ಕೊರೊನಾ: ವದಂತಿ ಮತ್ತು ವಾಸ್ತವ
Team Udayavani, Mar 5, 2020, 7:13 AM IST
ಕೊರೊನಾ ವೈರಸ್‌ನಂತೆಯೇ, ಅದರ ಕುರಿತ ಸುದ್ದಿಗಳೂ ಹರಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸುದ್ದಿ ವಾಹಿನಿಗಳಲ್ಲಂತೂ ಕೊರೊನಾ ಕುರಿತ ಅಂತೆಕಂತೆಗಳ ಸಾಗರವೇ ಸೃಷ್ಟಿಯಾಗಿದೆ. ಅತಿಯಾದ ಮಾಹಿತಿಯ ಹರಿವಿನಿಂದಾಗಿ, ಜನರಿಗೆ ಸತ್ಯವ್ಯಾವುದು ಸುಳ್ಳು ಯಾವುದು ಎನ್ನುವುದೇ ತಿಳಿಯದಾಗಿದೆ. ಈ ಅಗಾಧ ಮಾಹಿತಿಯ ಸಾಗರದಲ್ಲಿ ವಿಶ್ವಾಸಾರ್ಹ ಮೂಲಗಳು ಮತ್ತು ಮಾರ್ಗದರ್ಶನವನ್ನು ಪಡೆಯುವುದೇ ಜನರಿಗೆ ಕಷ್ಟವಾಗಿಬಿಟ್ಟಿದೆ. ಹೀಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ, ವೈದ್ಯರು, ತಜ್ಞರು ಕೊರೊನಾ ಕುರಿತು ಹರಡುತ್ತಿರುವ ವದಂತಿಗಳನ್ನು ಮತ್ತು ವಾಸ್ತವವನ್ನು ಪ್ರತ್ಯೇಕಿಸಿ ಎದುರಿಡುತ್ತಿದ್ದಾರೆ…ಕೊರೊನಾ ವಿಷಯದಲ್ಲಿ ಅನವಶ್ಯಕ ಗಾಬರಿಯಾಗಬೇಡಿ, ಆದರೆ ನಿಷ್ಕಾಳಜಿಯೂ ಮಾಡಬೇಡಿ ಎನ್ನುವ ಎಚ್ಚರಿಕೆಯನ್ನೂ ಕೊಡುತ್ತಿದ್ದಾರೆ…
ವದಂತಿ: ಗೋಮೂತ್ರ, ಬೆಳ್ಳುಳ್ಳಿ, ನಿಂಬೆಹಣ್ಣು,
ತುಳಸಿ, ಬಿಸಿ ನೀರು ಸೇವನೆ, ಎಳ್ಳೆಣ್ಣೆ ಮತ್ತು ಇತರೆ ಮನೆ ಮದ್ದಿನಿಂದ ಕೊರೊನಾ ದೂರವಾಗುತ್ತದೆ
ವಾಸ್ತವ: ಬೆಳ್ಳುಳ್ಳಿ, ಗೋಮೂತ್ರ, ತುಳಸಿ, ನಿಂಬೆಹಣ್ಣು…ಇತ್ಯಾದಿ ಯಾವ ಮನೆಮದ್ದುಗಳಿಂದಲೂ ಕೊರೊನಾ ವೈರಸ್ ದೂರವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಆಧಾರಗಳು ಇಲ್ಲ. ಫೇಸ್ ಬುಕ್, ವಾಟ್ಸ್‌ಆಪ್, ಯೂಟ್ಯೂಬ್‌ನಲ್ಲಿ “ಮನೆ ಮದ್ದು, ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು, ಪದ್ಧತಿಗಳಿಂದ ಕೊರೊನಾ ವಾಸಿಯಾಗುತ್ತದೆ/ದೂರವಿರುತ್ತದೆ’ ಎಂದು ವಿಡಿಯೋಗಳು, ಸುದ್ದಿಗಳು ಹರಿದಾಡುತ್ತಿದ್ದು, ಇವುಗಳನ್ನು ನಂಬಬೇಡಿ. ಸದ್ಯಕ್ಕೆ ಕೊರೊನಾ ವೈರಸ್‌ಗೆ ನಿಖರ ಔಷಧಿ ಕಂಡುಹಿಡಿಯಲಾಗಿಲ್ಲ. ಆದಾಗ್ಯೂ, ಅನೇಕ ರಾಷ್ಟ್ರಗಳು ಈಗ ಸಂಶೋಧನೆಯಲ್ಲಿ ತೊಡಗಿವೆಯಾದರೂ, ಲಸಿಕೆ ಸಿಗುವುದಕ್ಕೆ ಕನಿಷ್ಠ ಒಂದು ವರ್ಷವಾದರೂ ಬೇಕು. ಯಾರಾದರೂ ಶೀತ, ಜ್ವರದಿಂದ ಬಳಲುತ್ತಿದ್ದರೆ, ಅವರಿಂದ ಅಂತರ ಕಾಯ್ದುಕೊಳ್ಳಿ. ಹೊರಗೆ ಓಡಾಡಿ ಬಂದ ನಂತರ, ಸ್ವತ್ಛವಾಗಿ ಕೈ ತೊಳೆದುಕೊಳ್ಳಿ. ನಿಮಗೆ ಶೀತವಾಗಿದ್ದರೆ, ಜ್ವರ ಕಾಡಿದರೆ ವೈದ್ಯರನ್ನು ಸಂಪರ್ಕಿಸಿ.
ವದಂತಿ: ಕೊರೊನಾ ಬಂದವರೆಲ್ಲ ಸತ್ತು ಹೋಗುತ್ತಾರೆ.
ವಾಸ್ತವ: ಕೊರೊನಾ ವೈರಸ್‌ನಿಂದಾಗಿ ಆಗುತ್ತಿರುವ ಸಾವಿನ ಪ್ರಮಾಣ 2 ಪ್ರತಿಶತದಷ್ಟಿದೆ. ಈ ಸಂಖ್ಯೆ ಮತ್ತಷ್ಟು ಕುಸಿಯಲಿದೆ ಎಂದು ಪರಿಣತರು ಹೇಳುತ್ತಾರೆ. ಕೊರೊನಾ ಅಪಾಯಕಾರಿಯೇ ಆದರೂ, ಇದರಿಂದ ಸಂಭವಿಸುವ ಸಾವಿನ ಪ್ರಮಾಣ ಕಡಿಮೆ. ದುರ್ಬಲ ರೋಗನಿರೋಧಕ ವ್ಯವಸ್ಥೆ ಹೊಂದಿರುವವರು, ವೃದ್ಧರು ಮತ್ತು ಪುಟ್ಟ ಮಕ್ಕಳಿಗೆ ಕೊರೊನಾದಿಂದ ಹೆಚ್ಚು ತೊಂದರೆಯಾಗುತ್ತದೆ(ನ್ಯೂಮೋನಿಯಾ ಮತ್ತು ಬ್ರಾಂಕೈಟಿಸ್‌ನಂತೆ). ಆದಾಗ್ಯೂ, ಇಂದು ಪ್ರಪಂಚದಾದ್ಯಂತ ಸಾವಿರಾರು ಜನ ರೋಗ ಪೀಡಿತರಾಗಿರುವುದರಿಂದ 2 ಪ್ರತಿಶತ ಸಂಖ್ಯೆ ಕೂಡ ಕಳವಳದ ವಿಷಯವೇ. ಭಾರತದಲ್ಲಿ ಮೊದಲು ಕೇರಳದಲ್ಲಿ ಈ ರೋಗ ಪತ್ತೆಯಾಗಿತ್ತು. ಸೂಕ್ತ ಚಿಕಿತ್ಸೆಯ ನಂತರ, ಅವರೆಲ್ಲ ಚೇತರಿಸಿಕೊಂಡಿದ್ದಾರೆ.
ವದಂತಿ: ಚೀನಾದಿಂದ ಬರುವ ವಸ್ತುಗಳಿಂದಲೂ ಹರಡುತ್ತದೆ
ವಾಸ್ತವ: ಈ ವಿಷಯದಲ್ಲಿ ಭಯ ಬೇಡ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಚೀನಾದಿಂದ ಬರುವ ಪ್ಯಾಕೇಜ್‌ಗಳಿಂದ ರೋಗ ಹರಡುವುದಿಲ್ಲ. ಭಾರತದಲ್ಲಿ ಚೀನಾದ ವಸ್ತುಗಳ ಆಮದು ಬಹಳಷ್ಟಿದೆ. ಭಾರತೀಯರು ಆಲಿಬಾಬಾದಂಥ ಆನ್‌ಲೈನ್ ಮಾರುಕಟ್ಟೆಗಳಿಂದ ಉತ್ಪನ್ನಗಳನ್ನು ಮನೆಗೇ ತರಿಸಿಕೊಳ್ಳುತ್ತಿದ್ದಾರೆ. ಬಾಹ್ಯ ವಾತಾವರಣದಲ್ಲಿ ಕೊರೊನಾ ವೈರಸ್‌ನ ಜೀವಿತಾವಧಿ ಚಿಕ್ಕದಾದ್ದರಿಂದ, ಚೀನಾದ ವಸ್ತುಗಳಿಂದ ಅದು ಹರಡುವುದಿಲ್ಲ. ವಸ್ತುಗಳ ಮೇಲೆ, ಪತ್ರಗಳ ಮೇಲೆ ಅಥವಾ ಪ್ಯಾಕೇಜ್‌ಗಳಲ್ಲಿ ಕೊರೊನಾ ಹೆಚ್ಚು ಸಮಯ ಬದುಕುಳಿಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವದಂತಿ: ಬಿಸಿಲು, ಬಿಸಿ ಗಾಳಿ ವೈರಸ್ ಅನ್ನು ಕೊಲ್ಲುತ್ತದೆ.
ವಾಸ್ತವ: ಹ್ಯಾಂಡ್‌ಡ್ರೈಯರ್‌ಗಳನ್ನು ಬಳಸುವುದರಿಂದ ವೈರಸ್ ಸಾಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೊನಾ
ಬಿಸಿಲಿನ ತಾಪಕ್ಕೆ ನಾಶವಾಗುತ್ತದೆ, ಹೀಗಾಗಿ, ವಸಂತದ ವೇಳೆಗೆ ಅದು ಅಂತ್ಯವಾಗುತ್ತದೆ ಎಂದು ಹೇಳಿದ್ದರು. ಆಗಿನಿಂದ ಇಂಥದ್ದೊಂದು ಮಾತು ಹರಡುತ್ತಿದೆ. ಆರೋಗ್ಯ ಪರಿಣತರ ಪ್ರಕಾರ, ಇದು ತಪ್ಪು.
ವದಂತಿ: ಕೊರೊನಾ ಮಕ್ಕಳಿಗೆ ಹರಡುವುದಿಲ್ಲ
ವಾಸ್ತವ: ಎಲ್ಲಾ ವಯಸ್ಸಿನವರಿಗೂ ಸೋಂಕು ತಗಲಬಲ್ಲದು. ಆದಾಗ್ಯೂ, ಇದುವರೆಗಿನ ಅತಿಹೆಚ್ಚು ಪ್ರಕರಣಗಳು ಪ್ರೌಢರಲ್ಲಿಯೇ ಕಂಡುಬಂದರೂ, ಕೊರೊನಾ ಪೀಡಿತ ಮಕ್ಕಳೂ ಬಹಳಷ್ಟಿದ್ದಾರೆ.
ವದಂತಿ: ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡುತ್ತದೆ
ವಾಸ್ತವ: ಸಾಕು ಪ್ರಾಣಿಗಳು(ನಾಯಿ ಅಥವಾ ಬೆಕ್ಕು) ಕೊರೊನಾ ಸೋಂಕಿಗೆ ತುತ್ತಾಗಬಲ್ಲವು ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಹೀಗಾಗಿ, ಅವುಗಳಿಂದ ರೋಗ ಹರಡುತ್ತದೆ ಎಂಬ ಮಾತನ್ನು ನಂಬದಿರಿ. ಆದಾಗ್ಯೂ, ಸಾಕು ಪ್ರಾಣಿಗಳ ಸಂಪರ್ಕಕ್ಕೆ ಬಂದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ. ಇದರಿಂದ, ಇ. ಕೊಲೈ ಮತ್ತು ಸಾಲ್ಮೋನೆಲ್ಲಾದಂಥ ಬ್ಯಾಕ್ಟೀರಿಯಾಗಳ ಹರಡುವಿಕೆ ನಿಲ್ಲುತ್ತದೆ.
ವದಂತಿ: ಎಲ್ಲರೂ ಮಾಸ್ಕ್ ಧರಿಸಲೇಬೇಕು.
ವಾಸ್ತವ: ಅಮೆರಿಕನ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್ ಪ್ರಕಾರ, ಮಾಸ್ಕ್ಗಳು ಸಂಪೂರ್ಣ ರಕ್ಷಣೆ ಕೊಡುವುದಿಲ್ಲ. ಎನ್95 ಮಾದರಿಯ ಮಾಸ್ಕ್ಗಳು ಟೈಟ್ ಫಿಟ್ಟಿಂಗ್ ಹೊಂದಿರುತ್ತವಾದ್ದರಿಂದ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್‌ಗಳು ಮತ್ತು ರೋಗ ಪೀಡಿತರು ಮಾಸ್ಕ್ ಧರಿಸಬೇಕು. ರೋಗ ಇನ್ನೊಬ್ಬರಿಗೆ ಹಬ್ಬುವ ಸಾಧ್ಯತೆಯನ್ನು ಕಡಿಮೆಗೊಳಿಸಲು ರೋಗಪೀಡಿತರು ಈ ಮಾಸ್ಕ್ ಧರಿಸಬೇಕು. ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ಸಾಮಾನ್ಯ ಸರ್ಜಿಕಲ್ ಮಾಸ್ಕ್ಗಳು ಸಡಿಲವಾಗಿರುತ್ತವೆ. ಇವು ವೈರಸ್‌ನಿಂದೇನೂ ನಿಮ್ಮನ್ನು ರಕ್ಷಿಸುವುದಿಲ್ಲ. ಆದರೆ, ಮಾಸ್ಕ್ ಧರಿಸಲೇಬೇಕು ಎಂದು ಎಲ್ಲರೂ ಗಾಬರಿಗೊಂಡು ಮಾಸ್ಕ್ ಖರೀದಿಸುತ್ತಾ ಹೋದರೆ, ಅದರ ಅಭಾವ ಸೃಷ್ಟಿಯಾಗಿ, ಈ ಅಭಾವವೇ ಮತ್ತೂಂದು ಸಮಸ್ಯೆಯಾಗಿಬಿಡುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈಗ ಅನೇಕ ಕಡೆಗಳಲ್ಲಿ ಮಾಸ್ಕ್ಗಳ ಅಭಾವ ಆರಂಭವಾಗಿದೆ.
ವದಂತಿ: ಆ್ಯಂಟಿ ಬಯಾಟಿಕ್ಸ್‌ಗಳಿಂದ ರೋಗವನ್ನು ತಡೆಯಬಹುದು.
ವಾಸ್ತವ: ಖಂಡಿತ ಇಲ್ಲ. ಆ್ಯಂಟಿಬಯಾಟಿಕ್ಸ್‌ಗಳು ವೈರಸ್‌ಗಳ ಮೇಲೆ ಕೆಲಸ ಮಾಡುವುದಿಲ್ಲ. ಅವು ಬ್ಯಾಕ್ಟೀರಿಯಾಗಳನ್ನಷ್ಟೇ ಸಾಯಿಸುತ್ತವೆ. ಆದಾಗ್ಯೂ, ವ್ಯಕ್ತಿಯೊಬ್ಬ ಕೊರೊನಾ ಸೋಂಕಿತನಾಗಿ ಆಸ್ಪತ್ರೆಗೆ ಸೇರಿದರೆ, ಅವರಲ್ಲಿ ಬ್ಯಾಕ್ಟೀರಿಯಲ್ ಸೋಂಕು ಕೂಡ ಹರಡಿರಬಹುದಾದ್ದರಿಂದ ಅವರಿಗೆ ಆ್ಯಂಟಿಬಯಾಟಿಕ್ಸ್‌ಗಳನ್ನು ಕೊಡಲಾಗುತ್ತದೆ.
ವದಂತಿ: ಮೈಯನ್ನು ಆಲ್ಕೋಹಾಲ್ ಅಥವಾ ಕ್ಲೋರೀನ್‌ನಿಂದ ಸ್ವತ್ಛಗೊಳಿಸಿಕೊಂಡರೆ ಅಪಾಯವಿಲ್ಲವೇ?
ವಾಸ್ತವ: ಈ ರೀತಿಯ ಪ್ರಯತ್ನ ಮಾಡಬೇಡಿ ಎಂದು ವೈದ್ಯರು ಎಚ್ಚರಿ ಸುತ್ತಾರೆ. ಇದರಿಂದ ನಿಮ್ಮ ತ್ವಚೆಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲ ದೇ, ದೇಹದೊಳಕ್ಕೆ ಸೇರಿದ ವೈರಸ್‌ಗಳಿಗೆ ಇದರಿಂದ ಏನೂ ಆಗುವುದಿಲ್ಲ.
ಕೊರೊನಾ ಪೀಡಿತರಿಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ?
ಕೊರೊನಾ ಸೋಂಕು ನಿವಾರಣೆಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ. ಬಹುತೇಕ ಪ್ರಕರಣಗಳಲ್ಲಿ, ರೋಗದ ಲಕ್ಷಣ ಸಾಮಾನ್ಯವಾಗಿರುತ್ತದೆ. ಜ್ವರ, ನೆಗಡಿಯಂಥ ಲಕ್ಷಣಗಳು ತಲೆದೋರುತ್ತವೆ. ಅವುಗಳ ತಡೆಗೆ ಪೂರಕ ಔಷಧ ಕೊಡಲಾಗುತ್ತದೆ. ರೋಗಿಗಳನ್ನು ಪ್ರತ್ಯೇಕ ವಾರ್ಡ್‌ಗಳಲ್ಲಿ ಇರಿಸಿ, ಅವರಿಗೆ ಮಾನಸಿಕ ಸ್ಥೈರ್ಯ ನೀಡಲಾಗುತ್ತದೆ. ರೋಗ ತೀವ್ರವಾದರೆ, ನ್ಯೂಮೋನಿಯಾದಂಥ ಸಮಸ್ಯೆ ಎದುರಾಗಬಹುದು- ಅಪಾಯವಿರುವದು ಇಲ್ಲಿ. ವೈರಸ್‌ನಿಂದ ಆಗುವ ನ್ಯೂಮೋನಿಯಾಕ್ಕೆ ಆ್ಯಂಟಿಬಯಾಟಿಕ್ಸ್‌ಗಳು ಉಪಯೋಗಕ್ಕೆ ಬರುವುದಿಲ್ಲ. ಈ ಕಾರಣಕ್ಕಾಗಿಯೇ, ಸದ್ಯಕ್ಕೆ ವೈದ್ಯರು, ರೋಗಿಯ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಕಾಪಾಡಲು ಪ್ರಯತ್ನಿಸುತ್ತಿದ್ದಾರೆ.
ರೋಗಿಗೆ ಆಕ್ಸಿಜನ್ ಪೂರೈಸಿಯೋ ಅಥವಾ ವೆಂಟಿಲೇಟರ್‌ಗಳ ಸಹಾಯದಲ್ಲೋ ಇಡಲಾಗುತ್ತದೆ. ರೋಗಿಯ ಇಮ್ಯೂನ್ ಸಿಸ್ಟಂ(ರೋಗ ನಿರೋಧಕ ವ್ಯವಸ್ಥೆ) ಸುಸ್ಥಿತಿಗೆ ಬರುವವರೆಗೆ ಕಾಳಜಿ ವಹಿಸಲಾಗುತ್ತದೆ.
ಕೇರಳದಲ್ಲಿ ಮೂವರು ಕೊರೊನಾ ಪೀಡಿತ ರೋಗಿಗಳಿಗೆ ಇದೇ ರೀತಿಯ ಚಿಕಿತ್ಸೆ ನೀಡಲಾಯಿತು. ಈಗ ಎಲ್ಲರೂ ರೋಗಮುಕ್ತರಾಗಿದ್ದಾರೆ. ಅಲ್ಲದೇ ಜಗತ್ತಿನಾದ್ಯಂತ ವೈದ್ಯರು ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ಪ್ರಯತ್ನಿಸುತ್ತಿದ್ದಾರೆ. ಎಚ್‌ಐವಿ ಅಥವಾ ಇತರೆ ವೈರಲ್ ರೋಗಗಳ ವಿರುದ್ಧ ಸೃಷ್ಟಿಸಲಾದ ಔಷಧಿಯನ್ನು ಕೊರೊನಾ ತಡೆಗೆ ಬಳಸಬಹುದೇ ಎಂದೂ ಪರೀಕ್ಷಿಸಲಾಗುತ್ತಿದೆ.
ಭಯ ಬೇಡ, ನಿಷ್ಕಾಳಜಿಯೂ ಬೇಡ
ಕಣ್ಣು, ಬಾಯಿ, ಮೂಗನ್ನು ಸ್ಪರ್ಶಿಸುವ ಮುನ್ನ ಕೈಯನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಿ.
ಯಾರಾದರೂ ಕೆಮ್ಮಿದಾಗ, ಸೀನಿದಾಗ ಅವರಿಂದ ಸ್ವಲ್ಪ ದೂರ ಇರಿ.
ನಿಮ್ಮ ಕುಟುಂಬದವರಲ್ಲಿ ಯಾರಲ್ಲಾದರೂ ರೋಗ ಲಕ್ಷಣ ಕಾಣಿಸಿದರೆ,ಕೂಡಲೇ ಎಲ್ಲರೂ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ.
ಜನ ನಿಬಿಡ ಪ್ರದೇಶಗಳಲ್ಲಿ, ಹೋಗುವುದನ್ನು ಆದಷ್ಟೂ ತಪ್ಪಿಸಿ.
ಭಯಭೀತರಾಗಬೇಡಿ. ಮನೆ ಮದ್ದನ್ನು ಬಳಸದಿರಿ
ರೋಗ ಲಕ್ಷಣ, ಹರಡುವಿಕೆ
ಶೀತ ಬಂದಾಗ ಎದುರಾಗುವ ಲಕ್ಷಣಗಳೇ ಕೊರೋನಾ ವೈರಸ್ ಸೋಂಕಿನಲ್ಲೂ ಇರುತ್ತವೆ. ವ್ಯಕ್ತಿಯಲ್ಲಿ ಜ್ವರ, ವಿಪರೀತ ಕೆಮ್ಮು, ಉಸಿರಾಟ ತೊಂದರೆ ಇರುತ್ತದೆ. ಕೆಲವರಿಗೆ ಹೊಟ್ಟೆ ನೋವು, ಬೇಧಿ ಬಾಧಿಸುತ್ತದೆ.
ರೋಗ ಪೀಡಿತ ವ್ಯಕ್ತಿಯ ದೇಹದಲ್ಲಿ ಇರುವ ವೈರಾಣುಗಳು ಆತ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ದ್ರವದಲ್ಲಿ ಸೇರಿಕೊಂಡಿರುತ್ತವೆ. ಆ ದ್ರವ ಎದುರಿನವರ ಬಾಯಿ, ಮೂಗು ಅಥವಾ ಕಣ್ಣಿನ ಮೂಲಕ ಪ್ರವೇಶ ಮಾಡಬಹುದು. ರೋಗ ಪೀಡಿತ ವ್ಯಕ್ತಿಯನ್ನು ಚುಂಬಿಸುವುದರಿಂದಲೂ ಸೋಂಕು ಹರಡುತ್ತದೆ. ನಾವು ಅವರನ್ನು ಸ್ಪರ್ಶಿಸಿ ಆ ಕೈಯಿಂದ ನಮ್ಮ ಬಾಯಿ, ಕಣ್ಣು ಅಥವಾ ಮೂಗಿನ ಒಳಗೆ ತಾಗಿಸಿದರೆ ನಮ್ಮ ದೇಹಕ್ಕೆ ವೈರಾಣು ಪ್ರವೇಶಿಸುತ್ತದೆ.
ಸೋಂಕಿತ ವ್ಯಕ್ತಿಯಿಂದ ಯಾವುದಾದರೂ ರೂಪದಲ್ಲಿ(ಕಫ, ದ್ರವ ಇತ್ಯಾದಿ) ಒಂದು ಜಾಗಕ್ಕೆ ಬೀಳುವ ವೈರಾಣು ಕೆಲ ಗಂಟೆಗಳಷ್ಟೇ ಜೀವಂತವಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.