ಸ್ವಚ್ಛತೆಯೊಂದು ಮನಃಸ್ಥಿತಿ
Team Udayavani, Dec 26, 2021, 6:00 AM IST
ಸಾಂದರ್ಭಿಕ ಚಿತ್ರ
ಭಾರತೀಯ ಸಂಸ್ಕೃತಿಯಲ್ಲಿ ಸ್ವಚ್ಛತೆಗೆ ಬಹಳ ಪ್ರಮುಖವಾದ ಸ್ಥಾನವಿದೆ. ನಿತ್ಯ ಸ್ನಾನ, ಶುಭ್ರ ಬಟ್ಟೆ ಧರಿಸುವುದು, ಮನೆಯ ಕಸ ಗುಡಿಸಿ, ಸಾರಿಸುವುದು ಇತ್ಯಾದಿ ಸ್ವಚ್ಛತ ಕೈಂಕರ್ಯಗಳನ್ನು ನಾವು ತಲೆ ತಲಾಂತರಗಳಿಂದ ಪಾಲಿಸುತ್ತಾ ಬಂದಿದ್ದೇವೆ ಮತ್ತು ಈ ಕಾರ್ಯಗಳು ನಮಗೆ ಉಸಿರಾಡುವಷ್ಟೇ ಸಹಜ ವಾಗಿವೆ. ಸಂಪ್ರದಾಯಸ್ಥರ ಮಡಿ-ಮೈಲಿಗೆಗಳು ಸ್ವಚ್ಛತೆಯ ಪ್ರತೀಕವೇ. ವಿಪರ್ಯಾಸವೆಂದರೆ ಸ್ವಚ್ಛತೆಯನ್ನು ನಮ್ಮ ಮನೆ ಮತ್ತು ಸುತ್ತಲಿನ ನಮ್ಮ ದೆನ್ನುವ ಜಾಗಕ್ಕೆ ಮಾತ್ರ ಸೀಮಿತವಾಗಿಸಿದ್ದೇವೆ. ಈ ಪರಿಮಿತಿಯಂತೆ ಸ್ವಚ್ಛತೆಯ ಬಗ್ಗೆ ನಮ್ಮ ಮನೋ ಭಾವವೂ ಸಂಕುಚಿತವೇ. ಮನೆಯಲ್ಲಿರುವಾಗ ಜಾಗೃತವಾಗಿರುವ ಈ ಪ್ರಜ್ಞೆ, ಸಾರ್ವಜನಿಕ ಸ್ಥಳಗಲ್ಲಿ ಸುಪ್ತವಾಗುತ್ತದೆ. ತ್ಯಾಜ್ಯ ನಿರ್ವಹಣೆಯ ಬಗೆಗಿನ ಅರಿವಿನ ಕೊರತೆ, ಜನರ ಬೇಜವಾಬ್ದಾರಿ, ಉಡಾಫೆತನ ಮತ್ತು ಕಸ ವಿಲೇವಾರಿಯ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣಗಳು.
ನಮ್ಮ ಮನೆಯ ಕಸವನ್ನೆಲ್ಲ ಆವರಣ ಗೋಡೆಯಾಚೆ ಸುರಿಯುತ್ತೇವೆ. ಮನೆ ಸಮೀಪ ನಮಗೆ ಸಂಬಂಧಪಡದ ಜಾಗದಲ್ಲಿ ತ್ಯಾಜ್ಯದ ರಾಶಿಯೇ ಬಿದ್ದಿದ್ದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ನಮ್ಮನ್ನೇ ಗುರಿಯಾಗಿಸಿ ದಾಳಿ ಮಾಡುತ್ತವೆ ಎಂಬ ಕನಿಷ್ಠ ಆತಂಕವೂ ನಮಗಿ ರುವುದಿಲ್ಲ. ಈ ಕೊಳೆತು ನಾರುವ ತ್ಯಾಜ್ಯ ಅನೇಕ ರೋಗಾಣುಗಳ ಉಗಮ ಸ್ಥಾನ. ಈ ತೆರನಾದ ಅಸಡ್ಡೆ ರೋಗಗಳಿಗೆ ನಾವೇ ಕೆಂಪು ಹಾಸು ಹಾಸಿ ಸ್ವಾಗತಿಸಿದಂತೆ.
ಮನೆಯ ಪರಿಸರದಲ್ಲೇ ವಿಸರ್ಜಿಸಿದರೆ ತಮಗೇ ತೊಂದರೆಯೆಂದು ಅರಿವಿರುವ ಇನ್ನೊಂದು ವರ್ಗ. ಇವರು ಕಸವನ್ನು ಪಾಲಿಥೀನ್ ಚೀಲಗಳಲ್ಲಿ ಕಟ್ಟಿ ತಮ್ಮ ವಾಹನಗಳಲ್ಲಿ ತಂದು, ಹೋಗುತ್ತಾ ಹಾಗೆಯೇ ರಸ್ತೆ, ಹೆದ್ದಾರಿಗಳ ಬದಿ ಅಥವಾ ನಿರ್ಜನ ಪ್ರದೇಶಗಳಲ್ಲಿ ರೊಯ್ಯನೆ ಎಸೆಯುತ್ತಾರೆ. ಇವರಿಗಿದು ಕಸ ವಿಲೇವಾರಿಗೆ ಸುಲಭದ ದಾರಿ. ಇವುಗಳನ್ನು ನಾಯಿಯೋ ನರಿಯೋ ಎಳೆದು ಬಿಚ್ಚಿ ಪರಿಸರವನ್ನು ಮತ್ತಷ್ಟು ಕುಲಗೆಡಿಸುತ್ತವೆ. ಊರು ತುಂಬ ಕಸ ಹಬ್ಬುವುದೆಂದರೆ ಇದೇ. ತಮ್ಮ ಹಕ್ಕಿಗಾಗಿ ಗುಲ್ಲೆಬಿಸುವ ಈ ಮಂದಿಯದ್ದು ಜವಾಬ್ದಾರಿಗಳನ್ನು ಗಾಳಿಗೆ ತೂರುವ ಉಢಾಳ ಮನೋಭಾವ.
ವಿದೇಶ ಸುತ್ತಿ ಬಂದ ಜನರು ಅಲ್ಲಿಯ ನೈರ್ಮಲ್ಯದ ಬಗ್ಗೆ ಪುಂಖಾನುಪುಂಖವಾಗಿ ಕೊರೆಯುತ್ತಾರೆ. ಆದರೆ ಅದೇ ಜನ ತಮ್ಮ ನೆಲದ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಸ್ವಚ್ಛತೆಯನ್ನು ಆದರಿಸುವಲ್ಲಿ ಎಡವುತ್ತಾರೆ. ಭಾರತ ಎಂದಿದ್ದರೂ ಹೀಗೆಯೇ ಎಂಬ ಕೀಳಂದಾಜು ಈ ಮೇಲ್‌ಸ್ತರದ ಜನರದ್ದು.
ಇನ್ನು ಹಲವರದ್ದು, ಕೇವಲ ನನ್ನೊಬ್ಬನಿಂದ ಏನಾದೀತು ಎಂಬ ಋಣಾತ್ಮಕ ಚಿಂತನೆ. ಎಲ್ಲರೂ ಎಲ್ಲೆಂದರಲ್ಲಿ ಕಸ ಎಸೆಯುವುದು, ಉಗುಳುವುದು ಇತ್ಯಾದಿ ಮಾಡುವಾಗ, ತಾನೊಬ್ಬ ಮಾಡದಿದ್ದರೆ ಗಮನೀಯ ವ್ಯತ್ಯಾಸ ಆಗಲಾರದು ಎನ್ನುವ ಗುಂಪಿನೊಳಗೆ ಗೋವಿಂದನಂತಿರುವ ಜನರಿವರು. ಆದರೆ ಮಂದೆಯೊಳಗೆ ನಾವು ಕುರಿಗಳಾಗಬೇಕೆಂದಿಲ್ಲ. ಸಮಾಜದಲ್ಲಿ ನಾವು ಕಾಣಬಯಸುವ ಬದಲಾ ವಣೆಯ ಆರಂಭ ನಮ್ಮಿಂದಲೇ ಯಾಕಾಗಬಾರದು? ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಕಾಳಜಿ ಇನ್ನೊಬ್ಬರಿಗೆ ಮಾದರಿಯಾಗಬಹುದು. ನಮ್ಮ ವರ್ತನೆಗಳಿಂದ ಇನ್ನೊಬ್ಬರಿಗೆ ತಿಳಿ ಹೇಳುವ ನೈತಿಕ ಸ್ಥೈರ್ಯ ನಮ್ಮದಾಗಬಹುದು.
ಈ ಜಾಗ ನನ್ನದಲ್ಲ, ಇಲ್ಲಿ ಗಲೀಜಾದರೆ ನನಗೇನು ನಷ್ಟ ಎನ್ನುವ ಉಡಾಫೆತನ ಬಹುತೇಕರದ್ದು. “ವಸುಧೈವ ಕುಟುಂಬಕಮ್’ ಎಂಬ ತಣ್ತೀವನ್ನು ನಂಬಿ ದವರು ನಾವು. ನಮ್ಮ ಮನೆಯಾಚೆಗಿನ ಪರಿಸರ, ಊರು, ದೇಶವೂ ನಮ್ಮದೇ ಮತ್ತು ನಾನು ಅದರ ಭಾಗ ಎಂಬ ಪ್ರಜ್ಞೆ ಮೂಡಿದಾಗ ಎಲ್ಲೆಂದರಲ್ಲಿ ಕಸ ಎಸೆಯಲು ತುಸು ಕಸಿವಿಸಿಯಾಗುತ್ತದೆ. ಊರು, ರಾಜ್ಯ, ದೇಶಗಳು ಆಡಳಿತ-ಅಧಿಕಾರಗಳಿಗಾಗಿ ಆದ ವಿಭಾಗಗಳಷ್ಟೇ, ಆದರೆ ಭೌಗೋಳಿಕವಾಗಿ ನಾವೆಲ್ಲರೂ ಒಂದೇ ಭುವಿಯ ಮನುಜರು.
ಅರ್ಧದಷ್ಟು ಗೃಹ ತ್ಯಾಜ್ಯಗಳನ್ನು ಮನೆಯಲ್ಲಿಯೇ ವಿಲೇವಾರಿ ಮಾಡಬಹುದು. ಕೊಳೆತು ಹೋಗುವ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಬಹುದು. ಉಳಿದ ಕಸಗಳನ್ನು ಸ್ಥಳೀಯವಾಗಿ ಸಂಗ್ರಹಿಸಿ, ಸಂಸ್ಕರಿಸಬಹುದು. ಕಸವೂ ರಸವಾಗಿ ಆದಾಯದ ಮೂಲವಾಗಬಹುದು. ಇಂತಹ ಹಲವಾರು ಮಾದರಿ ಗಳಿವೆ. ಆದಷ್ಟು ಭುವಿಯೊಡಲಿಗೆ ವಿಷವಾಗುವ ವಸ್ತುಗಳನ್ನು ಬಳಸದಿರುವುದು, ಪುನರ್ಬಳಕೆ, ಸಂಸ್ಕರಿಸಿ ಮರುಬಳಕೆ ಇತ್ಯಾದಿ ಕ್ರಮಗಳನ್ನು ಅನುಸರಿಸುವುದು ಸೂಕ್ತ. ವಿದ್ಯುತ್ ಚಾಲಿತ ಸಾಧನ-ಉಪಕರಣಗಳು ನಿರುಪಯುಕ್ತವಾದಾಗ ತಯಾರಕ ಕಂಪೆನಿಗಳೇ ಅವು ಗಳನ್ನು ಸಂಗ್ರಹಿಸಿ ಸಂಸ್ಕರಿಸುವ ವ್ಯವಸ್ಥೆ ಇರಬೇಕು.
ಸ್ವಚ್ಛತೆ ಎನ್ನುವುದೊಂದು ಮನಃಸ್ಥಿತಿ. ನಮ್ಮ ಮನೆ ಯಂತೆಯೇ ನಮ್ಮ ಪರಿಸರ, ಊರು, ಕೇರಿಗಳನ್ನು ಸ್ವಚ್ಛವಾಗಿರಿಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತ ವಾಗಿರಬೇಕು. ಮಜಾ-ಮೋಜು, ಪ್ರವಾಸ ಮತ್ತು ಪರವೂರ ಭೇಟಿಯ ಸಂದರ್ಭಗಳಲ್ಲಿ ಪರಿಸರವನ್ನು ಕೆಡಿಸಬಾರದೆನ್ನುವ ಎಚ್ಚರ ಇರಬೇಕು. ಎಲ್ಲಕಿಂತ ಮೊದಲು ಮನಃಶುದ್ಧಿಯಾಗಬೇಕು.
-ಸಾಣೂರು ಇಂದಿರಾ ಆಚಾರ್ಯ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.