Deepavali; ಜ್ಞಾನಾಭಿಮುಖವಾಗಿ ಬೆಳಕಿನೊಂದಿಗೆ ಪಯಣ

ಋತುಗಳಿಗನುಸಾರವಾಗಿ ಭಾರತೀಯ ಹಬ್ಬಗಳ ಆಚರಣೆಯು ಅತ್ಯಂತ ವೈಜ್ಞಾನಿಕವಾಗಿದೆ.

Team Udayavani, Nov 12, 2023, 6:00 AM IST

1-sdsasad

ವೈವಿಧ್ಯಮಯ ಭಾರತದ ವೈಶಿಷ್ಟ್ಯಪೂರ್ಣವಾದ ಹಬ್ಬಗಳಲ್ಲೊಂದು ದೀಪಾವಳಿ. “ಭಾರತ’ ತನ್ನ ಹೆಸರೇ ಸೂಚಿಸುವಂತೆ ಜ್ಞಾನದ ಬೆಳಕಿನೊಂದಿಗೆ ನಿರಂತರವಾದ ಸಂಬಂಧವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ ದೀಪಾವಳಿ ಹಬ್ಬವು ಆಶ್ವಯುಜ ಮಾಸದ ಕೃಷ್ಣಪಕ್ಷದ ಕಡು ಕತ್ತಲಿನ ರಾತ್ರಿಯಂದು ದೀಪಗಳ ಸಾಲಿನ ಬೆಳಕಿನ ಮೂಲಕ ಅಜ್ಞಾನವೆಂಬ ಕತ್ತಲನ್ನು ಬಡಿದೋಡಿಸುವಂತಿದೆ. ಋತುಗಳಿಗನುಸಾರವಾಗಿ ಭಾರತೀಯ ಹಬ್ಬಗಳ ಆಚರಣೆಯು ಅತ್ಯಂತ ವೈಜ್ಞಾನಿಕವಾಗಿದೆ. ದೀಪಾವಳಿಯ ತೈಲಾಭ್ಯಂಗ ಸ್ನಾನವು ಚಳಿಗಾಲಕ್ಕೆ ದೇಹವನ್ನು ಸಿದ್ಧಪಡಿಸಿಕೊಳ್ಳಬೇಕೆಂಬ ಸಂದೇಶ ನೀಡುವಂತಿದೆ. ಕೃಷಿಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತಾ ಜ್ಞಾನ ಪ್ರತೀಕವಾದ ವೈಚಾರಿಕ ಔನ್ನತ್ಯವನ್ನು ಹೊಂದಿದ ನಮ್ಮ ದೇಶದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಎಲ್ಲ ವರ್ಗದವರೂ ಆಚರಿಸುತ್ತಾರೆ. ಧಾನ್ಯಲಕ್ಷ್ಮೀಯ ಸಂಕೇತವಾಗಿ ಭತ್ತ, ಅಡಿಕೆ ಮೊದಲಾದ ವರ್ಷದ ಹೊಸ ಬೆಳೆಗಳು ಕ್ಷೇತ್ರದಿಂದ ಮನೆಯನ್ನು ಪ್ರವೇಶಿಸುವ ಸುಸಂದರ್ಭ. ಹೊಸ ಚೈತನ್ಯ ಹಾಗೂ ಹುರುಪಿನಿಂದ ಮನೆಮಂದಿಯನ್ನೆಲ್ಲ ಸೇರಿಸುವ ಸಂಭ್ರಮಾಚರಣೆ ಇದಾಗಿದೆ.

ದೀಪಾವಳಿಯು ಆಶ್ವಯುಜ ಮಾಸದ ಕೃಷ್ಣಚತುರ್ದಶಿಯಿಂದ ಮೂರು ದಿನಗಳವರೆಗೆ ಆಚರಿಸಲ್ಪಡುತ್ತದೆ. ಹೊಸ ಅಳಿಯಂದಿರು ಮನೆಗೆ ಆಗಮಿಸುವ ಸಂಭ್ರಮ, ಮನೆಯಲ್ಲಿ ಪಾಕ ವೈವಿಧ್ಯಗಳು, ಅಭ್ಯಂಗನ, ಹೊಸ ಉಡುಗೆ ತೊಡುಗೆಗಳು, ಪಟಾಕಿಯ ಸಡಗರ, ದೀಪಗಳ ಸಾಲುಗಳೊಂದಿಗೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಸಂಭ್ರಮಿಸುವ ಪರ್ವವಿದು. ಸಂಪ್ರದಾಯದಂತೆ ಹಿಂದಿನ ದಿನ ತ್ರಯೋದಶಿಯಂದು ಸ್ನಾನದ ಹಂಡೆಗಳನ್ನು ಶುದ್ಧಗೊಳಿಸಿ, ಎಲೆ, ಹೂಗಳಿಂದ ಅಲಂಕರಿಸಿ ನೀರು ತುಂಬಿಸಲಾಗುತ್ತದೆ. ಕೆಲವರು ಇದೇ ದಿನ ಮನೆಯ ಹೊರಭಾಗದಲ್ಲಿ ಯಮನ ಸಲುವಾಗಿ ದೀಪವನ್ನು ಹಚ್ಚಿಡುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಅಪಮೃತ್ಯು ನಿವಾರಣೆಗಾಗಿ ಮೂರು ದಿನಗಳ ಕಾಲ “ಯಮ ದೀಪದಾನ’ ಮಾಡಲಾಗುತ್ತದೆ.

ಪೌರಾಣಿಕ ಹಿನ್ನೆಲೆ
“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||’
ಭಗವದ್ಗೀತೆಯಲ್ಲಿರುವ ಕೃಷ್ಣೋಕ್ತಿಯಂತೆ ಭಗವಾನ್‌ ವಿಷ್ಣು ಆಗಾಗ ಭೂಲೋಕದಲ್ಲಿ ಅವತರಿಸಿದ್ದಾನೆ. ರಾಮ ಹಾಗೂ ಕೃಷ್ಣಾವತಾರದ ಸಂದರ್ಭ ದಲ್ಲಿ ಅನೇಕ ಅಸುರ ಸಂಹಾರ ಕಾರ್ಯವೂ ನಡೆದಿದೆ. ಮಹಾವಿಷ್ಣುವಿನ ವರಾಹಾವತಾರದ ಸಂದರ್ಭದಲ್ಲಿ ಆತನ ದೇಹದಿಂದ ಒಂದು ಹನಿ ಬೆವರು ಭೂಮಿಯನ್ನು ಸ್ಪರ್ಶಿಸಿದಾಗ, ಭೂದೇವಿಯಿಂದ ನರಕಾಸುರನ ಜನ್ಮವಾಯಿತು. ಪೃಥ್ವಿಯ ಮನದಲ್ಲಿ ಅಸುರ ಭಾವವು ವ್ಯಾಪ್ತವಾಗಿದ್ದರಿಂದ ಭಗವಂತನ ಪುತ್ರನಾದರೂ ಅವನು ಅಸುರನಾದನು. ಭೂಮಿಯ ಮಗನಾದ ಈತನು ಭೌಮನೆಂದೂ ಕರೆಯಲ್ಪಡುತ್ತಾನೆ. ಭೂದೇವಿಯು ಮಹಾವಿಷ್ಣುವನ್ನು ಪ್ರಾರ್ಥಿಸಿ ತನ್ನ ಮಗನಿಗಾಗಿ ವೈಷ್ಣವಾಸ್ತ್ರವನ್ನು ಸಂಪಾದಿಸಿದಳು. ಅಸ್ತ್ರದ ಪ್ರಭಾವದಿಂದ ಬಲಶಾಲಿಯಾದ ನರಕನು ದುರ್ಜಯನಾದನು. ಪ್ರಾಗ್ಜ್ಯೋತಿಷ ನಗರದಲ್ಲಿ ರಾಜ್ಯಭಾರ ಮಾಡುತ್ತಿದ್ದ ಈತ ಲೋಕಕಂಟಕನಾಗಿ ಬೆಳೆದನು ಹಾಗೂ ಮಹಾಪರಾಕ್ರಮಿಯಾದ ಈತ ದೀರ್ಘ‌ ತಪಸ್ಸಿನಿಂದ ಬ್ರಹ್ಮನ ಅನುಗ್ರಹದಿಂದ ದೇವಾಸುರರನ್ನೆಲ್ಲ ಜಯಿಸಿದನು. ರಾಜಾಧಿರಾಜರನ್ನೆಲ್ಲ ಸೋಲಿಸಿ ಹದಿನಾರು ಸಾವಿರ ಸುಂದರ ಸ್ತ್ರೀಯರನ್ನು ತನ್ನ ಸೆರೆಯಲ್ಲಿರಿಸಿ ತ್ವಷ್ಟುವಿನ ಮಗಳಾದ ಚತುರ್ದಶಿಯನ್ನು ಅಪಹರಿಸಿದನು. ಇಂದ್ರನ ಜನನಿಯಾದ ಅದಿತಿಯ ಕರ್ಣಕುಂಡಲಗಳನ್ನೂ, ವರುಣನ ಶ್ವೇತಛತ್ರವನ್ನೂ, ಇಂದ್ರನ ವಿಹಾರಕ್ಕಾಗಿ ಏರ್ಪಟ್ಟಿದ್ದ ಮೇರು ಪರ್ವತದ ಮಣಿಶಿಖರವನ್ನೂ, ವೈಜಯಂತಿ ಮಾಲೆಯನ್ನೂ ಅಪಹರಿಸಿದನು. ಇಂದ್ರನನ್ನು ನಿರ್ವೀರ್ಯನನ್ನಾಗಿ ಮಾಡಿದ್ದನು. ಈತನ ಉಪಟಳವನ್ನು ತಡೆಯಲಾರದೆ ಇಂದ್ರನು ದ್ವಾರಕೆಗೆ ಹೋಗಿ ಶ್ರೀಕೃಷ್ಣನಲ್ಲಿ ಭೌಮಾಸುರನ ವೃತ್ತಾಂತವನ್ನೆಲ್ಲ ಅರುಹಿದನು. ಭೂದೇವಿಯ ಅಂಶಸಂಭೂತಳಾದ ಸತ್ಯಭಾಮಾಸಹಿತನಾಗಿ ಶ್ರೀಕೃಷ್ಣನು ಗರುಡಾರೂಢನಾಗಿ ಪ್ರಾಗ್ಜ್ಯೋತಿಷಪುರಕ್ಕೆ ಹೋದನು. ಆ ನಗರವು ಎಲ್ಲ ದಿಕ್ಕುಗಳಲ್ಲಿಯೂ ಪರ್ವತಗಳು, ಕೋಟೆಗಳು, ದುರ್ಗಮವಾದ ಜಲದುರ್ಗ, ಶಸ್ತದುರ್ಗ, ಅಗ್ನಿದುರ್ಗ, ವಾಯುದುರ್ಗಗಳಿಂದ ಅಭೇದ್ಯವಾಗಿತ್ತು. ಅಲ್ಲದೇ ಮುರನೆಂಬ ರಾಕ್ಷಸನ ಹತ್ತುಸಾವಿರ ಕಬ್ಬಿಣದ ಪಾಶಗಳಿಂದ ಸುತ್ತುವರಿದಿತ್ತು. ಶ್ರೀಕೃಷ್ಣನು ತನ್ನ ಗದೆ, ಸುದರ್ಶನ ಚಕ್ರ ಹಾಗೂ ಖಡ್ಗದ ಪ್ರಹಾರದಿಂದ ಎಲ್ಲ ಪರ್ವತ, ಕೋಟೆ ಹಾಗೂ ದುರ್ಗಗಳನ್ನು ನಾಶಮಾಡಿ ಮುರನ ಪಾಶಗಳನ್ನೂ ಧ್ವಂಸಗೊಳಿಸಿದನು. ತನ್ನ ಶಂಖಧ್ವನಿಯ ಮೂಲಕ ಯಂತ್ರ, ತಂತ್ರ, ಮಂತ್ರ, ಮಾಟಾದಿಗಳನ್ನು ನಾಶಗೊಳಿಸಿದನು. ಭಯಂಕರವಾಗಿದ್ದ ಪಾಂಚಜನ್ಯದ ಧ್ವನಿಯನ್ನು ಕೇಳಿ ನೀರಿನಲ್ಲಿ ನಿದ್ರಿಸುತ್ತಿದ್ದ ಐದು ತಲೆಗಳ ಮುರನೆಂಬ ದೈತ್ಯನು ಮೇಲಕ್ಕೆದ್ದು ಬಂದನು. ತನ್ನ ಐದು ಬಾಯಿಗಳಿಂದ ಮೂರು ಲೋಕಗಳನ್ನೇ ನುಂಗುವಂತಿದ್ದ ಆತನು ತ್ರಿಶೂಲವನ್ನೆತ್ತಿ ಗರುಡನ ಮೇಲೆರಗಿದನು. ಕೃಷ್ಣನು ತ್ರಿಶೂಲವನ್ನು ತುಂಡರಿಸಲು, ಕುಪಿತನಾದ ರಾಕ್ಷಸನು ಕೃಷ್ಣನ ಮೇಲೆ ತನ್ನ ಗದೆಯನ್ನೆಸೆದನು. ಅದನ್ನೂ ನಾಶಮಾಡಿದ ಕೃಷ್ಣನು ತನ್ನ ಚಕ್ರದಿಂದ ಆತನ ಶಿರಗಳನ್ನು ತುಂಡರಿಸಿದನು. ನರಕಾಸುರನು ಕ್ರುದ್ಧನಾಗಿ ಗಜಸೈನ್ಯದೊಂದಿಗೆ ರಣರಂಗಕ್ಕೆ ಬಂದನು. ಸತ್ಯಭಾಮಾಸಹಿತನಾದ ಕೃಷ್ಣನು ನರಕಾಸುರ ಹಾಗೂ ಆತನ ಸೈನ್ಯದೊಂದಿಗೆ ಘೋರ ಯುದ್ಧವನ್ನೇ ಮಾಡಿದನು. ಶತ್ರುಸೈನ್ಯದ ಶಸ್ತ್ರಾಸ್ತ್ರಗಳನ್ನೆಲ್ಲ ಕತ್ತರಿಸಿ ಹಾಕಿದನು. ಗರುಡನೂ ತನ್ನ ಬಲಿಷ್ಠವಾದ ಕೊಕ್ಕು, ರೆಕ್ಕೆ ಹಾಗೂ ಉಗುರುಗಳಿಂದ ಶತ್ರುಗಳ ಆನೆಗಳ ಮೇಲೆ ಆಕ್ರಮಣವನ್ನು ಮಾಡಿದನು. ಇದನ್ನು ಸಹಿಸಲಾರದ ಆನೆಗಳು ನರಕಾಸುರನನ್ನು ಏಕಾಂಗಿಯಾಗಿ ಬಿಟ್ಟು ನಗರದೆಡೆಗೆ ಓಡಿಹೋದವು. ಇಂದ್ರನ ವಜ್ರಾ ಯುಧವನ್ನು ತುಂಡರಿಸಲು ಉಪಯೋಗಿಸಿದ ನರಕಾಸುರನ ಈಟಿಯೂ ಕೂಡ ಗರುಡನ ಮೇಲೆ ಪರಿಣಾಮವನ್ನು ಬೀರಲಿಲ್ಲ. ಕೊನೆಯಲ್ಲಿ ತ್ರಿಶೂಲದಿಂದ ಶ್ರೀಕೃಷ್ಣನನ್ನು ಕೊಲ್ಲಲು ಉದ್ಯುಕ್ತನಾದಾಗ ಶ್ರೀಕೃಷ್ಣನು ಸುದರ್ಶನ ಚಕ್ರದಿಂದ ಆತನನ್ನು ಸಂಹರಿಸಿದನು.
ಮರಣ ಸಂದರ್ಭದಲ್ಲಿ ನರಕಾಸುರನು “ಪ್ರತೀ ಸಂವತ್ಸರದಲ್ಲೂ ಈ ದಿನ ದಂದು ಯಾರು ಮಂಗಲಸ್ನಾನ ಮಾಡುವರೋ ಅವರಿಗೆ ನರಕದ ತೊಂದರೆ ಬಾರದಿರಲಿ’ ಎಂಬ ವರವನ್ನು ಕೇಳಿದನು. ಶ್ರೀಕೃಷ್ಣನು ನರಕಾಸುರನಿಗೆ ಆ ವರವನ್ನು ಅನುಗ್ರಹಿಸಿದನು. ಭೂದೇವಿಯ ಪ್ರಾರ್ಥನೆಯಂತೆ ಶ್ರೀಕೃಷ್ಣನು ನರಕಾಸುರನ ಮಗ ಭಗದತ್ತನಿಗೆ ಅಭಯಪ್ರದಾನ ಮಾಡಿದನು. ಹದಿನಾರು ಸಾವಿರ ಕನ್ಯೆಯರನ್ನೂ ಬಿಡುಗಡೆಗೊಳಿಸಿದನು. ಅವರೆಲ್ಲರೂ ಮನಸ್ಸಿನಲ್ಲೇ ಆತನನ್ನು ಪತಿಯಾಗಿ ಸ್ವೀಕರಿಸಿ ಪ್ರಾರ್ಥಿಸಿದರು. ಅವರಿಚ್ಛೆಯಂತೆ ಅವ ರೆಲ್ಲರಿಗೂ ಹೊಸ ಜೀವನವನ್ನು ಕಲ್ಪಿಸಿದ ಶ್ರೀಕೃಷ್ಣನು ತನ್ನೊಂದಿಗೆ ದ್ವಾರಕೆಗೆ ಕರೆದೊಯ್ದನು.

ಪುತ್ರಶೋಕದಿಂದ ವ್ಯಥಿತಳಾದ ಭೂದೇವಿಯು ಮಗನ ಸ್ಮರಣೆಯು ಚಿರಸ್ಥಾಯಿಯಾಗಿ ಲೋಕದಲ್ಲಿ ಬೆಳಗುವಂತೆ ಪ್ರಾರ್ಥಿಸಲು, ಆಕೆಯ ಕೋರಿಕೆಯಂತೆ ನರಕಚತುರ್ದಶಿ ಹಬ್ಬವು ಆಚರಿಸಲ್ಪಡುತ್ತಿದೆ. ಹಿಂದಿನ ರಾತ್ರಿಯ ಅಂತ್ಯಯಾಮದಿಂದ ಸೂರ್ಯೋದಯವಾಗುವವರೆಗಿನ ಕಾಲವು ಪ್ರಶಸ್ತವಾದ ಕಾಲವಾಗಿದೆ. ಚಂದ್ರೋದಯಯುತವಾದ ಚತುರ್ದಶಿಯು ತೈಲಾಭ್ಯಂಗಕ್ಕೆ ಪ್ರಶಸ್ತವಾಗಿದೆ. ಇದೇ ಸಮಯದಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹಾರಮಾಡಿ ಆತನ ರಕ್ತದ ತಿಲಕವನ್ನು ಧಾರಣೆ ಮಾಡಿದನು. ನರಕಾಸುರನ ಸಂಹಾರದ ಶುಭಸಂಕೇತವಾಗಿ ಪಟಾಕಿಯ ಶಬ್ದದೊಂದಿಗೆ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಗಳ ಸಾಲು ಜ್ಞಾನದ ಸಂಕೇತವೂ ಹೌದು.

ಅಂದು ತಿಲ ತೈಲದಿಂದ ಅಭ್ಯಂಗ ಸ್ನಾನವು ಶ್ರೇಷ್ಠವಾಗಿದೆ ಎಂದು ಧರ್ಮಸಿಂಧುವಿನಲ್ಲಿ ತಿಳಿಸಲಾಗಿದೆ. “ಸೀತಾಲೋಷ್ಟಸಮಾಯುಕ್ತ ಸಂಕಟಕದಲಾನ್ವಿತ| ಹರಪಾಪಮಪಾಮಾರ್ಗ ಭ್ರಮ್ಯರ್ಮಾಣಃ ಪುನಃ ಪುನಃ||’ – ಈ ಮಂತ್ರವನ್ನು ಹೇಳಿಕೊಂಡು ನೇಗಿಲಿನಿಂದ ಉದ್ಧತವಾದ ಮಣ್ಣಿನಿಂದ ಕೂಡಿದ ಉತ್ತರಣಿಕಡ್ಡಿ, ಕರೇಕುಂಬಳ, ತಗಟೆಗಿಡವನ್ನು ಸ್ನಾನ ಮಾಡುವಾಗ ದೇಹಕ್ಕೆ ಸುಳಿದುಕೊಳ್ಳಬೇಕು. ಇವುಗಳು ಕ್ರಿಮಿನಾಶಕಗಳೆಂದು ಪರಿಗಣಿಸಲಾಗಿದೆ. ಅಭ್ಯಂಗಸ್ನಾನ ಮಾಡಿ ತಿಲಕಾದಿಗಳನ್ನಿಟ್ಟುಕೊಳ್ಳುವ ಕ್ರಮವಿದೆ. ಅಪಮೃತ್ಯು ನಿವಾರಣೆಗಾಗಿ ಯಮತರ್ಪಣವನ್ನು ನೀಡಲಾಗುವುದು. “ನರಕಭಯ ನಿವೃತ್ಯರ್ಥಂ ಯಮತರ್ಪಣಮಹಂ ಕರಿಷ್ಯೆà|’ ಎಂಬ ಮಂತ್ರದೊಂದಿಗೆ ತಿಲಮಿಶ್ರಿತವಾದ ಮೂರು ಜಲಾಂಜಲಿಗಳಿದ ಜೀವತಿ³ತೃಕರು ಸವ್ಯ ಅಥವಾ ಪಿತೃಗಳಿಲ್ಲದವರು ತಿಲಾಂಜಲಿಗಳಿದ ಅಪಸವ್ಯದಿಂದ ದೇವತೀರ್ಥ ಮತ್ತು ಪಿತೃತೀರ್ಥವನ್ನು ದಕ್ಷಿಣಾಭಿಮುಖವಾಗಿ ಕೊಡುವ ಆಚರಣೆಯಿದೆ.

ತರ್ಪಣ: ಯಮಾಯ ನಮಃ ಯಮಂ ತರ್ಪಯಾಮಿ| ಧರ್ಮರಾಜಾಯ ನಮಃ ಧರ್ಮರಾಜಂ ತರ್ಪಯಾಮಿ| … ಈ ರೀತಿಯಾಗಿ ಯಮ, ಧರ್ಮ ರಾಜ, ಮೃತ್ಯು, ಅಂತಕ, ವೈವಸ್ವತ, ಕಾಲ, ಸರ್ವಭೂತಕ್ಷಯ, ಔದುಂಬರ, ದಧ°, ನೀಲ, ಪರಮೇಷ್ಠಿ, ವೃಕೋದರ, ಚಿತ್ರ, ಚಿತ್ರಗುಪ್ತರಿಗೆ ತರ್ಪಣವನ್ನು ನೀಡಲಾಗುವುದು. ಪ್ರದೋಷಕಾಲದಲ್ಲಿ ದೇವಾಲಯ, ಮಠ, ಪ್ರಾಕಾರ, ಉದ್ಯಾನ, ಗೋಶಾಲೆ, ಅಶ್ವಶಾಲೆಗಳಲ್ಲಿ ಸಾಲು ಸಾಲು ದೀಪಗಳನ್ನು ಹಚ್ಚ ಲಾಗುವುದು. ನರಕವಧೆಯ ಸಂತೋಷಾರ್ಥವಾಗಿ “ದೀಪದಾನ’ ಮಾಡುವ ಆಚರಣೆಯೂ ಇದೆ. ಇದು ದೀಪಾವಳಿಯ ವೈಶಿಷ್ಟ್ಯ. ಅಗ್ನಿದಗ್ಧಾಶ್ಚಯೇ ಜೀವಾ ಯೇಪ್ಯದಗಾಧ್ಗ ಕುಲೇ ಮಮ| ಉಜ್ವಲಜ್ಯೋತಿಷಾ ದಗ್ಧಃ ತೆ ಯಾಂತು ಪರಮಾಂ ಗತಿಮ…| ಯಮಲೋಕಂ ಪರಿತ್ಯಜ್ಯ ಆಗತಾ ಯೇ ಮಹಾಲಯೇ ಉಜ್ವಲ ಜ್ಯೋತಿಷಾ ವತ್ಮì ಪ್ರಪಶ್ಯಂತೋ ವ್ರಜಂತು ತೇ| ಅರ್ಥಾತ್‌, ಬೆಂಕಿಯಲ್ಲಿ ಬಿದ್ದು ತೀರಿಹೋದ ಸಿಡಿಲಿನಿಂದ ತೀರಿಹೋದ ನಮ್ಮ ಕುಲದವರೆಲ್ಲರ ತೃಪ್ತಿಗಾಗಿ, ಯಮಲೋಕದಿಂದ ಮಹಾಲಯಕ್ಕಾಗಿ ಭೂಲೋಕಕ್ಕೆ ಆಗಮಿಸಿದ ನಮ್ಮ ಹಿರಿಯರಿಗೆ ದಾರಿತೋರುವ ಸಲುವಾಗಿ ಅಂಗಳದಲ್ಲಿ ದೀಪ ಹಚ್ಚಬೇಕು. ಇದನ್ನು ನೋಡಿದ ಹಿರಿಯರು ಸಂತೋಷದಿದ ನಮ್ಮನ್ನು ಆಶೀರ್ವದಿಸಿ ಅನುಗ್ರಹಿಸುವರೆಂಬ ನಂಬಿಕೆ ಜನಮಾನಸದಲ್ಲಿದೆ. ಅದಕ್ಕಾಗಿ ಸೂರ್ಯನು ತುಲಾ ರಾಶಿಯಲ್ಲಿರುವ ಚತುರ್ದಶಿ, ಅಮಾವಾಸ್ಯೆಗಳ ಪ್ರದೋಷ ಕಾಲದಲ್ಲಿ ಇದನ್ನು ಮಾಡುತ್ತಾರೆ. ಉಲ್ಕಾಹಸ್ತರಾಗಿ ಅರ್ಥಾತ್‌ ಕೊಳ್ಳಿದೀಪವನ್ನು ಹಿಡಿದುಕೊಂಡು “ದೀಪದಾನ’ ಮಂತ್ರವನ್ನು ಹೇಳಿ ಪಿತೃಗಳಿಗೆ ಮಾರ್ಗದರ್ಶನ ಮಾಡಲಾಗುವುದು.
ದೀಪಗಳ ಬೆಳಕಿನೊಂದಿಗೆ ಜ್ಞಾನಾಭಿಮುಖವಾಗಿ ಸಂಚರಿಸುವ ಸೂಚನೆ ದೀಪಾವಳಿಯ ಆಚರಣೆಯಲ್ಲಿದೆ. ಸಂಪ್ರದಾಯದಲ್ಲಿ ಬಂದ ಆಚರಣೆಗಳು ಸನಾತನ ಸಂಸ್ಕೃತಿಯ ವೈಶಿಷ್ಟ್ಯ ಹಾಗೂ ವೈವಿಧ್ಯತೆಗಳ ದ್ಯೋತಕಗಳಾಗಿವೆ. ನಮ್ಮೆಲ್ಲ ಹಿರಿಯರನ್ನು ಹಾಗೂ ಅವರ ಕೊಡುಗೆಗಳನ್ನು ಸ್ಮರಿಸುವ ಸದವಕಾಶವನ್ನು ಇಂತಹ ಸಾಂಸ್ಕೃತಿಕ ಆಚರಣೆಗಳು ನೀಡುತ್ತಾ ನಮ್ಮನ್ನು ಸದಾ ಅವರೊಂದಿಗೆ ಬೆಸೆಯುವ ಕಾರ್ಯವನ್ನು ಮಾಡುತ್ತಿವೆ. ನಮ್ಮ ಅಸ್ತಿತ್ವಕ್ಕೆ ಮೂಲ ಕಾರಣವಾದ ಸನಾತನ ಸಂಸ್ಕತಿಯ ಆಚರಣೆಗಳಲ್ಲಿ ಶ್ರದ್ಧಾ ಭಕ್ತಿಗಳನ್ನು ಹೊಂದಿ ಅವುಗಳನ್ನು ನಾವು ಸಾಂಪ್ರದಾಯಿಕವಾಗಿಯೇ ಆಚರಿಸುವಂತಾದಲ್ಲಿ ಅವುಗಳು ನಮಗೆ ಸದಾ ಪ್ರಸ್ತುತವಾಗಿರುತ್ತವೆ.

ಡಾ. ಸುರೇಖಾ
(ಲೇಖಕರು: ಸಂಸ್ಕೃತ ಉಪನ್ಯಾಸಕರು,ಸೈಂಟ್‌ ಅಲೋಶಿಯಸ್‌ ಕಾಲೇಜು, ಮಂಗಳೂರು)

 

ಟಾಪ್ ನ್ಯೂಸ್

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

19

Team India: ಎಂಸಿಜಿಯಲ್ಲಿ ಟೀಮ್‌ ಇಂಡಿಯಾ ಅಭ್ಯಾಸ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

suicide

Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು

hk-patil

C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್‌.ಕೆ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.