ದುಬೈಯಲ್ಲಿ ಡಿಂಡಿಮ ಬಾರಿಸುತ್ತಿರುವ ಕನ್ನಡಿಗರು
Team Udayavani, Jul 1, 2021, 11:20 PM IST
ಕನ್ನಡದ ಭಾಷಾ ಬಾಂಧವ್ಯ, ಸಂಸ್ಕೃತಿ ಪ್ರೀತಿ ಸಪ್ತ ಸಾಗರ ದಾಟಿದರೂ ಸುಪ್ತವಾಗಿ ಉಳಿದಿರುತ್ತದೆ ಎಂಬುದಕ್ಕೆ ಕೊಲ್ಲಿ ರಾಷ್ಟ್ರದಲ್ಲಿ ಕರುನಾಡ ಕಂಪನ್ನು ಸೂಸುತ್ತಿರುವ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳು ಸಾಕ್ಷಿಯಾಗಿವೆ. ಈ ಹಾದಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಗಿಂತಲೂ ಅಧಿಕ ಕಾಲ ಕನ್ನಡಪರ ಚಟುವಟಿಕೆಗಳ ಮೂಲಕ ದುಬೈಯಲ್ಲಿ ಸಕ್ರಿಯವಾಗಿರುವ ಸಂಘನೆಯೇ ಕನ್ನಡಿಗರು ದುಬೈ.
ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿನ ನಾಡಿನ ಮಹಿಮೆಯನ್ನು ದೂರದ ಮರಳುಗಾಡಿನಲ್ಲೂ ಪಸರಿಸುತ್ತಾ ನಾಡಿನ ಐಕ್ಯತೆಗೆ ಸಂಸ್ಕೃತಿಯ ಸೌಹಾರ್ದತೆಗಾಗಿ ಸಮಾನ ಮನಸ್ಕ ಪದಾಧಿಕಾರಿಗಳ ಒಗ್ಗೂಡುವಿಕೆಯಿಂದ 2009ರಲ್ಲಿ ಕನ್ನಡಿಗರು ದುಬೈ ಸಂಘಟನೆ ಅಸ್ಥಿತ್ವಕ್ಕೆ ಬಂತು.
ಪ್ರಮುಖವಾಗಿ ಅನಿವಾಸಿ ಕನ್ನಡಿಗರಾದ ವೈದ್ಯರು, ಉದ್ಯಮಿಗಳು, ಸಮಾಜ ಸೇವಕರು, ಸಾಹಿತ್ಯ ಸಂವಾಹಕರು, ಸಂಗೀತ ಆರಾಧಕರು, ಸಾಂಸ್ಕೃತಿಕ ಪ್ರೇಮಿಗಳು, ಗೃಹಿಣಿಯರು ಹೀಗೆ ಬೇರೆ ಬೇರೆ ರಂಗದವರೆಲ್ಲ ಒಂದುಗೂಡಿ ಕನ್ನಡಿಗರು ದುಬೈ ಸಂಘಟನೆಯ ಮೂಲಕ ವಿವಿಧ ಕಾರ್ಯ ಚಟುವಟಿಕೆಯನ್ನು ನಡೆಸುತ್ತಾ ಬರುತ್ತಿ¨ªಾರೆ.
ವಾರ್ಷಿಕ ಚಟುವಟಿಕೆಗಳು
ಕನ್ನಡ ಸಾಹಿತ್ಯ- ಸಂಗೀತ- ಸಾಂಸ್ಕೃತಿಕ ವಲಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡಿಗರು ದುಬೈ ಸಂಘಟನೆಯು ಹಲವು ನಿರ್ದಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಸಂಘಟನೆಯ ಆರಂಭದಿಂದಲೇ ಭಾರತೀಯ ಹಬ್ಬ ಹರಿದಿನಗಳಾದ ಸಂಕ್ರಾಂತಿ, ಯುಗಾದಿ ಮೊದಲಾದ ಪ್ರತಿಯೊಂದು ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿದೆ. ಹೆಚ್ಚಿನ ಎಲ್ಲ ಕಾರ್ಯಕ್ರಮಕ್ಕೂ ಕನ್ನಡ ನಾಡಿನ ವಿವಿಧ ರಂಗದ ಸಾಧಕರನ್ನು ಆಹ್ವಾನಿಸುವ ಹಾಗೂ ಸತ್ಕರಿಸುವ ಈ ಸಂಘಟನೆಯ ಧ್ಯೇಯೋದ್ದೇಶಗಳು ಕನ್ನಡ ನಾಡಿಗೆ ಸದ್ದಿಲ್ಲದೇ ಕೊಡುಗೆ ನೀಡಿದಂತಾಗಿದೆ. ಮುಖ್ಯವಾಗಿ ಕನ್ನಡ ಪಾಠ ಶಾಲೆಯನ್ನು ನಡೆಸುವ ಮೂಲಕ ದುಬೈಯ ಕರಮಾದಲ್ಲಿ ಕನ್ನಡ ಗ್ರಂಥಾಲಯದ ಜತೆಗೆ ಕನ್ನಡ ಮಕ್ಕಳಿಗೆ ಅನುಗುಣವಾಗಿ ನಡೆಸಿಕೊಂಡಿದ್ದದ್ದು ಮಾದರಿಯಾಗಿದೆ.
ಕರುನಾಡಿನ ಕಲಾವಿದರು ಅಥವಾ ಆಯ್ದ ಅನಿವಾಸಿ ಕಲಾವಿದರಿಂದ ಸಂಗೀತ ಸೌರಭ ಎಂಬ ನೃತ್ಯ- ಸಂಗೀತ ಕಾರ್ಯಕ್ರಮ ವರ್ಷಂಪ್ರತಿ ನಡೆಸಲಾಗುತ್ತಿದೆ. ನವೆಂಬರ್ ಮಾಸದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಜತೆಗೆ ಕರ್ನಾಟಕದ ಹೆಮ್ಮೆಯ ಸಾಧಕರನ್ನು ವಿಶೇಷವಾಗಿ ಆಹ್ವಾನಿಸಿ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ವಿನೋದಾವಳಿಗಳನ್ನು ಏರ್ಪಡಿಸಲಾಗುತ್ತದೆ.
ಇದಲ್ಲದೆ ಕನ್ನಡ ನಾಡಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಅಹರ್ನಿಶಿ ಸೇವೆಗೈ ಯುತ್ತಿರುವವರನ್ನು ಗುರುತಿಸಿ ಸಂಘಟನೆಯ ಪದಾಧಿಕಾರಿಗಳು ಸ್ವತಃ ಸಾಧಕರ ಬಳಿಗೆ ತೆರಳಿ ಹುಟ್ಟೂರ ಸಮ್ಮಾನ ನಡೆಸುತ್ತಾರೆ. ರಮ್ಜಾನ್ ಮಾಸದಲ್ಲಿ ಸಹಬಾಳ್ವೆ ಸೌಹಾರ್ದತೆಯ ದ್ಯೋತಕವಾಗಿ ಇಫ್ತಾರ್ ಕೂಟ, ರಕ್ತದಾನ ಶಿಬಿರ, ಮನೋರಂಜನಾ ಪ್ರವಾಸ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಕೋವಿಡ್ 19 ಲಾಕ್ ಡೌನ್ ಕಾಲಘಟ್ಟದಲ್ಲಿ ನೆರವು, ವರ್ಷಂಪ್ರತಿ ಬೇಸಗೆ ಸಂದರ್ಭದಲ್ಲಿ ಫಯರ್ ಕ್ಯಾಂಪ್ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇಲ್ಲಿನ ಕನ್ನಡಿಗರಲ್ಲಿ ಸದಾ ಏಕತೆ ಮೂಡಿಸುತ್ತಿದೆ.
ಸಾರಥಿಗಳು
2009ರಲ್ಲಿ ಅರುಣ್ ಮುತ್ತುಗಡೂರ್, 2010ರಲ್ಲಿ ಮೂಲಿಮನಿ, 2011ರಲ್ಲಿ ಬಸವರಾಜ್ ಸಾಲಿಮಠ, 2012, 13, 15, 18ರಲ್ಲಿ ಸದನ್ ದಾಸ್, 2014ರಲ್ಲಿ ಮಲ್ಲಿಕಾರ್ಜುನ ಗೌಡ, 2016, 20, 21ರಲ್ಲಿ ಉಮಾ ವಿದ್ಯಾಧರ್, 2017ರಲ್ಲಿ ವೀರೇಂದ್ರ ಬಾಬು, 2019ರಲ್ಲಿ ಮಲ್ಲಿಕಾರ್ಜುನ್ ಗೌಡ ಅಧ್ಯಕ್ಷ ಪದವಿಯನ್ನು ಅಲಂಕರಿಸಿಕೊಂಡು ಹಲವು ಯಶಸ್ವಿ ಕಾರ್ಯಗಳ ನೇತೃತ್ವ ವಹಿಸಿದ್ದರು.
ಪ್ರಸ್ತುತ ಸಾಲಿನ ಪದಾಧಿಕಾರಿಗಳು
ಉಮಾ ವಿದ್ಯಾಧರ್ (ಅಧ್ಯಕ್ಷರು), ಮಲ್ಲಿಕಾರ್ಜುನ ಗೌಡ, ಸದನ್ ದಾಸ್, ವೀರೇಂದ್ರ ಬಾಬು (ಮಾಜಿ ಅಧ್ಯಕ್ಷರು), ಅರುಣ್ ಕುಮಾರ್, ವಿದ್ಯಾಧರ್, ದೀಪಕ್ ಸೋಮಶೇಖರ್, ವಿನೀತ್ ರಾಜ್, ವೆಂಕಟರಮಣ ಕಾಮತ್, ಶ್ರೀನಿವಾಸ್ ಅರಸು (ಸದಸ್ಯರು).
ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತರು
ಕನ್ನಡಿಗರು ದುಬೈ ವತಿಯಿಂದ ವರ್ಷಂಪ್ರತಿ ಕನ್ನಡ ನಾಡು ನುಡಿಯ ಹಬ್ಬವಾದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಕನ್ನಡ ನಾಡಿನ ಗರಿಷ್ಠ ಸಾಧನೆಗೈದ ವರ್ಷದ ವ್ಯಕ್ತಿಯನ್ನು ಆಹ್ವಾನಿಸಿ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಖ್ಯಾತ ರಂಗನಟ ಮಾಸ್ಟರ್ ಹಿರಣಯ್ಯ, ಚಲನಚಿತ್ರ ನಟರಾದ ದ್ವಾರಕೀಶ್, ರವಿಚಂದ್ರನ್, ಸಾಹಿತಿ ನಾಡೋಜ ಡಾ| ಕೆ.ಎಸ್. ನಿಸಾರ್ ಅಹಮ್ಮದ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ| ಮೋಹನ ಆಳ್ವ ಮೂಡಬಿದಿರೆ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ| ಸುಧಾಮೂರ್ತಿ, ಕಿರುತೆರೆ ನಟ ಶ್ರೀನಾಥ್ ವಶಿಷ್ಠ ಮೊದಲಾದವರು ಕನ್ನಡಿಗರು ದುಬೈಯ ಕನ್ನಡ ರತ್ನ ಪುರಸ್ಕಾರವನ್ನು ಪಡೆದ ಗಣ್ಯರಲ್ಲಿ ಪ್ರಮುಖರಾಗಿ¨ªಾರೆ.
ಬೆಂಗಳೂರು ಗಾಂಧೀ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಹಿರಿಯ ಸಾಹಿತಿ ಚನ್ನವೀರ ಕಣವಿ, ಗುರುರಾಜ್ ಹೊಸ್ಕೋಟೆ ಮೊದಲಾದವರಿಗೆ ಹುಟ್ಟೂರ ಸಮ್ಮಾನ ನೀಡಿ ಗೌರವಿಸಲಾಗಿದೆ.
ಸಂಗೀತ ಸೌರಭ ಪುರಸ್ಕಾರ
ಸಂಗೀತ ಲೋಕದಲ್ಲಿ ಖ್ಯಾತನಾಮರು, ಕನ್ನಡ ನಾಡಿನ ಸಂಗೀತ ಸಾಧಕರಾದ ಪಂಡಿತ್ ಕದ್ರಿ ಗೋಪಾಲ್ ನಾಥ್, ವಿದುಷಿ ಸಂಗೀತ ಕಟ್ಟಿ,ಅರ್ಜುನ್ ಜನ್ಯ, ಎಂ.ಡಿ. ಪಲ್ಲವಿ, ಪ್ರವೀಣ್ ಗೋಡಿRಂಡಿ, ಚಿನ್ಮಯ ಅತ್ತೈಸ್, ರಮೇಶ್ ಮೊದಲಾದವರಿಗೆ ಸಂಗೀತ ಸೌರಭ ಪುರಸ್ಕಾರ ನೀಡಿ ಗೌರವಿಸಲಾಗಿದೆ.