ಬಿಜೆಪಿಯ ಛಲದಂಕಮಲ್ಲ- ಬಿಎಸ್‌ವೈ
Team Udayavani, Jul 24, 2019, 5:00 AM IST
”ಲೋಕಸಭೆ ಚುನಾವಣೆ ನಂತರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ… ಅಪ್ಪ ಮಕ್ಕಳು ಸೇರಿ ಕಾಂಗ್ರೆಸ್ ಪಕ್ಷವನ್ನು ಹೇಳಹೆಸರಿಲ್ಲದಂತೆ ಮಾಡುತ್ತಾರೆ, ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಅಧಿಕ ಕ್ಷೇತ್ರಗಳನ್ನು ಗೆದ್ದು ಮತ್ತೆ ಮುಖ್ಯಮಂತ್ರಿ ಆಗಿ ಬರುತ್ತೇನೆ…”
ಬಿ.ಎಸ್.ಯಡಿಯೂರಪ್ಪ 2018 ಮೇ 19 ರಂದು ವಿಧಾನಸ ಭೆಯಲ್ಲಿ ವಿಶ್ವಾಸ ಮತ ಪ್ರಕ್ರಿಯೆಗೂ ಮುನ್ನ ಹೇಳಿದ ಆತ್ಮವಿಶ್ವಾಸದ ಮಾತುಗಳಿವು. ಬಿಎಸ್‌ವೈ ಅವರು ಅಂದು ವಿಧಾನಸಭೆಯಲ್ಲಿ ಏನೇನೂ ಹೇಳಿದ್ದರೋ.. ಅದೀಗ ಬಹುತೇಕ ನಿಜವಾಗಿದೆ. ಮೈತ್ರಿ ಪಕ್ಷವನ್ನು ಲೋಕಸಭೆಯಲ್ಲಿ ಒಂದಂಕಿಗೆ ತಂದು ನಿಲ್ಲಿಸುತ್ತೇನೆ ಎಂದಿದ್ದರು. ಅದರಂತೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಕೇವಲ ಒಂದೊಂದು ಸ್ಥಾನ ಮಾತ್ರ ಗೆಲ್ಲವುದು ಸಾಧ್ಯವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು 2018ರ ಮೇ 17ರಂದು ಪ್ರಮಾಣವಚನ ಸ್ವೀಕರಿಸಿ, ಮೂರೇ ದಿನಕ್ಕೆ ಮುಖ್ಯಮಂತ್ರಿಯಾಗಿದ್ದರೂ, ಅಧಿಕಾರದಿಂದ ಇಳಿದ ಮರು ಕ್ಷಣವೇ ಕೇಂದ್ರ ನಾಯಕರೊಂದಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ಆರಂಭಿಸಿದರು. ಅದು ಚರ್ಚೆಗೆ ಸೀಮಿತವಾಗಲಿಲ್ಲ. ರಾಜ್ಯದ ನಾಯಕರು ಮಾಡಬೇಕಾದ ಪ್ರಯತ್ನದ ಪಾಲೋಅಫ್ ಕೂಡ ಇವರೇ ಮಾಡುತ್ತಿದ್ದರು. ಈ ಪ್ರಯತ್ನದಲ್ಲಿ ನಾಲ್ಕೈದು ಬಾರಿ ವಿಫಲರಾದರೂ, ಕೊನೆಗೂ ಜಯ ತಮ್ಮದೆ ಎಂಬುದನ್ನು ಪ್ರತಿಪಕ್ಷದ ಸ್ಥಾನದಲ್ಲೇ ಕುಳಿತು ತೋರಿಸಿಕೊಟ್ಟರು.
ಹೋರಾಟದ ಹಾದಿ: 1943ರ ಫೆಬ್ರವರಿ 27ರಂದು ಮಂಡ್ಯ ಜಿಲ್ಲೆಯ ಬುಕನಕೆರೆಯಲ್ಲಿ ಜನಿಸಿದ ಬುಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ( ಬಿ.ಎಸ್.ಯಡಿಯೂರಪ್ಪ) ಅವರು, ಮಂಡ್ಯ ಜಿಲ್ಲೆಯಲ್ಲಿ ಬಾಲ್ಯ ಹಾಗೂ ವಿದ್ಯಾಭ್ಯಾಸವನ್ನು ಪೂರೈಸಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತ ಹುದ್ದೆಗೆ ಸೇರಿಕೊಳ್ಳುತ್ತಾರೆ. ವೃತ್ತಿ ಬದಲಾವಣೆಗಾಗಿ ಶಿವಮೊಗ್ಗಕ್ಕೆ ಬಂದ ಅವರು ಶಿಕಾರಿಪುರವನ್ನೇ ತಮ್ಮ ಕಾರ್ಯ ಕ್ಷೇತ್ರವಾಗಿ ಮಾಡಿಕೊಂಡರು. ಶಿಕಾರಿಪುರದಿಂದ ಆರಂಭವಾದ ಅವರ ಹೋರಾಟದ ದಿನಗಳು ಇಂದಿಗೂ ಹಾಗೇ ಇದೆ. ರೈತರಿಗಾಗಿ ಹೋರಾಟ ಆರಂಭಿಸಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವವರೆಗೂ ರಾಜಕೀಯವಾಗಿ ಹತ್ತಾರು ರೀತಿಯ ಹೋರಾಟ ಮಾಡಬೇಕಾಯಿತು. ಸ್ವಪಕ್ಷೀಯರಿಂದಲೇ ಎದುರಾಗಿದ್ದ ಸವಾಲುಗಳನ್ನು ಎದೆಗುಂದದೆ ಸ್ವೀಕರಿಸಿ, ಜಯ ಸಾಧಿಸಿದರು.
ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ನಡೆಸಿ 45 ದಿನಗಳ ಜೈಲುವಾಸವನ್ನು ಅನುಭವಿಸಿದರು. ಶಿವಮೊಗ್ಗ ಜಿಲ್ಲೆಯ ರೈತರಿಗೂ ಇಂದಿಗೂ ಕಗ್ಗಂಟಾಗಿರುವ ಬಗರ್‌ಹುಕುಂ ಭೂ ವಿವಾದದ ಕುರಿತು ಬಿ.ಎಸ್.ಯಡಿಯೂರಪ್ಪ ಅಂದೇ ಹೋರಾಟ ಮಾಡಿದ್ದರು. ದಿನಗೂಲಿ ನೌಕರರ ಚಳವಳಿಯ ನೇತೃತ್ವ ವಹಿಸಿ ರಾಜ್ಯಾದ್ಯಂತ ಹೋರಾಟ ರೂಪಿಸಿದ ಖ್ಯಾತಿಯು ಯಡಿಯೂರಪ್ಪ ಅವರಿಗೆ ಇದೆ.
ರಾಜಕೀಯ ಹೋರಾಟ: 1975ರಲ್ಲಿ ಜನಸಂಘದಿಂದ ಶಿಕಾರಿಪುರ ಪುರಸಭಾ ಸದಸ್ಯರಾಗುವುದರೊಂದಿಗೆ ಬಿ.ಎಸ್.ಯಡಿಯೂರಪ್ಪ ಅವರ ಮುಖ್ಯವಾಹಿನಿಯ ರಾಜಕಾರಣದ ದಿನಗಳು ಆರಂಭವಾದವು. 1977ರಲ್ಲಿ ಶಿಕಾರಿಪುರ ಪುರಸಭೆಯ ಅಧ್ಯಕ್ಷರಾದರು. 1983ರಲ್ಲಿ ಮೊದಲ ಬಾರಿಗೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. 1985ರಲ್ಲಿ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. ಅಷ್ಟೊತ್ತಿಗೆ ಬಿ.ಎಸ್.ಯಡಿಯೂರಪ್ಪ ಹೋರಾಟದ ನಡೆಯಿಂದಾಗಿ ರಾಜ್ಯ ನಾಯಕರಾಗಿ ರೂಪುಗೊಂಡಿದ್ದರು. 1988ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದರು. 1989ರ ಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದರು. 1994ರಲ್ಲೂ ವಿಧಾನಸಭೆ ಪ್ರವೇಶಿಸಿ ವಿರೋಧಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು. 1999ರಲ್ಲಿ ಮತ್ತೂಮ್ಮೆ ರಾಜ್ಯಾಧ್ಯಕ್ಷ, ಬಿಜೆಪಿಯ ಅಘೋಷಿತ ಮುಖ್ಯಮಂತ್ರಿ ಅಭ್ಯರ್ಥಿಯಾದರು. ಪಕ್ಷವನ್ನು ಇನ್ನಷ್ಟು ವೇಗವಾಗಿ ಬೆಳೆಸಿದ್ದರಲ್ಲದೆ, ಹೆಚ್ಚು ಮಂದಿ ಶಾಸಕರು ಪಕ್ಷದಿಂದ ವಿಧಾನಸಭೆಗೆ ಬರುವಂತೆ ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.
2000ರಿಂದ 2004ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು, 2004ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. ಕಾಂಗ್ರೆಸ್ -ಜೆಡಿಎಸ್ ಸರ್ಕಾರದಲ್ಲಿ ಪ್ರತಿಪಕ್ಷ ನಾಯಕರಾಗಿದ್ದರು. 2006ರಲ್ಲಿ ಅಸ್ತಿತ್ವಕ್ಕೆ ಬಂದ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಮೊದಲ ಬಜೆಟ್ ಮಂಡನೆ ಮಾಡಿದರು. ಜೆಡಿಎಸ್ ತಂತ್ರದಿಂದ ದೊಸ್ತಿ ಮುರಿದಿದ್ದರಿಂದ 2008ರಲ್ಲಿ ಉಂಟಾದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ಪಕ್ಷೇತರರ ಬೆಂಬಲದಿಂದ ಅಧಿಕಾರಕ್ಕೆ ಬಂದಿತು. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಕೀರ್ತಿ ಸದಾಕಾಲ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿಯೂ ಆಗಿ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವ ಮೂಲಕ ದೇಶಕ್ಕೆ ಮಾದರಿಯಾದರು.
ಸ್ವಪಕ್ಷೀಯರ ತಂತ್ರಕ್ಕೆ ಬಲಿ: ಮುಖ್ಯಮಂತ್ರಿಯಾಗಿ ಭಾಗ್ಯಲಕ್ಷ್ಮಿಯಂಥ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸದೃಢ ಆಡಳಿತ ನೀಡುತ್ತಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ಏಳ್ಗೆಯನ್ನು ಸಹಿಸಲಾಗದ ಅಥವಾ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಾತೊರೆಯುತ್ತಿದ್ದ ಪಕ್ಷದ ಕೆಲವರ ಕುತಂತ್ರಕ್ಕೆ ಅವರು ಬಲಿಯಾದರು. ಈ ಸಂದರ್ಭದಲ್ಲಿ ಅವರೊಂದಿಗೆ ತುಂಬ ಆತ್ಮೀಯರು ಎನಿಸಿಕೊಂಡಿದ್ದವರು ಕೂಡ ಬೆಂಬಲಕ್ಕೆ ನಿಲ್ಲಲಿಲ್ಲ. ಮೂರೂವರೆ ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ, ಲೋಕಾಯುಕ್ತ ವರದಿ ಪರಿಣಾಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲು ಸೇರಬೇಕಾದ ಕರಾಳ ದಿನವನ್ನೂ ಅನುಭವಿಸಿದರು.
ಇಷ್ಟಾದರೂ ಛಲ ಬಿಡಿದ ಅವರು 2018ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನ ಗೆಲ್ಲಲು ಸಾಕಷ್ಟು ಕೊಡುಗೆ ನೀಡಿದರು. ಪರಿವರ್ತನಾ ರ್ಯಾಲಿಯ ಮೂಲಕ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಪಕ್ಷವನ್ನು ಇನ್ನಷ್ಟು ಸಂಘಟಿಸಿದರು. ಆದರೂ, ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಅಧಿಕಾರಕ್ಕೆ ಬರಲು ಎಲ್ಲ ರೀತಿಯ ಪ್ರಯತ್ನ ನಡೆಸಿದರು. ವಿಫಲರಾದರು. ಕೊನೆಗೆ 3 ದಿನಕ್ಕೆ ಮುಖ್ಯಮಂತ್ರಿಯೂ ಆದರು. ಈಗ ಬಿ.ಎಸ್.ಯಡಿಯೂರಪ್ಪ ಅವರು ಮತ್ತೂಮ್ಮೆ ಮುಖ್ಯಮಂತ್ರಿ ಪಟ್ಟಕ್ಕೆ ಏರಲು ದಿನಗಣನೆ ಆರಂಭವಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕೊನೆಯ ಅಧಿವೇಶನ ಜುಲೈ 12ರಿಂದ ಆರಂಭವಾಗಿತ್ತು. ವಿಧಾನಸಭೆಯಲ್ಲಿ ಎಷ್ಟೇ ಟೀಕೆಗಳು ಬಂದರೂ ಸಮರ್ಪಕವಾಗಿ ಎದುರಿಸಿಕೊಂಡು, ಉತ್ತರಕ್ಕೆ ಪ್ರತ್ಯುತ್ತರವನ್ನು ನೀಡುತ್ತ ಯಡಿಯೂರಪ್ಪ ಅವರು ಮೈತ್ರಿ ಸರ್ಕಾರದ ಕೊನೆಯ ಅಧಿವೇಶನದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಲ್ಲ ರೀತಿಯ ಟೀಕೆಗಳನ್ನು ತಾಳ್ಮೆಯಿಂದ ಮೌನವಾಗಿಯೇ ಸ್ವೀಕರಿಸಿದರು. ಎಷ್ಟೇ ಅಪವಾದ ಬಂದರೂ ಚಕಾರ ಎತ್ತಲಿಲ್ಲ. ಆಡಳಿತ ಪಕ್ಷದ ನಾಯಕರು ಅವರ ಮೇಲೆ ನೇರ ದಾಳಿ ಮಾಡಿದರೂ ಯಾರೊಬ್ಬ ಸದಸ್ಯರು ಮಾತನಾಡದಂತೆ ಸ್ಪಷ್ಟ ಸೂಚನೆ ನೀಡುವ ಮೂಲಕ ಒಬ್ಬ ಟೀಂ ಲೀಟರ್ ಹೇಗಿರಬೇಕು ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ. ಹೋರಾಟದ ಹಾದಿಯಿಂದ ಬಂದು ತಾಳ್ಮೆ, ಸಂಯಮದ ಮೂಲಕ ಕರ್ನಾಟಕ 26ನೇ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಲು ಸಿದ್ಧರಾಗಿದ್ದಾರೆ.
–ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.