Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ
Team Udayavani, Jun 17, 2024, 6:23 AM IST
![MASIDI](https://www.udayavani.com/wp-content/uploads/2024/06/MASIDI-620x413.jpg)
![MASIDI](https://www.udayavani.com/wp-content/uploads/2024/06/MASIDI-620x413.jpg)
ಜೀವನದಲ್ಲಿ ಮರೆಯಾಗುತ್ತಿರುವ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸಿ, ಬದುಕಿಗೆ ಸ್ಫೂರ್ತಿ ಮತ್ತು ನವ ಚೈತನ್ಯವನ್ನು ತುಂಬುವುದೇ ಹಬ್ಬಗಳ ಗುರಿ. ಹಬ್ಬಗಳು ಬರೇ ತಿಂದುಂಡು ತೇಗುವ ಕ್ಷಣಗಳಾಗಿರದೆ, ಅವುಗಳ ಹಿನ್ನೆಲೆಯಲ್ಲಿ ಅಡಕವಾಗಿರುವ ಧಾರ್ಮಿಕ ವೈಚಾರಿಕತೆಯತ್ತ ನಮ್ಮನ್ನು ಆಹ್ವಾನಿಸುವ ಮಾಧ್ಯಮಗಳಾಗಿವೆ. ಪ್ರವಾದಿ ಇಬ್ರಾಹಿಮರು ದೈವಾಜ್ಞೆಯಂತೆ ನಿರ್ವಹಿಸಿದ ಅಪೂರ್ವ ತ್ಯಾಗದ ಸ್ಮರಣಾರ್ಥ ಆಚರಿಸಲ್ಪಡುವ ಹಬ್ಬವೇ ಬಕ್ರೀದ್. ತ್ಯಾಗ, ತನ್ನ ಸುಂದರ ಅರ್ಥವ್ಯಾಪ್ತಿಯೊಂದಿಗೆ ಬದುಕನ್ನು ತುಂಬಿದಾಗಲೇ ಜೀವನದಲ್ಲಿ ಸುಭಿಕ್ಷೆಯೂ ನೆಮ್ಮದಿಯೂ ಸಾಧ್ಯವಾಗುತ್ತದೆ.
ಪ್ರವಾದಿ ಇಬ್ರಾಹಿಮರಿಗೆ ಬೀವಿ ಹಾಜಿರಾ ಮತ್ತು ಬೀವಿ ಸಾರಾ ಎಂಬೀರ್ವರು ಪತ್ನಿಯಂದಿರು. ಬದುಕಿನ ಬಹುಕಾಲ ಸಂದುಹೋಗಿ, ಇಳಿವಯಸ್ಸಾದರೂ ಅವರಿಗೆ ಮಕ್ಕಳಾಗಲಿಲ್ಲ. ಮಕ್ಕಳ ಹಂಬಲ ಅವರನ್ನು ಎಷ್ಟು ಕಾಡುತ್ತಿತ್ತೆಂದರೆ, ತನಗೆ ಸಂತಾನ ಪ್ರಾಪ್ತಿಯಾದರೆ, ಆ ಮಗುವನ್ನು ದೇವನೇ ಸ್ವತಃ ಕೇಳಿದರೂ ತಾನು ಕೊಡಲು ಸದಾ ಸಿದ್ಧ ಎಂದು ಪ್ರವಾದಿ ಇಬ್ರಾಹಿಮರು ಭಾವೋದ್ವೇಗದಿಂದ ನುಡಿದದ್ದುಂಟು. ಕೊನೆಗೂ ದೈವಾನುಗ್ರಹದಿಂದ, ಬೀವಿ ಹಾಜಿರಾ ಇಸ್ಮಾಯಿಲ್ ಎಂಬ ಮಗುವನ್ನೂ ಬೀವಿ ಸಾರಾ ಇಸ್‌ಹಾಕ್ ಎಂಬ ಕಂದನನ್ನೂ ಹಡೆದರು. ಮಗು ಇಸ್ಮಾಯಿಲ್ ಮಾತಾಪಿತರ ಪ್ರೀತಿಯ ಕಣ್ಮಣಿಯಾಗಿ ಬೆಳೆಯತೊಡಗಿದರು.
ಒಮ್ಮೆ ಪ್ರವಾದಿ ಇಬ್ರಾಹಿಮರ ಈರ್ವರು ಪತ್ನಿಯಂದಿರಲ್ಲಿ ವಿರಸ ತಲೆದೋರಲು ದೈವಾಜ್ಞೆಯಂತೆ ಎಳೆ ಹಸುಳೆ ಇಸ್ಮಾಯಿಲರನ್ನೂ, ಪತ್ನಿ ಬೀವಿ ಹಾಜಿರಾರನ್ನೂ ದೂರದ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಬಂದು, ದೈವಾಜ್ಞೆಯನ್ನು ನೆರವೇರಿಸಿದರು.
ಇತ್ತ ನಿರ್ಜನ ಪ್ರದೇಶದ ಮರುಭೂಮಿಯ ಕೆಂಡದಂತಹ ಉರಿ ಬಿಸಿಲ ಬೇಗೆಗೆ, ಕಂದ ಇಸ್ಮಾಯಿಲ್ ಬಾಯಾರಿಕೆಯಿಂದ ಚಡಪಡಿಸುತ್ತಿರಲು ಬೀವಿ ಹಾಜಿರಾ ಮಗು ಇಸ್ಮಾಯಿಲರನ್ನು ನೆಲದಲ್ಲಿ ಮಲಗಿಸಿ, ನೀರಿಗಾಗಿ ಹುಡುಕುತ್ತಾ ಇಬ್ಬದಿಗಳಲ್ಲಿರುವ ಸಫಾ ಮತ್ತು ಮರ್ವಾ ಬೆಟ್ಟಗಳನ್ನು ಏಳೇಳು ಬಾರಿ ಹತ್ತಿ ಇಳಿದರು. ಬೀವಿ ಹಾಜಿರಾ ನೀರಿಗಾಗಿ ತಡಕಾಡಿ, ಇಸ್ಮಾಯಿಲರ ಬಳಿ ಹಿಂದಿರುಗಿದಾಗ, ಆ ಮಗುವಿನ ಕಾಲ ಬುಡದಲ್ಲಿ ಬುಗ್ಗೆಯ ನೀರು ಒಂದೇ ಸವನೆ ಚಿಮ್ಮುತ್ತಿತ್ತು. ಬೀವಿ ಹಾಜಿರಾ ಆನಂದದಿಂದ ಉನ್ಮತ್ತರಾಗಿ, ಚಿಮ್ಮುವ ನೀರನ್ನು ಕಂಡು, “ಝಂ ಝಂ’ ಎನ್ನಲು, ಚಿಮ್ಮುವ ನೀರು ತತ್‌ಕ್ಷಣ ನಿಂತಿತು. ಬೀವಿ ಹಾಜಿರಾ, ಆ ಪುಣೊÂàದಕವನ್ನು ಮಗು ಇಸ್ಮಾಯಿಲರಿಗೆ ಬಾಯಾರಿಕೆ ನೀಗುವಷ್ಟರ ತನಕ ಕುಡಿಸಿ ಸಂತೃಪ್ತರಾಗುತ್ತಾರೆ.
ಒಂದು ರಾತ್ರಿ ಪ್ರವಾದಿ ಇಬ್ರಾಹಿಮರಿಗೆ ಕನಸಿನಲ್ಲಿ ದೇವದೂತ ಜಬ್ರಿàಲರು ಹಾಜರಾಗಿ, “ಇಬ್ರಾಹಿಮರೇ, ನಿಮ್ಮ ಮುದ್ದು ಕಂದ ಇಸ್ಮಾಯಿಲರನ್ನು ಅಲ್ಲಾಹನ ಹೆಸರಿನಲ್ಲಿ ಬಲಿ ನೀಡುವಂತೆ ದೈವಾಜ್ಞೆಯಾಗಿದೆ’ ಎಂದರು. ಪ್ರವಾದಿ ಇಬ್ರಾಹಿಮರು, ಧೀರ ಬಾಲಕ ಇಸ್ಮಾಯಿಲರಿಗೆ ದೈವಾಜ್ಞೆಯನ್ನು ಅರುಹಿದಾಗ, ಇಸ್ಮಾಯಿಲರು ಎಳ್ಳಷ್ಟೂ ಅಳುಕದೆ, “ಮಿನಾ’ ಪ್ರದೇಶಕ್ಕೆ ತಲುಪಿ, ಶಿಲೆಯೊಂದರ ಮೇಲೆ ನಿರ್ವಿಕಾರ ಚಿತ್ತದಿಂದ ಮಲಗಲು, ಪ್ರವಾದಿ ಇಬ್ರಾಹಿಮರು ತನ್ನ ಕಣ್ಣಿಗೆ ವಸ್ತ್ರ ಕಟ್ಟಿ, ಪರಮಾತ್ಮನ ನಾಮದೊಂದಿಗೆ, ಹರಿತವಾದ ಕತ್ತಿಯನ್ನು ತನ್ನ ಪ್ರೀತಿಯ ಕಂದನ ಕತ್ತಿನಲ್ಲಿ ಹಾಯಿಸಿದರು.
ದೈವಾಜ್ಞೆಯನ್ನು ನಿರ್ವಹಿಸಿದ ಆತ್ಮಸಂತೃಪ್ತಿಯಿಂದ ಪ್ರವಾದಿ ಇಬ್ರಾಹಿಮರು ತನ್ನ ಕಣ್ಣಿಗೆ ಕಟ್ಟಿದ ವಸ್ತ್ರವನ್ನು ಬಿಚ್ಚಿ ನೋಡಲು, ಅದೇನು ಅದ್ಭುತವೋ ಎಂಬಂತೆ ಬಲಿದಾನದ ಸ್ಥಳದಲ್ಲಿ ಟಗರೊಂದು ರುಂಡಮುಂಡ ಬೇರೆ ಬೇರೆಯಾಗಿ ಬಿದ್ದಿತ್ತು. ಪಕ್ಕದಲ್ಲಿಯೇ ಇಸ್ಮಾಯಿಲರು ನಿರ್ವಿಕಾರ ಚಿತ್ತದಿಂದ ನಿಂತಿದ್ದರು. ಅಲ್ಲಾಹನಿಗೆ ಬೇಕಾದುದು ಪ್ರವಾದಿ ಇಬ್ರಾಹಿಮರ ಸತ್ವಪರೀಕ್ಷೆಯೇ ಹೊರತು ಬಾಲಕ ಇಸ್ಮಾಯಿಲರ ಪ್ರಾಣವಲ್ಲ.
ಪ್ರವಾದಿ ಇಬ್ರಾಹಿಮರ ಪುತ್ರ ಬಲಿದಾನದ ನೆನಪನ್ನು ಶಾಶ್ವತವಾಗಿರಿಸಲು ಬಕ್ರೀದ್‌ನಂದು ಪ್ರಾಣಿ ಬಲಿ ನೀಡುವ ಪದ್ಧತಿ ಇಸ್ಲಾಮಿನಲ್ಲಿದೆ. ಇಂದು ಪ್ರಾಣಿ ಬಲಿ ನೀಡಲು ಸಿದ್ಧರಾದವರು, ಮುಂದೆ ತಮ್ಮ ಜೀವನದಲ್ಲಿ ಯಾವ ತ್ಯಾಗಕ್ಕೂ ಸಿದ್ಧರಿರಬೇಕೆಂಬುದು ಈ ಬಲಿದಾನದ ಸಂದೇಶ. ಪ್ರವಾದಿ ಇಬ್ರಾಹಿಮರು ಪರಮಾತ್ಮನ ಈ ಸತ್ವ ಪರೀಕ್ಷೆಯಲ್ಲಿ ಅಭೂತ ಪೂರ್ವ ವಿಜಯ ಸಾಧಿಸಿ, ಅಲ್ಲಾಹನಿಂದ “ಖಲೀಲುಲ್ಲಾ'(ಅಲ್ಲಾಹನ ಆಪ್ತ) ಎಂದು ಸಂಬೋಧಿಸಲ್ಪಟ್ಟರು.
ಪ್ರವಾದಿ ಇಬ್ರಾಹಿಮ್ ಹಾಗೂ ಇಸ್ಮಾಯಿಲರು ಮಕ್ಕಾದಲ್ಲಿ ಪುನರ್ ನಿರ್ಮಿಸಿರುವ ಭವ್ಯ ಕಾಬಾ ಮಂದಿರ, ಪ್ರತೀ ವರ್ಷವೂ ವಿಶ್ವದೆಲ್ಲೆಡೆಗಳಿಂದ ಅಸಂಖ್ಯಾತ ಮುಸ್ಲಿಮರನ್ನು ಹಜ್ ಮತ್ತು ಉಮ್ರಾ ನಿರ್ವಹಣೆಗಾಗಿ, ತನ್ನೆಡೆಗೆ ಆಕರ್ಷಿಸುತ್ತದೆ. ಇದು ಏಕತೆ, ಸಮಾನತೆ, ಸೌಹಾರ್ದತೆ ಮತ್ತು ವಿಶ್ವ ಬಾಂಧವ್ಯದ ಪ್ರತೀಕ. ಹಜ್ ಯಾತ್ರೆಯ ಸಂದರ್ಭದಲ್ಲಿ ವಿವಿಧ ರಾಷ್ಟ್ರಗಳ, ವಿವಿಧ ಭಾಷೆಗಳನ್ನಾಡುವ, ಲಕ್ಷೋಪಲಕ್ಷ ಮುಸ್ಲಿಮರೆಲ್ಲರೂ ಮಕ್ಕಾದಲ್ಲಿ ಒಂದಾಗುತ್ತಾರೆ. ಹಜ್ ನಿರ್ವಹಣೆಯ ಈ ಹೃದಯಸ್ಪರ್ಶಿ ವಾತಾವರಣವು ಸಮಾನತೆ, ಏಕತೆ, ಸೌಹಾರ್ದತೆ ಮತ್ತು ವಿಶ್ವ ಬಾಂಧವ್ಯವನ್ನು ಸೂಚಿಸುತ್ತದೆ.
ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ತಾÌದರ್ಶಗಳನ್ನು ಬಕ್ರೀದಿನ ಇತಿಹಾಸ, ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಇಂದು ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ.
ಕೆ.ಪಿ. ಅಬ್ದುಲ್‌ಖಾದರ್, ಕುತ್ತೆತ್ತೂರು