Bangladesh;ಅಪಾಯದಲ್ಲಿ ಹಿಂದೂಗಳು!:ಸಂಖ್ಯೆ ಕುಸಿತ ಸೇರಿದಂತೆ ಇತ್ಯಾದಿ ಮಾಹಿತಿ ಇಲ್ಲಿದೆ…
ಹಿಂದೂಗಳ ಸಂಖ್ಯೆ ಈಗ ಶೇ.8ಕ್ಕೆ ಕುಸಿತ!, ದಾಳಿಕೋರರಿಗೆ ಶಿಕ್ಷೆಯೇ ಆಗುವುದಿಲ್ಲ!, 25 ವರ್ಷದಲ್ಲಿ ಒಬ್ಬನೇ ಒಬ್ಬ ಹಿಂದೂ ಇರಲ್ಲ !!!
Team Udayavani, Aug 13, 2024, 6:55 AM IST
ಬಾಂಗ್ಲಾದೇಶದಲ್ಲಿ ರಾಜಕೀಯ ಹೋರಾಟವು ಈಗ ಕೋಮು ಹಿಂಸಾಚಾರಕ್ಕೆ ತಿರುಗಿದ್ದು, ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರ ಬಳಿಕ ಗರಿಷ್ಠ ಪ್ರಮಾಣದಲ್ಲಿದ್ದ ಹಿಂದೂಗಳ ಸಂಖ್ಯೆ ನಿರಂತರವಾಗಿ ಕುಸಿಯುತ್ತಿದೆ.ಈ ಹಿನ್ನೆಲೆಯಲ್ಲಿ ಬಾಂಗ್ಲಾ ಹಿಂದೂಗಳ ಮೇಲಿನ ದಾಳಿ, ಹಿಂದೂಗಳ ಸಂಖ್ಯೆ ಕುಸಿತ ಸೇರಿದಂತೆ ಇತ್ಯಾದಿ ಮಾಹಿತಿ ಇಲ್ಲಿದೆ.
ಬಾಂಗ್ಲಾದೇಶದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯು ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯಶಸ್ವಿಯಾಗಿದೆ. ಆದರೆ ಆ ರಾಜಕೀಯ ಪ್ರತಿಭಟನೆಯು ಈಗ ಕೋಮು ಹಿಂಸಾಚಾರಕ್ಕೆ ದಾರಿ ಮಾಡಿ ಕೊಟ್ಟಿದ್ದು, ಬಾಂಗ್ಲಾದೇಶದ ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ವರದಿಗಳ ಪ್ರಕಾರ, 200ಕ್ಕೂ ಹೆಚ್ಚು ದಾಳಿಗಳ ನಡೆದಿವೆ. ಆಸ್ತಿಪಾಸ್ತಿಗಳನ್ನು ಲೂಟಿ ಮಾಡಲಾಗಿದೆ. ಹಲವರನ್ನು ಕಗ್ಗೊಲೆ ಮಾಡಲಾಗಿದೆ.
ಹಿಂಸಾಚಾರ ದೆಸೆಯಿಂದಲೇ ಉದಯಿಸಿದ ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರಗಳು ಮೊದಲಿನಿಂದಲೂ ನಡೆಯುತ್ತಿವೆ. ಬಾಂಗ್ಲಾದೇಶದ ಸಂವಿಧಾನವು ಜಾತ್ಯತೀತ ತಣ್ತೀಗಳನ್ನು ಅನುಸರಿಸಿದರೂ ವಾಸ್ತವದಲ್ಲಿ ಧಾರ್ಮಿಕ ಮೂಲಭೂತವಾದಿಗಳು, ಉಗ್ರರು ಮೇಲುಗೈ ಸಾಧಿಸುತ್ತಲೇ ಇದ್ದಾರೆ. ಪರಿಣಾಮ ಆಗಾಗ ಸಂಭವಿಸುವ ಕೋಮು ಹಿಂಸಾಚಾರಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಿಂದೂಗಳೇ ತೊಂದರೆಗೊಳಗಾಗುತ್ತಿದ್ದಾರೆ.
ಬಾಂಗ್ಲಾದಲ್ಲಿ ಶೇ.8ರಷ್ಟು ಹಿಂದೂಗಳು!
ಮುಸ್ಲಿಮ್ ಬಾಹುಳ್ಯದ ಬಾಂಗ್ಲಾದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾಕರು. 1947ರಲ್ಲಿ ದೇಶ ವಿಭಜನೆಯಾದಾಗ ಶೇ.30ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ.8ಕ್ಕೆ ಕುಸಿದಿದೆ. ಬಾಂಗ್ಲಾದೇಶದಲ್ಲಿ 2022ರ ಜನಗಣತಿ ಪ್ರಕಾರ, ಸದ್ಯ 1.31 ಕೋಟಿ ಹಿಂದೂಗಳಿದ್ದಾರೆ. ಈ 78 ವರ್ಷಗಳಲ್ಲಿ ಶೇ.22ರಷ್ಟು ಹಿಂದೂಗಳ ಸಂಖ್ಯೆ ಕುಸಿತವಾಗಿದೆ. ಈ ಪೈಕಿ ಹೆಚ್ಚಿನವರು ಮುಸ್ಲಿಮರಾಗಿ ಮತಾಂತರವಾಗಿದ್ದಾರೆ ಇಲ್ಲವೇ ನಿರಾಶ್ರಿತರಾಗಿ ಭಾರತದೊಳಗೆ ನುಸುಳಿದ್ದಾರೆ.
ಬಾಂಗ್ಲಾದಲ್ಲೇಕೆ ಹಿಂದೂಗಳೇ ಟಾರ್ಗೆಟ್?
ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಕ್ಷೀಣವಾಗಲು ಮುಖ್ಯ ಕಾರಣ ಧರ್ಮ. ಜತೆಗೆ, ಇಸ್ಲಾಮಿಕ್ ತೀವ್ರವಾದಿಗಳ ನೀತಿಗಳು. ಸರಕಾರದ ನೀತಿಗಳ ತಾರತಮ್ಯ, ಅವರ ಆಸ್ತಿ ಪಾಸ್ತಿ ಕಬಳಿಸುವುದು, ಅಳಿದುಳಿದ ಹಿಂದೂಗಳನ್ನು ಮತಾಂತರಗೊಳಿಸುತ್ತಿರುವ ಪರಿಣಾಮ ನಿರಂತರವಾಗಿ ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಬಾಂಗ್ಲಾ ದೇಶವು ಗಣರಾಜ್ಯವಾದರೂ ಜಾತ್ಯತೀತ ಪಾಲನೆ ಪರಿಣಾಮಕಾರಿಯಾಗಿಲ್ಲ.
ಆವಾಮಿ ಲೀಗ್ ಸೋತಾಗಲೆಲ್ಲ ದಾಳಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಪ್ಯಾಟರ್ನ್ ಒಂದೇ ತೆರನಾಗಿದೆ. ಯಾವಾಗೆಲ್ಲ ಆವಾಮಿ ಲೀಗ್ ಅಧಿಕಾರದಿಂದ ಹೊರಗಿದೆಯೋ ಆಗೆಲ್ಲ ವಿಪರೀತ ಎನ್ನುವಷ್ಟರ ಮಟ್ಟಿಗೆ ಹಿಂದೂಗಳು ಸಹಿತ ಅಲ್ಪಸಂಖ್ಯಾಕರ ಮೇಲೆ ದಾಳಿಗಳು ನಡೆದಿವೆ. ಈಗಲೂ ಅಷ್ಟೇ, ಶೇಖ್ ಹಸೀನಾ ರಾಜೀನಾಮೆ ನೀಡುತ್ತಿದ್ದಂತೆ ವಿದ್ಯಾರ್ಥಿ ಪ್ರತಿಭಟನಕಾರರು ತಮ್ಮ ಗುರಿಯನ್ನು ಹಿಂದೂಗಳ ಮೇಲೆ ಕೇಂದ್ರೀಕರಿಸಿದರು. ಅನಾವಶ್ಯವಾಗಿ ದಾಳಿ ನಡೆಸಿದರು. ಇದಕ್ಕೆ ಅಲ್ಲಿನ ಇಸ್ಲಾಮಿಕ್ ತೀವ್ರವಾದಿಗಳ ಕುಮ್ಮ¾ಕ್ಕು ಇದ್ದೇ ಇದೆ.
25 ವರ್ಷದಲ್ಲಿ ಒಬ್ಬನೇ ಒಬ್ಬ ಹಿಂದೂ ಇರಲ್ಲ
ಐದು ವರ್ಷದ ಹಿಂದೆ ದಿ ಸಂಡೇ ಗಾರ್ಡಿಯನ್‌ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ಮುಂದಿನ 30 ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಒಬ್ಬನೇ ಒಬ್ಬ ಹಿಂದೂ ಇರುವುದಿಲ್ಲ! 2021ರಲ್ಲಿ ಬಿಎನ್‌ಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮುಸ್ಲಿಮ್ ತೀವ್ರವಾದಿಗಳು ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾಕರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಿದ್ದರು. ಅದರಲ್ಲೂ ಹಿಂದೂಗಳ ಮೇಲೆ ದಾಳಿ ನಡೆಸಿ, ಅವರ ಮನೆ, ಆಸ್ತಿ-ಪಾಸ್ತಿ ಮತ್ತು ದೇಗುಲಗಳನ್ನು ಧ್ವಂಸ ಮಾಡಿದ್ದರು. ಈ ರೀತಿಯ ದಾಳಿಯು ಬಾಂಗ್ಲಾ ಹಿಂದೂಗಳಿಗೆ ಹೊಸದಲ್ಲ. ಆದರೆ ಆತಂಕ ಎಂದರೆ ಅಲ್ಲಿನ ಸರಕಾರಗಳು ಅಲ್ಪಸಂಖ್ಯಾಕರಿಗೆ ರಕ್ಷಣೆ ನೀಡದಿದ್ದರೆ, 30 ವರ್ಷಗಳಲ್ಲಿ ಹಿಂದೂಗಳು ಸಂಪೂರ್ಣವಾಗಿ ಕಣ್ಮರೆಯಾಗಲಿದ್ದಾರೆ!
1971ರಲ್ಲಿ 30 ಲಕ್ಷ ಹಿಂದೂಗಳ ನರಮೇಧ!
1947ರಲ್ಲಿ ಪಾಕಿಸ್ಥಾನದ ಭಾಗವೇ ಆಗಿದ್ದ ಪೂರ್ವ ಬಾಂಗ್ಲಾದೇಶ 1971ರಲ್ಲಿ ಸ್ವತಂತ್ರ ರಾಷ್ಟ್ರವಾಯಿತು. ಪಾಕಿಸ್ಥಾನದ ದೌರ್ಜನ್ಯದ ವಿರುದ್ಧ ಪೂರ್ವ ಪಾಕಿಸ್ಥಾನದ ಜನರು ಮುಜಿಬುರ್ ರೆಹಮಾನ್ ನೇತೃತ್ವದಲ್ಲಿ ಬಾಂಗ್ಲಾದೇಶ ಹೆಸರಿನಲ್ಲಿ ಹೊಸ ರಾಷ್ಟ್ರವನ್ನು ಘೋಷಿಸಿಕೊಂಡರು. ದಂಡೆತ್ತಿ ಬಂದ ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನೆ ನೆರವಿನಿಂದ ಬಾಂಗ್ಲಾದೇಶ ಸ್ವತಂತ್ರ ದೇಶವಾಯಿತು. ಆದರೆ ಈ ವೇಳೆ ನಡೆದ ಅತ್ಯಾಚಾರ ಮತ್ತು ದೌರ್ಜನ್ಯಗಳಿಗೆ ಎಣೆಯೇ ಇರಲಿಲ್ಲ. 1971ರ ನವೆಂಬರ್ ಹೊತ್ತಿಗೆ ಪೂರ್ವ ಪಾಕಿಸ್ಥಾನದಲ್ಲಿ 30 ಲಕ್ಷದಷ್ಟು ಹಿಂದೂಗಳ ನರಮೇಧವೇ ನಡೆಯಿತು. 4 ಲಕ್ಷಕ್ಕೂ ಅಧಿಕ ಮಹಿಳೆಯ ಮೇಲೆ ಅತ್ಯಾಚಾರ ನಡೆಯಿತು. ಬಂಗಾಲಿ, ಹಿಂದೂಗಳು ಮತ್ತು ಭಾರತೀಯ ಮೂಲದ ಎಲ್ಲರನ್ನೂ ಪಾಕಿಗಳು ತಮ್ಮ ಶತ್ರುಗಳೆಂದು ಪರಿಗಣಿಸಿದ್ದರು ಮತ್ತು ನರಮೇಧ ನಡೆಸಿದರು. 1 ಕೋಟಿಗೂ ಅಧಿಕ ಜನರು ನಿರಾಶ್ರಿತರಾದರು. ಈ ಪೈಕಿ ಹೆಚ್ಚಿನವರು ಭಾರತಕ್ಕೆ ಪಲಾಯನಗೈದರು.
ದಾಳಿಕೋರರಿಗೆ ಶಿಕ್ಷೆಯೇ ಆಗುವುದಿಲ್ಲ!
ಆತಂಕದ ಸಂಗತಿ ಎಂದರೆ, ಹಿಂದೂಗಳ ಮೇಲೆ ದಾಳಿ ನಡೆಸುವ ಧಾರ್ಮಿಕ ಮೂಲಭೂತವಾದಿಗಳಿಗೆ ಬಾಂಗ್ಲಾದೇಶದಲ್ಲಿ ಶಿಕ್ಷೆಯೇ ಆಗುವುದಿಲ್ಲ. ಹಿಂದೂಗಳ ದಾಳಿಯಲ್ಲಿ ಅಲ್ಲಿನ ಪ್ರಮುಖ ವಿಪಕ್ಷವಾಗಿರುವ ಜಮಾತ್ ಇ ಇಸ್ಲಾಮಿ ಕೈವಾಡವೇ ಹೆಚ್ಚು. ವಿಪರ್ಯಾಸ ಎಂದರೆ, ಇದೇ ಪಕ್ಷದ ವಿದ್ಯಾರ್ಥಿ ಘಟಕವು ಈಗ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಚಳವಳಿಯ ನೇತೃತ್ವ ವಹಿಸಿದೆ ಮತ್ತು ಹಿಂದೂಗಳ ಮೇಲೆ ದಾಳಿಯೂ ನಡೆಸುತ್ತಿದೆ. ಅಲ್ಪಸಂಖ್ಯಾಕರ ಮೇಲಿನ ಬಹಳಷ್ಟು ದಾಳಿ ಪ್ರಕರಣಗಳಲ್ಲಿ ದಾಳಿಕೋರರು ಯಾವುದೇ ಶಿಕ್ಷೆ ಇಲ್ಲದೇ ಹೊರ ಬರುತ್ತಾರೆ.
ಪಾಕ್, ಅಫ್ಘಾನ್‌ನಲ್ಲೂ ಸುರಕ್ಷಿತವಿಲ್ಲ
ಬಾಂಗ್ಲಾದೇಶದಂತೆ ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ ಹಾಗೂ ಅಫ್ಘಾನಿಸ್ಥಾನದಲ್ಲೂ ಹಿಂದೂಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣವಾಗುತ್ತಲೇ ಬಂದಿದೆ. ಅದರಲ್ಲೂ ಪಾಕಿಸ್ಥಾನದಲ್ಲಂತೂ ನಿರಂತರವಾಗಿ ಹಿಂದೂಗಳು ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. 1947ರ ಹೊತ್ತಿಗೆ ಹೆಚ್ಚು ಕಡಿಮೆ ಶೇ.15ರಷ್ಟಿದ್ದ ಹಿಂದೂಗಳ ಸಂಖ್ಯೆ ಪಾಕಿಸ್ಥಾನದಲ್ಲೀಗ ಶೇ. 2.17ಕ್ಕೆ ಕುಸಿದಿದೆ! 1950ರ ದಶಕದಲ್ಲೇ ಹೆಚ್ಚಿನ ಪ್ರಮಾಣ ಅಂದರೆ ಶೇ.13ರಷ್ಟು ಹಿಂದೂಗಳ ಸಂಖ್ಯೆ ಕ್ಷೀಣವಾಯಿತು. ಇದರಿಂದಾಗಿ ಚುನಾವಣ ಪ್ರಕ್ರಿಯೆಯಲ್ಲೂ ಹಿಂದೂಗಳ ಪ್ರಾತಿನಿಧ್ಯ ಕುಸಿಯುತ್ತಿದೆ. ಇಲ್ಲಿ ಹಿಂದೂಗಳನ್ನು ಕೇಳುವವವರೇ ಇಲ್ಲ ಎನ್ನುವಂತಾಗಿದೆ. ಒಂದು ವರದಿ ಪ್ರಕಾರ ಪ್ರತೀ ವರ್ಷ ಸರಾಸರಿ 1,000 ಹಿಂದೂ ಯುವತಿಯರನ್ನು ಅಪಹರಿಸಿ ಮತಾಂತರ ಮಾಡಲಾಗುತ್ತಿದೆ. ಅಫ್ಘಾನಿಸ್ಥಾನದಲ್ಲಂತೂ ಹಿಂದೂಗಳು ಇಲ್ಲವೇ ಇಲ್ಲ ಎನ್ನಬಹುದು. ಕೆಲವು ವರದಿಗಳ ಪ್ರಕಾರ ಕೇವಲ 600 ಹಿಂದೂಗಳಷ್ಟಿದ್ದಾರೆ.
1.31 ಕೋಟಿ, ಬಾಂಗ್ಲಾದೇಶದಲ್ಲಿ ಸದ್ಯ ಇರುವ ಹಿಂದೂಗಳ ಸಂಖ್ಯೆ
52.17 ಲಕ್ಷ, ಸದ್ಯ ಪಾಕಿಸ್ಥಾನದಲ್ಲಿರುವ ಹಿಂದೂಗಳ ಸಂಖ್ಯೆ
205 2 ತಿಂಗಳಲ್ಲಿ ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗಳ ಸಂಖ್ಯೆ
3600 2013ರಿಂದ ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಪ್ರಕರಣಗಳು
ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ
ವರ್ಷ ಹಿಂದೂಗಳ ಸಂಖ್ಯೆ
1947 ಶೇ.30
1951 ಶೇ.22.05
1961 ಶೇ.18.50
1974 ಶೇ.13.50
1981 ಶೇ.12.13
1991 ಶೇ.10.51
2001 ಶೇ.9.60
2011 ಶೇ.8.54
2022 ಶೇ.7.95
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.