ್ಪಡೆಗೊಳಿಸುವ ಬಗ್ಗೆ ಮಾತಾಡಿದ್ದರು. ಅದಕ್ಕೆ ಉತ್ತರಿಸಿದ್ದ ಸಂವಿಧಾನಶಿಲ್ಪಿ ಬಿ.ಆರ್.ಅಂಬೇಡ್ಕರ್, ದೇಶ ಯಾವ ರೀತಿಯ ನಿಲುವುಗಳನ್ನು ಹೊಂದಬೇಕು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗೆ ಅನುಸಾರವಾಗಿ ಯಾವ ರೀತಿ ಸಂಘಟಿತರಾಗಿ ಇರಬೇಕು ಎಂಬ ಬಗ್ಗೆ ಆಯಾ ಸಮಯಕ್ಕೆ ಅನುಸಾರವಾಗಿ ಜನರೇ ನಿರ್ಧರಿಸಬೇಕು. ಅದನ್ನು ಸಂವಿಧಾನದಲ್ಲಿ ಸೂಚಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದ್ದೇ ಆದಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡಿದಂತೆ ಆಗುತ್ತದೆ ಎಂದು ಉತ್ತರಿಸಿದ್ದರು. ಸಮಾಜವಾದ ಮತ್ತು ಜಾತ್ಯತೀತ ಎಂಬ ಪದ ಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕ ಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ಡಾ| ಸುಬ್ರಮಣಿಯನ್ ಸ್ವಾಮಿ ಈ ಮಾತುಗಳನ್ನು ಉಲ್ಲೇಖಿಸಿದ್ದಾರೆ.
ಜಾತ್ಯತೀತ ಮತ್ತು ಸಮಾಜವಾದ ಸೇರ್ಪಡೆ ಬಗ್ಗೆ ಅಂಬೇಡ್ಕರ್ ಹೇಳಿದ್ದ ಮತ್ತೊಂದು ಅಂಶವೆಂದರೆ, ನಾನು ಹೇಳಿರುವ ಅಂಶಗಳು ಪೀಠಿಕೆಯ ತಿದ್ದುಪಡಿ ಆವೃತ್ತಿಯಲ್ಲಿ ಸೇರ್ಪಡೆಯಾಗಿದೆ. ಸಮಾಜವಾದ ಮತ್ತು ಜಾತ್ಯತೀವಾದವನ್ನು ಪುಷ್ಟೀಕರಿಸುವ ಹಲವು ತತ್ತಗಳು ಸಂವಿಧಾನದಲ್ಲಿಯೇ ಸಮ್ಮಿಳಿತವಾಗಿದೆ. ಸರಕಾರ ಹೇಗೆ ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಎಂಬ ಬಗ್ಗೆ ಇರುವ ರಾಜ್ಯ ನೀತಿಯ ನಿರ್ದೇಶನ ತತ್ತಗಳಲ್ಲಿ ಉಲ್ಲೇಖವಾಗಿದೆ. ಸಮುದಾಯದಲ್ಲಿ ಎಲ್ಲರಿಗೂ ವಸ್ತುಗಳ ಸಮಾನ ಹಂಚಿಕೆ, ಉದ್ಯೋಗಿಗಳಿಗೆ ಅವರ ಹಕ್ಕುಗಳ ರಕ್ಷಣೆ ಎಂಬುದನ್ನು ಈ ನಿಟ್ಟಿನಲ್ಲಿ ಉದಾಹರಣೆಯಾಗಿ ಕೊಡಬಹುದು.
ಅದೇ ರೀತಿ, ಮೂಲಭೂತ ಹಕ್ಕುಗಳಲ್ಲಿಯೂ ಕೂಡ ಪ್ರತಿಯೊಬ್ಬರಿಗೂ ಅವರದ್ದೇ ಆಯ್ಕೆಯ ಧರ್ಮವನ್ನು ಅನುಸರಿಸುವ ಮತ್ತು ಪ್ರಚಾರ ಮಾಡುವ, ಅದೇ ರೀತಿ ಸರಕಾರದಲ್ಲಿ ಹಲವಾರು ಸಮುದಾಯಗಳ ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಭಾರತದ ಜಾತ್ಯತೀತ ವ್ಯವಸ್ಥೆ ಯಾಗಿದೆ. ಪಾಶ್ಚಾತ್ಯ ವ್ಯವಸ್ಥೆಯಲ್ಲಿ ಜಾತ್ಯತೀತತೆ ಮತ್ತು ಸರಕಾರ ಎರಡೂ ಪ್ರತ್ಯೇಕ ವ್ಯವಸ್ಥೆಗಳೇ ಆಗಿವೆ. ಆದರೆ ಭಾರತದ ವ್ಯವಸ್ಥೆಯಲ್ಲಿ ಹಲವಾರು ವರ್ಷಗಳಿಂದ ಧಾರ್ಮಿಕ ವಿಚಾರಗಳು ಒಳಗೊಂಡೇ ಬಂದಿವೆ.
-ಸದಾಶಿವ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.