ಚಾತುರ್ಮಾಸ್ಯಮಿದಂ ಪುಣ್ಯಂ ಪವಿತ್ರಂ ಪಾಪನಾಶನಮ್
Team Udayavani, Jul 23, 2021, 6:10 AM IST
ಉತ್ತರಾಯಣ ಕಾಲ ದೇವತೆಗಳಿಗೆ ಹಗಲು ಮತ್ತು ದಕ್ಷಿಣಾಯನ ಕಾಲ ರಾತ್ರಿ. ಒಂದು ವರ್ಷ ದೇವತೆಗಳಿಗೆ ಒಂದು ದಿನ. ದಕ್ಷಿಣಾಯನದ ಆಷಾಢ ಶುಕ್ಲ ಏಕಾದಶಿಯಿಂದ ನಾಲ್ಕು ತಿಂಗಳು ದೇವತೆ ಗಳ ನಿದ್ರೆಯ ಸಮಯ. ಶ್ರೀಹರಿಗೆ ಅತೀ ಪ್ರಿಯ ವಾದ ಈ ನಾಲ್ಕು ತಿಂಗಳು- ಚಾತುರ್ಮಾಸ. ಈ ಮಾಸಗಳಲ್ಲಿ ಸ್ನಾನ, ಜಪ, ಹೋಮಹವನಾದಿಗಳು ಅನಂತ ಪುಣ್ಯವನ್ನು ಅನುಗ್ರಹಿಸುತ್ತವೆ. ಸೂರ್ಯನು ಮಕರ ರಾಶಿಯಲ್ಲಿರುವಾಗ ಮಾಘ ಮಾಸದಲ್ಲಿ ಮಾಡುವ ಪುಣ್ಯಕರ್ಮಗಳಿಗೆ ಸಿಗುವ ಫಲ ಇತರ ಅವಧಿಯಲ್ಲಿ ಗಳಿಸಿದ ಪುಣ್ಯಕ್ಕಿಂತ ಮಿಲಿಯ ಪಟ್ಟು ಅಧಿಕ. ಅದಕ್ಕಿಂತ ಕೋಟಿಪಟ್ಟು ವೈಶಾಖ ಮಾಸದಲ್ಲಿ ದೊರಕುತ್ತದೆ. ಆದರೆ ಚಾತುರ್ಮಾಸದಲ್ಲಿ ಗಳಿಸಿದ ಪುಣ್ಯಫಲವು ಎಲ್ಲ ಕಾಲಕ್ಕಿಂತಲೂ ಅನಂತ ಪಟ್ಟು ಮಿಗಿಲಾದುದು. ಇದರಲ್ಲಿ ಸಂಶಯ ಬೇಡ ಎಂದು ವರಾಹ ಪುರಾಣವು ಚಾತುರ್ಮಾಸದ ಮಹತ್ವವನ್ನು ವರ್ಣಿಸುತ್ತದೆ.
ಅಸ್ತಿ ಪ್ರಿಯತಮಃ ಕಾಲಶ್ಚಾತುರ್ಮಾಸ್ಯಾಭಿದೋ ಮಮ| ಸ್ನಾನಂ ವ್ರತಂ ಜಪೋ ಹೋಮಸ್ತಾತ್ರಾನಂತ ಗುಣಂ ಸ್ಮತಮ್ ||
ಮಾಸೇಷ್ವೆನ್ಯೇಷು ಯತ್ಕಿಂಚಿತ್ ಕ್ರಿಯತೇ ಮಮ ತೋಷಣಮ್| ತಸ್ಮಾತ್‌ಕೋಟಿಗುಣಂ ಪುಣ್ಯಂ ಮಾಘೇ ಮಕರಗೇ ರವೌ||
ತತೋ ಪಿ ಕೋಟಿಗುಣಿತಂ ವೈಶಾಖೇ ಮಾಸಿ ಲಭ್ಯತೇ | ತತೋ ಪ್ಯನಂತಗುಣಿತಂ ಚಾತುರ್ಮಾಸ್ಯೆà ನ ಸಂಶಯಃ || – ವರಾಹಪುರಾಣ
ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಿಂದ ಆರಂಭಗೊಂಡು, ಕಾರ್ತಿಕ ಶುಕ್ಲ ಹುಣ್ಣಿಮೆಯಂದು ಸಮಾಪನಗೊಳ್ಳುವ ಅವಧಿ ಚಾತುರ್ಮಾಸ –
ಆಷಾಢಸ್ಯ ಸಿತೇ ಪಕ್ಷೇ ಏಕಾದಶ್ಯಾಂ ಸಮಾರಭೇತ್ | ಕಾರ್ತಿಕಸ್ಯ ಸಿತೇ ಪಕ್ಷೇ ಪೌರ್ಣಮಾಸ್ಯಾಂ ಸಮಾಪಯೇತ್ ||
ಶ್ರವಣ, ಭಾದ್ರಪದ, ಅಶ್ವೀಜ, ಕಾರ್ತಿಕ ನಾಲ್ಕು ತಿಂಗಳು. ಇದರಲ್ಲಿ ಕಾರ್ತಿಕ ಮಾಸ ಅತೀ ಪುಣ್ಯತಮ. ಶ್ರೀಧರ, ಹೃಷೀಕೇಶ, ಪದ್ಮನಾಭ ಮತ್ತು ದಾಮೋದರ ಚಾತುರ್ಮಾಸದ ದೇವತೆಗಳು.
ವ್ರತ ಚತುಷ್ಟಯಮ್: ಎಲ್ಲ ಸ್ತ್ರೀ-ಪುರುಷರು, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಹೀಗೆ ನಾಲ್ಕೂ ಆಶ್ರಮದವರೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ- ಚತುರ್ವಣದವರೂ ಕುಟೀಚಕ, ಬಹೂದ, ಹಂಸ, ಪರಮಹಂಸ ಇತ್ಯಾದಿ ಸನ್ಯಾಸಿಗಳೂ ಚಾತುರ್ಮಾಸ ವ್ರತವನ್ನು ಆಚರಿಸಬೇಕು ಎಂದಿದೆ ಸ್ಕಂದಪುರಾಣ.
ದೇಹಶುದ್ಧಿಗೆ ಚಾತುರ್ಮಾಸ ವ್ರತ!:
ನಮ್ಮ ಪ್ರಾಚೀನರು ಆತ್ಯೋನ್ನತಿಗಾಗಿ ಜಪ ತಪ ಪೂಜೆ, ಅನುಷ್ಠಾನ, ಉಪವಾಸ, ತೀರ್ಥಯಾತ್ರೆ, ದಾನ, ಯಜ್ಞ ಯಾಗ ಮುಂತಾದವುಗಳನ್ನು ಉಪದೇಶಿಸಿದರೆ, ಕೆಲವೊಂದು ವ್ರತಾದಿಗಳನ್ನು ದೇಹಶುದ್ಧಿಗಾಗಿ ಸೂಚಿಸಿದ್ದಾರೆ. ಅದರಲ್ಲಿ ಚಾತುರ್ಮಾಸ ವ್ರತವೂ ಒಂದು ಮತ್ತು ಪ್ರಮುಖವಾದುದು. ಕರ್ಮಸಾಧನೆಗೆ ದೇಹಶುದ್ಧಿ ಅಂದರೆ ಆರೋಗ್ಯವೂ ಮುಖ್ಯ. ಆರೋಗ್ಯವಂತ ಶರೀರ ಬೇಕು.
ಆಹಾರದಲ್ಲಿ ಪಥ್ಯ!:
ಮೊದಲ ತಿಂಗಳಲ್ಲಿ ಆಚರಿಸಲ್ಪಡುವ ಶಾಕವ್ರತ ದಲ್ಲಿ ಸುಮಾರು ಹತ್ತು ಬಗೆಯ ಸಸ್ಯಜನ್ಯ ಪದಾರ್ಥ ಗಳನ್ನು ನಿಷೇಧಿಸಲಾಗಿದೆ. ಹೊಸ ಪೈರು ಮತ್ತಿತರ ಬಹುತೇಕ ಆಹಾರ ಪದಾರ್ಥಗಳು ಸೇವಿಸಲು ಯೋಗ್ಯವಲ್ಲದಿರುವುದರಿಂದ ಆರೋಗ್ಯಕ್ಕೆ ಹಾನಿ ಯುಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ವರ್ಜ್ಯ. ಮಳೆಗಾಲದಲ್ಲಿ ಹೊಸ ಚಿಗುರು ಮತ್ತು ಹುಲ್ಲನ್ನು ಸೇವಿಸುವ ದನದ ಹಾಲು, ಅದರಿಂದ ಮೊಸರಿನಲ್ಲೂ ಕ್ರಮೇಣ ವ್ಯತ್ಯಾಸಗಳು ಕಂಡು ಬರುವುದರಿಂದ ಬಳಕೆಗೆ ಯೋಗ್ಯವಲ್ಲ. ದಧಿ ಮತ್ತು ಹಾಲು ಸೇವನೆ ನಿಷಿದ್ಧ. ಹೊಸ ಧಾನ್ಯವು ಕ್ರಿಮಿಕೀಟಗಳಿಂದ ತುಂಬಿ ಬಳಕೆಗೆ ಯೋಗ್ಯವಲ್ಲದಿರುವುದರಿಂದ ಸೇವನೆ ವರ್ಜ್ಯ. ಈ ನಾಲ್ಕು ತಿಂಗಳ ಆಹಾರದಲ್ಲಿ ಪಥ್ಯವಿರುವುದರಿಂದ ದೇಹಾರೋಗ್ಯ. ಆರೋಗ್ಯವಿದ್ದರೆ ಧರ್ಮಕರ್ಮಸಾಧನೆ ಸುಗಮ. ಶರೀರಮಾದ್ಯಂ ಖಲು ಧರ್ಮ ಸಾಧನಮ್. ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳ ಸಮತೋಲನವನ್ನು ಕಾಪಾಡುವ ದೃಷ್ಟಿಯಿಂದಲೂ ಚಾತುರ್ಮಾಸ ಆಹಾರ ಪಥ್ಯ ಪೂರಕ.
ಪ್ರಥಮೇ ಮಾಸಿ . . ನಿತ್ಯಂ ಶಾಕವ್ರತಂ. . ದ್ವಿತೀಯೇ ಮಾಸಿ ದಧಿವ್ರತಂ. . . ಪಯೋವ್ರತಂ ತೃತೀಯೇತು.. ಚತುರ್ಥೇ ತು.. ದ್ವಿದಲಂ ಬಹುಬೀಜಂ… ಎಂಬಂತೆ – ಮೊದಲ ತಿಂಗಳು ಶಾಕವ್ರತ, ಎರಡನೇ ತಿಂಗಳು ದಧಿವ್ರತ, ಮೂರನೇ ತಿಂಗಳು ಕ್ಷೀರವ್ರತ ಮತ್ತು ನಾಲ್ಕನೇ ಮಾಸ ದ್ವಿದಳ ಧಾನ್ಯ ವ್ರತ. ಶ್ರಾವಣ ಮಾಸದಲ್ಲಿ ಶಾಕವ್ರತ, ಭಾದ್ರಪದದಲ್ಲಿ ದಧಿ, ಆಶ್ವಿನದಲ್ಲಿ ಕ್ಷೀರ ಮತ್ತು ಕಾರ್ತಿಕ ಮಾಸದಲ್ಲಿ ದ್ವಿದಳ ಮತ್ತು ಬಹುಬೀಜವ್ರತವನ್ನು ಹೇಳಿದ್ದಾರೆ. ಇಲ್ಲಿ ವ್ರತ ಎಂದರೆ ವಜ್ಯì ಎಂದರ್ಥ. ಆಷಾಢದಲ್ಲಿ ಶಾಕ, ಶ್ರಾವಣದಲ್ಲಿ ಮೊಸರು, ಆಶ್ವೀಜದಲ್ಲಿ ಹಾಲು ಮತ್ತು ಕಾರ್ತಿಕದಲ್ಲಿ ದ್ವಿದಳವನ್ನು ಸೇವಿಸಬಾರದು.
ಶಾಕದಲ್ಲಿ ಎಲೆ, ಹೂವು, ಹಣ್ಣು, ನಾಳ, ಬೇರು, ಮೊಗ್ಗು, ತೊಗಟೆ, ದಂಡ, ಕವಚ, ಮೊಳಕೆ ಎಂದು ಹತ್ತು ವಿಧ. ಇವು ವರ್ಜ್ಯ.
ಮಂಗಳ ಕಾರ್ಯ ನಿಷಿದ್ಧ:
ಚಾತುರ್ಮಾಸದಲ್ಲಿ ಹರಿಯು ಯೋಗನಿದ್ರೆ ಯಲ್ಲಿರುತ್ತಾನೆ. ಎಲ್ಲ ಮಂಗಳ ಕಾರ್ಯಗಳಿಗೂ ಅಧಿದೇವತೆ ಜನಾರ್ದನ, ಶ್ರೀಹರಿ. ಅವನೇ ಯೋಗನಿದ್ರೆಯಲ್ಲಿರುವಾಗ ಮಂಗಳ ಕಾರ್ಯಗಳು ಸಲ್ಲದು
ಸಮಸ್ತಮಂಗಲಾನಾಂ ಚ ದೇವತಾ ವೈ ಜನಾರ್ದನಃ | ತಸ್ಮಿಂಸ್ತು ಶಯನಂ ಯಾತೇ ನೋದ್ವಾಹಾದಿಕ್ರಿಯಾ ಭವೇತ್ ||
(ಆದರೆ ನಮ್ಮ ಪಂಚಾಂಗಗಳಲ್ಲಿ ಚಾತುರ್ಮಾಸ ಕಾಲದಲ್ಲಿ ಮಂಗಳ ಕಾರ್ಯಗಳಿಗೆ ಮುಹೂರ್ತಗಳನ್ನೂ ನಮೂದಿಸಲಾಗಿದೆ)
ಪ್ರಸುಪೆ¤à ಕೇಶವೇ ನೈವ ವಿವಾಹಃ ಕಾರ್ಯ ಏವ ಹಿ | – ಕೇಶವನು ಯೋಗನಿದ್ರೆಯಲ್ಲಿರುವಾಗ ವಿವಾಹ ಕಾರ್ಯ ಸರ್ವಥಾ ಕೂಡದು.
ಚಾತುರ್ಮಾಸದಲ್ಲಿ ವಿಶೇಷ ಗೋಪೂಜೆ!:
ಆಷಾಢಮಾಸ ಶುಕ್ಲಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ದ್ವಾದಶಿಯವರೆಗೆ ಗೋಪದ್ಮವ್ರತವನ್ನು ಕೈಗೊಳ್ಳಬೇಕು. ಪ್ರತಿನಿತ್ಯ ಸಾಧ್ಯವಾದರೆ ಸಮೀಪದ ಗೋಶಾಲೆಗೆ ಹೋಗಿ, ಅಲ್ಲಿ ಒಂದು ಕಡೆ ಗೋಮ ಯದಿಂದ ಸಾರಿಸಿ ಗೋವಿನ ಚಿತ್ರವನ್ನು ಬರೆದು ಅದರ ಮೇಲೆ 33 ಪದ್ಮಗಳನ್ನು ರಚಿಸಿ, ಗಂಧ ಪುಷ್ಪದಿಂದ ಅಲಂಕರಿಸಿ, 33 ಬಾರಿ ಅರ್ಘ್ಯ, ಪ್ರದಕ್ಷಿಣ, ನಮಸ್ಕಾರಗಳನ್ನು ಮಾಡಬೇಕು. ಭವಿಷ್ಯೋತ್ತರ ಪುರಾಣದಲ್ಲಿ ಈ ಬಗ್ಗೆ ಉಲ್ಲೇಖವಿದೆ.
ಹಬ್ಬಗಳ ಸರಣಿ :
ಚಾತುರ್ಮಾಸದಲ್ಲಿ ಹಬ್ಬಗಳ ಸರಣಿಯೇ ಬರುತ್ತದೆ. ಮಂಗಳಗೌರಿ, ನಾಗರಪಂಚಮಿ, ವರಮಹಾಲಕ್ಷ್ಮೀ, ಕೃಷ್ಣಜನ್ಮಾಷ್ಟಮಿ, ಗೌರಿ ಗಣೇಶ ಹಬ್ಬ, ಋಷಿಪಂಚಮಿ, ಅನಂತವ್ರತ, ನವರಾತ್ರಿ, ಮಹಾನವಮಿ, ವಿಜಯ ದಶಮಿ, ದೀಪಾವಳಿ, ಲಕ್ಷ್ಮೀ ಪೂಜೆ, ಬಲಿಪಾಡ್ಯ ಇತ್ಯಾದಿ. ಪಿತೃಗಳ ಪ್ರೀತಿಯ ಮಹಾಲಯವೂ ಇದೇ ಸಮಯದಲ್ಲಿ. ದೇವ, ಋಷಿ, ಪಿತೃಗಳ ಋಣ ತೀರಿಸಲು ಚಾತುರ್ಮಾಸ ವಿಹಿತ ಕಾಲ. ಗೋಪೂಜೆ, ತುಳಸಿ ಪೂಜೆಯೂ ಇದೇ ಸಮಯದಲ್ಲಿ.
-ಜಲಂಚಾರು ರಘುಪತಿ ತಂತ್ರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.