ಶಿಕ್ಷಣ ಸಂವಾದ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತೀ ದೊಡ್ಡ ಶಿಕ್ಷಣ ಕ್ರಾಂತಿ!
Team Udayavani, Aug 19, 2020, 6:15 AM IST
ಸಾಂದರ್ಭಿಕ ಚಿತ್ರ
“”ಲಾರ್ಡ್ ಮೆಕಾಲೆ ಶಿಕ್ಷಣ ಪದ್ಧತಿಯಿಂದ ಯಾವಾಗ ಭಾರತ ಮುಕ್ತವಾಗುತ್ತದೆಯೋ ಆಗ ಈ ರಾಷ್ಟ್ರದ ಯುವ ಪೀಳಿಗೆಯ ಎದುರು ಭವ್ಯ ಭರತ ಖಂಡದ ಪುನರು ತ್ಥಾನದ ಆಶಾ ದೀವಟಿಗೆ ಪ್ರಜ್ವಲಿಸುತ್ತದೆ” ಎನ್ನುವುದು ಹಿರಿಯ ದಾರ್ಶನಿಕರು ಹೇಳುತ್ತಿದ್ದ ಮಾತು. ಅದಕ್ಕೆ ಈಗ ಕಾಲ ಪಕ್ವವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಯಾವುದೇ ಒಂದು ಕೇಂದ್ರ ಸರಕಾರ ರಾಷ್ಟ್ರದ ಶಿಕ್ಷಣ ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಹೊರಟಿರುವುದನ್ನು ಕೇಳುವಾಗಲೇ ಮೈಮನ ಪುಳಕಗೊಳ್ಳುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ವೈಶಿಷ್ಟ್ಯ ಏನೆಂದರೆ ಇದನ್ನು ಅಂತಿಮಗೊಳಿಸುವ ಮೊದಲು 2.5 ಲಕ್ಷ ಗ್ರಾಮ ಪಂಚಾಯತ್, 6,600 ಬ್ಲಾಕ್, 6000 ನಗರ ಪ್ರದೇಶದ ಸ್ಥಳೀಯಾಡಳಿತ ಸಂಸ್ಥೆಗಳನ್ನು, 676 ಜಿಲ್ಲೆಗಳನ್ನು ಸೇರಿಸಿ ಅಭಿಪ್ರಾಯ ಕ್ರೋಡೀಕರಿಸಲಾಗಿದೆ. ಇದರ ಮೂಲಪ್ರತಿಗಳು 22 ಭಾಷೆಗಳಲ್ಲಿ ಅನುವಾದಗೊಂಡಿವೆ. ರಾಷ್ಟ್ರದ ಎಲ್ಲ ರಾಜ್ಯ ಸರಕಾರಗಳೊಂದಿಗೆ ಸಂವಹನ ನಡೆಸಲಾಗಿದೆ. ಸಂಸದರು ಕೊಟ್ಟ ಸಲಹೆಗಳನ್ನು ಅಳವಡಿಸಲಾಗಿದೆ. ದಿಲ್ಲಿಯ ಜೆಎನ್‌ಯುನಲ್ಲಿ ಒಂದು ದಿನದ ಕಾರ್ಯಗಾರ ನಡೆಸಿ ಅಲ್ಲಿನ ಉಪನ್ಯಾಸಕರೊಂದಿಗೆ ಸಮಾಲೋಚನೆ ಕೂಡ ನಡೆಸಲಾಗಿದೆ. ಶಿಕ್ಷಣ ತಜ್ಞರು ಕೊಟ್ಟ ಸಲಹೆಗಳನ್ನು ಸಂಗ್ರಹಿಸಿ ಪೂರ್ಣ ಪ್ರಮಾಣದಲ್ಲಿ ಒಂದು ಮಾದರಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಅನುಷ್ಟಾನಕ್ಕೆ ತರುವ ಈ ಹೊತ್ತಿನಲ್ಲಿ ಅದನ್ನು ನಮ್ಮ ಮುಂದಿನ ಪೀಳಿಗೆ ಅರ್ಥ ಮಾಡಿಕೊಳ್ಳುವ ಆವಶ್ಯಕತೆ ಇದೆ.
ರಾಷ್ಟ್ರೀಯ ಶಿಕ್ಷಣ ನೀತಿ ಬಾಲ್ಯದಿಂದ ಉನ್ನತ ಶಿಕ್ಷಣದ ತನಕದ ಕಲಿಯುವ ಶೈಲಿಯನ್ನೇ ಬದಲಾಯಿಸಲಿದೆ. ಮಕ್ಕಳಿಗೆ ಹೇಗೆ ಕಲಿಸಿದರೆ ಅವರಿಗೆ ಮುಂದೆ ಅನುಕೂಲವಾಗುತ್ತದೆ ಎನ್ನುವುದರ ಕುರಿತು ಆಳವಾದ ಅಧ್ಯಯನವನ್ನು ವಿಶ್ವವಿದ್ಯಾನಿಲಯಗಳಲ್ಲಿ ಮಾಡಲಾಗಿದೆ. ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಯಾವ ಹಂತದಲ್ಲಿ ಹೇಗೆ ಬಳಸಬೇಕು ಮತ್ತು ಪುಸ್ತಕವನ್ನು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಮಾಹಿತಿಯನ್ನೇ ಜ್ಞಾನ ಎಂದು ಪರಿಗಣಿಸುವ ಇವತ್ತಿನ ಶಿಕ್ಷಣ ಪದ್ಧತಿಗೆ ಅಂತ್ಯ ಹಾಡುವ ಅಗತ್ಯ ಈಗ ಬಂದಿದೆ. ಇಲ್ಲಿ ಭವಿಷ್ಯದಲ್ಲಿ ಶಿಕ್ಷಕರ ಕಲಿಸುವ ಗುಣಮಟ್ಟ ವನ್ನು ಕೂಡ ಹೆಚ್ಚಿಸುವ ಅಗತ್ಯವನ್ನು ತಜ್ಞರು ಅರಿತು ಕೊಂಡಿದ್ದಾರೆ. ಹಾಗಂತ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ ಮಕ್ಕಳ ಭವಿಷ್ಯವನ್ನು ಅವರ ಅಭಿರುಚಿಗೆ ಅನುಗುಣವಾಗಿ ಉತ್ತಮಪಡಿಸುವುದು ಮಾತ್ರವಲ್ಲ, ಇಡೀ ದೇಶದಲ್ಲಿ ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ಅವರಿಗೆ ಭವಿಷ್ಯವನ್ನು ತೋರಿಸುವುದು ಕೂಡ ಆಗಿದೆ. ರಾಷ್ಟ್ರೀಯ ಅಂಕಿಅಂಶಗಳ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಶೇ. 12 ಹೆಣ್ಣುಮಕ್ಕಳು ಸಣ್ಣವಯಸ್ಸಿ ನಲ್ಲಿಯೇ ಮದುವೆಯ ಕಾರಣಕ್ಕೆ ಶಿಕ್ಷಣವನ್ನು ಅನಿವಾರ್ಯವಾಗಿ ಮೊಟಕುಗೊಳಿಸು ತ್ತಿದ್ದಾರೆ. ಇನ್ನು ಶೇ. 32 ಹುಡುಗಿಯರು ಮನೆಯ ಪರಿಸ್ಥಿತಿಯ ಕಾರಣದಿಂದ ಶಾಲೆಗೆ ಗುಡ್ ಬೈ ಹೇಳುತ್ತಿದ್ದಾರೆ. ಅಂದಾಜು ಶೇ. 35 ಗಂಡು ಮಕ್ಕಳು ಆರ್ಥಿಕ ಕಾರಣಗಳಿಂದ ಮತ್ತು ಉದ್ಯೋಗಕ್ಕೆ ಸೇರಬೇಕಾದ ಅನಿವಾರ್ಯತೆಯಿಂದ ಶಿಕ್ಷಣ ಪೂರ್ಣ ಗೊಳಿಸುವ ಮೊದಲೇ ಬಿಟ್ಟುಬಿಡುತ್ತಿದ್ದಾರೆ. ಇದನ್ನು ತಪ್ಪಿಸುವುದು ಹೇಗೆ ಎನ್ನುವುದಕ್ಕೆ ಇಲ್ಲಿ ಉತ್ತರವಿದೆ. ಮಕ್ಕಳು ಹೀಗೆ ಅರ್ಧದಲ್ಲಿಯೇ ಶಿಕ್ಷಣವನ್ನು ಕೈಬಿಡುವು ದನ್ನು ತಪ್ಪಿಸಲು ಈ ರಾಷ್ಟ್ರೀಯ ಶಿಕ್ಷಣ ನೀತಿಯ ಅಗತ್ಯ ಕಂಡುಬರುತ್ತದೆ.
ಮೊದಲನೆಯದಾಗಿ ಎಸ್ ಸಿ/ಎಸ್‌ಟಿ/ಇತರ ಹಿಂದುಳಿದ ವರ್ಗದಲ್ಲಿರುವ ಮಕ್ಕಳ ಪೋಷಕರು ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸುತ್ತಿದ್ದಾರೆ ಎಂದಾದರೆ ಅಂತಹ ಸಂದರ್ಭದಲ್ಲಿ ಸೂಕ್ತ ಅನುದಾನಗಳನ್ನು ಬಳಸಿ ಅಂತಹ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯ ವಾಹಿನಿಗೆ ತರಬೇಕಾಗುತ್ತದೆ. ಇನ್ನು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಕೂಡ ಇಲ್ಲಿ ಮುಖ್ಯವಾಗಿದೆ. ಅವರು ತಮ್ಮ ಸಂಸ್ಥೆಯಿಂದ ಉಚಿತ ಸೀಟುಗಳನ್ನು ಮತ್ತು ಸ್ಕಾಲರ್‌ಶಿಪ್ ಗಳನ್ನು ಯಥೇಚ್ಚವಾಗಿ ನೀಡಿದರೆ ಆಗ ಉನ್ನತ ಶಿಕ್ಷಣದ ಗುರಿಯಿಟ್ಟುಕೊಂಡವರಿಗೆ ಅನುಕೂಲವಾಗುತ್ತದೆ. ಇನ್ನು ಈ ಹೊಸ ನೀತಿಯಿಂದ ದೂರ ಶಿಕ್ಷಣವನ್ನು ಕೂಡ ಉನ್ನತ ಶಿಕ್ಷಣ ರಂಗದಲ್ಲಿ ಪಡೆಯಬಹುದಾಗಿದೆ. ಇದರಿಂದ ಕಾಲೇಜುಗಳಿಗೆ ದಾಖಲಾಗುವವರ ಸಂಖ್ಯೆ 50% ಹೆಚ್ಚಳವಾಗುತ್ತದೆ ಎನ್ನುವುದು ಈ ನೀತಿಯ ಮತ್ತೂಂದು ಉದ್ದೇಶ. ಮೂರನೆಯ ಪ್ರಮುಖ ಅಂಶವೆಂದರೆ ವೃತ್ತಿಪರ ಶಿಕ್ಷಣವನ್ನು ಪಡೆಯಬಯಸುವ ವಿದ್ಯಾರ್ಥಿಗಳು ಅಗತ್ಯಬಿದ್ದಲ್ಲಿ ಕೆಲವು ಸಮಯ ಶಿಕ್ಷಣವನ್ನು ಮೊಟಕುಗೊಳಿಸಿ ಅನಂತರ ಅನುಕೂಲವಾ ದಾಗ ಮತ್ತೆ ಅದೇ ಕೋರ್ಸನ್ನು ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದಲೇ ಮುಂದುವರಿಸಬಹುದಾಗಿದೆ.
ಇನ್ನು ಲಿಂಗತ್ವ ಸಮಾನ ಶಿಕ್ಷಣ ನಿಧಿಯನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಲಿದ್ದು, ಈ ಹಣವನ್ನು ರಾಜ್ಯಗಳು ತಮ್ಮಲ್ಲಿ ತಳಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ಹುಡುಗಿಯರಿಗೆ ಮತ್ತು ದ್ವಿಲಿಂಗಿಗಳ ಮಕ್ಕಳಿಗೆ ನೀಡಲು ಅನುಕೂಲವಾಗುವ ವ್ಯವಸ್ಥೆಗೆ ಬಳಸಬೇಕಾಗುತ್ತದೆ. ಅರ್ಧದಲ್ಲಿಯೇ ಶಾಲೆ ಬಿಡುವ ಮಕ್ಕಳಿಗೆ ಅದರಲ್ಲಿಯೂ ವಿಶೇಷವಾಗಿ ಹೆಣ್ಣುಮಕ್ಕಳನ್ನು ಗುರುತಿಸಿ ಅವರಿಗೆ ಸುರಕ್ಷಿತ ವಾತಾವರಣದಲ್ಲಿ ಮಾದರಿ ಶಿಕ್ಷಣ, ಉಚಿತ ಹಾಸ್ಟೆಲ್ ವ್ಯವಸ್ಥೆಗಾಗಿ ಹೊಸ ಹಾಸ್ಟೆಲ್ ಗಳ ನಿರ್ಮಾಣ ಮಾಡಿ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಯಾವ ಹೆಣ್ಣು ಜೀವ ಕೂಡ ಶಿಕ್ಷಣ ದಿಂದ ವಂಚಿತವಾಗಬಾರದು ಎನ್ನುವ ವ್ಯವಸ್ಥೆಯನ್ನು ಪ್ರತಿ ರಾಜ್ಯ ಕೂಡ ಮಾಡಬೇಕಾಗಿದೆ.
ವಿಶೇಷ ಚೇತನ ಮಕ್ಕಳಿಗಾಗಿ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣವನ್ನು ಕಲ್ಪಿಸಿ ಅವರು ಶಾಲೆಯ ಆಕರ್ಷಣೆಗೆ ಒಳಗಾಗುವಂತೆ ಮಾಡಲು ಈ ನೀತಿ ರೂಪುರೇಶೆ ಸಿದ್ಧಪಡಿಸಿದೆ. ವಿಕಲಚೇತನ ಮಕ್ಕಳು ಕೇವಲ ಶಾಲೆಯಲ್ಲಿ ಮಾತ್ರ ಕಲಿತು ಉನ್ನತ ವಿದ್ಯಾಭ್ಯಾಸದ ಅವಕಾಶ ಇಲ್ಲದೆ ತಮ್ಮ ಗುರಿಯನ್ನು ಕೈಬಿಡಬಾರದು ಎನ್ನುವ ಕಾರಣಕ್ಕೆ ಅವರಿಗೆ ಸ್ಕಾಲರ್‌ಶಿಪ್ ಒದಗಿಸಿ ಅವರ ಭವಿಷ್ಯವನ್ನು ಭದ್ರಗೊಳಿಸುವ ಗುರಿ ಈ ನೀತಿಯಲ್ಲಿದೆ.
ಈ ರಾಷ್ಟ್ರೀಯ ಶಿಕ್ಷಣ ನೀತಿಯು ಮಕ್ಕಳು ಬಾಲ್ಯದ ಶಿಕ್ಷಣವನ್ನು ಅವರದ್ದೇ ಮಾತೃಭಾಷೆಯಲ್ಲಿ ಪಡೆಯಲು ಯೋಜಿಸುತ್ತಿದೆ. ಒಂದು ವೇಳೆ ಮಾತೃಭಾಷೆಯಲ್ಲಿ ಸಾಧ್ಯವಾಗದಿದ್ದರೆ ಕನಿಷ್ಟ ಆ ರಾಜ್ಯದ ಸ್ಥಳೀಯ ಭಾಷೆಯಲ್ಲಾದರೂ ಆ ಮಕ್ಕಳು ತಮ್ಮ ಆರಂಭಿಕ ಶಿಕ್ಷಣವನ್ನು ಪಡೆಯಬೇಕು ಎನ್ನುವುದು ಇದರ ಉದ್ದೇಶ. ಮಗು ತನ್ನ ಬುದ್ಧಿಮತ್ತೆಯನ್ನು ಹೆಚ್ಚಿಸಲು ಇದು ಸಹಾಯಕಾರಿಯಾಗುತ್ತದೆ ಅಲ್ಲದೆ ಮಗು ಸಕಾರಾತ್ಮಕವಾಗಿ ಯೋಚನೆ ಮಾಡಲು ಮಾತೃಭಾಷೆ ಪೂರಕವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಮಾತೃಭಾಷಾ ಶಿಕ್ಷಣ ಅಥವಾ ರಾಜ್ಯಭಾಷಾ ಶಿಕ್ಷಣದಿಂದ ಮಗುವಿನ ಸರ್ವತೋಮುಖ ಬೆಳವಣಿಗೆ ಮಾತ್ರವಲ್ಲ ಆಯಾ ರಾಜ್ಯ ಭಾಷೆ ಕೂಡ ಬೆಳೆಯುತ್ತದೆ ಮತ್ತು ಅದರೊಂದಿಗೆ ಭಾಷಾ ಸಾಹಿತ್ಯದ ಬೆಳವಣಿಗೆಗೂ ಇದು ನೆರವಾಗುತ್ತದೆ. ತ್ರಿಭಾಷಾ ಕಲಿಕೆಯನ್ನು ವಿದ್ಯಾಭ್ಯಾಸದಲ್ಲಿ ಅಳವಡಿಸಿದರೆ ಅದರಿಂದ ರಾಷ್ಟ್ರದ ಎಕತೆಗೂ ಅದು ನೆರವಾಗುತ್ತದೆ. ಭಾರತದಂತಹ ಭಾಷಾ ಶ್ರೀಮಂತ ನಾಡಿನಲ್ಲಿ ಖಂಡಿತವಾಗಿ ಮನಸ್ಸು ಮಾಡಿದರೆ ಸಾಧ್ಯವಿದೆ ಎನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಒಟ್ಟು ಆಶಯವೂ ಆಗಿದೆ.
ಇನ್ನು ಹೇಗೆ ಈ ಹೊಸ ಶಿಕ್ಷಣ ರೂಪಗೊಂಡಿದೆ ಎನ್ನುವುದನ್ನು ಅರಿತುಕೊಳ್ಳೋಣ. ಇನ್ನು ಮುಂದೆ 10+2 ಇರುವುದಿಲ್ಲ. ಭವಿಷ್ಯದಲ್ಲಿ 5+3+3+4 ಎಂದು ಶಿಕ್ಷಣ ಪದ್ಧತಿಯನ್ನು ವಿಭಾಗಿಸಲಾಗುತ್ತದೆ. ಯಾವುದೇ ಪದವಿ ತರಗತಿಯು ನಾಲ್ಕು ವರ್ಷದ್ದು ಮಾತ್ರ ಆಗಲಿದೆ. ಆರನೇ ತರಗತಿಯಿಂದ ಮಕ್ಕಳು ವೃತ್ತಿಪರ ಶಿಕ್ಷಣಕ್ಕೆ ಬೇಕಾದ ಪಠ್ಯವನ್ನು ಆಯ್ದುಕೊಳ್ಳಬಹುದು. ಪದವಿ ತರಗತಿಯಲ್ಲಿ ಪ್ರಮುಖ ಪಠ್ಯ ಮತ್ತು ಉಪಪಠ್ಯ ಎಂದು ವರ್ಗೀ ಕರಿಸಲಾಗಿದ್ದು, ಒಬ್ಬ ವಿಜ್ಞಾನದ ವಿದ್ಯಾರ್ಥಿ ಭೌತಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡರೆ ಸಂಗೀತ ಉಪಪಠ್ಯವನ್ನಾಗಿ ತೆಗೆದುಕೊಳ್ಳಬಹುದು. ಹೀಗೆ ಬಹಳಷ್ಟು ಆಯ್ಕೆಗಳು ಲಭ್ಯವಿರುತ್ತದೆ. ಶಾಲೆಗಳಲ್ಲಿ ವರ್ಷಕ್ಕೆ ಎರಡು ಸೆಮಿಸ್ಟರ್ ಮಾಡಿ ಪರೀಕ್ಷೆ ನಡೆಸಲಾಗುತ್ತದೆ. ಶಿಕ್ಷಣ ಮಕ್ಕಳ ಭವಿಷ್ಯದ ಕುರಿತಾಗಿ ಹೆಚ್ಚೆಚ್ಚು ಪ್ರಾಕ್ಟಿಕಲ್ ಮತ್ತು ಜ್ಞಾನ ಉಪಯುಕ್ತವಾಗಬೇಕು ಎನ್ನುವ ಅರ್ಥದಲ್ಲಿ ಪಠ್ಯ ಸಿದ್ಧಪಡಿಸಲಾಗುತ್ತದೆ. ಪದವಿ ಕಲಿಯುವ ವಿದ್ಯಾರ್ಥಿ ಒಂದು ವರ್ಷ ಮಾತ್ರ ಕಲಿತು ಹೊರಗೆ ಬಂದರೆ ಅವರಿಗೆ ಬೇಸಿಕ್ ಪ್ರಮಾಣಪತ್ರ, ಎರಡು ವರ್ಷ ಮುಗಿಸಿದರೆ ಡಿಪ್ಲೋಮಾ ಪ್ರಮಾಣಪತ್ರ ಹಾಗೂ ಪೂರ್ಣ ಅವಧಿ ಮುಗಿಸಿದರೆ ಪದವಿ ಪ್ರಮಾಣ ಪತ್ರ ಸಿಗುತ್ತದೆ. ವಿದ್ಯಾರ್ಥಿ ಅರ್ಧದಲ್ಲಿಯೇ ಪದವಿ ವಿದ್ಯಾಭ್ಯಾಸ ಮೊಟಕುಗೊಳಿಸಿದರೆ ಆತ ನಿರಾಶನಾಗ ಬೇಕಿಲ್ಲ. ಹೀಗೆ ಹತ್ತು ಹಲವಾರು ಬದಲಾವಣೆಗಳೊಂದಿಗೆ ಈ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಲಿದೆ. ಹೊಸ ಮನ್ವಂತರಕ್ಕೆ ನಮ್ಮ ದೇಶ ಸಾಕ್ಷಿಯಾಗಲಿದೆ. ಅದಕ್ಕೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ನಾಂದಿ ಹಾಡಿದ್ದಾರೆ!!
ನಳಿನ್ ಕುಮಾರ್ ಕಟೀಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.