ಕಣ್ತೆರೆದ ಕೈಕಮಾಂಡ್… ಪವರ್ ಸೆಂಟರ್‌ಗಳ ನಡುವೆ ಡಿಕೆಶಿ
Team Udayavani, Mar 12, 2020, 3:09 AM IST
ಮತದಾರ ಮತ್ತು ಆಗಾಗ ನಡೆಯುತ್ತಿರುವ ವಿದ್ಯಮಾನಗಳು ಕಾಂಗ್ರೆಸ್ ಪಕ್ಷಕ್ಕೆ ಪಾಠಗಳನ್ನು ಕಲಿಸುತ್ತಲೇ ಇದ್ದರೂ ಆ ಪಕ್ಷ ಎಚ್ಚೆತ್ತುಕೊಳ್ಳುವ ಲಕ್ಷಣಗಳು ಕಾಣುತ್ತಿರಲಿಲ್ಲ. ದೇಶದ ಮತದಾರ, ಕುಟುಂಬ ರಾಜಕಾರಣವನ್ನು ಧಿಕ್ಕರಿಸಿದ್ದರೂ, ಮತ್ತೆ ಮತ್ತೆ ಅದಕ್ಕೆ ಜೋತುಬಿದ್ದಿರುವ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರದೇಶದಂತಹ ರಾಜ್ಯವನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಿಂಚಿತ್ ಕಣ್ತೆರೆದಂತಿದೆ!
ಮೋದಿ ಮೋಡಿಯಲ್ಲಿ ದೇಶವೇ ಕರಗಿ ಹೋಗಿರುವ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಸಿಂಧಿಯಾ ಕಾಂಗ್ರೆಸ್ ನಾಯಕತ್ವದ ಮನೋಭಾವದಿಂದ ಬೇಸತ್ತು ಬಿಜೆಪಿಯತ್ತ ವಾಲಿದರು. ಆದರೆ, ಅವರು ಬಿಜೆಪಿ ಸೇರುವುದು ಖಚಿತವಾದಂತೆಯೇ, ಇತ್ತ ಕರ್ನಾಟಕದ ಕಾಂಗ್ರೆಸ್ “ನವೀಕರಣ’ ಕಾರ್ಯವನ್ನು ಹೈಕಮಾಂಡ್ ಎತ್ತಿಕೊಂಡಂತೆ ಕಾಣುತ್ತಿದೆ.
ಯಾಕೆಂದರೆ, ಕಾಂಗ್ರೆಸ್ ಪಕ್ಷದ ಶಾಸಕರೇ “ಆಪರೇಷನ್ ಕಮಲ’ದ ಗಾಳಕ್ಕೆ ಬಿದ್ದು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಸರ್ಕಾರ ಬೀಳಿಸುವ ಪರಿಪಾಠ ಆರಂಭವಾಗಿದ್ದು ಕರ್ನಾಟಕದಲ್ಲೇ. ಆ ಕಾರಣಕ್ಕಾಗಿಯೇ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಯಿತು. ಈಗ ಬಹುಮತ ಹೊಂದಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೂ ಅದೇ ಆಪರೇಷನ್ ಹಾವಳಿ ವಕ್ಕರಿಸಿದೆ. ಇದು ರಾಜಸ್ಥಾನ ಮತ್ತು ಮಹಾರಾಷ್ಟ್ರದ “ಮಹಾ ಘಟಬಂಧನ್’ ಸರ್ಕಾರಕ್ಕೂ ಎರವಾಗುವ ಲಕ್ಷಣಗಳು ಕಾಣತೊಡಗಿವೆ.
ಕರ್ನಾಟಕದಲ್ಲಿ “ಕಾಂಗ್ರೆಸ್ ಅನರ್ಹ ಶಾಸಕರು’ ಬಿಜೆಪಿಯಿಂದ “ಅರ್ಹತೆ’ ಸಂಪಾದಿಸಲು ನಡೆದ ಉಪಚುನಾವಣಾ ಸಮರದಲ್ಲಿ ಕಾಂಗ್ರೆಸ್ ನಿರ್ನಾಮ ವಾಯಿತು. ಆ ಕಾರಣಕ್ಕೆ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಯಿತ್ತಿದ್ದರು. ಆದರೆ, ತಿಂಗಳುಗಳಾ ದರೂ, ಆ ಸ್ಥಾನಗಳಿಗೆ ಹೊಸ ಮುಖ ಹುಡುಕುವಲ್ಲಿ ಹೈಕಮಾಂಡ್ ಎಂದಿನಂತೆ ನಿಧಾನಗತಿ ಅನುಸರಿಸಿತು.
ಈ ನಡುವೆ ವಿಧಾನಸಭೆಯ ಪ್ರತಿಪಕ್ಷ ನಾಯಕ, ಶಾಸಕಾಂಗ ಪಕ್ಷ ನಾಯಕ (ಈ ಹಿಂದೆ ಸಿದ್ದರಾಮಯ್ಯ ಅವರೇ ಈ ಎರಡೂ ಹುದ್ದೆಗಳನ್ನು ಹೊಂದಿದ್ದರು. ಆ ಎರಡು ಹುದ್ದೆಗಳಿವೆ ಅನ್ನುವ ಅರಿವು ರಾಜ್ಯ ನಾಯಕರಿಗೆ ಬಂದಿದ್ದೇ ಅವರ ರಾಜೀನಾಮೆ ಬಳಿಕ!), ಅಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಬಗ್ಗೆ ಒಂದು ರೀತಿಯಲ್ಲಿ “ಸರ್ಕಸ್’ ನಡೆಯಿತು. ಆಗಾಗ ವಿವಿಧ ಬಣಗಳಿಂದ ದೆಹಲಿ ಯಾತ್ರೆಯೂ ಆರಂಭವಾಯಿತು.
ಪ್ರತಿಪಕ್ಷ ಸ್ಥಾನಗಳಿಗೆ ಎಚ್.ಕೆ. ಪಾಟೀಲ್, ಡಾ. ಜಿ.ಪರಮೇಶ್ವರ್ ಮತ್ತಿತರ ಘಟಾನುಘಟಿಗಳು “ಕೈ’ಯೊಡ್ಡಿದ್ದರು. ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಅಗತ್ಯ ಸಂದರ್ಭಗಳಲ್ಲಿ “ಬಂಡೆ’ಯಂತೆ ನಿಂತು ಸಹಕರಿಸಿದ, ಕಾಂಗ್ರೆಸ್‌ನ ಪ್ರಸ್ತುತ ಪ್ರಬಲ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರು ಪ್ರತಿಪಕ್ಷ ನಾಯಕತ್ವಕ್ಕೆ ಯತ್ನಿಸಿದರು. ಆದರೆ, ಅವರ ಪ್ರಮುಖ ಗುರಿ ಇದ್ದದ್ದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ. ಅದು ಅವರ ಮುಂದಿನ ಕನಸಿಗೆ (ಸಿಎಂ) ವೇದಿಕೆ ಆಗಬಹುದು ಎಂಬುದು ಆಶಯಯಾಗಿತ್ತು.
ಇನ್ನೊಂದೆಡೆ, ಕಾಂಗ್ರೆಸ್‌ನ ಹಿರಿಯರು ಸಿದ್ದರಾ ಮಯ್ಯ ವಿರುದ್ಧ, ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ವಿರುದ್ಧ ನಡೆಸಿದರು ಎನ್ನಲಾದ ರಾಜಕೀಯ ನಡೆಗಳು ಹೈಕಮಾಂಡ್ ನಿಧಾನಗತಿಗೆ ಮತ್ತಷ್ಟು ಕಾರಣವಾದವು. ಕಾಂಗ್ರೆಸ್ ವೀಕ್ಷಕರು ರಾಜ್ಯಕ್ಕಾಗಮಿಸಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇವೆಲ್ಲಾ ಕಾರಣಕ್ಕಾಗಿ ಸಿದ್ದರಾ ಮಯ್ಯ ಅವರು ಪಕ್ಷದ ಹಿಡಿತವನ್ನು ಇನ್ನಷ್ಟು ಬಲಪಡಿ ಸಲು ತಾವು ರಾಜೀನಾಮೆ ಕೊಟ್ಟ ಪ್ರತಿಪಕ್ಷ ನಾಯಕ ಹುದ್ದೆಗೆ ಅಂಟಿಕೊಳ್ಳಲು ಮತ್ತೆ ಗಟ್ಟಿಯತ್ನ ನಡೆಸಿದರು.
ಒಂದು ವೇಳೆ, ಡಿ.ಕೆ.ಶಿವಕುಮಾರ್ ರಾಜ್ಯಾಧ್ಯಕ್ಷರಾದರೆ ತಮ್ಮದೇ ಬಣದವರನ್ನು ಮೂರು ಕಾರ್ಯಾಧ್ಯಕ್ಷ ಹುದ್ದೆಗಳಿಗೆ ನೇಮಿಸಿ ಪಕ್ಷದ ಮೇಲಿನ ತಮ್ಮ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸುವ ಪ್ರಯತ್ನ ನಡೆಸಿದರು. ಸಿದ್ದರಾಮಯ್ಯ ಪ್ರಬಲ “ಅಹಿಂದ’ ನಾಯಕ ಮತ್ತು ಕಾಂಗ್ರೆಸ್‌ನ “ಅಲುಗಾಡಿಸಲಾಗದ’ ಮುಖಂಡ ಎಂಬಂತೆ ಬೆಳೆದುಕೊಂಡಿದ್ದು ಹಾಗೂ ಉಪಚುನಾವಣಾ ಸಮರದ ಬಳಿಕ ಹೃದಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಸ್ವತ: ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರು ಅವರನ್ನು ಭೇಟಿಯಾಗಿದ್ದು, ರಾಜಕೀಯವಾಗಿ ಬೇರೆಯದೇ ಸಂದೇಶವನ್ನು ಸಾರಿತು.
ಇತ್ತೀಚೆಗೆ ಯಡಿಯೂರಪ್ಪ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಘಟಾನುಘಟಿಗಳ ನಡುವೆ ತಾವೂ ಹೋಗಿ ಶುಭದ ಮಾತಾಡಿದ್ದು, ಇನ್ನೊಂದು ರೀತಿಯದೇ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ರವಾನಿಸಿತು. ಈಗ ಸಿದ್ದರಾಮಯ್ಯ ಅವರನ್ನು ಕಡೆಗಣಿಸದೆ, ಬಂಡೆಯಂತೆ ನಿಂತಿದ್ದ ಶಿವಕುಮಾರ್ ಅವರನ್ನೂ ವಿಶ್ವಾಸಕ್ಕೆ ಪಡೆದು ಕರ್ನಾಟಕ ಕಾಂಗ್ರೆಸನ್ನು ಕಳೆದುಕೊಳ್ಳಬಾರದು ಎಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ.
ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಘೋಷಿಸಿದೆ. ಸಿದ್ದರಾಮಯ್ಯ ಬಣದ ಅಹಿಂದ ವರ್ಗದವವರನ್ನೇ ಮೂರು ಕಾರ್ಯಾಧ್ಯಕ್ಷ ಹುದ್ದೆಗಳಿಗೆ ನೇಮಿಸಿ ಅವರನ್ನೂ ಸಂತುಷ್ಟಗೊಳಿಸಿದೆ. ಶಿವಕುಮಾರ್ ಅಥವಾ ಸಿದ್ದರಾಮಯ್ಯ ವಿರುದ್ಧ ನಡೆ ಅನುಸರಿಸಿದ್ದ “ಹಿರಿಯರನ್ನು’ ಲೆಕ್ಕಕ್ಕೆ ಇಟ್ಟುಕೊಳ್ಳದೆ ಒಟ್ಟಾರೆಯಾಗಿ ಒಕ್ಕಲಿಗ, ಲಿಂಗಾಯಿತ, ಅಹಿಂದ ವರ್ಗಗಳನ್ನು ಒಟ್ಟಾಗಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಕೈಹಾಕಿದೆ.
ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಉಳಿದಿರುವ ಗುರಿಗಳು… ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು. ಕುಟುಂಬ ರಾಜಕೀಯದಲ್ಲೇ ಕಾಲಕಳೆಯುತ್ತಿರುವ ಜೆಡಿಎಸ್ ಪಕ್ಷದ “ಒಕ್ಕಲಿಗ’ ಮತಬ್ಯಾಂಕನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ತರುವುದು, ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸು ವುದು. ಕಾನೂನು ಕುಣಿಕೆ ತಪ್ಪಿಸಿಕೊಳ್ಳುವುದು.
ಈ ನಡುವೆ, ಕಾಂಗ್ರೆಸ್‌ನಲ್ಲಿ ಮೂರು ಪವರ್ ಸೆಂಟರ್‌ಗಳು ಹುಟ್ಟಿಕೊಂಡಿವೆ. ಒಂದು ಡಿ.ಕೆ. ಶಿವಕುಮಾರ್, ಇನ್ನೊಬ್ಬರು ಸಿದ್ದರಾಮಯ್ಯ ಹಾಗೂ ಮೂರನೆಯವರೇ “ಹಿರಿಯ’ ಕಾಂಗ್ರೆಸಿಗರು. ಅಧ್ಯಕ್ಷರಾಗಿ ಉಳಿದೆರಡು ಪವರ್ ಸೆಂಟರ್‌ಗಳನ್ನು ನಿಭಾಯಿಸಲಿದ್ದಾರೆ ಎನ್ನುವುದಕ್ಕೆ ಮುಂದಿನ ರಾಜಕೀಯ ದಿನಮಾನಗಳು ಸಾಕ್ಷಿಯಾಗಲಿವೆ.
* ನವೀನ್ ಅಮ್ಮೆಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.