ಎಲ್ಲರೊಳಗೊಂದಾಗಿ ಬದುಕಿದ ಚಟರ್ಜಿ
Team Udayavani, Aug 14, 2018, 12:30 AM IST
ಅಠವಳೆ ಮಾತನ್ನು ಕೇಳಿ ಇಡೀ ಸಂಸತ್ತು ಚಟರ್ಜಿ ಏನುತ್ತರಿಸು ತ್ತಾರೋ ಎಂದು ಕುತೂಹಲದ ಕಿವಿಯಾಯಿತು. ಚಟರ್ಜಿ ಕ್ಷಣವೂ ಯೋಚಿಸದೇ ಹೇಳಿದರು: “”ಹೌದು, ಆದರೆ ಹಿಂದಿನ ತಪ್ಪನ್ನು ಮುಂದುವರಿಸಬೇಕು ಎಂದು ಅದರರ್ಥವಲ್ಲ!’. ಅದೇ ದಿನವೇ ಅಠವಳೆಯವರ ಫೋನು ಅಧಿವೇಶನದ ಸಮಯ ದಲ್ಲಿ ರಿಂಗಾಗಿಬಿಟ್ಟಿತು. ಚಟರ್ಜಿ ಅದನ್ನು ಸೀಸ್ ಮಾಡಿಸಿಬಿಟ್ಟರು.
ಸೋಮನಾಥ್ ಚಟರ್ಜಿ. ಸಾಂವಿಧಾನಿಕ ಹುದ್ದೆಗಳಲ್ಲಿರು ವವರು ಪಕ್ಷಾತೀತವಾಗಿರಬೇಕು ಎನ್ನುವ ಮಾತಿಗೆ ಉದಾಹರಣೆ ಈ ಹೆಸರು. ಸುದ್ದಿಗದ್ದಲದ ಈ ಸಮಯದಲ್ಲಿ ಅವರ ನಿಧನ ವಾರ್ತೆಯೂ ಒಂದೇ ದಿನದಲ್ಲಿ ಕಳೆದುಹೋಗಬಹುದಾದರೂ ಚಟರ್ಜಿ ಅವರನ್ನು ನೋಡಿ ಬೆಳೆದ ಪೀಳಿಗೆಯಲ್ಲಿ ಒಬ್ಬನಾದ್ದರಿಂದ ಅವರ ನಿಧನ ನನ್ನನ್ನು ಅರೆ ಕ್ಷಣ ಹಿಂದಕ್ಕೆ ತಿರುಗಿ ನೋಡುವಂತೆ ಮಾಡಿದೆ. ಬೆಂಗಾಲಿಗಳಿಗೆ ರಕ್ತಗತವಾಗಿರುವ ಡ್ರೈಹ್ಯೂಮರ್, ಅಳೆದು ತೂಗಿ ಹೊರಬೀಳುತ್ತಿದ್ದ ಮಾತುಗಳು, ತಾವು ನಂಬಿದ ತತ್ವಕ್ಕೆ ಬದ್ಧರಾಗಿರಲು ಪಕ್ಷದ ನಿಲುವನ್ನೂ ಉಲ್ಲಂ ಸಿ ನಿರ್ಧಾರ ಕೈಗೊಳ್ಳುವ ಎದೆಗಾರಿಕೆ…ಎಲ್ಲರೊಂದಿಗೂ ಒಡನಾಟವಿಟ್ಟುಕೊಂಡು ಯಾರನ್ನೂ ಹೆಚ್ಚು ಹತ್ತಿರಕ್ಕೆ ಬಿಟ್ಟುಕೊಳ್ಳದ ಅಂತ ರ್ಮುಖಿ ಗುಣ… ಸೋಮನಾಥ್ ಚಟರ್ಜಿ ಅವರ ವ್ಯಕ್ತಿತ್ವವನ್ನು ಹೀಗೆ ಕಟ್ಟಿಕೊಡಬಹುದೇನೋ? ದೇಶದ ಲೆಫ್ಟ್ ರಾಜಕಾರಣದ ಆಧಾರ ಪುರುಷರಲ್ಲಿ ಒಬ್ಬರು ಎಂದು ಈಗ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆಯಾದರೂ, ಯಾವ ಸಿಪಿಐ(ಎಂ)ಅನ್ನು ಕಟ್ಟಲು ಅವರು ಜೀವನ ಸವೆಸಿದರೋ, ಒಂದು ದಶಕದ ಹಿಂದೆ ಅದೇ ಪಕ್ಷದಿಂದ ಅವರನ್ನು ಉಚ್ಚಾಟಿಸ ಲಾಗಿತ್ತು ಎನ್ನುವ ಕಟು ಸತ್ಯ ಚಟರ್ಜಿಯವರ ಜೀವನೇತಿಹಾಸದ “ದುಃಖ’ದ ಅಧ್ಯಾಯದ ಭಾಗ.
ಚಟರ್ಜಿ ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಅನೇಕ ಮೈಲಿಗಲ್ಲುಗಳನ್ನು ಮುಟ್ಟಿದವರು. ಹತ್ತು ಬಾರಿ ಸಂಸದರಾಗಿ, ಸರ್ವಮಾನ್ಯ ಸ್ಪೀಕರ್ ಆಗಿ ಹೆಸರು ಗಳಿಸಿದವರು. ಲಿಯನೋಲ್ ಮೆಸ್ಸಿಯ ಕಟ್ಟಾ ಅಭಿಮಾನಿಯಾಗಿದ್ದ ಅವರು ಸಕ್ರಿಯ ರಾಜಕೀಯದಿಂದ ಹೊರಬಂದಮೇಲೆ ಕೋಲ್ಕತ್ತಾದಲ್ಲಿ ನಡೆಯುವ ಚಿಕ್ಕ ಪುಟ್ಟ ಪಂದ್ಯಾವಳಿಗಳಿಗೂ ತೆರಳಿ ತಮ್ಮ ಫುಟ್ಬಾಲ್ ಪ್ರೇಮವನ್ನು ಸಾದರಪಡಿಸುತ್ತಿದ್ದರು. ಎಲ್ಲಕ್ಕಿಂತಲೂ ಅಚ್ಚರಿಪಡಿಸುವ ವಿಷಯವೆಂದರೆ ಚಟರ್ಜಿ ಅವರ “ಸೈದ್ಧಾಂತಿಕ ಹಿನ್ನೆಲೆ’ಯ ಬೆಳವಣಿಗೆ. ಸೋಮನಾಥ್ ಅವರು ಹುಟ್ಟಿದ್ದ ಬೆಂಗಾಲಿ ಬ್ರಾಹ್ಮಣರ ಕುಟುಂಬದಲ್ಲಿ. ತಂದೆ ನಿರ್ಮಲ್ ಚಂದ್ರ ಚಟರ್ಜಿ ಮತ್ತು ತಾಯಿ ವೀಣಾಪಾಣಿ ದೇವಿ. ಆ ಕಾಲದಲ್ಲೇ ದೇಶದ ಪ್ರಖ್ಯಾತ ವಕೀಲರಲ್ಲಿ ಒಬ್ಬರಾಗಿದ್ದ ನಿರ್ಮಲ್ ಚಂದ್ರ ಅವರು ರಾಷ್ಟ್ರವಾದಿ ಹಿಂದೂ ಜಾಗೃತಿಯ ಪ್ರಬಲ ಸಮರ್ಥಕರಾಗಿದ್ದರು. ವಿಶೇಷವೆಂದರೆ ಅಖೀಲ ಭಾರತ ಹಿಂದೂ ಮಹಾಸಭೆಯ ಸಂಸ್ಥಾಪಕರಲ್ಲಿ ನಿರ್ಮಲ್ ಚಟರ್ಜಿ ಕೂಡ ಒಬ್ಬರು. ಜನಸಂಘದ ಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಬೆಂಬಲದಿಂದ ಮೊದಲು ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ನಿರ್ಮಲ್ ಚಂದ್ರ ಅವರು ಮುಂದೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಬೆಂಬಲದಿಂದಲೂ ಲೋಕಸಭೆ ಪ್ರವೇಶಿಸಿದವರು!
“”ಎಲ್ಲಾ ಸಿದ್ಧಾಂತಗಳೂ ಒಮ್ಮೊಮ್ಮೆ ಪ್ರಸ್ತುತವಾಗುತ್ತವೆ-ಕೆಲವು ಸಂದರ್ಭಗಳಲ್ಲಿ ಅಪ್ರಸ್ತುತವಾಗುತ್ತವೆ. ದೇಶದ, ಸಮಾಜದ ಹಿತಕ್ಕೆ ಪೂರಕವಾಗಿರುವ ಅಂಶ ಯಾವ ಸಿದ್ಧಾಂತದಿಂದಲೇ ಬರಲಿ ಅದನ್ನು ಸ್ವೀಕರಿಸಬೇಕು” ಎನ್ನುತ್ತಿದ್ದರು ನಿರ್ಮಲ್ ಚಟರ್ಜಿ. ಈ ಕಾರಣಕ್ಕಾಗಿಯೇ ಅವರು ಯಾವುದೇ ಪಕ್ಷವನ್ನು-ಸಿದ್ಧಾಂತವನ್ನು ವಜ್ಯì ಎನ್ನುವಂತೆ ನೋಡಲೇ ಇಲ್ಲ. ಎಲ್ಲರಿಂದಲೂ ಕಲಿಯು ವುದಿದೆ ಎಂದೇ ಹೇಳುತ್ತಿದ್ದರು.
ಸೋಮನಾಥ್ ಚಟರ್ಜಿಯವರ ಪಕ್ಷಾತೀತ-ಸಮಾಜಮುಖೀ ಪ್ರಕೃತಿಯು ಅವರ ತಂದೆಯಿಂದಲೇ ಬಂದಿರುವುದು ಸ್ಪಷ್ಟ.
ಸೋಮನಾಥ್ ಚಟರ್ಜಿ ಅವರ ಶಿಕ್ಷಣ ಕೋಲ್ಕತಾ(ಪ್ರಸಿಡೆನ್ಸಿ ಕಾಲೇಜು) ಮತ್ತು ಬ್ರಿಟನ್‌ನಲ್ಲಾಯಿತು(ಮಿಡಿಲ್ ಟೆಂಪಲ್‌ನಲ್ಲಿ ವಕೀಲಿಕೆ). ರಾಜಕೀಯ ಪ್ರವೇಶಿಸುವ ಮುನ್ನ ಅವರು ಕೋಲ್ಕತ್ತಾ ಹೈಕೋರ್ಟ್‌ನಲ್ಲೂ ಪ್ರಾಕ್ಟೀಸ್ ಮಾಡಿ ಬಹುಬೇಗನೇ ಹೆಸರು ಗಳಿಸಿಬಿಟ್ಟರು.
ಆ ಸಮಯದಲ್ಲಿಯೇ ಅಳೆದುತೂಗಿ “ತೂಕದ’ ಮಾತನಾಡುವ ಸ್ವಭಾವವನ್ನು ಸೋಮನಾಥ್ ಚಟರ್ಜಿ ಬೆಳೆಸಿಕೊಂಡ ರೆನಿಸುತ್ತದೆ. ದೇಶ ಕಂಡ ಅತ್ಯುತ್ತಮ ಸ್ಪೀಕರ್‌ಗಳಲ್ಲಿ ಒಬ್ಬರೆಂದು ಅವರು ಹೆಸರು ಪಡೆಯುವುದಕ್ಕೂ ಈ ಗುಣ ಕಾರಣವಾಯಿತು. “ಟು ದಿ ಪಾಯಿಂಟ್’ ಎನ್ನಿಸುವಂತೆ ಇರುತ್ತಿದ್ದ ಅವರ ಮಾತುಗಳನ್ನು ಕೇಳಿ ಸಂಸದರೆಲ್ಲ ಅವರನ್ನು “ಹೆಡ್‌ಮಾಸ್ಟರ್’ ಎಂದೇ ಕರೆಯುತ್ತಿದ್ದರು.
ಒಮ್ಮೆ ಹೀಗಾಯಿತು…ತಮ್ಮ ಜೋರು ದನಿ, ಗದ್ದಲದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ರಾಮ್‌ದಾಸ್ ಅಠವಳೆ ಯಾವುದೋ ವಿಷಯದಲ್ಲಿ ಏರಿದ ಧ್ವನಿಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಲಾರಂಭಿಸಿ ದರು. ಅಠವಳೆಯವರನ್ನು ಸೋಮನಾಥ್ ಚಟರ್ಜಿ ತರಾಟೆಗೆ ತೆಗೆದುಕೊಂಡರು. ಆಗ ಅಠವಳೆ “”ಹಿಂದಿನ ಲೋಕಸಭೆಯಲ್ಲಿ ನೀವೇ ಅಲ್ಲವೇ ನನಗೆ ಜೋರಾಗಿ ಕೂಗಲು ಸಲಹೆ ನೀಡಿದ್ದು?” ಎಂದು ಪ್ರಶ್ನಿಸಿಬಿಟ್ಟರು. (ಅದರ ಹಿಂದಿನ ಲೋಕಸಭೆಯಲ್ಲಿ ಸೋಮನಾಥ್ ಚಟರ್ಜಿ ಸಿಪಿಐ(ಎಂ) ನಾಯಕರಾಗಿದ್ದರು.)
ಅಠವಳೆ ಮಾತನ್ನು ಕೇಳಿ ಇಡೀ ಸಂಸತ್ತು ಚಟರ್ಜಿ ಏನುತ್ತರಿಸು ತ್ತಾರೋ ಎಂದು ಕುತೂಹಲದ ಕಿವಿಯಾಯಿತು. ಚಟರ್ಜಿ ಕ್ಷಣವೂ ಯೋಚಿಸದೇ ಹೇಳಿದರು: “”ಹೌದು, ಆದರೆ ಹಿಂದಿನ ತಪ್ಪನ್ನು ಮುಂದುವರಿಸಬೇಕು ಎಂದು ಅದರರ್ಥವಲ್ಲ!” ಅದೇ ದಿನವೇ ಅಠವಳೆಯವರ ಫೋನು ಅಧಿವೇಶನದ ಸಮಯ ದಲ್ಲಿ ರಿಂಗಾಗಿಬಿಟ್ಟಿತು. ಚಟರ್ಜಿ ಅದನ್ನು ಸೀಸ್ ಮಾಡಿಸಿಬಿಟ್ಟರು. ಇಷ್ಟಾದ ಮೇಲೆ ಅಠವಳೆ ಚಟರ್ಜಿಯವರ ವಿರುದ್ಧ ಮಾತನಾಡಲಿಲ್ಲ, ಬದಲಾಗಿ ಹೊಸ ಸಂಸದರಿಗೆ ಚಟರ್ಜಿಯವರ ಮಾರ್ಗದರ್ಶನ ಬಹಳ ಮುಖ್ಯ ಎಂದು ಹೊಗಳಿದರು.
ಸೋಮನಾಥ್ ಚಟರ್ಜಿ ಅವರು ಸ್ಪೀಕರ್ ಆಗಿದ್ದಾಗ ಸರಕಾರಿ ಹಣದಿಂದ ಸಂಸದರಿಗೆ ಚಹ-ಬಿಸ್ಕೆಟ್ ನೀಡುವುದರ ಮೇಲೆ ನಿರ್ಬಂಧ ಹೇರಿದ್ದರು. ಸಂಸದರು ವಿದೇಶ ಯಾತ್ರೆ ಕೈಗೊಳ್ಳುವಾಗ ಜೊತೆಗೆ ತಮ್ಮ ಪರಿವಾರದವರನ್ನು ಕರೆದೊಯ್ದರೆ, ಕುಟುಂಬದ ಖರ್ಚನ್ನೆಲ್ಲ ಸಂಸದರೇ ನೊಡಿಕೊಳ್ಳಬೇಕು ಎಂದು ಹೇಳುತ್ತಿದ್ದರು ಚಟರ್ಜಿ. ಅದರಂತೆಯೇ ತಾವೂ ಬದುಕಿ ತೋರಿಸಿದರು. ವಿದೇಶ ಪ್ರವಾಸದ ವೇಳೆ ಮನೆಯವರ ಖರ್ಚನ್ನು ತಮ್ಮ ಜೇಬಿನಿಂದಲೇ ನೋಡಿಕೊಳ್ಳುತ್ತಿದ್ದರು ಚಟರ್ಜಿ. ಚಟರ್ಜಿ 2010ರಲ್ಲಿ ಬಿಡುಗಡೆ ಮಾಡಿದ ಆತ್ಮಕಥೆ “Keeping The Faith: Memoirs Of A Parliamentarian’ ಆ ಸಮಯ ದಲ್ಲಿ ಬಹುಚರ್ಚೆಯ ವಿಷಯವಾಗಿತ್ತು. ಈ ಪುಸ್ತಕದಲ್ಲಿ ಅವರು ಭಾರತದ ರಾಜಕೀಯ ಇತಿಹಾಸವನ್ನು ಒಳಗಿನವನಾಗಿ ವಿಶ್ಲೇಷಿಸಿದ್ದಾರೆ.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಾವು ಇಂದಿರಾ ಸರಕಾರ ದಿಂದ ಎದುರಿಸಿದ ತೊಂದರೆಯ ಬಗ್ಗೆಯೂ ಅವರು ಉಲ್ಲೇಖೀಸಿ ದ್ದಾರೆ. ತುರ್ತುಪರಿಸ್ಥಿತಿಯ ಉಸಿರುಕಟ್ಟಿಸುವ ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಟರ್ಜಿ ಬೇರೆ ದೇಶಕ್ಕೆ ಹೋಗಲು ಬಯಸಿದ್ದರಂತೆ. ಆದರೆ ಆ ಸಮಯದಲ್ಲಿ ಅವರ ಪಾಸ್ ಪೋರ್ಟ್ ಎಕ್ಸ್‌ಪೈರ್ ಆಗಿಬಿಟ್ಟಿತ್ತು. ಅವರು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದರೂ ಪಾಸ್‌ಪೋರ್ಟ್ ಬರಲೇ ಇಲ್ಲವಂತೆ.
“”ನಾನು ಪಾಸ್‌ಪೋರ್ಟ್ ಸಮಸ್ಯೆ ಬಗೆಹರಿಸುವಂತೆ ಸಿದ್ದಾರ್ಥ್ ಶಂಕರ್ ರಾಯ್(1971ರಿಂದ 1977ರ ತನಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ) ಅವರಲ್ಲಿ ಸಹಾಯ ಕೋರಿದೆ. ಅವರು ಕೂಡಲೇ ಓಂ ಮೆಹ್ತಾ(ಮಿನಿಸ್ಟರ್ ಆಫ್ ಸ್ಟೇಟ್) ಅವರೊಂದಿಗೆ ಈ ಬಗ್ಗೆ ಮಾತನಾಡಿದರು. ಆದರೆ ಮೆಹ್ತಾ ಅವರಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಒಂದು ಬಾರಿ ಸೆಂಟ್ರಲ್ ಹಾಲ್‌ನಲ್ಲಿ ನನಗೆ ಮೆಹ್ತಾ ಸಿಕ್ಕರು. “ಚಟರ್ಜಿ ಅವರೇ ಪಾಸ್‌ಪೋರ್ಟ್ ವಿಷಯದಲ್ಲಿ ನನ್ನ ಮೇಲೆ ಒತ್ತಡ ಹಾಕಬೇಡಿ. ಮೇಡಂ(ಇಂದಿರಾ) ತುಂಬಾ ಸ್ಟ್ರಿಕ್ಟ್ ಆಗಿದ್ದಾರೆ’ ಎಂದು ಬಿಟ್ಟರು ಮೆಹ್ತಾ. ಈ ಕಾರಣಕ್ಕಾಗಿಯೇ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನನ್ನ ಪಾಸ್‌ಪೋರ್ಟ್ ವಾಪಸ್ ಸಿಗಲಿಲ್ಲ. ಮುಂದೆ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗ ಅಟಲ್‌ಬಿಹಾರಿ ವಾಜಪೇಯಿಯವರು ವಿದೇಶಾಂಗ ಸಚಿವರಾದರಲ್ಲ, ಆಗ ಅವರಿಗೆ ಪಾಸ್‌ಪೋರ್ಟ್ ವಿಷಯದಲ್ಲಿ ನನಗಾದ ತೊಂದರೆ ಯನ್ನು ತಿಳಿಸಿದೆ. ಆ ದಿನ ಸಂಜೆಯೇ ಹೊಸ ಪಾಸ್‌ಪೋರ್ಟ್ ನನಗೆ ಸಿಕ್ಕಿತು! ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ನನ್ನ ಮನೆವರೆಗೂ ಬಂದು ಕೊಟ್ಟುಹೋದರು. ಆಗ ನನಗೆ ಮತ್ತೆ ಸ್ವಾತಂತ್ರ್ಯ ಪಡೆದ ಅನುಭವವಾಯಿತು. ನಾನು ಅಟಲ್ ಬಿಹಾರಿ ವಾಜಪೇಯಿಯವರಿಗೆ ಧನ್ಯವಾದ ಅರ್ಪಿಸಿದೆ”
ಪಕ್ಷದಿಂದ ಹೊರಕ್ಕೆ
ತಮ್ಮ ನೈತಿಕ ನಿಲುವುಗಳಿಗೆ, ಪ್ರಜಾಪ್ರಭುತ್ವಿಯ ನಿಯಮಾ ವಳಿಗಳಿಗೆ ಬದ್ಧರಾಗಿದ್ದ ಚಟರ್ಜಿ ಇದೇ ಕಾರಣಕ್ಕಾಗಿಯೇ ಪಕ್ಷದಿಂದ ಉಚ್ಚಾಟಿತರಾದದ್ದು ವಿಪರ್ಯಾಸ. 2008ರ ಸಮಯ ವದು. ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ವಿಧೇಯ ಕವನ್ನು ವಿರೋಧಿಸಿದ್ದ ಸಿಪಿಐ(ಎಂ) ಯುಪಿಎ ಸರ್ಕಾರ ದಿಂದ ವಿಮುಖವಾಯಿತು. ಆ ಸಮಯದಲ್ಲಿ ಸಿಪಿಐ(ಎಂ) ಸ್ಪೀಕರ್ ಹುದ್ದೆ ತ್ಯಜಿಸುವಂತೆ ಚಟರ್ಜಿಯವರಿಗೆ ಹೇಳಿತು. ಆದರೆ ಚಟರ್ಜಿಯವರು “ಲೋಕಸಭಾ ಅಧ್ಯಕ್ಷರ ಸ್ಥಾನದಲ್ಲಿರುವ ವ್ಯಕ್ತಿ ಯಾವುದೇ ದಳಕ್ಕೆ ಸೀಮಿತವಾದವನಲ್ಲ’ ಎಂದು ಪಕ್ಷದ ಆದೇಶ ವನ್ನು ತಿರಸ್ಕರಿಸಿಬಿಟ್ಟರು. ಕೂಡಲೇ ಪೊಲಿಟ್‌ಬ್ಯೂರೋ ಅವರನ್ನು ಉಚ್ಚಾಟಿಸಿಬಿಟ್ಟಿತು. “ಅವು ನನ್ನ ಜೀವನದ ಅತ್ಯಂತ ದುಃಖದ ದಿನಗಳು’ ಎಂದು ಒಮ್ಮೆ ಹೇಳಿದ್ದರು ಚಟರ್ಜಿ.
ದಶಕಗಳವರೆಗೆ ರಾಜಕೀಯ ಲೋಕದಲ್ಲಿ ಬದುಕು ಸವೆಸಿದ ವ್ಯಕ್ತಿ ಹಠಾತ್ತನೆ ಆ ಲೋಕದಿಂದ ಹೊರಬರುವುದು ಸುಲಭದ ಮಾತಲ್ಲ. ಅದರಲ್ಲೂ ವರ್ಚಸ್ವಿ ನಾಯಕನೊಬ್ಬ ಮೂಲ ಪಕ್ಷದಿಂದ ಹೊರಬಿದ್ದನೆಂದರೆ ಒಂದೇ ದಿನದಲ್ಲಿ ಇನ್ನುಳಿದ ಪಕ್ಷಗಳು ಕೆಂಪುಹಾಸು ಹಾಸಿ ತಮ್ಮತ್ತ ಸೆಳೆದುಕೊಳ್ಳಲು ಸಿದ್ಧವಿರುತ್ತವೆ. ಅವು ಒಡ್ಡುವ ಆಮಿಷಗಳನ್ನೋ/ ತೋರಿಸುವ ಕನಸುಗಳನ್ನು ಬೆನ್ನತ್ತಿ “ದಶಕಗಳ’ ಸಿದ್ಧಾಂತವನ್ನೇ ತೊರೆದು ಬಿಡುವವರ ಸಂಖ್ಯೆ ಬಹಳಷ್ಟಿದೆ. ಚಟರ್ಜಿಯವರಿಗೂ ಹೀಗೆ ಪಕ್ಷ ಸೇರುವಂತೆ ಬಹಳ ಆಹ್ವಾನ ಬಂದವು. ಆದರೆ ಅವರು ಯಾವ ಆಹ್ವಾನವನ್ನೂ ಒಪ್ಪಿಕೊಳ್ಳಲಿಲ್ಲ. 2009ರಿಂದಲೇ ಸಕ್ರಿಯ ರಾಜಕೀಯದಿಂದ ದೂರ ಉಳಿದುಬಿಟ್ಟರು.
ತಮ್ಮ ಆತ್ಮಕತೆಯಲ್ಲಿ ಅವರು ಪ್ರಕಾಶ್ ಕಾರಟ್‌ರನ್ನು “ಅಹಂಕಾರಿ ಮತ್ತು ಅಸಹಿಷ್ಣು ವ್ಯಕ್ತಿ’ ಎಂದು ಟೀಕಿಸಿದ್ದರು. ಅಲ್ಲದೇ ಕಾರಟ್‌ರ “ಹಾದಿತಪ್ಪಿದ ಮತ್ತು ಹಾನಿಕಾರಕ ನೀತಿಗಳಿಂದಾಗಿ’ ದೇಶದಲ್ಲಿ 2009ರ ಲೋಕಸಭಾ ಚುನಾವಣೆಯ ನಂತರದಿಂದ ಎಡ ಪಕ್ಷಗಳು ದುರ್ಬಲವಾಗಿಬಿಟ್ಟವು ಎಂದಿದ್ದರು. ಆದರೆ ಇದೆಲ್ಲದರ ಹೊರತಾಗಿಯೂ ಅವರು ಇಷ್ಟ ವರ್ಷಗಳಲ್ಲಿ ಎಂದಿಗೂ ಪಕ್ಷವನ್ನು ಮತ್ತದರ ಸಿದ್ಧಾಂತವನ್ನು ಮಾತ್ರ ಟೀಕಿಸದೇ ನಿಷ್ಠರಾಗಿದ್ದರು. ಸಿಪಿಐ(ಎಂ) ಮತ್ತೆ ಚಟರ್ಜಿಯವರನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿತಾದರೂ ಚಟರ್ಜಿ ಅದಕ್ಕೆ ಒಪ್ಪಲೇ ಇಲ್ಲ… ಅವಿಶ್ವಾಸ ನಿರ್ಣಯದ ವೇಳೆ ತಾವು ಸ್ಪೀಕರ್ ಆಗಿದ್ದದ್ದು ತಪ್ಪಲ್ಲ, ಹಾಗಾಗಿ ಕ್ಷಮೆಯಾಚಿಸುವ ಪ್ರಶ್ನೆಯೇ ಹುಟ್ಟುವುದಿಲ್ಲ ಎಂದು ತಮ್ಮ “ನಿಲುವನ್ನು’ ಮತ್ತೂಮ್ಮೆ ಖಡಕ್ಕಾಗಿ ಸಾರಿ, ರಾಜಕೀಯದಿಂದ ದೂರವೇ ಉಳಿದುಬಿಟ್ಟರು…
ರಾಘವ ಎ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Trump ಹೆಬ್ಬಯಕೆ: ಗ್ರೀನ್ ಲ್ಯಾಂಡ್ ಖರೀದಿಸಲು ಟ್ರಂಪ್ ಯಾಕೆ ಪ್ರಯತ್ನಿಸುತ್ತಿದ್ದಾರೆ?
Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.