Team Udayavani, Aug 25, 2023, 6:20 AM IST
ಚಂದ್ರಯಾನ-3 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಮುಂದಿನ ಯೋಜನೆಗಳು, ಈಗಿನ ಚಂದ್ರಯಾನ-3ಗೆ ಇರುವ ಮುಂದಿನ ಸವಾಲುಗಳ ಬಗ್ಗೆ ಆಂಗ್ಲ ವಾಹಿನಿ ನ್ಯೂಸ್-18 ಜತೆ ಮಾತನಾಡಿದ್ದಾರೆ.
ಚಂದ್ರಯಾನ -3ರ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಬಳಿಕ ರೋವರ್ ಮತ್ತು ಲ್ಯಾಂಡರ್ ಆರೋಗ್ಯ ಹೇಗಿದೆ? ಈಗ ಅವು ವೈಜ್ಞಾನಿಕ ಶೋಧ ಆರಂಭಿಸಿವೆಯೇ?
ರೋವರ್ ಮತ್ತು ಲ್ಯಾಂಡರ್‌ಗಳ ಆರೋಗ್ಯ ಉತ್ತಮವಾಗಿದೆ. ಎರಡೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಇವುಗಳು ವೈಜ್ಞಾನಿಕ ಶೋಧವನ್ನು ಇನ್ನೂ ಆರಂಭಿಸಿಲ್ಲ. ಇದಕ್ಕೆ ಕೊಂಚ ಸಮಯ ಬೇಕು.
ಕಡೆಯ 15 ನಿಮಿಷಗಳು “ಅತ್ಯಂತ ಆತಂಕಕಾರಿ’ಯಾಗಿದ್ದವು ಎಂದು ಹೇಳಿದ್ದೀರಿ, ಈ ಸಂದರ್ಭದಲ್ಲಿ ನಿಮ್ಮ ಭಾವನೆಗಳು ಹೇಗಿದ್ದವು?
ವಿಕ್ರಮ್ ಲ್ಯಾಂಡ್ ಆಗುವ ಕಡೇ 15 ನಿಮಿಷಗಳು ಅವಧಿಯಲ್ಲಿ ನಾವು ಹೆಚ್ಚು ಆತಂಕಕ್ಕೆ ಒಳಗಾಗಲಿಲ್ಲ. ಇದಕ್ಕೆ ಕಾರಣವೂ ಇದೆ. ನೌಕೆ ನಮ್ಮ ಯೋಜನೆ ಪ್ರಕಾರವಾಗಿಯೇ ಇಳಿಯುತ್ತಿತ್ತು. ಅಂದರೆ, ನಮ್ಮದೇ ಪಥದಲ್ಲಿಯೇ ಸಾಗುತ್ತಿತ್ತು. ಅದು ನಿಖರವಾಗಿ ಇಳಿಯಲಿದೆ ಎಂಬ ಭರವಸೆಯನ್ನೂ ನೀಡಿತ್ತು. ಹೀಗಾಗಿ ನಾವು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಲಿಲ್ಲ.
ಇಲ್ಲಿಂದ ಮುಂದೆ ಚಂದ್ರನ ಅಂಗಳದಲ್ಲಿ ಯಾವ ರೀತಿಯ ಸವಾಲುಗಳು ಎದುರಾಗಬಹುದು?
ನಾವು ಇದೇ ಮೊದಲ ಬಾರಿಗೆ ಚಂದ್ರನ ಅಂಗಳದಲ್ಲಿ ನೌಕೆಯನ್ನು ಇಳಿಸಿರುವುದರಿಂದ ನಮಗೆ ಕೆಲವು ಸವಾಲುಗಳು ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಹೇಳುವುದಾದರೆ, ಪ್ರಗ್ಯಾನ್ ಸಂಚರಿಸುವಾಗ ಅಲ್ಲಿನ ಧೂಳಿನ ಕಣ ಮೆತ್ತಿಕೊಳ್ಳಬಹುದು. ಹೀಗಾಗಿ, ಜಾಮ್ ಆದರೂ ಆಗಬಹುದು. ಅಂದರೆ, ಸಂಚಾರ, ಮೋಟಾರ್ ಕೆಲಸ ಮಾಡದೆ, ಸ್ಥಗಿತವಾಗಬಹುದು. ಅಲ್ಲಿನ ಧೂಳು ವಿಶೇಷವಾಗಿದ್ದು, ಭೂಮಿಯ ರೀತಿ ಇರುವುದಿಲ್ಲ. ಇಲ್ಲಿನ ವಾತಾವರಣದಲ್ಲಿ ಇರುವ ಹಾಗೆ ಅಲ್ಲಿನ ಗಾಳಿಯೂ ಇರುವುದಿಲ್ಲ. ಇವೆಲ್ಲವೂ ಸೇರಿಕೊಂಡು ಸಮಸ್ಯೆ ಸೃಷ್ಟಿಸುತ್ತವೆ. ನಾವಿನ್ನೂ ಅಂಥ ಸಮಸ್ಯೆಗಳನ್ನು ನೋಡಬೇಕಾಗಿದೆ. ಅದನ್ನು ಸಮರ್ಥವಾಗಿ ಎದುರಿಸುತ್ತೇವೆ. ಅಲ್ಲಿನ ತಾಪಮಾನವೂ ನಮಗೆ ಬೇರೊಂದು ರೀತಿಯ ಸಮಸ್ಯೆ ಸೃಷ್ಟಿಸಬಹುದು. ಹೀಗಾಗಿ, ನಾವು ಕಾಯಬೇಕು ಅಷ್ಟೇ.
ಚಂದ್ರನ ಅಂಗಳದಲ್ಲಿ ಸಂಗ್ರಹಿಸುವ ದತ್ತಾಂಶಗಳ ಕಥೆ ಏನು?
ಇದಕ್ಕಾಗಿ ನಾವು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪ್ರತ್ಯೇಕ ಸಮಿತಿ ಇದರ ಬಗ್ಗೆ ನೋಡಿಕೊಳ್ಳುತ್ತವೆ. ಪ್ರತಿಯೊಂದು ಪೇಲೋಡ್‌ಗಳನ್ನು ಒಬ್ಬೊಬ್ಬರು ನೋಡಿಕೊಳ್ಳುತ್ತಾರೆ. ಇದರ ಹಿಂದೆ ಒಂದು ದೊಡ್ಡ ತಂಡವೇ ಇದೆ. ಇದು ಚಂದ್ರನ ಕುರಿತ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಇದನ್ನು ಭಾರತದಲ್ಲಿರುವ ವೈಜ್ಞಾನಿಕ ಸಮುದಾಯಕ್ಕೆ ಮೊದಲು ನೀಡುತ್ತೇವೆ. ನಂತರದಲ್ಲಿ ಜಗತ್ತಿನ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುತ್ತೇವೆ.
ಮುಂದಿನ ಗುರಿಗಳೇನು? ಚಂದ್ರನಿಂದ ಮಾದರಿ ತರುವ ಬಗ್ಗೆ ಚರ್ಚೆಯಾಗುತ್ತಿದೆ?
ನಮಗೂ ಒಂದು ದಿನ ಬರುತ್ತದೆ. ಅದಕ್ಕೆ ಬೇಕಾದ ಸಾಮರ್ಥ್ಯ ಪಡೆಯುವ ವರೆಗೆ ಕಾಯಬೇಕು. ಅಂದರೆ, ಆ ಕ್ಷಣಗಳು ತೀರಾ ಹತ್ತಿರದಲ್ಲೇ ಬರಬಹುದು. ಕೆಲವೊಮ್ಮೆ ನಮಗೆ ಅಲ್ಲಿನ ಮಾದರಿ ಬೇಕಾಗುವ ಅನಿವಾರ್ಯತೆ ಎದುರಾಗದೇ ಇರಬಹುದು. ಏಕೆಂದರೆ, ನಾವೇ ಅಲ್ಲಿಗೆ ಹೋಗಿ ಆ ಮಾದರಿಯ ಪರೀಕ್ಷೆಯನ್ನೂ ನಡೆಸಬಹುದು. ಅದು ತಂತ್ರಜ್ಞಾನ, ಹಣ, ಹೂಡಿಕೆಗೆ ತಕ್ಕಂತೆ ನಿರ್ಧಾರವಾಗುತ್ತದೆ. ಕೇವಲ ಚಂದ್ರನಷ್ಟೇ ಅಲ್ಲ, ನಮ್ಮ ಯೋಜನೆಗಳು ಮಂಗಳ, ಶುಕ್ರನ ಕಡೆಗೂ ಹೋಗುತ್ತವೆ. ಸೂರ್ಯನ ಬಗ್ಗೆಯೂ ನೋಡಬೇಕಾಗಿದೆ. ಈಗ ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಪೀಳಿಗೆಯಲ್ಲಿ ಇದು ನಮ್ಮ ಮೊದಲ ಹೆಜ್ಜೆ. ಮುಂದಿನ ಪೀಳಿಗೆ ವೇಳೆಗೆ ಇನ್ನಷ್ಟು ಹೆಜ್ಜೆ ಇಡಬಹುದು.
ಗಗನಯಾನ ಯೋಜನೆ ಬಗ್ಗೆ?
ಅದು ಉತ್ತಮವಾಗಿ ಸಾಗುತ್ತಿದೆ. ನಾವು ಕ್ರ್ಯೂಮಾಡೆಲ್ ಮತ್ತು ಕ್ರ್ಯೂ ಎಸ್ಕೇಪ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಇದನ್ನು ಪರೀಕ್ಷಿಸಿ, ಅರ್ಹತೆ ಮೇರೆಗೆ ಮುನ್ನಡೆಯಲಿದ್ದೇವೆ.