ವಾರ್ನ್ ಅಸಾಮಾನ್ಯ ನಿರ್ಗಮನ
ಸ್ಪಿನ್ ಜಗತ್ತಿನ ಚಕ್ರವರ್ತಿ ಶೇನ್ ವಾರ್ನ್ ಅನಿರೀಕ್ಷಿತ ನಿಧನದ ಈ ಹೊತ್ತಿನಲ್ಲಿ...
Team Udayavani, Mar 6, 2022, 7:30 AM IST
ಶೇನ್ ವಾರ್ನ್.. ಈ ವ್ಯಕ್ತಿ ಭೌತಿಕವಾಗಿ ಮರೆಯಾಗಿರಬಹುದು. ಆದರೆ ಅವರು ಉಳಿಸಿಹೋದ ನೆನಪುಗಳು ಮಾತ್ರ ಮರೆಯಲು ಸಾಧ್ಯವೇ ಆಗದ ಅಚ್ಚುಗಳು. ಒಂದಲ್ಲ, ಎರಡಲ್ಲ, ಕೇವಲ ಆಟವೊಂದೇ ಅಲ್ಲ, ಅದನ್ನು ಮೀರಿ ವಾರ್ನ್ ಬದುಕಿದ್ದರು. ಅಂದರೆ ಪೂರ್ಣವಾಗಿ ಬದುಕಿದ್ದರು! ಅದ್ಭುತ, ಅಸಾಮಾನ್ಯ ಪ್ರತಿಭೆಯಾಗಿ, ದೋಷಗಳ ಗಣಿಯಾಗಿ, ಗೆಳೆಯನಾಗಿ, ದ್ವೇಷಿಯಾಗಿ… ಹೀಗೆ ಯಾವುದೇ ಪಾತ್ರದಲ್ಲಿ ಕಾಣಿಸಿಕೊಂಡರೂ ಅಲ್ಲವರು ಅನುಭೂತಿಯ ಶೃಂಗದಲ್ಲಿರುತ್ತಿದ್ದರು. ಇದೇ ಕಾರಣಕ್ಕೆ ಅವರೊಬ್ಬ ಅತಿವಿಶಿಷ್ಟ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ.
ಆಸೀಸ್ ತಂಡದ ನಾಯಕಬೇಕಿತ್ತು, ಆದರೆ…
ಶೇನ್ ವಾರ್ನ್ ಗಿದ್ದ ಪ್ರತಿಭೆ, ಪರಿಸ್ಥಿತಿಯನ್ನು ಅಳೆಯುವ ತಾಕತ್ತು, ಎದುರಾಳಿಗಳ ವಿರುದ್ಧ ರಣತಂತ್ರ ರೂಪಿಸುವ ಶಕ್ತಿ ನೋಡಿದಾಗ ಶೇನ್ ವಾರ್ನ್ ಗೆ ಆಸ್ಟ್ರೇಲಿಯ ತಂಡದ ನಾಯಕರಾಗುವ ಎಲ್ಲ ಅರ್ಹತೆಯಿತ್ತು. ಒಂದು ವಿಶ್ಲೇಷಣೆ ಪ್ರಕಾರ, ಆಸೀಸ್ ಕಂಡ ಸರ್ವಶ್ರೇಷ್ಠ ನಾಯಕ ಎಂದೆನಿಸಿಕೊಳ್ಳುವುದು ಅವರಿಗೆ ಒಂದು ವಿಷಯವೇ ಆಗಿರಲಿಲ್ಲ. ಅದಕ್ಕಿದ್ದ ಏಕೈಕ ಅಡ್ಡಿಯೆಂದರೆ ಸ್ಟೀವ್ ವಾ. ಶೇನ್ 1992ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರೆ, ಸ್ಟೀವ್ 1985ರಲ್ಲೇ ಈ ಕೆಲಸ ಮಾಡಿದ್ದರು. ಈ ಅನುಭವದ ಆಧಾರದಲ್ಲಿ ಸ್ಟೀವ್‌ಗೆ 1997ರಲ್ಲಿ ನಾಯಕತ್ವ ಲಭಿಸಿತು. 1999ರಲ್ಲಿ ಅವರು ಟೆಸ್ಟ್ ತಂಡದ ನಾಯಕರಾದರು. ಈ ವೇಳೆ ಶೇನ್ ವಾರ್ನ್ ತಂಡದ ಉಪನಾಯಕರಾಗಿ ಆಯ್ಕೆಯಾದರು. ಆದರೆ ಕೆಲ ಕಳಪೆ ಪ್ರದರ್ಶನಗಳು, ವೈಫಲ್ಯಗಳಿಂದ ಅವರು ಒಂದೇ ವರ್ಷದಲ್ಲಿ ಉಪನಾಯಕ ಪಟ್ಟ ಕಳೆದುಕೊಂಡರು. ಮತ್ತೊಂದು ಕಡೆ ಸ್ಟೀವ್ ವಾ ನಾಯಕರಾಗಿ ಅತ್ಯದ್ಭುತ ಪ್ರದರ್ಶನ ತೋರಿದ್ದರು. ಅವರ ನಾಯಕತ್ವದಲ್ಲೇ ಆಸೀಸ್ ಪೂರ್ಣ ಚೇತರಿಸಿಕೊಂಡು 1999ರ ಏಕದಿನ ವಿಶ್ವಕಪ್ ಅನ್ನು ಜಯಿಸಿತು. ಹಾಗೆಯೇ ಟೆಸ್ಟ್‌ನಲ್ಲಿ ಯಾರೂ ಸೋಲಿಸಲಾಗದ ತಂಡ ಎಂಬ ಗೌರವ ಗಳಿಸಿತ್ತು. ಈ ಸ್ಥಿತಿಯಲ್ಲಿ ವಾರ್ನ್ ಆ ಪಟ್ಟದಿಂದ ದೂರವೇ ಉಳಿಯಬೇಕಾಯಿತು. ಇನ್ನೊಂದು ವಿಷಯ: ಸ್ಟೀವ್-ವಾರ್ನ್ ಸಂಬಂಧ ಮೊದಲಿಂದಲೂ ಅಷ್ಟಕ್ಕಷ್ಟೇ! ಅದನ್ನು ವಾರ್ನ್ ನೇರವಾಗಿಯೇ ಹೇಳಿಕೊಂಡಿದ್ದರು.
ನಿರ್ಜೀವ ಚೆಂಡಿಗೆ ಜೀವ ತುಂಬುತ್ತಿದ್ದ ಮಾಂತ್ರಿಕ
ಸಾಮಾನ್ಯವಾಗಿ ಯಾರಾದರೂ ಮೃತಪಟ್ಟಾಗ ಅವರನ್ನು ಹೊಗಳುವ, ಕೆಲವೊಮ್ಮೆ ಇಲ್ಲದ್ದನ್ನೆಲ್ಲ ಸೃಷ್ಟಿ ಮಾಡಿಕೊಂಡು ಹೇಳುವ ಒಂದು ಮನೋಭಾವ ಇರುತ್ತದೆ. ಆದರೆ ವಾರ್ನ್ ವಿಚಾರದಲ್ಲಿ ಇವೆಲ್ಲ ಅಗತ್ಯವೇ ಇಲ್ಲ. ತಮ್ಮ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು. ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗರನ್ನು ಬೈದು 2 ಏಕದಿನ ಪಂದ್ಯಗಳನ್ನು ಕಳೆದುಕೊಂಡಿದ್ದರು. ಇಷ್ಟಾದರೂ ವಾರ್ನ್ ಬೌಲಿಂಗ್‌ನಲ್ಲಿ ಮಾಡಿದ ಸಾಧನೆಗಳನ್ನು ಬಣ್ಣಿಸಿ ಪೂರೈಸಲು ಸಾಧ್ಯವಿಲ್ಲ. ಅಂತಹ ಜಾದೂ ಇತ್ತು ಅವರ ಎಸೆತಗಳಲ್ಲಿ. ಒಂದು ನಿರ್ಜೀವ ಚೆಂಡಿಗೆ ಜೀವ ತುಂಬುವ ಮಾಂತ್ರಿಕ ಎಂದೇ ಅವರನ್ನು ಕರೆಯುತ್ತಿದ್ದರು! ಅವರು ಎಷ್ಟು ಪಂದ್ಯಗಳನ್ನಾಡಿದರು, ಎಷ್ಟು ವಿಕೆಟ್ ಕಿತ್ತರು ಎನ್ನುವ ವಿವರ ಎಲ್ಲಿ ಬೇಕಾದರೂ ಸಿಗುತ್ತದೆ. ಆದರೆ ಒಂದೊಂದು ಎಸೆತಗಳಲ್ಲೂ ಅವರು ತೋರುತ್ತಿದ್ದ ಕೈಚಳಕ ಮಾತ್ರ ಎಲ್ಲರಲ್ಲೂ ಕಾಣಲು ಅಸಾಧ್ಯ. ಮುಖ್ಯವಾಗಿ ಅವರು ಮಣಿಕಟ್ಟನ್ನು ಬಳಸಿ ಲೆಗ್‌ಸ್ಪಿನ್ ಮಾಡುತ್ತಿದ್ದರು. ಇದರಲ್ಲಿ ಗೂಗ್ಲಿ, ಫ್ಲಿಪ್ಪರ್, ಲೆಗ್‌ಬ್ರೇಕ್, ಸ್ಕಿಡ್ಡರ್ ಮಾತ್ರವಲ್ಲ ಒಬ್ಬ ಸ್ಪಿನ್ನರ್ ಆಗಿ ಕೆಲವೊಮ್ಮೆ ಬೌನ್ಸರ್ ಎಸೆಯುತ್ತಿದ್ದರು. ಹಾಗೆ ಎದೆಯೆತ್ತರಕ್ಕೆ ಚೆಂಡು ಎಗರಿಬಿಡುವಂತೆ ಮಾಡುತ್ತಿದ್ದರು. ಇವೆಲ್ಲದರ ಜೊತೆಗೆ ಝೂಟರ್ ಎಂಬ ಎಸೆತವೂ ಅವರ ಬತ್ತಳಿಕೆಯಲ್ಲಿತ್ತು! 1993ರಲ್ಲಿ ಅವರು ಎಸೆದ ಒಂದು ಎಸೆತ ಇಂಗ್ಲೆಂಡ್ ಬ್ಯಾಟಿಗ ಮೈಕ್ ಗ್ಯಾಟಿಂಗ್‌ರನ್ನು ಹೇಗೆ ವಂಚಿಸಿತು ಎಂದರೆ, ಈಗಲೂ ಅದನ್ನೊಂದು ವಿಸ್ಮಯ, ಶತಮಾನದ ಎಸೆತ ಎಂದೇ ವರ್ಣಿಸಲಾಗುತ್ತದೆ. ಬಲಗೈ ಬ್ಯಾಟಿಗ ಗ್ಯಾಟಿಂಗ್ ಕ್ರೀಸ್‌ನಲ್ಲಿದ್ದರು, ಚೆಂಡು ಲೆಗ್‌ಸ್ಟಂಪ್‌ನಿಂದ ಬಹಳ ಹೊರಕ್ಕೆ ಬಿತ್ತು. ಸರ್ರನೆ ತಿರುಗಿದ ಅದು ನೇರವಾಗಿ ವಿಕೆಟ್‌ಗೆ ಅಪ್ಪಳಿಸಿ, ಗ್ಯಾಟಿಂಗ್‌ರನ್ನು ಬೌಲ್ಡ್ ಮಾಡಿತು. ಇದರ ಮಹತ್ವ ಅರ್ಥವಾಗಬೇಕಾದರೆ ಒಮ್ಮೆ ಯೂಟ್ಯೂಬ್‌ನಲ್ಲಿ ಅದನ್ನು ವೀಕ್ಷಿಸಿ ನೋಡಬಹುದು.
1999 ಏಕದಿನ ವಿಶ್ವಕಪ್ ಸೆಮಿಫೈನಲ್, ಫೈನಲ್ ಪಂದ್ಯಗಳು ವಾರ್ನ್ರನ್ನು ಎಂದೆಂದಿಗೂ ಆಸೀಸಿಗರು ನೆನಪಿಟ್ಟುಕೊಳ್ಳಲು ಮುಖ್ಯ ಕಾರಣ. ಉಪಾಂತ್ಯದಲ್ಲಿ ಆಸೀಸ್, ದ.ಆಫ್ರಿಕಾವನ್ನು ಎದುರಿಸಿತು, ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಿತು. ಈ ಎರಡೂ ಪಂದ್ಯಗಳಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಕಿತ್ತ ವಾರ್ನ್, ಆಸ್ಟ್ರೇಲಿಯ ವಿಶ್ವಕಪ್ ಗೆಲ್ಲುವಂತೆ ಮಾಡಿದರು. ಅಲ್ಲಿ ವಾರ್ನ್ ನೆರವಿಲ್ಲದಿದ್ದರೆ ಸ್ಟೀವ್ ಆಸ್ಟ್ರೇಲಿಯ ಕಂಡ ಅತಿಶ್ರೇಷ್ಠ ನಾಯಕನಾಗುವುದು ಸಾಧ್ಯವೇ ಇರಲಿಲ್ಲ.
ಶೇನ್ ಗೆಳೆಯನಾಗಿದ್ದರೆ ಆಸ್ಸೀಗಳು ಕೆಣಕುತ್ತಿರಲಿಲ್ಲ!
ಕ್ರಿಕೆಟ್ ಜಗತ್ತಿನಲ್ಲಿ ಎದುರಾಳಿ ಆಟಗಾರರನ್ನು ಮಾತಿನಿಂದ, ನೋಟದಿಂದ ಕೆಣಕುವುದರಲ್ಲಿ ಆಸ್ಟ್ರೇಲಿಯನ್ನರು ಅಗ್ರಗಣ್ಯರು. ಶೇನ್ ವಾರ್ನ್ ಆಡುತ್ತಿದ್ದ ಕಾಲದಲ್ಲಂತೂ ಅದು ವಿಪರೀತವಾಗಿತ್ತು. ಆದರೂ ಅಲ್ಲೊಂದು ರಹಸ್ಯವಿತ್ತು. ಅದನ್ನು ಭಾರತೀಯ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ. ಒಂದು ವೇಳೆ ಎದುರಾಳಿ ತಂಡದ ಆಟಗಾರ ಶೇನ್ ವಾರ್ನ್ ಗೆ ಗೆಳೆಯನಾಗಿದ್ದರೆ, ಆಸೀಸಿಗರು ಕೆಣಕುತ್ತಿರಲಿಲ್ಲವಂತೆ! ಕುಂಬ್ಳೆಗೆ ವಾರ್ನ್ ಜೊತೆಗೆ ಗೆಳೆತನವಿತ್ತು. ಹಾಗಾಗಿ ಅವರು ಕ್ರೀಸ್‌ಗೆ ಇಳಿದಾಗ ಆಸೀಸಿಗರು ಕೆಣಕುತ್ತಿರಲಿಲ್ಲ. ಅದರಿಂದ ಕುಂಬ್ಳೆಗೆ ಆರಾಮಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿತ್ತಂತೆ!
ಕ್ರಿಕೆಟ್ ಜಗತ್ತಿನ ಮರಡೋನ
ಆಸೀಸ್ ಬೌಲರ್ ಶೇನ್ ವಾರ್ನ್ ರನ್ನು ಕ್ರಿಕೆಟ್ ಜಗತ್ತಿನ ಡಿಯೆಗೊ ಮರಡೋನ ಎಂದೂ ಕೆಲವರು ಕರೆಯುತ್ತಾರೆ. ಇಬ್ಬರ ಬದುಕಿನಲ್ಲೂ ಹಲವು ಸಾಮ್ಯಗಳಿವೆ. ಅರ್ಜೆಂಟೀನ ಫುಟ್‌ಬಾಲ್ ತಂಡದ ಮಾಜಿ ನಾಯಕ ಮರಡೋನ ಮೈದಾನದಲ್ಲಾಗಲೀ, ಅದರಾಚೆಯಾಗಲೀ ತಮ್ಮ ಅದ್ಭುತ ಪ್ರತಿಭೆಗೆ ಎಷ್ಟು ಹೆಸರುವಾಸಿಯೋ; ಅಶಿಸ್ತಿನಿಂದಲೂ ಅಷ್ಟೇ ಕುಖ್ಯಾತಿ ಹೊಂದಿದ್ದರು. ಮರಡೋನ ಮೇಲಂತೂ ಮೋಸದಾಟದ ಆರೋಪಗಳಿದ್ದವು. ಅದಕ್ಕಿಂತ ಹೆಚ್ಚಾಗಿ ಕುಡಿತ, ಉದ್ದೀಪನ ಸೇವನೆಗೆ ಕುಖ್ಯಾತರಾಗಿದ್ದರು. ಇದೇ ಕಾರಣಕ್ಕೆ ಅವರು 1991ರಿಂದ 94ರವರೆಗೆ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿಷೇಧಕ್ಕೊಳಗಾಗಿದ್ದರು! ಇಟಲಿಯಲ್ಲಿ ತೆರಿಗೆ ವಂಚಿಸಿದ್ದೂ ಸೇರಿ ಅವರ ಮೇಲಿನ ಆರೋಪಗಳು ಒಂದೆರಡಲ್ಲ, ಕಡೆಗೆ ತಮ್ಮ 60ನೇ ವರ್ಷದಲ್ಲಿ ಹೃದಯಸ್ತಂಭನದಿಂದ ನಿಧನ ಹೊಂದಿದರು. ಶೇನ್ ವಾರ್ನ್ 2003ರ ವಿಶ್ವಕಪ್‌ಗೆ ತೆರಳಿದ್ದವರು ಉದ್ದೀಪನ ಸೇವಿಸಿದ್ದಾರೆನ್ನುವುದು ಖಚಿತವಾಗಿದ್ದರಿಂದ ಕೂಟದಿಂದಲೇ ಹೊರಬಿದ್ದರು. ತಮ್ಮ ಪತ್ನಿ ಜೊತೆ ಏನೋ ಮುನಿಸಿನಿಂದ ವಿಚ್ಛೇದನ ಪಡೆದರು. ಅಂತಿಮವಾಗಿ ಹೃದಯಾಘಾತದಿಂದ ಮರಣವನ್ನಿಪ್ಪಿದರು.
ವಾರ್ನ್ ವರ್ಸಸ್ ಸಚಿನ್
ಶೇನ್ ವಾರ್ನ್ ಅವರ ಕ್ರಿಕೆಟ್ ಜೀವನವನ್ನು ನೆನಪಿಸಿಕೊಳ್ಳುವಾಗಲೆಲ್ಲ ವಿಶ್ವ ಕಂಡ ಸರ್ವಶ್ರೇಷ್ಠ ಬ್ಯಾಟಿಗ ಸಚಿನ್ ತೆಂಡುಲ್ಕರ್ ಹೆಸರು ನೆನಪಿಗೆ ಬಂದೇ ಬರುತ್ತದೆ. 1998ರಲ್ಲಿ ಆಸ್ಟ್ರೇಲಿಯ ಭಾರತ ಪ್ರವಾಸ ಮಾಡಿದ್ದಾಗ, ಅದನ್ನು ಸಚಿನ್ ವರ್ಸಸ್ ವಾರ್ನ್ ಹೋರಾಟ ಎಂದೇ ಬಣ್ಣಿಸಲಾಗಿತ್ತು. ಇಬ್ಬರೂ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ಭಾರತ ಸ್ಪಿನ್‌ಸ್ನೇಹಿ ಅಂಕಣಗಳಿಗೆ ಹೆಸರುವಾಸಿ, ವಾರ್ನ್ ಸ್ಪಿನ್ ಜಗತ್ತಿನ ಚಕ್ರವರ್ತಿ. ಅದನ್ನು ಎದುರಿಸುತ್ತಿರುವುದು ಸ್ವತಃ ಕ್ರಿಕೆಟ್ ಜಗತ್ತಿನ ಚಕ್ರವರ್ತಿ ಸಚಿನ್ ತೆಂಡುಲ್ಕರ್! ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ವಾರ್ನ್, ತೆಂಡುಲ್ಕರ್‌ರನ್ನು ಕೇವಲ 4 ರನ್‌ಗಳಿಗೆ ಔಟ್ ಮಾಡಿದರು. ಮುಂದಿನ ಇನಿಂಗ್ಸ್‌ನಲ್ಲಿ ತೆಂಡುಲ್ಕರ್ ಅಜೇಯ 155 ರನ್ ಬಾರಿಸಿ ಭಾರತ ಗೆಲ್ಲಲು ಕಾರಣವಾದರು. ಈ ಸರಣಿಯ ನಂತರ ವಾರ್ನ್, ನನಗೆ ಕನಸಿನಲ್ಲೂ ತೆಂಡುಲ್ಕರ್ ಕಾಡುತ್ತಾರೆ ಎಂದು ಹೇಳಿಕೊಂಡಿದ್ದರು. ಒಟ್ಟಾರೆ ಈ ಇಬ್ಬರೂ ನೇರಾನೇರವಾಗಿ ಮುಖಾಮುಖೀಯಾಗಿದ್ದು 29 ಬಾರಿ. ಅದರಲ್ಲಿ ಕೇವಲ 4 ಬಾರಿ ತೆಂಡುಲ್ಕರ್ ವಿರುದ್ಧ ವಾರ್ನ್ ಯಶಸ್ವಿಯಾಗಿದ್ದರು!
ಮಕ್ಕಳಿಗಾಗಿ ಶುರುವಾಗಿತ್ತು ಫೌಂಡೇಶನ್
ಶೇನ್ ವಾರ್ನ್ ಸಾಮಾಜಿಕ ಕೆಲಸಗಳಿಗಾಗಿಯೂ ಹೆಸರಾಗಿದ್ದರು. 2004ರಲ್ಲಿ ಶೇನ್ ವಾರ್ನ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದರು. 2017ರಲ್ಲಿ ಕೆಲವು ಸರ್ಕಾರಿ ತನಿಖೆಗಳ ಹಿನ್ನೆಲೆಯಲ್ಲಿ ಈ ಫೌಂಡೇಶನ್ ಮುಚ್ಚಿತು. ಆದರೂ ಇದರ ಮೂಲಕ ಅನಾರೋಗ್ಯಪೀಡಿತ, ಬಡ ಮಕ್ಕಳ ಚಿಕಿತ್ಸೆಗೆ ನೆರವಾಗಿದ್ದಾರೆ. ವಾರ್ನ್ರನ್ನು ಈ ಕೆಲಸದ ಮೂಲಕ ನೆನಪಿಟ್ಟುಕೊಳ್ಳಲಾಗುತ್ತದೆ.
ಮೊದಲ ಐಪಿಎಲ್ ಪ್ರಶಸ್ತಿ ಗೆದ್ದ ನಾಯಕ
2008ರಲ್ಲಿ ಐಪಿಎಲ್ ಶುರುವಾದಾಗ ಶೇನ್ ವಾರ್ನ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಆಗಿನ ಪರಿಸ್ಥಿತಿಯಲ್ಲಿ ರಾಜಸ್ಥಾನ್ ಪ್ರಶಸ್ತಿ ಗೆಲ್ಲುತ್ತದೆಯೆಂದು ಯಾರೂ ಊಹಿಸಿರಲಿಲ್ಲ. ತಂಡದ ಸಾಮರ್ಥ್ಯವೇ ಹಾಗಿತ್ತು. ಆದರೆ ವಾರ್ನ್ ಅಲ್ಲಿ ಜಾದೂ ಮಾಡಿ ತಂಡವನ್ನು ಗೆಲ್ಲಿಸಿಯೇ ಬಿಟ್ಟರು. ಈ ಕೂಟ ವಾರ್ನ್ ನಾಯಕತ್ವದ ಸಾಮರ್ಥ್ಯಕ್ಕೆ ಸ್ಪಷ್ಟ ಸಾಕ್ಷಿ. ಮುಂದೆ ದೀರ್ಘಕಾಲ ಅವರು ಐಪಿಎಲ್‌ನಲ್ಲಿ ವಿವಿಧ ಹುದ್ದೆ ನಿಭಾಯಿಸಿದ್ದರು.
-ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.