ಮಹಿಳೆಯರ ಸ್ವಾವಲಂಬಿ ಬದುಕಿಗೆ ಕೊರೊನಾಘಾತ
Team Udayavani, Jul 16, 2021, 6:10 AM IST
ಜಾಗತಿಕವಾಗಿ ಇಡೀ ಸಮಷ್ಟಿಯ ಸಮಸ್ಯೆಯಾದ ಕೋವಿಡ್-19 ಪಿಡುಗು ವಿಶ್ವಾದ್ಯಂತ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದ್ದೇ ಅಲ್ಲದೆ ಜನಜೀವನವನ್ನು ಜರ್ಝರಿತವನ್ನಾಗಿಸಿದೆ. ಅದರಲ್ಲೂ ಈ ಸಾಂಕ್ರಾಮಿಕ ಮಹಿಳೆಯರನ್ನಂತೂ ಬಹಳಷ್ಟು ಕಾಡಿದ್ದು ಆಕೆಯನ್ನು ಶೋಷಣೆಯ ಜತೆಗೆ ಪರಾವಲಂಬನೆಯತ್ತ ದೂಡಿದೆ. ಕೊರೊನಾ ಮತ್ತು ಲಾಕ್‌ಡೌನ್ ಅವಧಿಯಲ್ಲಿ ತುರ್ತು ಆರೋಗ್ಯ ಸೇವೆ ದೊರಕದೆ ಗರ್ಭಿಣಿಯರು ಮತ್ತು ಹೆರಿಗೆ ಸಮಯದಲ್ಲಿ ತಾಯಿ ಮತ್ತು ನವಜಾತ ಶಿಶುಗಳು ಮರಣ ಹೊಂದುವಂತಾಯಿತು. ನಗರಗಳಿಗೆ ವಲಸೆ ಹೋಗಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದ ಕಾರ್ಮಿಕ ಮಹಿಳೆಯರು ಕೆಲಸ ಕಳೆದುಕೊಡು ಊರಿಗೆ ಮರಳಿದ್ದಾರೆ. ಅಸಂಘಟಿತ ವಲಯದಲ್ಲಿ ದುಡಿಯತ್ತಿರುವ ಶೇ. 75ರಷ್ಟು ಮಹಿಳೆಯರಲ್ಲಿ ಕೆಲವರು ಈಗಾಗಲೇ ಕೆಲಸವನ್ನು ಕಳೆದುಕೊಂಡಿದ್ದರೆ ಇನ್ನು ಹಲವರು ಇದೇ ಭೀತಿಯನ್ನು ಎದುರಿಸುತ್ತಿದ್ದಾರೆ. ಇನ್ನು ಮಹಿಳೆಯರ ಆದಾಯವನ್ನೇ ಅವಲಂಬಿಸಿದ ಕುಟುಂಬಗಳು ಜೀವನೋಪಾಯದ ಪರ್ಯಾಯ ಮಾರ್ಗದ ಹುಡುಕಾಟದಲ್ಲಿದೆ. ಮುಂಬಯಿಯಂತಹ ಮಹಾನಗರಗಳಲ್ಲಿ ಮನೆಕೆಲಸ ಮಾಡುವವರ ಬದುಕಂತೂ ಹೇಳತೀರದಂತಾಗಿದೆ. ಕೈಗೆ ಸಿಗುತ್ತಿದ್ದ ಅಲ್ಪ ವೇತನಕ್ಕೂ ಕತ್ತರಿ ಬಿದ್ದಿದ್ದರೆ ಕನಿಷ್ಠ ಮೂಲಸೌಕರ್ಯಗಳಿಂದಲೂ ವಂಚಿತರಾಗಿದ್ದಾರೆ.
ಇನ್ನು ಹೆಚ್ಚಿನ ಮಹಿಳೆಯರು ಆರೋಗ್ಯ ಇಲಾಖೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು ಇವ ರೆಲ್ಲರೂ ಕೋವಿಡ್‌ನ ಸೋಂಕು ತಗಲುವ ಅಪಾ ಯವನ್ನು ಎದುರಿಸುತ್ತಿದ್ದಾರೆ. ಕೊರೊನಾ ಸಾಂಕ್ರಾ ಮಿಕ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ದಾದಿಯರು, ಆಶಾ ಕಾರ್ಯಕರ್ತೆಯರು, ವೈದ್ಯರು ಸೋಂಕಿಗೆ ಒಳಗಾಗಿ ದ್ದಾರೆ. ಇದು ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಮತ್ತು ದುಡಿಯಲು ಆಸಕ್ತರಾಗಿರುವ ವಿದ್ಯಾವಂತ ಯುವ ಜನತೆಗೆ ಭವಿಷ್ಯದಲ್ಲಿ ಬೆದರಿಕೆಯಾಗಿ ಕಾಡಬಹುದು. ಜತೆಗೆ ಮುಂದೊಂದು ದಿನ ಈ ಸೇವೆಗಳನ್ನು ನೀಡಲು ಜಾಗತಿಕವಾಗಿ ಮಾನವ ಸಂಪನ್ಮೂಲದ ಕೊರತೆ ಎದುರಾದರೆ ಅಚ್ಚರಿಯೇನೂ ಇಲ್ಲ.
ರಾಷ್ಟ್ರೀಯ ಮಹಿಳಾ ಆಯೋಗದ ವರದಿಗಳ ಪ್ರಕಾರ ಕೊರೊನಾ ಅವಧಿಯಲ್ಲಿ ಮಹಿಳಾ ದೌರ್ಜ ನ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯ ಪ್ರಕರಣ ಗಳು ದಾಖಲಾಗಿವೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದ್ದು ಆಧುನಿಕ ಸಮಾಜದಲ್ಲಿ ಮಹಿಳೆಯರ ಸದ್ಯದ ಸ್ಥಿತಿಗತಿಯ ಬಗೆಗೆ ಬೆಳಕು ಚೆಲ್ಲು ತ್ತದೆ. ದೇಶದಲ್ಲಿ ಕಳೆದೊಂದು ದಶಕದ ಅವಧಿಯಲ್ಲಿ ದಾಖಲಾದ ಒಟ್ಟು ಕೌಟುಂಬಿಕ ದೌರ್ಜನ್ಯ ಪ್ರಕರಣ ಗಳಷ್ಟೇ ಸಂಖ್ಯೆಯ ಪ್ರಕರಣಗಳು ಕೊರೊನಾ ಅವಧಿ ಯಲ್ಲಿ ದಾಖಲಾಗಿವೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆಚ್ಚಿದ ನಿರುದ್ಯೋಗ, ವ್ಯಾಪಾರದಲ್ಲಿ ಸೋಲು, ಹಣಕಾಸಿನ ಮುಗ್ಗಟ್ಟು, ಹತಾಶೆಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಿದ್ದರಿಂದಾಗಿ ನೇರ ಪರಿಣಾಮ ಮಹಿಳೆ ಮತ್ತು ಮಕ್ಕಳ ಬಿದ್ದಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಕೋವಿಡ್ ಸೃಷ್ಟಿಸಿದ ವ್ಯವಹಾರ ಸ್ಥಾಗಿತ್ಯದ ಪರಿ ಣಾಮ ಹಲವಾರು ಸಂಸ್ಥೆಗಳು ಮತ್ತು ಕಂಪೆನಿಗಳು ಉದ್ಯೋಗಿಗಳನ್ನು ವಜಾ ಮಾಡಿ ಮನೆಗೆ ಕಳುಹಿಸಿವೆ. ಈ ಸಂದರ್ಭದಲ್ಲಿ ಕಂಪೆನಿಗಳ ಕೆಂಗಣ್ಣಿಗೆ ಮೊದಲ ಗುರಿಯಾದವರು ಮಹಿಳಾ ಉದ್ಯೋಗಿಗಳು. ಇನ್ನೊಂದೆಡೆ ಹಲವಾರು ಸಂಸ್ಥೆಗಳು ಮತ್ತು ಕಂಪೆನಿಗಳು ಮಹಿಳಾ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸಲು ಸೂಚಿಸಿದ್ದು ಮನೆಕೆಲಸದ ಜತೆಗೆ ಕಚೇರಿ ಕೆಲಸವನ್ನು ನಿರ್ವಹಿಸಬೇಕಾದ ಅನಿವಾರ್ಯ ಸ್ಥಿತಿಯನ್ನು ಸೃಷ್ಟಿಸಿದೆ. ವರ್ಕ್ ಫ್ರಂ ಹೋಮ್‌ನಿಂದಾಗಿ ಸಣ ¡ಮಕ್ಕಳ ತಾಯಂದಿರು ಬಹಳಷ್ಟು ಸಂಕಷ್ಟವನ್ನು ಎದುರಿಸುವಂತಾಗಿದ್ದು ಕೆಲಸ ನಿರ್ವಹಿಸಬೇಕಾದ ಅವಧಿ ಯಲ್ಲಿ ಮಕ್ಕಳನ್ನು ಸುಧಾರಿಸುವುದೇ ಒಂದು ದೊಡ್ಡ ಹೊರೆಯಾಗಿಬಿಟ್ಟಿದೆ. ಉದ್ಯೋಗದಾತರು ಯಾವ ಕ್ಷಣದಲ್ಲೂ ಆಕೆ ಕಚೇರಿಯ ಕರೆ, ಸೂಚನೆಗಳಿಗೆ ಓಗೊ ಡಬೇಕೆಂಬ ನಿರೀಕ್ಷೆಯಲ್ಲಿರುವುದರಿಂದ ಉದ್ಯೋಗಸ್ಥ ಮಹಿಳೆಯರು ಕಚೇರಿ ಮತ್ತು ಗೃಹವಾರ್ತೆ ನಿಭಾವಣೆಯ ಜಂಜಾಟದಲ್ಲಿ ಸಿಲುಕಿ ಹೈರಾಣಾಗಿದ್ದಾರೆ. ಇನ್ನು ವರ್ಕ್ ಫ್ರಂ ಹೋಮ್ ಜಾರಿಯಾದ ಮೇಲಂತೂ ಕಚೇರಿ ಕೆಲಸಕ್ಕೆ ಸಮಯದ ಮಿತಿ ಎಂಬುದೇ ಇಲ್ಲದಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಹಿಳೆಯರಿಗೂ ಉದ್ಯೋಗ ಅನಿವಾರ್ಯವಾಗಿರುವುದರಿಂದ ಈ ಸಂದಿಗ್ಧ ಸ್ಥಿತಿಗೆ ಹೊಂದಿಕೊಳ್ಳಲೇಬೇಕಾಗಿದೆ.
ಯುನೆಸ್ಕೋ ವರದಿ ಪ್ರಕಾರ ಕೊರೊನಾದಿಂದಾಗಿ 30 ಕೋಟಿ ವಿದ್ಯಾರ್ಥಿಗಳು ಜಾಗತಿಕವಾಗಿ ಶಿಕ್ಷಣ ಮತ್ತು ಶಾಲೆಯಿಂದ ದೂರವಿದ್ದಾರೆ. ಎಲ್ಲ ರಾಷ್ಟ್ರಗಳಲ್ಲಿ ಶಿಶು ಆರೈಕೆ ಕೇಂದ್ರಗಳು ಮುಚ್ಚಿರುವುದರಿಂದ ಮಕ್ಕಳ ಪಾಲನೆ, ಪೋಷಣೆ ಜವಾಬ್ದಾರಿ ತಾಯಂದಿರ ಮೇಲೆ ಬಿದ್ದಿದ್ದು ಇದರಿಂದಾಗಿ ಉದ್ಯೋಗವನ್ನು ತೊರೆದು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಮಹಿಳೆಯರಿಗೆ ಮತ್ತು ಹಿರಿಯ ಹೆಣ್ಣು ಮಕ್ಕಳಿಗೆ ಮನೆಯ ಹಿರಿಯರನ್ನು ಕಾಳಜಿ ಮಾಡುವ ಮತ್ತು ಶಾಲೆ ಇಲ್ಲದೆ ಮನೆಯಲ್ಲಿ ಉಳಿದಿರುವ ಮಕ್ಕಳನ್ನು ನೋಡಿಕೊಳ್ಳುವ ಪೂರ್ಣಾವಧಿ ಜವಾಬ್ದಾರಿ ಹೇರಲಾಗುತ್ತಿದೆ.
ಪರಿಹಾರ ಸಾಧ್ಯತೆಗಳು: ಮನೆಯಿಂದಲೇ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಕುಟುಂಬದ ಇತರ ಸದಸ್ಯರು ಹೆಚ್ಚಿನ ಸಹಕಾರ ಮತ್ತು ಪ್ರೋತ್ಸಾಹ ನೀಡುವುದರ ಮೂಲಕ ಮಹಿಳೆಯರ ಹಕ್ಕು ರಕ್ಷಣೆ ಮತ್ತು ಅಭಿವೃದ್ಧಿ ಕುಟುಂಬದಿಂದಲೇ ಆರಂಭವಾಗಬೇಕಿದೆ. ಎಲ್ಲಿಯವರೆಗೆ ಹೆಣ್ಣುಮಕ್ಕಳು ಮತ್ತು ಮಹಿಳೆಯರನ್ನು ಅವರವರ ಕುಟುಂಬ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ. ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ನಡೆದ ಸಂದರ್ಭದಲ್ಲಿ ದೌರ್ಜನ್ಯಕ್ಕೆ ಒಳಗಾದವರೇ ದೂರು ದಾಖಲಿಸಬೇಕಾಗಿಲ್ಲ. ಬದಲಾಗಿ ಈ ಬಗ್ಗೆ ಮಾಹಿತಿ ಇರುವವರು ಮಹಿಳಾ ಸಹಾಯವಾಣಿಗೆ ಕರೆ ಮಾಡಬಹುದು ಇಲ್ಲವೇ ಮಹಿಳಾ ಠಾಣೆಗೋ ಅಥವಾ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸಂಘಸಂಸ್ಥೆಗಳಿಗೆ ತಿಳಿಸಬಹುದು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಲಿಂಗ ತಾರತಮ್ಯಗಳ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ತ್ವರಿತವಾಗಿ ಕಾರ್ಯೋನ್ಮುಖವಾಗಬೇಕು. ಮಹಿಳಾ ಆರೋಗ್ಯ ಸೇವೆಗಳನ್ನು ಅಗತ್ಯವಾಗಿ ಪೂರೈಸಬೇಕು. ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಾತರು ಹೆಚ್ಚಿನ ಸಹಕಾರ ನೀಡುವುದರಿಂದ ಮಹಿಳೆಯರು ಉದ್ಯೋಗ ತೊರೆಯುವುದನ್ನು ಕಡಿಮೆಗೊಳಿಸಬಹುದು.
ಮಹಿಳೆಯರು ಕೂಡ ಆದಷ್ಟು ಖರ್ಚುವೆಚ್ಚಗಳನ್ನು ಕಡಿಮೆಗೊಳಿಸಿ, ಹಿತಮಿತವಾಗಿ ಆದಾಯನ್ನು ಬಳಸಿ ಕೊಳ್ಳಬೇಕು ಯಾಕೆಂದರೆ ಕೋವಿಡ್ ಭವಿಷ್ಯದಲ್ಲಿ ಯಾವ ರೀತಿಯ ಸಂಕಷ್ಟವನ್ನು ತಂದೊಡ್ಡಬಹುದು ಎಂಬುದನ್ನು ಅಂದಾಜಿಸುವುದು ಕೂಡ ಕಷ್ಟ. ಇನ್ನು ಮಹಿಳೆಯರು ಮನೆಕೆಲಸ, ಕಚೇರಿ ಕೆಲಸಗಳು, ವೈಯಕ್ತಿಕ ಬದುಕು ಇವೆಲ್ಲವುಗಳಿಗೂ ಗಡಿ ಮತ್ತು ಸಮಯದ ಮಿತಿಯನ್ನು ಹಾಕಿಕೊಂಡು ಪ್ರತಿಯೊಂದು ಜವಾಬ್ದಾರಿಗೂ ಸಜ್ಜಾಗಬೇಕಾಗಿದೆ. ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಮಹಿಳಾ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಬೇಕು. ಮಹಿಳಾ ಸ್ವಾವಲಂಬನೆಗೆ ಪೂರಕವಾದ ಯೋಜನೆಗಳು ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗೆ ದೊರಕಲೇಬೇಕಾದ ಹಕ್ಕುಗಳ ಬಗ್ಗೆ ಹೊಸ ನಿಯಮಗಳನ್ನು ಸರಕಾರ ತರಲೇಬೇಕಾದ ಆವಶ್ಯಕತೆ ಇದೆ. ಕೋವಿಡ್‌ನಂತಹ ಸಂದಿಗ್ಧ ಕಾಲಘಟ್ಟದಲ್ಲಿ ಹೊಸ ವಿಧಾನ ಅಥವಾ ವ್ಯವಸ್ಥೆಗಳಿಗೆ ಮತ್ತು ನವೀನ ಪರಿಕಲ್ಪನೆಗೆ ಒಗ್ಗಿಕೊಂಡು ತಮ್ಮ ಸ್ವಾವಲಂಬಿ ಬದುಕನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಮಹಿಳೆಯ ಮೇಲಿದೆ.
–ಡಾ| ಧನೇಶ್ವರಿ, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
ಲೋಕೋಪಯೋಗಿ To ಸಾಹಿತ್ಯಕ್ಷೇತ್ರ: ಚಲನಚಿತ್ರದ ಮೂಲಕ ಖ್ಯಾತಿಗಳಿಸಿದ ನಾ.ಡಿಸೋಜ ಕಾದಂಬರಿಗಳು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.