ವಿಧಿಯ ಇಚ್ಛೆಯಂತೆ ಬಾಳಿದ ಯೋಧ
Team Udayavani, Dec 10, 2021, 6:20 AM IST
ವಿಧಿಯ ಹಾದಿಯೇ ಬೇರೆ. ಒಬ್ಬ ಯೋಧ ಹೋರಾಡುತ್ತಿರುವಾಗಲೇ ಸಾವು ಬರಲಿ ಎಂದು ಹಾರೈಸುತ್ತಾನೆ. ಸೇನಾ ಸಮವಸ್ತ್ರದಲ್ಲಿರುವ ಪ್ರತಿಯೊಬ್ಬರೂ ಹೀಗೆಯೇ ನಿರೀಕ್ಷಿಸುತ್ತಾರೆ. ಇಂತಹ ಸಾವಿನಿಂದಲೇ ಒಬ್ಬ ಯೋಧ ಮುಕ್ತಿ ಪಡೆಯುತ್ತಾನೆ. ರಕ್ಷಣ ಪಡೆಗಳ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಕೂಡ ಈ ಭಾವಕ್ಕೆ ಹೊರತಲ್ಲ. ಆದರೂ ರಾವತ್‌ರಂತಹ ಅಸಾಮಾನ್ಯ ಯೋಧನನ್ನು ಹೀಗೆ ಕಳೆದು ಕೊಂಡಿರುವದು ದೇಶದ ಪಾಲಿನ ದುರಂತ, ಅಷ್ಟೇ ದುರದೃಷ್ಟಕಾರಿ. ಅವರು 4 ದಶಕಗಳ ಕಾಲ ಸೇನೆಯ ವಿವಿಧ ಹುದ್ದೆಗಳಲ್ಲಿ ಅದ್ಭುತ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು. ಭಾರತೀಯ ಸೇನಾ ಅಕಾಡೆಮಿಯಲ್ಲಿ (ಇಂಡಿಯನ್ ಮಿಲಿಟರಿ ಅಕಾಡೆಮಿ) ಖಡ್ಗ ಗೌರವ (ಸೋರ್ಡ್ ಆಫ್ ಹಾನರ್) ಪಡೆಯುವುದರಿಂದ ಹಿಡಿದು ರಕ್ಷಣ ಪಡೆಗಳ ಮೊದಲ ಮುಖ್ಯಸ್ಥ ನಾಗುವವರೆಗೆ ಅವರು ಸವೆಸಿದ್ದು ಧೀಮಂತ ಹಾದಿ.
ಗೋರ್ಖಾ ರೆಜಿಮೆಂಟ್‌ನಿಂದ ಶುರುಮಾಡಿ ನಾಲ್ಕು ನಕ್ಷತ್ರಗಳನ್ನು ತಮ್ಮ ಭುಜಕ್ಕೆ ಸಿಕ್ಕಿಸಿಕೊಳ್ಳುವಷ್ಟು ಎತ್ತರಕ್ಕೆ ಏರಿದ ಬಿಪಿನ್ ರಾವತ್; ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್‌ಗೆ ಹೋಗುವ ಹಾದಿಯಲ್ಲೇ ದುರ್ಮರಣ ವನ್ನಪ್ಪಿದರು. ಇದೇ ಆಸ್ಪತ್ರೆಗೆ ಗೋರ್ಖಾ ರೆಜಿಮೆಂಟ್‌ನ ಇನ್ನೊಬ್ಬ ಅಧಿಕಾರಿ, ಸೇನಾ ದಂತಕಥೆ, ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಹಿಂದೊಮ್ಮೆ ಮುಖ್ಯಸ್ಥರಾಗಿದ್ದರು! ಮಾಣೆಕ್ ಶಾ ದೇಶದ ಮೊದಲ ಫೀಲ್ಡ್ ಮಾರ್ಷಲ್, ಹೀಗೆ ನೋಡಿದರೆ ರಾವತ್ ದೇಶದ ಮೊದಲ ಮೂರೂ ರಕ್ಷಣ ಪಡೆಗಳ ಮುಖ್ಯಸ್ಥ. ಇಬ್ಬರೂ ರಾಷ್ಟ್ರೀಯ ದಂತಕಥೆಗಳು. ಇಬ್ಬರೂ ತಮಿಳುನಾಡಿನ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲೇ (ಡಿಎಸ್‌ಎಸ್‌ಸಿ) ಕೊನೆಯುಸಿರೆಳೆದರು. ವಿಶೇಷವೆಂದರೆ ಇದೇ ಆಸ್ಪತ್ರೆಯಲ್ಲಿ ನಾನೊಂದು ಕಾಲದಲ್ಲಿ ಮುಖ್ಯಸ್ಥನಾಗಿದ್ದೆ. 1971ರ ಯುದ್ಧದ ಪೂರ್ಣ ನೇತೃತ್ವ ವಹಿಸಿದ್ದು, ನಿರ್ವಹಿಸಿದ್ದು ಮಾಣೆಕ್ ಶಾ 2016ರ ಸರ್ಜಿಕಲ್ ಸ್ಟ್ರೈಕ್ ಅನ್ನು ಮುನ್ನಡೆಸಿದ್ದು ಜನರಲ್ ಬಿಪಿನ್ ರಾವತ್. ಹಾಗೆಯೇ ಎಎನ್‌ಸಿ ಮತ್ತು ಎಸ್‌ಎಫ್ಸಿಗಳನ್ನು ಒಗ್ಗೂಡಿಸುವಲ್ಲಿ ಇವರ ಪಾತ್ರ ಮಹತ್ವದ್ದು. ರಾಷ್ಟ್ರೀಯ ಹೆಮ್ಮೆಯನ್ನು ಮರುಸ್ಥಾಪಿಸಲು ಇವರಿಬ್ಬರೂ ದೊಡ್ಡ ಕೊಡುಗೆ ನೀಡಿದ್ದಾರೆ. ಸಶಸ್ತ್ರ ಸೇನಾಪಡೆಗಳನ್ನು ಈಗಿನ ಸೈಬರ್ ಯುದ್ಧ, ಅಂತರ್ಜಾಲ ಯುಗಕ್ಕೆ ತಕ್ಕಂತೆ ಸಶಕ್ತಗೊಳಿಸಲು ರಾವತ್ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದರು. ಇದೇ ರೀತಿ ಮಾಣೆಕ್ ಶಾರನ್ನು ಸರಿಗಟ್ಟುವ ಸೇನಾ ನಾಯಕತ್ವವನ್ನು ಇನ್ನೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ. ಭೂಸೇನಾ ಯೋಧನಾಗಿಯೇ ಗುರುತಿಸಿಕೊಳ್ಳುವ ರಾವತ್ ಸಶಸ್ತ್ರ ಸೇನಾಪಡೆಗಳ ಕಾರ್ಯಾಚರಣೆಯನ್ನು ಸಮನ್ವಯಗೊಳಿಸಿದ್ದು, ಬಲಿಷ್ಠಗೊಳಿಸಿದ್ದೂ ಅಷ್ಟೇ ಮುಖ್ಯ.
ಇಬ್ಬರೂ ದಿಗ್ಗಜರೊಂದಿಗೆ ಸನಿಹದ ಸಂಬಂಧ ಹೊಂದುವಂತಹ ಅದೃಷ್ಟ ನನ್ನದಾಗಿತ್ತು. ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಅವರೊಂದಿಗೆ ನಾನು ನಿಕಟ ಬಾಂಧವ್ಯ ಹೊಂದಿದ್ದೆ. 2008, ಜೂ.27ರಂದು ಮಾಣೆಕ್ ಕೊನೆಯುಸಿರೆಳೆಯುತ್ತಿದ್ದಾಗ ಅವರ ಕೈಗಳನ್ನು ಹಿಡಿದುಕೊಂಡಿದ್ದೆ. ಈ ಜಗವನ್ನು ಸಗೌರವದಿಂದ ತೊರೆಯುತ್ತಿದ್ದುದ್ದನ್ನು ಕಣ್ಣಾರೆ ನೋಡಿದ್ದೆ. ಇನ್ನೊಂದು ಕಡೆ ಜನರಲ್ ರಾವತ್ ಕೊಲ್ಕತಾದಲ್ಲಿ ನನ್ನ ಸಹೋದ್ಯೋಗಿಯಾಗಿದ್ದರು. ಆಗವರು ಅಲ್ಲಿನ ಸೇನಾ ಕಾರ್ಯಾಚರಣೆಗಳ ಕೇಂದ್ರವನ್ನು ಮುನ್ನಡೆಸುತ್ತಿದ್ದರು. ಇದೇ ಅನುಭವದ ನೆರವಿನಿಂದಲೇ ಅವರು ಮ್ಯಾನ್ಮಾರ್‌ನಲ್ಲಿ ಅಡಗಿಕೊಂಡಿದ್ದ ಉಗ್ರರನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕ ನಾಶಗೊಳಿಸಿದರು. ಆಗವರು ಆ ಪಡೆಯ ಕಮಾಂಡರ್ ಆಗಿದ್ದರು. ಈಸ್ಟರ್ನ್ ಕಮಾಂಡ್ ಆಸ್ಪತ್ರೆಯು ಮಾಣೆಕ್ ಶಾ ಅವರ ದೂರದರ್ಶಿತ್ವದಿಂದ ರೂಪುಗೊಂಡ ಕೂಸು. ಈ ಆಸ್ಪತ್ರೆಗೆ 2012ರಿಂದ 14ರ ವರೆಗೆ ಮುಖ್ಯಸ್ಥನಾಗಿದ್ದೆ. ಇದೇ ಆಸ್ಪತ್ರೆಯಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ತಂದೆ ಲೆಫ್ಟಿನೆಂಟ್ ಜನರಲ್ ಲಕ್ಷ್ಮಣ್ ರಾವತ್ ಇಬ್ಬರಿಗೂ ನಾನೇ ಚಿಕಿತ್ಸೆ ನೀಡಿದ್ದೆ. ಈ ಇಬ್ಬರು ಗೋರ್ಖಾ ರೆಜಿಮೆಂಟನ್ನು ತಂತಮ್ಮ ಅವಧಿಯಲ್ಲಿ ಮುನ್ನಡೆಸಿದ್ದರು.
ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ನನಗೆ ಬಹಳ ಆತ್ಮೀ ಯರು. ಒಬ್ಬ ವೈದ್ಯನಾಗಿ, ಒಬ್ಬ ಗೆಳೆಯನಾಗಿ ಅವರಿಗೆ ಅಗತ್ಯ ವಿದ್ದಾಗಲೆಲ್ಲ ನಾನು ನೆರವಿಗೆ ನಿಂತಿದ್ದೇನೆ. ರಾವತ್ ಅವರು ಭೂಸೇನೆಯ ಉಪಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿ ದೆಹಲಿಯ ಸಫªರ್‌ಜಂಗ್ ರಸ್ತೆಯಲ್ಲಿ ನನ್ನ ನಿವಾಸವಿತ್ತು. ಆಗವರು ನನ್ನ ನೆರೆಯವರು ಮಾತ್ರ ವಲ್ಲ, ಅವರ ಗೆಳೆಯ, ತತ್ವಜ್ಞಾನಿ, ಮಾರ್ಗದರ್ಶಕ ಕೂಡ ಆಗಿದ್ದೆ. ಅವರು ಸೇನಾ ಮುಖ್ಯಸ್ಥರಾಗಿ ಆಯ್ಕೆ ಯಾಗಿ ದ್ದಾಗ, ಪಕ್ಕದ ಮನೆಯಲ್ಲೇ ಇದ್ದ ಅವರನ್ನು ನೇರವಾಗಿ ಅಭಿನಂದಿಸಿದ್ದೆ. ಅವರು ನನ್ನನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಅವರೊಂದಿಗೆ ನನಗಿದ್ದ ಸಂಬಂಧ; ರಾವತ್‌ರೊಂದಿಗಿನ ನನ್ನ ಬಾಂಧವ್ಯವನ್ನು ಸುಪುಷ್ಟಗೊಳಿಸಿತ್ತು.
ಜ| ರಾವತ್ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗುವ ಸ್ಪರ್ಧೆಯಲ್ಲಿರಲಿಲ್ಲ. ಸಹಜವಾಗಿ ನೋಡುವುದಾದರೆ ಅವರು ಮುಖ್ಯಸ್ಥರಾಗುತ್ತಿರಲಿಲ್ಲ. ಆದರೆ ವಿಧಿ ತನ್ನದೇ ತೀರ್ಮಾನ ಮಾಡಿತ್ತು. ಅವರ ಜೀವನ ಕಾಪ್ಟರ್ ದುರಂತದಲ್ಲಿ ಹೀಗೆ ಮುಗಿದಿದೆ. ತಮ್ಮೊಂದಿಗೆ ಪತ್ನಿ ಮಧುಲಿಕಾ ಮತ್ತು ಇತರ 11 ಮಂದಿ ಸಿಬಂದಿಯನ್ನೂ ಒಯ್ದಿದ್ದಾರೆ. ಅವರ ಸಾವಿನೊಂದಿಗೆ ದೇಶ ಒಬ್ಬ ಯೋಧನನ್ನು, ನಿಜ ದೇಶಭಕ್ತನನ್ನು ಕಳೆದುಕೊಂಡಿದೆ. ಈ ನಷ್ಟವನ್ನು ಭರ್ತಿ ಮಾಡಲು ಸಾಧ್ಯವೇ ಇಲ್ಲ. ಮಧುಲಿಕಾ, ಜನರಲ್ ರಾವತ್‌ರಿಗೆ ಭಗವಂತ ಪೂರ್ಣಾನಂದವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
-ಲೆ| ಜ| ಬಿಎನ್‌ಬಿಎಂ ಪ್ರಸಾದ್ (ನಿವೃತ್ತ)
(ಕೊಡಗು ಮೂಲದವರಾದ ಲೇಖಕರು, ಸೇನಾ ಆಸ್ಪತ್ರೆ ಸೇವೆಗಳ ನಿವೃತ್ತ ಡೈರೆಕ್ಟರ್ ಜನರಲ್ ಮತ್ತು ರಾಷ್ಟ್ರಪತಿಗಳ ಹಾನರರಿ ಸರ್ಜನ್)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.