ಸಾಕು ಬೆಂಗಳೂರಿಗೆ ಬರ್ಗರ್ರು, ಉತ್ತರ ಕರ್ನಾಟಕಕ್ಕ ಬರ!
Team Udayavani, Apr 1, 2017, 10:20 PM IST
ಇನ್ನ ಪಾಪ ಬೆಂಗಳೂರಿನ ಪರಿಸ್ಥಿತಿ ನೋಡಿದ್ರೂ ಅಯ್ಯೋ ಅನ್ನಸ್ತಾದ. ಅದಕ್ಕೂ ಎಷ್ಟೊಂದು ಸಮಸ್ಯೆ. ಆದ್ರೆ ಡಿಫರೆನ್ಸ್ ಇಷ್ಟೆ-ಬ್ಯಾರೇ ಊರುಗಳೆಲ್ಲ ಅಪೌಷ್ಟಿಕತೆಯಿಂದ ಬಳಲಿದರೆ, ಬೆಂಗಳೂರು ಅತಿ ಪೌಷ್ಟಿಕತೆಯಿಂದಾಗಿ ಹೈರಾಣಾಗ್ಯಾದ. ಒಂದು ಊರಿಗೆ ಎಷ್ಟು ಲಿಮಿಟ್ ಆಗ ತಿನ್ನಸ್ಬೇಕು ಅನ್ನೋದು ಅಧಿಕಾರಾದಾಗ ಇರೋರಿಗೆ ಗೊತ್ತಿರಬೇಕು. ಪಾಪ, ಬೆಂಗಳೂರಿಗೆ ಹೊಟ್ಟಿ ಫುಲ್ ಆಗ್ಯಾದ. ಅದರ ಬಾಯಾಗ ಇನ್ನಷ್ಟು ತುರಕ್ಯಂತ ಹೊಂಟ್ರ ಹೊಟ್ಟಿ ಜಾಡಸೇ ಜಾಡಸ್ತಾದ!
“ಏನಲೇ, ಏನಂತಾದ ಬೆಂಗಳೂರು?’ ಅಂತಂದು ರಾಯೂಚೂರಿಗೆ ಹೋದಾಗ ಖಾಸಾ ದೋಸ್ತ ಕೇಳಿದ್ದ. “ಏನಂತದಂತ ಕೇಳಾö? ಅಬಾಬಾಬಾ ಬೆಂಗಳೂರಂದ್ರ ಬೆಂಗಳೂರಲೇ! ಅಲ್ಲಿ ಮುಂಜಾನೆ ಮಳಿ. ರಾತ್ರಿ ಛಳಿ. ಬೆಳಗ್ಗೆ ಎದ್ರೆ ಆಗುಂಬೆ, ರಾತ್ರಿ ಶಿಮ್ಲಾ! ಏನ್ ವಾತಾವರಣ…ಆಹಾ’ ಅಂದ್ಕೆಸಿ ಆ ಮಗನ ಹೆಗಲಮ್ಯಾಲ ಕೈ ಹಾಕಿ ರಾಜಧಾನಿ ವೈಭವಾನ ಹೊಗಳೇ ಹೊಗಳಿ ಅವ° ಹೊಟ್ಟಿ ಉರಿಸಿದ್ದೆ. ಬಿಸಲ್ಯಾಗ ಬಣ್ಣಗೆಟ್ಟಿದ್ದ ಅವನ ಮಾರಿ ನನ್ನ ಭಾಗ್ಯ ನೆನಿಸ್ಕಡು ಇನ್ನಷ್ಟು ಕರ್ರಗಾತು.
ನಮ್ ಕಡೆ ಬಿಸಿಲು ಖತರ್‌ನಾಕ್ ಫೇಮಸ್ ಅಂತ ಬೆಂಗ್ಳೂರಿಗೆ ಬಂದ್ ಮ್ಯಾಲೇ ನಮಗ ಗೊತ್ತಾಗೋದು. ನಮ್ಮನಿ ಓನರ್ರಿಗೆ, ನಾವು ಉತ್ತರ ಕರ್ನಾಟಕದ ಮಂದಿ ಅಂತ ಗೊತ್ತಾಗಿದ್ದೇ “ಅಯ್ಯೋ, ಒಂದ್ಸಾರಿ ನಿಮ್ಮ ರಾಯೂರ್ ಹತ್ರ ಮಂತ್ರಾಲಯಕ್ಕೆ ಬಂದಿದ್ವಿ. ಏನ್ ಬಿಸಿಲ್‌ರೀ ? ನಮYಂತೂ ಬಿಸ್ಲರಿ ಕುಡು ಕುಡು ಸಾಕ್‌ಸಾಕಾಗಿ ಹೋಗಿತ್ತು. ಅದ್ಹೇಗಿರ್ತಾರಪ್ಪ ಜನ ಅಲ್ಲೆಲ್ಲ?’ ಅಂತ ಲೊಚಗುಟ್ಟಿದ್ರು(ರಾಯರ ಮಠದ ಎಂಟ್ರೆನ್ಸಾಗ ಚಪ್ಲಿ ಬಿಚ್ಚಿ ಕಾಲಿಟ್ಟಿದ್ದೇ ಅವರೆಲ್ಲ ತಕತಕ ಕುಣಕೊಂತ ಮಠದಾಗ ಓಡಿಹೋಗಿದ್ರಂತ!)
ಆದ್ರೀಗ? ಮುಂಜಾನೆದ್ದು ತಪ್ಪದೇ ಸೂರ್ಯ ನಮಸ್ಕಾರ ಮಾಡ್ತಿದ್ ಓನರ್ರು, ಒಂದ್ ತಿಂಗ್ಲ್ಲಿಂದ ಸೂರ್ಯ ತಿರಸ್ಕಾರ ಮಾಡಿ ಮನ್ಯಾಗೇ ಕುಂತುಬಿಟ್ಟಾರ. “ಅದ್ಹೇಗಿರ್ತಾರಪ್ಪ ಜನ ಅಲ್ಲೆಲ್ಲ?’ ಅಂತ ಅವ್ರೇನಾದ್ರೂ ಈಗ ಕೇಳಿದ್ರೆ ಹೇಳ್ತಿದ್ದೆ- “ಹಿಂಗಾ ಇರ್ತಾರ ನೋಡ್ರಿ. ಒದ್ದಾಡಿಕೆಂತ. ಆದ್ರೆ ಅವ್ರು ನಿಮಗ ಮನ್ಯಾಗ ಬಚ್ಚಿಟ್ಟುಗೊಂಡು ಕೂಡೋದಿಲ್ಲ.(ಕೂತ್ರ ಅವ್ರ ಬದುಕು ನಡಿಯೋದಿಲ್ಲ)’
ನಮ್ ಕಡೆ ಯಾ ಪರಿ ಬಿಸಿಲಿರ್ತದ ಅನ್ನೋದನ್ನ ಒಂದು ಜೋಕ್ ಭಾಳ ಛೋಲೋ ಕಟ್ಟಿಕೊಡ್ತದ. ಉತ್ತರ ಕರ್ನಾಟಕದ ಒಬ್ಬ ಕಳ್ಳ ಸತ್ತು ನರಕಕ್ಕ ಹೋದ್ನಂತ. ಅವನು ಮಾಡಿದ ಪಾಪಕೃತ್ಯಗಳನ್ನೆಲ್ಲ ಪರಿಶೀಲಿಸಿದ ಯಮರಾಜ “ಲೇ…ಈ ಮಗ ಭಾಳ ಲಪೂಟ ಇದ್ದಾನ. ಇವನ್ನ ಎಳ್ಕಂಡೋಗಿ ಕುದ್ಯಕುದ್ಯ ಎಣ್ಯಾಗ ಕುಂದರಸ್ರಲೇ..’ ಅಂತ ಆರ್ಡರ್ ಮಾಡಿದ್ನಂತ. ಯಮಭಟರು ಕಳ್ಳನ್ನ ಹಿಡಕೊಂಡೋಗಿ ಸ್ವಿಮಿಂಗ್‌ಪೂಲ್ ಸೈಜ್ ಬೊಗಣಿಯೊಳಗ ಅವ° ದಬ್ಬಿದ್ರಂತ. ಆದ್ರ ಅಷ್ಟು ಉರಿ ಉರಿ ಎಣ್ಯಾಗ ಬಿದ್ರೂ ಅವ ಒಂಚೂರೂ ಒದರ್ಲಿಲ್ಲ, ನನ್ನಬಿಟ್‌ಬಿಡ್ರಲೇ ಅಂದು ಒಯ್ಕಳಿಲ್ಲ. ಅದರ ಬದಲು ಆರಾಮಾಗಿ ಅದರಾಗೇ ಸ್ವಿಮಿಂಗ್ ಮಾಡ್ಕೊಂತ ಯಮಭಟರನ್ನ ಕೇಳಿದ್ನಂತಧಿ- “ಅಣ್ಣಾ, ಹಂಗೇ ಒಂದ್ ಲೈಫ್ಬಾಯ್ ಸೋಪ್ ಇದ್ರ ಕ್ಯಾಚ್ ಒಗಿ. ಸ್ನಾನ ಮುಗಿಸಿಬಿಡ್ತೀನಿ!’
ನಮ್ ಕಡೆ ಬಿಸಿಲಿನ ಬ್ಯಾಟಿಂಗು ಯಾ ಲೆವೆಲ್ಲಾಗ ಇರ್ತದ ಅನ್ನೋದರ ಉದಾಹರಣೆ ಇದು. ನಮ್ ಮಂದಿ ಬಿಸಲಾಗೇ ಮಿರ್ಚಿ ಭಜಿ ತಿನ್ನೋ ಗಟ್ಟಿಗರಾದ್ರೂ, ಈಸರೆ ಯಾಕೋ ಉತ್ತರ ಕರ್ನಾಟಕದ ಪರಿಸ್ಥಿತಿ “ಮಾಕಿ ಕಿರಿಕಿರಿ’ ಅನ್ನೋ ಮಟ್ಟಕ್ಕ ಹೋಗ್ಯದನ್ನೋದು ಖರೆ. ಬರಬಾರದು ಬರಬಾರದು ಅಂತ ಎಷ್ಟು ಬೇಡಿಕೊಂಡ್ರೂ ಮತ್ತ ಬರಗಾಲ ಬಂದದ. ಅಲ್ಲಾ, ಈ ಸೂರ್ಯ ದೇವರಿಗಷ್ಟ ಅಲ್ಲ. ನಮ್ಮ ಭಾಗದ ಮ್ಯಾಲ ವರುಣ ದೇವರಿಗೂ ಯಾಕ್ ಇಷ್ಟು ಸಿಟ್ಟೋ ಏನೋ? ಬ್ಯಾಸಿಗ್ಯಾಗ ಬಾರುಕೋಲಿಂದ ಬೆನ್ನಿನ ಮ್ಯಾಲ ಬಾರಿಸಿದಂಗ್ ಬಿಸುಲು ಬಿದ್ದು, ನೆಲ ಬಿರುಕು ಬಿಟ್ಟು ರೈತರದ್ದು ಬೈಂಗನ್ ಕೀ ಜಿಂದಗಿ ಆಗ್ತದ.ಮಳಿಗಾಲ ಬಂದ್ರ, ಜೋರು ಮಳಿ ಬಂದು, ಹೊಲ ಎಲ್ಲಾ ನೆರೆ ಪಾಲಾಗ್ತಾವ.
ನೆರೆ ಬಂದಾಗೆಲ್ಲ ಆಯಾ ಕಾಲದ ಮುಖ್ಯಮಂತ್ರಿಗಳೆಲ್ಲ ಹೆಲಿಕಾಪ್ಟರ್ ಹತ್ತಿ, ವಾಯುವಿಹಾರ ನಡೆಸಿ, ನಮ್ ಮಂದೀಗೆ ಮ್ಯಾಲಿಂದಾನೇ ಟಾಟಾ ಮಾಡಿ ಹೊಂಟುಬಿಡ್ತಾರ. ಬ್ಯಾಸಿಗ್ಯಾಗಂತೂ ಅವರು ತಮ್ಮ ಎಸಿ ಕಚೇರಿಯೊಳಗಿಂದ ಹೊರಗ ಬರೋದಿಲ್ಲ. ಬರ ಪರಿಹಾರ, ವಿಶೇಷ ಪ್ಯಾಕೇಜ್, ನೆರೆ ಪರಿಹಾರ ಘೋಷಿಸ್ತಾರಲ್ಲ ಅಂತ ಕೇಳೊºàದು. ಆದ್ರ ಈ ಪರಿಹಾರಗಳೆಲ್ಲ ಭ್ರಷ್ಟರ ಪಾಲಿಗೆ ರುಚಿರುಚಿ ಖಾರಾಬೂಂದಿ ಅಷ್ಟೆ! ಅದ್ರೂ ಏನ ಅನ್ರೀ, ನಮ್ಮ ಭಾಗದ ರಾಜಕಾರಣಿಗಳಂತೂ ಭಾರೀ ಭಾಗ್ಯವಂತರು. ಯಾಕಂದ್ರ ಬಡವರ ಪಾಲಿನ ತುತ್ತೆಲ್ಲ ಅವರ ತಟ್ಟಿ ಒಳಾಗೇ ಆರಾಮಾಗಿ ಸೇರ್ಲಕತ್ತದಲ್ಲ? ಹಿಂಗಿದ್ದ ಮ್ಯಾಲ ಪಾಪ ಬಡವರನಾ ಏನ್ ಮಾಡಬೇಕು? ರೈತರಿಗಂತೂ ನದಿಗಳ ಮ್ಯಾಲಿನ ನಂಬಿಕಿ ಯಾವಾಗೋ ದೂರ ಆಗ್ಯದ. ಕೃಷ್ಣ-ತುಂಗಭದ್ರಾ ನದಿ ನೀರ್ನೆಲ್ಲ ಮಹಾರಾಷ್ಟ್ರ, ಆಂಧ್ರ ಪ್ರದೇಶ ಗಟಗಟ ಕುಡುಕೊತ್ತಾನೇ ಬಂದಾವ. ಆದ್ರ ಅದನ್ನೆಲ್ಲ ಕೇಳ್ಳೋರ್ಯಾರು? ಕಾವೇರಿಗೆ ತೋರಿಸಿದಷ್ಟು ಕಾಳಜಿ ನಮ್ಮ ಕೃಷ್ಣಾಕ್ಕ-ತುಂಗಭದ್ರಕ್ಕ ಸಿಗ್ತದ ಅನ್ನೋದು ಮೂರ್ಖತನ ಅಷ್ಟೆ. ಹಿಂಗಾಗೇ, ಕುಡಿಯಕ್ಕ ನೀರಿಲ್ಲ, ತಲೀ ಮ್ಯಾಲೆ ಸೂರಿಲ್ಲ. ಕೇಳ್ಳೋರಿಲ್ಲ, ಹೇಳ್ಳೋರಿಲ್ಲ. ಬಡವರು ಭಾಗ್ಯ ಹುಡುಕ್ಕೊಂಡು ಗುಳೆ ಎದ್ದು ಹೋಗಬೇಕು. ಎಲ್ಲಿಗೆ? ಮತ್ತದೇ ಬೆಂಗಳೂರಿಗೇ….
“ಹೇ..ಆ ಭಾಗಕ್ಕೆಲ್ಲ ಎಷ್ಟು ಸವಲತ್ತು ಕೊಡ್ಲಿಕತ್ತೀವಿ’ ಅಂತ ಅಧಿಕಾರದಾಗಿದ್ದವ್ರು ವಾದ ಮಾಡೊದು. ಆದ್ರ ಸಾಹೇಬ್…ನೀವೇನು ಕೊಡ್ತೀರಿ ಅನ್ನೋದು ನೋಡೀವಲ್ಲ! ರಾಯೂcರಿನಂಥ ಉರಿ ಉರಿ ಊರಿಗೆ ಪವರ್ ಪ್ಲ್ರಾಂಟ್ ಕೊಡ್ತೀರಿ! ಅದರ ವಿದ್ಯುತ್ತನ್ನ ಬೆಂಗಳೂರಿಗೆ ಬಿಡ್ತೀರಿ. ಅಲ್ಲಿ ಮಂದೀ ಪಾಲಿಗೆ ಬರೀ ಹಾರು ಬೂದಿ, ಕತ್ತಲ! ಇನ್ನ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಸ್ಟಾರ್ಟ್ ಮಾಡಿಬಿಟ್ರೆ ಆತೇನು? ಓದು ಮುಗಿಸಿದವ್ರಿಗೆ ಅಲ್ಲೆಲ್ಲ ಉದ್ಯೋಗ-ಊಟಕ್ಕ ಗತಿ ಇಲ್ಲಾಂದ್ರ ಏನು ಮಾಡಬೇಕು?
ಕೃಷ್ಣದೇವರಾಯನ ಕಾಲದಾಗ ವಿಜಯನಗರ ರಾಜಧಾನಿಧಿಯಾಗಿತ್ತು. ಹಂಗಂತ ಆ ರಾಜ ಬರೇ ತನ್ನ ರಾಜಧಾನೀನ್ನಷ್ಟ ಉದ್ಧಾರ ಮಾಡ್ಲಿಲ್ಲ. ತನ್ನ ಸಾಮ್ರಾಜ್ಯದಾಗ ಬರೋ ಪ್ರತೀ ಪ್ರದೇಶಾನ್ನೂ ಬೆಳೆಸಿದ. ಅದಕ್ಕ ಆತನ ಅವಧಿಯನ್ನ ಗೋಲ್ಡನ್ ಏಜ್ ಅಂತ ಕರೀತಾರ. ಆದ್ರೀಗ? ಬೆಂಗಳೂರಿಗಷ್ಟೇ ಗೋಲು, ಉಳಿದ ಊರಿಗೆಲ್ಲ ರೋಲ್ಡ್ ಗೋಲುx. ಆದ್ರೂ ಅದ್ಯಾವ ಸುಕೃತದಿಂದಾನೋ ಏನೋ ಕರ್ನಾಟಕದ ಅಭಿವೃದ್ಧಿ ಅಂದ್ರ ಬೆಂಗಳೂರಿನ ಅಭಿವೃದ್ಧಿ ಅನ್ಕೊಂಡಿರೋ ಅಧಿಕಾರಸ್ಥರಿಗೆ ಸ್ವಲ್ಪ ವರ್ಷದಿಂದ ಕುಂಡಿ ಚುರ್ ಅನ್ಲಿಕ್ಕತ್ತದ. ಉದ್ಯಾನ ನಗರಿ ಬೆಂಗಳೂರು ಉದ್ದು ಹುರುದಂಗ ಬಿಸಿ ಆಗ್ಯದ. ಸ್ಮಶಾನದ ಮ್ಯಾಲ ಗೋರಿ ಕಟ್ಟಿಧಂಗ ಈ ಊರಿನ ಮ್ಯಾಲ ಬಿಲ್ಡಿಂಗುಗಳನ್ನ ಕಟಕೊಂಡು ಹೊಂಟ್ರ ಇನ್ನೇನಾಗಬೇಕು? ನಿಂತ್ರ ಶೆಕಿ, ಕುಂತ್ರ ಶೆಕಿ. ಶೆಕಿ ದೂರ ಮಾಡ್ಲಿಕ್ಕ ಎಸಿ. ಎಸಿಯಿಂದ ವಾತಾವರಣ ಮತ್ತಷ್ಟು ಬಿಸಿ ಬಿಸಿ. ಮಂದಿ ಜಾಸ್ತಿ ಆದ್ರಲೇ, ಗಾಡಿ ವಿಪರೀತ ಆದ್ವಲೇ, ಜಲಮೂಲ ಬರಿದಾಗಕತ್ತವಲೇ, ಗಿಡ ಕಡೀಬ್ಯಾಡ್ರಲೇ, ನೀರು ಉಳಸ್ರಲೇ ಅಂತಂದು ಪರಿಸರವಾದಿಗಳೆಲ್ಲ ಎಷ್ಟು ಹೇಳಿದ್ರೂ ಅವರ ಮಾತು ನಡೀಯದಿಲ್ಲ. ಎಲ್ಲರೂ ಬೆಂಗಳೂರನ್ನೇ ಮುತಗೊಂಡು ತಿಂದ್ರ ಇನ್ನು ಉಳಿಯೋದೇನು? “ಇನ್ನ ಹತ್ತು ವರ್ಷದಾಗ ಬೆಂಗಳೂರು ವಾಸಯೋಗ್ಯ ನಗರವಾಗಿ ಉಳಿಯೋದಿಲ್ಲ’ ಅಂತ ವಿಜ್ಞಾನಿಗಳು ಹೇಳಿದತಕ್ಷಣ ಮಾಧ್ಯಮಗಳಾದಿಯಾಗಿ ಎಲ್ಲಾರೂ ಲಬ ಲಬ ಬಾಯಿ ಬಡ್ಕೊಂಡ್ರು. ಅಲಿÅà ಜನನಾಯಕರೇ… ಸ್ವಾತಂತ್ರ ಬಂದು ಇಷ್ಟು ವರ್ಷ ಆದ್ರೂನೂ ಉತ್ತರ ಕರ್ನಾಟಕದ ಊರುಗಳೆಲ್ಲ ವಾಸಯೋಗ್ಯವಾಗಿ ಬದಲಾಗಿಲ್ಲ ಅನ್ನೋದು ನಿಮಗ ಯಾಕ ತಿಳೀವಲುª? ಬೆಂಗಳೂರು ವಾಸಯೋಗ್ಯ ಆಗಬೇಕಂದ್ರ ಇಲ್ಲಿ ಜನಸಂಖ್ಯೆ ಕಡಿಮೆಯಾಗಬೇಕೂ ಅಂತೀರಿ. ಜನ ತಮ್ಮೂರಿಗೆ ವಾಪಸ್ ಹೋಗಕ್ಕ ರೆಡಿಯಿದ್ದಾರ. ಆದ್ರ ಅವರ ಊರು ವಾಸಯೋಗ್ಯ ಆಗ್ಬೇಕಲ್ಲ? ಹಂಗ ಮಾಡೋಕ್ಕ ನೀವು ರೆಡಿ ಇದ್ದೀರಾ? ನಮ್ಮ ನದಿಗಳನ್ನ ಉಳಸ್ಲಕ್ಕ ಮುಂದಾಗ್ರಿ, ದೊಡ್ ದೊಡ್ ಕಂಪನಿಗಳನ್ನೆಲ್ಲ ನಮ್ ಭಾಗಕ್ಕ ಕಳಸ್ರಿ(ದಯವಿಟ್ಟೂ ಪವರ್ ಪ್ಲಾಂಟ್‌ನಂಥ ಉದ್ರೀ ಕಂಪನಿ ಕಟ್‌ಬ್ಯಾಡ್ರಿ ಮತ್ತ!). ಆಗ ಮಂದಿ ಅಲ್ಲೇ ಆರಾಮಾಗಿ ಬದುಕು ಕಟ್ಟಿಕೊಳ್ತಾರ. ಬಿಸಿಲಿನ ಬಗ್ಗೆ ನೀವು ಟೆನ್ಶನ್ ಮಾಡ್ಕೊಬ್ಯಾಡ್ರಿ. ಅದು ಎಷ್ಟೇ ಬರ್ಲಿ ಚಿಂತಿಲ್ಲ. ಬಿಸಲಾಗ ಬೆಂದಾದ್ರೂ(ಬಿಸ್ಲರಿ ಕುಡಿಲಾರದ) ಬದುಕು ಕಟ್ಟಿಕೊಳ್ಳೋ ಗಟ್ಟಿ ಜೀವಗಳವು.
ಇನ್ನ ಪಾಪ ಬೆಂಗಳೂರಿನ ಪರಿಸ್ಥಿತಿ ನೋಡಿದ್ರೂ ಅಯ್ಯೋ ಅನ್ನಸ್ತಾದ. ಅದಕ್ಕೂ ಎಷ್ಟೊಂದು ಸಮಸ್ಯೆ. ಆದ್ರೆ ಡಿಫರೆನ್ಸ್ ಇಷ್ಟೆ-ಬ್ಯಾರೇ ಊರುಗಳೆಲ್ಲ ಅಪೌಷ್ಟಿಕತೆಯಿಂದ ಬಳಲಿದರೆ, ಬೆಂಗಳೂರು ಅತಿ ಪೌಷ್ಟಿಕತೆಯಿಂದಾಗಿ ಹೈರಾಣಾಗ್ಯಾದ.
ಒಂದು ಊರಿಗೆ ಎಷ್ಟು ಲಿಮಿಟ್ ಆಗ ತಿನ್ನಸ್ಬೇಕು ಅನ್ನೋದು ಅಧಿಕಾರಾದಾಗ ಇರೋರಿಗೆ ಗೊತ್ತಿರಬೇಕು. ಪಾಪ, ಬೆಂಗಳೂರಿಗೆ ಹೊಟ್ಟಿ ಫುಲ್ ಆಗ್ಯಾದ. ಅದರ ಬಾಯಾಗ ಇನ್ನಷ್ಟು ತುರಕ್ಯಂತ ಹೊಂಟ್ರ ಹೊಟ್ಟಿ ಜಾಡಸೇ ಜಾಡಸ್ತಾದ! ದೇವರೇ…ನಿನಗೆ ನಮ್ಮ ಪ್ರಾರ್ಥನೆ ಇಷ್ಟೆ- ಬೆಂಗಳೂರಿಗೆ ಬರ್ಗರ್ ಸಪ್ಲೆ„ ಕಡಿಮಿ ಮಾಡು, ಉತ್ತರ ಕರ್ನಾಟಕಕ್ಕ ಬರದ ಪೂರೈಕೆ ನಿಂದ್ರುಸು.
ಏನು ದೇವ್ರೇ? ಏನಂದಿ? ಅದೆಲ್ಲ ಸರಕಾರ ಮಾಡ್ಬೇಕಾಗಿರೋ ಕೆಲಸಾನಾ? ದೇವ್ರೇ…ನೀನು ನೋಡಿಲ್ಲ ಅನ್ನಸ್ತದ. ವಿಧಾನಸೌಧದ ಮ್ಯಾಲೆ ದೊಡ್ಡದಾಗಿ ಬರದಾರ: “ಸರಕಾರದ ಕೆಲಸ ದೇವರ ಕೆಲಸ’ ಅಂತ. ಇದರರ್ಥ ಏನು ಗೊತ್ತಾದಾ? ಅಂದ್ರೆ ಸರಕಾರದ ಕೆಲಸಾನೆಲ್ಲ ದೇವರೇ ಮಾಡಬೇಕೂ ಅಂತ. ಈಗ ನೀನೇ ನಮಗ ಗತಿ!
ರಾಘವೇಂದ್ರ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.