ಸದನವ ಕಾಡುವ ಗುಡುಗುವ ದನಿ…
Team Udayavani, Feb 25, 2023, 6:15 AM IST
“ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು’ ಎಂಬ ಸ್ಲೋಗನ್ ಕರ್ನಾಟಕ ರಾಜಕಾರಣದಲ್ಲಿ ಅಚ್ಚೊತ್ತಿರುವ ಘೋಷವಾಕ್ಯ. ವಿಧಾನಸೌಧದವರೆಗೆ ಹೋರಾಟದ ಮೂಲಕವೇ ಬಂದು ವಿಧಾನಸಭೆ ಪ್ರವೇಶಿಸಿದ ಯಡಿಯೂರಪ್ಪ ಅವರ ಬದುಕೇ ಹೋರಾಟ. ಹೋರಾಟದ ಮೂಲಕವೇ ಅಧಿಕಾರಕ್ಕೂ ಬಂದು, ಈಗ 40 ವರ್ಷಗಳ ಬಳಿಕ ಗೌರವದೊಂದಿಗೆ ಸದನದಿಂದ ನಿರ್ಗಮಿಸುತ್ತಿದ್ದಾರೆ. ಹಾಗೆಂದು ನಿವೃತ್ತಿಯತ್ತ ಅಲ್ಲ.. ಮತ್ತೆ ಅದೇ ಹೋರಾಟದ ಕಣಕ್ಕೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವೆ ಎಂದು ಗುಡುಗಿರುವ ಯಡಿಯೂರಪ್ಪ ಅವರ ಗುಡುಗು ವಿಧಾನಸಭೆಯಲ್ಲಿ ಇನ್ನು ಕೇಳಿಸಲಾರದು. ಆ ಕಂಠ ಇನ್ನು ರಾಜ್ಯದ ಚುನಾವಣ ಕಣದಲ್ಲಿ ಮೊಳಗಲಿದೆ. 80ರ ಹರೆಯದಲ್ಲಿರುವ ಯಡಿಯೂರಪ್ಪ ಅವರಿಗೆ ಉತ್ಸಾಹ ಇಳಿದಿಲ್ಲ; ಶಕ್ತಿ ಕುಂದಿಲ್ಲ. ಆಕ್ರೋಶ, ಆವೇಶ ಇನ್ನೂ ಪ್ರಬಲವಾಗಿದೆ.
ರಾಜ್ಯ ಬಿಜೆಪಿ ಭೀಷ್ಮ ಬಿ.ಎಸ್.ಯಡಿಯೂರಪ್ಪ ಅವರ ನಾಲ್ಕು ದಶಕದ ರಾಜಕೀಯ ಜೀವನ ಈಗ ಮತ್ತೊಂದು ಸ್ಥಿತ್ಯಂತರಕ್ಕೆ ತೆರೆದುಕೊಂಡಿದೆ. ಹೋರಾಟ ಹಾಗೂ ನಿರಂತರ ಶ್ರಮದ ಮೂಲಕ ರಾಜ್ಯ ರಾಜಕಾರಣದ ಮಾಸ್ ಲೀಡರ್ ಎಂದು ಕರೆಸಿ ಕೊಂಡಿದ್ದ “ರಾಜಾಹುಲಿ’ಯ ಗರ್ಜನೆ ಇನ್ನು ಮುಂದೆ ರಾಜ್ಯ ವಿಧಾನಸಭೆಯಲ್ಲಿ ಮೊಳಗುವುದಿಲ್ಲ.
ಹದಿನೈದನೇ ವಿಧಾನಸಭೆಯ ಕಲಾಪದ ಕೊನೆಯ ದಿನ ಯಡಿಯೂರಪ್ಪನವರು ಅಧಿಕೃತ ವಿದಾಯ ಭಾಷಣ ಮಾಡುವ ಮೂಲಕ ಚುನಾವಣ ರಾಜಕಾರಣ ಸಾಕಿನ್ನು ಎಂದು ಹೇಳಿದ್ದಾರೆ. ಹಾಗೆ ನೋಡಿದರೆ ಯಡಿ ಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿ ದಾಗಲೇ ಅವರ ರಾಜಕೀಯ ಭವಿಷ್ಯದ “ದಿಶೆ’ ಏನೆಂಬುದು ಬಹುತೇಕ ನಿರ್ಧಾರವಾಗಿಯೇ ಹೋಗಿತ್ತು. ಹೀಗಾಗಿ ಈ ವಿದಾಯ ಭಾಷಣ ಸುದೀರ್ಘ ಕಾಲ ಯುದ್ಧಭೂಮಿಯಲ್ಲಿ ಮೈ ಚಳಿ ಬಿಟ್ಟು ಕಾದಿದ ಸೇನಾನಿಯೊಬ್ಬ ಶಸ್ತ್ರ ಬದಿಗಿಟ್ಟಾಗ ಕಾಡುವ ನೀರವತೆಯ ರೀತಿ ಕೇಸರಿ ಪಾಳಯವನ್ನು ಕಾಡದೇ ಇದ್ದರೂ ವರ್ಚಸ್ವಿ ನಾಯಕತ್ವದ ನಿರ್ವಾತವೊಂದು ಬಿಜೆಪಿಯನ್ನು ಬಹುಕಾಲ ಕಾಡಲಿದೆ.
ವಿಧಾನಸಭೆಯಲ್ಲಿ ಯಡಿಯೂರಪ್ಪ ಖುದ್ದು ಈ ಘೋಷಣೆ ಮಾಡುವುದರೊಂದಿಗೆ ಅವರ ನಾಲ್ಕು ದಶಕಕ್ಕೂ ಮಿಗಿಲಾದ ಸಕ್ರಿಯ ರಾಜ ಕಾರಣದ ಪುಟ ಇನ್ನೊಂದು ಮಗ್ಗುಲಿಗೆ ಹೊರಳಿ ಕೊಂಡಂತಾಗಿದೆ. ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಜೋಡಿಯ ಸಾರಥ್ಯವಿಲ್ಲದೇ ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಘಟಕ ವಿಧಾನಸಭಾ ಚುನಾವಣೆಯನ್ನು ಎದುರಿಸುವ “ಪರ್ವಕಾಲ’ಕ್ಕೆ ಬಂದು ನಿಂತಿದೆ. ಹೊಸ ನೀರು ಬಂದಾಗ ಹಳೆ ನೀರು ಸರಿದು ಹೋಗುತ್ತದೆ ಎಂಬುದು ಲೋಕಾರೂಢಿ. ಆದರೆ ತಾವೇ ಖುದ್ದಾಗಿ ಸರಿದು ನಿಲ್ಲುವ ಮೂಲಕ ಹೊಸ ಪ್ರಯೋಗ, ಹೊಸ ಮುಖಕ್ಕೆ ಅವಕಾಶ ಕಲ್ಪಿಸುವ ಮಾರ್ಗ ತೆರೆದಿಟ್ಟಿದ್ದಾರೆ.
ಹೋರಾಟ ಹಾಗೂ ನಿರಂತರ ಶ್ರಮದಿಂದ ಯಾರಾದರೂ ಇಟ್ಟ ಗುರಿ ಮುಟ್ಟಬಹುದೆಂಬುದಕ್ಕೆ ಯಡಿಯೂ ರಪ್ಪ ಒಂದು ಯಶಸ್ವಿ ಉದಾಹರಣೆ. ಈ ವಿಚಾರದಲ್ಲಿ ಅವರು ರಾಜಕಾರಣಿಗೆ ಮಾತ್ರವಲ್ಲ, ಪ್ರತಿಯೊಬ್ಬ ಸಾಧಕನಿಗೂ ಒಂದು ರೋಲ್ ಮಾಡೆಲ್. ಗುರಿಯೆಡೆಗಿನ ಅವರ ಈ ನಿಖರ ಚಲನೆ ಹಾಗೂ ಪ್ರಯತ್ನದಿಂದಾಗಿಯೇ ನಾಲ್ಕು ಬಾರಿ ಮುಖ್ಯಮಂತ್ರಿ ಗಾದಿಯತ್ತ ಸಾಗುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮಾತ್ರವಲ್ಲ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರದ ಹೆಬ್ಟಾಗಿಲು ತೆರೆಯುವುದಕ್ಕೂ ಅವರು ಕಾರಣರಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಸಾಮಾನ್ಯ ಉದ್ಯೋಗಿಯಾಗಿ ವೃತ್ತಿ ಆರಂಭಿಸಿ ಈಗ ಬಿಜೆಪಿ ಸಂಸದೀಯ ಮಂಡ ಳಿಯ ಸದಸ್ಯನಾಗಿ ನೇಮಕಗೊಳ್ಳುವವರೆಗಿನ ಅವರ ಬದುಕಿನ ಪ್ರಯಾಣ ಅಚ್ಚರಿ.
ಜೆಡಿಎಸ್ ಜತೆಗೆ ಮೈತ್ರಿ ಸರ್ಕಾರ ರಚಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ರುಚಿ ತೋರಿಸಿದ ಯಡಿಯೂ ರಪ್ಪಗೆ ಮುಖ್ಯಮಂತ್ರಿ ಸ್ಥಾನವನ್ನು ಎಚ್. ಡಿ.ಕುಮಾರಸ್ವಾಮಿ ಹಸ್ತಾಂತರಿಸದ ಕಾರಣಕ್ಕೆ ನಡೆದ ರಾಜಕೀಯ ಧ್ರುವೀಕರಣ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಕಾರಣವಾಯಿತು. ಆ ಬಳಿಕ ನಡೆದ ಪಕ್ಷತ್ಯಾಗ, ಕೆಜೆಪಿ ಸ್ಥಾಪನೆ, ಮರಳಿ ಬಿಜೆಪಿ ಸೇರ್ಪಡೆ, ಮತ್ತೆ ಮುಖ್ಯಮಂತ್ರಿ ಸ್ಥಾನ, ಮತ್ತೆ ಅಧಿಕಾರ ತ್ಯಾಗ ಸಹಿತ ಯಡಿಯೂರಪ್ಪ ರಾಜಕೀಯ ಜೀವನದಲ್ಲಿ ಹೋರಾಟವನ್ನು ಹೊರತುಪಡಿಸಿ ಎಲ್ಲವೂ ತುರ್ತಾಗಿಯೇ ಮುಗಿದಿದೆ ಎಂಬುದು ಅವರ ಸುದೀರ್ಘ ಅನುಭವದಷ್ಟೇ ಸತ್ಯ!
ಟಿಪ್ಪಣಿ: ಶ್ವೇತ ಸಫಾರಿಯ ಎರಡೂ ಕಿಸೆಯಲ್ಲಿ ಒಂದಿಷ್ಟು ಚೀಟಿ. ಟೇಬಲ್ ಮೇಲೆ ಒಂದಿಷ್ಟು ಕಡತ. ಆಡಳಿತ ಪಕ್ಷವಾಗಿರಲಿ, ವಿಪಕ್ಷವಾಗಿರಲಿ ಸದನದಲ್ಲಿ ಕುಳಿತಿರುವಷ್ಟೂ ಹೊತ್ತು ಮೈಕ್ ಕಿವಿಗೆ ಸಿಕ್ಕಿಸಿಕೊಂಡು ಟಿಪ್ಪಣಿ ಮಾಡಿಕೊಳ್ಳುತ್ತಲೇ ಕುಳಿತು ಕೊಳ್ಳುತ್ತಿದ್ದ ರಾಜ್ಯದ ಏಕೈಕ ರಾಜಕಾರಣಿಯೆಂದರೆ ಅದು ಬಿ.ಎಸ್.ಯಡಿಯೂರಪ್ಪ.
ರಾಜ್ಯ ವಿಧಾನಸಭೆಯಲ್ಲಿ ಬಹುತೇಕ ನಾಯ ಕರು ಕಲಾಪಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಟಿಪ್ಪಣಿ ಮಾಡಿಕೊಳ್ಳುವುದೇ ಇಲ್ಲ. ಆದರೆ ಯಡಿಯೂರಪ್ಪ ಮಾತ್ರ ಇದಕ್ಕೆ ಅಪವಾದ. ಅವರು ಸದನದಲ್ಲಿ ಎದ್ದು ನಿಂತು ಗುಡುಗಿದಷ್ಟೇ ಶಿಸ್ತುಬದ್ಧವಾಗಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಯಡಿ ಯೂರಪ್ಪನವರ ವೀರಾವೇಶದ ಭಾಷಣಗಳಿಗೆ ಈ ಪುಟ್ಟ ಪುಟ್ಟ ಬರಹ ಹಾಗೂ ಸದನದಲ್ಲಿ ಪಟ್ಟಾಗಿ ಕುಳಿತುಕೊಳ್ಳುವ ಶ್ರದ್ಧೆಯೇ ಕಾರಣ ಎಂದರೂ ತಪ್ಪಾಗಲಾರದು.
ಮಾತಿನ ಮೊನೆಯಲ್ಲಿ ತಿವಿಯುವ ಅಥವಾ ಅಪಾರ ವಾಕ್ಚಾತುರ್ಯವನ್ನು ಹೊಂದಿದ ಸಂಸದೀಯ ಪಟು ಯಡಿ ಯೂರಪ್ಪನವರಲ್ಲ. ಆದರೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸದನವನ್ನು ಅವರಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡವರು ಮತ್ತೂಬ್ಬರಿಲ್ಲ. ಈ ಕಾರಣ ಕ್ಕಾಗಿಯೇ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಜನಜನಿತವಾಯಿತು. ಇನ್ನು ಮುಂದೆ ನಾನು ಶಾಸಕನಾಗಿ ಈ ಸದನ ಪ್ರವೇಶಿಸುವುದಿಲ್ಲ. ಇದೇ ನನ್ನ ಕೊನೆಯ ಕಲಾಪ ಎಂದು ಘೋಷಿಸಿದ ಮೇಲೂ ರಾಷ್ಟ್ರಗೀತೆ ಮೊಳಗುವವರೆಗೂ ಯಡಿಯೂರಪ್ಪ ಸದನದಲ್ಲೇ ಇದ್ದರು. ಅಷ್ಟರಮಟ್ಟಿಗೆ ಅವರು ಕೊನೆಯ ಕ್ಷಣದವರೆಗೂ ಜನಪ್ರತಿನಿಧಿ ಎಂಬ ಶಬ್ದಕ್ಕೆ ಬದ್ಧವಾಗಿ ನಡೆದುಕೊಂಡರು.
ಸದನದ ಕ್ಷಣಗಳು…
ಹೋರಾಟದ ಝಲಕ್
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಶಾದಿಭಾಗ್ಯ ಯೋಜನೆ ವಿರುದ್ಧ ಮೊದಲು ಧ್ವನಿ ಎತ್ತಿದವರು ಯಡಿಯೂರಪ್ಪ. ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ನಡೆಸುತ್ತಿದ್ದ ಪ್ರತಿಭಟನೆಯನ್ನು ಬೆಳಗಾವಿ ಸುವರ್ಣ ವಿಧಾನಸೌಧದವರೆಗೂ ತಂದು ಸದನದಲ್ಲೇ ಅಹೋರಾತ್ರಿ ಧರಣಿಯನ್ನು ಏಕಾಂಗಿಯಾಗಿ ನಡೆಸಿದರು. ಸಿದ್ದರಾಮಯ್ಯ, ಅಂಬರೀಶ್, ಸ್ಪೀಕರ್ ಕಾಗೋಡು ತಿಮ್ಮಪ್ಪ ಎಷ್ಟು ಮನವಿ ಮಾಡಿದರೂ ಬಗ್ಗದ ಅವರು ಸದನದ ಬಾವಿಯಲ್ಲೇ ಕುಳಿತಿದ್ದರು. ಯಡಿಯೂರಪ್ಪನವರ ಈ ಪ್ರತಿಭಟನೆ ಕೊನೆಗೊಂಡಿದ್ದು, ಕಬ್ಬು ಬೆಳೆಗಾರ ವಿಠಲ ಅರಬಾವಿ ಆತ್ಮಹತ್ಯೆ ಬಳಿಕ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಕುಳಿತ ಸ್ಥಳದಿಂದ ಸ್ಪೀಕರ್ ಎದುರು ಹೂಂಕರಿಸುತ್ತಾ ನಡೆದ ಯಡಿಯೂರಪ್ಪ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟುಹಿಡಿದರು. ರೈತರ ವಿಚಾರ ಬಂದಾಗ ಯಡಿಯೂರಪ್ಪನವರಿಗೆ ಉಳಿದಿದ್ದೆಲ್ಲ ಗೌಣ ಎಂಬುದಕ್ಕೆ ಇದೊಂದು ನಿದರ್ಶನ.
ಸದನದಲ್ಲಿ ಮಾತಿಗಿಳಿದರೆ ಆಡಳಿತ ಪಕ್ಷದವರಿರಲಿ, ಸ್ವಪಕ್ಷೀಯರಿರಲಿ ಎಲ್ಲರೂ ಗಂಭೀರವಾಗಿ ಕೇಳುವಂತೆ ಭಾಷಣ ಮಾಡುತ್ತಿದ್ದರು, ಯಾರೇ ಭಾಷಣಕ್ಕೆ ಅಡ್ಡಿ ಬಂದರೆ ಒಮ್ಮೆ ಗರಂ ಆಗಿ ತಿರುಗಿ ನೋಡಿದರೆ ಅವರು ಮೌನವಾಗಿ ಕುಳಿತುಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಎಷ್ಟೇ ಅಡಚಣೆಗಳಾದರೂ ಭಾಷಣ ಮುಗಿಸದೆ ಬಿಡುತ್ತಿಲಿಲ್ಲ. ಅಷ್ಟರ ಮಟ್ಟಿಗೆ ಅವರು ಸದನದಲ್ಲಿ ತಮ್ಮ ಹಿಡಿತ ಹೊಂದಿದ್ದರು. ಹಿರಿಯರಿಂದ ಸಲಹೆ, ಕಿರಿಯರಿಗೆ ಮಾರ್ಗದರ್ಶನ ಅವರ ಸದನದ ಯಶಸ್ವಿನ ಗುಟ್ಟು.
ಎಚ್‌ಡಿಕೆಗೆ ಉರಗ ಪತಾಕ ಬಿರುದು
ವಿಶ್ವಾಸಮತ ಸಾಬೀತುಪಡಿಸಲು ಸಾಧ್ಯವಾಗದೇ ವಿಪಕ್ಷ ನಾಯಕನ ಸ್ಥಾನ ಅಲಂಕರಿಸಿದ ಯಡಿಯೂರಪ್ಪ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸದನದಲ್ಲಿ ಮಾಡಿದ ಭಾಷಣ ಅವರ ಸಂಸದೀಯ ಕಾರ್ಯವೈಖರಿಯಲ್ಲೇ ಅನನ್ಯವಾದದ್ದು. ಕುಮಾರಸ್ವಾಮಿಯನ್ನು “ಉರಗ ಪತಾಕ’ ಅಂದರೆ ದುರ್ಯೋಧನ ಎಂದು ಕುಟುಕಿದ ಯಡಿಯೂರಪ್ಪ ಅಪ್ಪ-ಮಕ್ಕಳ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸುತ್ತೇನೆ ಎಂದು ಅಬ್ಬರಿಸಿದ್ದರು. ಇದಾದ ಕೆಲವೇ ದಿನದಲ್ಲಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ “ಹಾಸನ-ರಾಮನಗರಕ್ಕೆ ಸೀಮಿತವಾದ ಅಣ್ಣ-ತಮ್ಮ ಬಜೆಟ್ ‘ ಎಂದು ಟೀಕಿಸಿದ್ದರು.
ಸಾಲಮನ್ನಾದ ಎರಡು ಭಾಷಣ
ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಮಾಡಿದ 2 ಭಾಷಣಗಳು ಚಾರಿತ್ರಿಕವಾದದ್ದು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಕೊನೆಯ ಅಧಿವೇಶನ ಸಂದರ್ಭದಲ್ಲಿ ರೈತರ ಸಾಲ ಮನ್ನಾ ವಿಚಾರವನ್ನು ಪ್ರಸ್ತಾವಿಸಿದ್ದ ಯಡಿಯೂರಪ್ಪ, ತಮ್ಮದೇ ಸರಕಾರದ ವಿರುದ್ಧ ಗುಡುಗಿದ್ದರು. 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ವಿರುದ್ಧ ರೈತರ ಸಾಲ ಮನ್ನಾ ವಿಚಾರಕ್ಕಾಗಿ ಅವರು ಮಾಡಿದ್ದ ಭಾಷಣ ಮಹತ್ವದ್ದಾಗಿತ್ತು.
ಏಕವ್ಯಕ್ತಿ ನಿರ್ಧಾರ
2018ರಲ್ಲಿ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಏಕವ್ಯಕ್ತಿ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಇದೆಲ್ಲವೂ ರೈತ ಪರವಾಗಿದ್ದವು. ಆದರೆ ವಿಶ್ವಾಸಮತ ಸಾಬೀತಾಗುವವರೆಗೆ ಈ ಘೋಷಣೆಗಳನ್ನು ಮಾಡುವಂತಿಲ್ಲ ಎಂದು ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದರು. ಮೈತ್ರಿ ಸರಕಾರ ಪತನದ ಬಳಿಕ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದ ಯಡಿಯೂರಪ್ಪ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ ಪಾಲು ಸೇರಿದಂತೆ ಏಕವ್ಯಕ್ತಿ ಸಂಪುಟದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಮತ್ತೆ ಜಾರಿಗೆ ತಂದರು.
-ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
A.B.Vajpayee Birth Century: ಭವಿಷ್ಯದ ಭಾರತಕ್ಕೆ ಅಟಲ್ ಬಿಹಾರಿ ವಾಜಪೇಯಿ ಭದ್ರ ಬುನಾದಿ
YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.