ಕರಾವಳಿ: ಸ್ವಾತಂತ್ರ್ಯ ಸಂಗ್ರಾಮ ಪ್ರಭಾವಳಿ
Team Udayavani, Aug 14, 2021, 7:00 AM IST
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಾವು ವ್ಯಾಪಿಸಿತ್ತು. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಚಳವಳಿಗೆ ಧುಮುಕಿದರು. ಅಸಹಕಾರ ಚಳವಳಿಯ ಕಾವೂ ಬಲವಾಗಿತ್ತು. ಇದಕ್ಕೆ ಹಿನ್ನೆಲೆಯಾಗಿ ಜನರಲ್ಲಿ ಸ್ಫೂರ್ತಿ ತುಂಬಿದ್ದು ಮಹಾತ್ಮಾ ಗಾಂಧಿ ಅವರ ಭೇಟಿ. ಈ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿರುವ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.
1934 ರ ಫೆ. 24 :
ಮಹಾತ್ಮಾ ಗಾಂಧೀಜಿ ಅವರು ಸಂಪಾಜೆಯಿಂದ ಪ್ರವಾಸ ಆರಂಭಿಸಿದ್ದು ಬೆಳಗ್ಗೆ 6 ಕ್ಕೆ. ಆಗಲೇ ಅಲ್ಲಿ 200 ಮಂದಿ ಸೇರಿದ್ದರಂತೆ. ಸುಳ್ಯದಲ್ಲಿ ಸಾವಿರದಷ್ಟು ಮಂದಿ ಸ್ವಾಗತಿಸಿದ್ದರಂತೆ. ಒಂಬತ್ತು ಗಂಟೆಗೆ ಪುತ್ತೂರಿನಲ್ಲಿ ನೆರೆದಿದ್ದ 500 ಮಂದಿ ಮಹಿಳೆಯರೂ ಸೇರಿದಂತೆ ಸುಮಾರು 5 ಸಾವಿರ ಮಂದಿಯ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಭೂಕಂಪ ನಿರ್ವಸಿತರಿಗೆ ನಿಧಿ ಸಂಗ್ರಹಿಸಿ, ಅಸ್ಪೃಶ್ಯತಾ ನಿವಾರಣೆ ಹಾಗೂ ಮದ್ಯಪಾನ ವರ್ಜನೆಗೆ ಕರೆ ನೀಡಿದ್ದರು.
ಗಾಂಧಿಕಟ್ಟೆ :
ಪುತ್ತೂರಿನ ಕೋರ್ಟ್ ರಸ್ತೆಯಲ್ಲಿನ ಸುಂದರ್ ರಾವ್ ಅವರ ಮನೆಗೆ ಭೇಟಿ ನೀಡಿ ವಿಶ್ರಾಂತಿ ಪಡೆದರು. ಬಳಿಕ ಬಸ್ ನಿಲ್ದಾಣದ ಬಳಿ ಅಶ್ವತ್ಥ ಮರದಡಿ ಭಾಷಣ ಮಾಡಿದರು. ಅದರ ನೆನಪಿಗಾಗಿ “ಗಾಂಧಿ ಕಟ್ಟೆ’ ನಿರ್ಮಿಸಿ ಬಾಪೂಜಿಯ ಪ್ರತಿಮೆಯನ್ನು ಅನಾವರಣಗೊ ಳಿಸಲಾಗಿತ್ತು. 2018ರಲ್ಲಿ ನಗರಸಭೆಯು 7 ಲ. ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಿತ್ತು.
ಗಾಂಧೀಜಿ ತಂಗಿದ್ದ ಮನೆ ಈಗ ನರ್ಸಿಂಗ್ ಹೋಂ! :
ಗಾಂಧೀಜಿ ವಿಶ್ರಮಿಸಿದ್ದ ಆ ಮನೆಯೇ ಈಗ ಸತ್ಯಸಾಯಿ ನರ್ಸಿಂಗ್ ಹೋಂ. ದಿ| ಸುಂದರ ರಾವ್ ಅವರ ಮೊಮ್ಮಗ ಡಾ| ಸತ್ಯಸುಂದರ ರಾವ್ ಇದನ್ನು ನಡೆಸುತ್ತಿದ್ದಾರೆ. ಸಾಹಿತಿ ಡಾ| ಶಿವರಾಮ ಕಾರಂತ ಅವರನ್ನು ತಿಳಿದಿದ್ದ ಗಾಂಧೀಜಿ, ಅದೇ ಪರಿಚಯದಿಂದ ಕಾರಂತರ ಭಾವ ಡಾ| ಸುಂದರ ರಾವ್ ಮನೆಗೆ ಬಂದಿದ್ದರು. ಆಗ ಸಹೋದರ ನ್ಯಾಯವಾದಿ ಎಂ. ಸದಾಶಿವ ರಾವ್ ಜತೆಗಿದ್ದರು. ಗಾಂಧೀಜಿ ಮನೆಯೊಳಗೆ ಸಣ್ಣಹಾಲ್‌ನಲ್ಲಿದ್ದ ಮರದ ಬೆಂಚ್‌ನಲ್ಲಿ ವಿರಮಿಸಿದರಂತೆ. ರಾಗಿಮುದ್ದೆ, ಮಜ್ಜಿಗೆ ಸೇವಿಸಿದ್ದರಂತೆ. ಈ ಮನೆಯಲ್ಲಿರುವ ಗಾಂಧಿ ಭೇಟಿಯ ಫೋಟೋಗಳ ಪೈಕಿ ಅವರ ಸಹಿ ಇರುವ ಪೋಟೋ ಸಿಕ್ಕಿದ ಬಗೆಯೇ ರೋಚಕ. ಸುಂದರ ರಾವ್ ಅವರ ಸಂಬಂಧಿಕರೊಬ್ಬರು ಫೋಟೋ ತೆಗೆದು ಮಂಗಳೂರಿನಲ್ಲಿ ಮುದ್ರಿಸಿ, ಗಾಂಧೀಜಿ ಮಂಗಳೂರು ತಲುಪಿದಾಗ ಅದಕ್ಕೆ ಅವರ ಸಹಿ ಪಡೆದಿದ್ದರು.
ಗಾಂಧಿ ಮರೆತು ಹೋದ ಚಿನ್ನದಿಂದ ಕಾಲನಿಯಲ್ಲಿ ಬಾವಿ ತೋಡಿದರು ! :
ಗಾಂಧೀಜಿ ಪುತ್ತೂರಿನ ರಾಗಿದಕುಮೇರಿ ದಲಿತ ಕಾಲನಿ ಹಾಗೂ ಬೊಟ್ಟತ್ತಾರು (ಬ್ರಹ್ಮ ನಗರ) ಕಾಲನಿಗೆ ಭೇಟಿ ನೀಡಿದ್ದರು. ರಾಗಿದಕುಮೇರಿಯ ಜನರು ಕುಡಿಯಲು ತೋಡಿನ ನೀರನ್ನು ಬಳ ಸುವ ದೃಶ್ಯ ಕಂಡು ನೊಂದಿದ್ದ ಗಾಂಧೀಜಿ, ಡಾ| ಶಿವರಾಮ ಕಾರಂತ, ಸದಾಶಿವ ಕಾರ್ನಾಡ್‌ರ ಬಳಿ ಪ್ರಸ್ತಾಪಿಸಿ ತೆರೆದ ಬಾವಿ ತೋಡಿಸಲು ಸೂಚಿಸಿ ದರು.ಆ ಬಾವಿ ತೋಡಿದ ಕಥೆ ರೋಚಕ.
ಸುಂದರ ರಾವ್ ಮನೆಯಲ್ಲಿ ಜನರು ಸ್ವಾತಂತ್ರ್ಯ ಚಳವಳಿಗೆ ದೇಣಿಗೆ ನೀಡಿದ್ದರು. ಆದರೆ ಗಡಿ ಬಿಡಿ ಯಲ್ಲಿ ಚಿನ್ನದ ಸರ ವೊಂದನ್ನು ಗಾಂಧೀಜಿ ಯವರು ಮರೆತು ಬಿಟ್ಟು ಹೋದರು. ಅದನ್ನು ಏನು ಮಾಡುವುದೆಂದು ತೋಚದೇ ಸುಂದರ ರಾವ್, ಅ ಹಣದಿಂದ ಬಾವಿ ತೋಡಿಸಿದರಂತೆ.
ಇನ್ನೂ 3 ಸರ ಬಿಡುತ್ತಿದ್ದೆ ! :
ಮರೆತು ಹೋದ ಚಿನ್ನದ ಸರ ಬಳಸಿ ಬಾವಿ ತೋಡಿರುವ ಬಗ್ಗೆ ಸುಂದರ ರಾವ್ ಗಾಂಧೀಜಿಗೆ ಪತ್ರ ಬರೆದರು. ಕೆಲವು ದಿನಗಳ ಬಳಿಕ ಗಾಂಧೀಜಿಯವರು, ನಾನು ಒಂದೇ ಸರ ಬಿಟ್ಟು ಬಂದು ತಪ್ಪು ಮಾಡಿದೆ. ಇಂಥ ಒಳ್ಳೆಯ ಕಾರ್ಯ ಮಾಡು ವುದಿದ್ದರೆ ಇನ್ನೂ ಮೂರು ಚಿನ್ನದ ಸರಗಳನ್ನು ಬಿಟ್ಟು ಬರುತ್ತಿದ್ದೆ ಎಂದು ಉತ್ತರಿಸಿದ್ದರಂತೆ.
ಮಂಗಳೂರು: ಬೃಹತ್ ಸಭೆ:
1920, ಆಗಸ್ಟ್ 19:
ಅಸಹಕಾರ ಚಳವಳಿಯನ್ನು ಜನಪ್ರಿಯ ಗೊಳಿಸಿ “ಖೀಲಾಫತ್ ಚಳವಳಿ’ಗೆ ಜನರ ಸಹಕಾರ ಪಡೆಯಲು ಗಾಂಧೀಜಿಯವರು ಕೈಗೊಂಡ “ಖೀಲಾಫತ್ ಪ್ರವಾಸ’ದ ಭಾಗವಾಗಿ ರೈಲಿನಲ್ಲಿ ಕಾಸರಗೋಡು ಮೂಲಕ ಮಂಗಳೂ ರಿಗೆ ಬಂದರು ಎನ್ನಲಾಗಿದೆ. ಕೇಂದ್ರ ಮೈದಾನ ದಲ್ಲಿ 10 ಸಾವಿರ ಜನರನ್ನುದ್ದೇಶಿಸಿ ಮಾತನಾಡಿ ದರು. ಆ ಬಳಿಕ ಮಂಗಳೂರು ಮತ್ತು ಉಡುಪಿ ಚಳವಳಿಯ ಕೇಂದ್ರಗಳಾದವು. ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದರು. ಹಾಗಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಉದ್ಭವಿ ಸಿತು. ಮಂಗಳೂರು, ಉಡುಪಿ, ಪೆರ್ಡೂರು, ಕಾಸರಗೋಡು ಮೊದಲಾದೆಡೆ ರಾಷ್ಟ್ರೀಯ ಶಾಲೆಗಳು ಸ್ಥಾಪನೆಯಾದವು. ಮೋನಪ್ಪ ತಿಂಗ ಳಾಯ ಅವರು ಗೌರವ ಮ್ಯಾಜಿಸ್ಟ್ರೇಟ್ ಸ್ಥಾನ ತ್ಯಜಿಸಿದರು. ಯುವಜನರು ಶಾಲೆ, ಕಾಲೇಜು ಮತ್ತು ಕೋರ್ಟ್‌ಗಳ ಮುಂದೆ ಧರಣಿಗಿಳಿದರು. ವಕೀಲರು ಕೋರ್ಟ್‌ಗಳನ್ನು ಬಹಿಷ್ಕರಿಸಿದರು. ವಿದೇಶಿ ವಸ್ತುಗಳನ್ನು ಸುಡಲಾಯಿತು.
ಗಾಂಧೀಜಿಯವರು ಖಾದಿ ಪ್ರಚಾರಕ್ಕಾಗಿ 2ನೇ ಬಾರಿ 1927ರ ಅಕ್ಟೋಬರ್ 26ರಂದು ಬಂದರು. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಕೆನರಾ ಶಾಲೆಯ ಭುವನೇಂದ್ರ ಹಾಲ್‌ನಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರ ಅನಾವರಣಗೊಳಿಸಿದರು. ಬಡವರ ಸಹಾಯಕ್ಕಾಗಿ ಜನರಿಂದ ದೇಣಿಗೆ, ಕಾಣಿಕೆಗಳನ್ನು ಸ್ವೀಕರಿಸಿದರು.
ಅಸ್ಪೃಶ್ಯರ ಏಳಿಗೆ ಪ್ರಯುಕ್ತ 9 ತಿಂಗಳ ದೀರ್ಘಕಾಲ ಪ್ರವಾಸ ಕೈಗೊಂಡ ಸಂದರ್ಭ 1934ರಲ್ಲಿ ಮದ್ರಾಸ್ ಪ್ರಸಿಡೆನ್ಸಿಯಲ್ಲಿದ್ದ ಹಳೆಯ ದಕ್ಷಿಣ ಕನ್ನಡದ (ಇಂದಿನ ಉಡುಪಿ, ದ. ಕನ್ನಡ) ಅನೇಕ ಸ್ಥಳಗಳಲ್ಲಿ ಗಾಂಧೀಜಿ ಪ್ರವಾಸ ಮಾಡಿದರು. ಹರಿಜನ ಸಂಪುಟ 2ರಲ್ಲಿ ಉಲ್ಲೇಖೀಸಿದಂತೆ ಗಾಂಧೀಜಿಯವರು 1934ರ ಫೆ.24 ರಂದು ಬೆಳಗ್ಗೆ 7 ಗಂಟೆಗೆ ಮಡಿಕೇರಿಯಿ ಂದ ಹೊರಟರು. ಸುಳ್ಯ, ಸಂಪಾಜೆ, ಪುತ್ತೂರಿ ನಲ್ಲಿ ಸಭೆ ನಡೆಸಿ ಮಧ್ಯಾಹ್ನ ಮಂಗಳೂರಿಗೆ ಆಗಮಿಸಿದ್ದರು. ಅಂದು ರಾತ್ರಿ ಮಂಗಳೂ ರಿನಲ್ಲಿ ತಂಗಿದ್ದು, ಮರುದಿನ ಬೆಳಗ್ಗೆ ಹರಿಜನ ಕೇರಿ ಮತ್ತು ಸಾರ್ವಜನಿಕ ಕೃಷ್ಣಮಂದಿರಕ್ಕೆ ಶಿಲಾನ್ಯಾಸ ಮಾಡಲು ಕೆನರಾ ಹೈಸ್ಕೂಲ್‌ಗೆ ಭೇಟಿ ನೀಡಿ ದರು. ಅಲ್ಲಿಂದ ಮೂಲ್ಕಿಗೆ ಹೋದರು. ಸಭೆಯಲ್ಲಿ ಭಾಗವಹಿಸಿ ಉಡುಪಿ, ಕುಂದಾಪುರಕ್ಕೆ ತೆರಳಿದ್ದರು. ಅಂದು ಕುಂದಾಪು ರದಲ್ಲಿ ತಂಗಿ ಮೌನವ್ರತ ಆಚರಿಸಿದ್ದರು.
ಮಂಗಳೂರಿನಲ್ಲಿ ನಿಧಿ ಸಮರ್ಪಣೆ :
ಗಾಂಧೀಜಿಯವರ ಮೊದಲನೇ ಸಮಾ ರಂಭ ನ್ಯಾಷನಲ್ ಗರ್ಲ್ಸ್ ಸ್ಕೂಲಿನಲ್ಲಿ ನಡೆದದ್ದು ಜ್ಞಾನೋದಯ ಸಮಾಜ ಎಂಬ ಮೀನುಗಾರರ ಸಂಘಟನೆಯ ವತಿಯಿಂದ. ಈ ಸಂಘಟನೆ ಮದ್ಯವಿರೋಧಿ ಕಾರ್ಯದಲ್ಲಿ ನಿರತವಾಗಿತ್ತು. 1,500 ಮಹಿಳೆಯರು ಪಾಲ್ಗೊಂಡಿದ್ದು, ನಿಧಿಯನ್ನು ಅರ್ಪಿಸಲಾಯಿತು.
ಗಾಂಧೀಜಿ ಭೇಟಿಯ ಮತ್ತೂಂದು ಐತಿಹಾ ಸಿಕ ತಾಣ ಎಂದರೆ ಲೈಟ್ ಹೌಸ್ ಹಿಲ್ ಅಥವಾ ಬಾವುಟಗುಡ್ಡೆ. ಇಲ್ಲಿ ಗಾಂಧೀಜಿಯವರಿಗೆ ಅರ್ಪಿಸಿದ ಗ್ರಂಥಾಲಯವಿದೆ. ಗಾಂಧಿ
ಯವರ ಪೂರ್ಣ ಪ್ರತಿಮೆ ಇದೆ. ಮಣ್ಣಗುಡ್ಡೆಯ ಗಾಂಧಿ ನಗರದಲ್ಲಿ ಗಾಂಧಿ ಉದ್ಯಾನವಿದೆ. ಇಲ್ಲಿನ “ಸರಸ್ವತಿ ನಿವಾಸ’ದಲ್ಲಿ ತಂಗಿದ್ದರು.
ಬೆಳ್ಳಿ ಚರಕ ದೇಣಿಗೆ :
ಜ್ಞಾನೋದಯ ಸಮಾಜದಲ್ಲಿ ಜರಗಿದ ಸಭೆಯಲ್ಲಿ ಜೋಗಮ್ಮ ತಿಂಗಳಾಯ ಎಂಬವರು ಗಾಂಧೀಜಿಗೆ ಬೆಳ್ಳಿ ಚರಕವನ್ನು ನೀಡಿದ್ದರು. ರಾತ್ರಿ ಆರ್.ಎಸ್. ನಗರ್‌ಕರ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಮರುದಿನ ಕಾರ್ನಾಡ್ ಸದಾಶಿವರಾಯರ ಮನೆಗೆ ತೆರಳಿ ಅವರ ತಾಯಿಯ ಯೋಗಕ್ಷೇಮ ವಿಚಾರಿಸಿದ್ದರು.
1920ರಲ್ಲಿ ಗಾಂಧೀಜಿಯವರು ಭಾಷಣ ಮಾಡಿದ್ದು ಕೇಂದ್ರ ಮೈದಾನದಲ್ಲಿ. ಇಂದು ಆ ಸ್ಥಳದ ಹೆಸರು ಮತ್ತು ರಚನೆಯಲ್ಲಿ ಬದಲಾವಣೆಗಳಾಗಿವೆ. ಟೌನ್‌ಹಾಲ್‌ನ ಎದುರು ಗಾಂಧಿ ಪ್ರತಿಮೆ ಇದೆ. ಕೆನರಾ ಸ್ಕೂಲ್(ಇಂದಿನ ಕೆನರಾ ಹೆಣ್ಮಕ್ಕಳ ಶಾಲೆ ಸಂಕೀರ್ಣ, ಡೊಂಗರಕೇರಿ)ನಲ್ಲಿ ಗಾಂಧಿಯವರ ಎರಡು ಮತ್ತು ಮೂರನೇ ಭೇಟಿಯ ಸ್ಮಾರಕಗಳಿವೆ. ಸಾರ್ವಜನಿಕ ಕೃಷ್ಣಮಂದಿರ ಗಾಂಧಿಯವರ ಪ್ರವಾಸದ ಸ್ಮಾರಕ ಕಟ್ಟಡವಾಗಿದೆ. ಕೆನರಾ ಶಾಲೆಯ ವಸ್ತು ಸಂಗ್ರ ಹಾಲಯಕ್ಕೆ ಗಾಂಧೀಜಿ ಹೆಸರಿಡಲಾಯಿತು. ಇಲ್ಲಿ ಈಗಲೂ 1934ರಲ್ಲಿ ಗಾಂಧೀಜಿಯವರು ಕೃಷ್ಣ ಮಂದಿರದ ಶಿಲಾನ್ಯಾಸ ಮಾಡುತ್ತಿರುವ ಭಾವಚಿತ್ರ ಗಳಿವೆ. ಆ ದಿನ ಪ್ರದರ್ಶಿಸಿದ್ದ ಫಲಕ ಮತ್ತು ಗಾಂಧೀಜಿ ಯವರು ಶಿಲಾನ್ಯಾಸ ಮಾಡಿದ ಮೇಲೆ ಕೈ ಒರೆಸಲು ಬಳಸಿದ ಬೈರಾ ಸನ್ನೂ ಜತನವಾಗಿ ಕಾಪಿಡ ಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.