ಕುಗ್ಗದ ಚಿಣ್ಣರ ಕ್ರಿಯಾಶೀಲತೆ
Team Udayavani, Nov 14, 2021, 7:00 AM IST
ಬೆಂಗಳೂರು: ಕೊರೊನಾ, ಲಾಕ್‌ಡೌನ್, ಆನ್‌ಲೈನ್ ಪಾಠ… ಇದ್ಯಾವುದೂ ಮಕ್ಕಳ ಕ್ರಿಯಾಶೀಲತೆಗೆ ಭಂಗ ತಂದಿಲ್ಲ!
ಇದು “ಉದಯವಾಣಿ’ ನಡೆಸಿದ ಮೆಗಾ ಸಮೀಕ್ಷೆ ಕಂಡುಕೊಂಡ ಸತ್ಯ. ನ. 14 ಮಕ್ಕಳ ದಿನ. ಇದರ ಅಂಗವಾಗಿ ಒಂದೂವರೆ ವರ್ಷದ ಅನಂತರ ಶಾಲೆಗೆ ತೆರಳಿದ ಮಕ್ಕಳಲ್ಲಿ ಯಾವ ರೀತಿಯ ಬದಲಾವಣೆ ಗಳಾಗಿವೆ ಎಂಬ ಕುರಿತು “ಉದಯವಾಣಿ’ ಶಿಕ್ಷಕರ ಕಡೆಯಿಂದ ಅಭಿಪ್ರಾಯ ಸಂಗ್ರಹಿಸಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.
ಮಕ್ಕಳ ಹಾಜರಾತಿ ಉತ್ತಮ ಮತ್ತು ಸಮಾಧಾನಕರವಾಗಿದೆ ಎಂದು ಶೇ. 90ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಒಂದೂವರೆ ವರ್ಷ ಮನೆಯಲ್ಲೇ ಇದ್ದ ಮಕ್ಕಳು ಶಾಲೆಗೆ ಚಕ್ಕರ್ ಹೊಡೆಯಲು ಹಠ ಮಾಡಿಲ್ಲವೆಂಬುದು ಇದರಿಂದ ಗೊತ್ತಾಗುತ್ತದೆ. ಇದಕ್ಕಿಂತಲೂ ಉತ್ತಮ ವಿಚಾರ ಎಂದರೆ ಕೊರೊನಾಪೂರ್ವ ದಿನಗಳಿಗಿಂತಲೂ ಮಕ್ಕಳು ಈಗ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂದು ಶೇ. 45ರಷ್ಟು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಶಾಲೆಯಲ್ಲಿ ಎದುರಿಸುತ್ತಿರುವ ಅಡ್ಡಿ-ಆತಂಕಗಳ ಬಗ್ಗೆಯೂ ಶಿಕ್ಷಕರು ಹೇಳಿದ್ದಾರೆ. ಮಕ್ಕಳು ಬೇಗನೆ ಸಿಟ್ಟಾಗುವುದು, ಮೊಂಡಾಟ, ಏಕಾಗ್ರತೆ ಕಡಿಮೆಯಾಗಿರುವುದು, ಮೊಬೈಲ್ ಗೀಳಿನಿಂದ ಹೊರಬರದೆ ಇರುವುದು… ಹೀಗೆ ಹಲವಾರು ಸಂಗತಿಗಳ ಬಗ್ಗೆಯೂ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸ್ಮಾರ್ಟ್ ಕ್ಲಾಸ್, ಪುಟ್ಟ ಪುಟ್ಟ ವೀಡಿಯೋಗಳ ಮೂಲಕ ಮಕ್ಕಳಿಗೆ ಪಾಠ ಮುಂದುವರಿಸಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಪಾಠದ ಜತೆಗೆ ಆಟ, ಮನೋರಂಜನೆ ಮೂಲಕ ಮಕ್ಕಳನ್ನು ತಮ್ಮತ್ತ ಸೆಳೆಯಬಹುದು ಎಂದೂ ಶಿಕ್ಷಕರು ಹೇಳುತ್ತಾರೆ.
ಹಾಜರಾತಿ ಉತ್ತಮ :
ಮಕ್ಕಳ ಹಾಜರಾತಿಗೇನೂ ತೊಂದರೆಯಾಗಿಲ್ಲ. ನಮ್ಮ ಸಮೀಕ್ಷೆ ಪ್ರಕಾರ, ಶೇ. 90ಕ್ಕಿಂತ ಹೆಚ್ಚು ಶಿಕ್ಷಕರು ಮಕ್ಕಳ ಹಾಜರಾತಿ ಬಗ್ಗೆ ಉತ್ತಮ ಮತ್ತು ಸಮಾಧಾನಕರ ಉತ್ತರವನ್ನೇ ನೀಡಿದ್ದಾರೆ. ಶೇ. 50ರಷ್ಟು ಶಿಕ್ಷಕರು ಮಕ್ಕಳ ಹಾಜರಾತಿ ಉತ್ತಮ ಎಂದಿದ್ದರೆ, ಶೇ. 40ರಷ್ಟು ಶಿಕ್ಷಕರು ಸಮಾಧಾನಕರ ಎಂದಿದ್ದಾರೆ..
ಕಲಿಕಾ ಸಾಮರ್ಥ್ಯ ಕುಸಿತ
ಮಕ್ಕಳಲ್ಲಿ ವಯೋಮಾನಕ್ಕೆ ತಕ್ಕ ಕಲಿಕಾ ಸಾಮರ್ಥ್ಯ ಕುಸಿತವಾಗಿದೆ ಎಂಬುದನ್ನು ಬಹುತೇಕ ಶಿಕ್ಷಕರು ಒಪ್ಪಿಕೊಳ್ಳುತ್ತಾರೆ. ಹೆಚ್ಚಿನ ಮಕ್ಕಳು ಮೂಲ ಶಿಕ್ಷಣವನ್ನೇ ಮರೆತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾದ್ದವರಲ್ಲಿ ಶೇ. 80ರಷ್ಟು ಮಂದಿ ವಯೋಮಾನಕ್ಕೆ ತಕ್ಕ ಕಲಿಕೆ ಕುಸಿದಿದೆ ಎಂದಿದ್ದಾರೆ. ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳೇ ಹೆಚ್ಚಾಗಿವೆ ಎಂದೂ ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಕಂಡದ್ದು:
- ಮಕ್ಕಳನ್ನು ನಿಭಾಯಿಸುವುದು ಹಿಂದಿಗಿಂತ ಕಷ್ಟ ಎಂದವರು ಶೇ. 50ರಷ್ಟು ಶಿಕ್ಷಕರು.
- ಕೆಲವೇ ದಿನಗಳಲ್ಲಿ ಶಾಲೆಯ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ ಎಂದವರು ಶೇ. 28ರಷ್ಟು.
- ಶೇ. 45ರಷ್ಟು ಶಿಕ್ಷಕರ ಪ್ರಕಾರ ಮಕ್ಕಳು ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲರು.
- ಮೊಬೈಲ್ ಗೀಳಿನಿಂದಾಗಿ ಮಕ್ಕಳ ಮನೋಭಾವ ಬದಲಾಗಿದೆ ಎಂದವರು ಶೇ. 48ರಷ್ಟು ಮಂದಿ.
- ಮಕ್ಕಳ ಏಕಾಗ್ರತೆ, ಗ್ರಹಿಕೆ ಶಕ್ತಿ ಕುಸಿದಿದೆ ಎಂದ ಶಿಕ್ಷಕರು ಶೇ. 58.1.
- ಕೆಲವೇ ಕೆಲವು ನಿರ್ದಿಷ್ಟ ಮಕ್ಕಳಲ್ಲಿ ಮಾತ್ರ ಗ್ರಹಿಕೆ, ಏಕಾಗ್ರತೆ ಕುಸಿದಿದೆ ಎಂದವರು ಶೇ. 36.
ಶಿಕ್ಷಕರ ಸಲಹೆಗಳು :
- ಶಿಕ್ಷಕರು ಪುನರಾವರ್ತನೆ ಮಾಡಿ ಮಕ್ಕಳ ಮೇಲೆ ಮುತುವರ್ಜಿ ವಹಿಸಬೇಕು.
- ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು.
- ಹೆತ್ತವರು ನಿಯಮಿತವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಪರೀಕ್ಷೆ ಮೇಲೆ ಪರೀಕ್ಷೆ ಬೇಡ.
- ಏಕಾಗ್ರತೆ ಹೆಚ್ಚಿಸಲು ಮನೋರಂಜನೆ ಆಧರಿತ ಶಿಕ್ಷಣ ಕೊಡಬೇಕು.
- ಮಕ್ಕಳ ಮೇಲೆ ಈಗಲೇ ಕಲಿಕೆಗಾಗಿ ಹೆಚ್ಚಿನ ಒತ್ತಡ ಹಾಕಬಾರದು. ಶಿಸ್ತು, ಕಠಿನ ಕ್ರಮ ಬೇಡ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.