ಭೂತಾನ್ ಇನ್ನು ಬಡ ರಾಷ್ಟ್ರವಲ್ಲ; ನೆರೆ ರಾಷ್ಟ್ರದ ಪ್ರಗತಿಯಲ್ಲಿ ಭಾರತದ ಕೊಡುಗೆ ಗಣನೀಯ
Team Udayavani, Mar 19, 2023, 6:30 AM IST
ಯಾವುದೇ ದೇಶ ಜಾಗತಿಕ ಮಟ್ಟದಲ್ಲಿ ಆರ್ಥಿಕ, ವಾಣಿಜ್ಯ, ಸಾಮಾಜಿಕ ಕ್ಷೇತ್ರದಲ್ಲಿ ಶಕ್ತಿ ಸಾಮರ್ಥ್ಯ ತೋರಬೇಕಾದರೆ ಸ್ವಾವಲಂಬಿಯಾಗಿ ಗುರುತಿಸಿಕೊಳ್ಳುವುದು ಇಂದು ಬಹುಮುಖ್ಯ. ಈ ಕಾರಣದಿಂದಾಗಿಯೇ ಬಡರಾಷ್ಟ್ರ ಎಂದು ಗುರುತಿಸಿಕೊಳ್ಳಲು ಈಗ ಯಾವುದೇ ದೇಶವೂ ಸಿದ್ಧವಿಲ್ಲ. ಈ ನಿಟ್ಟಿನಲ್ಲಿ ಈಗ ವಿಶ್ವದ ಏಳು ರಾಷ್ಟ್ರಗಳು ವಿಶ್ವಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ಬಡ ರಾಷ್ಟ್ರಗಳ ಪಟ್ಟಿಯಿಂದ ಹೊರಬಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. ಅವುಗಳಲ್ಲಿ ಭಾರತದ ನೆರೆಯ ರಾಷ್ಟ್ರ ಭೂತಾನ್ ಕೂಡ ಸೇರಿದೆ. ಭೂತಾನ್‌ನ ಅಭಿವೃದ್ಧಿಯಲ್ಲಿ ಪಾಲುದಾರ ರಾಷ್ಟ್ರವಾಗಿರುವ ಭಾರತದ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿ. ಯಾಕೆಂದರೆ ಭೂತಾನ್ ಸ್ವಾವಲಂಬಿಯಾಗುವಲ್ಲಿ ಭಾರತದ ಕೊಡುಗೆಯೂ ಬಹುದೊಡ್ಡದಿದೆ.
ಹೇಗೆ?
ಹಿಮಾಲಯದ ಸಾಮ್ರಾಜ್ಯ ಎಂದೇ ಖ್ಯಾತಿ ಪಡೆದಿರುವ ಭೂತಾನ್ ಈ ವರ್ಷ ವಿಶ್ವದ ಬಡ ರಾಷ್ಟ್ರಗಳ ಪಟ್ಟಿಯಿಂದ ಹೊರಬರಲಿದೆ. ದೇಶದ ಜನತೆಯ ಜೀವನ ಮಟ್ಟ ಆಧಾರಿತ ಸೂಚ್ಯಂಕದ ಅನುಸಾರ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿಗೆ ಸೇರುತ್ತಿರುವ ಏಳನೇ ರಾಷ್ಟ್ರವಾಗಿ ಭೂತಾನ್ ಗುರುತಿಸಿಕೊಂಡಿದೆ. ಇದರೊಂದಿಗೆ ಬಾಂಗ್ಲಾದೇಶ, ನೇಪಾಲ, ಅಂಗೋಲಾ, ಲಾವೋಸ್, ಸೊಲೊಮನ್ ದ್ವೀಪಗಳು ಮತ್ತು ಸಾವೊಟೋಮ್ ದೇಶಗಳೂ ಇದ್ದು, ಇವು 2026ರ ಅಂತ್ಯದ ವೇಳೆಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿಗೆ
ಸೇರ್ಪಡೆಯಾಗಲಿವೆ.
– ವರ್ಷಾಂತ್ಯದಲ್ಲಿ ಭೂತಾನ್‌ಗೆ ಅಭಿವೃದ್ಧಿ ಶೀಲ ದೇಶದ ಪಟ್ಟ
– ಭಾರತದ ನೆರೆಯ ಮತ್ತು ಪರಮಾಪ್ತ ರಾಷ್ಟ್ರ
– ಮತ್ತಷ್ಟು ವೃದ್ಧಿಯಾಗಲಿದೆ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ
ಯಾಕೆ?
ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಇನ್ನೂ 45 ದೇಶಗಳಿವೆ. ಈ ದೇಶಗಳು ಕೂಡ ಈ ಹಣೆಪಟ್ಟಿಯಿಂದ ಕಳಚಿಕೊಳ್ಳಲು ಆಸಕ್ತವಾಗಿವೆಯಾದರೂ ಕೆಲವೊಂದು ಕಾರಣಗಳಿಂದ ಅವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಹಿಂಜರಿಯುತ್ತಿವೆ. ಇದರಲ್ಲಿ ಅಂಗೋಲಾ ಮತ್ತು ಸೊಲೊಮನ್ ದ್ವೀಪಗಳೂ ಸೇರಿವೆ. ಯಾಕೆಂದರೆ ಬಡರಾಷ್ಟ್ರದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಿದ ದೇಶಗಳಿಗೆ ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಿಗುತ್ತಿರುವ ವ್ಯಾಪಾರ ಸೌಲಭ್ಯಗಳು, ಕಡಿಮೆ ಬಡ್ಡಿದರದ ಹಣಕಾಸು ನೆರವು ಸ್ಥಗಿತಗೊಳ್ಳುತ್ತದೆ. ಇದರಿಂದಾಗಿ ಈ ದೇಶಗಳ ಮೇಲೆ ಪ್ರತಿಕೂಲ ಪರಿಣಾಮಗಳುಂಟಾಗುವ ಸಾಧ್ಯತೆಗಳಿರುವುದರಿಂದ ಈ ದೇಶಗಳು ವಿಳಂಬ ನೀತಿಯನ್ನು ಅನುಸರಿಸುತ್ತಿವೆ. ಆದರೆ ಭೂತಾನ್ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಭಿವೃದ್ಧಿ ಹೊಂದಿದ ದೇಶ ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಬಲುಮುಖ್ಯ ಕಾರಣ ಭಾರತ. ಭೂತಾನ್‌ಗೆ ಈಗಾಗಲೇ ಭಾರತದಿಂದ ದೊಡ್ಡ ಪ್ರಮಾಣದ ನೆರವು ದೊರೆಯುತ್ತಿದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಟ್ಟದಿಂದ ನೆರವು ಸ್ಥಗಿತಗೊಂಡರೂ ಭಾರತದ ಬೆಂಬಲದಿಂದ ಸದೃಢವಾಗಿ ನಿಲ್ಲುವ ವಿಶ್ವಾಸದಲ್ಲಿದೆ ಭೂತಾನ್.
ಹೇಗೆ?
ನೆರೆಯ ಬಡ ರಾಷ್ಟ್ರವೊಂದು ಮಧ್ಯಮ ಆದಾಯದ ರಾಷ್ಟ್ರವೆಂಬ ಗೌರವಕ್ಕೆ ಪಾತ್ರವಾಗು ತ್ತಿರುವುದು ಭಾರತಕ್ಕೂ ಹೆಮ್ಮೆಯ ಸಂಗತಿ. ಅರುಣಾಚಲ ಪ್ರದೇಶ, ಅಸ್ಸಾಂ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಲದ ರಾಜ್ಯದ 699 ಕಿ.ಮೀ. ಉದ್ದದ ಗಡಿಯನ್ನು ಭಾರತವು ಭೂತಾನ್‌ನೊಂದಿಗೆ ಹಂಚಿಕೊಂಡಿದೆ. ಹೀಗಾಗಿ ಭಾರತದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ಭೂತಾನ್‌ಗೆ ಎಷ್ಟು ಅಗತ್ಯವೋ, ಭಾರತಕ್ಕೂ ಅಷ್ಟೇ ಮುಖ್ಯ. ಯಾಕೆಂದರೆ ಭಾರತವು ಭೂತಾನ್‌ನ ಅತೀದೊಡ್ಡ ವ್ಯಾಪಾರ ಪಾಲುದಾರ ಮತ್ತು ಅದರ ಸರಕುಗಳಿಗೆ ಮಾರುಕಟ್ಟೆ ಕ್ಷೇತ್ರವಾಗಿದೆ. ಭೂತಾನ್ ತನ್ನ ಹೆಚ್ಚಿನ ರಫ್ತು ವ್ಯವಹಾರಕ್ಕೆ ಭಾರತದ ಬಂದರುಗಳನ್ನೇ ಅವಲಂಬಿಸಿದೆ.
ಯಾವ ರೀತಿ?
ಭೂತಾನ್‌ನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬೆಂಬಲವಾಗಿ ನಿಂತಿರುವ ಭಾರತದಿಂದ ಜಲವಿದ್ಯುತ್‌ನ ಸಹಕಾರ ನೀಡಲಾಗುತ್ತಿದೆ. ಭೂತಾನ್ 1960ರಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಿದ ಅನಂತರ ಅಭಿವೃದ್ಧಿ ಹಾದಿಯಲ್ಲಿ ಹೆಜ್ಜೆ ಹಾಕಲಾರಂಭಿಸಿತು. ಅದರ ಅಭಿವೃದ್ಧಿಯಲ್ಲಿ ಭಾರತವೂ ಪಾಲು ಇದೆ.ಭೂತಾನ್‌ನ 12ನೇ ಪಂಚವಾರ್ಷಿಕ ಯೋಜನೆಗಾಗಿ 4,500 ಕೋ. ರೂ. ನೀಡಿದ್ದು, ಇದು ಭೂತಾನ್‌ಗೆ ಒಟ್ಟು ಹೊರರಾಷ್ಟ್ರ ಗಳಿಂದ ಸಿಗುವ ನೆರವಿನ ಶೇ. 73ರಷ್ಟಾಗಿದೆ. ಅಷ್ಟು ಮಾತ್ರವಲ್ಲದೆ ಭಾರತ ಸರಕಾರ ಭೂತಾನ್‌ನ ಕೃಷಿ, ನೀರಾವರಿ, ಆರೋಗ್ಯ, ಕೈಗಾರಿಕೆ, ರಸ್ತೆ ಸಾರಿಗೆ, ಇಂಧನ, ನಾಗರಿಕ ವಿಮಾನಯಾನ, ನಗರಾಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ವಿದ್ಯಾರ್ಥಿ ವೇತನ, ಶಿಕ್ಷಣ, ಸಂಸ್ಕೃತಿ ಕ್ಷೇತ್ರಕ್ಕೆ ವಿಶೇಷ ನೆರವು, ಸಹಕಾರ ನೀಡುತ್ತಲೇ ಬಂದಿದೆ. ಭೂತಾನ್‌ಗೆ ಭದ್ರತೆಯನ್ನು ನೀಡುವಲ್ಲಿಯೂ ಭಾರತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಭಾರತೀಯ ಸೇನಾ ಪಡೆ ಭೂತಾನ್‌ನ ಭದ್ರತಾ ಸಿಬಂದಿಗೆ ತರಬೇತಿಯನ್ನು ನೀಡುತ್ತಾರೆ.
ಎಷ್ಟು?
ಭೂತಾನ್‌ನ ಜಲವಿದ್ಯುತ್ ವಲಯದ ಬೆಳವಣಿಗೆಯಲ್ಲಿ ಭಾರತ ಹಣ ಮತ್ತು ಹೂಡಿಕೆಗಳು ನಿರ್ಣಾಯಕವಾಗಿವೆ. ಹೆಚ್ಚುತ್ತಿರುವ ಜಲವಿದ್ಯುತ್ ಬಳಕೆಯಿಂದಾಗಿ ಭೂತಾನ್‌ನೊಂದಿಗಿನ ಜಲ ವಿದ್ಯುತ್ ಸಹಕಾರಕ್ಕೆ ಭಾರತವು ಪ್ರತೀ ವರ್ಷ ಭೂತಾನ್‌ನ 8 ಲಕ್ಷ ಜನರ ತಲಾ ಆದಾಯದಲ್ಲಿ 3,800 ಡಾಲರ್ ಪಡೆಯುತ್ತಿದೆ. ಇದು ನೊರೆಹೊರೆಯ ಬೃಹತ್ ರಾಷ್ಟ್ರಗಳಿಗೆ ಹೋಲಿಸಿದರೆ ಶೇ. 30ರಷ್ಟು ಹೆಚ್ಚಾಗಿದೆ. 2,136 ಮೆಗಾ ವ್ಯಾಟ್‌ನ ಒಟ್ಟು ನಾಲ್ಕು ಜಲ ವಿದ್ಯುತ್ ಯೋಜನೆಗಳು ಭೂತಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಂದ ಭಾರತಕ್ಕೂ ವಿದ್ಯುತ್ ಸರಬರಾಜು ಮಾಡಲಾಗು ತ್ತಿದೆ. ಪಶ್ಚಿಮ ಬಂಗಾಲದ ಹೆಚ್ಚಿನ ಕೈಗಾರಿಕ ಚಟುವಟಿಕೆಗಳು ಈಗ ಭೂತಾನ್‌ನಿಂದ ಆಮದು ಮಾಡಿ ಕೊಳ್ಳಲಾಗುವ ವಿದ್ಯುತ್ ಅನ್ನು ಅವಲಂಬಿಸಿದೆ. ಭಾರತದ ಸಿಲಿಗುರಿ ಕಾರಿಡಾರ್ ಅನ್ನು ರಕ್ಷಿಸುವಲ್ಲಿ ಭೂತಾನ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಭಾರತದ ಈಶಾನ್ಯ ಪ್ರದೇಶಗಳನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಒಂದು ಸಣ್ಣ ಭೂಪ್ರದೇಶವಾಗಿದೆ.
ಹಿಂದೆ ಏನಾಗಿತ್ತು?
1947ರಲ್ಲಿ ಭಾರತದ ಸ್ವಾತಂತ್ರ್ಯವನ್ನು ಮೊದಲು ಗುರುತಿಸಿದ ರಾಷ್ಟ್ರಗಳಲ್ಲಿ ಭೂತಾನ್ ಕೂಡ ಒಂದಾಗಿತ್ತು. 1968ರಲ್ಲಿ ಭೂತಾನ್‌ನ ಥಿಂಪುವಿನಲ್ಲಿ ಭಾರತದ ರಾಯಭಾರಿ ಕಚೇರಿ ಸ್ಥಾಪನೆಯೊಂದಿಗೆ ಭೂತಾನ್ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಬಂಧವು ಪ್ರಾರಂಭವಾಯಿತು. ಇದರ ಮುಖ್ಯ ಉದ್ದೇಶ 1949ರಲ್ಲಿ ಉಭಯ ದೇಶಗಳ ನಡುವೆ ಸಹಿ ಮಾಡಲಾಗಿದ್ದ ಸ್ನೇಹ ಮತ್ತು ಸಹಕಾರ ಒಪ್ಪಂದವಾಗಿತ್ತು. 2007ರ ಫೆಬ್ರವರಿಯಲ್ಲಿ ಇದನ್ನು ಪರಿಷ್ಕರಿಸಲಾಗಿದೆ. ಇದರ ಪ್ರಯುಕ್ತ 2018ರಲ್ಲಿ ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಔಪಚಾರಿಕ ಸಂಬಂಧಗಳನ್ನು ಗುರುತಿಸಲು ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು. ಉನ್ನತ ಮಟ್ಟದ ಅಧಿಕಾರಿಗಳ ಭೇಟಿ, ಸಂವಾದಗಳಿಂದ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಏರ್ಪಟ್ಟಿದೆ.
ಈಗಿನ ಪರಿಸ್ಥಿತಿ?
2018ರಿಂದ ಭಾರತವು ಭೂತಾನ್‌ನ ಅತೀ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಎರಡು ರಾಷ್ಟ್ರಗಳ ನಡುವೆ ವಾರ್ಷಿಕ 9,227 ಕೋಟಿ ರೂ. ಹೆಚ್ಚಿನ ವಹಿವಾಟು ನಡೆಯುತ್ತಿದೆ. ಭಾರತದಿಂದ ಭೂತಾನ್‌ಗೆ ಖನಿಜ ಉತ್ಪನ್ನಗಳು, ಯಂತ್ರೋಪಕರಣಗಳು, ಯಾಂತ್ರಿಕ ಉಪಕರಣಗಳು, ವಿದ್ಯುತ್ ಉಪಕರಣಗಳು, ಲೋಹ, ವಾಹನಗಳು, ತರಕಾರಿ ಉತ್ಪನ್ನಗಳು, ಪ್ಲಾಸ್ಟಿಕ್, ಲೇಖನ ಸಾಮಗ್ರಿಗಳು ರಫ್ತಾಗುತ್ತಿವೆ. ಭೂತಾನ್‌ನಿಂದ ಭಾರತಕ್ಕೆ ವಿದ್ಯುತ್, ಫೆರೋ ಸಿಲಿಕಾನ್, ಪೋರ್ಟ್‌ಲ್ಯಾಂಡ್ ಸಿಮೆಂಟ್, ಡಾಲಮೈಟ್, ಕ್ಯಾಲ್ಸಿಯಂನ ಕಾರ್ಬೈಡ್‌ಗಳು, ಸಿಲಿಕಾನ್ ಕಾರ್ಬೈಡ್‌ಗಳು, ಸಿಮೆಂಟ್ ಕ್ಲಿಂಕರ್‌ಗಳು, ಮರ, ಮರದ ಉತ್ಪನ್ನ, ಆಲೂಗುಡ್ಡೆ, ಏಲಕ್ಕಿ, ಹಣ್ಣಿನ ಉತ್ಪನ್ನಗಳು ಆಮದಾಗುತ್ತಿವೆ. ಭೂತಾನ್ ವಿದ್ಯಾರ್ಥಿಗಳಿಗೆ ಭಾರತ ಅತ್ಯಂತ ಅಚ್ಚುಮೆಚ್ಚಿನ ಶೈಕ್ಷಣಿಕ ತಾಣ. ಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಪ್ರತೀ ವರ್ಷ ದಾಖಲಾಗುತ್ತಾರೆ. ಅವರಿಗೆ ಸರಕಾರದಿಂದ ವಿದ್ಯಾರ್ಥಿವೇತನವನ್ನೂ ಒದಗಿಸಲಾಗುತ್ತಿದೆ.
ಮುಂದೇನು ?
ಕೊರೊನಾ ವೈರಸ್ ಸಾಂಕ್ರಾಮಿಕ ಹಾಗೂ ಆ ಬಳಿಕ ಜಾಗತಿಕ ಮಟ್ಟದಲ್ಲಿ ಆದ ಹಣದುಬ್ಬರದ ಪರಿಣಾಮ ಎಲ್ಲ ರಾಷ್ಟ್ರಗಳಿಗೂ ತಟ್ಟಿದೆ. ಹೀಗಾಗಿ ದೇಶದಿಂದ ದೊಡ್ಡ ಪ್ರಮಾಣದಲ್ಲಿ ಹಣ ಹೊರಹೋಗುವುದನ್ನು ನಿಲ್ಲಿಸಲು ಬಹುತೇಕ ಎಲ್ಲ ರಾಷ್ಟ್ರಗಳ ಸರಕಾರವು ಆಮದಿನ ಮೇಲೆ ನಿಯಂತ್ರಣ ಹೇರುತ್ತಿವೆ. ಇದು ಹೊಂದಾಣಿಕೆ ಮಾಡಿ ಜೀವನ ನಡೆಸಲು ಪ್ರೇರೇಪಣೆ ನೀಡುತ್ತಿದೆ. ಹೀಗಿರುವಾಗ ಅನುದಾನಗಳ ಲಭ್ಯತೆಯನ್ನು ಆಧರಿಸಿ ಖರ್ಚು ಮಾಡಬೇಕಿದೆ. ಈಗಷ್ಟೇ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಡುತ್ತಿರುವ ಭೂತಾನ್ ಪಾಲಿಗೆ ಭಾರತ ಬಹುದೊಡ್ಡ ಶಕ್ತಿಯಾಗಿದೆ. ಈ ಕಾರಣದಿಂದಾಗಿಯೇ ಭೂತಾನ್‌ನ ನಾಯಕರು ಅಭಿವೃದ್ಧಿಶೀಲ ರಾಷ್ಟ್ರವಾಗಿ ಗುರುತಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಇದು ಭಾರತದ ಪಾಲಿಗೂ ವರದಾನವಾಗಲಿದೆ. ಭೂತಾನ್ ಪುಟ್ಟ ರಾಷ್ಟ್ರವಾದರೂ ಮುಂದಿನ ದಿನಗಳಲ್ಲಿ ಅದರ ಸಂಪೂರ್ಣ ಬೆಂಬಲ, ಸಹಕಾರ ಮತ್ತು ನೆರವು ಭಾರತದ ಪಾಲಿಗೆ ಇರುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಭೂತಾನ್ ಇನ್ನಷ್ಟು ಅಭಿವೃದ್ಧಿ ಹೊಂದಿ ಸ್ವಾವಲಂಬಿ ರಾಷ್ಟ್ರವಾದಲ್ಲಿ ಭಾರತಕ್ಕೂ ಪ್ರಬಲ ಮಿತ್ರ ಮಾತ್ರವಲ್ಲದೆ ನೆರೆರಾಷ್ಟ್ರವೊಂದು ದೊರಕಿದಂತಾಗಲಿದೆ.
- ವಿದ್ಯಾ ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.