ಮಕ್ಕಳ ದಿನಾಚರಣೆ; ಮಕ್ಕಳ ಗೊಣಗಾಟವಿಲ್ಲದ ದಿನಾಚರಣೆಯಾಗದಿರಲಿ
Team Udayavani, Nov 13, 2019, 4:07 PM IST
ಪುಟಾಣಿ ಮಕ್ಕಳ ತುಂಟಾಟಗಳನ್ನು ನೋಡುತ್ತಾ, ಅವರ ಮುಗ್ದತೆಗಳನ್ನು ಕಣ್ತುಂಬಿ ಕೊಳ್ಳುವುದೆಂದರೆ ಎಲ್ಲರಿಗೂ ಇಷ್ಟ. ಮಕ್ಕಳಲ್ಲಿ ದೇವರನ್ನು ಕಾಣುವ ಭಾರತೀಯರು, ಮಕ್ಕಳು ಏನು ಮಾಡಿದರೂ ಚೆನ್ನ. ಸಾಮಾನ್ಯವಾಗಿ ಮಕ್ಕಳ ದಿನಾರಣೆ ಬಂತೆಂದರೆ ಸಾಕು ಮಕ್ಕಳೆಲ್ಲಾ ಸಂಭ್ರಮಿಸುವ ದಿನವದು. ದೊಡ್ಡವರು ತಮ್ಮ ಬಾಲ್ಯದ ತುಂಟಾಟಗಳನ್ನು ನೆನೆದು ಮಕ್ಕಳಾಗುವುದು ಸಹಜ. ಶಾಲೆಗಳಲ್ಲಿ ಈ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತದೆ. ಮಕ್ಕಳ ದಿನಾಚರಣೆ ಎಂಬುದು ಮಾಜಿ ದೇಶದ ಪ್ರಧಾನಿ ಜವಹರಲಾಲ್ ನೆಹರೂರವರ ಜನ್ಮ ದಿನ.
ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು ಕಾರಣಗಳು ಇವೆ. 1951ರಲ್ಲಿ ವಿಶ್ವ ಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡ್ ನ ಮಕ್ಕಳ ಕಲ್ಯಾಣಕ್ಕಾಗಿ ವಿ.ಎನ್ ಕುಲಕರ್ಣಿಯವರು ದುಡಿಯುತ್ತಿದ್ದ ಕಾಲವದು. ಆ ದಿನಗಳಲ್ಲಿ ಮಕ್ಕಳ ಕಲ್ಯಾಣಕ್ಕಾಗಿ ರಾಣಿ ಎಲಿಜಬೆತ್ 2 ಅವರ ಜನ್ಮ ದಿನವನ್ನು ‘ಧ್ವಜ ದಿನಾಚರಣೆ’ಯನ್ನಾಗಿ ಆಚರಿಸುತ್ತಿದ್ದರು. ಧ್ವಜ ದಿನಾಚರಣೆಯಂದು ಧನ ಸಂಗ್ರಹಿಸಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಭಾರತದಲ್ಲಿ ಮಕ್ಕಳ ಕಲ್ಯಾಣಕ್ಕಾಗಿ ಹುಟ್ಟಿಕೊಂಡ ಆಚರಣೆಯೇ ಮಕ್ಕಳ ದಿನಾರಣೆ ಎನ್ನಬಹುದು.
ಹೀಗಿರುವಾಗ ವಿ. ಎನ್ ಕುಲಕರ್ಣಿಯವರ ಮನಸ್ಸು ಭಾರತದಲ್ಲಿರುವ ಮಕ್ಕಳ ಸ್ಥಿತಿಗತಿಗಳ ಕಡೆಗೆ ವಾಲುತ್ತದೆ. ಭಾರತದಲ್ಲಿಯೂ ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಪ್ರಸ್ತಾವನೆಯನ್ನು ವಿಶ್ವ ಸಂಸ್ಥೆಯ ಮುಂದಿಟ್ಟರು. ಇದಕ್ಕೆ ಚಾಚಾ ನೆಹರೂರವರ ಜನ್ಮ ದಿನದಷ್ಟು ಪ್ರಶಸ್ತ ದಿನವಿಲ್ಲ ಎಂಬ ಅಭಿಪ್ರಾಯವನ್ನೂ ನೀಡಿದರು. ವಿಶ್ವಸಂಸ್ಥೆ ಇವರ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತು. ಹೀಗೆ ಜಾರಿಗೆಯಾದ ಮಕ್ಕಳ ದಿನಾಚರಣೆಯೂ, ನೆಹರೂರವರ ಹುಟ್ಟಿದ ದಿನವಾದ ನವೆಂಬರ್ 14 ಮಕ್ಕಳ ದಿನವನ್ನಾಗಿ ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಈಗ ಕಾಲ ಬದಲಾಗಿದೆ. ಆದರೆ ನಾವು ಮಕ್ಕಳಾಗಿರುವ ಈ ದಿನಕ್ಕಾಗಿ ಕಾಯುತ್ತಿದ್ದೆವು. ಮಕ್ಕಳಿಗೆ ನಮ್ಮ ದಿನವೆಂಬ ಖುಷಿಯೊಂದೆಡೆಯಾದರೆ, ಇನ್ನೊಂದೆಡೆ ಕಾರ್ಯಕ್ರಮಗಳು ಇರುತ್ತದೆ ಎಂಬ ಸಂತೋಷ. ಆದರೆ ಈಗ ಮಕ್ಕಳ ಶಿಕ್ಷಣವೂ ಒಂದಿಷ್ಟು ಓದಿಗೆ ಸೀಮಿತವಾಗಿದೆ. ಅಲ್ಲಿ ನಾವು ಆಡಿದ ತುಂಟಾಟಗಳಿಲ್ಲ. ಬದಲಾಗಿ ಒಂದಷ್ಟು ಪುಸ್ತಕಕ್ಕೆ ಸೀಮಿತವಾದ ಓದು, ಹೋಂವರ್ಕ್ ಗಳದ್ದೇ ಪಟ್ಟಿ. ಇನ್ನು ನಾವು ಬಾಲ್ಯದ ದಿನಗಳಲ್ಲಿ ಶಾಲೆಯಿಂದ ಮನೆ ತಲುಪಿದ ಕೂಡಲೇ ಆಟಕ್ಕೆಂದು ಸುತ್ತಲಿನ ಗೆಳೆಯರನ್ನು ಕಟ್ಟಿಕೊಂಡು ಹೋಗುತ್ತಿದ್ದೆವು. ಆದರೆ ಕಾಲ ಎಲ್ಲವನ್ನೂ ಮರೆಮಾಚಿದೆ. ಶಾಲೆಯಿಂದ ಬಂದ ಕೂಡಲೇ ಮಕ್ಕಳು ಟ್ಯೂಷನ್ ಗೆ ತೆರಳುತ್ತಾರೆ. ತದನಂತರ ಮನೆಗೆ ಬಂದು ಹೊಟ್ಟೆಗಿಷ್ಟು ಹಾಕಿಕೊಳ್ಳುತ್ತಾರೆ. ಆಮೇಲೆ ಪುನಃ ಒಂದಷ್ಟು ಓದು ಹೀಗೆ ಮಕ್ಕಳು ತಮ್ಮ ಸುಂದರವಾದ ಬಾಲ್ಯದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಓದಿಗಾಗಿಯೇ ಸ್ವಾತಂತ್ರ್ಯವನ್ನು ನೀಡುವ ತಂದೆ ತಾಯಿಯಂದಿರು, ಜೊತೆಗೆ ಮಕ್ಕಳಿಗೆ ಆಟವಾಡಲು ಸಮಯವನ್ನು ನೀಡುವುದು ಮುಖ್ಯ. ಶಿಕ್ಷಣ ಎಷ್ಟು ಮುಖ್ಯವೋ, ಶಾರೀರಿಕವಾದ ವ್ಯಾಯಮಾವೂ ಅಷ್ಟೇ ಮುಖ್ಯ. ಇದು ಕೇವಲ ಸಮಯ ಹಾಳು ಎಂದು ಭಾವಿಸಿದರೆ ಅದು ತಪ್ಪು ಪರಿಕಲ್ಪನೆ. ಕೇವಲ ಶಾರೀರಿಕ ಮಾತ್ರವಲ್ಲದೇ ಉಳಿದ ಮಕ್ಕಳೊಂದಿಗೆ ಬೆರೆಯುವುದು ಇದು ಕಲಿಸಿ ಕೊಡುವ ಅನುಭವವೇ ಬೇರೆ. ಈ ಬೆಳವಣಿಗೆಯೂ ಬದುಕಿನ ಉದ್ದಕ್ಕೂ ಸಹಕಾರಿಯಾಗುತ್ತದೆ.
ಇನ್ನು ಇತ್ತೀಚೆಗಿನ ವರ್ಷಗಳಲ್ಲಿ ಹೆತ್ತವರು ಮಕ್ಕಳ ವಿಷಯಕ್ಕೆ ತುಂಬಾ ಸೂಕ್ಷ್ಮಮತಿಗಳಾಗಿ ಬಿಟ್ಟಿದ್ದಾರೆ. ತಮ್ಮ ಮಕ್ಕಳು, ಬೇರೆ ಮಕ್ಕಳೊಂದಿಗೆ ಬೆರೆತರೆ, ದಾರಿ ತಪ್ಪಿ ಬಿಡುತ್ತಾರೆ ಎನ್ನುವ ಭಯ. ಹೀಗಾಗಿ ಆಟ ಎನ್ನುವುದು ಕೇವಲ ಮೊಬೈಲ್ ಪೋನ್ ಗೆ ಸೀಮಿತವಾಗಿದೆ. ಶಿಕ್ಷಣವೂ ಪಠ್ಯ ಪುಸ್ತಕದ ಓದಿಗೆ ಮಾತ್ರ ಸೀಮಿತವಾಗಿದೆ. ಮಕ್ಕಳ ಸ್ವಾತಂತ್ರ್ಯ ಅರಿವಿಲ್ಲದೇನೇ ಕಳಚುತ್ತಿದೆ. ಇಂದಿನ ಮಕ್ಕಳ ದಿನಾಚರಣೆ ಎನ್ನುವುದು ದಿನಾಚರಣೆಯ ಸಂಭ್ರಮ ಅರ್ಧದಷ್ಟು ಮರೆಯಾಗಿ ಹೋಗಿದೆ. ಮಕ್ಕಳ ಮನಸ್ಥಿತಿಯನ್ನು ಅರಿತು ಅವರಿಗೆ ಕೆಲವು ವಿಷಯದಲ್ಲಿ ಸ್ವಾತಂತ್ರ್ಯ ನೀಡುವುದು ಮುಖ್ಯ. ಆಗಿದ್ದಾಗ ಮಾತ್ರ ಮಕ್ಕಳ ದಿನಾಚರಣೆಯೂ ಮಕ್ಕಳು ಸಂಭ್ರಮಿಸಲು ಸಾಧ್ಯ. ಇಲ್ಲದಿದ್ದರೆ ಗೊಣಗಾಟವಿಲ್ಲದ ಮಕ್ಕಳ ದಿನಾಚರಣೆಯಾಗಿ ಮಾರ್ಪಾಡು ಹೊಂದುವುದರಲ್ಲಿ ಸಂದೇಹವಿಲ್ಲ.
*ಸಾಯಿನಂದಾ ಚಿಟ್ಪಾಡಿ
ದ್ವಿತೀಯ ಎಂ.ಸಿ.ಜೆ
ವಿವೇಕಾನಂದ ಕಾಲೇಜು, ನೆಹರು ನಗರ ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.