“ಕಾವೇರಿ’ದ ಸಮಸ್ಯೆಗಳಿಗೆ “ನಾವೇರೀ’ ಕಾರಣ…
Team Udayavani, Aug 27, 2017, 2:15 AM IST
ರೈತರ ಸಮಸ್ಯೆ ತಿಳಿಯದೇ, ಆರ್ಥಿಕ ಪರಿಸ್ಥಿತಿ ಅರಿವಿಲ್ಲದೇ, ಸಮಾಜದ ನೋವಿಗೆ ಸ್ಪಂದಿಸದೇ ಇರುವವನು ಜನಪ್ರಿಯತೆಯಿಂದಲೋ, ಜನ ಎಲ್ಲಾ ನನ್ನ ನೋಡ್ಕೊಂಡು ಹೋಗ್ತಾರೆ ಅನ್ನೋದಕ್ಕೋ ಅಥವಾ ಹಣ ಬಲದ ಕಾರಣಕ್ಕೋ ನಾಯಕನಾಗಲು ಹೊರಡುತ್ತಾನೆ. ಇಂಥ ಕೆಲವು ಪುಢಾರಿಗಳನ್ನು ಬೆಳೆಸುತ್ತಾ, ಬೆಳೆಸುತ್ತಾ ನಮಗೆ ನಾವು ಎಂಥ ಸುಳ್ಳು ಹೇಳಿಕೊಳ್ಳುತ್ತಾ ಇದ್ದೀವಿ ನೋಡಿ.
ದ್ರೋಹ ಅನ್ನೋದು ಬೇರೆಯವರಿಗೆ ಮಾಡಬೇಕಾದ್ದಿಲ್ಲ. ನಮಗೆ ನಾವೇ ಮಾಡಿಕೊಳ್ಳಬಹುದು. “ನಮಗೂ ಅದಕ್ಕೂ ಸಂಬಂಧ ಇಲ್ಲ, ಅಯ್ಯೋ ನಮಗ್ಯಾಕೆ ಆ ಉಸಾಬರಿ..’
ಇಂಥ ಉಡಾಫೆ ರೂಢಿಸಿಕೊಂಡಿರೋದರಿಂದಲೇ ಇವತ್ತು ಎಲ್ಲಾನೂ ಸಮಸ್ಯೆಗಳು.
ಕಾವೇರಿ ನದಿ ವಿಚಾರದಲ್ಲೂ ಹೀಗೇ. ಇಂಗಿ ತಳದಲ್ಲಿ ಕೂತ ಅನೇಕ ನೀರ ಸತ್ಯಗಳು ನಮ್ಮನ್ನು ನೋಡಿ ನಗೋಕೆ ಶುರು ಮಾಡ್ತವೆ. ನೀರ ಹಿಂದಿನ ರಾಜಕೀಯ ಹೆಜ್ಜೆಗಳು, ಅದರ ಮೇಲೆ ಕಾಲಿಟ್ಟು ನಡೆಯುವ “ಕನ್ನಡವನ್ನು ಕಾಪಾಡುತ್ತೇವೆ’ ಎನ್ನುವ ಸ್ವಯಂಘೋಷಿತ ನಾಯಕರೆನ್ನುವ ಪುಢಾರಿಗಳು, ಸಮಸ್ಯೆಗಳ ಒಲೆಯ ಮೇಲೆ ಪಕ್ಷದ ತಪ್ಪಲೆ ಇಟ್ಟು ಬೇಳೆ ಬೇಯಿಸಿಕೊಳ್ಳುವ ರಾಜಕೀಯ ನಾಯಕರು, ರೈತರ ಕಂಗಾಲನ್ನೇ ಬಂಡವಾಳ ಮಾಡಿಕೊಂಡು ಸೀಟಿನ ಹವಣಿಕೆ ಮಾಡುವ ಅವಕಾಶವಾದಿಗಳು…
ಅಬ್ಬಬ್ಟಾ !
“ಕಾವೇರಿ ಸಮಸ್ಯೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?’ ಆ್ಯಂಕರ್ ಕೇಳಿದರು.
“ರೈತರಿಗೆ ನೀರೊಂದೇ ಸಮಸ್ಯೆ ಅಲ್ಲ. ಅವರ ಸ್ವಾಭಿಮಾನಕ್ಕೆ ಬೀಳುವ ಪೆಟ್ಟು, ಮಾರುಕಟ್ಟೆ, ಬೆಲೆ, ಸಾಲ ಹೀಗೆ ಬೇರೆ ಬೇರೆ ಪಟ್ಟಿ ಇದೆ. ಆ ವಿಷಯದ ಬಗ್ಗೆ ಚರ್ಚಿಸಲು ಇದು ವೇದಿಕೆಯಲ್ಲ. ನಾನು ಬಂದಿರೋದು ಸಿನಿಮಾ ಬಗ್ಗೆ ಮಾತಾಡೋಕೆ’ ಅಂದೆ.
“ನೀವೊಬ್ಬ ಕನ್ನಡಿಗರಾಗಿ, ರೈತರ…’ ಹೀಗೆ ಪ್ರಶ್ನೆ ಮುಂದುವರಿಯಿತು. ಮಾತು ತುಂಡರಿಸಿದೆ.
ರಾತ್ರಿ-ಗೆಳೆಯನ ಫೋನ್ ಬಂತು. “ನಿನ್ನ ಸಿನಿಮಾ ಬ್ಯಾನ್ ಮಾಡ್ತಾ ಇದ್ದಾರೆ’ ಅಂದ.
ಯಾರಿರಬಹುದು ಆ ಮಹಾನುಭಾವ ಅಂತ ಸೋ ಕಾಲ್ಡ್ ನಾಯಕನಿಗೆ ಫೋನು ಮಾಡಿದೆ. ಆ ಕಡೆಯಿಂದ ನಶೆ, ನಶೆಯಾದ ಮಾತುಗಳು ಕೇಳಿದವು. “ರೀ ಏನು ಮಾತಾಡ್ತೀರೀ.. ನಿಮ್ಮ ಸಿನಿಮಾ ಬಿಡುಗಡೆ ಮಾಡೋಕೆ ಬಿಡೋಲ್ಲ ನಾವು’ ಅಂದ.
“ಸಿನಿಮಾ ನಿಲ್ಲಿಸೋಕೆ ನೀವು ಯಾರ್‌ರೀ’ ಅಂದೆ.
“ನಾವು ಓರಾಟಗಾರರು. ನಾಯಕರು’ ಅಂದ.
“ನೀವು ಓರಾಟಗಾರರೋ, ಹೋರಾಟಗಾರರೋ. ನಾನು ಒಪ್ಪಿಕೊಂಡರೆ ಮಾತ್ರ ಅದು. ನಾನು ಒಪ್ಪಿಕೊಂಡಿಲ್ಲ. ಏನು ಮಾಡ್ತಿರೋ ಮಾಡ್ಕೊಳ್ಳಿ’ ಅಂತ ಮಗದೊಮ್ಮೆ ಮಾತು ತುಂಡರಿಸಿದೆ.
ಅಷ್ಟರಲ್ಲಿ, ದೆಹಲಿಯಲ್ಲಿ ತಮಿಳುನಾಡು ರೈತರ ಮೇಲೆ ಹಲ್ಲೆಯಾಗಿತ್ತು. ಅಲ್ಲಿ ಹೋಗಿ ನಿಂತೆ.
“ಯಾಕೆ ಸ್ವಾಮಿ, ಕರ್ನಾಟಕದ ರೈತರು ಕಾಣೋಲ್ವೇ?’ ಅಂದರು. ಕರುಳು ಚುರಕ್ ಅಂತು. ಅಲಿÅà, ಮನುಷ್ಯ ಎಲ್ಲಿದ್ದಿರೂ ಮನುಷ್ಯ. ರೈತ ಎಲ್ಲಿದ್ದರೂ ರೈತ ಅಲ್ವೇ? ಕುಡಿಯೋ ನೀರು, ಹರಿಯೋ ರಕ್ತ ಒಂದೇ.
ಪ್ರಶ್ನೆಗೆ ಉತ್ತರ ಕೊಡದೇ ಇದ್ದದ್ದಕ್ಕೆ ನಾನು ಭಾಷಾ ವಿರೋಧಿಯಾದೆನೇ? ಇದು ಭಾಷೆಗೆ ಮಾಡಿದ ಅವಮಾನವೇ? ಮಾತನಾಡಿದ್ದರೆ ಭಾಷೆ ಉಳಿಸಿದಂತೆ ಆಗುತ್ತಿತ್ತೇ? ಕಾವೇರಿ ವಿಚಾರದಲ್ಲಿ ಈ ತನಕ ನಮಗೆ ನಾವು ಹೇಳಿಕೊಂಡಿದ್ದರಲ್ಲಿ, ಸತ್ಯಗಳಿಗಿಂತ ಸುಳ್ಳುಗಳೇ ಹೆಚ್ಚಾಗಿವೆ. ಅನೇಕ ಸಮಸ್ಯೆಗಳು ಈ ರೀತಿ ನಮಗೆ ನಾವು ಮಾಡಿಕೊಂಡಿರುವ ದ್ರೋಹಗಳಿಂದಲೇ ಆಗಿವೆ. ಈ ಎಲ್ಲವೂ ನಮ್ಮನ್ನು ನೋಡಿ ನಗುತ್ತಿವೆ. ಕಾವೇರಿ ಸಮಸ್ಯೆಯಾಗಿ ಕಾಣೋದು ನೀರು ಕಡಿಮೆಯಾದಾಗ, ಕೆ.ಆರ್.ಎಸ್. ತುಂಬದೇ ಇದ್ದಾಗ ಅಲ್ವೇ? ಆದರೆ ಮೈದುಂಬಿ ಹರಿಯದ ಕಾವೇರಿಗೇ ನಾನಾ ಸಮಸ್ಯೆಗಳಿವೆ. ಅದರ ಬಗ್ಗೆ ಯೋಚನೆ ಮಾಡಿದ್ದೀವಾ? 870ಕಿ.ಮೀ ಉದ್ದ ಹರಿಯುವ ಜೀವನದಿ ಕಾವೇರಿ ಡಿಸೆಂಬರ್ ತಿಂಗಳಲ್ಲೇ 100 ಕಿ.ಮೀಯಷ್ಟು ಯಾಕೆ ಬತ್ತಿಹೋಗುತ್ತೆ? ನದಿಯ ಪಾತ್ರ ಹೇಗಿವೆ ಅಂತ ನೋಡ್ತಾ ಇದ್ದೀವಾ? ಮರಳು ಮಾಫಿಯಾ, ರೆಸಾರ್ಟ್‌ಗಳ ಒತ್ತುವರಿಯಿಂದ ನಲುಗಿ ಹೋಗಿರುವ ಅಲ್ಲಿನ ಪರಿಸ್ಥಿತಿ ಸರಿ ಮಾಡಲು ಏಕೆ ಯೋಚನೆ ಮಾಡ್ತಿಲ್ಲ? ನೀರು ಕೇಳ್ಳೋರಿಗೆ, ನೀರನ್ನು ಉಳಿಸೋದು ಕರ್ತವ್ಯವಾಗೋದಿಲ್ಲ ಏಕೆ? ನೀರು ಅನ್ನೋದು ತಾಯಿ ಇದ್ದ ಹಾಗೆ. ನಾವೆಲ್ಲ ಅದರ ಮಕ್ಕಳಿದ್ದಂತೆ. ಇದರ ಬಗೆಗಿನ ಸತ್ಯಗಳನ್ನು ಮುಚ್ಚಿಟ್ಟು ನಮಗೆ ನಾವು ಮಾಡಿಕೊಳ್ಳುವ ದ್ರೋಹ ಅಂದರೆ ಇದೇನೇ!
ಕಾವೇರಿ ಜಗಳಗಳು ನಡೆಯುವ ಪರಿ ನೋಡಿ.
ಬೆಂಗಳೂರು ನಗರದಲ್ಲಿ ಒಂದು ವಾಹನಕ್ಕೆ ಬೆಂಕಿ ಹಾಕ್ತಾರೆ. ಆ ವಾಹನ ಓಡಿಸೋನು ರೈತ ಅಲ್ಲ, ಬೆಂಕಿ ಹಾಕಿದವನು ರೈತ ಅಲ್ಲ. ಸೋ ಕಾಲ್ಡ್ ಪುಢಾರಿಗಳೇ. ಪಾಪ, ಡ್ರೈವರ್ ಏನ್ರೀ ಮಾಡಿದ್ದಾ? ನಮ್ಮ ನಿಮ್ಮ ಹಾಗೇ, ಹೆಂಡತಿ ಮಕ್ಕಳನ್ನು ಸಾಕೋಕೆ ಸಾಲ ಸೋಲ ಮಾಡಿ, ಕೊಂಡ ಆ ವಾಹನ ಸುಡೋದರಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುತ್ಯೇ?
ನಾಯಕರೇಕೆ ತಮ್ಮ ಕಾರುಗಳನ್ನು ತಾವು ಸುಡೋಲ್ಲ? ಇಲ್ಲಿಂದ ಅಲ್ಲಿಗೆ ಹೋಗೋ ಕನ್ನಡದವರನ್ನು ಹೊಡೆದು, ಅಲ್ಲಿಂದ ಇಲ್ಲಿಗೆ ಬರುವ ತಮಿಳರನ್ನು ಬಾರಿಸಿ ಆಯಾ ಭಾಷೆಗಳಲ್ಲಿ ಮಾತನಾಡಿಸಿದರೆ ಕಾವೇರಿ ನೀರಾಗಲೀ, ಭಾಷೆಯಾಗಲೀ ಉಳಿಯುತ್ತಾ? ಈ ದಳ್ಳುರಿಯಿಂದ ನಮ್ಮ ಮಕ್ಕಳಿಗೆ ಕಾವೇರಿ ಅಂದರೆ ಭಯ. ಈ ವಾತಾವರಣದಲ್ಲಿ ಅವು ಶಾಲೆಗೆ ಹೋಗಬೇಕು, ಬದುಕಬೇಕು. ಭವಿಷ್ಯದ ಪೀಳಿಗೆಯ ಕಣ್ಣಿಗೆ ಕೊಡುವ ದೃಶ್ಯಗಳು ಇವೇನಾ?
ಹೂತುಹೋಗಿರುವ ಸತ್ಯ ಇಲ್ಲಿದೆ…
ಕೊಡಗಿನ ಜನಸಂಖ್ಯೆ ಸುಮಾರು ಐದೂವರೆ ಲಕ್ಷ. ಕಳೆದ ವರ್ಷ 13 ಲಕ್ಷ ಯಾತ್ರಿಕರು ಅಲ್ಲಿಗೆ ಭೇಟಿಕೊಟ್ಟಿದ್ದಾರೆ. ಇವರ ಕಸ ಮುಸುರೆ ಎಲ್ಲಿ ಹೋಗುತ್ತದೆ?
ಕೂರ್ಗ್, ಮಡಿಕೇರಿ, ಭಾಗಮಂಡಲದ ಕಡೆ ಅಭಿವೃದ್ಧಿ ಹೆಸರಲ್ಲಿ ಕಾಡುಗಳನ್ನು ಕಾಫಿತೋಟವನ್ನಾಗಿ, ರೆಸಾರ್ಟ್‌ಗಳನ್ನಾಗಿ, ಉಳುವ ಭೂಮಿಯನ್ನು ಸೈಟುಗಳನ್ನಾಗಿ ಮಾಡಿ ಬೀಳುವ ಮಳೆಯನ್ನು ಸ್ಪಾಂಜಿನಂತೆ ಇಂಗಿಸುವ ಕಾಡನ್ನೇ ನಾಪತ್ತೆ ಮಾಡಲಾಗುತ್ತಿದೆ. ತೊರೆಗಳ ಮೂಲಕ ಕಾವೇರಿಗೆ ಬರೋ ನೀರನ್ನು ನಿಲ್ಲಿಸಿದ್ದಾರೆ. ಇದನ್ನು ಕಾಪಾಡೋಕೆ ಗಾಡ್ಗಿಳ್ ವರದಿ ಬಂತು. ಆದರೆ ರಿಯಲ್ ಎಸ್ಟೇಟ್ ಮಾಫಿಯ ಪ್ರಭಾವ ಬಳಸಿದ್ದರಿಂದ ಇನ್ನೂ ಸರಳೀಕೃತಗೊಂಡು ಕಸ್ತೂರಿ ರಂಗನ್ ವರದಿಯಾಯ್ತು. ಆದರೆ, ಕಾಡು ಕರಗುವ ಸಮಯ ಹಾಗೇ ಇದೆ.
ಜಾರಿ ಮಾಡಲು- ಒಂದು ಸಾವಿರ ಜಿಲ್ಲಾಪಂಚಾಯಿತಿ ಇದನ್ನು ಜನವಿರೋಧಿ ಅಂತ ತೀರ್ಮಾನಿಸಿದೆ ಅಂತ ಇನ್ನೊಂದು ವರದಿ ಕೊಟ್ಟು ಕೈ, ಕಾಲು ಮುರಿದು ಮೂಲೆಗೆ ಕೂಡ್ರಿಸಿದರು. ಹೀಗೆ ಭವಿಷ್ಯದ ಬಗ್ಗೆ ಯಾವುದೇ ಚಿಂತನೆ ಇಲ್ಲದೆ, ನೀರ ಜೊತೆ ರಾಜಕೀಯ ಮಾಡುವ ನಾಯಕರು ಹುಟ್ಟಲು ಯಾರು ಕಾರಣ, ನಾವೇ ಅಲ್ಲವೇ? ಇಂಥ ಸತ್ಯಗಳನ್ನು ಮರೆಮಾಚಿ ನಮಗೆ ನಾವೇ ದ್ರೋಹ ಮಾಡಿಕೊಳ್ಳುತ್ತಿದ್ದೇವೆ. ಕಾವೇರಿ ಹಂಚಿಕೆಯಲ್ಲಿ ಜಗಳವಾಡುವುದು, ಕೋರ್ಟಿಗೆ ಹೋಗುವುದು ಎಲ್ಲವನ್ನೂ ಪಕ್ಕಕ್ಕೆ ಇಡಿ. ಆದರೆ ಈಗಾಗಲೇ ಶೇ.30ರಷ್ಟು ಇಂಗಿ ಹೋಗಿರುವ ಕಾವೇರಿ ನೀರನ್ನು ಹೆಚ್ಚಿಸಲು ಯೋಚನೆ ಮಾಡ್ತಾ ಇದ್ದೀವಾ?
ನೀರ ಸಮಸ್ಯೆಗಳಲ್ಲಿ ತಮ್ಮ ಮನೆ, ಪಕ್ಷಗಳ ಬೇಳೆ ಬೇಯಿಸಿಕೊಳ್ಳೋದಕ್ಕೆ ಹುಟ್ಟಿಕೊಂಡ ಸ್ವಯಂಘೋಷಿತ ನಾಯಕರನ್ನು, ರಾಜಕೀಯ “ಪಕ್ಷಗತ’ ತೀರ್ಮಾನವನ್ನು ಸುಮ್ಮನೆ ಒಪ್ಪಿಕೊಂಡದ್ದೂ ಕೂಡ ನಮಗೆ ನಾವು ಮಾಡಿ ಕೊಂಡ ದ್ರೋಹವಲ್ಲದೆ ಮತ್ತಿನ್ನೇನು?
***
ನಮ್ಮ ಮನೆಯಲ್ಲಿ ಹೆಣ್ಣುಮಗು ಇದೆ. ಅವಳಿಗೆ ಮದುವೆ ಮಾಡಬೇಕು ಅಂದರೆ ಹುಡುಗ ಚೆನ್ನಾಗಿದ್ದಾನಾ, ಒಳ್ಳೆಯವನಾ, ಕೆಟ್ಟವನಾ, ದುರಭ್ಯಾಸ ಇದೆಯೇ, ನಮ್ಮ ಹುಡ್ಗಿàನ ಚೆನ್ನಾಗಿ ನೋಡ್ಕೊàತಾನಾ…ಏನೇನೆಲ್ಲಾ ನೋಡ್ತೀವಿ ಅಲ್ವಾ? ಏಕೆ ಹೇಳಿ? ನಮ್ಮ ಮನೆ ಹುಡುಗಿ ಅವಳು. ನಮ್ಮ ರಕ್ತ ಹಂಚಿಕೊಂಡು ಹುಟ್ಟಿದವಳು ಚೆನ್ನಾಗಿರಬೇಕು ಅಂತ ಅಲ್ವೇ? ಹಾಗೇನೇ ನಮ್ಮ ದೇಶ, ನಮ್ಮ ನಾಡು ಚೆನ್ನಾಗಿರಬೇಕು ಅಂತ ಚುನಾವಣೆಯಲ್ಲಿ ನಾಯಕರನ್ನು ಆರಿಸುವಾಗ ಏಕೆ ಯೋಚನೆ ಮಾಡೋಲ್ಲ?
ಉದಾಹರಣೆಗೆ- ಒಂದು ನಿಯೋಜಿತ ವರ್ಗದಲ್ಲಿ ಒಂದು ಲಕ್ಷ ವೋಟುಗಳಿದ್ದರೆ, ಅದರಲ್ಲಿ ಅವ್ಯವಸ್ಥೆಗೆ ಬೇಸತ್ತು 40 ಸಾವಿರ ಜನ ವೋಟು ಹಾಕೋಲ್ಲ. ಉಳಿದ 60 ಸಾವಿರ ವೋಟುಗಳಿಗೆ 5 ಪಕ್ಷಗಳಿರುತ್ತವೆ. ಅವರಲ್ಲಿ ಜಾತಿ ಕಾರಣದಿಂದ ಒಂದಷ್ಟು ಸಾವಿರ ಮತಗಳು, ಧರ್ಮ, ಕುಲದ ಕಾರಣಗಳಿಂದ ಒಂದಷ್ಟು ಮತಗಳು, ಹಣಕ್ಕಾಗಿ ಇನ್ನೊಂದಷ್ಟು ಮತಗಳು ಹಂಚಿಹೋಗಿರುತ್ತದೆ. ಕೊನೆಗೆ 30 ಸಾವಿರ ಮತಗಳಿಂದ ಗೆದ್ದವನೇ ನಾಯಕ ಆಗ್ತಾನೆ.
ಅಂದರೆ ಉಳಿದ 70ಸಾವಿರ ಮಂದಿಗೆ ಈ ವ್ಯಕ್ತಿ ಆಯ್ಕೆಯೇ ಇಷ್ಟವಿಲ್ಲ. ಇವತ್ತು ನಮ್ಮ ಇಡೀ ರಾಜಕೀಯ ನಡೀತಿರೋದೆ ಈ ರೀತಿ. ನೋಡಿ, ನಮಗೆ ಕಾಣೋ ಸತ್ಯನ ಹೇಗೆಲ್ಲಾ ಮರೆಮಾಚಿ ದ್ರೋಹ ಮಾಡಿಕೊಂಡಿದ್ದೇವೆ! ಇವತ್ತು ಪದವಿ ಇಲ್ಲದೋನು ಡಾಕ್ಟರಾಗದೆ ಆಪರೇಷನ್ ಮಾಡೋಕೆ ಆಗೋಲ್ಲ; ಮಾಡಿದರೆ ಪ್ರಾಣಗಳು ಹೋಗ್ತವೆ. ಏರೋನಾಟಿಕ್ ಅನುಭವ ಇಲ್ಲದೆ ವಿಮಾನ ಚಲಾಯಿಸಿದರೆ ಸಾವು ಗ್ಯಾರಂಟಿ. ಆದರೆ, ರೈತರ ಸಮಸ್ಯೆ ತಿಳಿಯದೇ, ಆರ್ಥಿಕ ಪರಿಸ್ಥಿತಿ ಅರಿವಿಲ್ಲದೇ, ಸಮಾಜದ ನೋವಿಗೆ ಸ್ಪಂದಿಸದೇ ಇರುವವನು ಜನಪ್ರಿಯತೆಯಿಂದಲೋ, ಜನ ಎಲ್ಲಾ ನನ್ನ ನೋಡ್ಕೊಂಡು ಹೋಗ್ತಾರೆ ಅನ್ನೋದಕ್ಕೋ, ಹಣದ ಬಲದ ಕಾರಣಕ್ಕೋ ನಾಯಕನಾಗಲು ಹೊರಡುತ್ತಾನೆ. ಇಂಥ ಕೆಲ ಪುಢಾರಿಗಳನ್ನು ಬೆಳೆಸುತ್ತಾ, ಬೆಳೆಸುತ್ತಾ ನಾವು ನಮಗೆ ಎಂಥ ಸುಳ್ಳು ಹೇಳಿಕೊಳ್ಳುತ್ತಾ ಇದ್ದೀವಿ ನೋಡಿ.
ವೈದ್ಯಕೀಯದ ಬಗ್ಗೆ ತಿಳಿಯದವರು ಆರೋಗ್ಯ ಸಚಿವರು, ಸಿಟಿಯಲ್ಲಿ ಕಟ್ಟಡಗಳನ್ನು ನೋಡಿ ಬೆಳೆದವ ಕೃಷಿ ಸಚಿವನಾಗುವ ದೌರ್ಭಾಗ್ಯ ನಮ್ಮಲ್ಲಿ ಮಾತ್ರ ಇರೋದು. ಇಂಥವರಿಗೆ ರೈತನ ಆತ್ಮಹತ್ಯೆ ಸಣ್ಣ ರೋಡ್ ಆಕ್ಸಿಡೆಂಟ್ ರೀತಿ ಕಂಡುಬಿಡುವ ಅಪಾಯವಿದೆ.ಅನುಭವಕ್ಕೂ, ಸಚಿವ ಸ್ಥಾನಕ್ಕೂ ಯಾವುದೇ ಸಂಬಂಧ ಇರೋದಿಲ್ಲ.
ಈ ಎಲ್ಲದಕ್ಕೂ ಕಾರಣ, ಜಗತ್ತಲ್ಲಿ ಏನಾದರೆ ನಮಗೇನು, ನಮಗೂ ಅದಕ್ಕೂ ಸಂಬಂಧ ಇಲ್ಲ ಅಂತ ತಮ್ಮನ್ನು ತಾವು ನಂಬಿಕೊಂಡು ಬದುಕುತ್ತಿರುವುದು. ಪಟ್ಟಣದ ಬಹಳ ಹತ್ತಿರದಲ್ಲೇ, ರೈತ ಮಳೆ ಇಲ್ಲದೆ, ಬೆಳೆ ಇಲ್ಲದೆ, ಮಗಳಿಗೆ ಮದುವೆ ಮಾಡಿ ಸಾಲ ತೀರಿಸಲಾಗದೆ ದಿಗಂತವನ್ನು ನೋಡುತ್ತಾ, ನನಗೆ ಯಾರೂ ದಿಕ್ಕಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಪರೋಕ್ಷವಾಗಿ ನಾವೂ ಕಾರಣವೇ. ಹಾಗೆಯೇ, ತಮಿಳುನಾಡಿನ ತಂಜಾವೂರು ತೀರುವಾರೂರು, ನಾಗಪಟ್ಟಣಂನ ಹಲವು ಜಿಲ್ಲೆಗಳು ಮರಭೂಮಿಯಾದರೆ ಅದಕ್ಕೆ ಕಾರಣ ನಾವು ಅನ್ನುವ ಅರಿವಾಗದಿದ್ದರೆ ಭವಿಷ್ಯ ಕಷ್ಟ.
ಈ ಭ್ರಷ್ಟಾಚಾರ, ಜಾತಿ ವೈಷಮ್ಯ, ಭವಿಷ್ಯದ ಕಾಳಜಿ ಇಲ್ಲದ ಪಾಲಿಸಿಗಳು ಇವೆಲ್ಲಾ ನಾವು ವೋಟು ಹಾಕದೇ ಬೆಳೆಸಿರುವ ಸ್ವಯಂಘೋಷಿತ ನಾಯಕರಿಂದಲೇ ಅನ್ನೋ ಸತ್ಯ ಅರಿವಾಗದೇ ಇದ್ದರೆ ನಮಗೆ ನಾವು ಮಾಡಿ
ಕೊಳ್ಳುವ ದ್ರೋಹ ನಮ್ಮನ್ನು ಸುಡುತ್ತಲೇ ಇರುತ್ತದೆ.
ಒಂದು ವಿಷಯ ತಿಳ್ಕೊಳಿ. ಸುಳ್ಳು ಅನ್ನೋದು ತುಂಬಾ ಸುಂದರ, ಅದಕ್ಕೆ ಆಯಸ್ಕಾಂತದ ಶಕ್ತಿ ಇದೆ. ಅದಕ್ಕೆ ಇನ್ನೊಬ್ಬರನ್ನು ನಂಬಿಸೋ ತಾಕತ್ತು ಇರೋದು. ಅಂಥ ಸುಳ್ಳನ್ನು ನಾವು ನಮಗೆ ಹೇಳಿಕೊಂಡರೆ ಹೇಗೆ? ಪರಿಸ್ಥಿತಿ ಹೀಗಿದ್ದಾಗ ಒಳ್ಳೆಯದನ್ನ, ಬೆಳವಣಿಗೆಯನ್ನು ಕೇಳುವ ನೈತಿಕ ಹಕ್ಕು ನಮಗೆ ಇರೋಲ್ಲ. ಹೀಗೆ, ನಮಗೆ ನಾವೇ ಮಾಡಿಕೊಳ್ಳುವ ದ್ರೋಹಗಳಿಂದ ನದಿಯ ತೀರದಲ್ಲಿ ಶುರುವಾಗಿದ್ದ ಮನುಷ್ಯನ ನಾಗರಿಕತೆ
ಕೊನೆಗೆ ಅದೇ ಬತ್ತಿದ ನದಿಯ ತೀರದಲ್ಲಿ ಅಂತ್ಯವಾಗಬಹುದು.
ಹೌದಲ್ವೇ?
– ಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Puttur: ಪೆನ್ ಪಾಯಿಂಟ್ ಕ್ರಿಕೆಟ್: ಸತತ 2ನೇ ಬಾರಿ ಬ್ಲೂ ಹಂಟರ್ಸ್ ಚಾಂಪಿಯನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.