Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Team Udayavani, Jan 4, 2025, 11:10 AM IST
ಕಾಸರಗೋಡು ಕನ್ನಡಿಗರೆಲ್ಲರ ಅಚ್ಚುಮೆಚ್ಚಿನ “ಪ್ರೊಫೆಸರ್’, ಸಹಸ್ರಾರು ಶಿಷ್ಯರ ನೆಚ್ಚಿನ ಗುರು, ಪಂಡಿತ ಪರಂಪರೆಯ ಹಿರಿಯ ವಿದ್ವಾಂಸ, ಸಾಹಿತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ| ಪಿ. ಶ್ರೀಕೃಷ್ಣ ಭಟ್ ಅವರ ಸಹಸ್ರಚಂದ್ರ ದರ್ಶನ ಅಭಿನಂದನ ಸಮಾರಂಭವು ಜ. 5ರ ರವಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ವಿದ್ಯಾಲಯದಲ್ಲಿ ನಡೆಯಲಿದೆ. ತನ್ನಿಮಿತ್ತ ಈ ಲೇಖನ.
ತುಂಬ ಹಿಂದಿನ ಒಂದು ಸಂದರ್ಭ! ಕಾಲೇಜೊಂದರಲ್ಲಿ ಆಯೋಜಿತವಾದ ಸಾಹಿತ್ಯಿಕ ವಿಚಾರಗೋಷ್ಠಿ. ಉದ್ಘಾಟನೆಯ ಮೊದಲ ಭಾಗ ಸಂಪನ್ನಗೊಂಡು, ಒಂದು ಚಹಾ ವಿರಾಮದ ಬಳಿಕ ಆರಂಭಗೊಂಡ ಮೊದಲನೆಯ ಸತ್ರದಲ್ಲಿ ಮೊದಲಿಗೆ ಮಾತನಾಡಲು ಎದ್ದ ವ್ಯಕ್ತಿಯನ್ನು ಗಮನಿಸಿದ್ದೆ. ಸರಳ-ಸಾಧಾರಣ ಉಡುಪು, ನೆತ್ತಿಗೆ ಒತ್ತಿ ಕೂದಲನ್ನು ಬಾಚಿಕೊಂಡ, ವಿಶಾಲ ಹಣೆಯ, ಚೆಲುವು-ನಿಲುವುಗಳು ಕಣ್ಸೆಳೆದವು. ಮಾತಿಗೆ ಮೊದಲಿಟ್ಟಾಗ, ಏರುದನಿಯ ಒಡ್ಡಾರವಂತು ವಿಶಿಷ್ಟವಾಗಿತ್ತು. ಜತೆಗೇ, ಆಯ್ದುಕೊಂಡ ವಿಷಯದ ವಿವೇಚನೆಗೂ ವಿಶೇಷ ಲಕ್ಷ್ಯವಿದ್ದುದೂ ವಿದಿತವಾಗುತ್ತಿತ್ತು. ಹೀಗೆ, ಅಂದು ನನ್ನ ಗಮನ ಸೆಳೆದವರು ಕಾಸರಗೋಡು ಸರಕಾರಿ ಕಾಲೇಜಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಪ್ರೊ| ಶ್ರೀಕೃಷ್ಣ ಭಟ್ಟರು. ಅನಂತರದ ದಿನಗಳಲ್ಲಿ, ನಮ್ಮ ನಡುವೆ ಅನೇಕ ಸಂದರ್ಭಗಳಲ್ಲಿ ಪಾರಸ್ಪರಿಕ ನೆಲೆಯ ಮಾತುಕತೆಗಳಾಗಿವೆ, ಅನೇಕ ವೇದಿಕೆಗಳಲ್ಲಿ ಮತ್ತು ಸಭಾಕಲಾಪಗಳಲ್ಲಿ ನಾವು ಭಾಗವಹಿಸಿದ್ದೂ ನಡೆದಿದೆ.
ಶ್ರೀಕೃಷ್ಣ ಭಟ್ಟರ ಸಾಹಿತ್ಯಿಕ ಸಾಧನೆಗಳಲ್ಲಿ ಶಿಖರಪ್ರಾಯವಾದ ಕನ್ನಡದ ವ್ಯಾಕರಣ ವಿಚಾರವಾದ ಅವರ ಅಧ್ಯಯನ, “ಕನ್ನಡ ವ್ಯಾಕರಣ ಪರಂಪರೆಯ ಮೇಲೆ ಸಂಸ್ಕೃತದ ಪ್ರಭಾವ’ (1989) ಎಂಬ ಶೀರ್ಷಿಕೆಯುಳ್ಳ, ಅವರ ಪಿಎಚ್.ಡಿ. ಮಹಾಪ್ರಬಂಧ ಮತ್ತು “ಕನ್ನಡ ಸಾಂಪ್ರದಾಯಿಕ ವ್ಯಾಕರಣಗಳು (2012) ಎಂಬ ಕೃತಿ, ಈ ಎರಡರಲ್ಲೂ ಕನ್ನಡ-ಸಂಸ್ಕೃತ ಸಂಬಂಧಗಳ ಹಿನ್ನೆಲೆಯಲ್ಲಿ, ಕನ್ನಡದ ವ್ಯಾಕರಣ ಕೃತಿಗಳನ್ನವರು ವಿವೇಚಿಸುತ್ತಾರೆ.
ಇವುಗಳೊಂದಿಗೇ ನಾನು ಹೆಸರಿಸಬೇಕಾಗಿರುವ ಅವರ ಇನ್ನೊಂದು ಮೌಲಿಕ ಶಾಸ್ತ್ರ ಸಾಹಿತ್ಯ ಸಂಬಂಧಿತ ಕೃತಿಯೆಂದರೆ, “ಶಾಸ್ತ್ರ ಸಾಹಿತ್ಯ ವಿಹಾರ’ (2009) ಎಂಬ ಸಂಶೋಧನ ಲೇಖನಗಳ ಸಂಕಲನ. ಈ ಮೂರೂ ಕೃತಿಗಳಲ್ಲಿ ಅವರ ಪಾಂಡಿತ್ಯ, ವಿಮರ್ಶನ ಪ್ರಜ್ಞೆ ಮತ್ತು ತೌಲನಿಕ ಸಮೀಕ್ಷೆಯ ಒಳನೋಟಗಳು ಕಾಣಸಿಗುತ್ತವೆ.
ಬಾಳಿನ ಉದ್ದಕ್ಕೂ, ಅಪ್ರಜ್ಞಾಪೂರ್ವಕವಾಗಿಯೇ ಆದರೂ, ನಾವೆಲ್ಲರೂ ಒಂದಲ್ಲ ಒಂದು ವಿಧದ ಅನ್ವೇಷಣೆಯಲ್ಲಿ ತೊಡಗಿಕೊಂಡಿರುತ್ತೇವೆ. ನಮ್ಮ ಸಂವೇದನೆ ಸಾಮರ್ಥ್ಯ, ಜೀವನದರ್ಶನ ಹಾಗೂ ತಾತ್ವಿಕ ತಿಳಿವಳಿಕೆಗಳಿಗೆ ಅನುಗುಣವಾಗಿ ಈ ಅನ್ವೇಷಣೆಯು ವಿಭಿನ್ನ ನೆಲೆಗಳನ್ನು ಪಡೆಯುತ್ತದೆ. ಎಂದರೆ, ಕ್ರಮಬದ್ಧವಾದ ಶಿಕ್ಷಣ ಪಡೆದವರಂತೆಯೇ, ಹೀಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯದವರೂ ಸಹ, ತಮ್ಮದೇ ಆದ ರೀತಿಯಲ್ಲಿ ಜೀವನದ ಹೊಸ ಹೊಸ ಸಾಧ್ಯತೆಗಳನ್ನು ಹುಡು ಕುತ್ತಾ, ಬದುಕಿನಲ್ಲಿ ಅವುಗಳನ್ನು ಅಳವಡಿ ಸಿಕೊಳ್ಳುತ್ತಾ ಹೋಗುತ್ತಾರೆ.
ಈ ಬಗೆಯ “ಹುಡುಕಾಟ’ ಎಂಬ ಆಕಾಂಕ್ಷೆಯನ್ನು ಒಂದು ಅಭ್ಯಾಸದ ಚೌಕಟ್ಟಿಗೆ ಹೊಂದಿಸಿ ಕೊಂಡು ಸೇರ್ಪಡೆಗೊಳಿಸುತ್ತ ಸಾಗುವ ಕ್ರಮವನ್ನೇ “ಸಂಶೋಧನೆ’ ಎನ್ನಬಹುದು. ಸ್ವೋಪಜ್ಞನಾಗಿ, ಅನನ್ಯವಾಗಿ ಕಂಡುಕೊಳ್ಳುವ ಮತ್ತು ಕಾಣಿಸುವ ಇಂತಹ ಅಂಶಗಳು ಮನುಷ್ಯನ ಬದುಕಿನ ಮೂಲ ಪ್ರೇರಣೆಗಳೇ ಆಗಿವೆ.
ಈ ಪ್ರಕ್ರಿಯೆಯಲ್ಲಿ ಮನುಷ್ಯನ ಗ್ರಹಿಕೆಯ ಸಾಮರ್ಥ್ಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. “ಹಳ್ಳಿಯ ಜಾತ್ರೆ’ ಎಂಬ ಒಂದು ಸಾಂಸ್ಕೃತಿಕ ಸಂದರ್ಭವನ್ನು ಗಮನಿಸಿದರೆ, ಅದು ವಿವಿಧ ನೆಲೆಗಳಲ್ಲಿ ಜೀವಂತವೆನಿಸುವ ರೀತಿಯನ್ನು ನೆನೆಯೋಣ. ಕುಟುಂಬದ ಎಳೆಯ ಸದಸ್ಯನಿಗೆ ಪೀಪಿ-ತುತ್ತೂರಿ, ವಿವಿಧ ತಿಂಡಿ-ತಿನಿಸುಗಳು, ಜೋಕಾಲಿ ಇವೆಲ್ಲವೂ ಕಣ್ಣ ಮುಂದೆ ಬರುತ್ತವೆ. ಹದಿಹರೆಯದ ಹೊಂತಗಾರಿಗಳಿಗೆ ಸಮವಯಸ್ಕರ ಕಣ್ಣುಗಳಿಗೆ ಕಣ್ಣು ಕೂಡಿಸುವ ರಮ್ಯ ಕಲ್ಪನೆಗಳು ಗರಿಗೆದರುತ್ತವೆ. ಮಧ್ಯವಯಸ್ಕರಿಗೆ, ಹಳೆಯ ಅನನ್ಯವೆನಿಸುವ ನೆನಪುಗಳ ಸಂದೂಕವನ್ನೇ ತೆರೆಯುವ ಸಂದರ್ಭವಾಗುತ್ತದೆ. ಹೀಗೆಯೇ ಇತರರೂ ಕೂಡ… ಅನುಭವ ವಿಶೇಷವೊಂದರಲ್ಲಿ ಭಾಗಿಗಳಾಗುತ್ತಾರೆ.
ಪ್ರತೀ ವ್ಯಕ್ತಿಯೂ ವೈವಿಧ್ಯಮಯವಾದ ಬದುಕಿನ ನಿರ್ದಿಷ್ಟ ಅಂಶವೊಂದನ್ನು ಮಾತ್ರ ಗ್ರಹಿಸುತ್ತಾನೆ. ಈ ಗ್ರಹಿಕೆಯ ಮುಂದಿನ ಹಂತವೇ ಚಿಂತನೆಯಲ್ಲಿ ತೊಡಗಿಕೊಳ್ಳುವಿಕೆ. ಈ ಚಿಂತನೆಯು ಗಂಭೀರ ನೆಲೆಗಳಿಗೆ ಏರಿದಂತೆಲ್ಲ, ಮನುಷ್ಯನ ಕಾಣೆRಗಳು ಮಾಗುತ್ತ ಹೋಗುತ್ತವೆ. ತನ್ನ ಗ್ರಹಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ, ಆತನ ಚಿಂತನೆ ಮತ್ತು ನಿರ್ಣಯಗಳು ಹರಳು ಕಟ್ಟುತ್ತವೆ. “ಸಂಶೋಧನೆ’ಯ ಫಲಿತಗಳು ದಾಖಲಾಗುತ್ತವೆ. ಇಂತಹ ಹಿನ್ನೆಲೆಯನ್ನು ಹೇಳಿದುದರ ಉದ್ದೇಶ ಇಷ್ಟೇ, ಪ್ರೊ| ಶ್ರೀಕೃಷ್ಣ ಭಟ್ಟರ ಸಂಶೋಧನ ಬರೆಹಗಳಲ್ಲಿ ಕಂಡುಬರುವ ಚಿಂತನಶೀಲತೆ, ವರ್ಗೀಕರಿಸಿ ಅಳವಡಿಸಿಕೊಳ್ಳುವಾಗಿನ ಸಂಯಮ ಮತ್ತು “ಸಾಂಸ್ಕೃತಿಕ ಔದಾರ್ಯ’ ಇವನ್ನು ಸಹೃದಯರು ಮೆಚ್ಚಿಕೊಳ್ಳಲೇಬೇಕು.
ಸಂಸ್ಕೃತ-ಕನ್ನಡ ಸಂಬಂಧಗಳು ಅನೇಕ ಸಾಂಸ್ಕೃತಿಕ ನೆಲೆಗಳಲ್ಲಿ ನಿಯತವಾಗಿದೆ. ಭಾಷಿಕ ನೆಲೆ, ಸಾಹಿತ್ಯಿಕ ನೆಲೆ, ಸೈದ್ಧಾಂತಿಕ ನೆಲೆ ಮತ್ತು ಸಾಮಾಜಿಕ ನೆಲೆಗಳಲ್ಲಿ ಅದು ಗತಿಯನ್ನು ಪಡೆದಿದೆ. ಹಾಗಾಗಿಯೇ, ಇಂತಹ ಬಹುಭಾಷಿಕ, ಬಹು ಸಾಹಿತ್ಯಿಕ ಹಿನ್ನೆಲೆಗಳನ್ನು ಅವಲೋಕನಕ್ಕೆ ಎತ್ತಿಕೊಳ್ಳುವವರಲ್ಲಿ ತೌಲನಿಕ-ಚಾರಿತ್ರಿಕ ದೃಷ್ಟಿಯಂತೂ ಅತ್ಯವಶ್ಯಕವಾಗಿದೆ. ಪ್ರೊ| ಶ್ರೀಕೃಷ್ಣ ಭಟ್ಟರಲ್ಲಿ ಈ ಗುಣವು ಸ್ವಾಭಾವಿಕವಾಗಿಯೇ ಕಾಣಿಸುತ್ತದೆ. ಆದುದರಿಂದ, ಬರಿಯ ವೈಭವೀಕರಣವಾಗಲೀ ಪ್ರಶಂಸಾ ಪರ ನಿಲುವಾಗಲೀ ಅವರ ವಿವೇಚನೆಗಳ, ಚರ್ಚೆಗಳ ಭಾಗವಾಗಿ ಬರುವುದಿಲ್ಲ. ಹಾಳತವೆನಿಸುವ ಸತಾರ್ಕಿಕ ಚಿಂತನಾಕ್ರಮವನ್ನು ಉದ್ದಕ್ಕೂ ಕಾಣಬಹುದು. ಅವರ ಗ್ರಹಿಕೆಯ ಒಂದಂಶವೇ ಅವರ ಸಂವೇದನೆಗಳಿಗೆ ವಸ್ತುಗಳಾಗುತ್ತವೆ. ಹೀಗೆ ಒಂದು ತಾತ್ವಿಕ ನೆಲೆಗೆ ತಲುಪಿ, ಅದನ್ನು ಲೋಕ ಮುಖಕ್ಕೆ ಸಾದರ ಪಡಿಸುವ ಸಫಲ ಯತ್ನವನ್ನು ಅವರ ಸಂಶೋಧನ ಬರೆಹಗಳಲ್ಲಿ ನೋಡಬಹುದು.
1979ರಷ್ಟು ಹಿಂದೆಯೇ ಪ್ರಕಟವಾದ “ಶಾಸನಗಳು ಮತ್ತು ವೀರಗಲ್ಲುಗಳು’ ಎಂಬೊಂದು ಪುಸ್ತಿಕೆ, “ಕಳ್ಳಿಗೆ ಮಹಾಬಲ ಭಂಡಾರಿ’ (2013) ಮತ್ತು “ಪ್ರೊ| ಪಿ. ಸುಬ್ರಾಯ ಭಟ್’ (2018) ಎಂಬೆರಡು ವ್ಯಕ್ತಿಚಿತ್ರಗಳು ಪ್ರೊ| ಶ್ರೀಕೃಷ್ಣ ಭಟ್ಟರ ಇತರ ಪ್ರಕಟಿತ ಕೃತಿಗಳು. ಇವುಗಳಲ್ಲೂ ಸರಳ ಮತ್ತು ಪರಿಣಾಮಕಾರಕವೆನಿಸುವ ಕನ್ನಡದ ಗದ್ಯದ ಸವಿಯನ್ನು ಗುರುತಿಸಬಹುದು.
ಕಾಲೇಜು ಶಿಕ್ಷಣ ವಿಭಾಗ ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಯನ ಕಕ್ಷೆಗಳಲ್ಲಿ ಪ್ರೊ| ಭಟ್ಟರ ಸಾಧನೆ ವಿಶೇಷವಾದದ್ದು. ನಿಡುಗಾಲದ ಅವರ ಸ್ನೇಹಿತನ ನೆಲೆಗಳಲ್ಲಿ ನಾನು ಅಂತಹದಕ್ಕೆ ಸಾಕ್ಷಿಯಾಗಿದ್ದೇನೆ. ಇಂತಹವೆಲ್ಲ ವಿದ್ವತ್ ವಲಯದ ಸುದ್ದಿಗಳಾದರೆ, ಅವರ ವಿನಯ-ಸೌಜನ್ಯಪೂರಿತ ನಡವಳಿಕೆಗಳು, ಕುಟುಂಬ ವಾತ್ಸಲ್ಯ, ಸಮಷ್ಟಿಯ ಹಿತದ ಚಿಂತನೆ ಇವುಗಳನ್ನು ಶುಚಿಶುದ್ಧಿಯ ಅಂತರಂಗ – ಬಹಿರಂಗಗಳನ್ನೂ ಹೇಳಲೇಬೇಕು. “ಅರಿವಂ ಪೊಸಯಿಸುವುದೆ ಧರ್ಮಂ’ ಎಂಬ ಕವಿವಾಣಿಯನ್ನು ನೆನೆಯುತ್ತ ಸಹಸ್ರಚಂದ್ರ ದರ್ಶನ ನಿಮಿತ್ತವಾಗಿ ರವಿವಾರ ನಡೆಯುವ ಅವರ ಅಭಿನಂದನ ಸಮಾರಂಭಕ್ಕೆ ಮಂಗಳವಾಗಲಿ ಎಂಬುದು ಎಲ್ಲರ ಹಾರೈಕೆ.
ಡಾ| ತಾಳ್ತಜೆ ವಸಂತಕುಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
ಸಾಹಿತ್ಯದಾಚೆಗೂ ಬೆಳೆದು ನಿಂತ ಸಾಗರದ ನಾ.ಡಿ’ಸೋಜಾ!
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Andhra: ʼಗೇಮ್ ಚೇಂಜರ್ʼ ಈವೆಂಟ್‌ನಿಂದ ಮರಳುತ್ತಿದ್ದ ಅಭಿಮಾನಿಗಳು ರಸ್ತೆ ಅಪಘಾತಕ್ಕೆ ಬಲಿ
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Vijay Raghavendra: ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ರುದ್ರಾಭಿಷೇಕಂ’
South Korea: ಅಧ್ಯಕ್ಷ ಯೂನ್ ರನ್ನು ಕೂಡಲೇ ಬಂಧಿಸಿ: ಪೊಲೀಸರಿಗೆ ದಕ್ಷಿಣ ಕೊರಿಯಾ!
ಕಾರ್ಕಳ ನಗರದಲ್ಲೂ ನೆಟ್ ಕಿರಿಕಿರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.