ಪರ-ವಿರೋಧಗಳ ಆಚೆ ಈಚೆ
Team Udayavani, Jun 11, 2017, 8:55 AM IST
ಎಲ್ಲರಿಗೂ ಅವರದ್ದೇ ಆದ ಸಿದ್ಧಾಂತವಿರುತ್ತದೆ. ಎಲ್ಲಕ್ಕೂ ಪರ-ವಿರೋಧಗಳಿರುತ್ತವೆ. ಆದರೆ ಯಾಕೋ ಇತ್ತೀಚಿಗೆ ವಿರೋಧಕ್ಕಾಗಿ ವಿರೋಧ ಕಂಡುಬರುತ್ತಿದೆ. ದೇಶದ ಏಕತೆ ಮತ್ತು ಭದ್ರತೆ ದೃಷ್ಟಿಯಿಂದ ಸೈದ್ಧಾಂತಿಕ ಸಂಘರ್ಷ ಒಳ್ಳೆಯದಲ್ಲ.
ಮೇಜರ್ ಗೊಗೋಯ್ ಪ್ರಕರಣ ಮತ್ತು ಮಾಂಸಕ್ಕಾಗಿ ಗೋ ಮಾರಾಟ ನಿಷೇಧ ಪ್ರಕರಣ-ಇವು ಇತ್ತೀಚಿನ ಎರಡು ಪ್ರತ್ಯೇಕ ಪ್ರಕರಣಗಳು. ಪ್ರಾಯಶಃ ಸಾಕಷ್ಟು ಪರ-ವಿರೋಧ ಕಂಡ ಪ್ರಕರಣಗಳು. ಪರ-ವಿರೋಧಗಳು ಹೊಸದಲ್ಲ. ಎಲ್ಲಕ್ಕೂ ಪರ-ವಿರೋಧಗಳಿರುತ್ತವೆ. ಎಲ್ಲರೂ ರಾಮನನ್ನೇ ಹೊಗಳುತ್ತಾರೆ ಅನ್ನುವಂತಿಲ್ಲ. ರಾವಣನಿಗೂ ಬೆಂಬಲಿಗರು ಇರುತ್ತಾರೆ. ಅಪರಾಧ ಸಾಬೀತಾಗಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವಾಗಲೂ ಅಪಸ್ವರವೆತ್ತುವವರಿದ್ದಾರೆ. ಅಪರಾಧಿ ಪರ ಅನುಕಂಪ ತೋರುವವರಿದ್ದಾರೆ. ಆದರೆ ಪ್ರಸ್ತುತ ಪ್ರಕರಣಗಳ ಕುರಿತ ಪರ-ವಿರೋಧಗಳು ತುಸು ಭಿನ್ನ ಅನಿಸುತ್ತದೆ. ಆ ಬಗ್ಗೆ ಒಂದಿಷ್ಟು ಚಿಂತಿಸಬೇಕಿದೆ.
– ಮೇಜರ್ ಗೊಗೋಯ್ ಪ್ರಕರಣ: ಭಾರತೀಯ ಸೇನಾ ಪಡೆಯ ಕ್ಷಿಪ್ರ ಪ್ರತಿಕ್ರಿಯಾ ತಂಡದ ಮುಖ್ಯಸ್ಥ ಮೇಜರ್ ನಿತಿನ್ ಲೀತುಲ್ ಗೊಗೋಯ್. ಶ್ರೀನಗರ ಲೋಕಸಭಾ ಉಪ ಚುನಾವಣಾ ಸಂದರ್ಭ ಬಡಗಾಮ್ ಜಿಲ್ಲೆಯ ಮತದಾನ ಕೇಂದ್ರವನ್ನು ಸುತ್ತುವರಿದ ಕಾಶ್ಮೀರಿ ಸಾರ್ವಜನಿಕರ ಗುಂಪೊಂದು ಚುನಾವಣಾ ಅಧಿಕಾರಿಗಳತ್ತ ಕಲ್ಲು ತೂರಿತು. ಮತದಾನ ಕೇಂದ್ರಕ್ಕೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿತು. ಆಗ ಅಲ್ಲಿಗಾಗಮಿಸಿದ ಗೊಗೋಯ್ ದುಷ್ಕರ್ಮಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಪ್ರಯತ್ನ ವ್ಯರ್ಥವಾದಾಗ ಪಾಕ್ ಧ್ವಜ ಹಿಡಿದು ಕಲ್ಲು ತೂರಾಟಗಾರರನ್ನು ಪ್ರಚೋದಿಸುತ್ತಿದ್ದ ಒಬ್ಟಾತನನ್ನು ಹಿಡಿದು ಜೀಪಿನ ಬಾನೆಟ್‌ಗೆ ಕಟ್ಟಿದರು. ದಿಢೀರ್ ಬೆಳವಣಿಗೆಯಿಂದ ವಿಚಲಿತರಾದ ಗುಂಪು ಚದುರಿತು. ಈ ಸಕಾಲಿಕ ಕ್ರಮವನ್ನು ಸೇನಾ ವರಿಷ್ಠರೂ ಸೇರಿದಂತೆ ಅನೇಕರು ಶ್ಲಾ ಸಿದರು. ಇದು ವೀರೋಚಿತವೆಂದರು. ಆದರೆ ಮಾನವನೊಬ್ಬನನ್ನು ಗುರಾಣಿಯಾಗಿ ಬಳಸಿದ್ದು ಅಮಾನುಷವಾದುದು, ಅದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇನ್ನೊಂದಿಷ್ಟು ಮಂದಿ ಅಪಸ್ವರವೆತ್ತಿದರು. ಕ್ರಮವನ್ನು ಖಂಡಿಸಿ ವಿರೋಧ ವ್ಯಕ್ತಪಡಿಸಿದರು.
– ಮಾಂಸಕ್ಕಾಗಿ ಗೋ ಮಾರಾಟ ನಿಷೇಧ: ಗೋಹತ್ಯೆ ನಿಯಂತ್ರಣಾ ಉದ್ದೇಶದಿಂದ ಕೇಂದ್ರ ಸರಕಾರ ಮಾಂಸಕ್ಕಾಗಿ ಗೋವುಗಳನ್ನು ಮಾರುವುದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಒಂದು ವರ್ಗ ಈ ಆದೇಶವನ್ನು ಹಾರ್ದಿಕವಾಗಿ ಸ್ವಾಗತಿಸಿತು. ಆದರೆ ಇನ್ನೊಂದು ವರ್ಗ ಬಲವಾಗಿ ವಿರೋಧಿಸಿತು. ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಲದಲ್ಲಿ ಇದಕ್ಕೆ ವಿರೋಧ ವ್ಯಕ್ತವಾದರೂ ಕೇರಳದ ಕೊಣ್ಣೂರು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯ ಹೆಸರಲ್ಲಿ ದೇಸಿ ಗೋವೊಂದನ್ನು ಸಾರ್ವಜನಿಕವಾಗಿ ಹತ್ಯೆ ಮಾಡಿದ್ದು, ಚೆನ್ನೈಯಲ್ಲಿ ಐಐಟಿ ವಿದ್ಯಾರ್ಥಿಗಳು ಬೀಫ್ಫೆಸ್ಟ್ ನಡೆಸಿದ್ದು ಕ್ರೌರ್ಯಕ್ಕೆ ಕನ್ನಡಿ ಹಿಡಿದಂತಿತ್ತು. ಆಗಿಂದಾಗ್ಗೆ ಸದ್ದು ಮಾಡುತ್ತಿದ್ದ ಗೋಹತ್ಯಾ ನಿಷೇಧ ಈಗ ಮತ್ತೂಮ್ಮೆ ಸುದ್ದಿಯಾಗಿ ಪರ-ವಿರೋಧಗಳನ್ನು ಹುಟ್ಟುಹಾಕುವಂತಾಯಿತು.
– ಅಭಿವ್ಯಕ್ತಿ ಸ್ವಾತಂತ್ರ್ಯ? ಇಲ್ಲಿ ಎಲ್ಲರಿಗೂ ತಮ್ಮದೇ ಅಭಿಪ್ರಾಯಗಳಿರುತ್ತವೆ. ಅವುಗಳನ್ನು ಅಭಿವ್ಯಕ್ತಿಪಡಿಸಲು ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಡಮಾಡಿದೆ. ಹಾಗಾಗಿ ಇಲ್ಲಿ ದಂತಚೋರ ವೀರಪ್ಪನ್‌ನಂಥವರಿಗೂ ಅಭಿಮಾನಿಗಳಿದ್ದರೂ ಅಚ್ಚರಿಯಿಲ್ಲ. ಕಳ್ಳ-ಸುಳ್ಳರ ಪರ ವಕಾಲತ್ತು ವಹಿಸಲು ಹಿಂದೇಟು ಹಾಕದವರೂ ಇದ್ದಾರೆ. ಕೋಟ್ಯಂತರ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದ್ದರೂ ಸರಿ, ಪವಿತ್ರ ಗ್ರಂಥಕ್ಕೆ ಬೆಂಕಿ ಕೊಡಬಲ್ಲೆನೆಂಬವರನ್ನು ಬೆಂಬಲಿಸುವವರೂ ಇದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ತಾನೆ? ಇಲ್ಲವೆನ್ನಲಾದೀತೆ?
– ಸೈದ್ಧಾಂತಿಕ ಸಂಘರ್ಷ: ಮೇಲಿನ ಎರಡೂ ಪ್ರಕರಣಗಳಲ್ಲಿ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾದವು. ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮಜಾಯಿಷಿ ನೀಡಬಹುದಾದರೂ ಅದರ ಹಿಂದಿರುವುದು ಸೈದ್ಧಾಂತಿಕ ಸಂಘರ್ಷ. ಇಲ್ಲಿ ರಾಜಕೀಯ ಪಕ್ಷ ಭೇದವನ್ನೂ ಮೀರಿ ಎಡ-ಬಲ ಎಂಬ ಸಿದ್ಧಾಂತಗಳು ಕೆಲಸ ಮಾಡುತ್ತಿವೆ. ಎಡಪಂಥೀಯರು ಮತ್ತು ಬಲಪಂಥೀಯರು ಸದಾ ಸಂಘರ್ಷದ ಹಾದಿ ಹಿಡಿಯುತ್ತಿರುವುದೊಂದು ದುರಂತ. ಯಾಕೋ ಏನೋ, ಅವರು ಪರಸ್ಪರ ಒಬ್ಬರಿಗೊಬ್ಬರು ಅಸ್ಪೃಶ್ಯರು! ಜಮ್ಮು ಕಾಶ್ಮೀರದ ಗಡಿನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆ ಪದೇ ಪದೇ ನುಸುಳುತ್ತಿದೆ. ಮೊನ್ನೆ ಮೊನ್ನೆ ಅಲ್ಲಿಯ ರಾಜೌರಿ, ಪೂಂಛ… ಜಿಲ್ಲೆಗಳಲ್ಲಿ ಗುಂಡಿನ ದಾಳಿ ನಡೆಸಿತು. ಒಂದೆರಡು ಸಾವೂ ಸಂಭವಿಸಿತು. ನಮ್ಮ ಶಾಂತಿ ಮಂತ್ರಕ್ಕೆಲ್ಲ ಅವರು ಬಗ್ಗುವವರಲ್ಲ ಎಂಬುದು ನಮಗೆ ಇಷ್ಟರಲ್ಲೇ ಅನುಭವವಾಗಿದೆ. ಆ ನಿಟ್ಟಿನಲ್ಲಿ ಮೇಜರ್ ಗೊಗೋಯ್ ಕೈಗೊಂಡ ಕ್ರಮ ಮೇಲು ನೋಟಕ್ಕೆ ಅಮಾನುಷವೆಂದು ಕಂಡುಬಂದರೂ ಅದು ಆಪದ್ಧರ್ಮ. ಹೀಗಿದ್ದೂ ಅದಕ್ಕೆ ವಿರೋಧವೂ ವ್ಯಕ್ತವಾಯಿತು. ವಿರೋಧ ವ್ಯಕ್ತಪಡಿಸಿದವರಲ್ಲಿ ಹೆಚ್ಚಿನವರೂ ಎಡಪಂಥೀಯರು! ಅದೇ ರೀತಿ ಗೋ ಮಾರಾಟ ನಿಷೇಧಕ್ಕೂ ಅಷ್ಟೇ. ಹೆಚ್ಚಿನ ವಿರೋಧವ್ಯಕ್ತವಾದದ್ದು ಎಡಪಂಥೀಯ ಪ್ರಾಬಲ್ಯವುಳ್ಳ ಪಶ್ಚಿಮ ಬಂಗಾಲ ಮತ್ತು ಕೇರಳದಲ್ಲಿ. ಅದರಲ್ಲೂ ಕೇರಳದಲ್ಲಿ ನಡೆದ ಪ್ರತಿಭಟನೆಯಂತೂ ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ ಎಂಬಂತೆ! ಕೇಂದ್ರ ಸರಕಾರದ ಮೇಲಿನ ಅಸಹನೆಯನ್ನು ಬಡ ಗೋವಿನ ಮೇಲೆ ತೋರಿ ಕಿಂಚಿತ್ ಸಮಾಧಾನ ಪಟ್ಟುಕೊಂಡಂತಿತ್ತು. ಇದು ಎಡ-ಬಲಗಳ ನಡುವಣ ಸೈದ್ಧಾಂತಿಕ ಸಂಘರ್ಷದ ಪರಿಣಾಮವಷ್ಟೆ. ದೇವರ ನಾಡೆಂದೇ ಖ್ಯಾತಿವೆತ್ತ ಕೇರಳವನ್ನು ಇತ್ತೀಚೆಗೆ ದೆವ್ವದ ನಾಡಾಗಿಸುತ್ತಿರುವ ಹತ್ಯಾಪ್ರಕರಣಗಳೂ ಇದರ ಪರಿಣಾಮವೆಂದರೆ ಹುಬ್ಬೇರಿಸಬೇಕಿಲ್ಲ.
– ರೈತ ಮತ್ತು ಯೋಧ: ಬೆವರು ಸುರಿವ ರೈತ, ರಕ್ತ ಸುರಿವ ಯೋಧ-ಇವರನ್ನುಳಿದ ಭಾರತವನ್ನು ಕಲ್ಪಿಸಿಕೊಳ್ಳಲೂ ಕಷ್ಟ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿ ಕೈ ತುಂಬಾ ಸಂಪಾದಿಸಿದರೂ ನಮ್ಮ ತುತ್ತಿನ ಚೀಲ ತುಂಬುವುದು ರೈತನ ಬೆವರಿನ ಫಲ. ಕೋಟಿ ವಿದ್ಯೆಗಿಂತ ಮೇಟಿವಿದ್ಯೆ ಎಂದಿದ್ದಾನೆ ಸರ್ವಜ್ಞ. ರೈತರನ್ನು ಬಿಟ್ಟರೆ ನಾವು ಅತ್ಯಂತ ಋಣಿಯಾಗಿರಬೇಕಾದ್ದು ದೇಶ ಕಾಯುವ ಯೋಧನಿಗೆ. ಹಗಲಿರುಳೆನ್ನದೆ ಮೈಕೊರೆವ ಚಳಿಯೆನ್ನದೆ ದೇಶ ರಕ್ಷಣೆಗೆ ದೇಹ ಮುಡಿಪಿಟ್ಟ ಆತನಿಗೆ ಸಾಟಿಯುಂಟೇ? ವರ್ಷಗಟ್ಟಲೆ ಊರಿಂದ ದೂರ. ಊರಿಗೆ ಮರಳಿದರೂ ಶವವಾಗಿ ಮರಳುವುದೇ ಹೆಚ್ಚು. ಹಾಗಾದರೂ ಸಂಸಾರಕ್ಕೆ ಕಿಂಚಿತ್ ಪರಿಹಾರ ಸಿಗಬೇಕಾದರೂ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ನಕ್ಸಲ್ ದಾಳಿಗೆ ತುತ್ತಾಗಿ ವೀರಮರಣ ಹೊಂದಿದ ಬೆಟಾಲಿಯನ್ ಕಾನ್ಸ್‌ಟೇಬಲ್ ಒಬ್ಬನ ಪತ್ನಿಗೆ 7 ವರ್ಷವಾದರೂ ನೌಕರಿ ಭಾಗ್ಯ ದೊರಕಿಲ್ಲವೆಂದು ಮೊನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಮೇಲಿನ ಪ್ರಕರಣಗಳಲ್ಲಿ ಒಂದು ರೈತನಿಗೆ ಸಂಬಂಧಿಸಿದ್ದಾದರೆ ಇನ್ನೊಂದು ಯೋಧನಿಗೆ ಸಂಬಂಧಿಸಿದ್ದು. ರೈತ ನಮ್ಮ ಪಾಲಿನ ಅನ್ನದಾತ. ಗೋವು ಆತನ ಜೀವನಾಡಿ. ಭಾರತದ ಅರ್ಥ ವ್ಯವಸ್ಥೆ ಕೃಷಿಯನ್ನು ಅವಲಂಬಿಸಿದೆ. ಶೇ.65-70ರಷ್ಟು ಕೃಷಿಯಿನ್ನೂ ಗೋವನ್ನೇ ಅವಲಂಬಿಸಿದೆ. ಮೇಜರ್ ಗೊಗೋಯ್ ಪ್ರಕರಣದ ಹಿಂದೆ ಯೋಧನಿದ್ದಾನೆ. ಯೋಧನ ಕೈಲಿ ದೇಶದ ಭದ್ರತೆ ಅಡಗಿದೆ. ಆದರೆ ಮೇಲಿನ ಪ್ರಕರಣಕ್ಕೆ ವ್ಯಕ್ತಗೊಂಡ ವಿರೋಧ ರೈತ ಮತ್ತು ಯೋಧರ ಆತ್ಮಸ್ಥೈರ್ಯವನ್ನು ಅಲ್ಲಾಡಿಸಬಲ್ಲುದು.
– ವಿರೋಧಕ್ಕಾಗಿ ವಿರೋಧ ಬೇಡ :ಎಲ್ಲರಿಗೂ ಅವರದ್ದೇ ಆದ ಸಿದ್ಧಾಂತವಿರುತ್ತದೆ. ಎಲ್ಲಕ್ಕೂ ಪರ-ವಿರೋಧಗಳಿರುತ್ತವೆ. ಆದರೆ ಯಾಕೋ ಇತ್ತೀಚಿಗೆ ವಿರೋಧಕ್ಕಾಗಿ ವಿರೋಧ ಕಂಡುಬರುತ್ತಿದೆ. ದೇಶದ ಏಕತೆ ಮತ್ತು ಭದ್ರತೆ ದೃಷ್ಟಿಯಿಂದ ಸೈದ್ಧಾಂತಿಕ ಸಂಘರ್ಷ ಒಳ್ಳೆಯದಲ್ಲ. ಪಕ್ಷ ಸಿದ್ಧಾಂತವನ್ನು ಬದಿಗಿಟ್ಟು ಸರಕಾರದೊಂದಿಗೆ ಕೈಜೋಡಬೇಕಿದೆ. ಕ್ಷುಲ್ಲಕ ಸೈದ್ಧಾಂತಿಕ ಸಂಘರ್ಷದಿಂದ ರೈತ ,ಯೋಧರ ಆತ್ಮಸ್ಥೈರ್ಯ ಕುಗ್ಗದಿರಲಿ. ಏಕತೆ ಮತ್ತು ಸಮಗ್ರತೆಗೆ ಧಕ್ಕೆಯಾಗದಿರಲಿ.
– ರಾಂ ಎಲ್ಲಂಗಳ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.